ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆಗಳ ಪುನಶ್ಚೇತನದ ಈ ಕಥನ ನಮ್ಮೆಲ್ಲರ ಕಣ್ತೆರೆಸಲಿ!

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳ ಕೆರೆಗಳು ನಗರೀಕರಣದ ಅಟ್ಟಹಾಸಕ್ಕೆ ಬಲಿಯಾಗುತ್ತಿರುವ ಕಳವಳ ಕಾಡುತ್ತಲೇ ಇದೆ. ಇಂಥ ಹೊತ್ತಲ್ಲಿ ಕೆರೆಗಳ ರಕ್ಷಣೆ ಹೇಗೆ ಸಾಧ್ಯವಾಗಿಸಬಹುದು ಎಂಬುದಕ್ಕೆ 28ರ ಯುವಕನೊಬ್ಬ ಮಾದರಿಯಾದ ಸೂರ್ತಿಗಾಥೆ ಇಲ್ಲಿದೆ. ಇದು ಇಂದಿನ (೧೨.೧.೨೦೧೬) ವಿಜಯವಾಣಿಯಲ್ಲಿ ಪ್ರಕಟಗೊಂಡ ಲೇಖನ…

vijayavani - ravindra deshmukhಅದು ಚೆನ್ನೈ ಹೊರವಲಯದ ಪುಟ್ಟ ಹಳ್ಳಿ. ಸುತ್ತಲೂ ಕೆರೆ, ಹಸಿರನ್ನು ತುಂಬಿಕೊಂಡ ಸಂಪದ್ಭರಿತ ಪ್ರದೇಶ. ಊರಲ್ಲಿ ಜನಸಂಖ್ಯೆಗಿಂತಲೂ ಪಶುಸಂಪತ್ತು ಜಾಸ್ತಿ. ಹಾಗಾಗಿ, ಕೃಷಿಯೂ ಸಿರಿತನದಿಂದಲೇ ಕೂಡಿತ್ತು. ಇಂಥ ನಿಸರ್ಗದ ಮಡಿಲಲ್ಲಿ ದನಕರುಗಳೊಂದಿಗೆ ಒಡನಾಡುತ್ತಾ ಬೆಳೆಯುತ್ತಿದ್ದ ಈ ಹುಡುಗನ ಹೆಸರು ಅರುಣ್ ಕೃಷ್ಣಮೂರ್ತಿ. ಪ್ರಾಣಿಗಳೇ ಈತನ ಪ್ರಾಣಸ್ನೇಹಿತರು. ಶಾಲೆ ಪ್ರವೇಶಿಸಿದಾಗ ಅಲ್ಲೂ ನಿಸರ್ಗದ ಪಾಠ. ಪ್ರಕೃತಿಯನ್ನು ಶೋಷಿಸದೆ ಅದರೊಂದಿಗೆ ಹೇಗೆ ಸಾಮರಸ್ಯದಿಂದ ಬದುಕಬೇಕು ಎಂಬುದೇ ಅಲ್ಲಿನ ಶಿಕ್ಷಣದ ಪ್ರಮುಖ ಸಾರ. ಅಂದಿನಿಂದಲೂ ಈತನಿಗೆ ಪರಿಸರದೊಂದಿಗೆ ಅದೇನೋ ತಾದಾತ್ಮ್ಯ.ಕಾಲಚಕ್ರ ನಿಲ್ಲುವುದಿಲ್ಲವಲ್ಲ. ಪ್ರಾಥಮಿಕ ಶಿಕ್ಷಣ ಮುಗಿದು ಪ್ರೌಢಶಿಕ್ಷಣಕ್ಕೆ ಅಡಿ ಇಡುವ ಹೊತ್ತಿಗೆ ಬಾಲ್ಯದಲ್ಲಿ ಕಂಡಿದ್ದ ತನ್ನ ಹಳ್ಳಿಯ ಚಿತ್ರಣ ಬದಲಾಗುತ್ತಾ ಸಾಗಿತ್ತು. ವರ್ಷದ ಎಲ್ಲ ತಿಂಗಳುಗಳಲ್ಲಿ ಜೀವಸೆಲೆ ಹೊಂದಿರುತ್ತಿದ್ದ ಕೆರೆ ತ್ಯಾಜ್ಯದ ಕೊಂಪೆಯಾಯಿತು. ಸುತ್ತಲ ಹಸಿರೂ ಮಾಯವಾಗಿ ಬಯಲು ಹುಟ್ಟಿಕೊಂಡಿತು. ರಾಜಧಾನಿ ಚೆನ್ನೈಗೆ ಹೊಂದಿಕೊಂಡಿದ್ದರಿಂದ ನಗರೀಕರಣದ ಗಾಳಿಯೂ ವೇಗವಾಗಿ ಬೀಸಿ ಊರಿಗೆ ರಸ್ತೆ ನಿರ್ಮಾಣವಾಯಿತು. ಆ ರಸ್ತೆಯಲ್ಲಿ ಬಸ್, ಟೆಂಪೋ, ಲಾರಿಗಳು ವೇಗದ ಭರದಲ್ಲಿ ಪ್ರಾಣಿಗಳನ್ನು ಬಲಿ ಪಡೆದೇ ಮುಂದೆ ಸಾಗುತ್ತಿದ್ದವು. ವಾಹನಗಳ ವೇಗಕ್ಕೆ ಪ್ರಾಣಿಗಳು ಜೀವ ತೊರೆಯುತ್ತಿರುವುದನ್ನು ಕಂಡ ಈತನಿಗೆ ಎದೆ ಬಿರಿದಂತಾಗುತ್ತಿತ್ತು.

o_EauO_O_o_aa_oaA_1-001ಗಾಯಗೊಂಡ ಎಷ್ಟೋ ಪ್ರಾಣಿಗಳಿಗೆ ಶುಶ್ರೂಷೆ ನೀಡಿ ರಕ್ಷಿಸತೊಡಗಿದ. ಬರಿದಾಗುತ್ತಿರುವ ಅರಣ್ಯ, ಖಾಲಿಯಾಗುತ್ತಿರುವ ಕೆರೆಗಳು, ಹೆಚ್ಚುತ್ತಿರುವ ಮಾಲಿನ್ಯ ಇವೆಲ್ಲವೂ ಇವನನ್ನು ಧೃತಿಗೆಡಿಸಿದಾಗ ತನ್ನ ಜೀವನವನ್ನು ಪರಿಸರ ಸಂರಕ್ಷಣೆಗಾಗಿಯೇ ಮೀಸಲಿಡುವೆ ಎಂದು ಸಂಕಲ್ಪಿಸಿದ! ಅರುಣ್‌ನ ಈ ವಿಶಿಷ್ಟ ಜೀವನಧ್ಯೇಯಕ್ಕೆ ಆತನ ತಂದೆ ಕೃಷ್ಣಮೂರ್ತಿ ಬೆಂಬಲವಾಗಿ ನಿಂತರು. ‘ನಾನು ನಿನ್ನ ಜತೆಗಿದ್ದೇನೆ’ ಎಂದು ಬೆನ್ನುತಟ್ಟಿ ಮಗನ ಕನಸುಗಳಿಗೆ ರೆಕ್ಕೆ ಹಚ್ಚಿದರು. ಮುಂದೆ ಅರುಣ್ ಕಾಲೇಜು ವ್ಯಾಸಂಗಕ್ಕೆ ಸೇರಿದ್ದು ಚೆನ್ನೈನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜು. ಅಲ್ಲಿ ಮೈಕ್ರೋಬಯಾಲಜಿ ಪದವಿಗೆ ಪ್ರವೇಶ ಪಡೆದ ಬಳಿಕ ಎನ್‌ಎಸ್‌ಎಸ್‌ನಲ್ಲಿ ಸೇವಾವ್ರತಿಯಾಗಿ ಪರಿಸರ ರಕ್ಷಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ನಿಸರ್ಗದ ಉಳಿವಿಗೆ ಏನು ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಇವನಲ್ಲಿತ್ತು. ಕೆರೆಗಳನ್ನು ರಕ್ಷಿಸಿ ಪುನರ್ಜನ್ಮ ನೀಡುವುದು, ಅಲ್ಲಿನ ಜೀವವೈವಿಧ್ಯವನ್ನು