ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸ್ವಚ್ಛ ಭಾರತ: ಬೇಕಾಗಿದೆ ಉಚ್ಛ ಇಚ್ಛಾಶಕ್ತಿ

ಅವರು ಕತ್ತಲಾಗುವುದನ್ನೇ ಕಾಯುತ್ತಿರುತ್ತಾರೆ. ಈ ಸೂರ್ಯನೆಂಬ ಬೆಳಕಿನುಂಡೆ ಯಾವಾಗ ಮುಳುಗಿ ಸಾಯುತ್ತಾನೋ ಎಂದು ಹಿಡಿಶಾಪ ಹಾಕುತ್ತಿರುತ್ತಾರೆ. ಒಮ್ಮೆ ಸೂರ್ಯ ಮುಳುಗಿ ಕತ್ತಲಾವರಿಸಿತೆಂದರೆ ಇವರಿಗೆ  ಎಲ್ಲಿಲ್ಲದ ಆನಂದ. ಬ್ರಹ್ಮಾಂಡದಷ್ಟು ಸಂತಸ!

ಇದೇ ಮಂದಿಗೆ ಬೆಳಿಗ್ಗೆ ಸೂರ್ಯ ಬೇಗನೆ ಉದಯಿಸುವ ಬಗ್ಗೆಯೂ ತಕರಾರಿದೆ. ಇಡೀ ಜಗತ್ತು ಸೂರ್ಯೋದಯಕ್ಕೆ ಹಪಹಪಿಸಿದರೆ ಇವರು ಇಷ್ಟು ಬೇಗ ಸೂರ್ಯೋದಯ ಯಾಕಾದರೂ ಆಯ್ತಪ್ಪ್ಪಾ ಎಂದು ಮಮ್ಮಲ ಮರುಗುತ್ತಾರೆ. ಸೂರ್ಯೋದಯ ಇವರಿಗೆ ತರುವ ಕಷ್ಟಸಂಕಟಗಳು ಅಷ್ಟಿಷ್ಟಲ್ಲ.

ಅಂದ ಹಾಗೆ ಕತ್ತಲಿಗಾಗಿ ಕಾಯುವ, ಬೆಳಕನ್ನು ದ್ವೇಷಿಸುವ ಇವರು ಖಂಡಿತ ಕಳ್ಳರಲ್ಲ. ಕತ್ತಲನ್ನು ಪ್ರೀತಿಸುವುದಕ್ಕೆ, ಬೆಳಕನ್ನು ದ್ವೇಷಿಸುವುದಕ್ಕೆ ಈ ಮಂದಿಗೆ ಇವರದೇ ಆದ ಕಠೋರ ಕಾರಣಗಳಿವೆ. ಆ ಕಾರಣಗಳಿಗಾಗಿ ಮಾತ್ರ ಇವರಿಗೆ ಸೂರ್ಯನ ಮೇಲೆ ದ್ವೇಷ.

ರಾಜ್ಯದ ೩೫ ಲಕ್ಷ  ಗ್ರಾಮೀಣ ಕುಟುಂಬಗಳು ಮನೆಯಲ್ಲಿ ಶೌಚಾಲಯ ಇಲ್ಲದೆ ಬಯಲು ಬಹಿರ್ದೆಸೆಗೆ ಅನಿವಾರ್ಯವಾಗಿ ಅಂಟಿಕೊಂಡಿದ್ದಾರೆ. ಇವರೇ ಕತ್ತಲನ್ನು ಪ್ರೀತಿಸುವವರು. ಶೌಚಾಲಯಗಳಿಲ್ಲದ ಗ್ರಾಮೀಣ ಕುಟುಂಬಗಳ ಮಹಿಳೆಯರಿಗೆ ಬೆಳಿಗ್ಗೆ ಸೂರ್ಯ ಬೆಳಕಿನ ನಗೆ ಚೆಲ್ಲುವ ಮೊದಲೇ ತಮ್ಮ ದೇಹಬಾಧೆ ತೀರಿಸಿಕೊಳ್ಳಬೇಕಾದ ಅನಿವಾರ್ಯತೆ. ಮತ್ತೆ ಸಂಜೆ ಸೂರ್ಯ ಮುಳುಗಿದ ಬಳಿಕವೇ ಕತ್ತಲಲ್ಲಿ ಮಲಮೂತ್ರ ವಿಸರ್ಜಿಸಬೇಕಾದ ಸಂದಿಗ್ಧತೆ.  ಆಡುವಂತಿಲ್ಲ, ಅನುಭವಿಸುವಂತಿಲ್ಲ. ಬಯಲು ಸೀಮೆಯ ಮರಗಿಡಗಳಿಲ್ಲದ, ಬೆಟ್ಟಗುಡ್ಡಗಳಿಲ್ಲದ ಬಟ್ಟ ಬಯಲಿನಲ್ಲಿ ಶೌಚ ಕ್ರಿಯೆ ಮುಗಿಸುವುದು ಗ್ರಾಮೀಣ ಮಹಿಳೆಯರ ಪಾಲಿಗೆ ಒಂದು ಭಯಾನಕ ಸಮಸ್ಯೆ. ಅದರಲ್ಲೂ ಗರ್ಭಿಣಿ ಸ್ತ್ರೀಯರು, ಬಾಣಂತಿಯರು, ಅಶಕ್ತರು, ಅಂಗವಿಕಲರು ಹಾಗೂ ವೃದ್ಧರ ಪಾಡಂತೂ  ಇನ್ನಷ್ಟು ಶೋಚನೀಯ.

