ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷ್ಣೆ ಬಂದಳು ಬೇಗಂ ತಲಾಬ್‌ಗೆ: ಐತಿಹಾಸಿಕ ಕೆರೆಗೆ ಮರುಜೀವ

ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟವನ್ನು ಕಟ್ಟಿದ ದೊರೆ ಮೊಹ್ಮದ ಆದಿಲ್‌ಶಾಹಿ ವಿಜಯಪುರ ನಗರದಲ್ಲಿ ಸುಂದರ ಕೆರೆಯನ್ನು ಕಟ್ಟಿಸಿದ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊಹ್ಮದ ಆದಿಲ್‌ಶಾಹಿ ದೊರೆ ೧೬೫೧-೫೩ರ ಅವಧಿಯಲ್ಲಿ (more…)

ಅದೃಷ್ಟದ ಕೋಟೆಗಳು: ಮರಾಠರು ನೀರನ್ನು ಉಳಿಸಿದ ಪರಿ

ಜಲ ಕೊಯ್ಲು ಹಾಗೂ ಸಂರಕ್ಷಣೆಯ ಅಮೂಲ್ಯ ಪಾಠಗಳನ್ನು ಮಹಾರಾಷ್ಟ್ರದ ಬೆಟ್ಟದ ಕೋಟೆಗಳು ಒದಗಿಸುತ್ತವೆ (more…)

ಕಾಫಿ ತೋಟದಲ್ಲಿ ತೊಟ್ಟಿಲುಗುಂಡಿ, ಗದ್ದೆಬಯಲಲ್ಲಿ ನೀರು ಗುಂಡಿ

ಮಲೆನಾಡಿನಲ್ಲಿ ಎಂಟು ತಿಂಗಳು ಜಡಿ ಮಳೆ. ಅದೇ ಬೇಸಿಗೆ ಬಂತೆಂದರೆ ಜಲಕ್ಷಾಮ. ಹಾಗಾಗಿ ಬೇಸಿಗೆಯಲ್ಲಿ ಬೆಳೆರಕ್ಷಣೆಗಾಗಿ ಆ ಭಾಗದ ಕೃಷಿಕರು ಕೆಲವೊಂದು ಪಾರಂಪರಿಕ ಜಲ ಸಂರಕ್ಷಣಾ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳ ಪರಿಚಯ ಇಲ್ಲಿದೆ….. (more…)

ನೀರಿನ ‘ಧರ್ಮ’

ಜಲ ಚಕ್ರ ಹಾಗೂ ಜೀವನ ಚಕ್ರವೊಂದೇ ಎಂಬುದನ್ನು ನಾವು ಮರೆಯುತ್ತೇವೆ”

-        ಜ಼ಾಕ್ವೆಸ್ ಕೊಸ್ಟೊ, ಜಲ ಸಂರಕ್ಷಕ (more…)

ಬೇಸಿಗೆ ಅರಮನೆ

ಆಧುನಿಕ ತಂತ್ರಜ್ಞಾನಗಳಿಗೆ ಜೋತು ಬಿದ್ದು, ಪರಾವಲಂಬಿ ಬುದಕಿಗೆ ಒಗ್ಗಿಕೊಂಡಿರುವ ಮಾನವ ಸಂಕುಲ ಪ್ರಕೃತಿ ವಿರೋಧಿ ಕಾರ್ಯಗಳಲ್ಲೇ ಹೆಚ್ಚಿನ ಖುಷಿ ತನ್ನದಾಗಿಸಿಕೊಳ್ಳುತ್ತಿದ್ದಾನೆ. ಐಷಾರಾಮಿ ವಸ್ತುಗಳಾದ ಏರ್‌ಕೂಲರ್, ಶವರ್, ಟಬ್ ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ನಾವು ವಿದೇಶಿಗರಿಂದ ಎರವಲು ಪಡೆದುಕೊಳ್ಳುತ್ತಿದ್ದೇವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿಯೇ, (more…)

ಮಳೆಗಾಗಿ ವರುಣನ ಬೇಡುವ ಉತ್ತರ ಕರ್ನಾಟಕದ ಹಳ್ಳಿಗರು

ಮಳೆ ಜತೆಗೆ ರೈತನ ಒಡನಾಟ ತೀರಾ ಹತ್ತಿರದಲ್ಲಿಯೇ ಇದೆ. ಮಳೆಯನ್ನೇ ನಂಬಿಕೊಂಡು ಇಳಿಯುವ ರೈತರಂತೂ ಬಹಳಷ್ಟು ಮಂದಿ ಇದ್ದಾರೆ. ಮುಖ್ಯವಾಗಿ ಕೊಪ್ಪಳ, ರಾಯಚೂರು, ಗದಗ, ಬಾಗಲಕೋಟೆ, ಬಳ್ಳಾರಿ, ಬೀದರ್, ಕಲಬುರ್ಗಿ ಜಿಲ್ಲೆಯ ಕೃಷಿಕರು ವಿವಿಧ ಸಾಂಪ್ರದಾಯಿಕ ಪದ್ಧತಿ ಆಚರಿಸುವ ಮೂಲಕ ಮುಂಗಾರು ಬಿತ್ತನೆ ಮಾಡುತ್ತಾರೆ. (more…)

