ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು ಹಾಗೂ ಔಷಧೀಯ ಗುಣಗಳು

ವೇದಗಳಲ್ಲಿ ನೀರಿನ ಔಷಧೀಯ ಗುಣಗಳ ಉಲ್ಲೇಖವಿದೆ – “ಇಂದು, ಈ ದಿನ ನಾನು ನೀರಿನಲ್ಲಿ (ಸ್ನಾನಕ್ಕೆಂದು) ಇಳಿದಿದ್ದೇನೆ, ಅದರ ಸಾರದೊಂದಿಗೆ ನಾವು ಬೆರೆತಿದ್ದೇವೆ. ನೀರಿನಲ್ಲಿ ನೆಲೆಸಿರುವ ಅಗ್ನಿಯೇ, ನನ್ನನ್ನು ಸಮೀಪಿಸಿ, ನನ್ನಲ್ಲಿ ಚೈತನ್ಯ ತುಂಬು” (ಋಗ್ವೇದ ೧೦.೯.೯). ಎಲ್ಲ ಪರಿಹಾರಕ ಔಷಧಗಳು ಹಾಗೂ ಅಮೃತದ ಆಗರವೆಂದು ನೀರನ್ನು ಋಗ್ವೇದದಲ್ಲಿ ಕೊಂಡಾಡಿದ್ದಾರೆ. ಹಸುಗಳು ಕುಡಿಯುವ ನೀರನ್ನು ಆವಾಹನೆ ಮಾಡಿ, ಹರಿಯುವ ನೀರಿನ ಅಧಿಪತಿಗಳಾದ ದೇವತೆಗಳಿಗೆ ನೈವೇದ್ಯವನ್ನು ಅರ್ಪಿಸುವ ಶ್ಲೋಕವು ಋಗ್ವೇದದಲ್ಲಿ ಇದೆ:

“ನಾವು ಕುಡಿದ ಓ ಜಲವೇ, ನಮ್ಮ ದೇಹದಲ್ಲಿ ಉಲ್ಲಾಸವನ್ನು ಕರುಣಿಸು. ರೋಗಗಳು ಹಾಗೂ ನೋವುಗಳನ್ನು ಹೊಡೆದೋಡಿಸುವ ಮೂಲಕ, ನೀನು ನಮ್ಮಲ್ಲಿ ಆಹ್ಲಾದವನ್ನು ಕರುಣಿಸು – ಓ ದಿವ್ಯ ಅಮರ ಜಲವೇ” (ಋಗ್ವೇದ ೬೩)

ನೀರಿನ ವಿವಿಧ ಮೂಲಗಳನ್ನೂ, ಹಾಗೂ, ಬೇರೆಲ್ಲ ಶಮನಕಾರಕ ಶಕ್ತಿಗಳಿಗಿಂತ ಹೆಚ್ಚು ಶಮನ ನೀಡುವ ಹಾಗೂ ರೋಗಗಳನ್ನು ಹೊಡೆದೋಡಿಸುವ ಸಾಧನವೆಂದು ಅಥರ್ವವೇದವು ವಿವರಿಸುತ್ತದೆ. ನೀರು ನೋವನ್ನು ಶಮನ ಮಾಡುವುದೆಂದೂ, ಗುಣಕಾರಕ/ಪುನಶ್ಚೇತಕ ಶಕ್ತಿಯನ್ನು ಹೊಂದಿರುವುದಾಗಿಯೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಭೂಮಿಯ ಮೇಲೆ ನೀರು ಬಿದ್ದಲ್ಲೆಲ್ಲ, ಉತ್ತಮ ಸಸ್ಯಗಳು ಅಲ್ಲಿ ಬೆಳೆಯುತ್ತವೆ. ನೀರು ಔಷಧೀಯ ಗುಣಗಳನ್ನು ಹೊಂದಿರುವುದಾಗಿ ಅಥರ್ವವೇದದ ಶ್ಲೋಕಗಳು ಗುಣಗಾನ ಮಾಡಿವೆ (೬.೨೩, ೨೪, ೫೭). ಅದನ್ನು ರೋಗ ನಿವಾರಕ ಶಕ್ತಿ ಉಳ್ಳದ್ದೆಂದು ಪೂಜಿಸಲಾಗಿದೆ. ‘ಗುಣಪಡಿಸಲಾಗದ’ ರೋಗಗಳನ್ನು ಗುಣಪಡಿಸಲೆಂದು ಪ್ರಾರ್ಥಿಸುವ ಶ್ಲೋಕವು ಅಥರ್ವವೇದದಲ್ಲಿದೆ.

