ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹನಿ ಹನಿ ನೀರನ್ನು ಹಿಡಿಯಲು ಕಲಿತವರು!

ಇವರು ಎಲ್ಲರಂತಲ್ಲ. ಇವರ ತಾರಸಿ ಮನೆಯ ಮೇಲ್ಚಾವಣಿಯ ಮೇಲೆ ಬೀಳುವ ಮಳೆಗಾಲದ ಒಂದು ಹನಿ ಮಳೆನೀರು ಕೂಡ ಭೂಮಿಗೆ ಬಿದ್ದು ಅರಬೀ ಸಮುದ್ರ ಸೇರುವುದಿಲ್ಲ. ಎಲ್ಲ ವರ್ಷಧಾರೆಯೂ ಮನೆಯಂಗಳದಲ್ಲೇ ಶೇಖರವಾಗಿ ಕಡು ಬೇಸಗೆಯ ದಿನಗಳಲ್ಲೂ ತಂಪು ನೀರನ್ನು ಕುಡಿಸುತ್ತದೆ. ಕೊಳವೆ ಬಾವಿಯಿದೆ, ತೆರೆದ ಬಾವಿಯೂ ಇದೆ. ಆದರೆ ಅವರು ಸುಲಭವಾಗಿ ಸಿಗುವ ಮಳೆನೀರನ್ನೇ ಜೋಪಾನ ಮಾಡಿ ಬಳಸುವುದರಿಂದಾಗಿ ಅಲ್ಲಿರುವ ನೀರು ಉಳಿಯುತ್ತದೆ. ನೀರೆತ್ತಲು ಬಳಸಬೇಕಾಗಿದ್ದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ.

ಅವರು ಎಂ. joseph n mಎನ್. ಜೋಸೆಫ್. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿರುವ ಸೇಕ್ರೆಡ್ ಹಾರ್ಟ್ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು. ಜಲ ಸಂಪನ್ಮೂಲದ ಮಿತ ಉಪಯೋಗದ ವಿಧಾನಗಳ ಕುರಿತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆಯಲು ಸನ್ನದ್ಧರಾಗಿರುವ ಅವರು ಮಡಂತ್ಯಾರಿನಲ್ಲಿ ಹೊಸದಾಗಿ ಕಟ್ಟಿಸಿದ ಮನೆಯಲ್ಲಿ ನೀರು ಸಂಗ್ರಹಿಸಿಡುವ ವಿಶಿಷ್ಟ ವಿಧಾನವನ್ನು ಅಳವಡಿಸಿದ್ದಾರೆ. ಜೂನ್ ತಿಂಗಳಿನಿಂದ ಮಾರ್ಚ್ ತನಕ ಕುಡಿಯಲು, ಸ್ನಾನಕ್ಕೆ ಇನ್ನಿತರ ಎಲ್ಲ ಬಳಕೆಗಳಿಗೂ ಹೀಗೆ ಸಂಗ್ರಹವಾದ ನೀರು ಸಾಕಾಗುತ್ತದೆ. ಆ ಹೊತ್ತಿಗೆ ಒಂದೆರಡು ಮಳೆ ಬಂದರೂ ಮತ್ತೆ ವರ್ಷಗಾಲದ ವರೆಗೆ ಅದೇ ಧಾರಾಳವಾಗುತ್ತದೆ. ಇಲ್ಲವಾದರೆ ಮಾತ್ರ ತೆರೆದ ಬಾವಿಯ ನೀರು ಬಳಸುತ್ತಾರೆ.

ತಾರಸಿಯಲ್ಲಿಯೇ ಮಾಡಿದ ಕೆಲಸವೇನೂ?

ಜೋಸೆಫ್ ಮಾಡಿದ್ದೇನು? ತಾರಸಿಯ ಮೇಲ್ಭಾಗದಲ್ಲಿ ೨೪೦೦ ಚದರ ಅಡಿಗಳಷ್ಟು ವಿಸ್ತಾರದ ಜಾಗಕ್ಕೆ ಉತ್ತಮ ತರಗತಿಯ ಷೀಟು ಹೊದೆಸಿ ಮೇಲ್ಚಾವಣಿ ನಿರ್ಮಿಸಿದ್ದಾರೆ. ಇದರ ಮೇಲೆ ಬೀಳುವ ಮಳೆಯ ನೀರೆಲ್ಲವೂ ಕೊಳೆವೆಯೊಂದನ್ನು ಸೇರುತ್ತದೆ. ಕೊಳವೆಯೊಳಗೆ ಮೈಕ್ರೋ ಫಿಲ್ಟರ್ ವ್ಯವಸ್ಥೆಯಿದೆ. ಹೀಗಾಗಿ ನೀರು ಪರಿಶುದ್ಧಗೊಂಡು ಫೈಬರ್ ನಿರ್ಮಿತ ಬ್ಯಾರೆಲ್‌ಗಳಲ್ಲಿ ಸಂಗ್ರಹವಾಗುತ್ತದೆ.

ಇಲ್ಲಿ ೨ ಸಾವಿರ ಲೀಟರ್ ನೀರನ್ನು ಸಂಗ್ರಹಿಸಿಕೊಳ್ಳಬಲ್ಲ ಹನ್ನೊಂದು ಬ್ಯಾರೆಲ್‌ಗಳಿವೆ. ಬಿಳಿ ವರ್ಣದ ಈ ಬ್ಯಾರೆಲ್‌ಗಳು ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಕಂಪೆನಿಗೆ ಹೇಳಿ ತನಗಾಗಿ ಜೋಸೆಫ್ ಇವುಗಳನ್ನು ತಯಾರು ಮಾಡಿಸಿದ್ದಾರೆ. ನೂರು ವರ್ಷಗಳ ಭದ್ರತೆಯೊಂದಿಗೆ ಮನೆಗೆ ಬಂದ ಒಂದೊಂದು ಬ್ಯಾರೆಲ್‌ಗೆ ಹತ್ತು ಸಾವಿರ ರೂಪಾಯಿ ಬೆಲೆ ಕೊಟ್ಟಿದ್ದಾರೆ.

