ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

2025ರಲ್ಲಿ ನಮ್ಮ ಮಕ್ಕಳಿಗೆ ನೀರು ಸಾಕಾದೀತೇ?

04ಯಾರನ್ನೇ ಕೇಳಿ: ನಿಮ್ಮ ಬೆಳ್ಳಿಬಂಗಾರ, ಮನೆ, ಆಸ್ತಿಪಾಸ್ತಿ, ಬ್ಯಾಂಕ್‍ಬ್ಯಾಲೆನ್ಸ್ – ಇವೆಲ್ಲ ಯಾರಿಗಾಗಿ? “ನಮ್ಮ ಮಕ್ಕಳಿಗಾಗಿ” ಅಂತಾರೆ. ಮಕ್ಕಳಿಗಾಗಿ ಇವನ್ನೆಲ್ಲ ಜೋಪಾನವಾಗಿ ಕೂಡಿಡುವ ನಾವು, ಅವರಿಗೆ ನೀರು ಸಿಕ್ಕೀತೇ? ಎಂದು ಯಾವತ್ತಾದರೂ ಚಿಂತಿಸಿದ್ದೇವೆಯೇ?

ಇನ್ನಾದರೂ ಚಿಂತಿಸಬೇಕಾಗಿದೆ. ಯಾಕೆಂದರೆ ಇದೇ ಆಗಸ್ಟ್ ೧೨, ೨೦೦೯ರ ಪತ್ರಿಕಾ ವರದಿ (ಡೆಕ್ಕನ್ ಹೆರಾಲ್ಡ್, ಪುಟ ೯) ನಮ್ಮ ಮಕ್ಕಳ ಕಾಲದಲ್ಲಿ ನೀರಿನ ಪರಿಸ್ಥಿತಿ ಹೇಗಿರುತ್ತದೆ? ಎಂಬ ಚಿತ್ರಣ ನೀಡಿದೆ.

ಅದು, ನಾಸಾ (ಎನ್‍ಎಎಸ್‍ಎ) ಉಪಗ್ರಹ ತೆಗೆದ ಪೋಟೋಗಳನ್ನು ಅಧ್ಯಯನ ಮಾಡಿ, ಯುಎಸ್‍ಎ ದೇಶದ ಪರಿಣತರು ಸಿದ್ಧಪಡಿಸಿದ ವರದಿ. ಮೂಲತಃ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾಗಿರುವ ಆ ವರದಿಯ ಸತ್ಯಾಸತ್ಯತೆ ಬಗ್ಗೆ ಸಂದೇಹ ಪಡಬೇಕಾಗಿಲ್ಲ. ಅದರ ಪ್ರಕಾರ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಡೆಲ್ಲಿಯಲ್ಲಿ ೨೦೦೨ರಿಂದ ೨೦೦೮ರ ತನಕ, ಅಂತರ್ಜಲ ಮಟ್ಟ ಕುಸಿದಿದೆ; ವರುಷಕ್ಕೆ ೪ ಸೆಂಟಿಮೀಟರಿನಂತೆ ಒಟ್ಟು ೨೪ ಸೆಮೀ ಕುಸಿದಿದೆ.

ಇದರ ಅರ್ಥವೇನು?  ಆ ಪ್ರದೇಶಗಳು ವರುಷಕ್ಕೆ ೧೮ ಘನ ಕಿ.ಮೀ.ನಂತೆ, ೬ ವರುಷಗಳಲ್ಲಿ ೧೦೯ ಘನ ಕಿ.ಮೀ. ನೀರು ಕಳೆದುಕೊಂಡಿವೆ. ಇದು ಭಾರತದ ಅತಿ ದೊಡ್ಡ ಜಲಾಶಯ (ಮಧ್ಯಪ್ರದೇಶದ ಅಪ್ಪರ್ ವಾಯಿನ್‍ಗಂಗಾ ಜಲಾಶಯ)ದಲ್ಲಿರುವ ನೀರಿನ ಪರಿಮಾಣಕ್ಕಿಂತ ಜಾಸ್ತಿ!

