ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲ ವಿಶ್ವ ದಿನಾಚರಣೆ / ಗುರುತು ಬಾವಿ – ‘ಆಬ್ಸರ್ವೇಶನ್ ವೆಲ್ಸ್’ ಗುರುತೇ ಈಗ ಸಿಗುತ್ತಿಲ್ಲ! – ಬಾವಿಗಳ ‘ಜಲಲೇಖ ಏರುಪೇರು’ ತಿಂಗಳಿಗೊಮ್ಮೆ ಇನ್ನಾದರೂ ಅಳೆಯೋಣ

 ‘ನೀರಿಗಾಗಿ ನಿಸರ್ಗ’ ಈ ಬಾರಿಯ  ಜಲ ವಿಶ್ವ ದಿನಾಚರಣೆಯ ಧ್ಯೇಯ. ವಿಶೇಷವೆಂದರೆ, ವಿಶ್ವ ಮಟ್ಟದ ಜಲ ದಿನ ಆಚರಣೆಗೆ ಇಂದಿಗೆ ೨೫ರ ಹರೆಯ!

ಮಳೆಯ ಹಂಗೇ ಇಲ್ಲದ, ಕೊಳವೆ ಬಾವಿಗಳ ಮೊರೆಹೋದ ಪಟ್ಟಣದ ಜನ ಒಂದೆಡೆ ಇದ್ದೇವೆ. ಮಳೆಯೇ ಜೀವದ್ರವ್ಯ ಆಗಿಸಿಕೊಂಡಿರುವ ರೈತಾಪಿ ವರ್ಗ ಮತ್ತೊಂದೆಡೆ ಇದೆ. ಬೋರ್‌ವೆಲ್ ಕೃಷಿಗೆ ಇಳಿದ ರೈತರ ಸಂಖ್ಯೆಯೂ ಗಣನೀಯವಾಗಿದೆ! ಈಗ ಬೇಡಿಕೆಗೆ ತಕ್ಕಂತೆ ನೀರು ಲಭ್ಯವಿಲ್ಲದ ಕಾರಣ, ಸೆಣೆಸಾಟ ಜಲ ಸಾಕ್ಷರತೆ ಮೂಡಿಸುತ್ತಿದೆ.. ಈಗ ದಿನಾಚರಣೆ ಮಹತ್ವ ಮರೆಯಾಗಿ, ದಿನವೂ ನೀರು ತುಂಬುವ ಹಬ್ಬ ಆಚರಿಸಬೇಕಾದ ತಹತಹ ನಮಗೆ ಮನದಟ್ಟಾಗುತ್ತಿದೆ! ವಾತಾವರಣ ತುಸು ಅಸಹ್ಯವೂ ಆಗುತ್ತಿದೆ.

ಮಳೆ ಪ್ರಮಾಣ ಅಳೆಯುವ ಉಪಕರಣ ನಮ್ಮ ರಾಜ್ಯದ ನಾಲ್ಕು ಮೂಲೆಗಳನ್ನು ಕೇಂದ್ರೀಕರಿಸಿ, ಅಲ್ಲಲ್ಲಿ ಸ್ಥಾಪಿಸಿ ದಾಖಲಾತಿ ನಿರಂತರ ನಡೆಸುತ್ತಿರುವುದು ನಮ್ಮೆಲ್ಲರ ಗಮನಕ್ಕಿದೆ. ಹೌದು, ಮಳೆ ಬಿದ್ದರೆ ಮಾಪನ! ಹಾಗಾಗಿ, ಅಂತರ್ಜಲ ದೋಚುವ ಕಾಯಕ ನಿತ್ಯ ಎಲ್ಲೆಡೆ ಸಾಮಾನ್ಯವಾಗಿದೆ! ಎಷ್ಟು ದಿನ ಹೀಗೆ ಕೊಳ್ಳೆ ಹೊಡೆಯೋದು?