ಶಿವಪುರದ ವಿಶಿಷ್ಟ ನೀರು ನಿರ್ವಹಣಾ ವಿಧಾನಗಳು

Untitled

ಒಂದಾದರೂ ಕೊಳವೆ ಬಾವಿ ಇಲ್ಲದ ಊರನ್ನು ಇದೇ ಮೊದಲು ನಾನು ನೋಡಿದ್ದು. ಕೊಳವೆ ಬಾವಿ ಇರಲಿ ತೆರೆದ ಬಾವಿಗಳಾಗಲೀ, ಕಟ್ಟೆ-ಕುಂಟೆ-ಒರತೆಗಳಾಗಲೀ ಇಲ್ಲದ ಊರದು.ಜನರು ಅಂತರ್ಜಲದ ಸುದ್ದಿಗೇ ಹೋಗುವುದಿಲ್ಲ. ಹರಿಯುವ ನೀರು ಇಲ್ಲಿನ ಸಕಲ ಸರ್ವಸ್ವ. ವಾರಕ್ಕೊಮ್ಮೆ ನೀರಿನ ದರ್ಶನ ಪಡೆಯುವ, ನೀರಿನ ಸಮರ್ಪಕ ಪಾಲಿಗಾಗಿ ಬಿಂದಿಗೆ, ಬಕೀಟುಗಳನ್ನಿಡಿದು ಗುದ್ದಾಡುವ ನಿತ್ಯ ಬರಗಾಲದ ಊರಿನವರಿಗೆ ಹೋದವರಿಗೆ ಈ ಊರಿನ ನೀರ ಸಮೃದ್ಧಿಯನ್ನು ಕಂಡರೆ ಅಪಾರ ಸಂತೋಷವಾಗುತ್ತದೆ.

ಇಂತಹ ನೀರ ಸಮೃದ್ಧಿಯ ಊರಿನ ಹೆಸರು ಶಿವಪುರ. ಉತ್ತರ ಕನ್ನಡ ಜಿಲ್ಲೆ  ಜೋಯಿಡಾ ತಾಲ್ಲೂಕಿನ ದಟ್ಟ ಅರಣ್ಯವೊಂದರ ಬುಡದಲ್ಲಿ ಹರಡಿರುವ   50 ಮನೆಗಳ, 275 ಜನಸಂಖ್ಯೆಯ ಮಲೆನಾಡ ಹಳ್ಳಿ. ಈ ಪುಟ್ಟ ಹಳ್ಳಿಗೆ ಐತಿಹಾಸಿಕ ಮಹತ್ವವೂ ಇದೆ.

ಕಲ್ಯಾಣದಲ್ಲಿ ಬಸವಣ್ಣನವರ ಸಾಮಾಜಿಕ ಸುಧಾರಣೆಯನ್ನು ಸಹಿಸದವರ ಕುತಂತ್ರದಿಂದ ಕ್ರಾಂತಿಯುಂಟಾದುದು ನಮಗೆಲ್ಲಾ ತಿಳಿದ ವಿಷಯ. ಆ ಸಂದರ್ಭದಲ್ಲಿ ಅಲ್ಲಿನ ಅಮೂಲ್ಯ ಗ್ರಂಥಗಳನ್ನು ಕಾಪಾಡುವ ಸಲುವಾಗಿ ಮತ್ತು ಆಶ್ರಯಕ್ಕಾಗಿ ಶರಣರು ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ,
ಅವರಲ್ಲಿ ಚನ್ನಬಸವಣ್ಣನವರು ಶಿವಪುರದ ಪ್ರದೇಶಕ್ಕೆ ಬರುತ್ತಾರೆ. ಶಿವಪುರದ ಗೌಡ ಜನಾಂಗದ ಮುಖ್ಯಸ್ಥ ‘ರಕ್ಷಿ’ ಎಂಬುವರು ಚನ್ನಬಸವಣ್ಣನಿಗೆ ರಕ್ಷಣೆ ನೀಡಿದ್ದರಿಂದ ಇಲ್ಲಿನ ಘಟ್ಟ ಪ್ರದೇಶಕ್ಕೆ ‘ರಕ್ಷಿ ಘಟ್ಟ’ ಎಂಬ ಹೆಸರೂ ಇದೆ. ಈಗಲೂ ಸಹ ಪಕ್ಕದ ಉಳವಿಯಲ್ಲಿ ಚನ್ನ ಬಸವಣ್ಣನ ಆಲಯವಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.

