ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತ್ಯಾಜ್ಯದ ನೀರಿನಿಂದ ತನ್ನ ಅಂದಗೆಡಿಸಿಕೊಂಡ ಬಿಳಾಲಖಂಡ

ಬಿಳಾಲಖಂಡ ಭಟ್ಕಳ ಪಟ್ಟಣದಿಂದ ೬ಕಿ.ಮೀ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಸುತ್ತಲೂ ಹಬ್ಬಿಕೊಂಡಿರುವ ವನ ರಾಶಿಯ ಮಧ್ಯದಲ್ಲಿ ಹಸುರಿನಿಂದ ಕಂಗೊಳಿಸುವ ಅಡಿಕೆ, ತೆಂಗು ತೋಟಗಳು, ಭತ್ತದ ಗದ್ದೆಗಳ ನಡುವೆ ಈ ಹಳ್ಳಿ ನೋಡುಗರ ಕಣ್ಣಿಗೆ ಹಾಯೆನಿಸುತ್ತದೆ. ಎತ್ತರೆತ್ತರವಾಗಿ ಬೆಳೆದುನಿಂತ ಮರಗಳ ಎಲೆಗಳ ಮಧ್ಯದಿಂದ ಇಣುಕಿ ನೋಡುವ ಸೂರ‍್ಯ ರಶ್ಮಿ, ಗುಡ್ಡದಿಂದ ಹರಿದುಬರುವ ಸ್ಪಟಿಕ ಶುಭ್ರವಾದ ಝರಿ ನೀರು. ಆ ನೀರಿIMG_20160805_135711ನ ವೈಭೋಗವೇ ವರ್ಣಿಸಲಸಾಧ್ಯ. ಗುಡ್ಡದಿಂದ ಹರಿದುಬರುವ ಆ ಝರಿ ನೀರು ‘ನಾರ‍್ಕೋಣಿ’ ಕೆರೆಯಲ್ಲಿ ಶೇಖರಣೆಗೊಂಡು ಅಲ್ಲಿಂದ ಸುಮಾರು ಹತ್ತು ಅಡಿ ಅಗಲದ ಕಾಲುವೆಯ ಮೂಲಕ ಸಾಗಿ ಅಕ್ಕ ಪಕ್ಕದ ಹಳ್ಳಿಗರ ತೋಟಗಳಿಗೆ, ಜಾನುವಾರಗಳಿಗೆ, ಬಟ್ಟೆ ಒಗೆಯಲು ನೀರನ್ನು ನೀಡಿ ಸುಮಾರು ೧೨ ಕಿ.ಮೀ ದೂರ ಹರಿದು ಮುಂಡಳ್ಳಿ ಹೊಳೆಗೆ ಸೇರಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ಸೊಬಗನ್ನೊಮ್ಮೆ ನೋಡಿದರೆ ಈ ಹಳ್ಳಿಗರೇ ನಿಜಕ್ಕೂ ಅದೃಷ್ಟವಂತರೆಂಬುದು ಭಾಸವಾಗುತ್ತದೆ. ಆದರೆ ಆ ಹಳ್ಳಿಗರು ಅನುಭವಿಸುತ್ತಿರುವ ಸ್ಥಿತಿಯನ್ನು ತಿಳಿದಾಗ ದಂಗಾಗುವುದು ಖಚಿತ.

