ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿಗಾಗಿ ಮುಗಿಯದ ಯುದ್ದ

ಅಂದು ಮಧ್ಯಾಹ್ನದ ಸೂರ್ಯ ಕೆಂಪಗೆ ಜ್ವಲಿಸುತ್ತಿದ್ದ. ಚಳವಳಿಗೆ ಇನ್ನಷ್ಟು ಕಾವು ಏರಿತ್ತು. ನೀರಿಲ್ಲದಿದ್ದರೆ ಬದುಕು ಎಷ್ಟೊಂದು ದುರ್ಬರ!? ಮುಂದಾಲೋಚನೆಯ ಕ್ರಮವಾಗಿ ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಚಳವಳಿ ಅದು. ಕೆಂಪಗೆ ಹೊಳೆಯುತ್ತಿದ್ದ ಸೂರ್ಯ ಅಂದಿನ ದುರ್ಬರ ಕೃತ್ಯಕ್ಕೆ ಸಾಕ್ಷಿಯಾಗಿದ್ದ. ಆ ದಿನವೇ ಜುಲೈ ೩೦, ೨೦೧೬. ರೈತರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಪೋಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದು ಮರುದಿನದ ವಾರ್ತೆಯಲ್ಲಿ ತಿಳಿದಾಗ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತ್ತು. ನೀರಿಲ್ಲದ ಮಹದಾಯಿಯ ಒಡE2-mahadayi 2ಲಲ್ಲಿ ಕೆಂಪಗಿನ ರಕ್ತ ಹರಿದಿತ್ತು.

ದಶಕಗಳಿಂದಲೂ ಕರ್ನಾಟಕ ಮತ್ತು ಗೋವಾ ಎರಡೂ ರಾಜ್ಯಗಳೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರಿಗಳು. ಕೆಲವೇ ವರ್ಷಗಳ ಹಿಂದೆ ಈ ಮಹದಾಯಿ ಸಮಸ್ಯೆ ಉಗಮವಾಯಿತು. ಉತ್ತರ ಕರ್ನಾಟಕದ ನೀರಿನ ಬರ ಅಥವಾ ನೀರನ್ನು ಇಂಗಿಸದೇ ಕೇವಲ ಬಳಸುವುದೊಂದೇ ಮಾಡಿದ ಕೃತ್ಯ ಇಂದಿನ ವೈಮನಸ್ಸಿಗೆ ಕಾರಣವಾಯಿತು. ಮಹದಾಯಿಯ ಪಾಲಿನ ತಕರಾರು ಶುರುವಾಯಿತು. ಎಲ್ಲಾ ಪಕ್ಷಗಳವರೂ ಈ ರಾಜಕೀಯದಾಟದಲ್ಲಿ ತಮ್ಮ ಆಟವನ್ನು ಆಡತೊಡಗಿದರು. ಅಲ್ಲಿನ ಸಂತ್ರಸ್ಥ ಬಡ ರೈತರು ಮತ್ತು ದಮನವಾಗುತ್ತಿರುವ ಪಶ್ಚಿಮಘಟ್ಟದ ಜೀವಿವೈವಿಧ್ಯಗಳಿಗೆ ಪ್ರಾಮುಖ್ಯತೆ ದೂರವಾಯಿತು

ಏನಿದು ಮಹದಾಯಿ ನೀರಿನ ಸಂಘರ್ಷ?

ಇದೊಂದು ದ್ವಂದ್ವ ನದಿ. ಇದಕ್ಕೆ ಕರ್ನಾಟಕದಲ್ಲಿ ಮಹದಾಯಿ ಎಂದು ಹೆಸರು. ಗೋವಾದಲ್ಲಿ ಇದು ಮಾಂಡೋವಿ!! ಮಳೆ ಬಂದಾಗ ತುಂಬಿ ಹರಿವ ನದಿ. ಕರ್ನಾಟಕದಲ್ಲಿ ಹುಟ್ಟಿ ಗೋವಾದ ಸಮುದ್ರವನ್ನು ಸೇರುತ್ತದೆ. ಎರಡೂ ರಾಜ್ಯಗಳ ನೀರಿನ ಅವಶ್ಯಕತೆಯನ್ನು ಮಳೆ ಸಮೃದ್ಧವಾಗಿದ್ದ ಕಾಲದಲ್ಲಿ ಪೂರೈಸುತ್ತಿತ್ತು. ಇದು ಕರ್ನಾಟಕದಲ್ಲಿ ೩೨ ಕಿಲೋಮೀಟರ್‌ಗಳು ಮತ್ತು ಗೋವಾದಲ್ಲಿ ೫೨ ಕಿಲೋಮೀಟರ್‌ಗಳಷ್ಟು ದೂರ ಹರಿಯುತ್ತದೆ. ಆಮೇಲೆ ಅದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕರ್ನಾಟಕದ ಭೀಮಘಡದಲ್ಲಿ ಇದೊಂದು ಸಾಮಾನ್ಯ ಹಳ್ಳದಂತೆ ಕಾಣಿಸುತ್ತದೆ. ಮುಂದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೆಗಾವ್ ಬಳಿ ನದಿಯಾಗಿ ಬದಲಾಗುತ್ತದೆ. ಮಹಾರಾಷ್ಟ್ರ ಮತ್ತು ಗೋವಾದ ಗಡಿಯಲ್ಲಿಯೆ ಹರಿಯುತ್ತಾ ಅವರ ನೀರಿನ ಅಗತ್ಯವನ್ನು ಪೂರೈಸುತ್ತದೆ.

