ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಛಾವಣಿ ನೀರಿನಿಂದ ಫ್ಲೋರೈಡ್ ದೂರ

02

ಪಟ್ಟನಾಯಕನಹಳ್ಳಿಯ ನಾಗರಾಜು-ಲಲಿತಮ್ಮ ದಂಪತಿಗಳಿಗೆ ಈಗ ನೆಮ್ಮದಿ. ಬೆಳೆಯುವ ಮಗಳು ಮತ್ತು ವಯಸ್ಸಾಗಿದ್ದ ತಾಯಿ ಅನುಭವಿಸುತ್ತಿದ್ದ ಯಾತನೆಗೊಂದು ಮುಕ್ತಿ ಸಿಕ್ಕಿದೆ. ಆರ್ಥಿಕ ಹೊರೆ ಕಡಿಮೆಯಾಗುವುದರ ಜೊತೆಗೆ ಮಾನಸಿಕ ಕಿರಿ-ಕಿರಿ ದೂರವಾಗಿದೆ. ವರ್ಷಗಳಿಂದ ಅನುಭವಿಸುತ್ತಿದ್ದ ಖಾಯಿಲೆಗಳು ವಾಸಿಯೇ ಆಗುವುದಿಲ್ಲವೆಂದು ಭಯಗೊಂಡಿದ್ದವರಿಗೆ  ಅತ್ಯಂತ ಸುಲಭವಾಗಿ ಪರಿಹಾರ ಲಭ್ಯವಾಗಿದೆ. ಅದಕ್ಕೆ ಕಾರಣ ಛಾವಣಿ ನೀರ ಸಂಗ್ರಹದಿಂದ!.

೧೦ ವರ್ಷದ ಮಗಳು ಉಷಾಳಿಗೆ ಫೊರೊಸಿಸ್ನಿಂದಾಗಿ ಹಲ್ಲುಗಳು ಹಳದಿ ಬಣ್ಣಕ್ಕಿದ್ದವು. ೬೦ ಕ್ಕೂ ಹೆಚ್ಚು ವಯಸ್ಸಾಗಿದ್ದ ಲಲಿತಮ್ಮನವರ ತಾಯಿಗೆ ಸದಾ ಕೈಕಾಲು ನೋವು, ಮಂಡಿ ನೋವಿನಿಂದಾಗಿ ಸುಸ್ತು, ನಿಶ್ಯಕ್ತಿ. ಕುಳಿತರೆ ಏಳಲಾಗದ, ಎದ್ದರೆ ಕೂರಲಾಗದ ಸ್ಥಿತಿ. ಯಾವ ವೈದ್ಯರಿಗೆ ತೋರಿಸಿದರೂ, ಎಂತಹ ಔಷಧಿ ಕೊಟ್ಟರೂ ಸುಧಾರಣೆಯಾಗದ ಪರಿಸ್ಥಿತಿ. ಇದಕ್ಕೆಲ್ಲಾ ಮೂಲ  ಕಾರಣ  ಅವರು ಕುಡಿಯುತ್ತಿದ್ದ ಫ್ಲೊರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದ ನೀರು.

ಕಳೆದ ಒಂದು ವರ್ಷದಿಂದ ಈ ಸಮಸ್ಯೆಗಳಿಲ್ಲ. ಕಾರಣ ಆರಂಭದಲ್ಲೇ ಹೇಳಿದಂತೆ ಛಾವಣಿ ನೀರು ಸಂಗ್ರಹಿಸಿ ಕುಡಿಯುತ್ತಿರುವುದು. ಮಗಳ ಹಲ್ಲಿನ ಮೇಲಿದ್ದ ಹಳದಿ ಕರೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಹಾಗೂ ಲಲಿತಮ್ಮನವರ ತಾಯಿ ಆರಾಮಾಗಿ ಓಡಾಡಿಕೊಂಡು ಕೆಲಸ ಮಾಡಿಕೊಂಡಿದ್ದಾರೆ.

