ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು ಕುಡಿದು ಉಪ್ಪು ತಿಂದವರು

ಹೊಲಕ್ಕೆ ಯಥೇಚ್ಛ ನೀರುಣಿಸಿ ಅಧಿಕ ಉತ್ಪಾದನೆಯ ಆಸೆಗೆ ಮಣ್ಣಿಗೆ ರಾಸಾಯನಿಕ ಚೆಲ್ಲಿದ ಬಳಿಕ ಈಗ ಮಣ್ಣು ಬೇಸಾಯಕ್ಕೆ ಬೇಸರಿಸಿ ಕೂತಿದೆ. ಬಯಲು ನೆಲದ ನೀರಾವರಿಯಲ್ಲಿ ಕಲಿತ ಪಾಠಗಳೇನು?

ಉಪ್ಪು ತಿಂದ ಮೇಲೆ ನೀರು ಕುಡಿಯುವದು ಎಲ್ಲರಿಗೂ ತಿಳಿದಿದೆ. ಇದು ನೀರು ಕುಡಿದು ಉಪ್ಪು ತಿಂದವರ ಉಲ್ಟಾ ಕಥೆ! ಮಳೆ ನಂಬಿ ಬೇಸಾಯ ನಡೆಸುವದಕ್ಕಿಂತ ಪರ್ಯಾಯ ವ್ಯವಸ್ಥೆ ಬೇಕೆಂದು ಬಯಲುಭೂಮಿಗೆ ನೀರಾವರಿಯಾಗಿದೆ. ಕಳೆದ ನಾಲ್ಕು ದಶಕಗಳ ಈಚೆಗೆ ವಿವಿಧ ನೀರಾವರಿ ಯೋಜನೆಗಳು ಬರದ ಸೀಮೆಗೆ ಬಂದಿವೆ. ನದಿ ನೀರು ಕಾಲುವೆಗಳಿಂದ ಹೊಲಕ್ಕೆ ಹರಿದಿದೆ. ಪ್ರದೇಶಗಳು 4-5 ವರ್ಷಗಳಲ್ಲಿ ಬದಲಾವಣೆಯಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಂಪ್ರದಾಯಿಕ ಬೆಳೆ ಬಿಟ್ಟು ಅಧಿಕ ಲಾಭದಾಯಕ ಕಬ್ಬು, ಭತ್ತದ ಬೆಳೆಯತ್ತ  ರೈತ ಆಸಕ್ತಿ ಹೆಚ್ಚಿದೆ. ಕ್ವಿಂಟಾಲ್‍ಗೆ 250 ರೂಪಾಯಿ ದೊರೆಯುವ ಜೋಳ ಬೆಳೆಯುವದಕ್ಕಿಂತ 400 ರೂಪಾಯಿ ದೊರೆಯುವ ಭತ್ತ ಬೆಳೆಯುವದು  ಉತ್ತಮವೆಂದು ಸಿಂಧನೂರಿನ ಜನ  ಕ್ರಿ,ಶ 1965ರಲ್ಲಿ ಗದ್ದೆ ನಾಟಿ ಶುರು ಮಾಡಿದರು.  ಮಳೆ ಆಶ್ರಿತ ಬಿಳಿಜೋಳದ  ನೆಲೆಯಲ್ಲಿ ಆಣೆಕಟ್ಟೆ ನೀರಿಂದ ಭತ್ತ ಬಂದಿತು. ಕಾಲುವೆ ನೀರು ಹರಿದ ಬಳಿಕ ಸುಧಾರಿತ ಬೇಸಾಯದ ಹೆಸರಿನಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಯಂತ್ರಗಳು ಪ್ರವಾಹದಂತೆ ಹೊಲಕ್ಕೆ ತೇಲಿ ಬಂದವು. ಬರಗಾಲದಲ್ಲೂ ಬದುಕು ಗೆದ್ದ ಪಾರಂಪರಿಕ ಜ್ಞಾನದ ಕತ್ತು ಹಿಸುಕಿ ಹೆಚ್ಚು ಹಣ ತೊಡಗಿಸಿ ಲಾಭಗಳಿಸುವ ಸೂತ್ರಗಳು  ಬೇಸಾಯದ ಮಂತ್ರವಾದವು.

