ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮುಗಿಯದ ಮುಗದ ಗ್ರಾಮದ ನೀರ ಬವಣೆಗೆ ಪರ್ಯಾಯ : ಬಾವಿ ನಂಬಿದ ಮಾದರಿ ಗ್ರಾಮ ಮುಗದ!

೯೮ ಎಕರೆ ವಿಶಾಲವಾದ ಕೆರೆ ಗ್ರಾಮದ ಒಂದು ಬದಿಗೆ. ೧೫ ಕೊಳವೆ ಬಾವಿಗಳು ಊರ ತುಂಬೆಲ್ಲ! ಆ ಪೈಕಿ ೮ ಬೋರ್‌ವೆಲ್‌ಗಳಲ್ಲಿ ಈಗಾಗಲೇ ನೀರಿಂಗಿದೆ! ಬಾಕಿ ೭ರಲ್ಲಿ ಹೆಚ್ಚೂ ಕಡಿಮೆ ಸವುಳ ನೀರು! ಹಾಗಾಗಿ, ಗ್ರಾಮ ಪಂಚಾಯ್ತಿಯಿಂದ ಸಿಹಿ ನೀರಿನ ಸೆಲೆ ಹುಡುಕಿ, ಹೆಚ್ಚುವರಿಯಾಗಿ ಮತ್ತೆ ೪ ಕೊಳವೆ ಬಾವಿ ಕೊರೆಸಲಾಗಿದೆ..! ಎರಡು ಶುದ್ಧ ಕುಡಿಯುವ ನೀರಿನ ಘಟಕಗಳೂ ಇವೆ..! ಆದರೂ, ಮುಗದದ ನೀರಿನ ಬವಣೆ ಮುಗಿಯುವ ಮಾತಿಲ್ಲ..!

ಹಿರಿಯರ ನೀರ ಜಾಣ್ಮೆ ಹೇಗಿತ್ತು?Water  Well  in  Mugad  Village  in  Dharawad  taluk   2

ಹಾಗಾಗಿ, ಹಿರಿಯರ ನೀರ ಜಾಣ್ಮೆ ಹೇಗಿತ್ತು ಎಂಬ ಬಗ್ಗೆ ಗ್ರಾಮಸ್ಥರ ಅಧ್ಯಯನ. ೧೯೫೧ರಲ್ಲಿ ಸರ್ವೋದಯ ಸಂಸ್ಥೆ ಗ್ರಾಮದ ಕೆಂಗಾನೂರ ಕುಟುಂಬದಿಂದ ದಾನ ಪಡೆದು ನಿರ್ಮಿಸಿದ ಸಿಹಿ ನೀರಿನ ಬಾವಿ ಊರಿಗೇ ಸಿಹಿ ನೀರು ಉಣಿಸುತ್ತಿದ್ದ ಮಾಹಿತಿ ಬೆಳಕಿಗೆ. ಸದ್ಯ ೬೬ ವರ್ಷ ಹರೆಯದ ಈ ಬಾವಿ ಕಸದ ಕೊಂಪೆ ಎಂಬ ವಿಷಯವೂ ಗ್ರಾಮ ಪಂಚಾಯ್ತಿ ಗಮನಕ್ಕೆ. ಮತ್ತೊಂದು ಬಾವಿ ಶಾಲೆಯ ಆವರಣದಲ್ಲಿತ್ತು; ಮಕ್ಕಳಿಗೆ ಅಪಾಯವಾಗಬಹುದು ಎಂದು ಮುಚ್ಚಿಸಿದರೆಂಬ ಮಾತು ಕಳವಳ ಹೆಚ್ಚಿಸಿತು. ಸದ್ಯ ೧೦ ಸಾವಿರ ಜನ ಸಂಖ್ಯೆಯ ಮುಗದಕ್ಕೆ ಗ್ರಾಮ ಪಂಚಾಯ್ತಿ ಈ ವರೆಗೆ ಕೊರೆಸಿದ ಬೋರ್‌ವೆಲ್‌ಗಳ ಒಟ್ಟು ಸಂಖ್ಯೆ ೨೦!

ನೀರ ನೆಮ್ಮದಿ ಸಾಧಿಸಲು ಗ್ರಾಮಸ್ಥರ ಸಂಕಲ್ಪ. ಕೊಚ್ಚೆ ಗುಂಡಿಯಾಗಿ, ಕಸದ ತೊಟ್ಟೆಯಂತಿದ್ದ ಸಿಹಿ ನೀರಿನ ಬಾವಿ ಸ್ವಚ್ಛಗೊಳಿಸಿ, ಕುಡಿಯಲು ಬಳಸಿಕೊಳ್ಳಲು ಸುಮನಸ್ಸುಗಳು ಮುಂದು. ಮುಗದ ಗ್ರಾಮ ಪಂಚಾಯ್ತಿ, ಧಾರವಾಡದ ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ರಿಸರ್ಚ್ -ಸಿಎಂಡಿಆರ್ ಹಾಗೂ ಓಸ್‌ವಾಲ್ ಹಸಿರು ಪರಿಸರ ಸಂಸ್ಥೆ ಬಾವಿಯ ಗತ ವೈಭವ ಪುನುಜ್ಜೀವಿತಗೊಳಿಸಲು ಕೈಜೋಡಿಸಿದವು.

