ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಾವಿನ ಗಿಡಗಳಿಗೆ ಮಿನರಲ್ ನೀರು?

ನಾನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ರಂಗಪ್ಪನವರ ಹೊಲದಲ್ಲಿ ಒಂದು ಅಚ್ಚರಿ ಕಂಡೆ. ಅವರು ಮತ್ತು ಅವರ ಮಗ ದಯಾನಂದ ಜಮೀನಿನಲ್ಲಿ ಎಲ್ಲ ಗಿಡಗಳ ಬಳಿಯೂ ಒಂದೊಂದು ಮಿನರಲ್ ವಾಟರ್ ಬಾಟಲಿಗಳನ್ನು ಇಡುತ್ತಿದ್ದರು.

DSC07565‘ಕುಡಿಯೋಕೇ ನೀರಿಲ್ಲ ಅಂತದ್ದರಲ್ಲಿ  ಗಿಡಗಳಿಗೆ ಮಿನರಲ್ ವಾಟರ್ ಹಾಕ್ತಾ ಇದ್ದಾರಲ್ಲಾ’ ಅಂತ ಯೋಚನೆ ಆಯ್ತು. ಆದರೆ ಅವರು ಮಿನರಲ್ ವಾಟರ್ ಬಾಟಲ್‌ಗಳನ್ನು ಬಳಸಿ ಹನಿ ನೀರಾವರಿ ಕೈಗೊಳ್ಳುತ್ತಿದ್ದರು. ಹೆಚ್ಚಿನ ಮಾಹಿತಿ ಕೇಳಿದಾಗ ರಂಗಪ್ಪನವರು ಕಳೆದ ಬೇಸಿಗೆಯಲ್ಲಿ ಈ ವಿಧಾನ ಬಳಸಿ ನೀರು, ಶ್ರಮ ಹಾಗೂ ಹಣ ಉಳಿಸಿದ್ದು ತಿಳಿಯಿತು.

ರಂಗಪ್ಪನವರಿಗೆ ಬಾವಿಯೂ ಇಲ್ಲ, ಕೊಳವೆಬಾವಿಯೂ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಸಹ ಮಾವು, ಸಪೋಟ ಬೆಳೆಸಬೇಕೆಂಬ ಹಂಬಲ ಅವರದು. ಅವರ ಹಂಬಲಕ್ಕೆ ಚಿಕ್ಕಮಗಳೂರಿನ ಭೂಮಿ ಸ್ವಯಂ ಸೇವಾ ಸಂಸ್ಥೆಯ ಬೆಂಬಲವೂ ದೊರೆಯಿತು. ಭೂಮಿ ಸಂಸ್ಥೆಯು ನಬಾರ್ಡ್ ನೆರವಿನಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗೆ ರಂಗಪ್ಪನವರೂ ಸೇರ್ಪಡೆಗೊಂಡರು. ಹಾಗಾಗಿ, ತಲಾ ೪೦ ಮಾವು ಮತ್ತು ಸಪೋಟ ಗಿಡಗಳನ್ನು ವಿತರಿಸಲಾಯಿತು. ಆಗಾಗ ಮಳೆ ಬರುತ್ತಿದ್ದುದರಿಂದ, ಗಿಡಗಳಿಗೆ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಬೇಸಿಗೆ ಶುರುವಾದಾಗ ಚಿಂತೆ ಹೆಗಲೇರಿತು. ಗಿಡಗಳು ಸಣ್ಣವಾದ್ದರಿಂದ ಕನಿಷ್ಟ ವಾರಕ್ಕೊಮ್ಮೆಯಾದರೂ ನೀರು ಹಾಕಬೇಕಾದ ಪರಿಸ್ಥಿತಿ. ಸುಮಾರು ೨೦೦ ಮೀಟರ್ ದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಹಾಕುತ್ತಿದ್ದರು. ಮನೆ ಮಂದಿಗೆಲ್ಲಾ ಇದೇ ಕೆಲಸ. ಬೇಸಿಗೆಯ ಒಂದೆರಡು ತಿಂಗಳು ಇದೇ ರೀತಿ ನೀರು ಹಾಕಿ ಗಿಡಗಳನ್ನು ಕಾಪಾಡಿದರು. ಆದರೆ ಬಿಸಿಲಿನ ಬೇಗೆ ಹೆಚ್ಚಾಗಿ, ನೀರಿನ ಲಭ್ಯತೆಯೂ ಕಡಿಮೆಯಾಯಿತು. ಗಿಡಗಳೂ ಬಾಡತೊಡಗಿದವು.