ಮಹದಾಯಿ ತಿರುವು ಯೋಜನೆಯನ್ನು ಮೊದಲು ರೂಪಿಸಿದ್ದು ಇಸವಿ ೧೯೭೦ರಲ್ಲಿ. ಅಂದಿನ ಪ್ರಖ್ಯಾತ ಇಂಜಿನಿಯರ್ ಎಸ್ ಜಿ ಬಾಳೇಕುಂದ್ರಿಯವರು ಮಹದಾಯಿಯನ್ನು ಧಾರವಾಡ ಜಿಲ್ಲೆಯ ನವಿಲುತೀರ್ಥದ ಬಳಿ ಮಲಪ್ರಭಾ ನದಿಗೆ ಜೋಡಿಸುವ ಕನಸು ಕಂಡರು. ನವಿಲುತೀರ್ಥ ಡ್ಯಾಮ್‌ನ್ನು ಇಸವಿ ೧೯೭೦ರಲ್ಲಿ ನಿರ್ಮಿಸಲಾಯಿತು. ಅದರ ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಅದರಲ್ಲಿ ತುಂಬಲಿಲ್ಲ. ಇನ್ನೂ ಮೂರು ನಾಲ್ಕು ಪಟ್ಟು ನೀರು ಅದಕ್ಕೆ ಹಿಡಿಸುತ್ತಿತ್ತು. ಹೀಗಾಗಿ ಮಹದಾಯಿಯನ್ನು ಅದಕ್ಕೆ ತಿರುಗಿಸಲು ಕರ್ನಾಟಕ ಸರ್ಕಾರವೂ ಆಸಕ್ತಿ ತೋರಿಸಿತು. ಮುಂಗಾರಿನ ಕೊರತೆ ವರ್ಷಾವರ್ಷ ಹೆಚ್ಚಿದಂತೆ ನೀರು ತಿರುಗಿಸುವ ಅಗತ್ಯ ಇನ್ನಷ್ಟು ಗೋಚರಿಸಿತು. ಉತ್ತರಕರ್ನಾಟಕದವರ ನೀರಿನ ಅಗತ್ಯ ಎಣಿಸಲಾರದಷ್ಟು ಹೆಚ್ಚಾದಂತೆ, ನವಿಲುತೀರ್ಥವು ಸಹಾ ಬೇಸಿಗೆ ಬರುವುದರೊಳಗೆ ಬತ್ತತೊಡಗಿತು. ಇದರಿಂದ ಜಾಗೃತಗೊಂಡ ಕರ್ನಾಟಕವು ಮಹದಾಯಿಯ ತಿರುವಿನ ಕುರಿತು ಇನ್ನಷ್ಟು ಒತ್ತಡ ಹೇರತೊಡಗಿತು.E3-banduri kaluve

ಕರ್ನಾಟಕಕ್ಕೆ ಬೇಕಾಗಿರುವುದು ೭.೫೬ ಟಿಎಮ್‌ಸಿ ಅಡಿಗಳಷ್ಟು ನೀರು. ಅಂದರೆ ಈ ನೀರನ್ನು ಮಲಪ್ರಭಾ ಡ್ಯಾಮ್‌ಗೆ ಸೇರಿಸುವುದು ಉದ್ದೇಶ. ಈ ಮೂಲಕ ಹುಬ್ಬಳ್ಳಿ ಧಾರವಾಡದ ೧೮೦ ಹಳ್ಳಿಗಳಿಗೆ ನೀರನ್ನು ಪೂರೈಸಲು ಸಾಧ್ಯವಾಗುತ್ತದೆ. ಮಹದಾಯಿಯಲ್ಲಿ ಇದರ ನಾಲ್ಕು ಪಟ್ಟು ನೀರು ಕರ್ನಾಟಕದಿಂದ ಸಾಗುತ್ತದೆ. ಹೀಗಾಗಿ ಅಗತ್ಯವಿರುವ ೭.೫೬ ಟಿಎಮ್‌ಸಿ ಅಡಿಗಳಷ್ಟು ನೀರನ್ನು ತೆಗೆದುಕೊಳ್ಳುವುದರಿಂದ ಗೋವಾಕ್ಕೆ ಯಾವುದೇ ಹಾನಿಯಾಗದು. ಅಷ್ಟೇ ಅಲ್ಲ ಗೋವಾದಲ್ಲಿ ಅದಕ್ಕೂ ಹೆಚ್ಚು ನೀರು ಸಮುದ್ರದ ಪಾಲಾಗುತ್ತದೆ. ಅದನ್ನು ಅವರೇನು ಬಳಸಿಕೊಳ್ಳುತ್ತಿಲ್ಲ. ನಮಗೆ ನೀರಿನ ಬರವಿರುವ ಕಾರಣ ಇದು ನ್ಯಾಯಬದ್ದ ಎಂಬುದು ಕರ್ನಾಟಕದ ವಾದ.

