ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬದುಕಿಗೆ ಮಣ್ಣೇ ಮೊದಲು; ಮಣ್ಣೇ ಕೊನೆ!: ಡಿಸೆಂಬರ್ ೫, ಮಂಗಳವಾರ ‘ಮಣ್ಣಿನ ವಿಶ್ವ ದಿನ’

ಧಾರವಾಡ, ಡಿ.೪: ಮಣ್ಣು; ಸಜೀವಿಯ ಮೊದಲ ಹಾಗೂ ಕೊನೆಯ ಅಸ್ತಿತ್ವ. ಅಂತಾರಾಷ್ಟ್ರೀಯ ಸ್ತರದಲ್ಲಿ ವರ್ಷಕ್ಕೊಮ್ಮೆ ಮಣ್ಣಿನ ಬಗ್ಗೆ ಆಲೋಚಿಸುವ ದಿನ ಡಿಸೆಂಬರ್ ೫. ಈ ಬಾರಿ, ಇಂದು ಮಂಗಳವಾರ ‘ಮಣ್ಣಿನ ವಿಶ್ವ ದಿನ’.

ನಿಸರ್ಗದ ಅತ್ಯಂತ ವಿಶಿಷ್ಟ ಹಾಗೂ ಸೂಕ್ಷ್ಮ ಅಂಗ ಮಣ್ಣು. ಮಣ್ಣಿನ ತವಕ-ತಲ್ಲಣಗಳ ಕುರಿತು, ಯುಕ್ತ ಸಂಗೋಪನೆ ಬಗ್ಗೆ ಚಿಂತಿಸುವ, ಯೋಜಿಸುವ ಮಹತ್ವದ ದಿನ.

ಹಾಗಾಗಿ, ಪ್ರಕೃತಿ, ಮರ, ಬಳ್ಳಿ ಇಂತಿಷ್ಟೇ ಬೆಳೆ ಕೊಡಬೇಕು ಎಂಬ ಕಡ್ಡಾಯಕ್ಕೆ ಇಂದು ಕೃಷಿ/ಕ ಬಂದು ನಿಂತಿದೆ/ದ್ದಾನೆ. ಅವು ಎಷ್ಟು ಕೊಡಬಲ್ಲವೋ ಕೊಡಲಿ ಎಂಬ ತೃಪ್ತ ಭಾವ ಮರೆಯಾಗುತ್ತಿದೆ. ಬಲಾತ್ಕರಿಸಿ ಬೆಳೆ ತೆಗೆಯುವ ಹೊಸ ವಿಧಾನಗಳು ನಿತ್ಯ ಸಂಶೋಧನೆಗೆ ಒಳಗಾಗುತ್ತಿವೆ. ಹಾಗಾಗಿ ಮಣ್ಣು ರಾಸಾಯನಿಕಗಳ ಶೇಷಾಂಷ ಉಂಡು ಬೂದಿಯಂತೆ ಬದಲಾಗುತ್ತಿದೆ.

MALLANNA NAGARALಇಂದಿನ ನಮ್ಮ ಆಧುನಿಕ ಸಾಗುವಳಿ ಪದ್ಧತಿಗಳ ಉಪಉತ್ಪನ್ನವಾದ ತರಹೇವಾರಿ ತೊಂದರೆಗಳು ಸೂಕ್ಷ್ಮ ಅಸಮತೋಲನದ ಪ್ರತಿಫಲನಗಳು. ಆದರೆ, ಪರಿಹರಿಸಲು ಸಾಧ್ಯವೇ ಇಲ್ಲದ ಮಹಾಮಾರಿಗಳೇನಲ್ಲ. ನಮ್ಮ ಕೃಷಿ ಪರಿಸರದ ರೂಪಕ ರಚನಕಾರರು ಕೃಷಿಕರೇ ಆಗಿರುವುದರಿಂದ ಸಕಾಲಕ್ಕೆ ತಿಳುವಳಿಕೆ, ಬದಲಾವಣೆಗೆ ಒಗ್ಗುವ ಶಕ್ತಿ-ಯುಕ್ತಿ ರೂಪಿಸಿಕೊಳ್ಳುವುದು ಅನಿವಾರ್ಯ. ಹೊಲ-ಗದ್ದೆಗಳೇ ಪ್ರಯೋಗಶಾಲೆ. ನಾವೇ ವಿಜ್ಞಾನಿಗಳು. ಅಂದಾಗ, ಮಣ್ಣಿನ ಎದೆಯ ದನಿ, ತವಕ-ತಲ್ಲಣ, ನಾಡಿ ಮಿಡಿತದಿಂದಲೇ ಗುರುತಿಸಲು ಸಾಧ್ಯವಾಗುತ್ತದೆ.

