ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸ್ಪಷ್ಟ ಗುರಿ ಇಲ್ಲದ ನೀರಿನ ಬಜೆಟ್

ಈ ಸಲದ ಕರ್ನಾಟಕ ರಾಜ್ಯ ಆಯ-ವ್ಯಯದಲ್ಲಿ ಜಲಸಂಪನ್ಮೂಲ ಮತ್ತು ನೀರಾವರಿಗಾಗಿ ಹೆಚ್ಚಿನ ಹಣಕಾಸನ್ನು ಮೀಸಲಿಡಲಾಗಿದೆ. ಆದರೆ ಅದರಲ್ಲಿ ದೂರದೃಷ್ಟಿಯ ಕೊರತೆ ಇದೆ. ಕುಸಿಯುತ್ತಿರುವ ಅಂತರ್ಜಲ ಸಮಸ್ಯೆಯನ್ನು ಎದುರಿಸುವ ದೀರ್ಘಕಾಲೀನ ಯೋಜನೆಗಳಿಲ್ಲ, ಬಹಳ ಮುಖ್ಯವಾಗಿ ರಾಜ್ಯಕ್ಕೆ ನೀರೊದಗಿಸುವ ಬಹುತೇಕ ನದಿಗಳು ಹುಟ್ಟುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸೂಕ್ತ ಕ್ರಮಗಳೇ ಇಲ್ಲ. ನದಿ ನೀರನ್ನು ರಾಜ್ಯದೆಲ್ಲೆಡೆ, ಅದರಲ್ಲೂ ಬಯಲು ಸೀಮೆಗೆ ಹರಿಸುವ ಸಲುವಾಗಿ ನೂರಾರು ಕೋಟಿ ಮೀಸಲಿಡಲಾಗಿದೆ, ಹಲವು ಹಳೆಯ ಮತ್ತು ಹೊಸ ಯೋಜನೆಗಳ ಘೋಷಣೆಯಾಗಿದೆ, ಆದರೆ ಪಶ್ಚಿಮ ಘಟ್ಟಗಳು ಉಳಿದರೇ ತಾನೇ ಅಲ್ಲಿನ ನದಿಗಳು ಉಳಿಯುವುದು, ಅವುಗಳಲ್ಲಿ ಸಮೃದ್ಧ ನೀರು ಹರಿದರೇ ತಾನೇ ಎಲ್ಲರಿಗೂ ನೀರು ಹಂಚಲು ಸಾಧ್ಯ, ಇಂತಹ ಆದ್ಯತೆಯ ವಿಷಯಕ್ಕೆ ಮಹತ್ವ ನೀಡಿಲ್ಲ. ಇನ್ನು ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಪಾರಂಪರಿಕ ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡದಿರುವುದು ವಿಷಾದನೀಯ. 

ಬಜೆಟ್‌ನಲ್ಲಿ ನೀರಿನ ಬಗ್ಗೆ ಪ್ರಸ್ಥಾಪಿಸಿರುವ ವಿಷಯಗಳ ಸಂಕ್ಷಿಪ್ತ ವಿವರಣೆ ಇಲ್ಲಿ ನೀಡಲಾಗಿದೆ, ಇದರತ್ತ ಕಣ್ಣು ಹಾಯಿಸಿ ಹೆಚ್ಚಿನ ಚರ್ಚೆಯನ್ನು ಮುಂದೆ ನೋಡೋಣ.

