ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಹೊಂಡಗಳು ಗ್ರಾಮವನ್ನು ಬರದಿಂದ ಉಳಿಸಿತು!

ನೀರಿನ ಬಿಕ್ಕಟ್ಟನ್ನು ನಿವಾರಿಸುವಾಗ ಎಲ್ಲ ಸಂದರ್ಭಗಳಲ್ಲೂ ಒಂದೇ ಪರಿಹಾರ ಸೂಕ್ತವಾಗಿ ಇರುವುದಿಲ್ಲವೆಂದು ಟೋಂಕ್ ಖುರ್ದ್‌ನ ವಿನೂತನ ಕೃಷಿ ಹೊಂಡಗಳು ಸಾಬೀತು ಮಾಡಿವೆ

farm_ponds_-_1-page-001ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಚಿದಾವಡ್ ಗ್ರಾಮದ ೭೧ ವರ್ಷದ ವಿಕ್ರಮ್ ಪಟೇಲ್, ತನ್ನ ಹೊಲದಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವಲ್ಲಿ ಕೃಷಿ ಹೊಂಡಗಳ ಬಳಕೆಯನ್ನು ಮಾಡಿದ ರೈತರಲ್ಲಿ ಮೊದಲಿಗರಾಗಿದ್ದಾರೆ.

“ಕಳೆದೆರಡು ದಶಕಗಳಿಂದ, ಟೋಂಕ್ ಖುರ್ದ್ ಬ್ಲಾಕ್‌ನ ಚಿದಾವಡ್ ಗ್ರಾಮವು ಮಾಲ್ವ ಪ್ರದೇಶದ ಅತ್ಯಂತ ಒಣ ಗ್ರಾಮಗಳ ಪೈಕಿ ಒಂದಾಗಿತ್ತು.  ಮನೆಗೆ ಕುಡಿಯುವ ನೀರು ತರಲೆಂದೇ ಗ್ರಾಮದ ಮಹಿಳೆಯರು ದಿನವೂ ೩-೫ ಕಿಲೋಮೀಟರ್‌ಗಿಂತ ಹೆಚ್ಚು ನಡೆಯಬೇಕಿತ್ತು.  ಸಾಂಪ್ರದಾಯಿಕ ಮಳೆಕೊಯ್ಲು ಆಚರಣೆಗಳೆಲ್ಲವೂ ಬಹುತೇಕ ಈ ಪ್ರದೇಶದಿಂದ ಮಾಯವಾಗಿದ್ದವು. ಜೀವನೋಪಾವನ್ನು ಹುಡುಕಿಕೊಂಡು ಗ್ರಾಮಸ್ಥರು ಇತರ ಸ್ಥಳಗಳಿಗೆ ವಲಸೆ ಹೋಗಲು ಪ್ರಾರಂಭಿಸಿದ್ದರು ಹಾಗೂ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು,” ಎನ್ನುತ್ತಾರೆ ಪಟೇಲ್.  ೧೯೮೪ರಲ್ಲಿ, ತನ್ನ ಮೊಟ್ಟಮೊದಲನೆಯ ಕೃಷಿ ಹೊಂಡದ ನಿರ್ಮಾಣ ಮಾಡಲು ಪಟೇಲ್ ಮುಂದೆ ಬಂದಾಗ, ಅದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದೆಂದು ಯಾರೂ ನಂಬಲಿಲ್ಲ.  ಆದರೆ, ಎಲ್ಲರ ಅಪನಂಬಿಕೆಯನ್ನೂ ಇದು ಸುಳ್ಳು ಮಾಡಿತು!