ರಂಗೋಲಿ ಕೆಳಗೂ ತೂರುವ ಜಾಣ್ಮೆ ಸಂಪಾದಿಸಿರುವ ವ್ಯಾಪಾರಿ-ದಲ್ಲಾಳಿಗಳಿಂದ ಗೊಬ್ಬರವೂ ಕಲಬೆರಕೆಗೆ ಸೂಕ್ತ ವಸ್ತು. ಸಾವಯವ ಕೃಷಿ ಪ್ರವರ್ಧಮಾನಕ್ಕೆ ಬರುತ್ತಲೇ ಬೇವಿನ ಹೊಟ್ಟಿಗೆ ಎಲ್ಲಿಲ್ಲದ ಬೇಡಿಕೆ ಹುಟ್ಟಿತು. ಬೇವಿನ ಬೀಜಕ್ಕೆ ಯರಿ ಮಣ್ಣು (ಕಪ್ಪು) ಸೇರಿಸಿ ಮಣ್ಣಿಗೆ ಸುರಿದು, ರೈತನ ಹೊಟ್ಟೆ ಉರಿಸಿದ್ದೂ ಆಯಿತು. ಮಣ್ಣಿಗೂ ಹಿಂಡಿ ಎಂದು ಬೆವರಿನ ಹಣ ಸುರಿದ ರೈತ ಹುಂಬನಾದ! ಸರ್ಕಾರಿ ಗೊಬ್ಬರದ ಹೆಸರಿನಲ್ಲಿ ಮಣ್ಣಿನ ಪೋಷಕಾಂಶ ಹೆಚ್ಚಿಸಲು ಬಳಸಲಾದ ಯೂರಿಯಾ ಹಾಲಿಗೂ ಸೇರಿತು! ಈ ಕಲಬೆರಕೆ ತಪ್ಪಿಸಲು ಕೇಂದ್ರ ಸರ್ಕಾರ ಬೇವು ಲೇಪಿತ ಯೂರಿಯಾ ಮಾರುಕಟ್ಟೆಗೆ ಬಿಡುಗಡೆಮಾಡಬೇಕಾಯಿತು! ಮೈಲು ತುತ್ತಿಗೆ  ಕಲ್ಲುಸಕ್ಕರೆ ಸೇರಿಸಿ ಮಾರಿದವರೂ ಉಂಟು!

ನಮ್ಮ ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಮೀನಿನ ಗೊಬ್ಬರ ಹಾಕಲು ಕೆಲವರು ಸಲಹೆ ನೀಡಿದಾಗ ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ತೋಟ ಯಾವುದೇ ಮೂಲೆಯಲ್ಲಿರಲಿ, ಟ್ರಕ್ ತುಂಬಿ ಮೀನಿನ ಗೊಬ್ಬರ ತಂದು ಹಾಕುವ ವ್ಯಾಪಾರಿ ಇಂಥ ಲೋಡುಗಳಲ್ಲಿ ವಾಸನೆ ಬರುವಷ್ಟು ಮಾತ್ರ ಮೀನು ಶೇಷಾಂಶ ಸೇರಿಸಿದಂತೆ, ನಮ್ಮ ಅನುಭವವೂ ಕಹಿ! ಹೆಚ್ಚೂ ಕಡಿಮೆ ಕಸವನ್ನೇ ಕೊಂಡ ಸ್ಥಿತಿ. ಧಾರವಾಡದಲ್ಲಿ ತಿನ್ನುವ ಮೀನೇ ತುಟ್ಟಿ! ಇನ್ನು ಅಗ್ಗದ ಬೆಲೆಗೆ ಲಾರಿಗಟ್ಟಲೆ/ಚಕ್ಕಡಿಗಟ್ಟಲೆ ಮೀನುಗೊಬ್ಬರ ಎಲ್ಲಿಂದ ಬಂದೀತು? ಪೂರೈಸುವವನ ಸಾಚಾತನ? ನಾವು ಯೋಚಿಸುವುದಿಲ್ಲ. ಹೋಗಲಿ, ಮೀನುಗೊಬ್ಬರದಲ್ಲಿ ಏನೇನಿದೆ? ಎಂದು ಪರಕಿಸುತ್ತೇವೆಯೇ? ಅದೂ ಇಲ್ಲ. ಮೇಲ್ ಮಡಿವಂತಿಕೆ! ಪರೀಕ್ಷೆಯೇ ಇಲ್ಲದೇ ಉತ್ತೀರ್ಣವಾಗುವ ತವಕ!

ಇಷ್ಟು ಸಾಲದು ಎಂಬಂತೆ, ನಮ್ಮ ಮನೆಯ ತೆಂಗಿನ ಮರಕ್ಕೆ ಮೀನಿನ ಗೊಬ್ಬರ ಹಾಕಿಸಿದ ವಿಷಯ ನಮ್ಮ ಓಣಿಯ ತೆಂಗಿನ ಮರಗಳಿರುವ ಹತ್ತಾರು ಮನೆಗಳಿಗೂ ಹಬ್ಬಿಸಿ, ಕಾಂಟ್ರಾಕ್ಟ್ ಗಿಟ್ಟಿಸಿದ ವ್ಯವಹಾರ ಜ್ಞಾನಿಗೆ ಕಾಲುಮುಟ್ಟಿ ನಾನು ನಮಸ್ಕರಿಸಬೇಕು! ಹೀಗೆ ನಮ್ಮಂತಹವರ/ಕೃಷಿಕರ ಹುಳುಕುಗಳೇ ವ್ಯಾಪಾರಿಗಳಿಗೆ ಅನುಕೂಲ! ವ್ಯವಹಾರ ಮೂಲ!

MALLANNA NAGARAL 1‘ನನ್ನ ತೋಟವೇ ನನ್ನ ವಿಶ್ವವಿದ್ಯಾಲಯ’ ಎನ್ನುವ ಬಾಗಲಕೋಟೆ ಜಿಲ್ಲೆ ಹುನಗುಂದದ ಡಾ.ಮಲ್ಲಣ್ಣ ನಾಗರಾಳ ಪ್ರಗತಿಪರ ಕೃಷಿಕರು. ಕಳೆದ ಹಲವಾರು ದಶಕಗಳಿಂದ ತಮ್ಮ ಹೊಲದಲ್ಲಿ ಮಣ್ಣಿನ ಸಹಜ ಸತ್ವವನ್ನು ಅರಿತು ಸಾವಯವ ಕೃಷಿ ಕಟ್ಟಾ ಪಾಲಿಸುತ್ತಿರುವ ರೈತ. ಆಧುನಿಕ ಕೃಷಿಕರ ಪಡೆಯುವುದಕ್ಕಿಂತ ಹೆಚ್ಚು ಫಸಲನ್ನು ಕೊಟ್ಟಿಗೆ ಗೊಬ್ಬರ ಆಧರಸಿ ಸಾವಯವ ರೂಪದಲ್ಲೇ ಪಡೆಯುತ್ತಿರುವವರು. ಜಮೀನ್ದಾರರಾದ ಅವರ ಹೊಲಗಳ ಬದು ಮತ್ತು ಮಣ್ಣಿನ ಬಣ್ಣ ನೋಡಬೇಕು. ಕೀಟನಾಶಕಗಳ ಬಳಕೆ ಇಲ್ಲ. ಹೊರ ಸುರಿ ಗೊಬ್ಬರದ ಬಳಕೆ ಇಲ್ಲ. ಬೆಳೆದದ್ದೆಲ್ಲ ಚಿನ್ನ.