ನೀರ ನೆಮ್ಮದಿ

೧೦ ಅಡಿ ಅಗಲ, ೫೦ ಅಡಿ ಆಳದ ಬಾವಿಯಲ್ಲಿ ಬಿರು ಬೇಸಿಗೆ ಮತ್ತು ಅತ್ಯಂತ ಕಠಿಣ ಬರಗಾಲದಲ್ಲೂ ೨೦ ಅಡಿ ನೀರು ಇರುವುದು ಆಶಾಭಾವ ಮೂಡಿಸಿತು. ಇತಿಹಾಸದ ಪುಟ ಸೇರಲು ತುದಿಗಾಲ ಮೇಲೆ ನಿಂತಿದ್ದ ಬಾವಿ ವರ್ತಮಾನಕ್ಕೆ ಮರಳುವ ಶುಭ ಘಳಿಗೆ ಕೂಡಿಬಂತು. ಗ್ರಾಮ ಪಂಚಾಯ್ತಿ ಮೊದಲ ಹಂತದಲ್ಲಿ ಧನ ಸಹಾಯ ಒದಗಿಸಿ, ಬಾವಿಯ ಒಳಗಿನ ಕಸ-ಕಡ್ಡಿ ಮತ್ತು ಹೂಳು ಜೊತೆಗೆ ಪಕ್ಕದ ಹೊಲಸು ಎತ್ತಿಸಲು ಮೊದಲು ಮಾಡಿತು. ಕಲುಷಿತಗೊಂಡ ನೀರನ್ನು ಸಂಪೂರ್ಣ ಹೊರಗೆ ಎತ್ತಿ ಹಕಿ, ಮೂಲ ಸೆಲೆ ಭದ್ರ ಪಡಿಸಲಾಯಿತು. ಸಿಎಂಡಿಆರ್ ಸಂಸ್ಥೆ ಈ ಬಾವಿಗೊಂದು ತಡೆಗೋಡೆ, ಆವರಣ ಮತ್ತು ಬಣ್ಣ ಬಳಿಸುವ ಕೆಲಸ ಮಾಡಿತು. ಓಸ್‌ವಾಲ್ ಹಸಿರು ಪರಿಸರ ಸಂಸ್ಥೆ ನವೀಕಣಗೊಂಡ ಬಾವಿಯಲ್ಲಿ ಕಸ-ಕಡ್ಡಿ ಬೀಳದಂತೆ ಕಬ್ಬಿಣದ ಜಾಲರಿ ನಿರ್ಮಿಸಿಕೊಟ್ಟಿತು.

ಮೂಲ ಸೆಲೆ ಜೀವಂತವಾWater  Well  in  Mugad  Village  in  Dharawad  taluk   3ಗಿಡುವ ಪ್ರಯತ್ನ

ಮುಗದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಕಲಕೇರಿ ಅವರು ಹೆಮ್ಮೆಯಿಂದ ಹೇಳಿದ್ದು, “ಸದ್ಯ ನಮ್ಮ ಪೂರ್ವಿಕರ ‘ಹೊಸ ಬಾವಿ’ಗೆ ಮೋಟಾರ್ ಅಳವಡಿಸಿ, ಗ್ರಾಮಸ್ಥರಿಗೆ ಸಿಹಿ ನೀರು ನೀಡಲಾಗುತ್ತಿದೆ. ಸದ್ಯದಲ್ಲೇ ಬಾವಿ ಮೈದುಂಬಲಿದ್ದು ಸೂಕ್ತ ಪರೀಕ್ಷೆ ಕೈಗೊಂಡು, ಕುಡಿಯಲು ಈ ನೀರು ಯೋಗ್ಯ ಎಂಬ ಪ್ರಮಾಣ ಪತ್ರ ಲಭಿಸುತ್ತಿದ್ದಂತೆ, ಕನಿಷ್ಟ ನೂರು ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗುವುದು. ಮಿಕ್ಕುವ ನೀರನ್ನು ಕಿರು ಜಲಾನಯನ ಯೋಜನೆಗೆ ಬಳಸುವ ತನ್ಮೂಲಕ ಮೂಲ ಸೆಲೆಯನ್ನು  ಜೀವಂತವಾಗಿಡುವ ಪ್ರಯತ್ನ ಮಾಡುತ್ತೇವೆ” ಎಂದರು.