ಆ ಹಳ್ಳಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ನೀರು ಹರಿಯುವ ದೃಶ್ಯ, ಕಾಲಿಟ್ಟಲ್ಲೆಲ್ಲಾ ನೀರಿನ ತನುವು ಹಾಗೂ ನೀರು ಹರಿವ ಕಾಲುವೆ, ಸರ, ಅರಿಣಿ, ಹೊಳೆಗಳು,  ಸದಾ ಕಿವಿಗಪ್ಪಳಿಸುವ ನೀರ ಹರಿವಿನ ಸದ್ದು. ಸದಾ ಎಂದರೆ ದಿನದ 24 ಗಂಟೆ ಮತ್ತು ವರ್ಷದ 365 ದಿವಸ. ಮನೆಯ ಗೋಡೆಯ ಪಕ್ಕದಲ್ಲೇ ನೀರು ಹಾದು ಮುಂದುವರಿಯುತ್ತದೆ. ನಾವು ನೋಡಿದ ಎಲ್ಲಾ ಮನೆಗಳಲ್ಲೂ ಅದೇ ದೃಶ್ಯ. “ಇಲ್ನೋಡಿ ಅವರ ಮನೆ ಒಳಗಡೇನೆ ನೀರರೀತಿದೆ” ಎಂದು ನಾವು ಅಚ್ಚರಿ ಪಟ್ಟರೆ ಆಯಾ ಮನೆಯವರು  ನಗುತ್ತಿದ್ದರು. ಅವರಿಗೆ ನಮ್ಮೂರಿನ ಬರವನ್ನು ಬಣ್ಣಿಸಿದರೆ ಎಂಥದೋ ವಿಶೇಷ ಸುದ್ದಿ ಕೇಳಿದವರಂತೆ ಕನಿಕರದ ಮುಖ ಮಾಡಿಕೊಂಡು “ನೋಡ್ದ್ಯಾ ಅವರ ಕಡಿ ಕುಡ್ಯಾಕ್ ನೀರಿಲ್ವಂತೆ ಕಾಣಾ”  ಎನ್ನುತ್ತಿದ್ದರು.

ಮೊದಲೇ ಹೇಳಿದ ಹಾಗೆ ಶಿವಪುರ ದಟ್ಟ ಅರಣ್ಯದ ತಪ್ಪಲಿನಲ್ಲಿರುವ ಹಳ್ಳಿ. ಹಳ್ಳಿಯ ಪಶ್ಚಿಮಕ್ಕೆ ಕಡಿದಾಗಿ ಹಬ್ಬಿರುವ ಈ ಪಶ್ಚಿಮ ಘಟ್ಟದ ಅರಣ್ಯ ಸಾಲುಗಳೇ ಹಳ್ಳಿಗೆ ನೀರಿನ ಮೂಲ. ಅರಣ್ಯದಲ್ಲಿ ಹುಟ್ಟಿ ಹರಿಯುವ ಅಸಂಖ್ಯಾತ ತೊರೆ, ಝರಿಗಳು ಒಂದಕ್ಕೊಂದು ಸೇರಿ ದೊಡ್ಡ ಹೊಳೆಯಾಗಿ ವಯಾ ಶಿವಪುರ ಹರಿಯುತ್ತದೆ. ಈ ಹೊಳೆಗೆ ಕೆಲವರು ಕಿನ್ನರಿ ಬೊಮ್ಮನ ಹೊಳೆ ಎನ್ನುತ್ತಾರೆ, ಇನ್ನು ಕೆಲವರು ನಿರ್ದಿಷ್ಟ ಹೆಸರೇನಿಲ್ಲ ನಾವು ಹೊಳೆ ಎಂದಷ್ಟೇ ಕರೆಯುತ್ತೇವೆ ಎನ್ನುತ್ತಾರೆ. ಈ ಹೊಳೆ ಮತ್ತು ಅದರ ಕವಲುಗಳು ಶಿವಪುರದ ಮನೆ-ಮನೆಗಳನ್ನೂ ಸೋಕಿ ಅವರ ಭತ್ತದ ಗದ್ದೆ, ಅಡಿಕೆ, ತೆಂಗು, ಕಬ್ಬು ಬಾಳೆ ತೋಟಗಳಿಗೆ ನೀರುಣಿಸಿ, ಕೆಲವರ ಮನೆಗಳಿಗೆ ವಿದ್ಯುತ್ ಕರುಣಿಸಿ ಮುಂದೆ ಕಾಳಿ ನದಿಗೆ ಸೇರ್ಪಡೆಯಾಗುತ್ತವೆ.

ಹೊಳೆ ನೀರಿಗೆ ‘ಕಟ್ಟು’ ಹಾಕುವುದು!
ಮೇಲಿನಿಂದ ರಭಸವಾಗಿ
ಹರಿಯುವ ಹೊಳೆ ನೀರಿಗೆ ತಡೆ ಹಾಕಿ ರಭಸವನ್ನು ಕುಂಠಿತಗೊಳಿಸಿ ನೀರನ್ನು ತಮಗೆ ಬೇಕಾದೆಡೆಗೆ ತಿರುಗಿಸಿಕೊಳ್ಳಲು ಕಟ್ಟು ಹಾಕುವ ಪದ್ಧತಿ ಇಲ್ಲಿನ ವೈಶಿಷ್ಟ್ಯ. ಕಟ್ಟು ಹಾಕುವುದಕ್ಕೆ ‘ಸಾರು’ ಹಾಕುವುದು ಎಂಬ ಮತ್ತೊಂದು ಹೆಸರೂ ಇದೆ. ಹಳ್ಳಿಯಿಂದ ಒಂದೆರಡು  ಮೈಲಿ ಮೇಲೆ ಅರಣ್ಯದ ಮಧ್ಯದಲ್ಲಿ ಹಾಕಿರುವ ಕಟ್ಟು ಅತ್ಯಂತ ದೊಡ್ಡದು. ಕಟ್ಟು ಎಂದರೆ ಬಿದಿರಿನಿಂದ ಹೆಣೆದ ರಚನೆಗಳು. ಬಯಲು ಸೀಮೆಯಲ್ಲಿ ಧಾನ್ಯ ತುಂಬಲು ಬಳಸುವ ಬಿದಿರಿನ ತೊಂಬೆ ಅಥವಾ ವಾಡೆಯಾಕಾರದಲ್ಲಿರುತ್ತವೆ.