ಇಷ್ಟಾದರೂ ಯಾರೂ ಇದರ ಬಗ್ಗೆ ಉತ್ಸಾಹ ತೋರಲಿಲ್ಲ – ಆದರೆ, ೨೦೦೫ರಲ್ಲಿ ತಲೆದೋರಿದ ತೀವ್ರ ನೀರಿನ ಬಿಕ್ಕಟ್ಟಿನ ಸಮಯದಲ್ಲಿ ಹರ್ನವ್ಡಾದಲ್ಲಿ ಟೋಂಕ್ ಖುರ್ದ್ ಬ್ಲಾಕ್‌ನ ಮತ್ತೋರ್ವ ರೈತ ರಘುನಾಥ್ ಸಿಂಗ್ ತೋಮರ್ ಕೃಷಿ ಹೊಂಡವನ್ನು ಮಾಡಿದರು.  ಆ ವರ್ಷ, ತನ್ನ ಹೊಲದಲ್ಲಿ ತೋಡಿದ ಕೃಷಿ ಹೊಂಡಕ್ಕೆ ಖರ್ಚಾದ ದುಪ್ಪಟ್ಟು ಹಣವನ್ನು ಆತ ಗಳಿಸಿದನು.

ಪರಿಕಲ್ಪನೆಗೆ ತೆರೆದ ಮನಗಳು

ಅಂದಿನಿಂದ, ಅಂತರ್ಜಲದ ಪರಿಸ್ಥಿತಿಯನ್ನು ಸುಧಾರಿಸಲು, ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಅನೇಕ ರೈತರು ಕೈಗೊಂಡಿದ್ದಾರೆ.  ಟೋಂಕ್ ಖುರ್ದ್ ಬ್ಲಾಕ್‌ನಲ್ಲೀಗ ೫,೦೦೦ಕ್ಕೂ ಹೆಚ್ಚು ಕೃಷಿ ಹೊಂಡಗಳಿದ್ದು, ಆ ಪ್ರದೇಶದ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಸುಧಾರಿಸಿವೆ.

farm_ponds_-_2-1-page-001ಇತ್ತೀಚೆಗೆ ತಲೆದೋರಿದ ನೀರಿನ ಬಿಕ್ಕಟ್ಟಿನಲ್ಲಿ, ಅಂತರ್ಜಲವನ್ನು ಅರಸುತ್ತಾ, ಚಿದಾವಡ್‌ದ ರೈತರು ತಮ್ಮ ೨೫೦ ಎಕರೆ ಹೊಲದಲ್ಲಿ ೧,೦೦೦ಕ್ಕಿಂತ ಅಧಿಕ ಕೊಳವೆಬಾವಿಗಳನ್ನು ಕೊರೆದರು; ಅವುಗಳ ಪೈಕಿ, ಕೇವಲ ೫೦ ಪ್ರತಿಶತ ಮಾತ್ರ ನೀರನ್ನು ನೀಡಿತ್ತು.  ಆಗ, ನೀರಿರುವ ಕೊಳವೆಬಾವಿಗಳ ಸುತ್ತ ಕೃಷಿ ಹೊಂಡಗಳ ನಿರ್ಮಾಣ ಮಾಡಲು ರೈತರು ನಿರ್ಧರಿಸಿದರು.  “ಕೊಳವೆಬಾವಿಗಳ ಸುತ್ತ ಕೃಷಿ ಹೊಂಡಗಳ ನಿರ್ಮಾಣವನ್ನು ನಾವು ಮಾಡಿದಾಗ, ಗಣನೀಯವಾಗಿ ಅಂತರ್ಜಲ ಮಟ್ಟ ಸುಧಾರಣೆ ಆಗಿರುವುದು ಕಂಡುಬಂದಿತು,” ಎನ್ನುತ್ತಾನೆ ೪೦ರ ಆಸುಪಾಸಿನ ರೈತ ಬಾವ್‌ಜಿ ದಯ.  ಚಿದಾವಡ್ ಗ್ರಾಮದಲ್ಲೀಗ ೨೦೦ ಕೃಷಿ ಹೊಂಡಗಳಿವೆ.