ನಾಲ್ಕು ದಿನ ಸಲೀಸಾಗಿ ಮಳೆ ಸುರಿದರೆ ಎಲ್ಲ ಬ್ಯಾರೆಲ್‌ಗಳೂ ಭರ್ತಿಯಾಗುತ್ತವೆ. ಅಲ್ಲಿ ತುಂಬಿದ ಬಳಿಕ ಕೊಳವೆಗಳ ಮೂಲಕ ಮುಂದೆ ಹರಿಯುವ ನೀರೂ ಹಾಳಾಗುವುದಿಲ್ಲ. ಅಂಗಳದ ಅಡಿಭಾಗದಲ್ಲಿ ಭೂಗತ ತೊಟ್ಟಿಯಿದೆ. ಈ ತೊಟ್ಟಿಯ ಗೋಡೆಗಳು ಮತ್ತು ತಳಕ್ಕೆ ಕಲ್ಲಿನ ಹಲಗೆ ಮುಚ್ಚಿ ಎರಡು ಪದರ ಗಾರೆ ಹಚ್ಚಿಸಿದ್ದಾರೆ. ಹೀಗಾಗಿIMG_2989d ೫೦ ಸಾವಿರ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ತೊಟ್ಟಿ ಹನಿ ನೀರನ್ನೂ ಕುಡಿಯುವುದಿಲ್ಲ. ತೊಟ್ಟಿ ತುಂಬಿದ ಮೇಲೆ ಬರುವ ನೀರು ತೆರೆದ ಬಾವಿಯನ್ನು ಭರ್ತಿ ಮಾಡುತ್ತದೆ. ಅನಂತರದ ನೀರು ೩೬೦ ಅಡಿ ಆಳವಿರುವ ಕೊಳವೆ ಬಾವಿಗೆ ಭರ್ತಿಯಾಗುತ್ತದೆ. ಚಾವಣಿಯಲ್ಲಿರುವ ಬ್ಯಾರೆಲ್‌ಗಳ ನೀರು ಮುಗಿದ ಬಳಿಕ ಭೂಗತ ತೊಟ್ಟಿಯ ನೀರನ್ನು ಮೇಲಕ್ಕೊಯ್ಯಲು ಪಂಪಿನ ವ್ಯವಸ್ಥೆಯಿದೆ.

ಹೀಗೆ ನೀರು ಸಂಗ್ರಹಿಸಿ ಬಾವಿಗೆ ಮರುಪೂರಣ ಮಾಡುವ ಮೊದಲು ೪೦ ಅಡಿ ಆಳದ ಬಾವಿಯಲ್ಲಿ ಬೇಸಗೆ ಬರುವ ಮೊದಲೇ ಹನಿನೀರೂ ಇರುತ್ತಿರಲಿಲ್ಲ. ಈಗ ಒಂದಡಿ ನೀರು ಕೂಡ ಕಡಮೆಯಾಗುವುದಿಲ್ಲ. ಮಾತ್ರವಲ್ಲ ಪರಿಸರದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹತ್ತಾರು ಬಾವಿಗಳು ಕಡುಬೇಸಗೆಯಲ್ಲೂ ತುಂಬಿಕೊಂಡಿರುತ್ತವೆಂದು ತಮ್ಮ ಜಲಸಂಗ್ರಹದ ಪರಿಣಾಮವನ್ನು ಜೋಸೆಫ್ ಹೇಳುತ್ತಾರೆ. ಆರೋಗ್ಯ ಇಲಾಖೆಯವರು ಅವರು ಸಂಗ್ರಹಿಸಿಟ್ಟ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಇದು ಕುಡಿಯಲು ಅತ್ಯಂತ ಪರಿಶುದ್ಧವಾಗಿದೆ ಎಂಬ ಶಿಫಾರಸು ಕೊಟ್ಟಿದ್ದಾರೆ.

ಬ್ಯಾರೆಲ್‌ಗಳಿಗೆ ಭದ್ರವಾದ ಮುಚ್ಚಳಗಳಿರುವ ಕಾರಣ ಧೂಳು, ಹುಳ, ಹಾವಸೆ ಮುಂತಾದ ಯಾವ ಬಾಧೆಗಳೂ ಬರುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಚಾವಣಿ, ಭೂಗತ ತೊಟ್ಟಿ ಎಲ್ಲವನ್ನೂ ಮಾಡಿದ ಕಾರಣ ಜೋಸೆಫ್ ಇದಕ್ಕೆಂದು ಏಳು ಲಕ್ಷ ರೂಪಾಯಿ ಮುಗಿಸಿದ್ದಾರೆ. ಆದರೆ ಸಣ್ಣ ಪ್ರಮಾಣದಲ್ಲಿ ಮಾಡುವುದಾದರೆ ಖರ್ಚು ತೀರ ಕಡಮೆ ಮಾಡಿ ಉತ್ತಮವಾಗಿ ಅಳವಡಿಸಬಹುದೆಂದು ಅವರೆನ್ನುತ್ತಾರೆ.

ಚಿತ್ರ-ಲೇಖನ: ಸುನಿಲ್ ಪುತ್ತೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*