ಈ ಕಟ್ಟುಗಳು ಒಂದೂವರೆಯಿಂದ ಎರಡು ಅಡಿ ವ್ಯಾಸವಿದ್ದು 3-4 ಅಡಿ ಎತ್ತರವಿರುತ್ತವೆ. ಇವುಗಳನ್ನು ಬೇರೆ ಕಡೆ ಹೆಣೆದು ನಂತರ ತಂದು ಜೊಡಿಸುತ್ತಾರೆ ಅಥವಾ ಕಟ್ಟು ಹಾಕಲು ತೀರ್ಮಾನಿಸಿದ ಸ್ಥಳದಲ್ಲೇ ಹೆಣೆಯುತ್ತಾರೆ. ಹೊಳೆಯ ಅಗಲಕ್ಕೆ ಅನುಗುಣವಾಗಿ ಕಟ್ಟುಗಳ ಸಂಖ್ಯೆ ಇರುತ್ತದೆ. ಈ ಕಟ್ಟುಗಳನ್ನು ಹೊಳೆಗೆ ಅಡ್ಡಲಾಗಿ ನಿಲ್ಲಿಸಿ ಅವುಗಳಿಗೆ ಕಲ್ಲು ಗುಂಡುಗಳನ್ನು ತುಂಬುತ್ತಾರೆ. ಹೆಚ್ಚು ತೂಕದ ಗುಂಡುಗಳನ್ನು ಹಾಕಿದಷ್ಟೂ ನೀರಿನ ರಭಸವನ್ನು ತಡೆಯಲು ಸಹಕಾರಿ. ಕಟ್ಟುಗಳ ಮಧ್ಯ ಭಾಗದಲ್ಲೊಂದು ಸಧೃಢವಾದ ಕೋಲನ್ನು ನೆಟ್ಟು ಎತ್ತರ ಹೆಚ್ಚಿಸುವುದೂ ಉಂಟು.

ಕಟ್ಟು ಹಾಕಲು ಬೇರೆ-ಬೇರೆ ಉದ್ದೇಶಗಳಿವೆ. ಮೇಲೆ ಹೇಳಿದ್ದು ಒಂದು ಉದ್ದೇಶವಾದರೆ ಹೊಳೆ ರಭಸ ಹೆಚ್ಚಾಗಿ ದಡಗಳನ್ನು ಕೊರೆಯುವುದನ್ನು ನಿಯಂತ್ರಿಸುವುದು ಮತ್ತೊಂದು ಮುಖ್ಯ ಉದ್ದೇಶ. ಹೊಳೆಯನ್ನು ದಾಟಲು ಕೆಲವು ನಿರ್ದಿಷ್ಟ ಜಾಗಗಳಲ್ಲಿ ಸಂಕಗಳನ್ನು ಹಾಕುತ್ತಾರೆ. ಇಂತಹ ಕಡೆ ಮಣ್ಣು, ಮರಳು ಶೇಖರವಾಗಿ ಹೊಳೆಯ ಅಗಲ ಕಡಿಮೆ ಮಾಡುವ ಉದ್ದೇಶದಿಂದಲೂ ಕಟ್ಟು ಹಾಕುವುದು ರೂಢಿ.

ಕಟ್ಟುಗಳ ಬಾಳಿಕೆ ನೀರಿನ ರಭಸದ ಮೇಲೆ ಅವಲಂಬಿತ. ಅಸಡಾ-ಬಸಡಾ ಮಳೆ ಹೊಡೆದರೆ ಒಂದೇ ರಾತ್ರಿಗೆ ಕಟ್ಟುಗಳು ಕಾಳಿಯ ಪಾಲಾಗುವುದುಂಟು ಎನ್ನುತ್ತಾರೆ ಕಾರವಾರದಿಂದ 40 ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದಿರುವ ಸೈರೋಬ್ ಬಾಳ್ವಾನಾಯಕ್. ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೆ  ಮುನ್ನ ಕಟ್ಟು ಹಾಕುತ್ತಾರೆ. ಊರಿಗೆಲ್ಲಾ ಅನುಕೂಲವಾಗುವ ಕಡೆ ಮನೆಗೊಂದಾಳು ಸೇರಿ ಕಟ್ಟು  ಹಾಕಿದರೆ ಕೆಲವು ಕಡೆ ನಾಲ್ಕೈದು ಕುಟುಂಬಗಳವರು ಸೇರಿ ಹಾಕಿಕೊಳ್ಳುತ್ತಾರೆ.