ಇಸವಿ ೨೦೦೨ರಲ್ಲಿ ಜಲ ಸಂಪನ್ಮೂಲ ಮಂತ್ರಾಲಯದಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಂಡ ಕರ್ನಾಟಕ ಸರ್ಕಾರವು ಮಹದಾಯಿಯ ಪಾತ್ರದಲ್ಲಿ ಎರಡು ಬಾಂದಾರಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿತು. ಅದೇ ಕಳಸಾ ಹಾಗೂ ಬಂಡೂರಿ ಬಾಂದರಗಳು.

ತಕ್ಷಣ ಗೋವಾಕ್ಕೆ ಇದರಲ್ಲೇನೋ ಅಪಾಯದ ವಾಸನೆ ಕಾಣಿಸಿತು. ಅದು ಸೀದಾ ಸುಪ್ರೀಮ್‌ಕೋರ್ಟ್‌ಗೆ ತನ್ನ ಅಪೀಲನ್ನು ಅದೇ ವರ್ಷ ಸಲ್ಲಿಸಿತು. ಗೋವಾದ ಅಪೀಲಿನಲ್ಲಿ ಈ ರೀತಿ ನದಿಯನ್ನು ತಿರುಗಿಸುವುದರಿಂದ ತೊಂದರೆಯಾಗುವುದು ತನ್ನ ಜನರ ಹಾಗೂ ನದೀ ಪಾತ್ರದ ಜನರ ಬದುಕಿಗಷ್ಟೇ ಅಲ್ಲ, ಇಡೀ ಪಶ್ಚಿಮಘಟ್ಟವೇ ಅಪಾಯಕ್ಕೆ ಈಡಾಗುತ್ತದೆ. ಅಲ್ಲಿನ ಪರಿಸರ ಸಂಪೂರ್ಣ ಹಾಳಾಗುತ್ತದೆ. ಆಗ ನದಿಯೇ ಬತ್ತಿಹೋಗಬಹುದು. ಹೀಗೆ ಅನೇಕ ಅಂಶಗಳನ್ನು ಎತ್ತಿಹಿಡಿಯಿತು. ಹೀಗೆ ಇಸವಿ ೨೦೧೦ರಲ್ಲಿ ಮಹಾದಾಯಿ ವಾಟರ್ ಡಿಸ್ಪ್ಯೂಟ್ ಟ್ರಿಬ್ಯೂನಲ್ ರಚನೆಯಾಯಿತು. ಅಂದಿನಿಂದ ಕಳಸಾ-ಬಂಡೂರಿ ಆಂದೋಲನವೂ ಪ್ರಾರಂಭವಾಯಿತು. ಕಳೆದ ವರ್ಷ ಆದದ್ದು ಅದರ ಪರಾಕಾಷ್ಠೆ.