ಋಗ್ವೇದದ ಪ್ರಕಾರ (೧.೧೬೧.೯) – “ಜೀವರಾಶಿಗಳಿಗೆ ನೀರಿಗಿಂತ ಬೇರೆ ಯಾವ ವಸ್ತುವೂ ಹೆಚ್ಚು ಪ್ರಯೋಜನಕಾರಿಯಾದ ವಸ್ತುವು ಅಸ್ತಿತ್ವದಲ್ಲಿಲ್ಲ. ಹಾಗಾಗಿ ನೀರು ಪರಮೋಚ್ಛವಾದುದು.” ನೀರಲ್ಲಿ ನೆಲೆಸಿರುವ, ನೀರಿನ ಅಧಿಪತಿ ಎಂದರೆ ವರುಣ; ಹಾಗಾಗಿ, ಶಕ್ತಿ, ಚೈತನ್ಯವನ್ನು ನಮಗೆ ಕರುಣಿಸಲೆಂದು ನೀರನ್ನು ಪ್ರಾರ್ಥಿಸಲಾಗುತ್ತದೆ. “ಅಧಿಪತಿಯಾದ ಓ ವರುಣನೇ, ನೀನು ನೂರಾರು ಅಥವಾ ಸಾವಿರಾರು ಔಷಧಗಳನ್ನು ಹೊಂದಿರುವೆ”.

ಸಂಹಿತಗಳಲ್ಲೂ ನೋವನ್ನು ಶಮನ ಮಾಡುವ ಗುಣಗಳನ್ನು ಹೊಂದಿರುವುದಾಗಿ ನೀರನ್ನು ಪರಿಗಣಿಸಿದ್ದಾರೆ – “ನಾವು ಕುಡಿದ ಓ ಜಲವೇ, ನಮ್ಮ ದೇಹದಲ್ಲಿ ಉಲ್ಲಾಸವನ್ನು ಸೃಷ್ಟಿಸು. ರೋಗಗಳು ಹಾಗೂ ನೋವುಗಳನ್ನು ಹೊಡೆದೋಡಿಸುವ ಮೂಲಕ ನಮಗೆ ಆನಂದವನ್ನು ಉಂಟುಮಾಡು, ಓ ದಿವ್ಯ, ಅಮರ ಜಲವೇ”.

“ಅಮೂಲ್ಯ ಸಂಪತ್ತಿನ ಸಾರ್ವಭೌಮರಾದ, ಮಾನವನಿಗೆ ನಿವಾಸಸ್ಥಾನವನ್ನು ಕರುಣಿಸುವ, ಜಲಗಳೇ, (ನನ್ನ ಬಲಹೀನತೆಗಳಿಗೆ) ಔಷಧಗಳನ್ನು ಕರುಣಿಸೆಂದು ಯಾಚಿಸುವೆ. ಈ ಜಲದಲ್ಲಿ, ಸೋಮನು ನನಗೆ ತಿಳಿಸಿರುವಂತೆ, ಎಲ್ಲ ರೀತಿಯ ಪರಿಹಾರಗಳೂ ಅಸ್ತಿತ್ವದಲ್ಲಿದೆ, ಹಾಗೂ ನಮಗೆ ವರಗಳನ್ನು ನೀಡುವ ಅಗ್ನಿಯು ಇದ್ದಾನೆ. ನಾನು ಸೂರ್ಯನನ್ನು ದೀರ್ಘಕಾಲ ನೋಡುವಂತೆ, ನನ್ನ ದೇಹದ ಒಳಿತಿಗಾಗಿ ಎಲ್ಲ ರೋಗ ನಿವಾರಕ ಔಷಧಗಳನ್ನು ಪರಿಪೂರ್ಣ ರೀತಿಯಲ್ಲಿ ಜಲಗಳು ನಮಗೆ ಒದಗಿಸುತ್ತವೆ.” (ಋಗ್ವೇದ ೧೦.೯.೫-೭)