‘ಒಂದು ತಾಸಿನ ಮಳೆ ಸುರಿದ್ರೆ ನಮ್ಗೆ ವರ್ಷದ ರೊಟ್ಟೀರಿ ‘ ಗಂಗಾವತಿ, ಸಿಂಧನೂರಿನ ರೈತರು ಕಾಲದ ಕತೆ ನೆನಪಿಸಿ ಹೇಳುತ್ತಾರೆ. ಈಗ ಚಿಕ್ಕಮಂಗಳೂರು, ಆಗುಂಬೆ, ಕುದುರೆಮುಖದ ಮಲೆನಾಡಿನಲ್ಲಿ ಮಳೆ ಸುರಿದರೆ ನಮಗೆ ಬೆಳೆ ಎನ್ನುತ್ತಾರೆ. ತುಂಗಭದ್ರಾ ನದಿ ನೀರು ಹೊಲಕ್ಕೆ ಬರದಿದ್ದರೆ ಮುಂದೇನು ಎಂಬುದು ಅಲ್ಲಿನ ಯಾರಿಗೂ ಗೊತ್ತಿಲ್ಲ. ಒಣ ಬೇಸಾಯದ ಸೂತ್ರ ಕಳಚಿ ನೀರಾವರಿ ರಂಗಿನ ಆಟ ನಡೆದಿದೆ. ಮಲೆನಾಡಿನ ಮಳೆವಾರ್ತೆಯನ್ನು ಯಾವತ್ತೂ ಕೇಳದಿದ್ದವರು ಮಳೆ ಮಿಡಿತಕ್ಕೆ ತಕ್ಕಂತೆ ಕೃಷಿ ಕಲಿತಿದ್ದಾರೆ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆ ಕಂಡ ನೆಲೆಯಲ್ಲಿ ಈಗ ಪ್ರವಾಹ ನೀರಾವರಿ ನಡೆದಿದೆ. ಕಾಲುವೆಯಲ್ಲಿ ನೀರು ಹರಿಯುವಷ್ಟು ದಿನವೂ ಭರ್ಜರಿ ನೀರು ನಿಲ್ಲಿಸಿ ಭತ್ತ, ಕಬ್ಬಿಗೆ ಯಥೇಚ್ಛ ಹರಿಸುತ್ತಾರೆ. ಹೆಚ್ಚು ನೀರು ನಿಲ್ಲಿಸಿದರೆ ಬೆಳೆ ಚೆನ್ನಾಗಿ ಆಗುತ್ತದೆಂಬ ತಿಳುವಳಿಕೆ ಬೆಳೆದಿದೆ. ನಮ್ಮ ಬೆಳೆ, ಭೂಮಿಗೆ ಎಷ್ಟು ನೀರು ಬೇಕು? ಯೋಚಿಸುವವರು ಕಡಿಮೆ. ಬಿಸಿಲು ಬಯಲಿಗೆ ವರ ಎಂಬ ಮಾತಿದೆ, ಈಗ ಕಾಲುವೆಯಲ್ಲಿ ನೀರು ಹರಿಯದ ಬೇಸಿಗೆಯನ್ನು ಬರ ಎನ್ನುವ ಕಾಲ ಬಂದಿದೆ.