ಕಳಸಾ-ಬಂಡೂರಿಯಲ್ಲಿ ಕೆಲಸ ಪ್ರಾರಂಭವಾಗುತ್ತಿದ್ದಂತೆ ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿಯ ಸುತ್ತಲಿನ ಪ್ರದೇಶದಲ್ಲಿದ್ದ ಬಾವಿಗಳೆಲ್ಲಾ ಬತ್ತಿಹೋದವು. ಇದೊಂದು ರೀತಿಯಲ್ಲಿ ಮಲಪ್ರಭಾ ನದಿಗೆ ಬರುವ ನೀರಿನ ಕೊರತೆಗೂ ಕಾರಣವಾಯಿತು. ಇದೆಲ್ಲಾ ಪತ್ರಿಕೆಗಳಲ್ಲಿ ಒಂದೇ ಸಮನೆ ವರದಿಯಾಗತೊಡಗಿತು. ಇದೂ ಸಹಾ ಒಂದು ರೀತಿಯಲ್ಲಿ ಅಲ್ಲಿನ ರೈತರ ನೀರಿನ ಬರಕ್ಕೆ ಕಾರಣವಾಯಿತು. ಇಲ್ಲಿಯವರೆಗೆ ಮಹದಾಯಿಯಿಂದ ಒಂದು ತೊಟ್ಟು ನೀರು ಕಳಸಾ-ಬಂಡೂರಿ ಕಾಲುವೆಯಲ್ಲಿ ಹರಿಯಲಿಲ್ಲ. ಅದರಲ್ಲಿ ನೀರು ಇಂಗಿತೆನೋ ಅಂದುಕೊಂಡರೆ ಅದೂ ಸಹಾ ಆಗಲಿಲ್ಲ. ಯಾಕೆಂದರೆ ವಿವಾದ ಪ್ರಾರಂಭವಾದ ದಿನದಿಂದ ಆ ಪ್ರದೇಶದಲ್ಲಿ ಗಟ್ಟಿಯಾಗಿ ಮಳೆಯೇ ಸುರಿಯಲಿಲ್ಲ. ಇದರಿಂದ ಅಲ್ಲಿನ ಜನ ಇನ್ನಷ್ಟು ಆಕ್ರೋಶಕ್ಕೆ ಒಳಗಾದರು. ಸಂತ್ರಸ್ಥ ರೈತರು ಹೋರಾಟವನ್ನು ಮುಂದುವರೆಸಿದರು. ಮತ್ತು ಧಾರವಾಡ, ಗದಗ್, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳ ಜನ ಈ ಪ್ರತಿಭಟನೆಯಿಂದ ತೊಂದರೆಗೊಳಗಾದರು. ಜೊತೆಗೆ ತುಂಬಾ ದೊಡ್ಡ ಪ್ರಮಾಣದ ಆರ್ಥಿಕ ಲುಕ್ಸಾನುಗಳಾದವು. ಅಷ್ಟೇಅಲ್ಲ ಪ್ರತಿಭಟನೆಯಿಂದಾಗಿ ಟ್ರಬ್ಯೂನಲ್‌ನಲ್ಲಿನ ನಿರ್ಣಾಯಕರಿಗೆ ತಪ್ಪು ಅಭಿಪ್ರಾಯ ಮೂಡುವಂತೆ ಆಯಿತು. ರಾಜಕೀಯ ನಾಯಕರ ಪ್ರಚೋದನೆಯು ರೈತರನ್ನು ದಿಕ್ಕುಗೆಡಿಸಿತು.

ಇತ್ತ ಗೋವಾದ ಗುಂಪು ಸುಮ್ಮನುಳಿಯಲಿಲ್ಲ. ಇನ್ನಷ್ಟು ಬಲವರ್ಧನೆಗೊಳಿಸಲು ಪರಿಸರತಜ್ಞರನ್ನು ಅಖಾಡಕ್ಕೆ ಎಳೆಯಿತು. ಮಹದಾಯಿ ಬಚಾವೋ ಆಂದೋಲನ್ ಎಂಬ ಬ್ಯಾನರ್ ಅಡಿಯಲ್ಲಿ ನದಿ ತಿರುವು ಯೋಜನೆಯನ್ನು ಇನ್ನಷ್ಟು ವಿರೋಧಿಸತೊಡಗಿತು. ಬೆಳಗಾವಿಯ ರವೀಂದ್ರ ಕುಮಾರ್ ಸಯಾನಿ ಕೋರ್ಟ್‌ಗೆ ವಿರೋಧ ಸಲ್ಲಿಸಿದವರಲ್ಲಿ ಒಬ್ಬರು. ಅವರು ಯಾವುದೇ ರೀತಿಯಲ್ಲಿ ನದಿಯನ್ನು ತಿರುಗಿಸುವುದರ ವಿರೋಧಿ. ಅವರ ಪ್ರಕಾರ ಗೋವಾದ ಕುಡಿಯುವ ನೀರಿನ ಪ್ರಮಾಣದಲ್ಲಿ ಶೇಕಡಾ ೪೩ರಷ್ಟು ಪಡೆಯುವುದು ಮಹದಾಯಿಯಿಂದ. ಒಂದೊಮ್ಮೆ ನದಿಯ ಮೇಲ್ಭಾಗದಲ್ಲಿ ನೀರನ್ನು ತಿರುಗಿಸಿದರೆ, ಅದರಿಂದ ಗೋವಾದ ಜನ ಕುಡಿಯುವ ನೀರಿನಿಂದ ವಂಚಿತರಾಗುತ್ತಾರೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ನದಿಯನ್ನು ತಿರುಗಿಸಲು ಒಪ್ಪಬಾರದು ಎಂಬ ತೀವ್ರತರವಾದ ವಾದವನ್ನು ಟ್ರಿE1-mahadayi nadiಬ್ಯೂನಲ್‌ನ ಮುಂದಿಟ್ಟಿದ್ದರು. ಅದರೊಂದಿಗೆ ಗೋವಾದ ವನ್ಯಜೀವಿ ಸಂರಕ್ಷಿತ ಪ್ರದೇಶವು ನೀರಿನಲ್ಲಿ ಮುಳುಗುತ್ತದೆ ಎಂಬುದನ್ನು ನಿರೂಪಿಸಿದರು.

