ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೇರಳ, ಕರ್ನಾಟಕದ ಶತಮಾನದ ಭೀಕರ ಪ್ರವಾಹಕ್ಕೆ ಇದೇನಾ ಕಾರಣ?

ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ಸಂಭವಿಸಿರುವ ಶತಮಾನದ ಭೀಕರ ಪ್ರವಾಹದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಈ ಭೀಕರ ಪ್ರವಾಹಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಪರಿಸರ ತಜ್ಞರು ಉತ್ತರ ನೀಡಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು(IISc) ನ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕ ಪ್ರೊ. ಮಾಧವ್ ಗಾಡ್ಗೀಳ್ ಅವರು ಕೇರಳ ಹಾಗೂ ಕರ್ನಾಟಕದ ಪ್ರವಾಹದ ನೈಜ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು, ‘ಜವಾಬ್ದಾರಿಯಿಲ್ಲದ ಪರಿಸರ ನಿಯಮಗಳು, ಕಲ್ಲು ಕ್ವಾರಿ, ಪ್ರವಾಸೋದ್ಯಮದ ಹೆಸರಿನಲ್ಲಿ ಭೂ ಕಬಳಿಕೆ, ಅರಣ್ಯ ನಾಶ ಎಲ್ಲವೂ ಇಂದಿನ ಭೀಕರ ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತಕ್ಕೆ ಕಾರಣ ಎಂದು ಹೇಳಿದ್ದಾರೆ.

kannada prabhaಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯ ಎಂದು ತಜ್ಞರು ಸೂಚಿಸಿದ್ದ ಪ್ರದೇಶಗಳ ಮೇಲೆ ಮಾರಣಾಂತಿಕವಾಗಿ ನಿರಂತರ ದಾಳಿ ನಡೆದಿದೆ. ಅಭಿವೃದ್ಧಿ ಹೆಸರಿನಲ್ಲಿ ನಿರಂತರ ಕಾಮಗಾರಿ, ಮರಗಳಕಡಿತ. ಅರಣ್ಯ ನಾಶ ದಂತಹ ಕಾರ್ಯ ನಡೆದಿದೆ ಇವುಗಳೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಅರಣ್ಯ ನಾಶ ಮುಂದುವರೆದಿದೆ, ಅಕ್ರಮ ಕಲ್ಲು ಗಣಿಗಾರಿಕೆ, ಕ್ವಾರಿಗಳು ಕರ್ನಾಟಕದಲ್ಲೂ ಇವೆ, ಗುಡ್ಡದಲ್ಲಿ ಮನೆ, ಕೆರೆಗಳಲ್ಲಿ ಅಪಾರ್ಟ್ಮೆಂಟ್ ಕಟ್ಟುವುದು ಮುಂದುವರೆದರೆ ಇನ್ನಷ್ಟು ದುರಂತಗಳಿಗೆ ಮುನ್ನುಡಿ ಬರೆದಂತಾಗುತ್ತದೆ ಎಂದು ಗಾಡ್ಗೀಳ್ ಎಚ್ಚರಿಸಿದ್ದಾರೆ.

2010ರಲ್ಲೇ ಶಿಫಾರಸ್ಸು ನೀಡಿದ್ದ ಗಾಡ್ಗೀಳ್ ಸಮಿತಿ

ಇನ್ನು 2010ರಲ್ಲೇ ಕೇಂದ್ರ ಸರ್ಕಾರ ನಿಯೋಜಿಸಿದ್ದ ಗಾಡ್ಗೀಳ್ ಸಮಿತಿ ನೀಡಿದ್ದ ವರದಿ ಶಿಫಾರಸುಗಳು 2011ರಿಂದ ಜಾರಿಗೆ ಬರಬೇಕಾಗಿತ್ತು. ನೈಸರ್ಗಿಕ ವಿಕೋಪಕ್ಕೆ ಕಾರಣವಾಗಬಲ್ಲ ಕಲ್ಲು ಕ್ವಾರಿಗಳ ಅಕ್ರಮವನ್ನು ನಿಗ್ರಹಿಸುವ ಬಗ್ಗೆ ಎಚ್ಚರಿಸಲಾಗಿತ್ತು. ಆದರೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ತೀವ್ರ ವಿರೋಧ ಎದುರಾಯಿತು. ಸುಮಾರು 552 ಪುಟಗಳ ವರದಿ ಧೂಳು ಹಿಡಿಯತೊಡಗಿತು. ಇದಾದ ಬಳಿಕ ಬಂದ ಕಸ್ತೂರಿ ರಂಗನ್ ವರದಿಯನ್ನು ಕೂಡಾ ಕೇರಳ ತಳ್ಳಿ ಹಾಕಿತ್ತು. ಅತಿ ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆ, ರಸ್ತೆ ನಿರ್ಮಾಣಕ್ಕೆ ಕಡಿವಾಣವಾಗಲು ಸೂಚಿಸಿದ್ದ ಶಿಫಾರಸ್ಸನ್ನು ಬದಿಗೊತ್ತಿ, ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡಲಾಯಿತು.