ಪಟ್ಟನಾಯಕನಹಳ್ಳಿಯು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಫ್ರೊರೈಡ್ ಅಂಶಯುಕ್ತ ನೀರು ಹೊಂದಿರುವ ಪ್ರದೇಶಗಳಲ್ಲಿ ತುಮಕೂರು ಜಿಲ್ಲೆ ಸಹ ಒಂದು. ಅದರಲ್ಲಿಯೂ ಜಿಲ್ಲೆಯ ಪಾವಗಡ, ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಈ ಸಮಸ್ಯೆ ವಿಪರೀತ. ಲಭ್ಯ ಅಂಕಿ-ಅಂಶಗಳ ಪ್ರಕಾರ ಈ ಭಾಗದ ನೀರಿನಲ್ಲಿ ೫,೮ ಪಿಪಿಎಂನಷ್ಟು ಪ್ರಮಾಣದ ಫ್ಲೊರೈಡ್ ಅಂಶವಿದೆ. ಇದು ಅಪಾಯಕಾರಿ ಮಟ್ಟ. ಮಳೆ ನೀರನ್ನು ಭೂಮಿಗೆ ಹಿಂಗಿಸದೆ ಹೆಚ್ಚು-ಹೆಚ್ಚು ಅಂತರ್ಜಲ ಬಳಸಿದ ಪರಿಣಾಮವಿದು.

ಪಟ್ಟನಾಯಕನಹಳ್ಳಿ ಪ್ರದೇಶದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಧಾರ. ಈ ನೀರಿನಲ್ಲಿ ೪.೮ ಪಿಪಿಎಂ ಪ್ರಮಾಣದ ಪ್ಜ್ಲೊರೈಡ್ ಅಂಶವಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣದಲ್ಲಾದ ಕುಂಠಿತ. ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿ ನೀರು ನಿಲ್ಲದಿರುವುದು ಫ್ಲೊರೈಡ್ ಅಂಶ ಹೆಚ್ಚಾಗಲು ಪ್ರಮುಖ ಕಾರಣಗಳು. ಹಾಗಾಗಿ ನಾಗರಾಜು-ಲಲಿತಮ್ಮನವರಂತೆ ಇಲ್ಲಿನ ಎಲ್ಲಾ ಕುಟುಂಬಗಳೂ ಹಲವಾರು ಸಮಸ್ಯೆ ಎದುರಿಸುತ್ತಿವೆ.

ಈ ಸಮಸ್ಯೆ ಪರಿಹಾರಕ್ಕಾಗಿ ಛಾವಣಿ ಸರ್ಕಾರವು ಫ್ಲೊರೊಸಿಸ್ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ‘ಸಚೇತನ’ ಯೋಜನೆ ಪ್ರಾರಂಭಿಸಿದ್ದು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲ್ಲೂಕುಗಳ ೩೧ ಗ್ರಾಮಗಳಲ್ಲಿ ಜಾರಿಗೊಳಿಸುತ್ತಿದ್ದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಮುದಾಯ ಮಟ್ಟದಲ್ಲಿ ಇದನ್ನು ಅನುಷ್ಠಾನಗೊಳಿಸುತ್ತಿದೆ. ಬೆಂಗಳೂರಿನ ಅರ್ಘ್ಯಂ ಸಂಸ್ಥೆಯು ಯೋಜನೆಯ ದಾಖಲಾತಿ ಮತ್ತು ಸಂಶೋಧನೆ ಜವಾಬ್ದಾರಿ ವಹಿಸಿಕೊಂಡಿದೆ.