‘ಇದರಿಂದ ಮೀನುಗಾರಿಕೆಯ ಮೇಲೂ ಪರಿಣಾಮಬೀರುತ್ತದೆ. ಅಂದರೆ ನೀರು ಕಡಿಮೆಯಾದಂತೆ ನದಿಯಲ್ಲಿ ಉಪ್ಪಿನ ಪ್ರಮಾಣ ಹೆಚ್ಚುತ್ತದೆ. ಅದರಲ್ಲೂ ಸಮುದ್ರಕ್ಕೆ ಸೇರುವ ನೀರು ಕಡಿಮೆಯಾಗಿ ಅಲ್ಲಿಯೂ ಸಹಾ ಉಪ್ಪಿನ ಪ್ರಮಾಣ ಹೆಚ್ಚುತ್ತದೆ. ಹೀಗೆ ಇತ್ತ ಸಿಹಿನೀರಿನ ಮೀನುಗಳೂ ಸಿಗುವುದಿಲ್ಲ. ಅತ್ತ ಮೇಲೆರುವ ಉಪ್ಪಿನ ಪ್ರಮಾಣದಿಂದಾಗಿ ನೆಲವೆಲ್ಲಾ ಹಾಳಾಗುತ್ತದೆ. ಒಟ್ಟಾರೆ ಅತಿ ಚಿಕ್ಕ ಬದಲಾವಣೆಯೂ ಸಹಾ ತುಂಬಾ ದೊಡ್ಡ ಪೆಟ್ಟನ್ನು ನೀಡುತ್ತದೆ. ಕೇವಲ ಪರಿಸರವೊಂದೆ ಅಲ್ಲ ಜನಜೀವನವೂ ವ್ಯಸ್ತವಾಗುತ್ತದೆ’ ಎನ್ನುತ್ತಾರೆ ಸಯಾನಿ. ಈಗಾಗಲೇ ನೂರು ಅಡಿಗಳಷ್ಟು ಆಳ ತೆಗೆದ ಕಾಲುವೆಗಳಿಂದಾಗಿ ಮಲಪ್ರಭಾದ ಪರಿಸರ ವ್ಯವಸ್ಥೆ ಹಾಳಾಗಿದ್ದು ಗೋಚರ. ಕಳಸಾ, ಬಂಡೂರಿ ಅಥವಾ ಹಲ್ತಾರ ಪ್ರದೇಶಗಳಲ್ಲಿ ಸಿಗುವ ನೀರಿನ ಲಭ್ಯತೆ ತುಂಬಾ ಕಡಿಮೆ. ಅದರಿಂದ ಡ್ಯಾಮ್‌ಗೆ ಎಷ್ಟು ನೀರನ್ನು ಹರಿಸಲು ಸಾಧ್ಯ. ಕರ್ನಾಟಕ ಅಂದುಕೊಂಡಂತೆ ಖಂಡಿತಾ ೭.೫೬ ಟಿಎಮ್‌ಸಿ ಅಡಿಗಳಷ್ಟು ನೀರು ಅಲ್ಲಿ ಸಿಗಲು ಸಾಧ್ಯವಿಲ್ಲ ಎನ್ನುವ ಪ್ರತಿಪಾದನೆ ಅವರದು.

ಗೋವಾದ ಆರ್ಥಿಕತೆ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಪ್ರವಾಸೋದ್ಯಮಕ್ಕೆ ನೀರು ಅತ್ಯಂತ ಅಗತ್ಯ. ಗೋವಾ ಸರ್ಕಾರವು ಇದನ್ನೂ ಸಹಾ ತನ್ನ ವಾದದಲ್ಲಿ ಪ್ರಮುಖ ಅಂಶವಾಗಿ ಮುಂದಿಟ್ಟಿದೆ. ಭೀಮಘಡದ ವನ್ಯಜೀವಿ ಅಭಯಾರಣ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ, ಸುಮಾರು ೭೦೦ ಹೆಕ್ಟೇರ್ ಅರಣ್ಯ ಪ್ರದೇಶವು ನೀರಿನಲ್ಲಿ ಮುಳುಗುತ್ತದೆ. ಅಂದಾಜು ೬೦ ಸಾವಿರ ಮರಗಳು ಮತ್ತು ಅಸಂಖ್ಯಾತ ಸಸ್ಯ ರಾಶಿ ನಾಶವಾಗುತ್ತದೆ ಎಂಬುದನ್ನೂ ಸಹಾ ಗೋವಾ ಸರ್ಕಾರ ತನ್ನ ಅಪೀಲಿನಲ್ಲಿ ಪ್ರತಿಪಾದಿಸಿದೆ.