ಈ ಘಟನೆಗಳಿಂದ ಪ್ರಭಾವಿತರಾಗಿ, ಈ ಪ್ರದೇಶದ ನೀರಿನ ಬಿಕ್ಕಟ್ಟಿಗೆ ಪರಿಹಾರವಾಗಿ ಕೃಷಿ ಹೊಂಡಗಳ ನಿರ್ಮಾಣವನ್ನು ಮಾಡಲು ರೈತರನ್ನು ದೇವಾಸ್ ಜಿಲ್ಲಾಡಳಿತವು ಉತ್ತೇಜಿಸಿತು.  ಇದರ ಪರಿಣಾಮವಾಗಿ, ೨೦೦೬ರಿಂದ ೧೦,೦೦೦ಕ್ಕಿಂತ ಅಧಿಕ ಕೃಷಿ ಹೊಂಡಗಳನ್ನು ರೈತರು ನಿರ್ಮಾಣ ಮಾಡಿದರು, ಆದರೆ ಕೇವಲ ಟೋಂಕ್ ಖುರ್ದ್ ಬ್ಲಾಕ್‌ನಲ್ಲಿ ಮಾತ್ರ ಅಂತರ್ಜಲ ಮರುಪೂರಣವು ಭಾರೀ ಯಶಸ್ಸು ಕಂಡಿತು.

ವಿಭಿನ್ನ ಕಥನ

ಇದು ದೂರದೃಷ್ಟಿಯಿಂದ ಉಂಟಾದುದಲ್ಲ, ಆದರೆ ಟೋಂಕ್ ಖುರ್ದ್‌ನ ಭೂವಿನ್ಯಾಸವು ಈ ಯತ್ನಕ್ಕೆ ಯಶ ನೀಡಿತು.  ಇಡೀ ಜಿಲ್ಲೆಯು (ಅಗ್ನಿಪರ್ವತ ಮೂಲದ) ಅಗ್ನಿಶಿಲೆಯ ಮೇಲೆ ನಿಂತಿದೆ.  ಅಗ್ನಿಶಿಲೆಯ  ಭೂಪ್ರದೇಶವು ಕಠಿಣವಾಗಿದ್ದು, ಕೇವಲ ಬಿರುಕುಗಳ ಮೂಲಕ ಬಂಡೆಯೊಳಗೆ ನೀರು ಪ್ರವೇಶಿಸಲು ಸಾಧ್ಯ.  ಈ ಬಿರುಕುಗಳ ಮೂಲಕ ಒಸರುವ ನೀರು ಬಂಡೆಗಳಲ್ಲಿನ ಟೊಳ್ಳು ಸ್ಥಳಗಳಾದ ಜಲಧರಗಳಲ್ಲಿ ಶೇಖರಣೆಯಾಗುತ್ತವೆ.

farm_ponds_-_3-1-page-001“ಅಂತರ್ಜಲ ತಜ್ಞರ ಪ್ರಕಾರ, ಟೋಂಕ್ ಖುರ್ದ್ ಭೂಪ್ರದೇಶದ ವಿಶೇಷತೆ ಎಂದರೆ, ಅದರಡಿಯ ಅಗ್ನಿಶಿಲೆಯಲ್ಲಿನ ಅನೇಕ ಬಿರುಕುಗಳಾಗಿವೆ.  ಬಂಡೆಗಳಲ್ಲಿನ ಈ ಬಿರುಕುಗಳ ಕಾರಣ, ಭೂಮಿಯು ಭೇಧ್ಯವಾಗಿದ್ದು, ಬಿರುಕುಗಳ ಮೂಲಕ ನೀರು ಸುಗಮವಾಗಿ ಒಸರಲು ಸಾಧ್ಯವಾಗುತ್ತದೆ.  ಅಭೇಧ್ಯ ಭೂದೃಶ್ಯಗಳನ್ನು ಹೊಂದಿದ ದೇವಾಸ್‌ನ ಇತರ ಬ್ಲಾಕ್‌ಗಳ ಹೋಲಿಕೆಯಲ್ಲಿ, ಇಂತಹ ಭೂಪ್ರದೇಶದಲ್ಲಿ ನಿರ್ಮಾಣ ಮಾಡಿದ ಕೃಷಿ ಹೊಂಡಗಳು ರೈತರಿಗೆ ಉಪಯುಕ್ತವಾಯಿತು.  ಟೋಂಕ್ ಖುರ್ದ್ ಪ್ರದೇಶದಲ್ಲಿ ಮೂರರಿಂದ ನಾಲ್ಕು ವರ್ಷಗಳು ಕೃಷಿ ಹೊಂಡಗಳ ನಿರ್ಮಾಣವನ್ನು ಮಾಡಿದ ನಂತರ, ಅಂತರ್ಜಲದ ಲಭ್ಯತೆಯಲ್ಲಿ ಗಣನೀಯ ಸುಧಾರಣೆಯನ್ನು ರೈತರು ಕಂಡಿದ್ದಾರೆ,” ಎನ್ನುತ್ತಾರೆ ಜಲಭೂವಿಜ್ಞಾನಿ ಸುನೀಲ್ ಚತುರ್ವೇದಿ.