ಮನೆ ಬಳಕೆಗೆ ನೀರು ತರುವ ಅರಿಣಿಗಳು
ಕಟ್ಟುಗಳನ್ನು ಹಾಕಿ ತಿರುಗಿಸಿದ ನೀರನ್ನು ಮನೆ ಬಳಕೆಗೆ ಬರುವಂತೆ ಮಾಡುವ ವಿಧಾನವೇ  ಅರಿಣಿ. ಇದಕ್ಕೆ ಒಗದಿ ಎಂಬ ಮತ್ತೊಂದು ಹೆಸರೂ ಉಂಟು. ಅಡಿಕೆ ಮರ, ಬೈನೆ ಮರ ಅಥವಾ ಬಿದಿರನ್ನು ಮಧ್ಯೆ ಸೀಳಿ ತಿರುಳು ತೆಗೆದು ನೀರು ಹಾಯಲು ಅನುಕೂಲವಾಗುವಂತೆ ಬಳಸುತ್ತಾರೆ.
ಶಿವಪುರದಲ್ಲಿ ನಾವು ಹೆಚ್ಚಾಗಿ ನೋಡಿದ್ದು ಅಡಿಕೆ ಮರದ ಅರಿಣಿಗಳು. ಮನೆಯ ಮೇಲ್ಭಾಗದಲ್ಲಿ ಹರಿಯುವ ಕಾಲುವೆಯ ಒಂದು ನಿರ್ದಿಷ್ಟ  ಸ್ಥಳದಲ್ಲಿ ಅರಿಣಿಯ ಒಂದು ತುದಿ ಇದ್ದರೆ ಅದರ ಮತ್ತೊಂದು ತುದಿ ಮನೆಯ ಬಚ್ಚಲಿಗೆ ಸಂಪರ್ಕ ಆಗಿರುತ್ತದೆ.
ಸದಾ ಅರಿಣಿಯಲ್ಲಿ ಒಂದೆರಡು ಅಡಿ ಎತ್ತರದಿಂದ ನೀರು ಬೀಳುತ್ತಲೇ ಇರುತ್ತದೆ. ಹಾಗೆ ಬಂದ ನೀರು ಬಚ್ಚಲಿನಲ್ಲಿ ಬಿದ್ದು ಮುಂದೆ ಹೋಗಿ ಕಾಲುವೆ ಸೇರುವ ವ್ಯವಸ್ತೆ ಇರುತ್ತದೆ. ಇದಕ್ಕೆ ಅನುಕೂಲವಾಗುವಂತೆ ಇಲ್ಲಿನ ಬಚ್ಚಲುಗಳು ಮನೆಯ ಪಕ್ಕದಲ್ಲಿರುತ್ತವೆ. ಅಡುಗೆ ಮನೆಯಿಂದ ಅರಿಣಿ ನೀರು ಬೀಳುವಲ್ಲಿಗೆ ಒಂದು ಬಾಗಿಲಿರುತ್ತದೆ. ಊಟ ಮಾಡಿದವರು ಸೀದಾ ಅಲ್ಲಿಗೆ ಹೋಗಿ ಬೀಳುವ ನೀರಿಗೆ ಕೈಯೊಡ್ಡಿದರೆ ಮುಗಿಯಿತು. ಅಡುಗೆ ಮನೆಯ ಪಾತ್ರೆಗಳನ್ನೂ ಅಷ್ಟೇ.

ಅರಿಣಿಗೆ ಪಕ್ಕದಲ್ಲೇ ಬಿಸಿ ನೀರು ಹಂಡೆ. ನೀರು ತುಂಬಾ ಬಿಸಿ ಎನಿಸಿದರೆ ಬೀಳುವ ತಣ್ಣನೆ ನೀರನ್ನು ನಾಲ್ಕು ಚೊಂಬು ಮಿಕ್ಸ್ ಮಾಡಿಕೊಂಡರೆ ಮುಗಿಯಿತು. ಹಲ್ಲುಜ್ಜಲು, ಕೈಕಾಲು ತೊಳೆಯಲು, ಪಾತ್ರೆ ತೊಳೆಯಲು, ಅಡುಗೆ ಮಾಡಲು ನೀರು ಸಂಗ್ರಹಿಸಿಟ್ಟುಕೊಳ್ಳುವ ಪ್ರಮೇಯವೇ ಇಲ್ಲ. ಕುಡಿಯಲಷ್ಟೇ ನೀರು ಸಂಗ್ರಹ. ಈ ನೀರಾದರೂ ಎಂತಹುದು? ಕಾಡಿನ ಅಸಂಖ್ಯಾತ ಗಿಡಮೂಲಿಕೆಗಳ ಬೇರನ್ನು ಸೋಕಿಕೊಂಡು ಬಂದ ಸ್ವಚ್ಚ, ಶುದ್ಧ ಜಲ.  ಫಿಲ್ಟರು, ಅಕ್ವಗಾರ್ಡುಗಳ ಹೆಸರೇ ಇಲ್ಲಿ ಎತ್ತುವಂತಿಲ್ಲ.

