ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಿಡಪನಕುಂಟೆಯ ನೀರಿನ ಓದು

ಕಪ್ಪಲಿ ಹೊಡೆದ ನೆನಪು ಊರಿನ ಎಲ್ಲರಿಗಿದೆ. ಕೃಷಿಯ ಸಿರಿ ಹೆಚ್ಚಿಸಿದ ನೂರಾರು ಎಕರೆ ವಿಶಾಲದ ರಾಣಿ ಕೆರೆಯೂ ಸಂಪೂರ್ಣ ಒಣಗಿದೆ. ನೀರು ಒಣಗಿದಂತೆ ಊರಿನ ಕೃಷಿ ಉತ್ಸಾಹಕ್ಕೆ ದೊಡ್ಡ ಏಟು ಬಿದ್ದಿದೆ

ಚಿತ್ರದುರ್ಗ ಚಳ್ಳಕೆರೆಯ ಸನಿಹ ವಿಡಪನಕುಂಟೆಯಲ್ಲಿ 60-70ಮಿಲಿ ಮೀಟರ್ ಮಳೆ ಮಾತ್ರ ಸುರಿದಿತ್ತು. ಬಿತ್ತಿದ ಶೇಂಗಾ ಬಿಸಿಲಿಗೆ ಸುಟ್ಟು ಹೋಗಿತ್ತು. ಕಳೆದ ಆರು ವರ್ಷದಿಂದಲೂ ಬರಗಾಲದ ವ್ಯಥೆ ಪುನರಾವರ್ತನೆಯಾಗುತ್ತಿದೆ. ಅರ್ಕ,ಸಾಲಿ, ಸಜ್ಜೆ, ನವಣೆ ಕಿರು ಧಾನ್ಯ ನಂಬಿ ಶತಮಾನಗಳಿಂದ ಹಳ್ಳಿ ಬದುಕಿತ್ತು. ಹಳೆಯ ಕತೆ ಕೇಳುತ್ತ ಅಲ್ಲಿನ ಕಡಮೋಳ್‍ಕಟ್ಟದ ಹೊಂಗೆ ನೆರಳಲ್ಲಿ ನಿಂತಿದ್ದೆ. ಸಿದ್ದೇಶ್ವರ ರೆಡ್ಡಿ ಅರಿವಿಗೆ ಸಿಕ್ಕ ಅನುಭವ ವಿವರಿಸುತ್ತಿದ್ದರು. ಊರ ಹಿರಿಯರನ್ನು ಮಾತಾಡಿಸಿ ಹೋಗಬೇಕೆಂದು ಅಲ್ಲಿದ್ದ ಈರಣ್ಣ ಕ್ಯಾತಪ್ಪ(60) ಒತ್ತಾಯಿಸಿದರು. ಕೃಷಿಯ ವೈಭವ ಕೇಳಲು ಹಿರಿಯಜ್ಜನತ್ತ ಪಯಣ ಸಾಗಿತ್ತು.  ಬಿಳಿ ಪಂಚೆ, ಬಿಳಿ ಅಂಗಿ, ಹೆಗಲಿಗೊಂದು ಶಾಲು, ಕೈಯ್ಯಲ್ಲೊಂದು ಕೋಲು ಹಿಡಿದು ತೆಳ್ಳನೆಯ ದೇಹದ ಅಜ್ಜ ಗಾಳಿಯಲ್ಲಿ ತೇಲುತ್ತ ನಮ್ಮತ್ತ ಬರುತ್ತಿದ್ದರು. ‘ಓಹ್ ! ಅವರು ಬಂದ್ಬಿಟ್ರು’ ರೆಡ್ಡಿ ಉದ್ಗರಿಸಿದರು. ಪತ್ರಿಕೆ ಓದಲು  ಹೊರಟಿದ್ದ ಅಜ್ಜನಲ್ಲಿ ಊರ ಇತಿಹಾಸ ಓದಲು ವಿನಂತಿಸಿದೆ.  ಮರದ ನೆರಳಲ್ಲಿ ಮಾತು ಆರಂಭಿಸಿದರು.