ಜಲಸಂಪನ್ಮೂಲ: ಭಾರಿ ಮತ್ತು ಮಧ್ಯಮ ನೀರಾವರಿ

 • ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ – ಮುಳವಾಡ, ಚಿಮ್ಮಲಗಿ, ಇಂಡಿ, ಮಲ್ಲಾಬಾದ್, ರಾಮಪುರ, ಕೊಪ್ಪಳ ಹಾಗೂ ಹೆರಕಲ್ ಏತನೀರಾವರಿ ಮತ್ತು ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ.
 • ಸಿಂಗಟಾಲೂರು ಏತನೀರಾವರಿ ಯೋಜನೆ-೫,೭೬೮.೦೪ ಕೋಟಿ ರೂ. ಪರಿಷ್ಕೃತ ಯೋಜನೆಯ ಅಂದಾಜಿನ ಅನುಮೋದನೆ.
 • ಶಿಂಷಾ ಅಣೆಕಟ್ಟೆಯ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿ.
 • ರಾಮನಗರ ತಾಲ್ಲೂಕಿನ ಬಿಡದಿ ಕಸಬ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಗೆ ನೀರು ತುಂಬಿಸುವ ಯೋಜನೆ ಜಾರಿ.
 • ಕೆ.ಆರ್.ಎಸ್ ಜಲಾಶಯದ ಬೃಂದಾವನ ಉದ್ಯಾನವನವನ್ನು ವಿಶ್ವ ದರ್ಜೆಗೇರಿಸಲು ಕ್ರಮ.
 • ಮೇಕೆದಾಟು ಮೇಲ್ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನಾ ಜಲಾಶಯಗಳ ನಿರ್ಮಾಣ – ವಿವರ ಯೋಜನಾ ವರದಿ ತಯಾರಿಕೆ – ೨೫ ಕೋಟಿ ರೂ.
 • ರಾಜ್ಯದ ಕೆಲವು ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿನ ಕಬ್ಬು ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಅಳವಡಿಕೆ.
 • ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ೧೨ ಪ್ರಮುಖ ಯೋಜನೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅಳವಡಿಕೆ.
 • ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ವಾಲ್ಮಿ ಸಂಸ್ಥೆಗಳ ಬಲವರ್ಧನೆ.
 • ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಹತ್ತಿರ ಕಾವೇರಿ ನದಿಗೆ ಕಟ್ಟಿರುವ ಮಾಧವಮಂತ್ರಿ ಅಣೆಕಟ್ಟಿನ ಆಧುನೀಕರಣ.
 • ಹೇಮಾವತಿ ಅಣೆಕಟ್ಟೆಯ ಕೆಳಭಾಗದಲ್ಲಿ ಉದ್ಯಾನವನ ನಿರ್ಮಾಣ.
 • ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಮತ್ತು ಕಸಬ ಹೋಬಳಿಯಲ್ಲಿ ಏತ ನೀರಾವರಿ ಯೋಜನೆ

 ಸಣ್ಣ ನೀರಾವರಿ

 • ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸರಣಿ ಪಿಕಪ್‌ಗಳ ನಿರ್ಮಾಣ – ೧೦೦ ಕೋಟಿ ರೂ.
 • ‘ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ’ ಕಾರ್ಯಕ್ರಮ – ೧೯೧ ಕೆರೆಗಳ ಸಮಗ್ರ ಅಭಿವೃದ್ಧಿ – ೧೯೨.೩೦ ಕೋಟಿ ರೂ.
 • ಕೆರೆಗಳ ಒತ್ತುವರಿ ತೆರವು ಅಭಿಯಾನ ಆಯೋಜನೆ ಮತ್ತು ಕೆರೆಗಳ ಪೋಷಕ ಕಾಲುವೆ/ರಾಜ ಕಾಲುವೆಗಳ ದುರಸ್ತಿ ಕಾರ್ಯ – ೧೦೦ ಕೋಟಿ ರೂ.
 • ಕೊಳಚೆ ನೀರು ಸಂಸ್ಕರಿಸಿ ಕೆರೆ ತುಂಬಿಸಲು ಕೆಳಕಂಡ ಏತ ನೀರಾವರಿ ಯೋಜನೆ-
 • ೧. ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ.
 • ೨. ದಕ್ಷಿಣಾ ಪಿನಾಕಿನಿ ಕಣಿವೆಯಿಂದ ಆನೇಕಲ್ ತಾಲ್ಲೂಕಿನ ೬೦ ಕೆರೆಗಳಿಗೆ.

ಭಾರೀ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಧೀರ್ಘಾವಧಿಯವು, ಅವುಗಳ ಬಗ್ಗೆ ಹೆಚ್ಚಿಗೆ ಹೇಳುವಂತಹುದೇನೂ ಇಲ್ಲ. ಆದರೆ ಆಯ್ದ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಬ್ಬಿಗೆ ಹನಿ ನೀರಾವರಿ ಅಳವಡಿಸುವುದು ಪ್ರಾಯೋಗಿಕ ಕ್ರಮ ಆಗಬೇಕಿಲ್ಲ. ಏಕೆಂದರೆ ಈಗಾಗಲೇ ನೂರಾರು ರೈತರು ಕಬ್ಬನ್ನು ಹನಿ ನೀರಾವರಿ ಪದ್ಧತಿಯಡಿ ಬೆಳೆಯುತ್ತಿದ್ದಾರೆ. ಅದೊಂದು ಯಶಸ್ವೀ ವಿಧಾನವೆಂದು ಪರಿಗಣಿಸಲ್ಪಟ್ಟಿದೆ, ಹಾಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಕ್ರಮಗಳನ್ನು ಅನುಸರಿಸಲು ಬಜೆಟ್ ನಲ್ಲಿ ಘೋಷಿಸಬೇಕಿತ್ತು. ಇದು ನೀರಿನ ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಸರ್ಕಾರ ಇದನ್ನು ನಿರ್ಲಕ್ಷಿಸಿದೆ ಎಂದೇ ಹೇಳಬೇಕು. 