ಅಂತರ್ಜಲ ಮಟ್ಟದ ಇಂತಹ ಆತಂಕಕಾರಿ ಕುಸಿತದ ಪರಿಣಾಮಗಳೇನು? ಅಲ್ಲಿನ ಸುಮಾರು ೧೧ ಕೋಟಿ ನಿವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾದೀತು. ಮಾತ್ರವಲ್ಲ, ಕೃಷಿಗೆ ನೀರು ಸಾಕಾಗದೆ ಆಹಾರದ ಕೊರತೆ ಎದುರಾದೀತು.

ಇಂತಹ ದುಷ್ಪರಿಣಾಮಗಳ ಬಗ್ಗೆ ಪರಿಣತರು ನಮ್ಮನ್ನು ಎಚ್ಚರಿಸುತ್ತಲೇ ಇದ್ದಾರೆ. ಆದರೆ ನಾವೆಲ್ಲರೂ ತಣ್ಣೀರಿನಂತೆ ತಣ್ಣಗಿದ್ದೇವೆ, ಅಲ್ಲವೇ? ಉದಾಹರಣೆಗೆ, ಐದು ವರುಷ ಮುಂಚೆ ಹುಚ್ಚುದನ ಜ್ವರ, ಎರಡು ವರುಷ ಮುಂಚೆ ಹಕ್ಕಿಜ್ವರ ಬಂದಾಗಲೇ ಪರಿಣತರು ಎಚ್ಚರಿಸಿದ್ದರು: ವೈರಸ್‍ಗಳು ಮಾನವಕುಲಕ್ಕೆ ಸಡ್ಡುಹೊಡೆಯುತ್ತಿವೆ ಎಂದು. ನಾವು ಅವರ ಎಚ್ಚರಿಕೆಯನ್ನು ಗಮನಿಸಲೇ ಇಲ್ಲ. (ಗಮನಿಸಿದ್ದರೆ, ನಮ್ಮ ಆರೋಗ್ಯ ರಕ್ಷಣೆ ಬಗ್ಗೆ, ನಮ್ಮ ರೋಗನಿರೋಧ ಶಕ್ತಿ ಹಚ್ಚಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.) ಈಗ ಹಂದಿಜ್ವರ ದೇಶದಲ್ಲೆಲ್ಲ ಹಬ್ಬುತ್ತಿರುವಾಗ ಕಂಗಾಲಾಗಿದ್ದೇವೆ. ಮುಖಕವಚ ಕಟ್ಟಿಕೊಂಡು ಮೂಗು-ಬಾಯಿ ಮುಚ್ಚಿಕೊಳ್ಳುತ್ತಿದ್ದೇವೆ.

ಪಂಜಾಬ್ ಮತ್ತು ಹರಿಯಾಣ ಭಾರತದ ಆಹಾರದ ಕಣಜ. ಒಂದು ಕಿಲೋಗ್ರಾಂ ಅಕ್ಕಿ ಉತ್ಪಾದಿಸಲು ಕನಿಷ್ಠ ೧,೦೦೦ ಲೀಟರ್ ನೀರು ಅಗತ್ಯ. ಅಲ್ಲಿ ಈ ಪರಿಯಲ್ಲಿ ಅಂತರ್ಜಲ ಕುಸಿಯುತ್ತಿದ್ದರೆ, ಭಾರತದ ೧೧೩ ಕೋಟಿ ಜನರಿಗೆ ಉಣ್ಣಲು ಆಹಾರ ಸಿಕ್ಕೀತೇ?

ಇನ್ನು ೧೫ ವರುಷಗಳಲ್ಲಿ, ೨೦೨೫ರ ಹೊತ್ತಿಗೆ (ಅಂದರೆ ನಮ್ಮ ಮಕ್ಕಳ ಕಾಲದಲ್ಲಿ) ಕನಿಷ್ಠ ೧,೮೦೦ ಮಿಲಿಯ ಜನರು ಭೂಮಿಯಲ್ಲಿ ತೀವ್ರ ನೀರಿನ ಕೊರತೆಯ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ. ಅದಲ್ಲದೆ, ಜಗತ್ತಿನ ಒಟ್ಟು ಜನಸಂಖ್ಯೆಯ ೧/೩ನೇ ಭಾಗ ಜನರು ನೀರಿನ ಸಂಕಟ ಎದುರಿಸಬೇಕಾಗುತ್ತದೆ.