ಸರಕಾರ ನೀರಾವರಿ ಪಂಪುಗಳಿಗೆ ಉಚಿತ ವಿದ್ಯುತ್ ಪೂರೈಕೆ  ಮಾಡಿದೆ. ವಿದ್ಯುತ್  ಇದ್ದಾಗೆಲ್ಲ ಪಂಪ್ ಚಾಲೂ  ಆಗಲೆಂದು ಕೃಷಿಕರು ಅಟೋ ಸ್ಟಾರ್ಟರ್ ಹಾಕಿ ಸಂತೆಗೆ  ಹೊರಡುತ್ತಾರೆ. ಎಳೆ ಶಿಶುವಿಗೆ ಚಮಚೆಯಲ್ಲಿ ಹಾಲು ಕುಡಿಸುವಂಥ ಎಚ್ಚರ ಬೇಕಿತ್ತು, ಆದರೆ ಲೆಕ್ಕವಿಲ್ಲದೇ ಕೊಡದಲ್ಲಿ ಹಾಲು ಸುರುವಿದ ಸ್ಥಿತಿ ಇಲ್ಲಿದೆ. ಕಾಲುವೆಯಲ್ಲಿ ಧಾರಾಳ ನೀರು ನೀಡುವಾಗ ನೀರಿನ ಬೆಲೆ ಅರಿಯುವ ಅಗತ್ಯ ಯಾರಿಗೂ ಇಲ್ಲ. ಪರಿಣಾಮ ಕೃಷಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿಯುತ್ತಿದೆ. ಇದು ಕಡು ಬರಗಾಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಹತ್ತಿ, ಜೋಳ, ಸಜ್ಜೆ ಬೆಳೆಯುತ್ತಿದ್ದ ಸಿಂಧನೂರಿನ ಭೂಮಿಗಳಲ್ಲಿ ಈಗ ಭತ್ತ  ಎಂದರೆ ಭತ್ತ ಮಾತ್ರವಿದೆ. ಸತತ ನೀರಾವರಿ ಫಲವಾಗಿ ಸವುಳು ಸಮಸ್ಯೆ ಕಾಣಿಸಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಿದ ಪರಿಣಾಮ ಭೂಗತದ ಕ್ಷಾರಯುಕ್ತ ಖನಿಜಗಳು ನೀರಿನಲ್ಲಿ ಸೇರಿ ಹೊಲದ ಮೇಲ್ಗಡೆ ಬಿಳಿಯ ಪದರ ಶೇಖರಣೆಯಾಗಿವೆ. ಸಸ್ಯದ ಬೇರು ಬೆಳೆಯುವ ನೆಲೆಗಳೆಲ್ಲ ಉಪ್ಪು ಉಪ್ಪು. ಇಲ್ಲಿ ಬೀಜ ಮೊಳಕೆಯಿಲ್ಲ, ಬೆಳೆದ ಸಸಿ ಕಮರುತ್ತಿವೆ. ಎಕರೆಗೆ 50 ಕ್ವಿಂಟಾಲ್ ಭತ್ತ ಬೆಳೆದವರಿಗೆ ಈಗ 15 ಕ್ವಿಂಟಾಲ್ ಇಳುವರಿಯೂ ಇಲ್ಲ. 60-70 ಟನ್ ದಾಖಲೆಯ ಕಬ್ಬು ಬೆಳೆಯುತ್ತಿದ್ದ ಅಥಣಿಯಲ್ಲಿ 20 ಟನ್ ದೊರೆಯುತ್ತಿಲ್ಲ. ಗಂಗಾವತಿ, ಚಿಕ್ಕೋಡಿ, ಮುಧೋಳ್, ಜಮಖಂಡಿ ಹೀಗೆ ನೀರಾವರಿಯ ಯಾವ ಪ್ರದೇಶಕ್ಕೆ ಹೋದರೂ ಸಮಸ್ಯೆ ತೀವ್ರವಾಗಿದೆ. ಕೃಷಿ ವೆಚ್ಚ ಏರುತ್ತಿದೆ, ಉತ್ಪಾದನೆ ಕುಸಿಯುತ್ತಿದೆ. ಬೇಸಾಯ ನಷ್ಟವಾಗಿ ರೈತರು ಹೊಲಕ್ಕಿಂತ ಹೆಚ್ಚು ಕಾಲ ಹೆದ್ದಾರಿಯಲ್ಲಿ ಬೆಂಬಲ ಬೆಲೆಯ ಚಳುವಳಿಗೆ  ನಿಲ್ಲುತ್ತಾರೆ.