ಇನ್ನು ಸಣ್ಣ ನೀರಾವರಿ ವಿಚಾರಕ್ಕೆ ಬಂದರೆ ಇಲ್ಲಿ ಕೇವಲ ಕೆರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವುದು ಕಂಡು ಬರುತ್ತದೆ. ಆದರೆ ಸಣ್ಣ ನೀರಾವರಿಯಲ್ಲಿ ಅಂತರ್ಜಲ ಮರುಪೂರಣಗೊಳಿಸಲು ಅಪಾರ ಅವಕಾಶಗಳಿವೆ. ಇದನ್ನು ಕೆಲವೇ ಜಿಲ್ಲೆಗಳಿಗೆ ನಿಗದಿಪಡಿಸಿರುವುದು ಸರಿಯಲ್ಲ. ಅಲ್ಲದೆ ಪಾರಂಪರಿಕ ಜಲಮೂಲಗಳ ಸಂರಕ್ಷಣೆಗೆ ಯಾವುದೇ ಕ್ರಮ ವಹಿಸದಿರುವುದು ಜಲ ನಿರ್ವಹಣೆಯ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ

 • ‘ತಾಲ್ಲೂಕಿಗೊಂದು ಹಸಿರು ಗ್ರಾಮ’ ಹೊಸ ಯೋಜನೆ – ೩ ಕೋಟಿ ರೂ.
 • ಅರಣ್ಯ ಮತ್ತು ಪರಿಸರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು – ‘ಹಸಿರು ಶಾಲಾ ವನ’ ಯೋಜನೆ ಜಾರಿ-೨.೨೫ ಕೋಟಿ ರೂ.
 • ‘ಚಿಣ್ಣರ ವನದರ್ಶನ’ ಯೋಜನೆ ಜಾರಿ-೫ ಕೋಟಿ ರೂ.
 • ಅರಣ್ಯವಾಸಿಗಳ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸಲು ‘ಪುನರ್ವಸತಿ ಘಟಕ’ ಸ್ಥಾಪನೆ.
 • ಮಡಿವಾಳ ಕೆರೆ ಜೀವ ವೈವಿಧ್ಯ ಉದ್ಯಾನ ನಿರ್ಮಾಣ – ೨೪.೭೨ ಕೋಟಿ ರೂ.
 • ಹವಾಮಾನ ಬದಲಾವಣೆ ಕುರಿತು ರಾಜ್ಯದ ಕ್ರಿಯಾಯೋಜನೆ ಜಾರಿಗೆ ಎಂಪ್ರಿ (EMPRI) ಸಂಸ್ಥೆಗೆ ರೂ. ೨ ಕೋಟಿ ಸಹಾಯಧನ.
 • ಮಹಾನಗರ ಪ್ರದೇಶಗಳಲ್ಲಿನ ಕೆರೆಗಳ ಸಂಸ್ಕರಣೆ, ಅಭಿವೃದ್ಧಿ, ಅಂತರ್ಜಲ ಹೆಚ್ಚಳ ಮತ್ತು ಸೌಂದರ್ಯ ವೃದ್ಧಿ – ೫.೫೬ ಕೋಟಿ ರೂ.

