ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮರೆತುಹೋದ ಗುವಾಹತಿಯ ಪಾರಂಪರಿಕ ಜಲಮೂಲಗಳು

ಗುವಹಾತಿಯ ಬಹುತೇಕ ಕೆರೆಗಳು ಈಗ ದಯನೀಯ ಸ್ಥಿತಿಯಲ್ಲಿವೆ.  ಅವುಗಳನ್ನು ಕೇವಲ ಪಾರಂಪರಿಕ ತಾಣವಾಗಿ ಮಾತ್ರವಲ್ಲದೆ, ಕುಡಿಯುವ ನೀರನ್ನು ಒದಗಿಸುವ ಹಾಗೂ ಮೇಲ್ಮೈನೀರಿನ ಹರಿವನ್ನು ಶೇಖರಣೆ ಮಾಡುವ ತಾಣಗಳಾಗಿ ಸಂರಕ್ಷಣೆ ಮಾಡುವ ಅಗತ್ಯವಿದೆ. 

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ನಗರಗಳಲ್ಲಿ ಒಂದಾದ ಗುವಹಾತಿಯು ಸಾವಿರ ವರ್ಷ ಹಳೆಯದಾದ ನಗರ.  ಒಂದೊಮ್ಮೆ ಪ್ರಾಗ್ಜ್ಯೋತಿಶ್ಯಪುರ ಅಥವಾ ಪೂರ್ವದ ಬೆಳಕಿನ ನಗರ ಎಂದು ಕರೆಯಲ್ಪಡುತ್ತಿದ್ದ ಇದಕ್ಕೆ ಅಂಟಿಕೊಂಡಂತೆ ಹಲವಾರು ಕಥೆಗಳಿವೆ.  ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಲ್ಲಿ ಈ ಸುಂದರ ನಗರದ ವರ್ಣನೆ ಇದೆ.  ಗುವಹಾತಿಯು ಯಾಗಿದ್ದ ಇದು, ಅಸ್ಸಾಂನ ರಾಜಧಾನಿಯಾಗಿ ಪಾಲಾ ರಾಜಮನೆತನದ ಅಡಿಯಲ್ಲಿ ೧೦-೧ನೆಯ ಕ್ರಿ.ಶ.ದವರೆಗೂ ಮುಂದುವರೆಯಿತು. ಮಧ್ಯಕಾಲೀನ ಸಮಯದಲ್ಲಿ (೧೨-೧೫ನೆಯ ಶತಮಾನ), ಆದರೆ, ಪಶ್ಚಿಮ ಹಾಗೂ ಪೂರ್ವ ಅಸ್ಸಾಂನ ಕೊಚ್ ಹೊಜೊ ಹಾಗೂ ಅಹೊಂ ರಾಜಮನೆತನದ ಕಾರ್ಯತಾಂತ್ರಿಕ ಹೊರಪಾಳೆಯವಾಗಿ ಕಾರ್ಯನಿರ್ವಹಿಸುತ್ತಿತ್ತು.

ವಿವಿಧ ಕಾಲಮಾನಗಳಲ್ಲಿ ನಿರ್ಮಾಣ ಮಾಡಲಾದ ಹಲವಾರು ಕೊಳಗಳು ಹಾಗೂ ಕೆರೆಗಳು ಅದರ ಅಸ್ತಿತ್ವದ ಕೇಂದ್ರಬಿಂದುವಾಗಿದೆ.  ರಾಜರಿಂದ ನಿರ್ಮಿತವಾದ ಈ ಬಹುತೇಕ ಕೊಳಗಳು, ಭಕ್ತಿಯ ಸಂಕೇತವಾಗಿ ಅಥವಾ ಜನರಿಗೆ ಸೇವೆ ಸಲ್ಲಿಸುವ ಕಾರ್ಯವಾಗಿ ನಿರ್ಮಾಣ ಮಾಡಲಾಯಿತು.  ಈ ಕೊಳಗಳನ್ನು ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬಳಸದೆ, ದೇವಾಲಯಗಳ ಸುತ್ತಲಿರುವ ಸಮುದಾಯಕ್ಕೂ ಇದು ನೆರವಾಗಿತ್ತು.

ಬೇರೆಬೇರೆ ಕಾಲಘಟ್ಟಗಳಲ್ಲಿ ನಗರದಲ್ಲಿ ಅನೇಕ ಕೆರೆಗಳು ಹಾಗೂ ಕೊಳಗಳ ನಿರ್ಮಾಣವಾಯಿತು, ಹಾಗೂ ಇವು ಅತ್ಯಂತ ಮಹತ್ವವನ್ನು ಹೊಂದಿದ್ದವು.  ಸರ್ಕಾರ ಹಾಗೂ ಸಾರ್ವಜನಿಕರ ಅಲಕ್ಷ್ಯದಿಂದ, ಈ ಕೆರೆಗಳು ಹಾಗೂ ಕೊಳಗಳಲ್ಲಿ ಅನೇಕವು ನೆನೆಗುದಿಗೆ ಬಿದ್ದು, ಅತಿಕ್ರಮಕ್ಕೂ ಒಳಗಾದವು.  ಕಾಮಾಖ್ಯಾ ದೇಗುಲದ ಬಳಿ ಇರುವ ದುರ್ಗಾಸರೋಬರ್ ಹಾಗೂ ಗಣೇಶಗುರಿ ಪ್ರದೇಶದಲ್ಲಿ ಗಣೇಶ ದೇಗುಲದ ಬಳಿ ಒಂದೊಮ್ಮೆ ಇದ್ದ ಕೆರೆಗಳು ಹಾಗೂ ಕೊಳಗಳು ಇದೀಗ ಮಾಯವಾಗಿವೆ.

