ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆಗಾಗಿ ವರುಣನ ಬೇಡುವ ಉತ್ತರ ಕರ್ನಾಟಕದ ಹಳ್ಳಿಗರು

ಮಳೆ ಜತೆಗೆ ರೈತನ ಒಡನಾಟ ತೀರಾ ಹತ್ತಿರದಲ್ಲಿಯೇ ಇದೆ. ಮಳೆಯನ್ನೇ ನಂಬಿಕೊಂಡು ಇಳಿಯುವ ರೈತರಂತೂ ಬಹಳಷ್ಟು ಮಂದಿ ಇದ್ದಾರೆ. ಮುಖ್ಯವಾಗಿ ಕೊಪ್ಪಳ, ರಾಯಚೂರು, ಗದಗ, ಬಾಗಲಕೋಟೆ, ಬಳ್ಳಾರಿ, ಬೀದರ್, ಕಲಬುರ್ಗಿ ಜಿಲ್ಲೆಯ ಕೃಷಿಕರು ವಿವಿಧ ಸಾಂಪ್ರದಾಯಿಕ ಪದ್ಧತಿ ಆಚರಿಸುವ ಮೂಲಕ ಮುಂಗಾರು ಬಿತ್ತನೆ ಮಾಡುತ್ತಾರೆ. ಬಿತ್ತನೆಗೂ ಮುಂಚೆ ಇಲ್ಲಿಯ ರೈತರು ದೇವತೆಗೆ ಉಡಿ ತುಂಬುವುದು, ಸೀಮಾ ದುರ್ಗಮ್ಮ ದೇವರನ್ನು ಊರ ಸೀಮಾ ದಾಟಿ ಬಿಟ್ಟುಬರುವುದು, ೪- ೬ ವಾರಗಳು ಯಾವ ರೈತರು ತಮ್ಮ ಜಮೀನಿನಲ್ಲಿ ನೇಗಿಲ ಕೆಲಸ ಮಾಡುವುದಿಲ್ಲ, ಮುಂಗಾರು ಮಳೆ ಬಿದ್ದಾಗ ಬಿತ್ತನೆಗೆ ಸಾಧ್ಯತೆಯ ಸಮಯದಲ್ಲಿ ಕೂರಿಗೆ ಪೂಜೆ, ಊರಿನ ಎಲ್ಲಾ ದೇವಸ್ಥಾನದ ದೇವರಿಗೆ ಬಿತ್ತನೆ ಬೀಜಗಳಾದ ಹೆಸರು, ಸಜ್ಜೆ, ನವಣಿ, ಎಳ್ಳು, ತೊಗರಿ, ಜೋಳದ ಬೀಜಗಳಲ್ಲಿ  ಪೂಜೆ ಮಾಡುತ್ತಾರೆ.

ಮಳೆಯ ಹಬ್ಬದಾಟ

krishi habbaಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ  ರೈತರು ಪ್ರತಿ ವರ್ಷದಂತೆ ಮುಂಗಾರು – ಹಿಂಗಾರು ಮಳೆ ಮತ್ತು ಬೆಳೆ ಫಸಲು ಉತ್ತಮ ರೀತಿಯಲ್ಲಿ ನಮಗೆ ಆ ದೇವರು ನೀಡಬೇಕು ಎಂಬ ನಂಬಿಕೆಯಿಂದ, ಬಿತ್ತನೆಗೂ ಮುಂಚೆ ೪ ಅಥವಾ ೬ ವಾರಗಳನ್ನು ಮಾಡುತ್ತಾರೆ. ರೈತರು ತಮ್ಮ ಜಮೀನಿನಲ್ಲಿ ನೇಗಿಲು ಕೆಲಸ ಮಾಡದೆ ಹಾಗೂ ಎತ್ತು ಜಾನುವಾರುಗಳನ್ನು ಪೂಜೆ ಮಾಡುತ್ತಾರೆ. ಗ್ರಾಮದ ರೈತರು ಸೇರಿ, ನಾಲ್ಕು ಸೋಮವಾರ ಇಲ್ಲವೇ ಆರು ಶುಕ್ರವಾರದಂತೆ ನಿರ್ಧಾರ ಮಾಡುತ್ತಾರೆ. ಆ ದಿನ ಸಿಹಿ ಅಡುಗೆ ಮಾಡಿ, ದನ ಕರುಗಳನ್ನು ಸ್ವಚ್ಛತೆ ಮಾಡಿ ಪೂಜಿಸುತ್ತಾರೆ. ಇದನ್ನು ಕೃಷಿ ವಾರದ ಹಬ್ಬ ಎಂದೇ ಕರೆಯಲಾಗುತ್ತದೆ.

ತಾವೇ ನಿರ್ಧಾರ ಮಾಡಿರುವಂತೆ ೬ ಶುಕ್ರವಾರ ಆಚರಿಸಿದ ನಂತರ ಗ್ರಾಮದ ದ್ಯಾಮವ್ವ ದುರಗಮ್ಮ ದೇವತೆಗಳಿಗೆ ಹೊಸ ಸೀರೆ ಬಳೆ ಜೊತೆ ರೈತರು ಉಡಿಯಕ್ಕಿ ತುಂಬುತ್ತಾರೆ. ದೇವಸ್ಥಾನದ ಗೋಪುರದ ಕಳಸವನ್ನು ಗ್ರಾಮದ ಒಳಗೆ ಕಳಸ ಮತ್ತು ಕುಂಬಗಳ ಮೆರವಣಿಗೆಯೊಂದಿಗೆ ದೇವತೆಗಳಿಗೆ ಪೂಜೆ ನೆರವೇರಿಸುತ್ತಾರೆ. ವಾರದ ಹಬ್ಬದ ದಿನಗಳು ಮುಗಿದ ನಂತರವೇ ರೈತರಿಗೆ ಬಿತ್ತನೆಗೇ ಚಾಲನೆ.