ಭಟ್ಕಳ ಪುರಸಭೆಯವರು ಈ ಬಿಳಾಲಖಂಡ ಊರಿನ ಗುಡ್ಡದಲ್ಲಿ ನೆಲಭರ್ತಿ ಜಾಗವನ್ನು ನಿರ್ಮಿಸಿದ್ದು ನಗರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನೆಲ್ಲ ತಂದು ಇಲ್ಲಿಯೇ ಸುರಿಯುತ್ತಾರೆ. ಅವರ ಪ್ರಕಾರ ನಗರ ಶುಚಿಯಾದರೆ ಸಾಕು ನಗರದಿಂದ ಹೊರಹೋದ ತ್ಯಾಜ್ಯಗಳೇನಾದವು ಎಂದು ನೋಡುವ ಗೋಜಿಗೆ ಹೋಗುವುದಿಲ್ಲ. ಪುರಸಭೆಯವರು ತ್ಯಾಜ್ಯ ಸಂಗ್ರಹಣೆಯಿಂದ ಹಿಡಿದು ನೆಲಭರ್ತಿ ಮಾಡುವವರೆಗೂ ಯಾವ ರೀತಿ ಮಾಡಬೇಕೆಂಬ ಬಗ್ಗೆ ಪೌರ ಘನ ತ್ಯಾಜ್ಯ ನಿರ್ವಹಣಾ ಮಾರ್ಗಸೂಚಿ ೨೦೦೦ ತಿಳಿಸುತ್ತದೆ. ಈ ಕಾನೂನಿನ ಶೆಡ್ಯೂಲ್ ೩ರಲ್ಲಿ ನೆಲಭರ್ತಿ ಜಾಗದ ವಿಶೇಷಣಗಳ ಬಗ್ಗೆ ಉಲ್ಲೇಖವಿದ್ದು ನೆಲಭರ್ತಿ ಜಾಗದ ಆಯ್ಕೆಯಿಂದ ಹಿಡಿದು, ಜಾಗದ ಸೌಲಭ್ಯ, ವಿಶೇಷತೆ, ಮಾಲಿನ್ಯ ತಡೆಗಟ್ಟುವಿಕೆ, ನೀರಿನ ಗುಣಮಟ್ಟ ನಿರ್ಧರಿಸುವುದರ ಕುರಿತು ಒಟ್ಟೂ ೨೩ ಅಂಶಗಳಿದ್ದು ಇದರ ಅನುಸಾರ ನಿರ್ವಹಣೆ ಮಾಡಿದ್ದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಲು ಸಾಧ್ಯವಿಲ್ಲ. ಆದರೆ ಪುರಸಭೆಯವರು ಎಲ್ಲಾ ತ್ಯಾಜ್ಯವನ್ನು ನೆಲಭರ್ತಿ ಜಾಗಕ್ಕೆ ತಂದು ಸುರಿಯುತ್ತಾರೆ. ಅದು ಹಸಿ ಕಸ, ಒಣಕಸ, ಸತ್ತಪ್ರಾಣಿಗಳ ತ್ಯಾಜ್ಯ ಎಲ್ಲವನ್ನೂ ಸೂಕ್ತವಾಗಿ ನಿರ್ವಹಣೆ ಮಾಡದೇ ಒಟ್ಟಿಗೇ ರಾಶಿ ಹಾಕುತ್ತಾರೆ. ಆ ತ್ಯಾಜ್ಯವೆಲ್ಲವೂ ಸೇರಿದಾಗ ಅದರಿಂದ ಒಂದು ರೀತಿಯ ದ್ರವ ಉತ್ಪತ್ತಿಯಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ‘ಲಿIMG_20160914_142348ಚೆಟ್’ ಎಂದು ಕರೆಯುತ್ತಾರೆ. ಇದು ತುಂಬಾ ವಿಷಕಾರಿ ದ್ರವವಾದ್ದರಿಂದ ಅದು ನೆಲಭರ್ತಿ ಜಾಗದಿಂದ ಹೊರಗಡೆ ಚಲಿಸದಂತೆ ನಿರ್ವಹಣೆ ಮಾಡಬೇಕು. ಆದರೆ ಪುರಸಭೆಯವರ ನಿರ್ಲಕ್ಷ್ಯದಿಂದಾಗಿ  ಈ ‘ಲಿಚೆಟ್’ ದ್ರವ ಎತ್ತರ ಪ್ರದೇಶದಲ್ಲಿರುವ ನೆಲಭರ್ತಿ ಜಾಗದಿಂದ ಇಳಿದು ಗುಡ್ಡದಲ್ಲಿ ಹರಿದು ಬಂದು ಝರಿ ನೀರಿನೊಂದಿಗೆ ಸೇರಿ ಗುಡ್ಡದ ತಳಭಾಗದಲ್ಲಿರುವ ಬಿಳಾಲಖಂಡ ಗ್ರಾಮಕ್ಕೆ ಬರುತ್ತದೆ. ಶುಭ್ರ  ಸ್ಪಟಿಕದಂತಿದ್ದ ಆ ಝರಿ ನೀರು ಈಗ ತ್ಯಾಜ್ಯದ ನೀರಿನೊಂದಿಗೆ ಸೇರಿ ಮಲಿನವಾಗಿದೆ. ಇನ್ನೊಂದು ಆಘಾತಕಾರಿ ಸಂಗತಿಯೇನೆಂದರೆ ಗುಡ್ಡದಿಂದ ಹರಿದು ಬರುವ ಝರಿ ನೀರು ‘ನಾರ‍್ಕೋಣಿ’ ಎಂಬ ಕೆರೆಯಲ್ಲಿ ಸೇರ್ಪಡೆಯಾಗುತಿತ್ತು. ಈ ಕೆರೆ ಸುಮಾರು ೭೦ ವರ್ಷಕ್ಕಿಂತಲೂ ಹಳೆಯ ಕೆರೆಯಾಗಿದ್ದು ಈ ಕೆರೆಯಲ್ಲಿ ಶೇಖರಣೆಯಾದ ಝರಿ ನೀರನ್ನು ಆ ಹಳ್ಳಿಯ ಜನರು ತಮ್ಮ ದಿನಬಳಕೆಗೆ ಬಳಸುತ್ತಿದ್ದರು. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಅಷ್ಟೊಂದು ಹಳೆಯದಾದ ಕೆರೆಯನ್ನು ಆ ಹಳ್ಳಿಗರೇ ಸರ್ಕಾರದ ಯಾವುದೇ ಅನುದಾನ ಬಳಸದೆ ತಮ್ಮ ಸ್ವಂತ ಖರ್ಚಿನಲ್ಲಿ ಹೂಳೆತ್ತುವುದು, ಕಟ್ಟೆ ನಿರ್ಮಿಸುವ ಮೂಲಕ ನಿರ್ವಹಣೆ ಮಾಡಿದ್ದರು ಆದರೆ ಈಗ ಕೆಲವು ವರ್ಷಗಳಿಂದ ತ್ಯಾಜ್ಯದ ನೀರು ಬಂದು ಸೇರುವುದರಿಂದ ಆ ಕೆರೆ ಇದ್ದೂ ಇಲ್ಲದಂತಾಗಿದೆ. ಮಳೆಗಾಲದಲ್ಲಿ ರಾಶಿ ರಾಶಿ ಕಸಗಳು ಗುಡ್ಡದಿಂದ ಇಳಿದು ಬಂದು ‘ನಾರ‍್ಕೋಣಿ’ ಕೆರೆಯಲ್ಲಿ ತುಂಬಿಕೊಳ್ಳುತ್ತೆ ಅಲ್ಲಿಂದ ನೇರವಾಗಿ ಕೃಷಿ ಗದ್ದೆಗಳಿಗೆ ಸೇರುತ್ತದೆ. ಹಾಗೆಯೇ ಆ ತ್ಯಾಜ್ಯವೆಲ್ಲವೂ ಕಾಲುವೆಯ ಮೂಲಕ ಮುಂಡಳ್ಳಿ ಹೊಳೆಗೆ ಪ್ರವೇಶಿಸಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅಷ್ಟೇ ಅಲ್ಲದೇ ಹಳ್ಳಿಯ ಅಂರ್ತಜಲವೂ ಸಹ ತ್ಯಾಜ್ಯದ  ನೀರಿನಿಂದ ಕಲುಷಿತವಾಗಿರಬಹುದೆಂಬ ಶಂಖೆಯಿಂದ ಹಳ್ಳಿಯವರು ಭಯದಿಂದಲೇ ನೀರನ್ನು ಉಪಯೊಗಿಸುತ್ತಾರೆ.

ಹಳ್ಳಿಗರು ಒಂದೆರಡು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾರೂಬ್ಬರೂ ಈ ಕುರಿತು ಸೂಕ್ತ ಕ್ರಮ ಕೈಗೊಂಡಿಲ್ಲ. ಪುರಸಭೆಯವರು ನೆಲಭರ್ತಿ ಜಾಗವನ್ನು ಕಾನೂನಿನ ಪ್ರಕಾರ ನಿರ್ವಹಣೆ ಮಾಡಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಸಾಧ್ಯ.  ಆ ದಿಸೆಯಲ್ಲಿ ಸಂಬಂಧಪಟ್ಟ  ಸಂಘ ಸಂಸ್ಥೆಗಳು ಈ ಹಳ್ಳಿಗರ ಸ್ಥಿತಿಯನ್ನು  ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದೇ ಈ ಲೇಖನದ ಆಶಯ.

ಚಿತ್ರ-ಲೇಖನ:  ವಿನೋದ ಪಟಗಾರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*