೨೦೧ರಲ್ಲಿ ಬಿಡುಗಡೆ ಮಾಡಿದ ಜಿಲ್ಲಾ ಅಂತರ್ಜಲ ಮಾಹಿತಿ ಕಿರುಪುಸ್ತಿಕೆಯ ಪ್ರಕಾರ, ಕೇವಲ ಟೋಂಕ್ ಖುರ್ದ್, ಬಾಗ್ಲಿ ಹಾಗೂ ಕನ್ನೋಡ್ ಬ್ಲಾಕ್‌ಗಳಲ್ಲಿ ಅಂತರ್ಜಲ ಮಟ್ಟವು ಸುರಕ್ಷಿತ ವಲಯದಲ್ಲಿದೆ.  ಖಟೇಗಾಂವ್ ಬ್ಲಾಕ್‌ನಲ್ಲಿ, ಅಂತರ್ಜಲವು ಅರೆ-ಆಪತ್ತಿನ ಸ್ಥಿತಿಯಲ್ಲಿದ್ದು, ಸೋಂಕಾಟ್ಸ್ ಹಾಗೂ ದೇವಾಸ್ ಬ್ಲಾಕ್‌ಗಳಲ್ಲಿ ಅತ್ಯಂತ ಆಪತ್ತಿನ ಪ್ರದೇಶಗಳಾಗಿವೆ.

೨೦೧೨ರಲ್ಲಿ, ಜಲ ವಲಯ ಹಾಗೂ ಕಾರ್ಯನೀತಿಯ ವಿಚಾರಗಳಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶದ ಬರ್ವಾನಿಯ ಲಾಭೇತರ ಸಂಸ್ಥೆ ಮಂಥನ್ ಅಧ್ಯಯನ್ ಕೇಂದ್ರವು, ದೇವಾಸ್‌ನ ಖಾಸಗೀಕೃತ ಔದ್ಯಮಿಕ ಜಲ ಸರಬರಾಜು ಯೋಜನೆಯನ್ನು ಕುರಿತಾಗಿ ಪ್ರಸಂಗ ಅಧ್ಯಯನವನ್ನು ಪ್ರಕಟಿಸಿತು. ೧೨೮ ಕಿಲೋಮೀಟರ್ ದೂರದಲ್ಲಿನ ನರ್ಮದಾ ನದಿಯ ನೀರನ್ನು ಪಡೆದೂ, ದೇವಾಸ್‌ನ ಜನರ ಔದ್ಯಮಿಕ ನೀರಿನ ಅಗತ್ಯಗಳು ಹಾಗೂ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಲದೆಂಬ ತೀರ್ಮಾನಕ್ಕೆ ಬಂತು.  ದೇವಾಸ್ ಜಿಲ್ಲೆ ಹಾಗೂ ಪಕ್ಕದ ಮಧ್ಯಪ್ರದೇಶದ ಮಾಲ್ವ ಪ್ರಾಂತಗಳು, ಔದ್ಯಮಿಕ, ಕೃಷಿ ಹಾಗೂ ನಗರ ಅಗತ್ಯಗಳಿಗಾಗಿ ಮೇಲ್ಮೈ ನೀರು ಹಾಗೂ ಅಂತರ್ಜಲ ಬೃಹತ್ ಪ್ರಮಾಣದ ಬಳಕೆಯಿಂದಾಗಿ, ತೀವ್ರ ರೀತಿಯ ನೀರಿನ ಅಭಾವವನ್ನು ಎದುರಿಸುತ್ತಿದೆ.