ಆದರೆ ನಾವೇನು ಮಾಡುತ್ತಿದ್ದೇವೆ? ಈಗಾಗಲೇ ಪ್ರತಿದಿನ ೨ ಮಿಲಿಯ ಟನ್ ಮಾನವಮಲವನ್ನು ನೀರಿನಾಸರೆಗಳಿಗೆ ಎಸೆಯುತ್ತಿದ್ದೇವೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ವಿಷತುಂಬಿದ ಕೈಗಾರಿಕಾ ಕಲ್ಮಷದ ಶೇಕಡಾ ೭೦ನ್ನು ನೀರಿನಾಸರೆಗಳಿಗೆ ಬಿಡುತ್ತಿದ್ದೇವೆ. ನಮ್ಮ ಮಕ್ಕಳಿಗಾಗಿ, ಈಗಿರುವ ನೀರನ್ನು ಶುದ್ಧವಾಗಿ ಇಟ್ಟುಕೊಳ್ಳುವ ಬಗ್ಗೆ, ನಮಗೇನಾದರೂ ಕಾಳಜಿ ಇದೆಯೇ?

ನೀರಿನ ಶುದ್ಧತೆ ಕಾಪಾಡುವ ಬಗ್ಗೆ ಅಸಡ್ಡೆ ಮಾಡಿದ್ದಕ್ಕೆ, ಅಂತರ್ಜಲವನ್ನು ಕೊಳ್ಳೆ ಹೊಡೆದದ್ದಕ್ಕೆ ನಾವು ಈಗಾಗಲೇ ದಂಡ ಪಾವತಿಸುತ್ತಾ ಇದ್ದೇವೆ: ಈ ಭೂಮಿಯ ಪ್ರತಿ ೬ ಜನರಲ್ಲಿ ಒಬ್ಬರಿಗೆ ಕುಡಿಯಲು ಸುರಕ್ಷಿತ ನೀರು ಸಿಗುತ್ತಿಲ್ಲ!

ಅಪಾಯ ಎಲ್ಲಿಗೆ ಬಂದಿದೆ? ಎಂಬ ಸತ್ಯ ತಿಳಿಯ ಬೇಕಾದರೆ ಈ ಚಲನಚಿತ್ರಗಳಲ್ಲಿ ಒಂದನ್ನಾದರೂ ನೋಡಿ: “ಏನ್ ಇನ್‍ಕನ್‍ವೀನಿಯಂಟ್ ಟ್ರುತ್”, “ದ ಇಲವೆಂತ್ ಅವರ್”, “ಪ್ಲಾನೆಟ್ ಅರ್ಥ್” (ಬಿಬಿಸಿ ನಿಸರ್ಗ ದಾಖಲಾತಿ) ಅಥವಾ “ಹೋಂ”.

ಇವೆಲ್ಲ ಅನಾಹುತಗಳ ಜೊತೆಗೆ ಭೂಮಿಯ ಜನಸಂಖ್ಯೆ ಹೆಚ್ಚುತ್ತಿದೆ. ೨೦೫೦ರ ಹೊತ್ತಿಗೆ ನಮ್ಮೀ ಭೂಮಿಯಲ್ಲಿ ೨.೭ ಬಿಲಿಯನ್ ಹಚ್ಚುವರಿ ಜನರು ಇರುತ್ತಾರೆ. ಆದರೆ ಭೂಮಿಯಲ್ಲಿ ನೀರು ಅಷ್ಟೇ ಇರುತ್ತದೆ. ಈಗ ಇರುವ ನೀರು (ಅವರನ್ನೂ ಸೇರಿಸಿ) ಎಲ್ಲರ ಅಗತ್ಯ ಪೂರೈಸಲು ಸಾಕಾದೀತೇ?
   – ಅಡ್ಡೂರು ಕೃಷ್ಣ ರಾವ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*