ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಲೆಮಾರಿ ಭಗೀರಥರು

ಹಸಿವು ನೀಗಿಸಲು ಜೀವವನ್ನೇ ಪಣಕ್ಕಿಡುವ ಜೀವಗಳು ಈ ಪ್ರಂಪಚದಲ್ಲಿ ಈಗಲೂ ಇವೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇದು ವಾಸ್ತವ. ಸಮಾಜದಲ್ಲಿ ಗೌರವಯುತವಾಗಿ ತುತ್ತಿನ ಚೀಲ ತುಂಬಿಸಬೇಕಾದರೆ ಎಂಥಹ ಕಷ್ಟದ ಕೆಲಸವಾದರೂ ಸರಿ ಮಾಡುವವರಿದ್ದಾರೆ. ಅದೇ ಬಾವಿ ಅಗೆಯುವ ಕೆಲಸ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ‘ಯ್ಯಾರಿ’ ಎನ್ನುತ್ತಾರೆ.

ಉತ್ತರ ಕರ್ನಾಟಕದ ವಿಜಯಪುರ, ಕಲ್ಬುರ್ಗಿ ಹಾಗೂ ಮಹಾರಾಷ್ಟ್ರದ ಕಡೆಯಿಂದ ಕುಟುಂಬ ಸಮೇತವಾಗಿ ಬರುವ ಕಾರ್ಮಿಕರು ಈ ಕೆಲಸ ನಿರ್ವಹಿಸುತ್ತಾರೆ. 2ಸಾಮಾನ್ಯವಾಗಿ ಲಂಬಾಣಿ ಸಮುದಾಯದವರು ಇದರಲ್ಲಿ ಮುಂಚಿನಿಂದಲೂ ತೊಡಗಿಸಿಕೊಂಡಿದ್ದಾರೆ. ಈ ಕೆಲಸ ಪರಂಪರೆಯಿಂದ ಇವರಿಗೆ ಬಂದ ಬಳುವಳಿ.

ಇಲ್ಲಿಯ ಬಾವಿಗಳನ್ನು ಮುಂಚೆ ಸ್ಥಳೀಯ ರೈತರೇ ನಿರ್ಮಾಣ ಮಾಡುತ್ತಿದ್ದರು. ಆದರೆ ಕ್ರಮೇಣ ಈ ಕಷ್ಟದ ಕೆಲಸ ಮಾಡುವ ಕಾರ್ಮಿಕರ ಕೊರತೆ ಉಂಟಾದ ಕಾರಣ, ಇತರೆ ಭಾಗದಿಂದ ಬರುವ ಲಂಬಾಣಿಗಳು ಈ ಕೆಲಸ ಮಾಡುತ್ತಾರೆ.

ಬೆಳಗಾವಿಯ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ – ಹೀಗೆ ಅನೇಕ ಕಡೆ ಸುಮಾರು ೫ ತಿಂಗಳವರೆಗೆ ಕುಟುಂಬ ಸಮೇತವಾಗಿ ನೆಲೆ ನಿಂತು ಇವರು ಬಾವಿ ತೋಡುವ ಕೆಲಸ ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ವರ್ಷದ ನವಂಬರ ತಿಂಗಳಿಂದ ಏಪ್ರಿಲ್ ಕೊನೆಯವರೆಗೂ ಈ ಕೆಲಸಕ್ಕಾಗಿ ಬೀಡು ಬಿಟ್ಟಿರುತ್ತಾರೆ.