ಮರುಸ್ಥಾಪಿಸುವುದು, ವನ್ಯಜೀವಿಗಳನ್ನು ಸಂರಕ್ಷಿಸುವುದು ಹಾಗೂ ಮರಗಿಡಗಳನ್ನು ಬೆಳೆಸುವುದು ಈ ನಾಲ್ಕಂಶಗಳ ಸೂತ್ರದಲ್ಲಿ ಯಶಸ್ಸು ಸಾಧಿಸುವುದೇ ಅವನ ಗುರಿಯಾಯಿತು. ಇದಕ್ಕಾಗಿ ಹಲವು ಸ್ವಯಂಸೇವಾ ಸಂಸ್ಥೆಗಳ ಜತೆಗೂಡಿ ಕಾರ್ಯನಿರ್ವಹಿಸಿದ. ಚೆನ್ನೈನ ಶಾಲೆಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದ. ಪರಿಸರದ ಕಾರ್ಯಗಳಿಗಾಗಿ ಶ್ರಮದಾನಕ್ಕೆ ಬರುವಂತೆ ಮನವೊಲಿಸಿದ. ಆದರೂ, ಅರುಣ್‌ಗೆ ಪೂರ್ತಿ ಸಂತೃಪ್ತಿ ಇರಲಿಲ್ಲ. ‘ಈಗ ಮಾಡುತ್ತಿರುವುದು ಸಾಕಾಗದು’ ಎಂದು ಸದಾ ಅನಿಸುತ್ತಿತ್ತು.ಈ ಹೊತ್ತಲ್ಲೇ ಈತನ ಬದುಕಲ್ಲಿ ಮಹತ್ವದ ತಿರುವು. ಪದವಿ ಅಂತಿಮ ವರ್ಷದಲ್ಲಿದ್ದಾಗಲೇ ಸುಪ್ರಸಿದ್ಧ ಗೂಗಲ್ ಕಂಪನಿಯಿಂದ ಕೆಲಸಕ್ಕೆ ಕರೆ ಬಂತು! ಹೈದರಾಬಾದ್ ಶಾಖೆಯಲ್ಲಿ ಕೆಲಸ. ಅರುಣ್ ಇಂಥ ಅವಕಾಶ ನಿರೀಕ್ಷಿಸಿರಲಿಲ್ಲ. ಕೈಗೆ ಒಂದಿಷ್ಟು ದುಡ್ಡು ಬಂದರೆ ತನ್ನ ಸಮಾಜಮುಖಿ ಕಾರ್ಯಗಳಿಗೆ ಇನ್ನಷ್ಟು ವೇಗ ತುಂಬಬಹುದು ಎಂದುಕೊಂಡು ಹೈದರಾಬಾದ್‌ಗೆ ಹೋದ. ಭಾಗ್ಯನಗರಿ ಎಂದೇ ಕರೆಯಲ್ಪಡುತ್ತಿದ್ದ ಈ ನಗರದ ಸೌಂದರ್ಯಕ್ಕೆ ಮಾರುಹೋದ. ಇಲ್ಲೂ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣ ನೀಡುವ ಕಾರ್ಯ ಮುಂದುವರಿಸಿದ. ಆದರೆ, ಇಲ್ಲೂ ಕೆರೆಗಳು ದುರವಸ್ಥೆಗೆ ತಲುಪಿದ್ದವು. ಕೆರೆಗಳಿದ್ದ ಜಾಗದಲ್ಲಿ ಕೆಲವೆಡೆ ಕಾಂಕ್ರೀಟ್ ಕಾಡು ನಿರ್ಮಾಣವಾಗಿತ್ತು. ಮರಗಿಡಗಳು ವೇಗವಾಗಿ ಕಣ್ಮರೆಯಾಗುತ್ತಿದ್ದವು. ‘ಇನ್ನು ಯಾರ ಮೇಲೂ ಅವಲಂಬಿತರಾಗುವುದು ಬೇಡ. ಈ ಸ್ಥಿತಿಯನ್ನು ನಾವೇ ಬದಲಾಯಿಸೋಣ’ ಎಂದು ನಿಶ್ಚಯಿಸಿಕೊಂಡ ಅರುಣ್ ನೂರು ಜನ ಶಾಲಾ ವಿದ್ಯಾರ್ಥಿಗಳ ತಂಡದೊಂದಿಗೆ ಸೀದಾ ತಲುಪಿದ್ದು ಹೈದರಾಬಾದ್‌ನ ಗುರುನ್‌ಧಾಮ್ ಕೆರೆಗೆ. ಎಲ್ಲರೂ ಸೇರಿ ಶ್ರಮದಾನ ಆರಂಭಿಸಿ, ಕೆರೆಯ ಒಡಲಲ್ಲಿನ ಹೂಳು ತೆಗೆಯತೊಡಗಿದರು. ಸ್ಥಳೀಯರೂ ಅಚ್ಚರಿಯಿಂದ ಇದನ್ನೆಲ್ಲ ನೋಡುತ್ತ ನಿಂತಿದ್ದರು. ಏಕೆಂದರೆ, ಹಲವು ವರ್ಷಗಳಿಂದ ಪಾಳುಬಿದ್ದಿದ್ದ ಈ ಕೆರೆಯತ್ತ ಯಾರೂ ಮುಖ ಹಾಕಿರಲಿಲ್ಲ. ಶ್ರಮದಾನದಿಂದ ಬರೋಬ್ಬರಿ 12 ಟನ್ ಹೂಳು ಹೊರತೆಗೆದಾಗ ಗುರುನ್‌ಧಾಮ್ ಕೆರೆ ಮಾಲಿನ್ಯಮುಕ್ತಗೊಂಡು ಹೊಸ ಜನ್ಮ ಪಡೆಯಿತು! ಈ ಕೆಲಸದಿಂದ ದೊರೆತ ಸೂರ್ತಿ ನಗರದ ಇನ್ನಷ್ಟು ಕೆರೆಗಳ ಪುನಶ್ಚೇತನಕ್ಕೆ ಹಾದಿ ಮಾಡಿಕೊಟ್ಟಿತು. ‘ಕೆರೆಯನ್ನು ಮತ್ತೆಂದೂ ಮಲಿನಗೊಳಿಸದಿರಿ, ಅದರ ರಕ್ಷಣೆ ನಿಮ್ಮ ಹೊಣೆ’ ಎಂದು ಸ್ಥಳೀಯರಿಂದ ವಾಗ್ದಾನ ಪಡೆದೇ ಅರುಣ್ ತಂಡ ಮುಂದಿನ ಕೆರೆಯತ್ತ ಸಾಗುತ್ತಿತ್ತು. ಹೀಗೆ ಮೂರೂವರೆ ವರ್ಷ ಎಡಬಿಡದೆ ಸಾಗಿತು ಕೆರೆಗಳ ಶುದ್ಧೀಕರಣ. ಬಳಿಕ ಉನ್ನತ ಶಿಕ್ಷಣಕ್ಕಾಗಿ ಅರುಣ್‌ಗೆ ಹೈದರಾಬಾದ್ ತೊರೆಯುವುದು ಅನಿವಾರ್ಯವಾಯಿತು. ಕೆಲಸಕ್ಕೂ ರಾಜೀನಾಮೆ ನೀಡಿದ. ಆದರೆ, ಇವನ ಪರಿಸರ ರಕ್ಷಣಾ ಕಾರ್ಯಗಳನ್ನು ಕಂಡ ಗೂಗಲ್ ‘ನೀನು ಕೆಲಸ ತೊರೆದರೂ ಪರ್ವಾಗಿಲ್ಲ, ನಮ್ಮ ಬೆಂಬಲ ನಿನ್ನ ಜತೆಗಿದೆ’ ಎಂಬ ಅಭಯ ನೀಡಿತು. ಮುಂದೆ, ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿಗಾಗಿ ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪ್ರವೇಶ. ಇಲ್ಲೂ ಶಾಲಾಮಕ್ಕಳ ಸೇನೆ ಕಟ್ಟಿದ ಅರುಣ್ ಅವರೊಂದಿಗೆ ತ್ರಿಲೋಕಪುರಿ ಸಂಜಯ್ ಕೆರೆಗೆ ಹೋಗಿ ಶ್ರಮದಾನ ಕೈಗೊಂಡ. 17 ಟನ್ ಹೂಳು ಹೊರಬಿದ್ದ ಬಳಿಕ ನೀರು ನಿರಾಯಾಸವಾಗಿ ಹರಿಯತೊಡಗಿತು.