ಅರಿಣಿಗಳ ಉದ್ದ ಮನೆಗೂ, ಕಾಲುವೆಗೂ ಇರುವ ದೂರವನ್ನಾಧರಿಸಿರುತ್ತದೆ. ಕೆಲವರು ಒಂದೇ ಅಡಿಕೆ ಮರ ಬಳಸುತ್ತಾರೆ, ಇನ್ನು ಕೆಲವರು ಎರಡು ಮೂರು ಅಡಿಕೆ ಮರ ಜೋಡಿಸಿಕೊಂಡಿರುತ್ತಾರೆ. ಈಗೀಗ ಶಿವಪುರಕ್ಕೂ ಪ್ಲಾಸ್ಟಿಕ್ ಪೈಪುಗಳ ಪ್ರವೇಶವಾಗಿದೆ, ಆದರೆ ಎಲ್ಲೋ ಕೆಲವರ ಮನೆಗಳಲ್ಲಿ ಮಾತ್ರ. ಹೆಚ್ಚಿನವರು ಅಡಿಕೆ ಅಥವಾ ಬಿದಿರನ್ನೇ ಬಳಸುತ್ತಿದ್ದಾರೆ.

“ಅಡಿಕೆ ಮರದ ಅರಿಣಿ ಎರಡರಿಂದ ಮೂರು  ವರ್ಷ ಬಾಳಿಕೆ ಬರುತ್ತದೆ” ಎನ್ನುತ್ತಾರೆ ಶಿವಪುರದ ಕೃಷ್ಣಾನಾಯಕ್. ಬಿದಿರಿನದೂ ಇಷ್ಟೇ ವರ್ಷ ಬಾಳಿಕೆ  ಬರುತ್ತದೆ ಆದರೆ ಅದನ್ನು ಕತ್ತಲಲ್ಲಿ ಕಡಿದಿರಬೇಕು ಎಂದು ನಾಯಕ್ ಹೇಳುತ್ತಾರೆ. ಇದು ಇಲ್ಲಿನವರ ನಂಬಿಕೆ. ಬಿದಿರನ್ನು ಬೆಳದಿಂಗಳಿರುವಾಗ ಕಡಿದರೆ ಅದಕ್ಕೆ ಬೇಗ ಹುಳು ಬೀಳುವುದಂತೆ. ಅದಕ್ಕೆ ಕತ್ತಲು ಕಾಲ ಅರ್ಥಾತ್ ಅಮಾವಾಸ್ಯೆ ಹಿಂದೆ-ಮುಂದೆ ಕಡಿಯುವುದು ಒಳ್ಳೆಯದು ಎನ್ನುತ್ತಾರೆ. (ಬೇರೆ ಪ್ರದೇಶಗಳಲ್ಲಿಯೊ ಇದೇ ರೀತಿಯ ನಂಬಿಕೆಯನ್ನು ಕಾಣಬಹುದು)

ಹೊಳೆ ದಾಟಲು ಸಂಕಗಳ ಬಳಕೆ
ಶಿವಪುರದಲ್ಲಿರುವ 50 ಮನೆಗಳು ಮೂರ್ನಾಲ್ಕು ಮೈಲಿ ವ್ಯಾಪ್ತಿಯಲ್ಲಿ ವಿಶಾಲವಾಗಿ ಹರಡಿಕೊಂಡಿವೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಕನಿಷ್ಟ ಅರ್ಧ ಫರ್ಲಾಂಗು ದೂರ.   ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಬೇಕಾದರೆ ಹಲವಾರು ಸಣ್ಣ-ದೊಡ್ಡ ಹೊಳೆ ಅಡ್ಡ ಬರುತ್ತವೆ. ಈ
ಹೊಳೆಗಳನ್ನು ದಾಟಲು ಆ ತುದಿಯಿಂದ ಈ ತುದಿಗೆ ಮರದ ದಿಮ್ಮಿ ಅಥವಾ ಹಲಗೆಗಳನ್ನು ಜೋಡಿಸಿರುತ್ತಾರೆ. ಅವೇ ಸಂಕಗಳು. ಸಂಕಗಳಿಗೆ ಚೆನ್ನಾಗಿ ಬಲಿತ ಗಟ್ಟಿಮುಟ್ಟಾದ ಮರವನ್ನೇ ಬಳಸುತ್ತಾರೆ. ಬಲಿತ ಅಡಿಕೆ ಮರವನ್ನೂ ಸಹ ಬಳಸುವುದುಂಟು. ಶಾಲೆಗೆ ಹೋಗುವ ಮಕ್ಕಳು,
ಪೇಟೆಗೆ ಹೋಗುವವರು, ತೋಟಕ್ಕೆ ಹೋಗುವವರು ಈ ಸಂಕಗಳನ್ನು ದಾಟಿಯೇ ಹೋಗಬೇಕು. 20-30 ಅಡಿ ಉದ್ದವಿರುವ ಹೊಳೆಗೂ ಸಂಕ ಹಾಕಿರುವುದನ್ನು ಇಲ್ಲಿ ಕಾಣಬಹುದು. ಇಲ್ಲಿ ದಾಟುವುದು ಕಷ್ಟ. ಜೋಲಿ ಹೊಡೆಯುತ್ತದೆ. ಇಂತಹ ಕಡೆ ಕೈಯಿಂದ ಹಿಡಿಯಲು ಆಸರೆಯಾಗಿ ಹಗ್ಗವನ್ನು
ಕಟ್ಟಿರುತ್ತಾರೆ.