ಮೇಲೆ ತಿಳಿಸಿರುವ ಅಂಶಗಳಲ್ಲಿ ಕೆಲವು ನೇರವಾಗಿ ನೀರಿನ ವಿಚಾರಗಳಿಗೆ ಸಂಬಂಧಿಸಿಲ್ಲದಿರಬಹುದು, ಆದರೆ ಪರೋಕ್ಷವಾಗಿ ಖಂಡಿತ ಮಹತ್ವವಾದವು. ತಾಲ್ಲೂಕಿಗೊಂದು ಹಸಿರು ಗ್ರಾಮ’ ಯೋಜನೆ ಹೇಗೆ ರೂಪುಗೊಳ್ಳುತ್ತದೆ ಎಂಬುದು ಮುಖ್ಯ. ಇನ್ನು ಹಸಿರು ಶಾಲಾವನ, ವನದರ್ಶನ ಯೋಜನೆಗಳೂ ಸಹ ಶಿಕ್ಷಕರ ಬದ್ಧತೆಯ ಮೇಲೆ ನಿಂತಿದೆ, ಇಲ್ಲವಾದರೆ ಶೈಕ್ಷಣಿಕ ಪ್ರವಾಸದಂತೆಯೇ ಇದೊಂದು ರೊಟೀನ್ ಕಾರ್ಯಕ್ರಮ ಆಗಬಹುದು. ಇನ್ನು ಮಹಾನಗರಗಳಲ್ಲಿನ ಕೆರೆಗಳ ಸಂಖ್ಯೆ ಹಾಗೂ ಅವು ಎದುರಿಸುತ್ತಿರುವ ಅಗಾಧ ಸಮಸ್ಯೆಗಳಿಗೆ ಹೋಲಿಸಿದರೆ ೫ ಕೋಟಿ ಹಣ ಯಾತಕ್ಕೂ ಸಾಲದು, ಅಲ್ಲದೆ ಇಲ್ಲಿಯೂ ಸಹ ಬದ್ಧತೆಯ ಪ್ರಶ್ನೆಯೇ ನಿರ್ಣಾಯಕ.

ಬೆಂಗಳೂರು ಜಲ ಮಂಡಳಿ

 • ಎನ್.ಬಿ.ಆರ್‌ನಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ಚಾಲನೆ.
 • ೫೦ ಕಿ.ಮೀ.ಗಳ ಟ್ರಂಕ್ ಒಳಚರಂಡಿ ತ್ಯಾಜ್ಯ ಕೊಳವೆ ಮಾರ್ಗ ಬದಲಾವಣೆ ಕಾಮಗಾರಿ ಜಾರಿ. ಹೆಬ್ಬಾಳ, ಕೆ.ಆರ್.ಪುರಂ, ಕೆ ಮತ್ತು ಸಿ ಕಣಿವೆ, ದೊಡ್ಡಬೆಲೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪ್ರದೇಶಗಳಲ್ಲಿ ೭ ಹೊಸ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ನಿರ್ಮಾಣ.
 • ೫೦ ಘನ ತ್ಯಾಜ್ಯ ತೆಗೆಯುವ ಯಂತ್ರಗಳ ಖರೀದಿ-೧೦ ಕೋಟಿ ರೂ.
 • ನೀರು ಸರಬರಾಜು ಸಂಪರ್ಕ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆಗಳ ಸಂಯೋಜನೆ. ಗ್ರಾಹಕರ ಆರ್.ಆರ್.ಸಂಖ್ಯೆ ಹಾಗೂ ಬೃ.ಬೆಂ.ಮ. ಪಾಲಿಕೆಯ ಪಿ.ಐ.ಡಿ ಸಂಖ್ಯೆಗಳ ವಿಲೀನ.
 • ಬೆಂಗಳೂರು ನಗರ ಅಭಿವೃದ್ಧಿಗಾಗಿ ಬಿ.ಬಿ.ಎಂ.ಪಿ., ಬೆಂಗಳೂರು ಜಲಮಂಡಳಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ಸೇರಿದಂತೆ ರಾಜ್ಯ ಸರ್ಕಾರದಿಂದ ಒಟ್ಟಾರೆ ೪೭೭೦ ಕೋಟಿ ರೂ.
 • ಹಂತಹಂತವಾಗಿ ೧೯ ಕೆರೆಗಳ ಅಭಿವೃದ್ಧಿ. ಬಾಕಿ ಕೆರೆಗಳಿಗೆ ತಂತಿಬೇಲಿ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ.