ಕರ್ನಾಟಕ ಕೇಳುತ್ತಿರುವುದು ತನ್ನ ಪಾಲು ಮಾತ್ರ

ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿಯು ಗೋವಾದ ಸಂಘರ್ಷದ ಅಹವಾಲನ್ನು, ಪರಿಸರ ತಜ್ಞರ ನಿರ್ಣಯಗಳನ್ನು ವಿರೋಧಿಸುತ್ತಿರುವ ಒಂದು ಸಂಘಟನೆ. ಅದರ ಮುಖ್ಯಸ್ಥರಾದ ವಿಕಾಸ್ ಸೊಪ್ಪಿನರವರ ಪ್ರಕಾರ ‘ ಯೋಜನೆಯು ತುಂಬಾ ದೊಡ್ಡ ಪ್ರಮಾಣದ ಕಾಡಿನ ನಾಶವನ್ನೇನನ್ನು ಮಾಡುತ್ತಿಲ್ಲ. ಮಲಪ್ರಭಾ ನದಿಗೆ ಸೇರಿಸಬೇಕಾದ ಅಂತರ ಕೇವಲ ಆರೆಂಟು ಕಿಲೋಮೀಟರ್‌ಗಳಷ್ಟು ಮಾತ್ರ. ಅದರಲ್ಲೂ ನೀರನ್ನು ಮೇಲೆತ್ತಿ ತರಬೇಕಿಲ್ಲ. ದಾರಿ ಮಾಡಿಕೊಟ್ಟರೆ ಗುರುತ್ವಾಕರ್ಷಣೆಯ ಮೂಲಕ ತಾನೇತಾನಾಗಿ ಹರಿದು ಬರುತ್ತದೆ. ಈಗಿರುವ ಮಲಪ್ರಭಾದ ನೀರು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಅನೇಕ ಹಳ್ಳಿಗಳ ಕುಡಿಯುವ ನೀರಿನ ಪೂರೈಕೆಯನ್ನೂ ಸಹ ಮಾಡುತ್ತಿಲ್ಲ. ಅವರಿಗೆ ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಸಲಾಗುತ್ತಿದೆ. ಮುಖ್ಯವಾಗಿ ಕುಡಿಯುವ ನೀರಿಗಾಗಿಯೇ ನಮ್ಮ ಹೋರಾಟ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ’ ಎನ್ನುತ್ತಾರೆ.

ಅವರು ಮುಂದುವರೆಸಿ ಹೇಳುತ್ತಾರೆ; ಇವರೆಲ್ಲಾ ಹೇಳುವಂತೆ ಮಹದಾಯಿಗೆ ಈ ಯೋಜನೆಯಿಂದ ತೊಂದರೆಯಾಗುತ್ತದೆ ಎಂಬ ಕುರಿತು ಯಾವ ಅಧ್ಯಯನವೂ ಆಗಿಲ್ಲ. ಮಹದಾಯಿಯ ತಿರುವಿನಿಂದ ವಿನಾಶವಾಗುತ್ತದೆ ಎಂಬುದು ಸಹಾ ಸಾಧಿಸಲಾಗಿಲ್ಲ. ಕಾಲುವೆಗಳಿಗೆ ನೀರಿನ ಕೊರತೆಯಾಗುತ್ತದೆ ಅದನ್ನು ತಿರುಗಿಸುವುದು ವ್ಯರ್ಥ ಎನ್ನುವ ಗೋವಾದ ವಾದವನ್ನು ಟ್ರಿಬ್ಯೂನಲ್ ಈಗಾಗಲೇ ತಿರಸ್ಕರಿಸಿದೆ. ನಾವು ಹಕ್ಕೊತ್ತಾಯ ಮಾಡುತ್ತಿರುವುದು ನಮ್ಮ ಪಾಲಿನ ನೀರಿಗಾಗಿ ಮಾತ್ರ. ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ ನೀರಿನ ಕೊರತೆಯಾಗುತ್ತಿರುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವು ಟ್ರಿಬ್ಯೂನಲ್‌ಗೆ ಬಿಂಬಿಸಲು ಪ್ರಯತ್ನಿಸುತ್ತಿದೆ. ಗೋವಾದ ಸರ್ಕಾರದೊಂದಿಗೆ ಈ ಕುರಿತು ಮಾತುಕತೆ ನಡೆಸಿ ಕೋರ್ಟ್‌ನ ಹೊರಗೆ ತೀರ್ಮಾನಿಸಲು ಪ್ರಯತ್ನ ಮಾಡಲಾಗುತ್ತಿದೆ. ಕ್ರಿಷ್ಣಾ ಮತ್ತು ಕಾವೇರಿ ವಿವಾದಗಳಲ್ಲಿ ಕೋರ್ಟ್‌ನ ತೀರ್ಮಾನಗಳಿಂದ ಜನ ಈಗಾಗಲೇ ಬೇಸತ್ತಿದ್ದಾರೆ. ಅದಕ್ಕಾಗಿ ಕೋರ್ಟ್ ಹೊರಗೇ ತೀರ್ಮಾನವಾಗಲಿ ಎಂಬುದು ನಮ್ಮಲ್ಲರ ಆಶಯ.