ಕೆರೆಗಳ ಸುತ್ತಲೂ ಬೆಳೆದ ಸಮುದಾಯಗಳು

ಸುಪ್ರಸಿದ್ಧ ಅಸ್ಸಾಮಿ ಬರಹಗಾರ ಹಾಗೂ ಇತಿಹಾಸಕಾರ ಕುಮುದೇಶ್ವರ ಹಜ಼ಾರಿಕರವರ ಪ್ರಕಾರ, ಗುವಾಹಾತಿ ಹಾಗೂ ಉತ್ತರ ಗುವಾಹಾತಿ ಏಕೀಕೃತವಾಗಿದ್ದಾಗ, ಹಾಗೂ ಬ್ರಿಟಿಷರು ೧೮೯೩ರಲ್ಲಿ ಅಸ್ಸಾಂಮಿನಲ್ಲಿ ನೆಲೆಯೂರುವವರೆಗೂ, , ಜನರು ಈ ಕೆರೆಗಳ ನೀರನ್ನೇ ಕುಡಿಯಲು ಬಳಸುತ್ತಿದ್ದರು.  ಆದರೆ, ಅವುಗಳಲ್ಲಿ ಅನೇಕ ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲವೆಂದು ನಿರ್ಧರಿಸಿದ ಬ್ರಿಟಿಷರು, ಅವುಗಳನ್ನು ಮುಚ್ಚಿದರು.  ಕೆಲವು ಕೆರೆ-ಕೊಳಗಳಾದ ದಿಘಲಿಫುಕುರಿ, ಪಲ್ಟನ್ ಪುಖುರಿ, ಕಮರ್ಪಟ್ಟಿ ಪುಖುರಿ, ಪದುಮ್ ಪುಖುರಿಯತ್ ಕಮಚಲ್, ಮಜಿಂದರ್ ಫುಕುರಿ (ಇದನ್ನು ಪನ್‌ಬಜ಼ಾರ್ ಪದುಮ್ ಫುಕುರಿ ಎಂದೂ ಕರೆಯುತ್ತಾರೆ) ಹಾಗೂ ಪದುಮ್ ಪುಖುರಿಯತ್, ಉಜ಼ನ್ಬಜ಼ರ್ ಒರಿಯಾ ಬಸ್ತಿಗಳು ಇನ್ನೂ ಜೀವಂತವಾಗಿವೆ.

ದೇಗುಲವನ್ನು ಪ್ರವೇಶಿಸುವ ಮೊದಲು ಧಾರ್ಮಿಕ ಸ್ನಾನವನ್ನು ಮಾಡಲು ಹಾಗೂ ಕುಡಿಯುವ ಸಲುವಾಗಿಯೂ ದೇಗುಲದ ಕೊಳಗಳನ್ನು ಬಳಸುತ್ತಿದ್ದರು.  ಹಾಗಾಗಿ, ದೇಗುಲಗಳನ್ನು ಕಟ್ಟುವಾಗ, ಜೊತೆಜೊತೆಗೆ ಕಲ್ಯಾಣಿ/ಕೆರೆಗಳ ನಿರ್ಮಾಣವನ್ನೂ ಮಾಡುತ್ತಿದ್ದರು.  ಅಲ್ಲದೆ, ದೇಗುಲವನ್ನೊಮ್ಮೆ ಕಟ್ಟಿದ ನಂತರ, ಅದರ ಸುತ್ತಲೂ ಸ್ವಚ್ಛ ಮಾಡುವವರು, ಮಾಲಿಗಳು, ಇತ್ಯಾದಿಯ ದೊಡ್ಡ ಸಮುದಾಯವೇ ಬೆಳೆಯುತ್ತಿತ್ತು.  “ಮಾಲಿಗಾಂವ್ (ಮಾಲಿಗಳು), ಅದಾಬಾರಿ (ಶುಂಠಿ-ಬೆಳೆಗಾರರು), ಜಲುಕ್‌ಬಾರಿ (ಮೆಣಸು-ಬೆಳೆಗಾರರು)ಯಂತಹ ಪ್ರದೇಶಗಳು ಕಾಮಾಖ್ಯಾ ದೇಗುಲದ ಸುತ್ತಲೂ ಹುಟ್ಟಿಕೊಂಡವು ಹಾಗೂ ಈ ಸಮುದಾಯಗಳ ಅಗತ್ಯಗಳಿಗಾಗಿ ಬಹುಶಃ ನಿರ್ಮಾಣ ಮಾಡಲಾದ ಕೆರೆಗಳನ್ನು ಕಾಮಾಖ್ಯಾ ಬೆಟ್ಟದ ಮೇಲೆ ಕಾಣಬಹುದು,” ಎನ್ನುತ್ತಾರೆ ಗುವಾಹಾತಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಪರೋಮಿತ ದಾಸ್.