ಗ್ರಾಮದ ಕಂದಾಯ ಭೂಮಿಯ ವ್ಯಾಪ್ತಿಯ ಕೊನೆ ಸ್ಥಳಕ್ಕೆ ಸೀಮಾ ಎನ್ನುವರು. ಸರ್ಕಾರದ ಕಂದಾಯ ನಕಾಶೆ ನೋಡಿದರೆ ಕಾಣುವ ಆ ಗ್ರಾಮದ ನಾಲ್ಕು ದಿಕ್ಕಿನ  ಒಟ್ಟು ಭೂಮಿಯ ಕೊನೆಯ ಬದುವಿಗೆ ಪ್ರತಿ ವರ್ಷದ ಮುಂಗಾರು ಅವಧಿಯಲ್ಲಿ ಮೆರವಣಿಗೆ ಮೂಲಕ ಪೂಜಿಸುವ ದೇವತೆಯೆ ಸೀಮಾ ದೇವತೆ. ಒಂದು ಸಣ್ಣಚಕ್ಕಡಿ ಅದರಲ್ಲಿ ದೇವತೆಯ ಫೊಟೋ ಮತ್ತು ನಿಂಬೆಹಣ್ಣು, ಅಕ್ಕಿ, ತೆಂಗಿನಕಾಯಿ, ಸ್ವಲ್ಪ ಹಣ, ವಿಭೂತಿ, ಹಸಿರು ಬಳೆ, ಕುಂಕುಮ  ಆ ಚಕ್ಕಡಿಯಲ್ಲಿ ಇಟ್ಟು ಗ್ರಾಮದ ರೈತರು ಮೆರವಣಿಗೆ ಮೂಲಕ  ಸೀಮಾ ಸ್ಥಳದಲ್ಲಿ ಬಿಟ್ಟು ಬರುತ್ತಾರೆ. ಆ ಸ್ಥಳದಿಂದ ಪಕ್ಕದ ಗ್ರಾಮದ ರೈತರು ಇದೆ ಚಕ್ಕಡಿಯ ದೇವತೆಯನ್ನು ರೈತರು ತಮ್ಮ ಗ್ರಾಮದ ಸೀಮಾ ಸ್ಥಳಕ್ಕೆ ಬಿಟ್ಟು ಬರುತ್ತಾರೆ. ಹೀಗೆ ಒಂದು ಗ್ರಾಮದಿಂದ ಇನ್ನೊಂದು ಗ್ರಾಮದ ಸೀಮಾಬದು ದಾಟಿಸುವ ಈ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ.

ದೇವರಿಗೆ ಕಾಳು ನೈವೇದ್ಯ

ಮುಂಗಾರು ಹಂಗಾಮು ಆರಂಭದ ಮುಂಚೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಬಿತ್ತನೆ ಮಾಡುವ ಬೀಜಗಳನ್ನು ನೈವೇದ್ಯ ಮಾಡುತ್ತಾರೆ. ಈ ಭಾಗದಲ್ಲಿ ದುರ್ಗಾ ದೇವತೆ, ಶರಣಬಸವೇಶ್ವರ ದೇವಸ್ಥಾನ, ಕೆಂಚಮ್ಮ ದೇವಸ್ಥಾನ, ಮಾರುತಿ ದೇವಸ್ಥಾನ, ಈಶ್ವರ ದೇವಸ್ಥಾನ, ಬೀರಲಿಂಗೇಶ್ವರ, ಹಾದಿ ಬಸವೇಶ್ವರ, ಮೌನೇಶ್ವರ, ಮಸೂದೆ ದೇವಸ್ಥಾನಗಳಿಗೆ ರೈತರು ಮೂಜೆ ಜೊತೆ ವಿವಿಧ ಬೀಜಗಳನ್ನು ನೈವೇದ್ಯ ಮಾಡಿದ ನಂತರ, ತಮ್ಮ ತಮ್ಮ ಹೊಲಗಳಿಗೆ ಹೋಗಿ ಬಿತ್ತನೆ ಮಾಡುತ್ತಾರೆ.  ಹೀಗೆ ಉತ್ತರ ಕರ್ನಾಟಕದ ರೈತರು ವಿವಿಧ ಸಂಪ್ರದಾಯಿಕ ಆಚರಣೆಗಳನ್ನು ತಾವು ಆಚರಿಸುವ ಮೂಲಕ ಕೃಷಿ ನಂಬಿ ಬದುಕುವ ರೈತಾಪಿ ಜನಕ್ಕೆ ದೇವರು ಮಳೆ ಬೆಳೆ ನೀಡುವ ಇಚ್ಛೆ ಆ ದೇವರದು ಎಂಬ ನಂಬಿದ್ದೇವೆ ಎನ್ನುತ್ತಾರೆ ರೈತರು.

 ಸಂಗ್ರಹ ಮಾಹಿತಿ: ಸುನಿಲ್ ಪುತ್ತೂರ್

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*