ಟೋಂಕ್ ಖುರ್ದ್‌ನ ಅಂತರ್ಜಲ ಮಟ್ಟದ ಸುಧಾರಣೆಯ ಯಶಸ್ಸನ್ನು ಸಂಪೂರ್ಣವಾಗಿ ಕೃಷಿ ಹೊಂಡಗಳಿಂದಲೇ ಉಂಟಾಗಿದೆಯೆಂದು ಹೇಳಲಾಗದು.  ಕೃಷಿ ಹೊಂಡಗಳ ಜೊತೆಗೆ, ಕೃಷಿ ಹೊಂಡಗಳು ಹಾಗೂ ಜಲಧರಗಳ ಸುತ್ತ ಚರಂಡಿ ನಾಲೆಗಳು, ಕೊಳವೆಬಾವಿಗಳ ಸುತ್ತ ಸೋಕ್ ಪಿಟ್‌ಗಳು, ಮೇಲ್ಛಾವಣಿ ಮಳೆನೀರು ಕೊಯ್ಲು, ಇತ್ಯಾದಿಯಾದ ಅಂತರ್ಜಲ ಮರುಪೂರಣದ ವಿಧಾನಗಳನ್ನು ರೈತರು ಅಳವಡಿಸಿಕೊಂಡಿಸಿದ್ದಾರೆ.   

ಜಲ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಎಲ್ಲ ಸಂದರ್ಭಗಳಿಗೂ ಒಂದೇ ಪರಿಹಾರ ಸೂಕ್ತವಲ್ಲ ಎನ್ನುವುದಕ್ಕೆ ದೇವಾಸ್ ಜಿಲ್ಲೆಯು ಒಂದು ಉತ್ತಮ ಉದಾಹರಣೆಯಾಗಿದೆ.  ಅಂತರ್ಜಲ ಮರುಪೂರಣವು ಪ್ರದೇಶವೊಂದರ ಭೂರೂಪಶಾಸ್ತ್ರದ ಮೇಲೆ ಅವಲಂಬಿತವಾಗಿದೆ.  ಪ್ರತಿಯೊಂದು ಗ್ರಾಮವೂ ತನ್ನದೇ ಆದ ಅಂತರ್ಜಲ ಮರುಪೂರಣ ಸುರಕ್ಷಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು.

ಅಂತರ್ಜಲ ನಿರ್ವಹಣೆಗೆ, ದ್ವಿಪಥ ವಿಧಾನದ ಅಗತ್ಯವಿದೆ:

  • ಬೃಹತ್ ಪ್ರಮಾಣದ ಸಮುದಾಯ ಸಹಭಾಗಿತ್ವ
  • ಚಾಣಾಕ್ಷ ನಿಯಂತ್ರಣಗಳು ಹಾಗೂ ಶಾಸನಗಳ ಅನುಷ್ಠಾನದ ಮೂಲಕ ಸುಧಾರಿತ ಅಂತರ್ಜಲ ಆಡಳಿತ

farm_ponds_-_4-1-page-001“ಜಲಧರಗಳ ಮೂಲಕ ಅಂತರ್ಜಲವನ್ನು ಅರಿತುಕೊಳ್ಳಲು ಸರ್ಕಾರದ  ಜಲಧರ ನಿರ್ವಹಣಾ ಕಾರ್ಯಕ್ರಮವು ಉತ್ತಮ ಯತ್ನವಾಗಿದೆ.  ಪರಿಕಲ್ಪನೆಗಳು ಹಾಗೂ ಸಮುದಾಯ ಸಹಭಾಗಿತ್ವಗಳ ಸಹಯೋಗವು ಭಾರತದಲ್ಲಿ ಅಂತರ್ಜಲ ನಿರ್ವಹಣೆಯ ಯಶಸ್ಸಿನ ಕೀಲಿಕೈಗಳು,” ಎಂದು ಪುಣೆಯಲ್ಲಿನ ಲಾಭೇತರ ಸಂಸ್ಥೆಯಾದ ಅಡ್ವಾನ್ಸ್ಡ್ ಸೆಂಟರ್ ಫ಼ಾರ್ ವಾಟರ್ ರಿಸೋರ್ಸಸ್ ಡೆವಲಪ್ಮೆಂಟ್ ಆಂಡ್ ಮ್ಯಾನೇಜ್ಮೆಂಟ್‌ನ (ಎಸಿಡಬ್ಲ್ಯುಎಡಿಎಎಮ್) ಅಂತರ್ಜಲ ತಜ್ಞ, ಡಾ. ಹಿಮಾಂಶು ಕುಲಕರ್ಣಿಯು ಹೇಳುತ್ತಾರೆ.