‘ಗುರುತು ಬಾವಿಗಳು’ (ಆಬ್ಸರ್ವೇಶನ್ ವೆಲ್ಸ್) ಎಲ್ಲಿವೆ?IMG-20180321-WA0012

ಹಾಗೆಯೇ, ಸ್ಥಳೀಯವಾಗಿ ಜಲ ಮಟ್ಟದಲ್ಲಿನ ಏರುಪೇರು ಗುರುತಿಸಲು, ವ್ಯತ್ಯಾಸ ಅಳೆಯಲು ‘ಗುರುತು ಬಾವಿಗಳು’ (ಆಬ್ಸರ್ವೇಶನ್ ವೆಲ್ಸ್) ‘ವೀಕ್ಷಣಾ ಬಾವಿ’ ಅಂತಲೂ ಕರೆಯುತ್ತಾರೆ.. ಅವು ರಾಜ್ಯದಲ್ಲಿವೆ (ಇದ್ದವು..! ಹುಡುಕಿಕೊಡಿ..!). ಈ ಬಾವಿಗಳ ಜಲ ಮಟ್ಟದಲ್ಲಿ ಆಗುವ ಏರುಪೇರು ತಿಂಗಳಿಗೊಮ್ಮೆ ಅಳೆದು ನೋಡುವ ಕೆಲಸ ಜಲ ನೀತಿ ನಿರೂಪಕರಿಗೆ ಇನ್ನಾದರೂ ಕಡ್ಡಾಯವಾಗಬೇಕಿದೆ.

ನಮ್ಮ ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಗೆ ನೇಮಕಗೊಂಡಿರುವ ಸಿಬ್ಬಂದಿ ಕರ್ತವ್ಯ, ನೆಲಮಟ್ಟ, ಅಂತರ್ಜಲ ಮಟ್ಟದಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿ, ನೀರೆಚ್ಚರದ ಹೆಜ್ಜೆಗಳನ್ನು ಇರಿಸಲು ಸಕಾಲಿಕವಾಗಿ ಕರೆಗಂಟೆ ಮೊಳಗಿಸುವುದು ಅವರ ಆದ್ಯತೆ ಆಗಬೇಕಿದೆ! ಪ್ರತಿ ತಿಂಗಳು ಸಚಿತ್ರ ವರದಿ ದಾಖಲಿಸುವುದು, ಜನ ಸಾಮಾನ್ಯರಿಗೆ ಮಾಹಿತಿ ಬಿಡುಗಡೆ ಮಾಡುವುದು ಅವರ ಕರ್ತವ್ಯ!

ಈ ಬಗೆಯ ಜಲಮಟ್ಟದ ಸಮೀಕ್ಷೆ ಅಥವಾ ವೀಕ್ಷಣೆ ಗಂಭೀರವಾಗಿ ಮತ್ತು ಜವಾಬ್ದಾರಿಯುತವಾಗಿ ಸ್ಥಳೀಯ ಮಟ್ಟದಲ್ಲಿ ನಡೆದರೆ, ಋತುಮಾನಕ್ಕೆ ತಕ್ಕಂತೆ ಜಲಮಟ್ಟದಲ್ಲಿ ಆಗುತ್ತಿರುವ ವ್ಯತ್ಯಾಸಗಳ ನಿಖರ ದಾಖಲೀಕರಣ ಸಾಧ್ಯ. ಯಾವ ಬಗೆಯ ವ್ಯತ್ಯಾಸಗಳಾಗುತ್ತಿವೆ, ಯಾವ ಪ್ರದೇಶದಲ್ಲಿ ನೀರಿನ ಬಳಕೆ ಹೆಚ್ಚಿದೆ, ಜಲ ಮಟ್ಟದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿದ್ದರೆ ಆ ಬಗ್ಗೆ ಅಧ್ಯಯನ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ.. ಹೀಗೆ, ಹತ್ತು ಹಲವು ಸಂದೇಹ, ಗೊಂದಲ, ಮಾರ್ಗಗಳ ಬಗ್ಗೆ ಸಮರ್ಪಕ ಉತ್ತರ ದೊರೆಯುತ್ತದೆ.

ಜಲ ಮಟ್ಟದ ನಿರಂತರ ಅಧ್ಯಯನಗಳಿಂದ, ಅಂತರ್ಜಲವನ್ನು ಮಿತಿಮೀರಿ ಅಥವಾ ಹೆಚ್ಚು ಬಳಸುತ್ತ ಹೋಗುವುದರಿಂದ ಸದ್ಯದ ತುರ್ತು ಪರಿಸ್ಥಿತಿ ನಿರ್ವಹಣೆಯಾಗುತ್ತದೆ! ಫಲವೂ ಉತ್ತಮ ಎನಿಸಬಹುದು! ಆದರೆ, ಬಳಸುವಾಗ ಜಾಗ್ರತೆ ಉಂಟುಮಾಡದಿದ್ದರೆ, ಮುಗಿದು ಹೋಗಬಹುದಾದ, ಪುನರುಜ್ಜೀವಿತಗೊಳಿಸಲಾಗದ ಜಲ ಸಂಪತ್ತನ್ನು ಕಾಲಾನಂತರ ಕಳೆದುಕೊಳ್ಳುವ ಅಪಾಯವಿದೆ. ಪರ್ಯಾಯವೇನು? ಆಪತ್ಕಾಲ ಪರಿಸ್ಥಿತಿ ಎದುರಿಸುವುದು ತಪ್ಪದು.

