ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಪಶ್ಚಿಮ ಘಟ್ಟಗಳ ಕಣ್ಮರೆ, ಜೀವನದಿಗಳ ಅವನತಿ

ಗುಜರಾತ್‌ನಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟ ಸಾಲು ಅಪಾರ ಜೀವ ವೈವಿಧ್ಯದ ತಾಣ, ಅಪರೂಪದ ಜೀವಸಂಕುಲಗಳಿಗೆ ಆಶ್ರಯ. ಅದಕ್ಕಿಂತ ಮುಖ್ಯವಾಗಿ, ಅದು ನೀರಿನ ಮೂಲ. ನೂರಾರು ನದಿಗಳು ಹುಟ್ಟುವುದು ಇಲ್ಲಿಯೇ, ಮಳೆ ಮಾರುತಗಳ ಚಲನೆ ನಿರ್ಧರಿತವಾಗುವುದು ಇದರಿಂದಲೇ. ಅರಬ್ಬೀ ಸಮುದ್ರದ ಕಡೆಯಿಂದ ಬರುವ ಮುಂಗಾರು ಮಾರುತಗಳನ್ನು ತನ್ನೆಡೆಗೆ ಸೆಳೆದುಕೊಂಡು ಅಪಾರ ಪ್ರಮಾಣದ ಮಳೆಯನ್ನು ಕರುಣಿಸುವುದು ಪಶ್ಚಿಮ ಘಟ್ಟಗಳು.

wg photo for portal - 2ಆದರೆ ಮನುಷ್ಯರ ದುರಾಸೆ ಪಶ್ಚಿಮಘಟ್ಟಗಳ ಸಹ್ಯಾದ್ರಿ ಸಾಲುಗಳಿಗೆ ತಂದಿರುವ ದುರ್ಗತಿ ಎಂತಹ ಅಪಾಯಕಾರಿ ಎಂದರೆ ಮತ್ತೆ ಆ ಸೂಕ್ಷ್ಮ ಪರಿಸರ ಕೊಂಡಿಗಳು ಬೆಸೆಯುವ ಸಂಭವ ಇಲ್ಲವೇನೋ ಅನ್ನಿಸುತ್ತದೆ. ಕಳೆದ ಕೆಲ ವರ್ಷಗಳಿಂದ ಮುಂಗಾರು ಏರುಪೇರಾಗುತ್ತಿರುವುದಕ್ಕೂ ಈ ಪಶ್ಚಿಮಘಟ್ಟಗಳ ವಿನಾಶಕ್ಕೂ ಸಂಬಂಧವಿದೆ, ನಮ್ಮೆದುರು ದೊಡ್ಡ ಸವಾಲಾಗಿ ಪರಿಣಮಿಸುತ್ತಿರುವ ಹವಾಮಾನ ವೈಪರೀತ್ಯಕ್ಕೂ ಪಶ್ಚಿಮಘಟ್ಟಗಳಲ್ಲಿನ ಮಳೆಕಾಡುಗಳ ನಾಶಕ್ಕೂ ಸಂಬಂಧವಿದೆ. ವಾತಾವರಣದಲ್ಲಿ ಬಿಸಿ ಏರುತ್ತಿರುವುದಕ್ಕೂ ಸಹ್ಯಾದ್ರಿ ಸಾಲು ಕ್ಷೀಣಿಸುತ್ತಿರುವುದಕ್ಕೂ ಸಂಬಂಧವಿದೆ.