swacch bharat du gu articleನಮ್ಮ ದೇಶದಲ್ಲಿ ಸುಮಾರು ಶೇ. ೬೦ ಮನೆಗಳಿಗೆ ಶೌಚಾಲಯ ಸೌಕರ್ಯವಿಲ್ಲ. ಹಾಗಾಗಿ ಆ ಕುಟುಂಬಗಳು ಬಯಲು ಬಹಿರ್ದೆಸೆಗೆ ಹೋಗುವುದು ಅನಿವಾರ್ಯ. ಈ ಪರಿಸ್ಥಿತಿಯನ್ನು ನೀಗಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಅದು ನಿರೀಕ್ಷೆಯಷ್ಟು ಫಲಪ್ರದವಾಗಿಲ್ಲ. ಕಳೆದ ನ. ೧೯ರಂದು ನಡೆದ ವಿಶ್ವ ಶೌಚಾಲಯ ದಿನಾಚರಣೆಯಂದು ಈ ಕುರಿತು ಬೆಂಗಳೂರಿನಲ್ಲಿ  ನಡೆದ ಸಭೆಯೊಂದರಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಮುಂದಿನ ಬಜೆಟ್‌ನಲ್ಲಿ ಸಾರ್ವಜನಿಕ ಶೌಚಾಲಯ ಸಂಕೀರ್ಣ ನಿರ್ಮಿಸಲು ೨೦ ಲಕ್ಷದವರೆಗೆ ಅನುದಾನ ಘೋಷಿಸಲಾಗುವುದೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಘೋಷಿಸಿದ್ದಾರೆ. ಇತ್ತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನೋತ್ಸವ ವರ್ಷವಾದ ೨೦೧೯ಕ್ಕೆ ದೇಶದಲ್ಲಿನ ಪ್ರತಿ ಮನೆಗೂ ಶೌಚಾಲಯ ಇರಬೇಕು ಎಂಬ ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಅವರು, ಮುಂದಿನ ೫ ವರ್ಷಗಳಲ್ಲಿ ೧೧.೧೧ ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಈಡೇರಿಸಬೇಕೆಂದು ಸೂಚಿಸಿದ್ದಾರೆ.  ಪ್ರಧಾನಿಯಾದ ಬಳಿಕ ಅವರು  ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಮಾಡಿದ ಮೊದಲ ಭಾಷಣದ ಮುಖ್ಯಾಂಶವೇ ಸ್ವಚ್ಛ ಭಾರತಕ್ಕೆ ಸಂಬಂಧಿಸಿದ್ದು.

ಇರಲಿ, ಯಾವುದೇ ಯೋಜನೆ ಘೋಷಿಸಿದರೂ ಅದರಿಂದ ಪ್ರಚಾರ ಪಡೆದುಕೊಳ್ಳುವ ಕೆಲವು ಮಂದಿ ಇರುತ್ತಾರೆ. ಅವರಿಗೆ ಬೇಕಾಗಿರುವುದು ಪ್ರಚಾರ ಮಾತ್ರ; ಆ ಯೋಜನೆ ಕಾರ್ಯಗತವಾಗಬೇಕೆಂಬ ಕಾಳಜಿಯಲ್ಲ. ಇಂತಹವರಿಂದ ದೇಶ ಕಟ್ಟಲು ಸಾಧ್ಯವಿಲ್ಲ.

