ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಿಮಾನ ನಿಲ್ದಾಣಗಳಲ್ಲಿ ಮಳೆ ನೀರು ಸಂಗ್ರಹಣೆ ಮತ್ತು ಸದ್ಬಳಕೆ ಹೇಗೆ ಸಾಧ್ಯ?

APವಿಮಾನ ನಿಲ್ದಾಣಗಳು ಹಾಗೂ ನೀರು

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ ಬಹುದೂರ – ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.  ನಗರದ ನೀರಿನ ಸಂಪರ್ಕ ಜಾಲದಿಂದ ಅದು ಬಹುದೂರವಾಗಿದ್ದು, ಅಂತರ್ಜಲದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.  ಮುಂಬರುವ ದಿನಗಳಲ್ಲಿ, ನೀರಿನ ಅಗತ್ಯ ೯ ದಶಲಕ್ಷ ಲೀಟರ್‌ಗಳಿಗೆ ತಲುಪುವ ಅಂದಾಜಿದ್ದು, ೫ ದಶಲಕ್ಷ ಲೀಟರ್‌ಗಳು ಸಧ್ಯದ ಅಗತ್ಯದ ಪೂರೈಕೆಗೆ ಸಾಕು. ಇದು ಸಾಲದೆಂಬಂತೆ, ಕೇಂದ್ರೀಯ ಅಂತರ್ಜಲ ಮಂಡಳಿಯು ಈ ಪ್ರದೇಶವನ್ನು ‘ಅಂಧಕಾರ ವಲಯ’ವೆಂದು ನಿಯೋಜಿಸಿದೆ; ಕಾರಣ, ಮರುಪೂರಣ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಈ ಪ್ರದೇಶದಲ್ಲಿ ನಡೆದ ಅಂತರ್ಜಲದ ಶೋಷಣೆ.  ವಿಮಾನ ನಿಲ್ದಾಣಕ್ಕೆ ಯಥೇಚ್ಛವಾದ ನೀರಿನ ಪೂರೈಕೆಯ ಅಗತ್ಯವಿದೆ.  ಈ ಜಲದಾಹವನ್ನು ನೀಗಿಸಲು ನಿಲ್ದಾಣದ ಪ್ರಾಧಿಕಾರ ಕಂಡುಕೊಂಡ ದಾರಿ ಯಾವುದು?

ತನ್ನ ದೈನಂದಿನ ಅಗತ್ಯತೆಯ ಪೂರೈಕೆಗಾಗಿ ಒಂದುಕಿಲೋಲೀಟರ್‌ಗೆ ರೂ.೬೬ರ ಹೆಚ್ಚಿನ ಬೆಲೆಗೆ, ನಗರದಿಂದ ಪ್ರತಿದಿನ ೧.೫ ದಶಲಕ್ಷ ಲೀಟರ್ ತಾಜಾ ನೀರನ್ನು ಖರೀದಿ ಮಾಡಿತು.  ನಂತರ, ಅದು ಜಾಣತನದ ಕೆಲಸವನ್ನು ಮಾಡಿತು – ಅದು ತೃತೀಯಕ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪ್ರತಿದಿನವೂ ೨ ದಶಲಕ್ಷ ಲೀಟರ್ ನೀರನ್ನು, ಪ್ರತಿ ಕಿಲೋಲೀಟರ್‌ಗೆ ರೂ.೨೫ರಂತೆ ಖರೀದಿಸಿತು.  ಇದನ್ನು ಪ್ರತ್ಯೇಕವಾಗಿ ಶೇಖರಿಸಿ, ಸುತ್ತಲಿರುವ ಸುವಿಸ್ತಾರವಾದ ಭೂವಿನ್ಯಾಸ, ಬೃಹತ್ ಜೀವವೈವಿಧ್ಯತೆ ಇರುವ ಸಸ್ಯಗಳು, ಹಾಗೂ ಸಣ್ಣ ತರಿಭೂಮಿಗೂ ನೀರೆರೆಯಲು ಬಳಸಲಾಯಿತು.