ಬೆಳಗಾವಿಯ ಚಿಕ್ಕೋಡಿಯ ಮಾಂಜ್ರಿ ಗ್ರಾಮದಲ್ಲಿ 4700 ಎಕರೆ ಕೃಷಿ ಭೂಮಿಯಲ್ಲಿ ಈಗಾಗಲೇ 700 ಎಕರೆ ಉಪ್ಪುನೀರಿನಿಂದ ಹಾಳಾಗಿದೆ. ನಾವು ಕೆರೆ ತೆಗೆದು ಅಲ್ಲಿ ಸಮುದ್ರದ ಮೀನು ಸಾಕಬೇಕೆಂದು  ಮಾಂಜ್ರಿಯ ಬಿ.ಎ.ಪಾಟೀಲ್ ನೊಂದು ನುಡಿಯುತ್ತಾರೆ. ಎಕರೆಗೆ 18-20 ಲಕ್ಷ ಬೆಲೆ ಬಾಳುವ ಭೂಮಿ ಈಗ ಒಂದೆರಡು ಲಕ್ಷಕ್ಕೂ ಕೇಳುವವರಿಲ್ಲ. ಇಂಥ ಭೂಮಿಯ ಸುಧಾರಣೆಗೆ ಹಣ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಅಧಿಕ ನೀರಾವರಿ, ಅಂತರ್ಜಲ ಹೆಚ್ಚಳ, ವಿಪರೀತ ರಾಸಾಯನಿಕ ಗೊಬ್ಬರದ ಬಳಕೆ ಸಮಸ್ಯೆಗೆ ಮೂಲವಾಗಿವೆ. ಮಣ್ಣಿಗೆ ಸಾವಯವ ವಸ್ತು ಹೆಚ್ಚು ಹೆಚ್ಚು ಸೇರಿಸಬೇಕು, ಬಸಿಗಾಲುವೆ ನಿರ್ಮಿಸಿದರೆ ಮಣ್ಣು ಸುಧಾರಿಸಬಹುದು. ಹತ್ತಿಪ್ಪತ್ತು ಕಿಲೋ ಮೀಟರ್ ದೂರದವರೆಗೂ ಸಮತಟ್ಟಾದ ಈ ಪ್ರದೇಶದ ನೀರನ್ನು ಕಾಲುವೆ ಮೂಲಕ ಹೊರಹಾಕುವದು ಸುಲಭವಲ್ಲ. ಸಮುದಾಯ ಪ್ರಯತ್ನಗಳು ಬೇಕು, ಸರಕಾರದ ನೆರವು ಬೇಕಾಗುತ್ತದೆ. ಬಸಿಗಾಲುವೆ ನಿರ್ಮಾಣ, ಭೂಗತ ಪೈಪ್ ಜೋಡಣೆಗೆ ಎಕರೆಗೆ 45-50 ಸಾವಿರ ರೂಪಾಯಿ ಖರ್ಚಾಗುತ್ತದೆ. ಜೋರಾಗಿ ಮಳೆ ಸುರಿದರೆ ಎರೆ ಮಣ್ಣು ಹಿಗ್ಗಿ ಕಾಲುವೆಗಳು ಸರ್ವನಾಶವಾಗುತ್ತವೆ.