ಬೆಂಗಳೂರಿನಲ್ಲಿರುವ ಐಐಎಸ್‌ಸಿಯ ವಿಜ್ಞಾನಿ, ಎನರ್ಜಿ ಮತ್ತು ವೆಟ್‌ಲ್ಯಾಂಡ್ ಸಂಶೋಧನಾ ಗುಂಪಿನ ಮುಖ್ಯಸ್ಥ ಡಾ. ಟಿ ವಿ ರಾಮಚಂದ್ರ ಅವರ ಪ್ರಕಾರ ‘ಯಾವುದೇ ನದಿಗಳಿಗೆ ಅದರ ಜಲಾನಯನ ಪ್ರದೇಶ ತುಂಬಾ ಮುಖ್ಯ. ವರ್ಷವಿಡೀ ನದಿಗೆ ನೀರು ಪೂರೈಕೆಯಾಗಲು ಜಲಾನಯನ ಪ್ರದೇಶದಲ್ಲಿರುವ ಕಾಡು ಹಾಗೂ ಅದು ಇಂಗಿಸುವ ನೀರೇ ಆಕರ. ಬೇಸಿಗೆಯ ನೀರಿನ ಕೊರತೆಯನ್ನು ನೀಗಿಸುವುದೇ ಸಮೃದ್ಧವಾಗಿರುವ ಕಾಡಿನಿಂದ ತುಂಬಿದ ವಿಶಾಲವಾದ ಸಸ್ಯವೈವಿಧ್ಯ. ಒಮ್ಮೆ ಇಂತಹಾ ಜಲಾನಯನ ಪ್ರದೇಶವು ಹಾನಿಗೊಳಗಾದರೆ ಅದನ್ನು ಮರುಪೂರಣ ಮಾಡಲು ಖಂಡಿತಾ ಸಾಧ್ಯವಾಗದು. ಕಳಸಾ ಮತ್ತು ಬಂಡೂರಿಯ ಜಲಾನಯನ ಪ್ರದೇಶವು ಈಗಾಗಲೇ ದುಸ್ಥಿತಿಯಲ್ಲದೆ. ಅಲ್ಲಿ ಕಾಡಂತೂ ಸಂಪೂರ್ಣ ನಾಶವಾಗಿದೆ. ಪರಿಸರದ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಅಲ್ಲಿ ಯೋಜನೆಯ ಮುಂದುವರಿಕೆ ನಡೆಯುತ್ತಿದೆ.