IMG_20180224_093003039ಪ್ರಶ್ನೆ ಇರುವುದು, ಜಲ ಮಟ್ಟ ಅಳೆಯಲು ಎಷ್ಟು ಬಾವಿಗಳನ್ನು ಮೀಸಲಿರಿಸಬೇಕು? ವರ್ಷದಲ್ಲಿ ಎಷ್ಟು ಬಾರಿ ಜಲ ಮಟ್ಟದ ವ್ಯತ್ಯಾಸ ಅಥವಾ ಏರುಪೇರುಗಳನ್ನು ಅಳೆಯಬೇಕು? ಸ್ಥಳೀಯವಾಗಿಯೇ ಯೋಜಿಸುವುದು ಅಪೇಕ್ಷಿತ. ಸಮುದಾಯದ ಸಹಭಾಗಿತ್ವ ಲಭಿಸಿದರೆ ಇನ್ನೂ ಉತ್ತಮ. ಇದು ಕೇವಲ ಸಂಬಂಧಿಸಿದ ಇಲಾಖೆಯ ಕೆಲಸವಲ್ಲ! ಕೆಲ ಖಾಸಗಿ ಬಾವಿಗಳನ್ನೂ, ಪಾಲಿಕೆ, ಪಂಚಾಯ್ತಿ ಸುಪರ್ದಿಯ ಬಾವಿಗಳನ್ನು ‘ಆಬ್ಸರ್ವೇಶನ್ ವೆಲ್’ ಆಗಿ, ಬಳಸಿಕೊಳ್ಳುವ ಪ್ರಾವಧಾನ ಮಾಡಿಕೊಳ್ಳಬಹುದು.

ನಮ್ಮ ರಾಜ್ಯದ ಅಂತರ್ಜಲ ವಿಭಾಗ ಪ್ರತಿ ೮೦ ಚದರ ಕಿ.ಮೀ. ಪ್ರದೇಶಕ್ಕೆ ಕನಿಷ್ಠ ಒಂದರಂತೆ ಜಲಮಟ್ಟ ಅಳೆಯುವ ಬಾವಿ ಇರಬೇಕೆಂದು ನಿಗದಿಪಡಿಸಿದೆ! ತಿಂಗಳಿಗೊಮ್ಮೆಯಾದರೂ ಈ ಬಾವಿಗಳಲ್ಲಿನ ಜಲಮಟ್ಟವನ್ನು ಅಳೆಯಬೇಕು.. ದಾಖಲಿಸಿಕೊಳ್ಳಬೇಕು ಎಂಬ ನಿಯಮವನ್ನೂ ಮಾಡಿದೆ! ಆದರೆ ಪಾಲನೆ?

ಕೇಂದ್ರ ಸರ್ಕಾರದ ಭೂಜಲ ಮಂಡಳಿ (ಸೆಂಟ್ರಲ್ ಗ್ರೌಂಡ್‌ವಾಟರ್ ಬೋರ್ಡ್) ದೇಶಾದ್ಯಂತ ಮೂರು ಸಾವಿರ ಬಾವಿಗಳ ಜಾಲ ‘ನೆಟ್‌ವರ್ಕ್’ ರೂಪಿಸಿದೆ. ವರ್ಷದಲ್ಲಿ ಐದು ಬಾರಿ, ಜನೆವರಿ, ಏಪ್ರಿಲ್, ಜೂನ್, ಆಗಸ್ಟ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಜಲಮಟ್ಟದ ಅಳತೆ ಕಡ್ಡಾಯವಾಗಿ ನಡೆಯುತ್ತದೆ. ೧೯೬೯ರಿಂದ ಇಲ್ಲಿಯ ತನಕ ಪ್ರತಿ ವರ್ಷ ಜಲಮಟ್ಟದಲ್ಲಾದ ಏರುಪೇರು, ವ್ಯತ್ಯಾಸಗಳ ವಿವರ ಲಭ್ಯ!

ಕೇಂದ್ರದ ಭೂಜಲ ಮಂಡಳಿಯ ಆಧೀನದಲ್ಲಿ ನಮ್ಮ ರಾಜ್ಯದ ೧೨೫ ಬಾವಿಗಳಿದ್ದು, ವರ್ಷಕ್ಕೆ ಐದು ಬಾರಿ ಜಲ ಮಟ್ಟದಲ್ಲಾಗುತ್ತಿರುವ ವ್ಯತ್ಯಾಸ ದಾಖಲಿಸಲಾಗುತ್ತಿದೆ. ಅಂತರ್ಜಲದ ಬಳಕೆ ಮಾಡುತ್ತಿರುವ ಸಮುದಾಯಗಳ ಮುಖಂಡರು (ಗ್ರಾಮ/ಪಟ್ಟಣ) ಎಚ್ಚರಿಕೆ ವಹಿಸಿ, ತಮ್ಮ ವ್ಯಾಪ್ತಿಯ ಜಲಮಟ್ಟದಲ್ಲಾಗುತ್ತಿರುವ ಏರುಪೇರಿನ ಮಾಹಿತಿ ತರಿಸಿಕೊಂಡು, ಜಲ ಸಂರಕ್ಷಣೆ ಕ್ರಮಗಳಿಗೆ ತುರ್ತು ಗಮನ ನೀಡಬೇಕು ಎಂಬುದು ಈ ಹೊತ್ತಿನ ಆಗ್ರಹ.

ಹೊಸ ಬಾವಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು!

IMG-20180321-WA0011ಜಲಮಟ್ಟ ಅಳೆಯುವುದಕ್ಕೆಂದು ಆಯ್ಕೆ ಮಾಡುವ ಬಾವಿಗಳು ಆ ಸುತ್ತಮುತ್ತಲಿನ ಶಿಲೆ, ಶಿಲಾಪದರು ಪ್ರತಿನಿಧಿಸುವಂತಿರಬೇಕು. ಬಾವಿಗೆ ಪಂಪ್ ಅಳವಡಿಕೆ ನಿಷೇಧ. ಪಂಪ್ ಬಳಸದ ಬಾವಿಯ ಜಲಮಟ್ಟವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಕಡ್ಡಾಯ. ಕಾರಣ, ಪಂಪ್ ಅಳವಡಿಸಿದ ಬಾವಿ ನಿಖರ ಜಲಮಟ್ಟ ಅಥವಾ ವ್ಯತ್ಯಾಸ ತೋರಿಸದು.

ಸಾಮಾನ್ಯವಾಗಿ, ಕಿರು ಅಗಲ ಅಥವಾ ರಿಂಗ್ ಅಳವಡಿಸಿದ ಸೇದು ಬಾವಿಗಳನ್ನು ಜಲಮಟ್ಟ ಅಳೆಯಲು ಅಥವಾ ಗುರುತಿಸಲು ಆರಿಸುವುದು ಉತ್ತಮ. ಈ ಬಗೆಯ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಅಥವಾ ಒಂದೆರಡು ಕುಟುಂಬಗಳು ನೀರು ಬಳಸುವುದರಿಂದ ಜಲಮಟ್ಟದಲ್ಲಿ ಒಳಸೆಲೆ ಆಧಾರದಲ್ಲಿ ಹೆಚ್ಚೇನೂ ಅಂದಾಜು ವ್ಯತ್ಯಾಸ ಇರದು.. ಎಂಬುದು ತಜ್ಞರ ಅನುಭವ ಕಲಿಕೆ.

ಭೂ ವಿಷಯದಲ್ಲಿ ಪುದಿದ ರಸವಾಸನೆಗಳೆಲ್ಲ

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು

ಬಾವಿಗೂಟೆಯನಿತ್ತು ನರರೊಡಲ ಸೇರುವುದು

ದೈವ ರಸತಂತ್ರವಿದು – ಮಂಕುತಿಮ್ಮ.

-        ಪೂಜ್ಯ ಡಿ.ವಿ.ಜಿ., ಮಂಕುತಿಮ್ಮನ ಕಗ್ಗ.

ವೈಜ್ಞಾನಿಕ ವಾಟರ್ ಲೆವೆಲ್ ರೆಕಾರ್ಡರ್ ಲಭ್ಯ!

