ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬರದ ನಾಡನ್ನು ಜಲದ ನಾಡಾಗಿಸಿದ ಭಗೀರಥ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ದಿನ ದಿನವು ಕಾದು ಬಾಯಾರಿ ಬೆಂದ ಬೆಂಗದಿಯ ತಾಪದಲ್ಲಿ

  ರಾಷ್ಟಕವಿ ಜಿ.ಎಸ್ ಶಿವರುದ್ರಪ್ಪ

ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ಮತ್ತು ಶೇ.೭೦ರಷ್ಟು ಜನರು ಕೃಷಿ ಅವಲಂಬಿತ ರಾಷ್ಟ್ರದಲ್ಲಿ ಇದರ ಪರಿಣಾಮದ ಗಂಭೀರತೆಯ ಬಗೆಗೆ ನಮಗೆ ನಿಮಗೆಲ್ಲ ಅರಿವಿದೆ. ಹಾಗಾದರೆ ಸಮುದಾಯ ಮತ್ತು ವೈಯಕ್ತಿಕ ಮಟ್ಟದಲ್ಲಿ ನೀರಿನ ಬವಣೆ ನೀಗಿಸಿ, ನಾಳಿನ ನೀರ ನೆಮ್ಮದಿಯನ್ನು ಕಾಣುವ ಪರಿ ಹೇಗೆ? ಅಂತರ್ಜಲದ ಮಟ್ಟವನ್ನು ಕಾಪಾಡಿ ಭೂಮಿಗೆ ತಂಪೆರೆಯುವ ಬಗೆಯೊಂದಿದೆ. ಅದನ್ನು ತಮ್ಮ ಜಲ ಸಾಕ್ಷರತೆಯ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಕ್ಕೆ ಪಸರಿಸುವ ಕೆಲಸವನ್ನು ಮಾಡಿದವರು ಬಯಲುಸೀಮೆಯ ಬತ್ತಿದ ಬಾವಿಗಳ ಭಗೀರಥ ಶ್ರೀ ಅಯ್ಯಪ್ಪ ಮಸಗಿಯವರು

ganapati photo1ಇವರು ಜನಿಸಿದ್ದು ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕದ ಗದಗ ಜಿಲ್ಲೆಯ ನಾಗರಾಳ ಎಂಬ ಪುಟ್ಟ ಊರಿನ ಅವಿಭಕ್ತ ಕೃಷಿ ಕುಟುಂಬದಲ್ಲಿ. ಇವರಿಗೆ ಬಾಲ್ಯದಿಂದಲೇ ನೀರಿನ ಕೊರತೆ ಮತ್ತದರ ಗಂಭೀರತೆಯ ಬಗೆಗೆ ಅರಿವಿತ್ತು. ಊರನ್ನು ನೀರ ನೆಮ್ಮದಿಯತ್ತ  ಕೊಂಡೊಯ್ಯುವ ಮಾರ್ಗದ ಚಿಂತೆ ಕಾಡುತ್ತಿತ್ತು. ಅಲ್ಲಿ ದೊರೆಯುತ್ತಿದ್ದುದು ಬಹುತೇಕ ಉಪ್ಪು ನೀರು. ಆ ನೀರನ್ನು ಬೆಳಗಿನ ಜಾವ ಮೂರು ಗಂಟೆಗೆ ತಾಯಿಯೊಂದಿಗೆ ಬಹುದೂರ ಹೋಗಿ ತರುವ ಚಿತ್ರಣ ಅವರ ಮನಕಲುಕಿತ್ತು.

ಇಷ್ಟೆಲ್ಲ ಕಷ್ಟಗಳ ನಡುವೆ ಐಟಿಐ ಮುಗಿಸಿ, ಬೆಂಗಳೂರಿನ ಬಿ.ಇ.ಎಂ.ಎಲ್ ಕಂಪನಿಯಲ್ಲಿ ಪ್ರಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಸೇರಿದ್ದು ಎಲ್&ಟಿ ಕಂಪನಿಯನ್ನು. ಓದಿನ ದಾಹ ನೀಗಿಸಿಕೊಳ್ಳುವುದಕ್ಕಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನೂ ಪಡೆದರು. ಇವೆಲ್ಲದರ ನಡುವೆಯೂ ಊರಿನ ಸ್ಥಿತಿ ದಿನೇದಿನೆ ಮನಸ್ಸನ್ನು ಬಲವಾಗಿ ಕಾಡುತ್ತಿತ್ತು. ಈ ಕಾರಣಕ್ಕಾಗಿ ನೌಕರಿಗೆ ಗುಡ್ ಬೈ ಹೇಳಿ, ಊರನ್ನು ಜಲ-ನೆಮ್ಮದಿಯತ್ತ ಒಯ್ಯಲು ಪುನಃ ಊರಿಗೆ ಮರಳಿದರು.