ಆಂತರಿಕವಾಗಿ ಉತ್ಪತ್ತಿಯಾದ ತ್ಯಾಜ್ಯ ನೀರಿಗಾಗಿ, ವಿಸ್ತೃತ ವಾತಪೂರಿಕಾ ವ್ಯವಸ್ಥೆಯನ್ನು (ಎಕ್ಸ್‌ಟೆಂಡೆಡ್ ಏರೇಷನ್ ಸಿಸ್ಟಮ್) ಬಳಸಿ, ತನ್ನದೇ ತ್ಯಾಜ್ಯಜಲ ಸಂಸ್ಕರಣಾ ಸ್ಥಾವರನ್ನು ಸ್ಥಾಪಿಸಿತು.  ವಿಮಾನ ನಿಲ್ದಾಣದ ಆವರಣದಲ್ಲಿರುವ ಶೌಚಾಲಯಗಳು ಹಾಗೂ, ಹವಾನಿಯಂತ್ರಣ ವ್ಯವಸ್ಥೆಗಳಿಗಾಗಿ ಈ ಸಂಸ್ಕರಿಸಿದ ನೀರನ್ನು ನಂತರ ಮರುಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಸಂಸ್ಕರಣಾ ಸ್ಥಾವರದಿಂದ ಉತ್ಪನ್ನವಾದ ರಾಡಿಯನ್ನು ಗೊಬ್ಬರ ಮಾಡಿ, ಭೂವಿನ್ಯಾಸ ಮಾಡಲಾದ ಪ್ರದೇಶಕ್ಕೆ, ಇದನ್ನು ಗೊಬ್ಬರವಾಗಿ ಮರುಬಳಕೆ ಮಾಡಲಾಗುತ್ತದೆ.

 ಎಲ್ಲತ್ಯಾಜ್ಯ ನೀರು ಹಾಗೂ ವಿಮಾನಗಳಿಂದ ಬರುವ ತ್ಯಾಜ್ಯವನ್ನೂ ಸಂಸ್ಕರಿಸುವ ಆಂತರಿಕ ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರ

ಮಳೆ ಬಂದಾಗ, ವಿಮಾನದ ರನ್ವೇಗಳು ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಮಳೆ ನೀರು ಸಂಗ್ರಹಣವಾಗುತ್ತದೆ.  ಹಾಗಾಗಿ, ನೀರು ಎಲ್ಲೆಡೆ ನುಗ್ಗಿ, ನೆರೆಯಂತಹ ಪರಿಸ್ಥಿತಿಯನ್ನು ತಡೆಗಟ್ಟಲು, ಈ ನೀರನ್ನು ಆದಷ್ಟೂ ಬೇಗನೆ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತದೆ.  ೩೧೦ಕ್ಕಿಂತ ಹೆಚ್ಚಿನ ಮರುಪೂರಣ ಬಾವಿಗಳು ಮಳೆನೀರು ಬಸಿಕಾಲುವೆಯಲ್ಲಿ ಅಥವಾ ಅದರ ಪಕ್ಕದಲ್ಲೇ ಇದ್ದು, ಬೃಹತ್ ಪ್ರಮಾಣದ ಮಳೆ ನೀರು ಜಲಧರವನ್ನು ಮರುಪೂರಣಗೊಳಿಸುತ್ತದೆ. ಮಿಕ್ಕೆಲ್ಲ ಮಳೆನೀರನ್ನು, ಉತ್ತಮ ವಿನ್ಯಾಸವುಳ್ಳ ಮಳೆನೀರ ಬಸಿ ಕಾಲುವೆಗಳು, ಹೆಚ್ಚಿನ ಮಳೆನೀರನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುವ ಸಾಮರ್ಥ್ಯವಿರುವ ಪಕ್ಕದ ಕೆರೆಗೆ ಹರಿದು ಹೋಗುತ್ತದೆ.