ಆಕೆಯ ಪ್ರಕಾರ, ಗುವಾಹಾತಿಯ ದೇಗುಲಗಳಾದ ನವಗ್ರಹ, ಸುಕ್ರೇಶ್ವರ್, ಮೊಣಿಕರ್ಣೇಶ್ವರ್, ಅಶ್ವಕ್ಲಾಂಟ, ದಿರ್ಘೇಶ್ವರಿ ಹಾಗೂ ಉಮಾನಂದ ದೇಗುಲಗಳಲ್ಲಿನ ಶಿಲಾಶಾಸನಗಳು ಅವುಗಳನ್ನು ಅಹೋಂಗಳು (ಅಸ್ಸಾಂನ್ನು ಅತ್ಯಂತ ದೀಘಕಾಲದವರೆಗೂ, ಅಂದರೆ ೧೨೨೮ರಿಂದ ೧೮೨೬ ಕ್ರಿ.ಶ.ದವರೆಗೂ ಆಳಿದ ರಾಜಮನೆತನ) ನಿರ್ಮಾಣ ಮಾಡಿದರೆಂದು ಹೇಳಿದರೂ, ಪವಿತ್ರ ತಾಣಗಳೆಂದು ಗುರುತಿಸಲಾದ ಪಾಲಾ ಅಥವಾ ಕೊಚ್ ಅವಧಿಯ ಅಹೋಂ-ಪೂರ್ವ ದೇಗುಲಗಳ ಅವಶೇಷಗಳ ಮೇಲೆ ನಿರ್ಮಾಣ ಮಾಡಲಾಗಿದೆಯೆಂದು ಪುರಾತತ್ವ ಅವಶೇಷಗಳು ಸೂಚಿಸುತ್ತವೆ.  ಆದರೆ, ಪೂರ್ವ-ಅಹೋಂ ಅವಧಿಯಲ್ಲಿ ಅಷ್ಟಾಗಿ ಕೆರೆಗಳ ಬಗ್ಗೆ ಸಾಹಿತ್ಯ-ಬರವಣಿಗೆಗಳು ಇಲ್ಲದ ಕಾರಣ, ಅದರ ನಿರ್ಮಾಣದ ನಿಖರ ಕಾಲವನ್ನು ಹೇಳಲು ಆಗದು.  ಅಲ್ಲದೆ, ಈ ಕೆರೆಗಳ ಹುಟ್ಟಿನ ನಿಖರ ಅವಧಿಯನ್ನು ಹೇಳುವುದು ಒಂದು ಸವಾಲಿನ ವಿಷಯವೇ ಆಗಿದೆ.

 

ನಗರದ ಹೃದಯಭಾಗದಲ್ಲಿರುವDoc7-1 ದಿಘಾಲಿಪುಖುರಿಯು ಒಂದೊಮ್ಮೆ ಬ್ರಹ್ಮಪುತ್ರ ನದಿಯೊಂದಿಗೆ ಸಂಪರ್ಕ ಹೊಂದಿದ್ದು, ಅದನ್ನು ಅಹೋಂ ರಾಜಮನೆತನದವರು ನೌಕಾ ನೆಲೆಯಾಗಿ ಬಳಸುತ್ತಿದ್ದರು.  ಮೂಲ: ವಿಕಿಮಿಡಿಯಾ ಕಾಮನ್ಸ್

 

ಅಹೋಂ ಅಳ್ವಿಕೆಯ ಅವಧಿಯಲ್ಲಿ, ಮಾಟಿ ಸೆಲೆಕ ಬಿಕ್ಸೋಯಗಳೆಂಬ (ಮಣ್ಣು ಪರೀಕ್ಷಕರು) ವಿಶೇಷ ವರ್ಗದ ಅಧಿಕಾರಿಗಳು ಧಾರ್ಮಿಕ ಆಚರಣೆಗಳನ್ನು ಕೈಗೊಂಡು, ಗಾಳಿಯ ದಿಕ್ಕಿನಂತಹ ಹಲವಾರು ಅಂಶಗಳನ್ನು ಗಮನಿಸಿ, ಮಣ್ಣಿನ ರುಚಿಯನ್ನು ನೋಡಿ, ನೈಸರ್ಗಿಕ ಜಲಧರಗಳನ್ನು ಗುರುತಿಸಿ, ಈ ಕೆರೆಗಳನ್ನು ಕಟ್ಟುತ್ತಿದ್ದರು. ಸ್ಥಳೀಯ ಭೂರಚನೆಯ ಬಗೆಗಿನ ಈ ರೀತಿಯ ತಿಳುವಳಿಕೆಯೇ ಬಹುಶಃ ಇಂದಿಗೂ ವರ್ಷವಿಡೀ ಇವುಗಳಲ್ಲಿ ಬಹುತೇಕ ಕೊಳಗಳಲ್ಲಿ ನೀರು ಇರುತ್ತದೆಂದು ಆಕೆ ವಿವರಿಸುತ್ತಾರೆ.