“ಅಂತರ್ಜಲದ ಲಭ್ಯತೆ, ಮೇಲ್ಮೈ ನೀರು, ಮಳೆ ಹಾಗೂ ಭೌಗೋಳಿಕ ಭೂಪ್ರದೇಶಕ್ಕೆ ಅನುಗುಣವಾಗಿ ರೈತರು ಬೆಳೆಯ ಮಾದರಿಯನ್ನು ಗುರುತಿಸಬೇಕು. ಹೆಚ್ಚು ನೀರಿನ ಅಗತ್ಯವಿರುವ ಹತ್ತಿ, ಕಬ್ಬು, ಇತ್ಯಾದಿಯಾದ ಬೆಳೆಗಳತ್ತ ರೈತರು ವಾಲುತ್ತಿರುವುದು, ಹಾಗೂ ಹವಾಮಾನ ಪರಿಸ್ಥಿತಿ ಮತ್ತು ಭೂಪ್ರದೇಶಕ್ಕೆ ಹೊಂದಿಕೊಳ್ಳುವ ಬದಲಿ ಬೆಳೆಗಳನ್ನು ಬೆಳೆಯುವ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸದೆ ಇರುವುದು ನಮ್ಮ ದೇಶದ ಬಹುತೇಕ ರೈತರ ಸಮಸ್ಯೆಯಾಗಿದೆ,” ತೀವ್ರವಾದ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಮಹಾರಾಷ್ಟ್ರದ ಯಾವತ್‌ಮಲ್ ಜಿಲ್ಲೆಯ ರೈತ ಭಗವಾನ್ ಜ಼ಗ್ಗು ಕೆಂಗಾರ್ ಹೇಳುತ್ತಾರೆ.

ತಮ್ಮ ಏಳು ಎಕರೆ ತೋಟದಲ್ಲಿ ಮಾವು, ಸಪೋಟ, ದಾಳಿಂಬೆ ಹಾಗೂ ತರಕಾರಿಗಳಾದ ಸೋರೇಕಾಯಿ, ಹಸಿರು ಈರುಳ್ಳಿ, ಇತ್ಯಾದಿಗಳನ್ನು ವಿಕ್ರಮ್ ಬೆಳೆಯುತ್ತಾರೆ. ತನ್ನ ತೋಟದಿಂದ ಪ್ರತಿದಿನ ರೂ.೧,೦೦೦/-ದಷ್ಟು ಲಾಭವನ್ನು ಗಳಿಸುತ್ತಾರೆ.  ತನ್ನ ಹೊಲಗಳಿಗೆ ನೀರು ಹರಿಸಲು ಹನಿ ನೀರಾವರಿ ವಿಧಾನವನ್ನು ಬಳಸಿ, ನೀರನ್ನು ವ್ಯಯ ಮಾಡದೆ, ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.

ಕೃಷಿ ಹೊಂಡಗಳ ಪ್ರಯೋಜನಗಳನ್ನು ಕುರಿತಾಗಿ ನೀವು ಇಲ್ಲಿ ಓದಬಹುದು (http://dhan.org/farmponds/farmpond_def.php)

 ಲೇಖನ: ಮಕರಂದ ಪುರೋಹಿತ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/farm-ponds-save-village-drought )
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*