ಹೊಳೆ ರಭಸವಾಗಿ ಬಂದು ದಡ ಕೊಚ್ಚಿದರೆ ಸಂಕಗಳು ನೀರು ಪಾಲಾಗುತ್ತವೆ. ಬೆಳಿಗ್ಗೆ ದಾಟಿ ಬಂದವರು ಸಂಜೆ ವಾಪಸು ಹೋಗುವ ವೇಳೆಗೆ ಸಂಕದ ಸುಳಿವೇ ಇಲ್ಲದ ಉದಾಹರಣೆಗಳೂ ಇವೆ. ಮತ್ತೆ ಸಂಕ ಹಾಕಬೇಕು ಅಥವಾ ಬೇರೆಲ್ಲಿಯೋ ಬಳಸು ದಾರಿ ಹಿಡಿಯಬೇಕು. ಇಂತಹವೆಲ್ಲ ಇಲ್ಲಿನವರಿಗೆ ಚಿರಪರಿಚಿತವಾದ್ದರಿಂದ ಎಲ್ಲದಕ್ಕೂ ತಯಾರಾಗೇ ಇರುತ್ತಾರೆ.

ಶಿವಪುರದ ಸಮಸ್ಯೆಗಳು
ಹೀಗೆ ಸಮೃದ್ಧ ನೀರು ಮತ್ತು ಅದನ್ನು ತಮ್ಮ ಅಗತ್ಯಗಳಿಕೆ ತಕ್ಕಂತೆ ಬಳಸುವ ಸಮೃದ್ಧ ಜ್ಞಾನವನ್ನೂ ಹೊಂದಿದ   ಶಿವಪುರ ಒಂದು ನೆಮ್ಮದಿಯ ತಾಣ ಎಂದು ಓದುಗರಿಗೆ ಅನಿಸಬಹುದು. ಒಂದು ರೀತಿ ಆ ಅನಿಸಿಕೆ ಸತ್ಯ. ಆದರೆ ಶಿವಪುರದ ಜನರಿಗೆ ಅವರದೇ ಆದ ವಿಶಿಷ್ಟ ಸಂಕಟಗಳಿವೆ. ಆ ಸಂಕಟಗಳಿಗೆ ನೀರೂ ಸಹ ಕಾರಣ ಎಂಬುದು ಕಹಿ ಸತ್ಯ. ದೇವರು ಈ ಹಳ್ಳಿಗೆ ನೀರನ್ನು ವರದಂತೆ ಕೊಟ್ಟರೆ ಸರ್ಕಾರವು ಅದನ್ನು ಶಾಪವಾಗಿ ಪರಿವರ್ತಿಸಿದೆ.

ಸಾರಿಗೆ ಸಂಪರ್ಕ ಇಲ್ಲಿನ
ದೊಡ್ಡ ಸಮಸ್ಯೆ. ಮೊದಲು ಬೀರ್ಕೋಲ್-ಸುಳಗೇರಿ-ಕದ್ರಾ ಮಾರ್ಗವಾಗಿ ಶಿವಪುರಕ್ಕೆ ಸಂಪರ್ಕ ರಸ್ತೆ ಇತ್ತು. ಘಟ್ಟ ಪ್ರದೇಶವಾದ್ದರಿಂದ ಕೋಣಗಳನ್ನು ಬಳಸಿ ಚಕ್ಕಡಿ ಹೊಡೆಯುತ್ತಿದ್ದರು. ಜನ ಮತ್ತು ಸರಕು ಸಾಗಾಣಿಕೆಗೆ ಇದೇ ಆಧಾರ. ಆದರೆ ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಾಣದ ನಂತರ ಈ ದಾರಿ ಜಲಾಶಯದಲ್ಲಿ ಮುಣುಗಿ ಹೋಯಿತು.