ಹೆಸರು ಸಿ. ಹನುಮಂತಪ್ಪ ಪಟೇಲ್. ‘ಹೊಸ್ಮನೆ ಹನುಮಂತಪ್ಪ’ ಎಂದು ಸೀಮೆಗೆಲ್ಲ ಪರಿಚಿತರು. ಅಜ್ಜಾ….ನಿಮ್ಮ ವಯಸ್ಸೆಷ್ಟು ? ಕೇಳಿದರೆ ಕೆರೆಯ ಕತೆ ಶುರುಮಾಡಿದರು. ಕ್ರಿ.ಶ 1889ರಲ್ಲಿ ರಾಣಿ ಕೆರೆ ಕಟ್ಟಾಕ ಶುರುವಾಯ್ತು. ಕ್ರಿ.ಶ1907ರಲ್ಲಿ ಉದ್ಘಾಟನೆ ಕಾರ್ಯಕ್ರಮ. ಆಗ ನನಗೆ ಹುಡುಗಾಟದ ವಯಸ್ಸು. ಮಹಾರಾಜ ಕೃಷúರಾಜ ಒಡೆಯರ್ ಕೆರೆ ನಿರ್ಮಾಣಕ್ಕೆ ನೆರವು ನೀಡಿದರು. ಉದ್ಘಾಟನೆಗೆ ಸರ್ ಎಂ.ವಿಶ್ವೇಶ್ವರಯ್ಯ ನಮ್ಮ ಊರಿಗೆ ಬಂದಿದ್ರು. ಅವರ ಬಂದ ನೆನಪಿಗೆ ನಮ್ಮ ಪಕ್ಕದ ಹಳ್ಳಿಗೆ ‘ವಿಶ್ವೇಶ್ವರಪುರ’ ಅಂತ ಹೆಸರಾಯ್ತು. ನಮ್ಮ ರಾಣಿಕೆರೆ ಏಳು ಹಳ್ಳಿಗಳ ಹೊಲಕ್ಕೆ ನೀರು ನೀಡ್ತದೆ. ಕೆರೆ ನಿರ್ಮಿಸುವಾಗ ಕೋಣಗಳ ಮೇಲೆ ಮಣ್ಣು ಸಾಗಿಸಿದ್ರು. 40 ಕೋಣಗಳು ಐದಾರು ವರ್ಷ ಕೆಲಸ ಮಾಡಿದವು. ಅಜ್ಜ ಹಳೆಯ ಕಾಲಕ್ಕೆ ಕಾಲ್ನಡಿಗೆ ಹೊರಟರು. ವಯಸ್ಸು 113 ಮುಗಿದು ಈಗ 114ನೇ ವರ್ಷ ಚಾಲೂ ಆಗಿದೆಯೆಂದರು.

ಊರಲ್ಲಿ ಯಾರನ್ನೇ ಕೇಳಿದರೂ ರಾಣಿ ಕೆರೆ ನಿರ್ಮಾಣದಿಂದ ಹನುಮಂತಜ್ಜನ ವಯಸ್ಸು ಅಳಿಯಲು ಶುರುಮಾಡುತ್ತಾರೆ. ನೂರು ವರ್ಷದ ಹಿಂದೆ ವಿಡಪನಕುಂಟೆಯಲ್ಲಿ ಇದ್ದದ್ದು 60-70 ಮನೆಗಳು. ಊರಿನ ಸುತ್ತ ಮಣ್ಣಿನ ಕೋಟೆಯಿತ್ತು. ಪ್ರವೇಶಕ್ಕೆ ಊರಿಗೊಂದು ಬಾಗಿಲಿತ್ತು. ಪಹರೆ ಕಾಯಲು ಬುರ್ಜಿ(ಗೋಪುರ) ಕಟ್ಟಿದ್ದರು. ಇದು ದರೋಡೆಕೋರರಿಂದ ರಕ್ಷಣೆಯ ಉಪಾಯ. ಒಮ್ಮೆ ಊರಿಗೆಲ್ಲ ಸಾಂಕ್ರಾಮಿಕ ರೋಗ ಬಡಿಯಿತು. ಕೆಲ ದಿನಗಳಲ್ಲಿ 50-60 ಜನ ಸಾವನ್ನಪ್ಪಿದರು. ರೋಗದಿಂದ ಬಚಾವಾಗಲು ಎಲ್ಲರೂ ಊರು ಬಿಟ್ಟು ಅಡವಿ ಸೇರಲು ನಿರ್ಧರಿಸಿದರು. ಹನುಮಂತಜ್ಜ ಅಡವಿ ಎಂದದ್ದು ಹೊಲಕ್ಕೆ ! ಆಗ ಅಲ್ಲಿ ಕಾಡೂ ಇತ್ತು, ಹೊಲವೂ ಇತ್ತು. ಹೊಂಗೆ ಮರಗಳ ಗುಂಡುತೋಪು ನಳನಳಿಸುತ್ತಿತ್ತು. ಆ ಸೊಪ್ಪುಗಳನ್ನು ಬಳಸಿ ಗುಡಿಸಲು ಹಾಕಿಕೊಂಡು ಎರಡು ಮೂರು ತಿಂಗಳು ಉಳಿದರು. ಈಗ ವಾಡಿಕೆಯ 200-250 ಮಿಲಿ ಮೀಟರ್ ಮಳೆಯೂ ಇಲ್ಲಿ ಸುರಿಯುವದಿಲ್ಲ. ಕೊಳವೆ ಬಾವಿ ತೆಗೆದರೂ ನೀರು ಸಿಗುವದಿಲ್ಲ. ಆಗ ರೋಗಗ್ರಸ್ಥ ಊರು ಹೊಲದಲ್ಲಿ ಬದುಕಿತ್ತೆಂದರೆ ಕುಡಿಯುವ ನೀರಿನ ಆಸರೆ ಏನು ? ಪ್ರಶ್ನೆ ಕಾಡಿತು. ಆ ಕಾಲಕ್ಕೆ ಝರಿ ನೀರು  ಹರಿಯುತ್ತಿತ್ತು, ಚಿಲುಮೆಗಳಿದ್ದವು. ಗೌಡಪ್ಪನಕುಂಟೆಯಲ್ಲಿ ಯಾವಾಗಲೂ ನೀರು ಇರುತ್ತಿತ್ತು. ಹಳ್ಳದ ದಂಡೆಯಲ್ಲಿ ಎರಡಡಿ ಮರಳು ಬಾಚಿದರೆ ಅಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಕಪ್ಪಲಿ ಹೊಡೆದು ನೀರಾವರಿಯಲ್ಲಿ ರಾಗಿ, ಭತ್ತ ಬೆಳೆಯುತ್ತಿದ್ದರು. ಅರ್ಕ,ಸಾವಿ, ಸಜ್ಜೆ, ನವಣೆ, ಔಡಲ, ತೊಗರಿ. ಹುರಳಿ ಬೆಳೆಯುತ್ತಿದ್ದರು. ಬಾವಿಗೆ ಕಪ್ಪಲಿ ಹೊಡೆದು ಎತ್ತುಗಳಿಂದ ನೀರೆತ್ತುವದು ಸಾಮಾನ್ಯವಾಗಿತ್ತು.