ಸವುಳು ಸಮಸ್ಯೆಯಿಂದ ಭೂಮಿಗೆ ಬೆಲೆಯಿಲ್ಲ, ಭೂಮಿ ಸುಧಾರಣೆಗೆ ರೈತರಿಗೆ ಆಸಕ್ತಿ ಕಡಿಮೆಯಾಗುತ್ತಿದೆ.  ಈಗಂತೂ ಒಂದೆರಡು ದಿನ ಮಳೆ ಜಾಸ್ತಿಯಾದರೂ ಉಪ್ಪುನೀರಿನ ಸಮಸ್ಯೆ ಹುಟ್ಟುತ್ತಿದೆ. ಕೃಷ್ಣಾ ಕಣಿವೆ, ತುಂಗಬದ್ರಾ ನೆಲೆಗಳ ಎಂಟು ಜಿಲ್ಲೆಗಳ ಶೇಕಡಾ 20-35 ಭಾಗದ ನೀರಾವರಿ ಭೂಮಿ ಸಮಸ್ಯೆ ಎದುರಿಸುತ್ತಿವೆ. ರಾಜ್ಯ ಜಲ ಸಂಪನ್ಮೂಲ ಸಚಿವರು 2012ರಲ್ಲಿ ಪ್ರಕಟಿಸಿದಂತೆ ಸುಮಾರು 45000 ಹೆಕ್ಟೇರ್ ನೀರಾವರಿ ಭೂಮಿ ಸವುಳು ಜವುಳಿನಿಂದ ಬೆಳೆ ತೆಗೆಯಲಾರದ ಹಂತ ತಲುಪಿದೆ! ಬಯಲುಸೀಮೆಗೆ ನೀರಾವರಿಯೇ ತಪ್ಪು ಎನ್ನುವದು ಇದರರ್ಥವಲ್ಲ. ಮಣ್ಣಿನ ಗುಣ ಗಮನಿಸಿ ನೀರು ಹಿಡಿಯುವ ಸಾಮರ್ಥ್ಯ ಲೆಕ್ಕಹಾಕಿ  ಅಗತ್ಯ ನೀರು ಮಾತ್ರ ಒದಗಿಸಬೇಕು. ನಿಗದಿತ ಮಾನದಂಡದಲ್ಲಿ ಬಳಸುವ ಕ್ರಿಮಿನಾಶಕ, ಕೀಟನಾಶಕ, ರಾಸಾಯನಿಕ ಗೊಬ್ಬರಗಳನ್ನು ಬೇಗ ಬೆಳೆಯಲೆಂದು ಮನಸ್ಸಿಗೆ ಬಂದಂತೆ ರೈತರು ಚೆಲ್ಲುತ್ತಾರೆ. ನೀರು ಬಳಕೆಯಲ್ಲಿ ನಿಯಂತ್ರಣ ಅನುಸರಿಸುವದು ಸಾಧ್ಯವೇ? ನೀರಾವರಿ ದೋಷಕ್ಕೆ ಬಂಗಾರದಂಥ ಭೂಮಿ ಬರಡಾಗುತ್ತಿದೆ.

ಸವುಳು ಜವುಳು ಕೃಷಿ ಪ್ರದೇಶದಲ್ಲಿ ಬಾರ್ಲಿ ಬೆಳೆಯಬಹುದೆಂದು ತಜ್ಞರು ಹೇಳುತ್ತಾರೆ. ಆದರೆ ಅದು ಅಷ್ಟು ಯಶಸ್ವಿಯಾಗಿಲ್ಲ. ಕ್ಯುಬಾ ದೇಶದ ಶುಗರ್ ಬೀಟ್ ಸಕ್ಕರೆ ತಯಾರಿಗೆ ಯೋಗ್ಯವಿದೆಯೆಂದು ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಉತ್ತೇಜನ ನೀಡಿವೆ. ನಾಲ್ಕುವರೆ ತಿಂಗಳ ಬೆಳೆ ಎಕರೆಗೆ 25-30 ಟನ್ ಆದಾಯವಿದೆ. ಇದನ್ನು ಮಡ್ಡಿ ಭೂಮಿಯಲ್ಲಿ ಹೊಸದಾಗಿ ಬೆಳೆಯುತ್ತಿದ್ದಾರೆ. ಇದು ಸವುಳು ಭೂಮಿಯಲ್ಲಿ ಯಶಸ್ವಿಯಾಗಿಲ್ಲ. ಕೃಷಿ ಬೆಳೆ ಸಾಧ್ಯವಿಲ್ಲದೇ ಭೂಮಿಯಲ್ಲಿ ಈಗ ವ್ಯಾಪಕ ಪ್ರಮಾಣದಲ್ಲಿ ಆಪುಹುಲ್ಲು ಆವರಿಸುತ್ತಿದೆ. ನೀರಾವರಿ ನೆಲೆ ಚಿತ್ರಗಳು ಕ್ರಮೇಣ ಸಂಭ್ರಮ ಕಳಚಿ ಒದ್ದೆ ಮರುಭೂಮಿಯಾಗುತ್ತಿವೆ.

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: ಭೂಮಿಗೀತ.ಕಾಮ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*