ಹಳ್ಳಿಗೆ ಒಂದು ಕೂಗಳತೆ ದೂರದಲ್ಲೇ ಕಾಳಿ ನದಿ ಹರಿಯುತ್ತದೆ, ಹರಿಯುತ್ತದೆ ಎಂಬ ಪದಕ್ಕಿಂತ ಹರಿಯುತ್ತಿತ್ತು ಎಂಬುದೇ ಸೂಕ್ತ. ಏಕೆಂದರೆ ಈಗ ನದಿ ಹರಿಯುತ್ತಿಲ್ಲ, ಬದಲಾಗಿ ನಿಂತಿದೆ. ಕಾರಣ ಈಗಾಗಲೇ ಹೇಳಿದಂತೆ ಹಳ್ಳಿಯ ಕೆಳಭಾಗದಲ್ಲಿ ನಿರ್ಮಾಣವಾಗಿರುವ ಕೊಡಸಳ್ಳಿ ಅಣೆಕಟ್ಟು. ಅದರ
ಹಿನ್ನೀರು ಶಿವಪುರವನ್ನು ತಾಕುತ್ತದೆ. ಶಿವಪುರದವರು ತಮ್ಮ ಪ್ರತಿಯೊಂದು ವ್ಯವಹಾರ, ಕೊಡು-ಕೊಳ್ಳುವಿಕೆಗೂ ಶಿರಸಿ ತಾಲ್ಲೂಕು ಯಲ್ಲಾಪುರವನ್ನು ಅವಲಂಬಿಸಿದ್ದರು. ಅದು ಕೇವಲ 25 ಕಿ.ಮೀ. ದೂರ. ಅಲ್ಲಿಗೆ ಹೋಗಲು ಕಾಳಿಯನ್ನು ದಾಟಬೇಕಿತ್ತು. ಅದೇನೂ ಸಮಸ್ಯೆಯಾಗಿರಲಿಲ್ಲ. ಏಕೆಂದರೆ ಅಣೆಕಟ್ಟು ಕಟ್ಟುವ ಮುನ್ನ ನದಿ ವಿಶಾಲವಾಗಿ, ತೆಳುವಾಗಿ ಹರಿಯುತ್ತಿತ್ತು. ಸುಲಭವಾಗಿ ದಾಟಬಹುದಾಗಿತ್ತು.

ಅಣೆಕಟ್ಟಿನ ನಿರ್ಮಾಣದ ನಂತರ ಹಿನ್ನೀರು ಬೃಹದಾಕಾರವಾಗಿ ನಿಂತು ಇವರು ದಾಟುತ್ತಿದ್ದ ಸ್ಥಳ ಮುಳುಗಡೆಯಾಯಿತು. ಅಲ್ಲಿ ಸುಮಾರು 80 ಅಡಿ ಆಳ ಮತ್ತು 900
ಅಡಿ ಅಗಲದಷ್ಟು ಅಗಾಧ ಪ್ರಮಾಣದ ನೀರು ನಿಂತಿತು. ಈಗ ಒಂದು ಹಲಗೆ ತೆಪ್ಪವನ್ನು ಮಾಡಿಕೊಂದು ಅಲ್ಲಿಯೇ ದಾಟುವ ವ್ಯವಸ್ತೆ ಮಾಡಿಕೊಂಡಿದ್ದಾರೆ. ಹಲಗೆಯ ಮೇಲೆ ನಿಂತು ನದಿ ದಂಡೆಗೆ ಕಟ್ಟಿದ ಹಗ್ಗವನ್ನು ಜಗ್ಗುತ್ತಾ ನದಿ ದಾಟಬೇಕು. ಆದರೆ ಅದು ಅಪಾಯಕಾರಿ. ಶಿವಪುರದ ಹಳ್ಳಿಗರು ನಡುರಾತ್ರಿ ಇದ್ದರೂ, ಅಬ್ಬರದ ಮಳೆ ಇದ್ದರೂ ಈ ತೆಪ್ಪ ಬಳಸಿಯೇ ಹೋಗಬೇಕು. ಬೈಕುಗಳು, ರೇಶನ್ನು ಮುಂತಾದುವನ್ನು ಇದರ ಮೇಲೇ ಸಾಗಿಸಬೇಕು.

ಈ ಹಳ್ಳಿಗೆ ಬೇರೆ ಕಡೆಯಿಂದ ರಸ್ತೆ ಸಂಪರ್ಕವೇ ಇಲ್ಲ.  ಇದನ್ನು ಸರ್ಕಾರವು 70 ರ ದಶಕದಲ್ಲೆ  ಅಭಯಾರಣ್ಯವೆಂದು ಘೋಷಿಸಿರುವುದರಿಂದ ಇಲ್ಲಿಗೆ ರಸ್ತೆ, ವಿದ್ಯುತ್ ಅನ್ನೂ ಕೊಡುತ್ತಿಲ್ಲ. ಹಳ್ಳಿಗರೇ ಸೇರಿ ಉಳವಿ ಘಟ್ಟದಲ್ಲಿ ೮ ಕಿಲೋ ಮೀಟರ್ ನಷ್ಟು ಹೊಸ ರಸ್ತೆಯನ್ನು ನಿರ್ಮಿಸಿಕೊಂಡಿದ್ದರು, ಆದರೆ ಅಭಯಾರಣ್ಯ ಪ್ರದೇಶವಾದ್ದರಿಂದ ಅದರ ಸುಧಾರಣೆಗೂ ಸಹ ಅರಣ್ಯ ಇಲಾಖೆಯವರು ಅವಕಾಶ ಮಾಡಿಕೊಡುತ್ತಿಲ್ಲ. ಇದು ಸಾಲದೆಂಬಂತೆ ಈಗ ಸರ್ಕಾರದ ಅತ್ಯಂತ ಮಹತ್ವದ ಹುಲಿ ಸಂರಕ್ಷಣಾ ಯೋಜನೆಯೂ ಈ ವ್ಯಾಪ್ತಿಗೇ ಬರುತ್ತಿದೆ. ಹೀಗಾಗಿ ಶಿವಪುರದ ಜನರು ದ್ವಂದ್ವದಲ್ಲಿಯೇ ಬದುಕುತ್ತಿದ್ದಾರೆ.