 

ಒಮ್ಮೆ ಭೀಕರ ಬರಗಾಲ. ಹೊಲದಲ್ಲಿ ಯಾವುದೇ ಬೆಳೆ ಬರಲಿಲ್ಲ. ಚಕ್ಕಡಿಯಲ್ಲಿ ಉಪ್ಪಿನ ವ್ಯಾಪಾರಕ್ಕೆ ಹೋಗುವವರಿಗೆ ಮಾತ್ರ ಸರಕಾರ ಪರವಾನಗಿ ನೀಡುತ್ತಿತ್ತು. ಹಳ್ಳಿಯ ಮೂರು ನಾಲ್ಕು ಚಕ್ಕಡಿಗಾಡಿಯವರು ಉಪ್ಪಿನ ಪರವಾನಗಿ ಪಡೆದು ದಾವಣಗೆರೆ, ಚಿಕ್ಕಬಾಗೂರು ಪ್ರದೇಶಗಳಿಗೆ ಹೋಗುತ್ತಿದ್ದರು. ಇಲ್ಲಿಂದ 8-10 ರೂಪಾಯಿಗೆ ಒಂದು ರಾಗಿ ಚೀಲ ಖರೀದಿಸಿ ತರುತ್ತಿದ್ದರು. ಸರಕಾರದ ಕಣ್ಣುತಪ್ಪಿಸಿ  ಉಪ್ಪಿನ ಪರವಾನಗಿಯಲ್ಲಿ ರಾಗಿ ತಂದು ಊಟ ಮಾಡುವದು ಅನಿವಾರ್ಯವಾಗಿತ್ತು. ರಾಗಿ ಖರೀದಿಗೆ ಹೋಗಿ ಬರಲು 3-4 ದಿನ ಬೇಕಾಗುತ್ತಿತ್ತು. ಸ್ನಾನವಿಲ್ಲದೇ 8-10 ದಿನ ಇರಬೇಕಾದ್ದರಿಂದ ಮೈಯಲ್ಲಿ ಕೂರಿ( ಹೇನಿನಂತಹ ಜೀವಿ) ತುಂಬಿರುತ್ತಿದ್ದವು.