ಈ ಸಹ್ಯಾದ್ರಿ ಗರ್ಭದಿಂದ ೫೮ಕ್ಕೂ ಅಧಿಕ ಪ್ರಮುಖ ನದಿ ಸಾಲುಗಳು ಹುಟ್ಟುತ್ತವೆ, ಅವುಗಳಲ್ಲಿ ೪೭ ನದಿಗಳು ಪೂರ್ವಕ್ಕೆ ಹರಿದರೆ ೮ ನದಿಗಳು ಪಶ್ಚಿಮಕ್ಕೆ ಹಾಗೂ ಉಳಿದ ೩ ದಕ್ಷಿಣಕ್ಕೆ ಹರಿಯುತ್ತವೆ. ಗೋದಾವರಿ, ಕೃಷ್ಣ, ಕಾವೇರಿ, ನೇತ್ರಾವತಿ, ಕಾರಂಜ, ಮಂಜ್ರಾ, ಘಟಪ್ರಭ, ಮಲಪ್ರಭ, ಭೀಮಾ, ಮಹಾದಾಯಿ, ತುಂಗಾ, ಭದ್ರಾ, ಹಾರಂಗಿ, ಹೇಮಾವತಿ, ಕಬಿನಿ, ಸುವರ್ಣಾವತಿ, ಲಕ್ಷ್ಮಣತೀರ್ಥ, ಬೇಡ್ತಿ, ಶರಾವತಿ, ಚಕ್ರಾ, ವರಾಹಿ ಮುಂತಾದ ಎಲ್ಲ ನದಿಗಳೂ ಪಶ್ಚಿಮಘಟ್ಟದ ಯಾವುದೋ ಒಂದು ಮೂಲೆಯಲ್ಲಿ ಹುಟ್ಟುತ್ತವೆ, ನೂರಾರು ಕಿಲೋ ಮೀಟರ್ ಹರಿಯುತ್ತವೆ,

western ghats riversಈ ನದಿಗಳಿಗೆ ೪೦ಕ್ಕೂ ಅಧಿಕ ಅಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇನ್ನೂ ೪೬ಕ್ಕೂ ಅಧಿಕ  ನೀರಾವರಿ ಜಲವಿದ್ಯುತ್ ಯೋಜನೆಗಳು ನಿರ್ಮಾಣದ ಹಂತದಲ್ಲಿವೆ. ಪಶ್ಚಿಮಘಟ್ಟಗಳ ನದಿಗಳಿಗೆ ನಿರ್ಮಿಸಿರುವ ಅಣೆಕಟ್ಟುಗಳಿಂದ ೯,೪೮,೫೬೪ ಹೆಕ್ಟೇರ್ ಪ್ರದೇಶಕ್ಕೆ ಕಾಲುವೆಗಳ ಮೂಲಕ ಹಾಗೂ ಏತನೀರಾವರಿ ಮೂಲಕ ೧,೩೭,೧೬೩ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ.

ಪಶ್ಚಿಮ ಘಟ್ಟಗಳ ನಾಸಿಕ್‌ನಲ್ಲಿ ಹುಟ್ಟುವ ಗೋದಾವರಿ ೧೪೫ ಮೈಲಿಗಳಷ್ಟು ಹರಿದು, ಮಹಾರಾಷ್ಟ್ರ, ಆಂಧ್ರ ಮತ್ತು ಕರ್ನಟಕದ ಸ್ವಲ್ಪ ಭಾಗಕ್ಕೆ ನೀರುಣಿಸುತ್ತದೆ. ಈ ನದಿಯ ವಿಸ್ತೀರ್ಣ ೩,೧೨,೮೧೨ ಚದರ ಕಿಲೋಮೀಟರ್. ಇದು ದಖನ್ ಪ್ರಸ್ಥಭೂಮಿಯ ಅತ್ಯಂತ ದೊಡ್ಡ ನದಿ ಪಾತ್ರ. ಮಾಹಾರಾಷ್ಟ್ರದ ಮಹಾಬಲೇಶ್ವರ್‌ನಲ್ಲಿ ಜನ್ಮತಾಳುವ ಕೃಷ್ಣಾ ನದಿ ದಖನ್‌ನ ಎರಡನೇ ದೊಡ್ಡನದಿ. ಕರ್ನಾಟಕ ಮತ್ತು ಆಂಧ್ರಗಳಲ್ಲಿ ೧,೪೦೦ ಕಿ.ಮೀ. ಹರಿದು, ೧,೬೦,೯೦೨ ಚ.ಕಿ.ಮೀ, ಪ್ರದೇಶಕ್ಕೆ ನೀರುಣಿಸುವ ಬೃಹತ್ ನದಿಪಾತ್ರ. ಕರ್ನಾಟಕದ ಬ್ರಹ್ಮಗಿರಿಯಲ್ಲಿ ಹುಟ್ಟುವ ಕಾವೇರಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳ ೮೧,೧೫೫ ಚ.ಕಿ.ಮೀ, ಪ್ರದೇಶಕ್ಕೆ ನೀರುಣಿಸುತ್ತದೆ.