3ಸಾಮಾನ್ಯವಾಗಿ ಒಂದು ತಿಂಗಳಿಗೆ ಎರಡು ಬಾವಿ ತೆಗೆಯಬಹುದು. ಅಂದರೆ ಒಂದು ಸಲ ಬಂದರೆ ೧೦-೧೨ ಬಾವಿಗಳನ್ನು ತೆಗೆಯುತ್ತಾರೆ. ಬಾವಿಗಳ ಆಳ ೮ ರಿಂದ ೧೦ ಅಡಿ ಇರುತ್ತದೆ. ಇಷ್ಟು ಆಳದ ಬಾವಿ ತೆಗೆಯಲು ೪೫ ರಿಂದ ೫೦ ಸಾವಿರದವರೆಗೆ ಗುತ್ತಿಗೆ ಪಡೆದಿರುತ್ತಾರೆ. ೮ರಿಂದ ೧೫ ದಿನದಲ್ಲಿ ಒಂದು ಬಾವಿ ರೆಡಿಯಾಗಿರುತ್ತದೆ ಇದಕ್ಕಾಗಿ ಡೀಸೆಲ್ ಆಧಾರಿತ ಮಷಿನ್ ಹೊಂದಿರುತ್ತಾರೆ. ಈ ಮಷಿನ್‌ಗೆ ‘ಯ್ಯಾರಿ’ ಎಂಬ ಹೆಸರಿದೆ, ಹಾಗಾಗಿಯೇ ಇವರು ಮಾಡುವ ಕೆಲಸಕ್ಕೂ ಅದೇ ಹೆಸರು ಅಂಟಿಕೊಂಡಿದೆ. ಉತ್ತಮ ಆದಾಯ ಇರುವುದಾದರೂ ಅಪಾಯವೂ ಇದೆ.

ಆಯತಪ್ಪಿದರೆ ಪ್ರಾಣಾಪಾಯ
ಬಾವಿ ಅಗೆಯುವ ಸಂದರ್ಭದಲ್ಲಿ ಮಶಿನ್‌ನಿಂದ ಕಲ್ಲು ತುಂಬಲು ಆಳದಲ್ಲಿ ಕೆಲವರು, ಬಾವಿಯ ಮೇಲ್ಭಾಗದಲ್ಲಿ ಕೆಲವರು ನಿಂತಿರುತ್ತಾರೆ. ಈ ಭಾಗದಲ್ಲಿ ಭೂಮಿಯ ಮೇಲ್ಪದರದಲ್ಲಿ ೨ ರಿಂದ ೩ ಅಡಿ ಕಪ್ಪು ಮಸಾರಿ ಮಣ್ಣು ಇರುತ್ತದೆ, ಆ ನಂತರ ಗಡುಸು ಮಣ್ಣು ಸಿಗುತ್ತದೆ. ಕೆಲವೊಮ್ಮೆ ಕೆಳಗಡೆ ಕಲ್ಲು 4ಇರುವುದರಿಂದ ಮದ್ದು ಸಿಡಿಸಿ ಪುಡಿಯಾದ ಕಲ್ಲನ್ನು ಮೇಲಕ್ಕೆ ಎತ್ತಿ ಸಾಗಿಸಲಾಗುತ್ತದೆ. ತುಂಬಾ ಜಾಗೂರುಕತೆಯಿಂದ ಮೈಯಲ್ಲಾ ಕಣ್ಣಾಗಿ ಕಲ್ಲು ತುಂಬಿ ಮೇಲೆ ಕಳಿಸಬೇಕು. ಆಯತಪ್ಪಿ ಒಂದೇ ಎಂದು ಕಲ್ಲು ಬಿದ್ದರೂ ಕೆಳಗಿದ್ದವರಿಗೆ ತಾಗಿ ಪ್ರಾಣಾಪಾಯ ತಪ್ಪಿದ್ದಲ್ಲ. ಇಂಥ ಘಟನೆಗಳು ಹಲವು ಸಲ ಆಗಿದ್ದಿದೆ. ಬಾವಿ ತೆಗೆದು ಬೆಳೆಗಳಿಗೆ ಹಾಗೂ ಜನಗಳಿಗೆ ನೀರುಣಿಸುವ ಇವರಿಗೆ ಹಾಗೇನಾದರೂ ಆದ ಸಂದರ್ಭದಲ್ಲಿ ನೀರುಣಿಸುವರ್ಯಾೆರೂ ಇರುವುದಿಲ್ಲ.