ಯೋಜನೆ ಅನುಷ್ಠಾನದಲ್ಲಿ ಜನರ ಮನಪರಿವರ್ತನೆಯೇ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ ಎಂಬುದು ಬೈಫ್ನ ಅಧಿಕಾರಿ ವಿ.ಬಿ.ದ್ಯಾಸರವರ ಅನಿಸಿಕೆ. ಇದಕ್ಕೆ ದನಿಗೂಡಿಸುವ ಲಲಿತಮ್ಮನವರು ” ಆರಂಭದಲ್ಲಿ ನಮಗೂ ಆಸಕ್ತಿ ಇರಲಿಲ್ಲ, ಆದ್ರೆ ಇವರ ನಿರಂತರ ಮನೆ ಭೇಟಿ, ಜಾಥಾ,   ತರಬೇತಿಗಳಿಂದ ಪ್ರೇರಣೆ ಬಂತು” ಎನ್ನುತ್ತಾರೆ. ಇವರು ತಮ್ಮ ಹೆಂಚಿನ ಛಾವಣಿಗೆ ನೀರು ಸಂಗ್ರಹಣೆಗಾಗಿ ಪೈಪ್ ಜೋಡಣೆ ಮಾಡಿ ಮನೆಯ ಮುಂಭಾಗದಲ್ಲಿ ೫೦೦೦ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ತೊಟ್ಟಿ ನಿರ್ಮಾಣದಲ್ಲಿದ್ದಾಗ ಅಕ್ಕ-ಪಕ್ಕದವರು ಆಡಿಕೊಂಡು “ಮಳೆ ಬಂದಾಗ, ನೀವು ನೀರು ಕುಡ್ದಾಗ, ಇದೆಲ್ಲ ಆಗೋದಲ್ಲ ಹೋಗೋದಲ್ಲ”  ಎಂದು ನಗುತ್ತಿದ್ದರಂತೆ. “ಈಗ ಅವರೇ ನಮ್ಮ ಮನೆಗೆ ಬಿಂದಿಗೆ ಹಿಡ್ಕೊಂಡು ನೀರಿಗೆ ಬರುತ್ತಾರೆ” ಎಂದು ಬಾಯ್ತುಂಬಾ ನಗುತ್ತಾರೆ ಲಲಿತಮ್ಮ.

೨೦೦೭ ನೇ ಇಸವಿಯ ಭರಣಿ ಮಳೆಯಿಂದಲೂ ಮಳೆ ನೀರನ್ನೇ ಬಳಸುತ್ತಿರುವ ಇವರಿಗೆ, ಮುಂಚೆ ಮುನಿಸಿಪಾಲಿಟಿಯವರು ಕೊಡುತ್ತಿದ್ದ ಕೊಳವೆ ಬಾವಿ ನೀರಿಗೂ ಮಳೆ ನೀರಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗಿದೆ. ಮುನಿಸಿಪಾಲಿಟಿ ನೀರನ್ನು ಹಿಡಿದಿಟ್ಟ ಪಾತ್ರೆಗಳು ಕಪ್ಪಾಗುತ್ತಿದ್ದವು, ಬೆಳಿಗ್ಗೆ ನೀರು ಹಿಡಿದಿಟ್ಟರೆ  ರಾತ್ರಿ ಹೊತ್ತಿಗೆಲ್ಲಾ ನೀರಿನ ಮೇಲೆ ಒಂದು ಪದರ ಕೆನೆಗಟ್ಟುತ್ತಿತ್ತು. ಮುಖ್ಯವಾಗಿ ಆಗ ಬೇಳೆ ಬೇಯಲು ಅರ್ಧ ಗಂಟೆ ಹಿಡಿಯುತ್ತಿತ್ತು ಈಗ ಕೇವಲ ಕಾಲು ಗಂಟೆ ಸಾಕು ಎಂಬುದು ಇವರ ಅನುಭವ.