ಒಳ್ಳೆಯ ನೌಕರಿ ಬಿಟ್ಟು ಬಂದ ಎಂದು ಮನನೊಂದು ಗಂಡನ ಮೇಲೆ ಕೋಪಗೊಂಡ ಮಡದಿಯ ಮನಸ್ಥಿತಿ ಅವರಿಗೆ ಅರ್ಥವಾದರೂ, ಊರಲ್ಲಿ ನೆಲೆಯೂರಿದ ಜಲಕ್ಷಾಮದಿಂದ ನಲುಗಿದವರ ಬವಣೆ ನೀಗಿಸುವ ಮನಸ್ಸನ್ನು ಬದಲಾಯಿಸಲಿಲ್ಲ. ಊರಲ್ಲೇ ಜಮೀನು ಖರೀದಿಸಿ, ಮಳೆ ನೀರಿಂಗಿಸುವ ಕೆಲಸ ಶುರು ಮಾಡಿದರು. ತಮ್ಮ ಜಮೀನಿನಲ್ಲೇ ೪೦೦ ಅಡಿ ಉದ್ದ ೪೦ ಅಡಿ ಅಗಲದ ಮತ್ತು ೬ ಅಡಿ ಆಳದ ಕೃಷಿ ಹೊಂಡದ ನಿರ್ಮಿಸಿದರು. ಆ ಹೊಂಡದಲ್ಲಿ ಮಳೆ ನೀರನ್ನು ನಿಲ್ಲಿಸಿದರು. ಅದೇ ಹೊಂಡದ ಮತ್ತೊಂದು ಮೂಲೆಯಲ್ಲಿ ಸೋಸು ಗುಂಡಿಯನ್ನು ತೋಡಿ ಹೊಂಡದ ನೀರು ಸೋಸಿ ಹೋಗುವಂತೆ ಮಾಡಿದರು. ಬರದ ನಾಡಿನಲ್ಲಿ ಮಲೆನಾಡ ಅಡಿಕೆ, ತೆಂಗು ಬಾಳೆ, ಕಾಫಿ ಮೊದಲಾದ ಬೆಳೆ ಬೆಳೆದು ಬರದ ನಾಡನ್ನು ಫಲದ ನಾಡಾಗಿಸುವ ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಕಂಡರು. ನೀರಿಂಗಿಸುವ ಮೊದಲ ಕಾಯಕಕ್ಕೆ ಇದೇ ಮೊದಲ ಮುನ್ನುಡಿಯಾಯಿತು.

ganapati photo2ಕೃಷಿಕರಿಂದ ಕೃಷಿಕರಿಗಾಗಿ ಕೃಷಿಕರಿಗೋಸ್ಕರ ಶುರುವಾದ ಜಲಕ್ರಾಂತಿ ಒಂದು ಆಂದೋಲನವಾಗಿ ಮಾರ್ಪಟ್ಟಿದೆ. ನೀರಿನ ಬವಣೆಯಿರುವ ಕೃಷಿಕರ ಜಮೀನಿನಲ್ಲಿ ವಡ್ಡು, ಹೊಂಡಗಳು, ನಾಲಾ ಬಂದರುಗಳು ನಿರ್ಮಾಣಗೊಳ್ಳುವಂತೆ ಮಾಡಿದ್ದಾರೆ. ಇವರ ಪ್ರಕಾರ ವಡ್ಡಿಲ್ಲದ ಭೂಮಿ ಗೊಡ್ಡೆಮ್ಮೆ ಇದ್ದಂv. ಸರಕಾರದ ನೆರವಿಲ್ಲದೆ ಜನರ ಮುಂದಾಳತ್ವದಲ್ಲಿ ಕೆರೆಗಳ ನಿರ್ಮಾಣ ಮಾಡಿ ಉತ್ತರ ಕರ್ನಾಟಕದ ಜನರ ಜಲದ ಬವಣೆಯನ್ನು ನೀಗಿಸಿದ್ದಾರೆ. ನೀಗಿಸುತ್ತಿದ್ದಾರೆ.