‘ಮಣ್ಣಿನ ಪೋಲ್ಮಿ ನಾ ಮಾಡ್ತೇನಿ ಮಾತ್ರ; ನೀರಿನ ಜುಲ್ಮಿನೂ ನಂದ. ಬಾಕಿ ಎಲ್ಲ ಹೊಲದ್ದು. ತನ್ನನ್ನ ತಾನ ಪೋಷಣಿ ಮಾಡಿಕೊಳ್ಳೋವಷ್ಟು ತಾಕತ್ತು, ಜಿಗುಟು ಐತ್ರಿ.. ನಾವೇನೋ ಕಡ್ಡಿ ಆಡಸೋದು.. ಕಡದ ಗುಡ್ಡ ಹಾಕೋದು ಬ್ಯಾಡಾ..’ ಸಾವಯವ ಕೃಷಿಕ ಡಾ. ಮಲ್ಲಣ್ಣ ನಾಗರಾಳರ ಮಾತು, ಘನಮಠ ಶಿವಯೋಗಿಗಳ ಮಾತನ್ನು – ಕೃತಿಯನ್ನು ನೆನಪಿಸುವಂತಿದೆ.

ಸಹಜ ಕೃಷಿಗೆ ಎರೆಹುಳುಗಳೇ ಪ್ರಮಾಣ. ಎರೆಹುಳು ರೈತನ ಮಿತ್ರ ಎಂಬ ಉಕ್ತಿಗೆ ಶತಶತಮಾನಗಳ ಇತಿಹಾಸವಿದೆ. ತನ್ನ ಬದುಕಿಗಾಗಿ ಅದರ ಹೋರಾಟದ ಪರಿ ಬಲ್ಲವನೇ ಬಲ್ಲ. ಬುದ್ಧಿವಂತ ಮನುಷ್ಯ ಕೃಷಿಯಲ್ಲಿ ಅದರ ಸಹಕಾರ-ಸಹಾಯ, ಮೇಲಾಗಿ ತನ್ನೊಡನೆ ಇಟ್ಟುಕೊಂಡಿದ್ದ ಗೆಳೆತನ ಮರೆತ. ತನ್ನ ಕೃಷಿ ಕಾರ್ಯಕ್ಕೆ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಭಾವಿಸಿದ. ಒಂದು ಜೀವಿ ಅಜ್ಞಾತವಾಗಿ ತನಗಾಗಿ ಭೂಮಿ ಅಡಿ ದುಡಿಯುತ್ತಿದೆ ಎಂಬ ಸರಳ ಸತ್ಯ ಮರೆತ. ಅದರ ಮನೆ, ಮಣ್ಣಿಗೆ ವಿಷ ಸುರಿದು ಪೋಷಕಾಂಶ ಎಂದ. ಅಲ್ಪ ಆಸೆಗಾಗಿ ಅವುಗಳನ್ನು ಕೊಂದ.