ಕೆರೆಗಳಲ್ಲಿನ ಜೀವವೈವಿಧ್ಯತೆಯ ಸಿರಿವಂತಿಕೆ

ನಗರದಲ್ಲಿನ ದೇವಾಲಯಗಳ ಬಹುತೇಕ ಕೆರೆಗಳು ಸಿರಿವಂತ ಜೀವವೈವಿಧ್ಯತೆಯ ಆಗರಗಳಾಗಿವೆ.  ಭಾರತದಲ್ಲಿ ಗುರುತಿಸಲಾದ ೨೯ ಆಮೆಯ ಪ್ರಭೇದಗಳ ಪೈಕಿ,  ಹಾಗೂ ಕರಿಯ ಮೃದು-ಚಿಪ್ಪಿನ ಆಮೆಯೂ ಸೇರಿದಂತೆ, ಇಂಟರ್‌ನ್ಯಾಷನಲ್ ಯೂನಿಯನ್ ಫ಼ಾರೊ ಕನ್ಸರ್ವೇಷನ್ ಆಫ಼್ ನೇಚರ್ (ಐಯುಸಿಎನ್)ನಿಂದ ಅಳಿದುಹೋದ ಪ್ರಭೇದಗಳೆಂದು ವರ್ಗೀಕೃತವಾದ ವಿನಾಶದ ಅಂಚಿನಲ್ಲಿರುವ ೧೨ ಪ್ರಭೇದಗಳು ನಗರದ ದೇಗುಲದ ಕೆರೆಗಳಲ್ಲಿ ವೃದ್ಧಿ ಹೊಂದುತ್ತಿವೆ.

ರಾಜ್ಯದಲ್ಲಿ ಜನರಿಗೆ ಸಾಕಷ್ಟು ನೀರನ್ನು ಒದಗಿಸುವ ಯಥೇಚ್ಛ ನದಿಗಳ ಹಂದರವಿರುವ ಮೆಕ್ಕಲು ಮಣ್ಣಿನ ಭೂಮಿಯಾಗಿದ್ದರೂ, ಕೆರೆ-ಕೊಳಗಳನ್ನು ಕಟ್ಟುವ ಸಂಸ್ಕೃತಿ ಹಾಗೂ ಸಂಪ್ರದಾಯವು ಅಸ್ಸಾಂನಲ್ಲಿ ಮೊದಲಿನಿಂದಲೂ ನಡೆದು ಬಂದಿದೆ.  ಅಲ್ಲದೆ, ಸಾರ್ವಕಾಲಿಕ ನದಿಗಳಿರುವ ಹಾಗೂ ಆಗಾಗ ಪ್ರವಾಹವನ್ನು ಎದುರಿಸುವ ಪ್ರದೇಶಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇಂತಹ ನೀರನ ಆಗರಗಳನ್ನು ಕಾಣಬಹುದು.  ಕೆರೆಗಳು ಅಥವಾ ಕೊಳಗಳನ್ನು ವಿವಿಧೋದ್ದೇಶಗಳಿಗಾಗಿ ನಿರ್ಮಾಣ ಮಾಡಲಾಗುತ್ತಿತ್ತು – ಕುಡಿಯುವ ನೀರು, ನೀರಾವರಿ, ಧಾರ್ಮಿಕ ಆಚರಣೆಗಳು, ಸೌಂದರ್ಯೀಕರಣ, ಘಟನೆಯೊಂದರ ಸ್ಮರಣಾರ್ಥವಾಗಿ, ಜೀವವೈವಿಧ್ಯತೆ ರಕ್ಷಣೆಯ ಸಲುವಾಗಿ ಹಾಗೂ ಸಮುದಾಯ ಮೀನುಗಾರಿಕೆಗಾಗಿ ನಿರ್ಮಾಣವಾಗುತ್ತಿತ್ತು.  ಯ ಪ್ರಕಾರ, ರಾಜ್ಯದಲ್ಲಿ ಅಂದಾಜು ೧,೮೫,೬೨೩ ಕೊಳಗಳು ಹಾಗೂ ಕೆರೆಗಳು ಇವೆ. ಅಸ್ಸಾಮಿ ಜನರ ಜೀವನ ಶೈಲಿಯಲ್ಲಿ ನೀರಿನ ಆಗರಗಳು ವಹಿಸುವ ಪ್ರಮುಖ ಪಾತ್ರವನ್ನು ಬಹುಶಃ ಇದು ಸೂಚಿಸುತ್ತದೆ.  ಕೆರೆ-ಕೊಳಗಳನ್ನು ಕಟ್ಟುವುದು ಕೇವಲ ರಾಜಮನೆತನದವರ ವಿಶೇಷ ಹಕ್ಕಾಗಿರದೆ, ಸಾಮಾನ್ಯ ಅಸ್ಸಾಮಿಯೂ ತನ್ನ ಮನೆಯನ್ನು ಕೊಳಕ್ಕಾಗಿ ಅಗೆದ ಮಣ್ಣಿನಿಂದ ತನ್ನ ಮನೆಯನ್ನು ಕಟ್ಟಿ, ಅದರ ನೀರನ್ನು ಕುಡಿಯಲು, ತೊಳೆಯಲು/ಒಗೆಯಲು, ಕೈತೋಟ ಬೆಳೆಸಲು ಹಾಗೂ ಮೀನುಗಾರಿಕೆಗಾಗಿಯೂ ಕೊಳಗಳನ್ನು ನಿರ್ಮಾಣ ಮಾಡುತ್ತಿದ್ದರು.