ಡಾ. ಟಿ ವಿ ರಾಮಚಂದ್ರ ಅವರು ಮುಂದುವರೆಸುತ್ತಾರೆ; ಜಲಾನಯನ ಪ್ರದೇಶದ ನಾಶದಿಂದ ನದಿ ಹಾಗೂ ಜೌಗು ಪ್ರದೇಶಗಳು ನಿಧಾನವಾಗಿ ಒಣಗುತ್ತಾ ಬರುತ್ತವೆ. ಶರಾವತಿಯ ವಿಷಯದಲ್ಲೂ ಸಹ ಹೀಗೇ ಆಗಿದೆ. ಅನೇಕ ಹಳ್ಳಗಳನ್ನು ಕೃಷಿಗಾಗಿ ತಿರುಗಿಸಿಕೊಂಡಿದ್ದರಿಂದ ಶರಾವತಿಯು ಬೇಸಿಗೆ ಬರುವ ಮೊದಲೇ ಬತ್ತಿಹೋಗುತ್ತಿದೆ. ಮಹದಾಯಿಗೂ ಸಹಾ ಇದೇ ಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ. ರೈತರಿಗೆ ತಕ್ಷಣದ ಪರಿಹಾರವೆನ್ನುವ ತೇಪೆ ಕಟ್ಟುವ ಬದಲು ಶಾಶ್ವತ ಯೋಜನೆಯನ್ನು ರೂಪಿಸಬೇಕಾಗಿದೆ. ಮಹದಾಯಿಯ ನೈಸರ್ಗಿಕ ಆರೋಗ್ಯವನ್ನು ಕಾಪಾಡುವಂತಹಾ ಕೆಲಸ ಆಗಬೇಕಿದೆ. ನದಿ ಕಣಿವೆಯಲ್ಲಿ, ಕಾಲುವೆಯ ಪ್ರದೇಶದಲ್ಲಿ ದಟ್ಟ ಕಾಡು ನಿರ್ಮಾಣಗೊಂಡರೆ ನೀರಿನ ಕೊರತೆ ತಾನೇತಾನಾಗಿ ಪರಿಹಾರ ಕಾಣುತ್ತದೆ. ಅಲ್ಲಿನ ಪ್ರತಿಯೊಬ್ಬರು ನೀರಿಂಗಿಸುವ ಕೆಲಸವನ್ನು ನಿರಂತರ ಮಾಡಬೇಕಾಗಿದೆ ಎನ್ನುತ್ತಾರೆ.

ವಿವಾದಗಳಿಗೆಲ್ಲಾ ರಾಜಕಾರಣಿಗಳೇ ಕಾರಣ

ಈ ರೀತಿಯ ನದಿ ವಿವಾದಗಳ ಮಹಾಪೂರವೇ ನಮ್ಮ ರಾಜ್ಯದಲ್ಲಿ ತುಂಬಿಹೋಗಿದೆ. ಯಾವುದೇ ರಾಜಕೀಯ ನಾಯಕರಿಗೂ ಈ ಎಲ್ಲಾ ವಿವಾದಗಳು ಪರಿಹಾರ ಕಾಣುವುದು ಬೇಕಾಗಿಲ್ಲ. ತಮ್ಮ ಮೇಲೆ ಆರೋಪಗಳು ಬಂದಾಗಲೆಲ್ಲ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಇಂತಹಾ ವಿವಾದಗಳಿಗೆ ಜೀವಕೊಡುತ್ತಾರೆ. ಬೆಂಕಿಹೊತ್ತಿ ಉರಿಯುವಂತೆ ಮಾಡುತ್ತಾರೆ. ತಮ್ಮ ಮೇಲಿನ ಆರೋಪವು ಜನರ ಮನದಲ್ಲಿ ಅಥವಾ ಚಾನಲ್‌ಗಳ ಪ್ರಮುಖ ಸುದ್ದಿಯಲ್ಲಿ ಮರೆಯಾದ ಕೂಡಲೇ ಉರಿವ ಬೆಂಕಿಯನ್ನು ಶಮನಗೊಳಿಸುವ ಮಾತುಗಳನ್ನಾಡುತ್ತಾರೆ.

ಜನ ಜಾಗೃತರಾಗಬೇಕಿದೆ

ಜಾಗೃತಿ ಎಂದ ಕೂಡಲೇ ಹೋರಾಟ ಎನ್ನುವ ಅರ್ಥವನ್ನು ಮಾಡಿಕೊಳ್ಳಬೇಕಿಲ್ಲ. ಜಾಗೃತಿ ಎಂದರೆ ನೀರನ್ನು ಇಂಗಿಸುವ ಕೆಲಸ. ಮರಗಿಡಗಳನ್ನು ಬೆಳೆಸುವ ಕೆಲಸ. ಅತ್ಯಂತ ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯುವ ಕೆಲಸ. ಬರುವಷ್ಟೇ ಮಳೆ ನೀರನ್ನು ಹರಿದು ಹೋಗಲು ಬಿಡದೆ ಹಿಡಿದಿಡುವ ಕೆಲಸ. ನೆಲಕ್ಕೆ ಮಚ್ಚಿಗೆಯಾಗಿ ಹುಲ್ಲು ಮತ್ತಿತರ ಸಸ್ಯಗಳನ್ನು ಬೆಳೆಸುವ ಕೆಲಸ. ಹೀಗೆ ಸಮರೋಪಾದಿಯಲ್ಲಿ ಪರಿಸರ ಮರುಪೂರಣ ಮಾಡುವ ಕೆಲಸ ಆಗಬೇಕಿದೆ. ಆದರೆ ಜನರಿಗೆ ಹೋರಾಟದಲ್ಲಿರುವ ಆಸಕ್ತಿ ಇದರಲ್ಲಿಲ್ಲದಿರುವುದು ಮಾತ್ರ ವಿಪರ್ಯಾಸ.

ಚಿತ್ರ-ಲೇಖನ:  -ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*