ಜಲ ಮಟ್ಟವನ್ನು ಎಷ್ಟು ಬಾರಿ ಅಳೆಯಬೇಕು? ನಾವು ಏನನ್ನು ತಿಳಿಯಲು ಈ ಪರೀಕ್ಷೆ ಅಥವಾ ಸಮೀಕ್ಷೆ ನಡೆಸುತ್ತಿದ್ದೇವೆ ಎಂಬುದನ್ನು ಅವಲಂಬಿಸಿದೆ. ನಾಲೆಯ ನೀರು, ಕೆರೆ ಕುಂಟೆಗಳ ನೀರು, ಊರ ಮುಂದಿನ ಕೆರೆ.. ಹೀಗೆ ಯಾವ ರೀತಿ ಜಲ ಮಟ್ಟದ ಮೇಲೆ ವ್ಯತ್ಯಾಸ ಉಂಟುಮಾಡುತ್ತಿದೆ (ಉದಾಹರಣೆಗೆ, ಧಾರವಾಡದ ಮಿಷನ್ ಕಂಪೌಂಡ್, ಮಾಳಮಡ್ಡಿಯ ಎಮ್ಮಿಕೇರಿ..) ಎನ್ನುವುದನ್ನು ತಿಳಿಯುವುದು ನಮ್ಮ ಗುರಿ.. ಎಂದಿಟ್ಟುಕೊಳ್ಳಿ. ಪ್ರತಿದಿನವೂ ಇಲ್ಲಿಯ ಬಾವಿಗಳಲ್ಲಿನ ಜಲಮಟ್ಟವನ್ನು ದಾಖಲಿಸಬೇಕು. ವಿಶೇಷವೆಂದರೆ, ಜಲಮಟ್ಟದಲ್ಲಿನ ವ್ಯತ್ಯಾಸವನ್ನು ದಿನದ ೨೪ ಗಂಟೆ ಗುರುತಿಸಲು ಸ್ವಯಂಚಾಲಿಯ ಉಪಕರಣಗಳೂ ಮಾರುಕಟ್ಟೆಯಲ್ಲಿ ಲಭ್ಯ!

ನಾವು ಅಧ್ಯಯನಕ್ಕೆಂದು ಆರಿಸಿಕೊಳ್ಳುವ ಜಲಾನಯನ ಭೂಮಿಯಲ್ಲಿ (ನದಿ ಪಾತ್ರ) ಒಂದೆರೆಡಾದರೂ, ಸ್ವಯಂಚಾಲಿತ ಜಲಮಟ್ಟ ಮಾಪಕಗಳನ್ನು (ವಾಟರ್ ಲೆವೆಲ್ ರೆಕಾರ್ಡರ್) ಬಳಕೆಗೆ ತಂದರೆ, ಅವು ನಮಗೆ ಅಮೂಲ್ಯವಾದ ವಿವಿರ ದಾಖಲಿಸಿ ಸಕಾಲಿಕವಾಗಿ ನೀಡಬಲ್ಲವು! ಇದು ಈ ಬಾರಿಯ ವಿಶ್ವ ಜಲ ದಿನದ ಸಂದರ್ಭದಲ್ಲಿ ಪ್ರತಿಯೊಂದು ಊರಿನಲ್ಲಿ ಆಗಬೇಕಾದ ತುರ್ತು ಕೆಲಸ.

ಬಾವಿಯ ಜಲಲೇಖ (ವೆಲ್ ಹೈಡ್ರೋಗ್ರಾಫ್ಸ್) ಅಂದರೆ,

IMG-20180321-WA0014ತೋಡಿದ ಬಾವಿಯೊಂದರಿಂದ ಪಂಪಿನ ಮೂಲಕ ನೀರೆತ್ತಿ ಬಳಸುವಾಗ ಬಾವಿಯ ಜಲಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಪಂಪಿನ ಮೂಲಕ ನೀರೆತ್ತಿದಾಗ, ಜಲಮಟ್ಟದಲ್ಲಿ ಆಗುವ ವ್ಯತ್ಯಾಸಗಳನ್ನು ತೋರಿಸುವ ಲೇಖಗಳಿಗೆ ‘ಜಲಲೇಖ’ ಎಂದು ತಜ್ಞರು ಹೆಸರಿಟ್ಟಿದ್ದಾರೆ.