ನಗರದಲ್ಲಿರುವ ಈ ಕೊಳಗಳು ಅಥವಾ ಕೆರೆಗಳ ನೀರನ್ನು ಈಗ ಕುಡಿಯಲು ಬಳಸುತ್ತಿಲ್ಲ.  ಆದರೆ, ಗುವಹಾತಿಯಂತಹ ನಗರಕ್ಕೆ ಈ ನೀರಿನ ಆಗರಗಳು ಮತ್ತಷ್ಟು ಮಹತ್ವವನ್ನು ಹೊಂದಿವೆ.  ಅವುಗಳಿಂದ ವಿಮುಖವಾಗಲು ಸಾಧ್ಯವಿಲ್ಲ, ಏಕೆಂದರೆ ಮಳೆ ಬರುವ ಸಂದರ್ಭದಲ್ಲಿ ಅವು ನೀರು ಪೋಲಾಗುವುದನ್ನು ನಿಯಂತ್ರಿಸಲು ನೆರವಾಗುವುದರ ಜೊತೆಗೆ, ಅಂತರ್ಜಲದ ಮಟ್ಟವನ್ನು ನಿರ್ವಹಿಸುತ್ತದೆ.  ನಗರದ ಮೇಲ್ಮೈ ನೀರಿನ ಆಗರಗಳ ನಿರ್ವಹಣೆ ಮಾಡುವಲ್ಲಿ ಈ ಕೆರೆಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.  ನಗರದ ಭೂದೃಶ್ಯದ ಎತ್ತರದ ಭೂಮಿ ಹಾಗೂ ತಗ್ಗು ಪ್ರದೇಶಗಳ ನಡುವಣ ಯನ್ನು ಈ ಮೇಲ್ಮೈ ನೀರಿನ ಆಗರಗಳು ನಿರ್ವಹಿಸುವಲ್ಲಿ ಸ್ಥಿರಗೊಳಿಸಿ, ಮಳೆ ನೀರಿನ ಶೇಖರಣೆಯ ಜಲಾಶಯವಾಗಿ ಕಾರ್ಯ ನಿರ್ವಹಿಸಿ, ಉಪ-ಮೇಲ್ಮೈ ನೀರಿನ ನೈಸರ್ಗಿಕ Doc8-1ಮರುಪೂರಣದ ಸಂಭಾವ್ಯ ತಾಣಗಳಾಗಿ ಕಾರ್ಯ ನಿರ್ವಹಿಸುತ್ತವೆ.

 

ನವಗ್ರಹ ದೇಗುಲದಲ್ಲಿ ಪ್ರತಿಷ್ಠಾಪನೆಯಾದ ನವಗ್ರಹಗಳನ್ನು ಪ್ರತಿಬಿಂಬಿಸುವ ಒಂಭತ್ತು ಮೂರ್ತಿಗಳನ್ನು ತೊಳೆಯಲು ಸಿಲ್‌ಫುಕುರಿಯ ನೀರನ್ನು ಬಳಸಲಾಗುತ್ತಿತ್ತು

ಗುವಾಹಾತಿಯ ಬಹುತೇಕ ಕೆರೆಗಳಿಗೆ ದಾಖಲಾದ ಅಥವಾ ಮೌಖಿಕ ಐತಿಹಾಸಿಕ ಹಿನ್ನಲೆಯಿದೆ.  ಗುವಾಹಾತಿ ನಗರದ ಅಭಿವೃದ್ಧಿಯ ವಿವಿಧ ಹಂತಗಳಿಗೆ ಇವು ಸಾಕ್ಷೀಭೂತವಾಗಿವೆ.  ದಿಗಾಲಿಫುಕುರಿಯಂತಹ ಕೆಲವು ಕೆರೆಗಳ ನಿರ್ವಹಣೆಯನ್ನು ಮಾತ್ರ ಮಾಡಲಾಗಿದ್ದು, ಬಹುತೇಕ ಕೆರೆಗಳ ಪರಿಸ್ಥಿತಿಯು ಹದಗೆಟ್ಟಿವೆ.  ಈ ಕೆರೆಗಳು ಎದುರಿಸುವ ಸಾಮಾನ್ಯ ಸಮಸ್ಯೆಗಳೆಂದರೆ ಕಲುಷಿತಗೊಂಡ ನೀರು, ತ್ಯಾಜ್ಯ ಸುರಿಯುವಿಕೆ, ಸವಕಳಿ, ಕಾಂಕ್ರೀಟ್‌ನಿಂದ ನಿರ್ಮಿಸಲಾದ ಗಡಿ ಗೋಡೆಗಳು, ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ನಿರ್ಲಕ್ಷ್ಯದಂತಹ ಸಾಮಾನ್ಯ ಸಮಸ್ಯೆಗಳನ್ನು ಈ ಕೆರೆಗಳು ಎದುರಿಸುತ್ತಿವೆ,” ಎಂದು ಗುವಾಹಾತಿಯ ಕಾಟನ್ ಕಾಲೇಜ್ ರಾಜ್ಯ ವಿಶ್ವವಿದ್ಯಾನಿಲಯದ ಪುರಾತತ್ವ ಇಲಾಖೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜಿಲ್ ಹಜ಼ಾರಿಕಾ ಹೇಳುತ್ತಾರೆ.