ಒಂದು ಸಲ ಬಾವಿ ತೆಗೆಯುವ ಒಪ್ಪಂದ ಆದ ಮೇಲೆ ನೀರು ಬಂದರೂ, ಬರದೇ ಇದ್ದರೂ ಹಣ ಸಂದಾಯವಾಗುತ್ತದೆ. ಈ ರೀತಿ ತೋಡಿದ ಬಾವಿಗಳ ನೀರನ್ನು ರೈತರು ತಮ್ಮ ಕಬ್ಬು, ತಂಬಾಕು ಹಾಗೂ ಇತರೆ ತೋಟಗಾರಿಕೆ ಬೆಳೆಗಳಿಗೆ ಬಳಸುತ್ತಾರೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಮೇಲ್ಭಾಗದಲ್ಲಿ ಇರುವುದರಿಂದ, ಈಗಲೂ ಸಹ ಬಾವಿ ತೆಗೆಯುವ ಪರಂಪರೆ ಉಳಿದಿದೆ.

ಈ ಕೆಲಸ ಮಾಡುವ ಸಮುದಾಯಗಳಿಗೆ ಗುಳೆ ಹೋಗುವುದು ಶಾಪ. ಇದಕ್ಕಾಗಿ ತಿಂಗಳುಗಟ್ಟಲೇ ಚಿಕ್ಕ ಮಕ್ಕಳಾದಿಯಾಗಿ, ಮಳೆ-ಚಳಿಯೆನ್ನದೇ, ದೂರದ ಯಾವುದೋ ಸ್ಥಳದಲ್ಲಿ ನೆಲೆ ನಿಲ್ಲುವುದು ಇವರಿಗೆ ಅಭ್ಯಾಸವಾಗಿದೆ. ಅಲ್ಲೇ ಮರದ ನೆರಳಿಗೆ ಸೀರೆಯ ಜೋಳಿಗೆಯಲ್ಲಿ ಜೊತಾಡುವ ಎಳೆಯ ಮಕ್ಕಳನ್ನೂ ಕೆಲ ಬಾರಿ ಕಾಣಬಹುದು.

ಮಕ್ಕಳ ಶೈಕ್ಷಣಿಕ ಸ್ಥಿತಿ
ವರ್ಷದಲ್ಲಿ ೫ ತಿಂಗಳು ಹೊರಗಡೆ ಇರುತ್ತವೆ ಈ ಕುಟುಂಬಗಳು. ಮಕ್ಕಳನ್ನೂ ಜೊತೆಯಲ್ಲೇ ಕರೆತರುತ್ತಾರೆ. ಹೊಲಗಳಲ್ಲಿ ಟೆಂಟ್ ಹಾಕಿ ವಾಸ ಮಾಡುವ ಇವರ ಮಕ್ಕಳು ಇವರ ಜೊತೆ ಸಣ್ಣ-ಪುಟ್ಟ ಕೆಲಸ ಮಾಡುತ್ತಾ, ಉರುವಲು ಹುಡುಕುತ್ತಾ ಕಾಲ ಕಳೆಯುತ್ತಾರೆ. ೫ ತಿಂಗಳು ಮಾತ್ರ ಶಾಲೆಗೆ ಹೋಗಿ ಬಂದಿರುತ್ತಾರೆ. ಅಲ್ಲಿ ಕಲಿತ ವಿದ್ಯಾಭ್ಯಾಸ ಇಲ್ಲಿ ಮರೆತು ಹೋಗಿರುತ್ತದೆ.

ಈ ಕುಟುಂಬಗಳಿಗೆ ‘ಯ್ಯಾರಿ’ ಕೆಲಸ ಮಾತ್ರ ಗೊತ್ತು. ಬೇರೆ ಕೆಲಸದ ಅನುಭವ ಇಲ್ಲ. ಹಾಗಾಗಿ ಉಪವಾಸ ಬಿದ್ದು ಸಾಯುವುದಕ್ಕಿಂತ ಬಾವಿಯಲ್ಲಿ ಮಣ್ಣಾದರೂ ಸರಿ ಅದೇ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಇವರು.

ಲೇಖನ : ವಿನೋದ ರಾ. ಪಾಟೀಲ
ಚಿತ್ರಗಳು : ಮಲ್ಲಿಕಾರ್ಜುನ ದಾನನ್ನವರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*