ಈ ಉತ್ತಮ ಪ್ರಯತ್ನಗಳಿಂದ ಎರಡು ವಿಷಯಗಳು ನಡೆದಿವೆ. ಅಲ್ಲಿ ಮೊದಲೇ ಇದ್ದ ನಾಲ್ಕು ಬೃಹತ್ ಹಳೆಯ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ, ರಿಪೇರಿ ಮಾಡಿ,

ರಾಡಿ ಒಣಗಿಸುವ ಬೆಡ್‌ಗಳು

ಮರುಬಳಕೆಗೆ ಯೋಗ್ಯವಾಗಿ ಮಾಡಲಾಗಿದೆ.  ಬಾವಿಗಳಿಗೆ ಪಂಪ್‌ಗಳು ಹಾಗೂ ಫ಼ಿಲ್ಟರ್‌ನ್ನು ಕೂಡಿಸಲಾಗಿದ್ದು, ನೀರಿನ ಗುಣಮಟ್ಟವನ್ನೂ ಪರೀಕ್ಷಿಸಲಾಗಿದೆ – ಅದು ಉನ್ನತ ಗುಣಮಟ್ಟದ್ದಾಗಿದ್ದು, ಕುಡಿಯಲು ಯೋಗ್ಯವಾದ ಸಿಹಿನೀರೆಂದು ಕಂಡುಬಂದಿದೆ. ಈ ಮರುಪೂರಣದ ಯತ್ನಗಳ ಫಲವಾಗಿ, ಬೇಸಿಗೆಯಲ್ಲೂ ಬಾವಿಗಳಲ್ಲಿ ನೀರು ಭರ್ತಿಯಾಗಿ ಇರುತ್ತದೆ. ಈ ತೆರೆದ ಬಾವಿಗಳಿಂದ ಪ್ರತಿದಿನವೂ ಸುಮಾರು ೮,೦೦,೦೦೦ ಲೀಟರ್‌ಗಳಷ್ಟು ನೀರನ್ನು ತೆಗೆದುಕೊಳ್ಳಬಹುದು, ಹಾಗೂ ತುರ್ತು ಸಂದರ್ಭದಲ್ಲಿ, ನಗರದಿಂದ ಬರುವ ನೀರಿನ ಬದಲಾಗಿ ಅದನ್ನು ಬಳಸಬಹುದು.  ಒಂದೊಮ್ಮೆ, ಅತಿ ಹೆಚ್ಚಿನ ಸಂಖ್ಯೆಯ ಕೊಳವೆಬಾವಿಗಳ ತೋಡುವಿಕೆ ಹಾಗೂ ಅಂತರ್ಜಲದ ಹೆಚ್ಚು ಬಳಕೆಯಿಂದ ‘ಅಂಧಕಾರದ ವಲಯ’ವೆಂದು ಘೋಷಿತವಾದ ಭೂಪ್ರದೇಶವನ್ನು ಸೂಕ್ತಮಟ್ಟದ ಮರುಪೂರಣದಿಂದ, ತೆರೆದ ಬಾವಿಗಳಲ್ಲೂ ನೀರು ಇರುವ ಮಟ್ಟಕ್ಕೆ, ಪುನಶ್ಚೇತನಗೊಳಿಸಬಹುದೆಂದು ಇದರಿಂದ ಸಿದ್ಧಗೊಂಡಿದೆ.