ಗುವಾಹಾತಿಯ ಕೆಲವು ಸುಪ್ರಸಿದ್ಧ ಕೆರೆಗಳೆಂದರೆ:

ದಿಘಾಲಿಫುಕುರಿ, ಅಂದರೆ ಅಸ್ಸಾಮಿ ಭಾಷೆಯಲ್ಲಿ ‘ಉದ್ದನೆಯ ಕೆರೆ’ ಎಂದರ್ಥ.  ಇದು ಉದ್ದನೆಯ ಕೆರೆಯಾಗಿದ್ದು, ಪ್ರಾಗ್ಜ್ಯೋತಿಷ್ಯಪುರದ ರಾಜ ಭಾಗದತ್ತನು (ನರಕಾಸುರನ ಮಗ) ನಿರ್ಮಿಸಿದನೆಂಬ ನಂಬಿಕೆ ಇದೆ.  ಕೆರೆಯು ಉತ್ತರದಲ್ಲಿ ಬ್ರಹ್ಮಪುತ್ರ ನದಿಯೊಂದಿಗೆ ಹಾಗೂ ದಕ್ಷಿಣದಲ್ಲಿ ಸೊಲಾಬೀಲ್ ತರಿಭೂಮಿಯೊಂದಿಗೆ ನಾಲೆಯೊಂದರ ಮೂಲಕ ಸಂಪರ್ಕ ಹೊಂದಿದ್ದು, ಇದನ್ನೀಗ ಗುವಹಾತಿ ರೈಲ್ವೇ ನಿಲ್ದಾಣ, ಉಚ್ಛ ನ್ಯಾಯಾಲಯ ಹಾಗೂ ಇತರ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ತುಂಬಲಾಯಿತು.

ಸಿಲ್‌ಫುಕುರಿ, ಈ ಹಿಂದೆ ನೌ-ಕೊನಿಯ ಪುಖುರಿ (ಒಂಭತ್ತು ಕೋನಗಳ ಕೆರೆ) ಎಂದು ಕರೆಯಲ್ಪಡುತ್ತಿದ್ದ ಕೆರೆಯನ್ನು ನವಗ್ರಹ ದೇವಾಲಯದೊಂದಿಗೆ ಅಹೋಂಗಳು ನಿರ್ಮಾಣ ಮಾಡಿದDoc9-1ರು.     

 

ಬಳಕೆಯಾಗದೆ, ಕಳೆಗಳಿಂದ ತುಂಬಿಹೋದ ಜೋಡಿ ಕೆರೆಗಳಲ್ಲಿ (ಜೋರ್‌ಫುಕುರಿ) ಒಂದು

ಜೊರ್‌ಪುಖುರಿ, ಈ ಮೊದಲಿನ ಉಗ್ರತಾರ ದೇಗುಲದ ಕೆರೆಯಾಗಿದ್ದು, ದೇಗುಲದ ಸೇವೆಗಾಗಿ ಸ್ವರ್ಗ್‌ದೇವ್ ಶಿವ ಸಿಂಘ ನಿರ್ಮಾಣ ಮಾಡಿಸಿದನೆಂದು ನಂಬಲಾಗಿದೆ.  ದೇಗುಲಕ್ಕೆ ಬರಲು ರಾಜರು, ಅಧಿಕಾರವರ್ಗದವರು ಬಳಸಿಕೊಳ್ಳುತ್ತಿದ್ದ  ನಾವ್‌ಜನ್ ನಾಲೆಯ ಮೂಲಕ ಬ್ರಹ್ಮಪುತ್ರ ನದಿಗೂ ಇದು ಸಂಪರ್ಕ ಹೊಂದಿತ್ತು.  ದುಃಖದ ಸಂಗತಿಯೆಂದರೆ, ಇದು ಈಗ ಕೊಳಚೆ ಹಾಗೂ ಚರಂಡಿಯ ತ್ಯಾಜ್ಯವನ್ನು ಒಯ್ಯುತ್ತದೆ.  ಬ್ರಿಟಿಷರು ಕೊಳದ ಮಧ್ಯೆ ರಸ್ತೆಯನ್ನು ಕಟ್ಟಿ, ಅದನ್ನು ಇಬ್ಭಾಗ ಮಾಡಿದ ಕಾರಣ, ಇದನ್ನು ಜೊರ್‌ಪುಖುರಿ, ಅಂದರೆ ಜೋಡಿ ಕೆರೆಗಳು/ಕೊಳಗಳು ಎಂದು ಕರೆಯುತ್ತಾರೆ.

 

ನಾಗ್‌ಪುಟ/ನಾಗ್‌ಕಟ ಪುಖುರಿ, ನಗರದ ಅತ್ಯಂತ ಪುರಾತನ ಕೆರೆಗಳಲ್ಲಿ ಒಂದೆಂದು ಹೇಳಲಾಗುತ್ತದೆ.  ಅನೇಕ ಬಾರಿ ಇದು ಕಳೆಗಳಿಂದ ತುಂಬಿದ್ದು, ಗೋಚರಿಸುವುದೇ ಕಷ್ಟ.

 

ಕೊಳ ಅಥವಾ ತರಿಭೂಮಿಯಂತಹ ಯಾವುದೇ ನೀರಿನ ಆಗರವು ನೀಡುವ ಮುಖ್ಯ ಪಾರಿಸಾರಿಕ ಸೇವೆಗಳಲ್ಲಿ ಒಂದಾದ ಅಂತರ್ಜಲ ಮರುಪೂರಣದ ಮೇಲೆ ನಗರದ ಪರಿಸರ ತಜ್ಞರಾದ ಡಾ. ನೀಲ್ ಕಮಲ್ ದಾಸ್ ಒತ್ತು ನೀಡಿದ್ದಾರೆ.  “ಕೊಳಗಳು ಹಾಗೂ ಕೆರೆಗಳು ಗಣನೀಯವಾಗಿ ಮರುಪೂರಣ ಮಾಡುವ ಪ್ರದೇಶಗಳಾಗಿವೆ.  ನಗರದ ಇತರ ಪ್ರದೇಶಗಳಿಗಿಂತ, ಈ ಕೊಳಗಳ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಸಾಮಾನ್ಯವಾಗಿ ಅಧಿಕವಾಗಿರುತ್ತದೆ,” ಎಂದು ಅವರು ವಿವರಿಸುತ್ತಾರೆ.