ಋಗ್ವೇದದ ಇತರ ಶ್ಲೋಕಗಳು ಈ ರೀತಿ ಇವೆ: “ಜಲದಲ್ಲಿ ಅಮೃತವಿದೆ, ಜಲದಲ್ಲಿ ಔಷಧೀಯ ಗಿಡಮೂಲಿಕೆಗಳಿವೆ, ದಿವ್ಯ (ಪುರೋಹಿತನೇ), ಅವುಗಳ ಹೊಗಳಿಕೆಯ ಮುಂಚೂಣಿಯಲ್ಲಿರಿ. ಸೋಮ ನನಗೆ ಘೋಷಿಸಿದ್ದಾನೆ, “ವಿಶ್ವದ ಪೋಷಕನಾದ ಅಗ್ನಿಯೂ ಸೇರಿದಂತೆ, ಎಲ್ಲ ಔಷಧಗಳೂ ಜಲದಲ್ಲಿ ಇದೆ”: ಜಲದಲ್ಲಿ ಎಲ್ಲ ಗುಣಪಡಿಸುವ ಗಿಡಮೂಲಿಕೆಗಳೂ ಇವೆ. (ನನ್ನ) ದೇಹದ (ಒಳಿತಿಗಾಗಿ) ಜಲಗಳು ಎಲ್ಲ ರೋಗ-ನಿವಾರಕ ಔಷಧಗಳನ್ನೂ ಒಪ್ಪವಾಗಿ ತಂದು, ಬಹುಕಾಲದವರೆಗೂ ಸೂರ್ಯನ ದರ್ಶನ ಪಡೆಯುವಂತೆ ಕರುಣಿಸುತ್ತದೆ. ನಾನು (ತಿಳಿದೂ) ತಪ್ಪು ಮಾಡಿದಲ್ಲಿ ಅಥವಾ (ಋಷಿ-ಮುನಿಗಳು/ಸಿದ್ಧಪುರುಷರ ವಿರುದ್ಧ) ಶಾಪ ಹಾಕಿದಲ್ಲಿ ಅಥವಾ ಅಸತ್ಯವನ್ನು (ನುಡಿದಲ್ಲಿ), ನನ್ನಲ್ಲಿ (ಕಂಡ) ಎಲ್ಲ ಪಾಪಗಳನ್ನು ತೊಳೆದು ಹಾಕುತ್ತದೆ. ಇಂದು ಈ ದಿನ ನಾನು ಜಲದಲ್ಲಿ ಮಿಂದಿದ್ದೇನೆ – ಅದರ ಸಾರದೊಂದಿಗೆ ಬೆರೆತಿದ್ದೇವೆ – ಜಲದಲ್ಲಿ ವಾಸವಾಗಿರುವ ಅಗ್ನಿಯೇ, ನನ್ನನ್ನು ಸಮೀಪಿಸಿ, ಈ ರೀತಿಯಲ್ಲಿ (ಮಿಂದ ನನ್ನಲ್ಲಿ) ಚೈತನ್ಯವನ್ನು ತುಂಬು.” (ಋಗ್ವೇದ ೧.೨೩.೧೯-೨೩)

ಇಂಗ್ಲೀಷ್ ಮೂಲ: ಶ್ರೀ ಕೆ.ಎನ್.ಶರ್ಮಾರವರ “ಯುನೀಕ್ ಐಡಿಯಾಸ್ ಆನ್ ವಾಟರ್ ಇನ್ ಏನ್ಷ್ಯಂಟ್ ಇಂಡಿಯನ್ ಸ್ಕ್ರಿಪ್ಚರ್ಸ್ ಆಂಡ್ ಕಲ್ಚರ್”
ಅನುವಾದ: ಸಿಡಿಎಲ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*