ಬರೋಬ್ಬರಿ ೬೬ ವರ್ಷ ವಯಸ್ಸಿನ ಬಾವಿ ಕೇವಲ ಸ್ಥಳೀಯರ ನಿರ್ಲಕ್ಷ್ಯದಿಂದ ಅವಗಣನೆಗೆ ಒಳಗಾಗಿತ್ತು. ಆಲಸ್ಯವೂ ಕಾರಣವೆನ್ನಿ. ಬಳಸಲೂ ಸಹ ಯೋಗ್ಯವಲ್ಲದ ಸ್ಥಿತಿಗೆ ಬಾವಿ ಇಳಿಯಬೇಕಾದರೆ, ಲಭ್ಯ ನೀರನ್ನು ಬ್ಯಾಂಕಿನ ಮುದ್ದತಿ ಠೇವಣಿಯಂತೆ ಕೇವಲ ಬಡ್ಡಿಯ ಮೇಲೆ ಬಳಸಬೇಕು ಎಂಬ ಬುದ್ಧಿ ಭ್ರಷ್ಟವಾಗಿತ್ತು ಎಂದೇ ಅರ್ಥ.

ಹಿತ-ಮಿತವಾಗಿ ಬಳಸುವ ಮನೋಸ್ಥಿತಿ

ಸರ್ವೋದಯ ಬಾವಿಗೆ ಸೂಕ್ತ ರಕ್ಷಣೆ ಒದಗಿಸುವ ಮೂಲಕ ಗಮನ ಸೆಳೆದ ಓಸ್‌ವಾಲ್ ಹಸಿರು ಪರಿಸರ ಸಂಸ್ಥೆಯ ಮುಖ್ಯಸ್ಥ ಮೋಹನ್ ಭಂಡಾರಿ ಅವರು, “ಬಾವಿಗಳನ್ನು ಹಿರಿಯರ ನೆನಪಾಗಿ ಉಳಿಸಿಕೊಳ್ಳಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ. ಬಾವಿಗಳಲ್ಲಿ ಲಭ್ಯವಿರುವ ನೀನ್ನು ಹಿತ-ಮಿತವಾಗಿ ಬಳಸುವ ಮನೋಸ್ಥಿತಿ ನಮ್ಮೆಲ್ಲರದ್ದಾಗಬೇಕು. ಹಸಿರು ಮತ್ತು ನೀರು ಜೀವ ಜಗತ್ತಿನ ಉಸಿರು. ಅದನ್ನು ಹಸಿರಾಗಿರಿಸುವುದೇ ನಮ್ಮ ಸಂಸ್ಥೆಯ ಉದ್ದೇಶ. ಮುಗದ ಬಾವಿ ನವೀಕರಣಕ್ಕೆ ಕೈಜೋಡಿಸುವ ಖುಷಿ ನಮ್ಮದಾಗಿದೆ.”

ಮುಗದ ದತ್ತು ಗ್ರಾಮ

ಸಿಎಂಡಿಆರ್ ನಿರ್ದೇಶಕ ಡಾ.ವೈ.ಬಿ.ಅಣ್ಣಿಗೇರಿ, “ಸಂಸ್ಥೆಯಿಂದ ಮುಗದ ಗ್ರಾಮವನ್ನು ದತ್ತು ಪಡೆದಿದ್ದೇವೆ. ಗ್ರಾಮ ಪಂಚಾಯ್ತಿ ಸಹ ನಮ್ಮ ಸುಪರ್ದಿಗೆ ಇದೆ. ಅಲ್ಲಿನ ಸದಸ್ಯರ ತರಬೇತಿ, ಜನ ಜಾಗೃತಿ ನಮ್ಮ ಜವಾಬ್ದಾರಿ. ಈ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಬಾವಿಯನ್ನು ಸ್ವಚ್ಛಗೊಳಿಸಲಾಗಿದೆ. ನವೀಕರಣಗೊಳಿಸಲಾದ ಬಾವಿಯ ನೀರನ್ನು ಮತ್ತೆ ಹೊಸ ಪೀಳಿಗೆ ಬಳಸುತ್ತಿರುವುದು ಖುಷಿ ತಂದಿದೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಂತಾಗಿದೆ..”

ಸದ್ಯ ಮಳೆ ಇಲ್ಲ

ಬಳಕೆಗೂ ನೀರು ಲಭ್ಯವಿಲ್ಲ. ಮುಗದ ಗ್ರಾಮದಲ್ಲಿ ೨೦ ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಜಾನುವಾರುಗಳ ಸಂಖ್ಯೆ ೨,೫೦೦ ದಷ್ಟಿದ್ದು, ಕೆರೆ-ಕುಂಟೆ ಸಹ ಒಣಗಿದ ಪರಿಣಾಮ ನೀರಿನ ಬವಣೆ ಹೇಳತೀರದಂತಾಗಿತ್ತು. ಹಿರೀಕರ ಬಾವಿ ಈಗ ಓಯಾಸಿಸ್‌ನಂತಾಗಿದೆ.. ಇಡೀ ಮುಗದಕ್ಕೆ.

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*