 

ಜೊತೆಗೆ, ಅತಿಯಾದ ಹೊರತೆಗೆಯುವಿಕೆಯಿಂದ, ಅಂತರ್ಜಲ ಮಟ್ಟಗಳು ಕಡಿಮೆಯಾಗಿ, ಅಲ್ಲಿ ಬಂಡೆಗಳು ಕಾಣಿಸಿಕೊಂಡು, ನಗರದ ಕೆಲವೆಡೆಗಳಲ್ಲಿ ಆರ್ಸೆನಿಕ್ ಹಾಗೂ ಫ಼್ಲೂರೈಡ್ ಮಾಲಿನ್ಯವು ಉಂಟಾಗುತ್ತದೆ.  “ಸುತ್ತಲೂ ಮತ್ತಷ್ಟು ಮೇಲ್ಮೈ ನೀರಿನ ಆಗರಗಳಾದ ಕೊಳಗಳು/ಕೆರೆಗಳು ಇದ್ದು ಅಥವಾ ಈಗಿರುವವನ್ನು ಸಂರಕ್ಷಿಸಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು, “ಎನ್ನುತ್ತಾರೆ ದಾಸ್.  ಅಲ್ಲದೆ, ಅಸ್ಸಾಂ ಸರ್ಕಾರವು, ವಿವಿಧ ಸಂಸ್ಥೆಗಳ ನೆರವಿನೊಂದಿಗೆ, ತನ್ನೆಲ್ಲ ನಾಗರಿಕರಿಗೂ ದಿನದ ೨೪ ಗಂಟೆಗಳೂ ನೀರನ್ನು ಒದಗಿಸಲು ಸಜ್ಜಾಗುತ್ತಿದೆ.  “ಹತ್ತಿರದ ಬಡಾವಣೆಗಳಿಗೆ ನೀರನ್ನು ಒದಗಿಸಲೂ ಸಹ ಈ ಕೆರೆಗಳನ್ನು ಪುನರುಜ್ಜೀವನಗೊಳಿಸಬಹುದು ಹಾಗೂ ಸಾಕಷ್ಟು ಮಳೆ ಆಗುವುದರಿಂದ, ನೀರನ್ನು ಹೊರತೆಗೆದಮೇಲೂ, ಈ ಕೆರೆಗಳು ಮರುಪೂರಣಗೊಳ್ಳುತ್ತವೆ.  ಮಳೆನೀರನ್ನು ಹಾಗೂ ಮೇಲ್ಮೈ ನೀರಿನ ಹರಿವನ್ನು ಸಂಗ್ರಹಿಸುವ ತಾಣಗಳಾಗಿಯೂ ಇವುಗಳನ್ನು ಬಳಸಿಕೊಳ್ಳಬಹುದು,” ಎನ್ನುತ್ತಾರೆ.

 

ಜನಸಂಖ್ಯೆಯ ಹೆಚ್ಚಳ ಹಾಗೂ ಬೆಳೆಯುತ್ತಿರುವ ನಗರ ಪ್ರದೇಶಗಳು ಅನೇಕ ಈ ಕೆರೆಗಳ ಉಸಿರುಗಟ್ಟಿಸುತ್ತಿದೆ.  ಅಲ್ಲದೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಕೆರೆಗಳಲ್ಲಿ ಬೇಜವಾಬ್ದಾರಿತನದಿಂದ ಸುರಿಯುತ್ತಿರುವ ಜನರಿಂದ, ಕೆರೆಗಳ ಪರಿಸ್ಥಿತಿಯು ಮತ್ತಷ್ಟು ಹದಗೆಡುತ್ತಿದೆ.  ಒಂದೊಮ್ಮೆ ವಾಯುವಿಹಾರಕ್ಕೆ ಮೆಚ್ಚಿನ ತಾಣಗಳಾಗಿದ್ದ ಈ ಕೆರೆಗಳಿಂದ ಈಗ ಅನೇಕರು ದೂರವಿರುತ್ತಾರೆ.

 

“ವಾಸ್ತವದಲ್ಲಿ, ಇಂದಿನ ಗುವಹಾತಿಯನ್ನು ಯೋಜಿತ ರೀತಿಯಲ್ಲಿ ಅಭಿವೃದ್ಧಿ ಮಾಡಿಲ್ಲ.  ಹಾಗಾಗಿ, ಈ ಬುದ್ಧಿಹೀನ ಅಭಿವೃದ್ಧಿಗೆ ನೀರಿನ ಆಗರಗಳು ಬೆಲೆ ತೆತ್ತಬೇಕಿದೆ.  ಅನೇಕ ಸಲ, ಅವುಗಳ ಪಾರಿಸಾರಿಕ ಪ್ರಾಮುಖ್ಯಾತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ; ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಜಲುಕ್‌ಬಾರಿ ಎಂಬ ಹೊಸ ಬಡಾವಣೆ ನಗರದಲ್ಲಿ ಸ್ಥಾಪನೆಯಾಗಿರುವುದು,” ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡಾ. ರಾಜೀವ್ ದತ್ತ ಚೌಧರಿ ಹೇಳುತ್ತಾರೆ.