ಪಂಪಿನಿಂದ ನೀರನ್ನು ಮೇಲೆತ್ತಲು ಶುರುಮಾಡಿದಾಗ, ಬಾವಿಯಲ್ಲಿನ ಜಲಮಟ್ಟ ಕ್ರಮೇಣ ಕೆಳಗಿಳಿಯುತ್ತ ಹೋಗುತ್ತದೆ. ಪಂಪ್ ನಿಲ್ಲಿಸಿದಾಗ ಜಲಮಟ್ಟ ಕ್ರಮೇಣ ಮೇಲೇರಲು ಆರಂಭಿಸುತ್ತದೆ. ಜಲಸಮೃದ್ಧಿ ಹೆಚ್ಚಿರುವ ಪ್ರದೇಶಗಳಲ್ಲಿ, (ಅಂದರೆ, ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಎಲ್ಲಿ ಶಿಲಾಪದರು ಸುಲಭದಲ್ಲಿ ನೀರನ್ನು ಬಾವಿಗೆ ಬಿಟ್ಟುಕೊಡುವಂಥ ಲಕ್ಷಣ ಹೊಂದಿರುತ್ತದೆಯೋ ಅಂತಹ ಪ್ರದೇಶದಲ್ಲಿ, ಪಂಪ್ ಮೂಲಕ ನೀರೆತ್ತಿಕೊಂಡ ಬಾವಿಯಲ್ಲಿ ನೀರು ಬಹುಬೇಗ ಮತ್ತೆ ತನ್ನ ಮೊದಲಿನ ಮಟ್ಟಕ್ಕೆ ನಿಲ್ಲುತ್ತದೆ.) ಶಿಲಾರಚನೆ ಸಮರ್ಪಕವಾಗಿರದಿದ್ದರೆ, ನೀರನ್ನು ಬಹುಬೇಗ ಬಾವಿಗೆ ಬಿಟ್ಟುಕೊಡುವುದಿಲ್ಲ! ಮತ್ತೆ ಹಿಂದಿನ ಮಟ್ಟಕ್ಕೆ ಜಲವೇರಲು ಕನಿಷ್ಠ ಒಂದು ದಿನವಾದರೂ ಬೇಕು. ಈ ಮಾದರಿಯ ಜಲಲೇಖಗಳ ದಾಖಲೀಕರಣ, ಶಿಲೆಯ ಸ್ರವಣಗುಣವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.. ಎನ್ನುತ್ತಾರೆ ತಜ್ಞರು.

ಆದರೆ, ಮನೆ ಮನೆಗೆ ನಳದ ಸಂಪರ್ಕ ಬಂದಮೇಲೆ ನಮ್ಮೂರಿನ ಬಾವಿಗಳು ಕಸದ ತೊಟ್ಟೆಗಳಾದವು. ನಿರ್ಮಾಲ್ಯದಿಂದ ಗರ್ಭಧರಿಸುವ ಕೊಳಾಯಿಗಳಂತಾದವು. ಸೆಲೆ ಬತ್ತಿ, ಜಲಮೂಲ ಇಂಗಿನಿಂತಿತು. ಬುದ್ಧಿವಂತರ ನೆಲ ಧಾರವಾಡದಲ್ಲಿ ಬಹುತೇಕ ಬಾವಿಗಳು ಬತ್ತಿನಿಂತಿವೆ. ಪ್ರಕೃತಿಯ ಜೊತೆ ಹೊಂದಾಣಿಕೆಯ ಬಾಳ್ವೆ ಮಾಡುವ ಬದಲು ಬಗ್ಗುಬಡಿದು ಬಳಸಬೇಕೆಂಬ ನಮ್ಮ ಬುದ್ಧಿಗೆ ನೆಮ್ಮದಿ ಅರಸುವ ವಿವೇಕ ಎಲ್ಲಿದೆ?

ಬಾವಿಗಳನ್ನು ಇನ್ನು ಮ್ಯೂಸಿಯಂನಲ್ಲಿ ನೋಡೋಣ.. ಫೊಟೋ ಆಬ್ಸರ್ವ್ ಮಾಡುವುದರಿಂದ ನಮ್ಮ ಬಾಯಾರಿಕೆ ತಣಿಯಬಹುದೇ?

ಚಿತ್ರ-ಲೇಖನ:   ಹರ್ಷವರ್ಧನ ವಿ. ಶೀಲವಂತ 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*