ಒಂದು ಕ್ಷಣ ಯೋಚಿಸಿ – ಇಡೀ ಘಟ್ಟ ಸಾಲು ನಾಶವಾಗಿ ಈ ನದಿಗಳು ಒಣಗಿದರೆ, ಇಷ್ಟೂ ರಾಜ್ಯಗಳ ಜನ ಸಮುದಾಯಗಳ ಬದುಕು ಉಳಿಯುವುದೇ, ನಮ್ಮ ಕೃಷಿ ಉಳಿಯುವುದೇ, ನಮ್ಮ ದಾಹ ತೀರುವುದೇ? ನಮಗೆ ವಿದ್ಯುತ್ ದೊರಕುವುದೇ?, ನಮ್ಮ ಬದುಕು ಸುಗಮವಾಗಿ ಸಾಗಬೇಕೆಂದರೆ, ಈ ನದಿಗಳು ೩೬೫ ದಿನಗಳೂ ಸರಾಗವಾಗಿ ಹರಿಯಬೇಕು, ಅದಾಗಬೇಕೆಂದರೆ ಘಟ್ಟಸಾಲು ಉಳಿಯಬೇಕು.

ನಮ್ಮ ರಾಜ್ಯದ ಬೆಂಗಳೂರೂ ಸೇರಿದಂತೆ, ೧೫೯ಕ್ಕೂ ಅಧಿಕ ನಗರಗಳಿಗೆ ಕುಡಿಯುವ ನೀರು ನಿರಂತರವಾಗಿ ದೊರಕಬೇಕಾದರೆ ಪಶ್ಚಿಮಘಟ್ಟಗಳನ್ನು ಆರೋಗ್ಯಪೂರ್ಣವಾಗಿ ಸಂರಕ್ಷಿಸಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

wg photo for portal - 1ಪಶ್ಚಿಮಘಟ್ಟಗಳ ಒಟ್ಟು ವಿಸ್ತೀರ್ಣದ ಶೇ ೬೦ರಷ್ಟು ಕರ್ನಾಟಕದಲ್ಲಿದೆ. ಆದರೆ ಅದರಲ್ಲಿ ಶೇ ೧೦ರಷ್ಟು ಮಾತ್ರ ಸಂರಕ್ಷಿತ ಪ್ರದೇಶವಾಗಿದೆ. ಈಗ ಹಾಲಿ ಇರುವ ಈ ಅರಣ್ಯಗಳೂ ಸಹ ಹಾಳಾಗುತ್ತಾ ಸಾಗಿವೆ. ಕರ್ನಾಟಕದ ೧,೯೧,೭೯೭ ಚ.ಕಿ.ಮೀ, ಒಟ್ಟು ಭೂಪ್ರದೇಶದಲ್ಲಿ ಅರಣ್ಯ ಪ್ರದೇಶವು ಕೇವಲ ೪೩,೩೫೬ ಚ.ಕಿ.ಮೀ. ಮಾತ್ರ. ಅಂದರೆ ಶೇ ೨೨.೬ರಷ್ಟು. ಇದು ಕೇವಲ ಸರ್ಕಾರಿ ದಾಖಲೆಗಳಲ್ಲಿ ಇರುವ ಅರಣ್ಯ. ಆದರೆ ವಾಸ್ತವವಾಗಿ ಇರುವುದು ಶೇ ೧೭ಕ್ಕಿಂತ ಕಡಿಮೆ. ದೂರದಿಂದ ನೋಡಲು ಪಶ್ಚಿಮಘಟ್ಟ ಹಸಿರಾಗಿ ಕಾಣುವುದಾದರೂ, ಅಲ್ಲಿರುವುದು ಬಹುತೇಕ ಕಾಫಿ ತೋಟಗಳು, ಟೀ ಎಸ್ಟೇಟುಗಳು ಹಾಗೂ ಅಡಿಕೆ ತೋಟಗಳು.