ಐಐಎಸ್ ಸಿ ವರದಿಯಲ್ಲೇನಿತ್ತು?

ಸರಿ ಸುಮಾರು 40ಕ್ಕೂ ಅಧಿಕ ನದಿ, ತೊರೆ, ಹಳ್ಳಗಳನ್ನು ಹೊಂದಿರುವ ಕೇರಳದಲ್ಲಿ 1973ರಿಂದ 2016ರ ಅವಧಿಯಲ್ಲಿ ಸುಮಾರು 906,440 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಯೋಜನಾ ಆಯೋಗದ ಸದಸ್ಯ ಕೆ. ಕಸ್ತೂರಿರಂಗನ್ ಮತ್ತು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗಿಳ್ ಸಮಿತಿ ನೀಡಿರುವ ಎರಡು ಪ್ರತ್ಯೇಕ ವರದಿಗಳನ್ನು ಪರಿಗಣಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವೆ ಜಯಂತಿ ನಟರಾಜನ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದರ ಅನುಸಾರ ಸುಮಾರು ಶೇ.37ರಷ್ಟು ಪಶ್ಚಿಮ ಘಟ್ಟ ಅರಣ್ಯವು ಸಂರಕ್ಷಿತ ವ್ಯಾಪ್ತಿಗೆ ಒಳಪಡಲಿದೆ. ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟದ 60 ಸಾವಿರ ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 2013ರಲ್ಲಿ ಇದಕ್ಕೆ ವಿರೋಧ ವ್ಯಕ್ತವಾಯಿತು. ಕೇರಳದಲ್ಲಿ ಮಾಧವ ಗಾಡ್ಗಿಳ್ ಸಮಿತಿ ವರದಿ ಬಗ್ಗೆ ಒಲವು ಕಂಡು ಬಂದಿತ್ತು. ಆದರೆ, ಇಡುಕ್ಕಿ ಹಾಗೂ ವಾಯನಾಡ್ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಾ ಬಂದಿರುವ ಜನಾಂಗ ಈಗ ಊರು ಕೇರಿ ಬಿಟ್ಟು ಬೀದಿಗೆ ಬೀಳಬೇಕಾಗುವ ಪರಿಸ್ಥಿತಿ ಬರಲಿದೆ ಎಂಬ ಸುದ್ದಿ ಹಬ್ಬಿತು. ಕ್ಯಾಥೋಲಿಕ್ ಚರ್ಚ್, ರೈತ ಸಂಘಟನೆಗಳು ಒಟ್ಟಾಗಿ ಮಾಧವ್ ಗಾಡ್ಗಿಳ್ ಹಾಗೂ ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರತಿಭಟನೆ ನಡೆಸಿದವು. ಕೇರಳ ಸರ್ಕಾರವು ಎರಡು ವರದಿ ಒಪ್ಪಲು ನಿರಾಕರಿಸಿತು. ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ

ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಮಾಧವ ಗಾಡ್ಗೀಳ್ ವರದಿ ಬಂದ ನಂತರ ಕೇಂದ್ರ ಸರ್ಕಾರ 2012 ಆಗಸ್ಟ್ 17ರಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಸಮಿತಿ ರಚಿಸಿತ್ತು. ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವುದು, ಪರಿಸರದ ಮೇಲೆ ಹಾನಿಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ ಮುಂತಾದ ಪ್ರಸ್ತಾವನೆಗಳಿವೆ. ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ. ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡುಗು ಜಿಲ್ಲೆಯ 53 ಗ್ರಾಮಗಳ ಇದರಲ್ಲಿವೆ. ಹೀಗಾಗಿ ಇಲ್ಲಿನ ಕೊಡವರು ಕೂಡ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು.

 

ಕೃಪೆ – ಕನ್ನಡ ಪ್ರಭ

೨೦-೦೮-೨೦೧೮ ರಂದು ಪ್ರಕಟವಾದ ಲೇಖನ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*