ಬೆಂಗಳೂರು ಮಹಾನಗರಕ್ಕೆ ಸರಬರಾಜಾಗುವ ಒಟ್ಟು ನೀರಿನಲ್ಲಿ ಶೇ ೫೦ ರಷ್ಟು ಸೋರಿಕೆಯಾಗುತ್ತದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಇದು ಆತಂಕದ ಹಾಗೂ ಬೆಂಗಳೂರಿನ ಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ. ಇದರ ನಿವಾರಣೆಗಾಗಿ ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲದಿರುವುದು ಆಶ್ಚರ್ಯ. ಇನ್ನು ಇಲ್ಲಿಯೂ ಸಹ ಕೆರೆಗಳ ಅಭಿವೃದ್ಧಿಯ ಮಾತು ಬಂದಿದೆ. ಆದರೆ ಕೆರೆಗಳಿಗೇ ಒಂದು ಪ್ರತ್ಯೇಕ ಇಲಾಖೆ ಮಾಡಿ ನಾಡಿನ ಎಲ್ಲಾ ಕೆರೆಗಳನ್ನೂ ಅದರ ಸುಪರ್ದಿಗೆ ಬಿಡುವುದು ಒಳಿತು. ಈಗ ಹತ್ತಾರು ಸಂಸ್ಥೆಗಳ ಹಿಡಿತದಲ್ಲಿ ಸಿಲುಕಿರುವ ಕೆರೆಗಳಿಗೆ ಖಂಡಿತ ಉಳಿಗಾಲವಿಲ್ಲ. ಅಲ್ಲದೆ ಒಂದು ಕೆರೆಯನ್ನೇ ಪ್ರತ್ಯೇಕ ತೆಗೆದುಕೊಂಡರೂ ಅಲ್ಲಿನ ಮೀನುಗಳು ಒಂದು ಇಲಾಖೆಗೆ, ಅಚ್ಚುಕಟ್ಟು ಪ್ರದೇಶ ಬೇರೆ ಇಲಾಖೆಗೆ, ಅಲ್ಲಿರುವ ಮರಗಳು ಮಗದೊಂದು ಇಲಾಖೆಯ ಸುಪರ್ದಿಗೊಳಪಡುತ್ತವೆ. ಅವುಗಳ ನಕ್ಷೆ ಹಾಗೂ ಸರ್ವೆ ನಂಬರ್ ಇನ್ನೊಂದು ಇಲಾಖೆಗೆ ಒಳಪಡುತ್ತದೆ. ಆದರೆ ಇದು ನಿರ್ವಹಣೆ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಇಡೀ ಕೆರೆ ಮತ್ತು ನಾಡಿನ ಎಲ್ಲಾ ಕೆರೆಗಳು ಒಂದೇ ಇಲಾಖೆಯ ಕೈಕೆಳಗೆ ಬರಬೇಕು. ಮುಂದಿನ ಬಜೆಟ್ ನಲ್ಲಾದರೂ ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನಹರಿಸಿದರೆ ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

 • ೧೦ ಕುಡಿಯುವ ನೀರು ಹಾಗೂ ೧೦ ಒಳಚರಂಡಿ ಯೋಜನೆ ಜಾರಿ – ೬೫೮.೦೮ ಕೋಟಿ ರೂ.ಗಳು.
 • ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (UIDSSMT)ಯಡಿ ಪ್ರಾರಂಭವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ.
 • ಮುಖ್ಯಮಂತ್ರಿಗಳ ನಗರ ನೀರು ಭಾಗ್ಯ ಯೋಜನೆಯಡಿ ೧೩ ಜಿಲ್ಲಾ ಕೇಂದ್ರಗಳು ಹಾಗೂ ೧ ಪಟ್ಟಣಕ್ಕೆ ನಿರಂತರ ೨೪/೭ ನೀರು ಸರಬರಾಜಿಗೆ ಕ್ರಮ.

ನಗರ ನೀರು ಸರಬರಾಜು ವಿಷಯಕ್ಕೆ ಬಂದರೆ ಛಾವಣಿ ನೀರು ಸಂಗ್ರಹಣೆ ಮತ್ತು ಬಳಕೆ ಬಗ್ಗೆ ದೊಡ್ಡ ಆಂದೋಲನವನ್ನೇ ರೂಪಿಸುವುದು ಅವಶ್ಯಕ. ಭಾರತ ಸರ್ಕಾರ ‘ಸ್ವಚ್ಚ ಭಾರತ ಆಂದೋಲನ’ವನ್ನು ದೊಡ್ಡ ಪ್ರಮಾಣದಲ್ಲಿ ಧೀರ್ಘಾವಧಿಗೆ ಅನುಷ್ಟಾನಗೊಳಿಸಲು ಯೋಜನೆ ರೂಪಿಸಿರುವಂತೆ ಛಾವಣಿ ನೀರು ಸಂಗ್ರಹಣೆಯೂ ಆಂದೋಲನದ ರೂಪದಲ್ಲಿ ಮಾಡಬೇಕು. ನಮ್ಮ ಸರ್ಕಾರ ಅದನ್ನು ಮಾಡಲು ಅವಕಾಶವಿತ್ತು, ಆದರೆ ಆ ಬಗ್ಗೆ ಯಾವುದೇ ಒಳನೋಟವಿಲ್ಲ.