ಈಗ ಮತ್ತೆ ಕಾಲ ಹೊರಳಿದೆ. ಬದಲಾಗಿದೆ. ಎರೆಹುಳು ಇಲ್ಲದ ಮಣ್ಣಿನಲ್ಲಿ ಸಾರ ಇಲ್ಲ ಎಂಬ ಸತ್ಯ ಮನುಷ್ಯನಿಗೆ ಹೊಳೆದಿದೆ. (ಮೀನಿನ ಗೊಬ್ಬರ ಸವಿಯಲು ಬಂದ ಕೆಂಜಿಗ ಇರುವೆ ನಮ್ಮ ತೆಂಗಿನ ಮರದ ಬುಡದಲ್ಲಿದ್ದ ಎರೆಹುಳುಗಳನ್ನು ತುಂಡುತುಂಡಾಗಿ ಕತ್ತರಿಸಿ ತಮ್ಮ ಕಾಲೋನಿಗೆ ಎಳೆದೊಯ್ಯುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದಿದೆ!) ಈಗ ಎರೆಹುಳುವೇ ಕೃಷಿಗೆ ಜೀವ ಎಂದು ಅವನ್ನು ಗೂಡಿಗೆ ಸುರಿದು ಅವುಗಳ ಮೇಲೆ ಮಣ್ಣು, ಸೆಗಣಿ, ಜೀವಾಮೃತ ಹಾಕಿ ಗೊಬ್ಬರ ಮಾಡಲು ನಾವು ಹವಣಿಸುವಂತಾಗಿದೆ!

ಮಣ್ಣಿನ ಅಡಿಯಲ್ಲಿ ಎರೆಹುಳುಗಳು ಬಿಡುವಿಲ್ಲದೇ ದುಡಿಯುತ್ತವೆ. ದಿನಕ್ಕೆ ೬.೩೦ ತಾಸು, ವಾರದ ರಜೆ, ಭತ್ಯೆ ಏನೂ ಇಲ್ಲ. ಪ್ರತಿಯೊಂದು ಎರೆಹುಳು ತನ್ನ ತೂಕದ ಒಂದೂವರೆಪಟ್ಟು ಹೆಚ್ಚು ತೂಕದ ಮಣ್ಣನ್ನು ಪ್ರತಿ ದಿನವೂ ಅಗೆಯುತ್ತದೆ ಎನ್ನುತ್ತಾರೆ ಡಾ. ಮಲ್ಲಣ್ಣ ನಾಗರಾಳ. ಒಂದು ಎಕರೆಯಲ್ಲಿ ಅಂದಾಜು ಒಂದು ಲಕ್ಷ ಎರೆಹುಳುಗಳಿದ್ದರೆ (ಎಣಿಸಿದವರಾರು?), ಅವುಗಳ ತೂಕ ಸುಮಾರು ಒಂದು ಟನ್. ಇಷ್ಟು ಹುಳುಗಳು ದಿನವೊಂದಕ್ಕೆ ಒಂದೂವರೆ ಟನ್‌ನಷ್ಟು ಮಣ್ಣನ್ನು ಅಗೆಯುತ್ತವೆ. ಪ್ರತಿ ರಾತ್ರಿ ಒಂದು ಎರೆಹುಳು ತನ್ನ ಉಚ್ಛಿಷ್ಠವನ್ನು ಹೊರಹಾಕಲು ಎಂಟು ಸಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ! ಪ್ರತಿ ಬಾರಿ ಅದು ಬೇರೆ ಬೇರೆ ದಾರಿಯಲ್ಲೇ ಹೊರಬರುತ್ತದೆ! ಹಾಗೆಯೇ ಬೇರೆ ಹಾದಿಯಲ್ಲಿ ಒಳಹೋಗುತ್ತದೆ!

ಅಂದರೆ, (ಲೆಕ್ಕ ಹಾಕಿ!) ಒಂದು ರಾತ್ರಿ ಒಂದು ಎರೆಹುಳು ಭೂಮಿಗೆ ೧೪ ರಿಂದ ೧೮ ರಂಧ್ರಗಳನ್ನು ಕೊರೆಯುತ್ತದೆ. ಒಂದು ಅಡಿ ಜಾಗದಲ್ಲಿ ೧೦ ಎರೆ ಹುಳುಗಳಿದ್ದರೆ ಅಲ್ಲಿ ಸುಮಾರಿ ೧೮೦ ರಂಧ್ರಗಳಾಗುತ್ತವೆ! ಇದರಿಂದ ಮಣ್ಣಿನ ಮೂಲಕ ಭೂಮಿಯ ಒಳಭಾಗಕ್ಕೆ ಗಾಳಿ ಹರಿಯುತ್ತದೆ. ಗಿಡಗಳ ಬೇರಿಗೆ ನೀರು ಒಸರುತ್ತದೆ. ಸಾರಜನಕದ ಸತ್ವ ಜಿನುಗುತ್ತದೆ!