ಈ ಸಂದರ್ಭದಲ್ಲಿಯೇ, ಭೂಮಿ ಸಂಸ್ಥೆ ಆಯೋಜಿಸಿದ್ದ ಕೃಷಿಪ್ರವಾಸದಲ್ಲಿ ಮಣ್ಣಿನ ಮಡಕೆ ಬಳಸಿ ಹನಿ ನೀರಾವರಿ ಮಾಡುವ ಪದ್ಧತಿಯ ಬಗ್ಗೆ ಮಾಹಿತಿ ಲಭ್ಯವಾಯಿತು. ಆದರೆ, ಅದನ್ನು ಅಳವಡಿಸಲು ಒಂದು ಸಮಸ್ಯೆ ಇತ್ತು. ಇವರ ಜಮೀನು ಮನೆಯಿಂದ ದೂರದ ಕಾಡಿನ ಪಕ್ಕದಲ್ಲಿದೆ. ಅಲ್ಲಿ ಮಡಕೆಗಳನ್ನು ಯಾರಾದರೂ ಕದಿಯುವ ಸಂಭವವಿತ್ತು. ಜಮೀನಿಗೆ ಬೇಲಿ ಇಲ್ಲದ್ದರಿಂದ, ದನ-ಕರುಗಳು ಅಡ್ಡಾಡಿ ಒಡೆದು ಹಾಕುವುದೂ ಸಾಧ್ಯ. ಅಲ್ಲದೆ ಮಡಕೆಗಳು ಸ್ವಲ್ಪ ದುಬಾರಿಯೂ ಆಗಿತ್ತು.

DSC07568ಮಡಕೆ ಬದಲು ಎರಡು ಲೀಟರ್ ಅಳತೆಯ ಪ್ಲಾಸ್ಟಿಕ್ ಬಾಟಲ್ ಬಳಸುವಂತೆ ಕೆಲವರಿಂದ ಸಲಹೆ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ರಂಗಪ್ಪ ಮತ್ತು ಅವರ ಮಗ ದಯಾನಂದ, ಪೇಟೆಯಿಂದ ಮೂರು ರುಪಾಯಿಗೊಂದರಂತೆ ಬಳಸಿದ ೮೦ ಮಿನರಲ್ ವಾಟರ್ ಬಾಟಲುಗಳನ್ನು ಕೊಂಡು ತಂದರು. ಬಾಟಲುಗಳ ಕೆಳಭಾಗದ ಪಾರ್ಶ್ವದಲ್ಲಿ ಚಿಕ್ಕ ರಂಧ್ರ ಮಾಡಿ ಗೋಣಿ ದಾರವನ್ನು ರಂಧ್ರಕ್ಕೆ ತೂರಿಸಿದರು. ಇದು ನೀರು ಹನಿ-ಹನಿಯಾಗಿ ನಿಧಾನವಾಗಿ ಬೀಳಲು ಸಹಕಾರಿ. ಪ್ರತಿ ಗಿಡದ ಬುಡಕ್ಕೆ ಹೆಬ್ಬೆರಳು ಗಾತ್ರದ ಕಡ್ಡಿಗಳನ್ನು ನೆಟ್ಟು, ಬಾಟಲಿಯನ್ನು ಕಡ್ಡಿಗಳಿಗೆ ಸೇರಿಸಿ ಕಟ್ಟಲಾಯಿತು. ಹೀಗೆ ಮಾಡಿದ್ದರಿಂದ, ಬಾಟಲನ್ನು ಯಾರಾದರೂ ಸುಲಭವಾಗಿ ಎತ್ತಿಕೊಂಡು ಹೋಗುವುದನ್ನು ತಪ್ಪಿಸಲಾಯಿತು.