 ಕೃಷಿ

 • ಕೃಷಿ ಕ್ಷೇತ್ರಕ್ಕೆ ಸಮಗ್ರ ದೂರದೃಷ್ಟಿ ರೂಪಿಸಲು ‘ವಿಶನ್ ಗ್ರೂಪ್’ ರಚನೆ.
 • ನೀರಿನ ಸಮರ್ಥ ಬಳಕೆಗಾಗಿ ‘ಲಘು ನೀರಾವರಿ ನೀತಿ ೨೦೧೫-೧೬’ ಜಾರಿ.
 • ವೈಜ್ಞಾನಿಕ ಕೃಷಿ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಅಧ್ಯಯನ ಮತ್ತು ತರಬೇತಿಗಾಗಿ ಉತ್ಕೃಷ್ಟ ಜ್ಞಾನ ಕೇಂದ್ರದ ಸ್ಥಾಪನೆ.
 • ಕೃಷಿ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಕೃಷಿ ಅಭಿಯಾನ ಆಯೋಜನೆ ಮೂಲಕ ರೈತರೊಂದಿಗೆ ಸಂಪರ್ಕ.
 • ರೈತ ಸಂಪರ್ಕ ಕೇಂದ್ರ – ಹೋಬಳಿ ಮಟ್ಟದಲ್ಲಿ ಕೃಷಿ ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಿಬ್ಬಂದಿಗಳು ಒಟ್ಟಾಗಿ ಕಾರ್ಯನಿರ್ವಹಣೆ.
 • ೭ ಜಿಲ್ಲೆಗಳ ಬರ ಪಿಡೀತ ೨೩ ತಾಲ್ಲೂಕ್‌ಗಳಿಗೆ ‘ಕೃಷಿ ಭಾಗ್ಯ’ ಕಾರ್ಯಕ್ರಮ ವಿಶೇಷ ಪ್ಯಾಕೇಜ್.
 • ೫೬೬ ಹೋಬಳಿಗಳಲ್ಲಿ ಸಾವಯವ ಭಾಗ್ಯ ಯೋಜನೆ ಬಲಪಡಿಸಲು ಪ್ರಮಾಣೀಕರಣ ಪ್ರಕ್ರಿಯೆ, ಒಕ್ಕೂಟ ರಚನೆ ಹಾಗೂ ಮಾರುಕಟ್ಟೆ ಸಂಪರ್ಕ ಅಭಿವೃದ್ಧಿ.
 • ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಒದಗಿಸುವ ೨೭೮ ಹೊಸ ಸೇವಾ ಕೇಂದ್ರಗಳ ಸ್ಥಾಪನೆ.
 • ‘ಭೂ ಸಮೃದ್ಧಿ’ ಕಾರ್ಯಕ್ರಮ-೪ ಜಿಲ್ಲೆಗಳಿಗೆ ವಿಸ್ತರಣೆ.
 • ಆರ್.ಎಸ್.ಕೆ. ಮಟ್ಟದಲ್ಲಿ ಕೆ-ಕಿಸಾನ್ ವಿದ್ಯುನ್ಮಾನ ವೇದಿಕೆ ಸ್ಥಾಪಿಸಿ ಪ್ರತಿಯೊಬ್ಬ ರೈತನಿಗೂ ‘ರೈತಮಿತ್ರ ಕಾರ್ಡ್ ಹಾಗೂ ಮಣ್ಣು ಆರೋಗ್ಯ ಕಾರ್ಡ್’ ನೀಡಲು ಕ್ರಮ.
 • ವೈಜ್ಞಾನಿಕ ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ ಹಾಗೂ ನಿರ್ಣಯ ಬೆಂಬಲ ವ್ಯವಸ್ಥೆ ಪ್ರಾರಂಭ.
 • ಇಕ್ರಿಸ್ಯಾಟ್, ಐ.ಬಿ.ಎ.ಬಿ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಜೆನೋಮ್ ಅನುಕ್ರಮಣಿಕೆ (ಜಿ.ಎಂ-ರಹಿತ) (Genome Sequencing) ಕುರಿತು ಸಂಶೋಧನಾ ಯೋಜನೆ ಪ್ರಾರಂಭ.
 • ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ – ಹೊಸ ಆವರಣ (Campus) ನಿರ್ಮಾಣ.
 • ನೀರಾವರಿ ಪ್ರದೇಶದಲ್ಲಿ ಪರ್ಯಾಯ ಬೆಳೆ ಪದ್ಧತಿ, ಉತ್ಪಾದಕತೆ, ಸುಸ್ಥಿರತೆ ಮತ್ತು ಹೆಚ್ಚಿನ ಲಾಭಗಳಿಕೆ ಕುರಿತು ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಳ ಆಯೋಜನೆ.
 • ರಾಗಿ ಮತ್ತು ಜೋಳದ ವಿಶೇಷ ಪ್ಯಾಕೇಜ್-೪೦೦೦೦ ಹೆಕ್ಟೇರ್‌ಗೆ ವಿಸ್ತರಣೆ, ಕರ್ನಾಟಕ ವಿಶಿಷ್ಠ ಸಾಂಪ್ರದಾಯಿಕ ತೃಣ ಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಜಾಗತಿಕ ಸೂಚಕ ಟ್ಯಾಗುಗಳನ್ನು ಪಡೆಯುವ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳ ಆಯೋಜನೆ.
 • ಪ್ರಾಯೋಗಿಕವಾಗಿ ಖಾಸಗಿ ಏಜೆನ್ಸಿಗಳ/ಸರ್ಕಾರೇತರ ಸಂಸ್ಥೆಗಳ ಮುಖಾಂತರ ಪ್ರಾಯೋಗಿಕವಾಗಿ ೪ ಜಿಲ್ಲೆಗಳಲ್ಲಿ ಕೃಷಿ ಸಂಬಂಧಿ ವಿಸ್ತರಣಾ ಸೇವೆಗಳ ಆಯೋಜನೆ.
 • ಮಂಡ್ಯ ಮತ್ತು ಮುಧೋಳದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಎರಡು ಸಾವಯವ ಬೆಲ್ಲದ ಪಾರ್ಕುಗಳ ಅಭಿವೃದ್ಧಿ.