“ಪ್ರತಿ ಹೆಕ್ಟೇರ್ ಭೂಮಿಗೆ ಕನಿಷ್ಟ ಒಂದು ಗುಂಟೆಯಷ್ಟು ಕೆರೆ ಇರಬೇಕು. ಜನರ ಮತ್ತು ಭೂಮಿಯ ಜಲದಾಹ ನೀಗಿಸಲು ಇರುವ ಒಂದೇ ಒಂದು ಮಾರ್ಗ ನೀರಿಂಗಿಸುವಿಕೆ. ಅದನ್ನು ಸ್ವಯಂಪ್ರೇರಣೆಯಿಂದ ಹಳ್ಳಿ ನಗರಗಳೆನ್ನದೆ ಎಲ್ಲರೂ ಕೈಜೋಡಿಸಿದರೆ ಮಾತ್ರ ಜಲಸಾಕ್ಷರತೆ ಯಶಸ್ವಿಯಾಗುತ್ತದೆ” ಎನ್ನುತ್ತಾರೆ ಮಸಗಿಯವರು. ನೀರಿನ ಹಾಹಾಕಾರ ನೀಗಿಸಲು ಜನರ ಸಹಕಾರ ಬೇಕು. ಸಂಗ್ರಹಿಸಿದರೆ ಮಳೆಯ ನೀರು ಹರಿಸಬೇಕಿಲ್ಲ ರೈಲು,ಟ್ಯಾಂಕರ್‌ನಿಂದ ನೀರು. ಹೊತ್ತು ತರಬೇಕಿಲ್ಲ, ಹರದಾರಿಯಿಂದ ನೀರು, ಒತ್ತಬೇಕಿಲ್ಲ ಹ್ಯಾಂಡ್‌ಪಂಪ್ ಬೋರು. ಹಾಕಬೇಕಿಲ್ಲ ಸಾವಿರಾರು ಅಡಿ ಬೋರು ಸಬ್‌ಮರ್ಸಿಬಲ್, ಕಟ್ಟಬೇಕಿಲ್ಲ ನೀರ ಕರೆಂಟ್ ಬಿಲ್. ಎನ್ನುವುದು ಮಸಗಿಯವರ ಮನವಿ.

ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿಯೂ ಇವರ ಜಲ ದಾಹದ ಇಂಗಿಸುವಿಕೆ ನಡೆದಿದೆ. ಚಿಕ್ಕ ಮನೆಯಿಂದ ಹಿಡಿದು ಬೃಹತ್ ಗಾತ್ರದ  ನಗರದ ಪ್ರತಿಷ್ಠಿತ  ಬಹುಮಹಡಿ ಕಟ್ಟಡಗಳೂ ನೀರಿಂಗಿಸುವಿಕೆಗೆ ಕೈ ಜೋಡಿಸಿವೆ. ಅಯ್ಯಪ್ಪ ಮಸಗಿಯವರ ಜಲಸಾಕ್ಷರತೆಗೆ ಮನ್ನಣೆ ನೀಡಿವೆ. ಪ್ರತಿಷ್ಠಿತ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳೂ ಇವರ ನೀರಿನ ಮರುಪೂರಣ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಅಳವಡಿಸಿಕೊಂಡಿವೆ.