 

ಮುಂದಿನ ಹೆಜ್ಜೆ

ಈ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು.  “ಪ್ರತಿಯೊಂದು ಕೆರೆ-ಕುಂಟೆಯ ವ್ಯವಸ್ಥಿತ ದಾಖಲಾತಿ ಮಾಡುವುದರೊಂದಿಗೆ, ನೀರನ್ನು ಸ್ವಚ್ಛಗೊಳಿಸುವ, ಗಡಿಯಲ್ಲಿ ಸವಕಳಿಯನ್ನು ನಿಲ್ಲಿಸುವ, ಕೆರೆಗಳಿಗೆ ಹಾನಿಯಾಗದಂತೆ ಕಟ್ಟುನಿಟ್ಟಾದ ಕಾನೂನುಗಳನ್ನು ಜಾರಿಗೊಳಿಸಿ, ಸೂಕ್ತವಾದಲ್ಲಿ, ಇವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.  ಕೇವಲ ‘ಪಾರಂಪರಿಕ ಸ್ವತ್ತು’ ಎಂಬ ಹಣೆಪಟ್ಟೆಯನ್ನು ಕೆರೆಗಳಿಗೆ ನೀಡುವುದರಿಂದ ಅಷ್ಟೇನೂ ಸಹಾಯ ಆಗುವುದಿಲ್ಲ; ಆದರೆ, ಖಾಸಗಿ, ಸಾರ್ವಜನಿಕ ಹಾಗೂ/ಅಥವಾ ಸರ್ಕಾರಿ ಅಧಿಕಾರಿಗಳು ಒಟ್ಟಾಗಿ ಸೇರಿ ಕಾರ್ಯತಾಂತ್ರಿಕ ಯೋಜನೆ ಹಾಗೂ ಸಮರ್ಥ ನಿರ್ವಹಣೆಯನ್ನು ಮಾಡಿದಾಗ, ಕೆರೆಗಳು ಬಹಳಷ್ಟು ವರ್ಷ ಸಮೃದ್ಧವಾಗಿರಲು Doc10-1ನೆರವಾಗುತ್ತದೆ,” ಎಂದು ಹಜ಼ಾರಿಕ ವಿವರಿಸುತ್ತಾರೆ.

 

ಗುವಾಹಾತಿಯ ಅನೇಕ ದೇಗುಲದ ಕೆರೆಗಳು ವಿವಿಧ ಬಗೆಯ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಆಮೆಯ ಪ್ರಬೇಢಗಳಿಗೆ ಆವಾಸ ಸ್ಥಾನಗಳಾಗಿವೆ.  ಕೆರೆಯ ದಂಡೆಗಳನ್ನು ಕಾಂಕ್ರೀಟೀಕರಣ ಮಾಡಿದರೆ, ಆಮೆಗಳು ಅವುಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ಕಳೆದುಕೊಳ್ಳುತ್ತವೆ. 

 

ಬಹುತೇಕ ಸಂರಕ್ಷಣಾ ಯತ್ನಗಳು, ಕೆರೆ ದಂಡೆಗಳ ಕಾಂಕ್ರೀಟೀಕರಣಕ್ಕೆ ಸೀಮಿತವಾಗಿದ್ದು, ಅದು ಕೆರೆಯ ಪರಿಸರ ಹಾಗೂ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.  “ಸಂಬಂಧಪಟ್ಟ ಅಧಿಕಾರಿಗಳು ಕೇವಲ ಎಂಜಿನಿಯರಿಂಗ್ ಅಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು, ಅವರು ಪರಿಸರವಾದಿಗಳು, ಪ್ರಾಣಿಶಾಸ್ತ್ರಜ್ಞರು ಅಥವಾ ಸಸ್ಯಶಾಸ್ತ್ರಜ್ಞರ, ಇಂತಹ ನೀರಿನ ಆಗರಗಳ ರಕ್ಷಣೆಯ ಯೋಜನೆ ಮಾಡುವಾಗ ಸಲಹೆಯನ್ನು ತೆಗೆದುಕೊಳ್ಳುವುದೇ ಇಲ್ಲ.  ಕೇವಲ ಎಂಜಿನಿಯರಿಂಗ್ ದೃಷ್ಟಿಕೋನದಿಂದ ನೋಡದೆ, ದೀರ್ಘಾವಧಿಯಲ್ಲಿ ಈ ಕೆರೆಗಳ ಪಾರಿಸಾರಿಕ ಮೌಲ್ಯವನ್ನು ಪರಿಗಣಿಸುವ ಬಹುಆಯಾಮದ ವಿಧಾನವನ್ನು ಅನುಸರಿಸುವುದು ಇಂದಿನ ಬೇಡಿಕೆಯಾಗಿದೆ,” ಎಂದು ದಾಸ್ ಸೂಚಿಸುತ್ತಾರೆ.

 

ಮೂಲ ಲೇಖನ: ಉಷಾ ದೇವಾನಿ

ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

 ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:  http://www.indiawaterportal.org/articles/forgotten-water-bearers-guwahati

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*