ಅತಿ ಹೆಚ್ಚು ನೀರು ಬಳಸುವ ವಲಯಗಳಲ್ಲಿ ಕೃಷಿ ಪ್ರಮುಖವಾದುದು. ಬಳಸುವ ನೀರಿನಲ್ಲಿ ಶೇ ೮೦ರಷ್ಟು ವ್ಯವಸಾಯಕ್ಕೇ ಬಳಕೆಯಾಗುತ್ತದೆ. ಆದರೆ ಬಜೆಟ್ ನಲ್ಲಿ ಕೃಷಿ ನೀರಿನ ಬಳಕೆ ಕಡಿಮೆ ಮಾಡುವ ಬಗ್ಗೆ ಹೆಚ್ಚಿನ ಪ್ರಯತ್ನಗಳಿಲ್ಲ. ನೀರಿನ ಸಮರ್ಥ ಬಳಕೆಗಾಗಿ ‘ಲಘು ನೀರಾವರಿ ನೀತಿ ೨೦೧೫-೧೬’ ಜಾರಿ ಹಾಗೂ ವೈಜ್ಞಾನಿಕ ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ ಹಾಗೂ ನಿರ್ಣಯ ಬೆಂಬಲ ವ್ಯವಸ್ಥೆ ಪ್ರಾರಂಭ – ಈ ಎರಡು ಮಾತ್ರ ಗಮನಾರ್ಹ. ಲಘು ನೀರಾವರಿ ನೀತಿ ಹೇಗೆ ಜಾರಿಯಾಗುತ್ತದೆ ಎಂಬುದೇ ಅದರ ಸಾಧಕ ಬಾಧಕಗಳ ಅಳತೆಗೋಲಾಗುತ್ತದೆ. ಉಳಿದಂತೆ ರಾಜ್ಯದ ಸಿರಿಧಾನ್ಯಗಳಿಗೆ ಪ್ರಾಮುಖ್ಯತೆ ನೀಡುವ ಕ್ರಮ ಶ್ಲಾಘನೀಯ.


ವಿಶ್ಲೇಷಣೆ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*