ಅಭಿವೃದ್ಧಿಗಾಗಿ ಇಷ್ಟೆಲ್ಲಾ ಅರಣ್ಯ ನಾಶ ಮಾಡಿದ ನಂತರವೂ ನಮಗೆ ತೃಪ್ತಿ ಇಲ್ಲ. ಈವರೆಗೆ ಈ ಅರಣ್ಯ ಪ್ರದೇಶದಲ್ಲಿ ಶೇ ೧೪.೧೨ರಷ್ಟನ್ನು ಇಂಧನ ಯೋಜನೆಗಳಿಗೆ, ಶೇ ೧೨ರಷ್ಟನ್ನು ನೀರಾವರಿ ಯೋಜನೆಗಳಿಗೆ, ಶೇ ೧೩.೫ರಷ್ಟನ್ನು ಗಣಿಗಾರಿಕೆಗೆ ಪರಭಾರೆ ಮಾಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿನ ಈ ಪ್ರಮಾಣಕ್ಕಿಂತ ವಾಸ್ತ ಅಂಕಿ-ಅಂಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಅಧಿಕ. ಈ ಯೋಜನೆಗಳ ಹೆಸರಿನಲ್ಲಿ ಬೆಲೆ ಕಟ್ಟಲಾಗದ ಅರಣ್ಯ ಭೂಮಿ ಸರ್ಕಾರದ ವಶದಿಂದ ಉಳ್ಳವರ, ರಾಜಕಾರಿಣಿಗಳ ಹಾಗೂ ಲಾಭಬಡುಕ ಕಂಪನಿಗಳ ಪಾಲಾಗಿದೆ.

ಈ ಘಟ್ಟಸಾಲುಗಳ ಸಂರಕ್ಷಣೆಗಾಗಿ ಯುನೆಸ್ಕೋ ಪಾರಂಪರಿಕ ತಾಣ ಘೋಷಣೆ ಮಾಡಲು ಮುಂದಾದರೆ, ಅದಕ್ಕೆ ಪ್ರತಿರೋಧಗಳ ಸರಮಾಲೆ, ಮಾಧವ ಗಾಡ್ಗೀಳ್ ವರದಿಗೆ ವಿರೋಧ, ಕಸ್ತೂರಿ ರಂಗನ್ ವರದಿಗೆ ವಿರೋಧ.

ಕೊಂಬೆಯ ತುದಿಯಲ್ಲಿ ಕುಳಿತು ಅದನ್ನೇ ಕಡಿಯುತ್ತಿರುವ ನಮ್ಮ ದುರಾಸೆಗೆ ನಾವೇ ಮೊದಲ ಬಲಿಯಾಗುವುದರಲ್ಲಿ ನಿಸ್ಸಂಶಯ. ಕಳೆದ ವರ್ಷದ ಉತ್ತರಾಖಂಡ ಮಹಾಮಳೆ, ಈ ವರ್ಷದ ನೇಪಾಳದ ಭೂಕಂಪ ಪ್ರಸಂಗಗಳು ಅದಕ್ಕೆ ಸಾಕ್ಷಿ.

 ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

ಮಾಹಿತಿ ಮೂಲ: ಪಶ್ಚಿಮ ಘಟ್ಟಗಳ ಕರೆ, ಸಿ.ಯತಿರಾಜು, ಪ್ರಕಾಶಕರು, ಕೆ.ಎನ್.ಸೋಮಶೇಖರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*