ಕೆಲವು ಆಶ್ಚರ್ಯದ ಅಂಕಿಅಂಶಗಳನ್ನು ಗಮನಿಸೋಣ. ಭಾರತ ದೇಶದ ಜನಸಂಖ್ಯೆ ೧೨೦ ಕೋಟಿ.  ಇಲ್ಲಿರುವ ಮೊಬೈಲ್‌ಗಳ ಸಂಖ್ಯೆ ಸುಮಾರು ೯೦ ಕೋಟಿ. ಆದರೆ ದೇಶದಲ್ಲಿರುವ ಶೌಚಾಲಯಗಳ ಸಂಖ್ಯೆ ಮಾತ್ರ ಕೇವಲ ೩೬.೨೨ ಕೋಟಿ. ಕೋಳಗೇರಿಗಳಲ್ಲಿರುವ ಜೋಪಡಿಗಳ ಮೇಲೆ ಡಿಶ್‌ಆಂಟೆನಾ ರಾರಾಜಿಸುತ್ತಿರುತ್ತದೆ. ಆದರೆ ಆ ಜೋಪಡಿಗಳ ಜನರಿಗೆ ಶೌಚಾಲಯ ವ್ಯವಸ್ಥೆ ಮಾತ್ರ ಇರುವುದಿಲ್ಲ. ಶೌಚಾಲಯ ಇಲ್ಲದಿದ್ದರೂ ಪ್ರತಿ ಮನೆಗೆ ಟಿವಿ ಸೌಲಭ್ಯ ಇರುವುದು ಏನನ್ನು ಸೂಚಿಸುತ್ತದೆ? ಕೊಳೆಗೇರಿ ಜನರು ಮತ್ತು ಗ್ರಾಮೀಣ ಪ್ರದೇಶದ ಜನತೆ ಆಧುನಿಕತೆಯನ್ನು ಅರ್ಥೈಸಿಕೊಂಡ ಬಗೆಯೇ ಇದು? ಮನೆಯ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಪರದಾಡುತ್ತಿರುವಾಗ ಶೌಚಾಲಯ ನಿರ್ಮಾಣಕ್ಕಿಂತ ಮನರಂಜನೆಗೇ ಆದ್ಯತೆ ನೀಡುವ ಮನೆ ಯಜಮಾನನ ಮೂಢತನ ಅಥವಾ ಅಜ್ಞಾನವನ್ನು ನಿವಾರಣೆ ಮಾಡುವವರು ಯಾರು? ಅಷ್ಟಕ್ಕೂ ಅದು ಅವರವರ ಮನೆಯ ಹೆಣ್ಣುಮಕ್ಕಳ ಪ್ರಶ್ನೆಯಲ್ಲವೇ?

ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬಯಲು ಬಹಿರ್ದೆಸೆ ಈಗಲೂ ಜೀವಂತ. ಗಂಗಾವತಿಯಂತಹ ತಾಲೂಕು ಕೇಂದ್ರದ ಮಹಾವೀರ ವೃತ್ತದ ಬಳಿಯಲ್ಲೇ ಆ ಊರಿನ ನೂರಾರು ಜನರು ಬೆಳಿಗ್ಗೆ ಶೌಚಕ್ಕೆ ಸಾಲಾಗಿ ಕುಳಿತಿರುವ ದೃಶ್ಯವನ್ನು ಈಗಲೂ ನೋಡಬಹುದು. ರಾಯಚೂರು, ಕೊಪ್ಪಳಗಳಲ್ಲೂ ಇಂತಹದೇ ಸ್ಥಿತಿ. ಸ್ವಚ್ಛತಾ ಆಂದೋಲನ ಅಲ್ಲೆಲ್ಲ ಸಾಕಷ್ಟು ನಡೆದಿದ್ದರೂ ಜನಮನದಲ್ಲಿ ಬಯಲು ಬಹಿರ್ದೆಸೆ ತಪ್ಪು ಎಂಬ ಭಾವನೆ ಇನ್ನ್ನೂ ಜಾಗೃತವಾಗಿಲ್ಲ. ಬಯಲು ಬಹಿರ್ದೆಸೆಯಿಂದಾಗಿ ಹಲವು ಬಗೆಯ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ಅರಿವು ಕೂಡ ಅವರಿಗಿಲ್ಲ. ಚಿಕನ್‌ಗುನ್ಯ, ಡೆಂಗ್ಯೂ, ವಾಂತಿಬೇಧಿ, ವಿಷಮಶೀತಜ್ವರ ಮುಂತಾದ ಮಾರಕ ಸಾಂಕ್ರಾಮಿಕ  ರೋಗಗಳಿಗೆ ಬಯಲು ಮಲ ವಿಸರ್ಜನೆಯ ಅನಿಷ್ಟ ರೂಢಿಯೇ ಕಾರಣ ಎಂಬ ಗಂಭೀರ ಅಂಶ ಅವರ ತಲೆಯೊಳಗೆ ಇನ್ನೂ ಇಳಿದಿಲ್ಲ. ರಾಜ್ಯದ ಹಲವು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಮನೆಯಲ್ಲೇ ಶೌಚಾಲಯಗಳಿಲ್ಲ. ಆದರೂ ಅವರಿಗೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಶೌಚಾಲಯ ಕಟ್ಟಿಸಿಕೊಡಲು ಅತೀವ ಉತ್ಸುಕತೆ! ಪಂಚಾಯತ್ ಸದಸ್ಯರು ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಿರಬೇಕು ಎಂಬುದು ರಾಜ್ಯ ಸರ್ಕಾರದ ಸೂಚನೆ. ಆದರೆ ಪಂಚಾಯತ್ ಅಧ್ಯಕ್ಷರೇ ಆ ಸೂಚನೆಯನ್ನು ಪಾಲಿಸಿಲ್ಲ!

ಶೌಚಾಲಯ ಹೊಂದಿರುವವರಿಗೆ ಮಾತ್ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಕರ್ನಾಟಕ ಸರ್ಕಾರ ಯೋಚಿಸುತ್ತಿರುವಾಗಲೇ ಅತ್ತ ಮಹಾರಾಷ್ಟ್ರ ಸರ್ಕಾರ ಅಂಥದೊಂದು ಕಾನೂನನ್ನೇ ಜಾರಿಗೆ ತಂದಿತ್ತು. ಎಲ್ಲಾ ಸರ್ಕಾರಿ, ಆರೆ ಸರ್ಕಾರಿ ನೌಕರರು ಈ ಕಾನೂನಿನ ವ್ಯಾಪ್ತಿಗೆ ಬರುವಂತೆ ಮಾಡಿತ್ತು. ಆದರ ಪರಿಣಾಮವಾಗಿ ತಮ್ಮ ಮನೆಗಳಲ್ಲಿ ಶೌಚಾಲಯ ಹೊಂದಿರದ ೧೨, ೬೧೯ ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸುವಂತಹ ಗಟ್ಟಿ ನಿರ್ಧಾರದ ಮೂಲಕ ಮಹಾರಾಷ್ಟ್ರ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಸರ್ಕಾರ ಇಷ್ಟೊಂದು ಖಡಕ್ ನಿರ್ಧಾರ ಕೈಗೊಳ್ಳುತ್ತದೆಂದು ಯಾರೂ ಭಾವಿಸಿರಲಿಲ್ಲ. ಕರ್ನಾಟಕದಲ್ಲೂ ಇಂಥದೊಂದು ಕಾನೂನನ್ನು ಖಡಕ್ ಆಗಿ ಜಾರಿಗೆ  ತರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ತಳೆಯಬಾರದು?

ಬಹಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಗೆ ಕಾಲಿಟ್ಟ ರಾಘವೇಂದ್ರಸ್ವಾಮಿಗಳು ಅಲ್ಲಿ ಮೊದಲು ಮಾಡಿದ ಕೆಲಸವೆಂದರೆ, ಬೆಳ್ಳಂಬೆಳಗ್ಗೆ  ಎದ್ದು  ಎಲ್ಲರ ಮನೆಯ ಮುಂದೆ ಕಸ ಗುಡಿಸಿ, ನೀರು ಚಿಮುಕಿಸಿ ಸ್ವಚ್ಛಗೊಳಿಸುತ್ತಿದ್ದುದು. ಬೆಳಗ್ಗೆ ಎದ್ದ ಊರಿನ ಜನತೆಗೆ ಮನೆಯ ಮುಂದೆ ಝಳ ಝಳ ನೆಲ ನೋಡಿದಾಗ ಆಶ್ಚರ್ಯ ಹಾಗೂ ಸಂತಸ. ಒಂದು ವಾರ ಹೀಗೇ ನಡೆಯಿತು. ಇನ್ನು ಜನರು ತಾವಾಗಿಯೇ ತಮ್ಮ ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಂಡಾರು ಎಂದು ರಾಘವೇಂದ್ರಸ್ವಾಮಿಗಳು ಭಾವಿಸಿದ್ದರು. ಆದರೆ ಆದz ಬೇರೆ. ಪ್ರತಿನಿತ್ಯ ಸ್ವಚ್ಛತೆ ಮಾಡಲು ಬರುತ್ತಿದ್ದ ಸ್ವಾಮೀಜಿಯವರು ಈಗ ಬರುತ್ತಿಲ್ಲವೆಂದು ಅವರಿಂದ ತಕರಾರು. ಸ್ವಾಮೀಜಿ ಕಲಿಸಿದ ಸ್ವಚ್ಛತೆಯ ಪಾಠವನ್ನು ತಾವು ಮುಂದುವರಿಸಿಕೊಂಡು ಹೋಗಬೇಕೆಂಬ ಅರಿವು ಅವರಿಗೆ ಆಗಿರಲೇ ಇಲ್ಲ!

೨೦೧೧ರಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ೨೩ರ ಅನಿತಾಬಾಯಿ ನಾರೆ ಎಂಬ ನವವಧು ಗಂಡನ ಮನೆಗೆ  ಹೋಗಲಿಲ್ಲ. ಶೌಚಾಲಯ ಆಗುವ ತನಕ ತಾನಲ್ಲಿಗೆ ಬರಲಾರೆ ಎಂಬ ಹಠ ಅವಳದು. ಕೊನೆಗೂ ಗಂಡನ ಊರಿನಲ್ಲಿ ಶೌಚಾಲಯ ಆದ ಬಳಿಕವೇ ಆಕೆ ಅಲ್ಲಿಗೆ ತೆರಳಿದಳು. ಇತ್ತೀಚೆಗೆ ಮಹಾರಾಷ್ಟ್ರದ ವಾಷಿಂ ಜಿಲ್ಲೆಗೆ ಸೇರಿದ ಸಂಗೀತ ಅವಾಲೆ ಎಂಬ ವಿವಾಹಿತೆ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಚಿನ್ನದ ಮಂಗಳಸೂತ್ರವನ್ನೇ ಮಾರಿ, ಬಂದ ಹಣದಿಂದ ಶೌಚಾಲಯ ಕಟ್ಟಿಸಿದಳು. ಈ ನಿದರ್ಶನಗಳು ಬಯಲು ಬಹಿರ್ದೆಸೆಗೆ ಈಗಲೂ ಅಂಟಿಕೊಂಡಿರುವವರಿಗೆ ಕಣ್ತೆರೆಸುವ ಪಾಠ ಆಗಬೇಕಿದೆ.

ಬೆಕ್ಕು ಕೂಡ ಬಯಲಿನಲ್ಲಿ ವಿಸರ್ಜಿಸುವುದಿಲ್ಲ. ಅದು ಗುಂಡಿ ಕೊರೆದು, ಅಲ್ಲಿ ಮಲಮೂತ್ರ ವಿಸರ್ಜಿಸಿ ಆನಂತರ ಆ ಗುಂಡಿಯನ್ನು ಮಣ್ಣಿನಿಂದ ಮುಚ್ಚಿ ಸ್ವಚ್ಛತೆಯ ಸಂದೇಶ ಸಾರುತ್ತದೆ. ಅದಕ್ಕಿರುವ ಕಾಳಜಿ, ಸ್ವಚ್ಛತೆ ಬಗೆಗಿನ ಎಚ್ಚರ ಮನುಷ್ಯನಿಗೆ ಇಲ್ಲವೆಂದರೆ ಅದು ನಿಜಕ್ಕೂ ನಾಚಿಕೆಗೇಡು! ಮನುಷ್ಯರಾಗಿ ಇಷ್ಟಾದರೂ ಸ್ವಾಭಿಮಾನ ಬೇಡವೇ?

 ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*