ಇವರು ಸರಿಸುಮಾರು ೫೦೦ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ, ೩೦೦೦ಕ್ಕೂ ಹೆಚ್ಚು ಜಲಸಾಕ್ಷರತಾ ಶಿಬಿರಗಳು  ಹಾಗೂ ಆಂದೋಲನಗಳು, ೩೦೦೦ಕ್ಕೂ ಅಧಿಕ ಮನೆಗಳಿಗೆ ನೀರಿಂಗಿಸುವ ಪದ್ದತಿಯ ಮಾರ್ಗ ಸೂಚಿಸುವಿಕೆ, ೮೦ ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳ ರೀಚಾರ್ಜ್, ೭೦ಕ್ಕೂ ಹೆಚ್ಚಿನ ಸಣ್ಣ ಮತ್ತು  ಬೃಹತ್ ಕೈಗಾರಿಕೆಗಳಿಗೆ ನೀರಿಂಗಿಸುವಿಕೆಯ ಅನುಷ್ಠಾನ, ೫೦ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗೆ ನೀರಿಂಗಿಸುವಿಕೆ, ೨೦೦ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಿಗೆ ಕಡಿಮೆ ಖರ್ಚಿನಲ್ಲಿ ನೀರಿಂಗಿಸುವಿಕೆಯ ಮಾರ್ಗ ತೋರಿದ್ದಾರೆ. ಹೀಗೆ ಅಂದಾಜು ೨೦೦ ಕೋಟಿಯ ಮೌಲ್ಯದಷ್ಟು ಯೋಜನೆಗಳನ್ನು ಇವರು ಪೂರ್ಣಗೊಳಿಸಿದ್ದಾರೆ. ೬೭೭೭ ಕೋಟಿ ಲೀಟರ್ ನೀರನ್ನು ನೀರಿಂಗಿಸಿ, ಅದರಿಂದ ೪೦,೦೦೦ ಗಿಡಮರಗಳನ್ನು ಬೆಳೆಸಿದ ಜಲಯೋಧ ಅಯ್ಯಪ್ಪ ಮಸಗಿ.

ಮಸಗಿಯವರ ಈ ಪ್ರಯತ್ನವನ್ನು ಕಂಡು ಆಕ್ಸಂ ಇಂಡಿಯಾ, ದೇಶಪಾಂಡೆ ಪ್ರತಿಷ್ಠಾನ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ಮತ್ತು ಅನುದಾನ ನೀಡಿವೆ. ಇವರ ಜಲಸಾಕ್ಷರತೆ ನಾಡಿನ ಎಲ್ಲೆಡೆ ಪಸರಿಸುವಂತೆ ಮಾಡಿವೆ. ಆಶೋಕಾದವರು ಫೇಲೊಶಿಪ್ ಗೌರವ ನೀಡಿದ್ದಾರೆ. ಇದಲ್ಲದೆ ಹತ್ತು  ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ೨೦೧೨ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಯೂನೀಕ್ ವಲ್ಡ್ ರೆಕಾರ್ಡ್ಸ್ ಪುಸ್ತಕಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಕೆರೆಗಳ ನಿರ್ಮಾಣ ಮತ್ತು ಕೊಳವೆ ಬಾವಿ ಮರುಪೂರಣ ದಾಖಲೆ ನಮೂದಾಗಿದೆ.

ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಾಳಿನ ಪೀಳಿಗೆಗಾಗಿ ಜಲಸಾಕ್ಷರತೆ ಮೂಡಿಸುವ ಮೂಲಕ ಮನೆ ಮಾತಾಗಿರುವ ಶ್ರೀ ಅಯ್ಯಪ್ಪ ಮಸಗಿಯವರು ವಾಟರ್ ಲಿಟ್ರಸಿ ಪ್ರತಿಷ್ಠಾನದ ಮೂಲಕ ತಮ್ಮ  ಜಲಾಂದೋಲನವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ “ತಾವು ಕಂಡ ಕಷ್ಟ ಇತರರಿಗೆ ಬರಬಾರದು. ನೀರಿದ್ದರೆ ನಾಡು. ನಾಡಿದ್ದರೆ ಬಾಳು ಎಂದು ಧನ್ಯತೆ ಮೆರೆಯುತ್ತಾರೆ. ಹಾಗಿದ್ದರೆ ತಡ ಏಕೆ ನೀವೂ ಕೂಡ ಮಸಗಿಯವರ ಜೊತೆ ಜಲಸಾಕ್ಷರತೆಗೆ ನಿಮ್ಮ ಕೈ ಜೋಡಿಸಿ ಮನೆಗೊಂದು ಇಂಗು ಗುಂಡಿ ಮಾಡಲು ಸಹಕರಿಸಿ.

ಚಿತ್ರ-ಲೇಖನ: ಗಣಪತಿ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*