ಕಡು ಬರದ ವಿಡಪನಕುಂಟೆಯ ಹೊಲದ ಸೀಮೆ ಈಗ ಸುತ್ತಾಡಿದ್ದೇನೆ. ಈ ಶತಮಾನದ ಗ್ರಾಮೀಣ ಬದುಕನ್ನು ಅನುಭವದಲ್ಲಿ ಅರಿತ ಹಿರಿಯಜ್ಜ ಹನುಮಂತಪ್ಪನ ಜೊತೆ ಮಾತಾಡಿದ್ದೇನೆ. ರಾಣಿ ಕೆರೆ ದಂಡೆಯ ಉದ್ದಕ್ಕೂ ನಡೆದಿದ್ದೇನೆ. ಬತ್ತಿದ ಕೆರೆ ನೋಡಿ, ಒಣಗಿದ ಕೃಷಿ ಬೆಳೆಗಳ ನೋವಿನಲ್ಲಿ  ಎಲ್ಲರಿಗೂ ಉತ್ಸಾಹ ಕಳೆದುಹೋಗಿದೆ. ಬಿಳಿ ಮಣ್ಣಿನ ಭೂಮಿಯಲ್ಲಿ ತೊಗರಿ ಬಿತ್ತಿದ ಸಿದ್ದೇಶ್ವರ ರೆಡ್ಡಿ 20 ಮಿಲಿ ಮೀಟರ್ ಮಳೆ ಸುರಿದರೆ 8 ಲಕ್ಷ ಆದಾಯ ದೊರೆಯುತ್ತದೆಂದರು. ಮಲೆನಾಡಿನಲ್ಲಿ ನಾವು ತಾಂಬೂಲ ಜಗಿದು ಉಗುಳುವ ಹತ್ತು ನಿಮಿಷದಲ್ಲಿ ಸುರಿಯುವ ಸುರಿಯುವ ಹನಿಯಿದು. ಇಷ್ಟು ಮಳೆ ಸುರಿದರೂ ಕೃಷಿಕರ ಬೆಳೆ ಭವಿಷ್ಯ ಬದಲಾಗುತ್ತದೆ. ಆದರೆ ಪರಿಸರದ ಲೆಕ್ಕ ತಪ್ಪುತ್ತಿದೆ, ವಾಡಿಕೆಯ ಮಳೆಯೂ ಸುರಿಯುತ್ತಿಲ್ಲ. ಮಳೆ ಕಾಲಕ್ಕೆ ಸರಿಯಾಗಿ ಬರುತ್ತಿಲ್ಲ, ಅಕಾಲಿಕ ಮಳೆ ಬಂದು ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ.

ವಿಡಪನಕುಂಟೆಯಲ್ಲಿ ಪ್ರಥಮ ನೀರಾವರಿ ಕೃಷಿ ಮಾಡಿದವರು ಹನುಂತಪ್ಪ. 500 ಎಕರೆ ಭೂಮಿಯ ಒಡೆತನ ಇವರದು. ಊರಿನ 150-200 ಜನ ಇವರ ಹೊಲದಲ್ಲಿ ದುಡಿದು ಅನ್ನ  ಕಾಣುತ್ತಿದ್ದರೆಂದು ಕೃಷಿಕ ಸಿದ್ದೇಶ್ವರ ರೆಡ್ಡಿ ನೆನಪಿಸುತ್ತಾರೆ. ಈಗ ಭೂಮಿ ಹಿಸೆಯಾಗಿದೆ. ಹನುಮಂತಪ್ಪ ತೋಡಿಸಿದ ಬಾವಿಯೂ ಒಣಗಿದೆ, ಕಪ್ಪಲಿ ಹೊಡೆದ ನೆನಪು ಊರಿನ ಎಲ್ಲರಿಗಿದೆ. ಕೃಷಿಯ ಸಿರಿ ಹೆಚ್ಚಿಸಿದ ನೂರಾರು ಎಕರೆ ವಿಶಾಲದ ರಾಣಿ ಕೆರೆಯೂ ಸಂಪೂರ್ಣ ಒಣಗಿದೆ. ಉದ್ಘಾಟನೆಯ ಫಲಕಗಳು ಇತಿಹಾಸ ನೆನಪಿಸುತ್ತಿವೆ. ನೀರು ಒಣಗಿದಂತೆ ಊರಿನ ಕೃಷಿ ಉತ್ಸಾಹಕ್ಕೆ ದೊಡ್ಡ ಏಟು ಬಿದ್ದಿದೆ. ಊರಿನ ಮಕ್ಕಳಿಗೆ ಕೆಲಸ ನೀಡಿದ್ದ ಹೊಸ್ಮನೆ ಹನುಮಂತಪ್ಪನವರ ಆರ್ಥಿಕ ಸ್ಥಿತಿಯೂ ಕಷ್ಟವಾಗಿದೆ. ತೋಟದ ನೀರಾವರಿಗೆ ಈವರೆಗೆ 16 ಕೊಳವೆಬಾವಿ ಕೊರೆಸಿ ನೀರು ಹುಡುಕುತ್ತಿರುವ  ಈರಣ್ಣನಿಗೆ ಗೌಡಪ್ಪನಕುಂಟೆಯಲ್ಲಿ ಈಜಾಡಿದ ನೆನಪುಗಳಿವೆ.

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: http://bhoomigeetha.com

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*