ಇವರ ಮಳೆ ನೀರು ಸಂಗ್ರಹ ರಚನೆ ಅತ್ಯಂತ ಸುಲಭ. ಛಾವಣಿ ನೀರನ್ನು ಸಂಗ್ರಹಿಸಲು ಪೈಪುಗಳ ಜೋಡಣೆ, ನೀರು ತೊಟ್ಟಿಗೆ ಬೀಳುವ ಮುನ್ನ ಶೋಧಕ ಹಾದು ಬರುವಂತೆ ವ್ಯವಸ್ಥೆ. ಮೊದಲ ಮಳೆ ನೀರು ಹೊರ ಹೋಗಲು ಒಂದು ಪೈಪು. ಮನೆ ಅಂಗಳದ ಭೂಮಿ ಒಳಭಾಗದಲ್ಲಿ ತೊಟ್ಟಿ ನಿರ್ಮಾಣ. ಈ ತೊಟ್ಟಿ ತುಂಬಿ ಹೆಚ್ಚಾದ ನೀರು ಸಂಪಿಗೆ ಹೋಗುವಂತೆ ಮಾಡಲಾಗಿದೆ. ತೊಟ್ಟಿ ಮೇಲ್ಭಾಗದಲ್ಲಿ ಕೈಪಂಪು. ನೀರಿನ ರುಚಿ ಕಂಡು ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಈಗ ಕೈಪಂಪಿಗೆ ಬೀಗ ಹಾಕಿದ್ದಾರೆ. “ಅಷ್ಟರಮಟ್ಟಿಗೆ ನೀರಿನ ಅಮೂಲ್ಯತೆ ಬಗ್ಗೆ ಎಚ್ಚರ ಮೂಡಿರುವುದು ಹೆಮ್ಮೆಯ ವಿಷಯ” ಎನ್ನುತ್ತಾರೆ ಬೈಫ್ ನ ಅಧಿಕಾರಿ ಎಂ.ಬಿ.ಹಳ್ಳಿ. ಇದೇ ಗ್ರಾಮದ ಶಶಿಕಲರವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಒಳಗೇ ತೊಟ್ಟಿ ಮಾಡಿಕೊಂಡಿದ್ದಾರೆ. ಮಳೆ ನೀರು ವೃಥಾ ಪೋಲಾಗುವುದನ್ನು ತಪ್ಪಿಸಲು ಈ ಕ್ರಮ ಎನ್ನುತ್ತಾರೆ ಅವರು. ಛಾವಣಿ ನೀರು ಸಂಗ್ರಹದ  ನಿರ್ವಹಣೆ ಕಷ್ಟ ಎಂದು ಕೆಲವರು ಕುಂಟುನೆಪ ಹೇಳುತ್ತಾರೆ, ಆದರೆ ಇವರಿಗೆ ಒಂದು ವರ್ಷದಲ್ಲಿ ಎಂದೂ ಹಾಗನಿಸಿಲ್ಲ.    ಇಡೀ ರಚನೆಗೆ ಅಂದಾಜು ೧೮ ಸಾವಿರ ವೆಚ್ಚವಾಗಿದ್ದು ೫ ಸಾವಿರ ರೂಗಳನ್ನು ನಾಗರಾಜು-ಲಲಿತಮ್ಮ ಭರಿಸಿದ್ದಾರೆ. ಫಲಾನುಭವಿಗಳು ನಿರ್ದಿಷ್ಟ ವಂತಿಗೆ ನೀಡುವುದು ಇಲ್ಲಿ ಕಡ್ಡಾಯ.

ಈಗ ಇವರನ್ನು ನೋಡಿ ಹಲವಾರು ಕುಟುಂಬದವರು ತಮ್ಮದೇ ಛಾವಣಿ ನೀರು ಕುಡಿಯಲು ಮುಂದಾಗಿದ್ದಾರೆ. ಹಳ್ಳಿಯ ಸಮಸ್ತರಿಗೂ ಮತ್ತು ಜಿಲ್ಲೆಯ ಎಲ್ಲರಿಗೂ ಆ ಹುಮ್ಮಸ್ಸು ಬರಬೇಕು.


Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*