ರಾಸಾಯನಿಕ ಬಳಸದೇ, ಯಾಂತ್ರಿಕ ಉಳುಮೆ ಮಾಡದೇ, ಸಾವಯವ ಗೊಬ್ಬರ ನೆಚ್ಚಿ ‘ನೀಡು ಶಿವಾ, ನೀಡದಿರೋ ಶಿವಾ’ ಎಂದು ಕೈ ಮುಗಿದರೆ, ಆರೋಗ್ಯವಂತ ಮಣ್ಣು ಒಂದು ಎಕರೆಯಲ್ಲಿ ಮೂರರಿಂದ ನಾಲ್ಕು ಲಕ್ಷ ಎರೆಹುಳುಗಳನ್ನು ಸೃಷ್ಟಿಸಬಲ್ಲದು! ಹುನಗುಂದದ ಡಾ. ಮಲ್ಲಣ್ಣ ನಾಗರಾಳ, ಚೇರ್ಕಾಡಿಯ ರಾಮಚಂದ್ರರಾಯರು, ಸಾಗರದ ಪುರುಷೋತ್ತಮರಾಯರು, ಮಂಗಳೂರಿನ ಅಡ್ಡೂರು ಇವರೆಲ್ಲರ ಮಾತು-ಹೃದಯ ಕೃಷಿಗಾಗಿ ಒಂದೇ ನಮೂನಿ ಹೇಗೆ ಮಿಡಿಯುತ್ತವೆ? ಎಂಬುದೇ ಸೋಜಿಗ!

ಹಾಗಾಗಿ, ಮಣ್ಣೇ ಮೊದಲು; ಮಣ್ಣೇ ನಮ್ಮ ಬದುಕಿಗೆ ಕೊನೆ. ಫಲವತ್ತಾದ ಒಂದಿಂಚು ಮೇಲ್ಮೈ ಮಣ್ಣು ರೂಪುಗೊಳ್ಳಲು ಸಾವಿರಾರು ವರ್ಷಗಳು ಉರುಳಬೇಕು! ಅವರಂತಹ ನೇಗಿಲಯೋಗಿಗಳೂ ಬೇಕು!

***************************************************************************************************************************************************************

‘ಈ ನಮ್ಮ ಭೂಮಿ ಒಂದು ಆಕಾಶವಾಣಿ ಇದ್ದಂತೆ. ಅದರಲ್ಲಿ ನಿರಂತರ ಕಾರ್ಯಕ್ರಮಗಳಿವೆ. ಆದರೆ, ನಾವು ಕೇಳಬೇಕಾದರೆ ಸ್ವಿಚ್ ಆನ್ ಮಾಡಬೇಕು. ಅವು ನಮಗೆ ಅರ್ಥವಾಗಬೇಕಾದರೆ, ಕೇಳಬೇಕಾದರೆ ಗಿಡ, ಮರ, ಬಳ್ಳಿಗಳಂಥ ಸ್ವಿಚ್ ಬೇಕು. ಅಂಥ ಒಂದೇ ಒಂದು ಬಳ್ಳಿ ಪ್ರಕೃತಿಯ ಪರಿಸ್ಥಿತಿ, ಅಂತರಂಗವನ್ನು ಪ್ರಕಟಿಸಬಹುದು.’

-     ಡಾ. ಮಲ್ಲಣ್ಣ ನಾಗರಾಳ.

 **************************************************************************************************************************************************************

ಸಾಂದರ್ಭಿಕ ಚಿತ್ರ: ಡಾ. ಮಲ್ಲಣ್ಣ ನಾಗರಾಳ, ಸಾವಯವ ಕೃಷಿಕರು, ಹುನಗುಂದ, ಬಾಗಲಕೋಟೆ ಜಿಲ್ಲೆ

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*