ಬಾಟಲಿನ ನೀರು ಪೂರ್ತಿ ಜಿನುಗಲು ಆರೆಂಟು ದಿವಸವಾಗುತ್ತಿತ್ತು. ಮೊದಲ ವಾರಕ್ಕೆ ಒಂದು ಬಿಂದಿಗೆ -ಅಂದರೆ ಸುಮಾರು ೫ ಲೀಟರ್ ನೀರು ಹಾಕಬೇಕಾಗಿತ್ತು. ಬಾಟಲಿ ಇಟ್ಟ ಮೇಲೆ ಎರಡೇ ಲೀಟರ್ ಸಾಕಾಯಿತು ಎನ್ನುತ್ತಾರೆ ದಯಾನಂದ್. ಅಲ್ಲದೆ, ಮೊದಲು ದಿನಕ್ಕೆ ಇಪ್ಪತ್ತು ಗಿಡಗಳಿಗೆ ನೀರು ಹಾಕುತ್ತಿದ್ದರು. ೮೦ ಗಿಡಗಳಿಗೂ ಒಂದು ಸಲ ಹಾಕಲು ನಾಲ್ಕು ದಿನ ಬೇಕಿತ್ತು. ಈಗ, ಒಂದೇ ದಿನ ಅಷ್ಟೂ ಬಾಟಲುಗಳಿಗೆ ತುಂಬಿಸಿದರೆ ವಾರದವರೆಗೂ ಚಿಂತೆಯಿಲ್ಲ. ಇವರೇ ಗಮನಿಸಿದಂತೆ ಗಿಡಗಳು ಹಸುರಾಗಿ ಚೆನ್ನಾಗಿವೆ. ‘ಇವರ ಜೊತೆಗೇ ಮಾವು, ಸಪೋಟ ಹಾಕಿದ ಕೆಲವರು ನೀರಿನ ಅಲಭ್ಯತೆಯಿಂದಾಗಿ ಒಣಗಿಸಿದ್ದಾರೆ, ಆದರೆ ರಂಗಪ್ಪ ಛಲದಿಂದ ಹೊಸ ವಿಧಾನ ಬಳಸಿ, ಗಿಡಗಳನ್ನು ಉಳಿಸಿರುವುದು ಸಂತೋಷದ ವಿಚಾರ’ ಎನ್ನುತ್ತಾರೆ ಭೂಮಿ ಸಂಸ್ಥೆಯ ರವಿ.

ಇತ್ತೀಚಿನ ವರ್ಷಗಳಲ್ಲಿ, ಹಲವಾರು ಸಂಸ್ಥೆಗಳು ಹಾಗೂ ಸರ್ಕಾರದ ಯೋಜನೆಗಳು ರೈತರಿಗೆ ಹಾಗೂ ಆಸಕ್ತರಿಗೆ ತೋಟಗಾರಿಕೆ ಹಾಗೂ ಅರಣ್ಯ ಸಸಿಗಳನ್ನು ನೀಡುತ್ತಿದೆ; ರೈತರಿಗೆ ಗಿಡ ಪಡೆದು ನೆಡುವಾಗ ಇರುವ ಉತ್ಸಾಹ ನಂತರ ಮಾಯವಾಗಿರುತ್ತದೆ. ಫಲಿತಾಂಶ, ಗಿಡಗಳು ಒಣಗುತ್ತವೆ. ಅದಕ್ಕೆ ಕಾರಣ ಕೇಳಿದರೆ ‘ನೀರಿಲ್ಲ’ ಎಂಬ ಸಿದ್ಧ ಉತ್ತರ ಕೊಡುತ್ತಾರೆ.

ಆದರೆ, ಗಿಡ ಉಳಿಸಬೇಕೆಂಬ ದಿಟ್ಟ ನಿರ್ಧಾರ ಮಾಡಿದರೆ, ನೀರು ದೊರೆಯುವ ಅನೇಕ ಉಪಾಯಗಳು ಸಿಗುತ್ತವೆ. ಅದಕ್ಕೆ ಮೇಲಿನ ಉದಾಹರಣೆಯೇ ಸಾಕ್ಷಿ.

ಚಿತ್ರ-ಲೇಖನ : ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*