ಮಳೆನೀರಿನ ಮರುಪೂರಣದಿಂದ, ತಾಜಾ ಸ್ವಚ್ಛ ನೀರಿನೊಂದಿಗೆ ಜಲಧರಗಳ ಪುನಶ್ಚೇತನವು ಸಾಧ್ಯವಾಗಿದೆ

ವಿಮಾನ ನಿಲ್ದಾಣದ ಕಟ್ಟಡಗಳಿಂದ ಬೀಳುವ ಮಳೆನೀರನ್ನು, ೧.೫ ದಶಲಕ್ಷ ಲೀಟರ್‌ಗಳ ಸಾಮರ್ಥ್ಯ ಹೊಂದಿದ ದೊಡ್ಡ ನೆಲದಡಿಯ ಸಂಪ್ ಟ್ಯಾಂಕ್‌ಗಳಲ್ಲಿ ಶೇಖರಿಸಿ, ಅದರ ಸಂಸ್ಕರಣದ ನಂತರ ಮರುಬಳಕೆ ಆಗುತ್ತದೆ.  ಸಂಪ್ ಟ್ಯಾಂಕ್‌ಗಳಿಂದ, ಹೆಚ್ಚುವರಿ ನೀರನ್ನು ಮಳೆನೀರು ಬಸಿ ಕಾಲುವೆಗಳಿಗೆ ಹರಿಯಲು ಬಿಟ್ಟು, ಪಕ್ಕದ ಕೆರೆಗೂ ಜಲಧರದ ಮರುಪೂರಣವೂ ಆಗುವಂತೆ ಮಾಡಲಾಗುತ್ತದೆ.

ಪಕ್ಕದ ಕೆರೆಯ ಪುನಶ್ಚೇತನದಿಂದ, ವಿಮಾನ ನಿಲ್ದಾಣದ ಪಕ್ಕದಲ್ಲಿ ಇರುವ ಗ್ರಾಮಗಳು ಹಾಗೂ ದೇವನಹಳ್ಳಿಯಂತಹ ಪಟ್ಟಣಗಳು, ಪಟ್ಟಣದ ನೀರಿನ ಅಗತ್ಯಗಳ ಪೂರೈಕೆಗಾಗಿ, ಕೆರೆಯ ಪಕ್ಕದಿಂದ ಅಂತರ್ಜಲವನ್ನು ಪಡೆದುಕೊಳ್ಳುವ ಚಿಂತನೆಯನ್ನು ಮಾಡಬಹುದು.

ವಿಮಾನ ನಿಲ್ದಾಣಗಳಂತಹ ಆರ್ಥಿಕ ಚಟುವಟಿಕೆ ಹಾಗೂ ಸೇವಾ ಚಟುವಟಿಕೆಯ ತಾಣಗಳು, ಆರ್ಥಿಕ ಬೆಳವಣಿಗೆಗೆ ಅಗತ್ಯ; ಇದು ನಗರದ ಪ್ರಗತಿಯನ್ನು ಪ್ರಚೋದಿಸುತ್ತದೆ.  ನೀರಿನ ಸೇವೆಗಳ ಮೇಲೆ ಇದು ಹೆಚ್ಚು ಬೇಡಿಕೆಯನ್ನು ಹೇರುತ್ತದೆಂದು ಪರಿಗಣಿಸುವ ಬದಲು, ಅವುಗಳ ವಿನೂತನ ವಿನ್ಯಾಸದ ಮೂಲಕ, ನಗರಗಳ ತ್ಯಾಜ್ಯ ನೀರನ್ನು ತೆಗೆದುಕೊಂಡು, ಅದನ್ನು ಸಂಸ್ಕರಿಸಿ, ಅದರಿಂದ ಅಲ್ಲಿನ ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.  ತ್ಯಾಜ್ಯ ನೀರಿನ ಸಂಸ್ಕರಣೆ ಹಾಗೂ ಮರುಬಳಕೆ, ಹಾಗೂ, ಮಳೆನೀರು ಕೊಯ್ಲಿನ ಮೂಲಕ, ಅಂತರ್ಜಲದ ಜಲಧರಗಳ ಮರುಪೂರಣ ಮಾಡಿ, ಕೆರೆಗಳ ತುಂಬಾ ನೀರು ಇರುವಂತೆ ಮಾಡಬಹುದು.  ಸುತ್ತಮುತ್ತಲಿನ ಸಮುದಾಯಗಳಿಗೆ ಇವು ಅತ್ಯಂತ ಉಪಯುಕ್ತವಾಗಬಹುದು.  ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇದನ್ನೇ ಪ್ರತಿಬಿಂಬಿಸುತ್ತದೆ.  ಇದು ನೀರಿನ ಜಾಣ್ಮೆ! . 


ಮೂಲ: ಎಸ್. ವಿಶ್ವನಾಥ್‌

( https://rainwaterharvesting.wordpress.com)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*