ಮಳೆಗಾಲ ಬಂದಾಗ ಮೈದುಂಬಿಕೊಂಡಿತು. ಕೆರೆಗಳ ಜೀರ್ಣೋದ್ಧಾರದ ಜತೆಗೆ ಕೆರೆದಂಡೆಯಲ್ಲಿ ಮರಗಳನ್ನು ಬೆಳೆಸುವ ಕಾರ್ಯಕ್ಕೂ ಚಾಲನೆ ನೀಡಿದ. ಸ್ನಾತಕೋತ್ತರ ಪದವಿ ಪೂರ್ಣಗೊಂಡಾಗ ‘ಇನ್ಮೇಲೆ ನಾನು ನೌಕರಿ ಮಾಡುವುದಿಲ್ಲ, ಪರಿಸರದ ರಕ್ಷಣೆಗಾಗಿಯೇ ಪೂರ್ತಿ ಸಮಯ ಮೀಸಲು’ ಎಂದು ಸಂಕಲ್ಪಿಸಿ ತವರುನೆಲ ಚೆನ್ನೈಗೆ ಬಂದಿಳಿದ. ಈವರೆಗೆ ಮಾಡಿದ ಕಾರ್ಯಗಳು ಒಂದಿಷ್ಟು ತೃಪ್ತಿ ಕೊಟ್ಟಿದ್ದರೂ ಇನ್ನಷ್ಟು ರಚನಾತ್ಮಕವಾಗಿಸಬೇಕೆಂಬ ಉದ್ದೇಶದಿಂದ 2011ರಲ್ಲಿ ಎನ್‌ವಿರಾನ್ಮೆಂಟಲ್ -ಂಡೇಷನ್ ಆ- ಇಂಡಿಯಾ (ಇಎ-ಐ) ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿದ. ಇದಕ್ಕೆಲ್ಲ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವುದು ಹೇಗೆಂಬ ಪ್ರಶ್ನೆ ಬಂದಾಗ ಬರೀ 40 ಸಾವಿರ ರೂಪಾಯಿಯ ಬಂಡವಾಳದಲ್ಲಿ ‘ಕ್ರಿಶ್ ಇನೋ ಮೀಡಿಯಾ’ ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದ. ಕಾರ್ಪೋರೇಟ್ ಕಂಪನಿಗಳಿಗೆ ಅವರ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮಾರ್ಗದರ್ಶನ ಮಾಡುವುದು ‘ಕ್ರಿಶ್ ಇನೋ’ದ ಕೆಲಸ. ಇದೀಗ ವಾರ್ಷಿಕ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ವಹಿವಾಟು ನಡೆಸುತ್ತಿದ್ದು, ಆರು ಜನ ವೃತ್ತಿಪರರು ಅರೆಕಾಲಿಕವಾಗಿ ಉಚಿತ ಸೇವೆ ನೀಡುತ್ತಿದ್ದಾರೆ. ಇಎ-ಐ ಈಗ ಚೆನ್ನೈನ ಕಿಲ್ಕಾತಲೈ ಸೇರಿದಂತೆ 16 ಕೆರೆಗಳ ಹೂಳು ತೆಗೆದು, ಅವುಗಳಿಗೆ ಮರುಜೀವ ನೀಡಿದೆ. ಜತೆಗೆ ಇಲ್ಲಿದ್ದ ಜೀವವೈವಿಧ್ಯವನ್ನು ಮರುಸ್ಥಾಪಿಸಲು ಯಶಸ್ವಿಯಾಗಿದೆ. ಜತೆಗೆ, ಪ್ರಾಣಿ ಸಂಗ್ರಹಾಲಯಗಳ ಶುದ್ಧೀಕರಣ, ಸಸಿ ನೆಡುವಿಕೆ, ವನ್ಯಜೀವಿಗಳ ರಕ್ಷಣೆ ಹಾಗೂ ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಇಎ-ಐಗೆ 47 ಪ್ರಮುಖ ಸದಸ್ಯರಿದ್ದು, 1,200 ಕಾರ್ಯಕರ್ತರಿದ್ದಾರೆ. ಚೆನ್ನೈಯಷ್ಟೆ ಅಲ್ಲದೆ, ಹೈದರಾಬಾದ್, ದೆಹಲಿ, ಲಖನೌ, ಬೆಂಗಳೂರು, ವೈಜಾಗ್, ಅಹ್ಮದಾಬಾದ್, ಪಾಂಡಿಚೇರಿ ನಗರಗಳಲ್ಲಿಯೂ ತಂಡಗಳು ಕಾರ್ಯೋನ್ಮುಖವಾಗಿವೆ. ದೇಶದ 160ಕ್ಕೂ ಅಧಿಕ ಶಾಲೆಗಳಲ್ಲಿ ‘ಪರಿಸರ ಅರಿವು’ ಕಾರ್ಯಕ್ರಮ ನಡೆಸಲಾಗಿದೆ. ತಮಿಳುನಾಡು ಅರಣ್ಯ ಇಲಾಖೆ, ಆಂಧ್ರಪ್ರದೇಶ ಅರಣ್ಯ ಇಲಾಖೆ, ದಿಲ್ಲಿ ರಾಜ್ಯ ಸರ್ಕಾರ ಹಾಗೂ ಗೂಗಲ್ ಕಂಪನಿ ಇವರ ಯೋಜನೆಗಳಿಗೆ ಬೆಂಬಲ, ನೆರವು ನೀಡುತ್ತಿವೆ. ಚೆನ್ನೈನಲ್ಲಿ ಕೈಗೊಂಡ ಕೆರೆಗಳ ಶುದ್ಧೀಕರಣ ಕಾರ್ಯ ಗುರುತಿಸಿ ಟ್ಝಛ್ಡಿ ಟ್ಠ್ಞಜ ಔದ್ದಾಛಿದ್ದಾಠಿಛಿ 50 ಸಾವಿರ ಸ್ವಿಸ್ -ನ್ಸ್‌ನ ನಗದು ಪುರಸ್ಕಾರವನ್ನು ಅರುಣ್‌ಗೆ ನೀಡಿ ಗೌರವಿಸಿದೆ. ಗೂಗಲ್ ಸಹ 2010ರಲ್ಲಿ 15 ಸಾವಿರ ಡಾಲರ್‌ಗಳ ನಗದು ಪುರಸ್ಕಾರ ನೀಡಿದೆ. ಈ ಮೊತ್ತವನ್ನೆಲ್ಲ ಅರುಣ್, ಇಎ-ಐಯನ್ನು ಬಲಪಡಿಸಲು ವಿನಿಯೋಗಿಸಿದ್ದಾರೆ. ಈ ಕಾರ್ಯವನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಹಾಕಿಕೊಂಡಿರುವ ಅರುಣ್‌ಗೆ ಈಗಿನ್ನೂ 28 ವರ್ಷ ವಯಸ್ಸು.ಯೌವನದ ಅಪರಿಮಿತ ಶಕ್ತಿಯನ್ನು ಸಮಷ್ಟಿಯ ಹಿತಕ್ಕೆ ಬಳಸಿದರೆ ಬದಲಾವಣೆ ಆಗದಿರದು ಎಂದು ತೋರಿಸಿಕೊಟ್ಟಿರುವ ಅರುಣ್‌ಗೆ ನಿಮ್ಮ ಸಾಥ್ ನೀಡಲು ಸಂಪರ್ಕಿಸಿ arungoogle@gmail.com

(ಲೇಖಕರು ವಿಜಯವಾಣಿಸಹಾಯಕ ಸುದ್ದಿ ಸಂಪಾದಕರು)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*