ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹನಿ ನೀರಿಗೆ ತಾತ್ವಾರ.. ತೆನೆಯೇ ಹೊರೆ!

ನಮ್ಮ ರಾಜ್ಯದ ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳ ನೀರನ್ನು ಪೂರ್ವಕ್ಕೆ ತಿರುಗಿಸಿ, ಬಯಲು ಸೀಮೆಯ ಬರ ಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಸಾಧ್ಯತೆ ಬಗ್ಗೆ ಈಗ ಚಿಂತನೆ ನಡೆಸಬೇಕಾದ ತುರ್ತು ಹುಟ್ಟಿದೆ. ಪಶ್ಚಿಮಕ್ಕೆ ಹರಿಯುವ ನದಿಗಳ ಧಾರಣಾ ಶಕ್ತಿಯ ಅಧ್ಯಯನವೂ ನಡೆಯಬೇಕಲ್ಲ!

ನೇತ್ರಾವತಿ, ಶರಾವತಿ, ಅಘನಾಶಿನಿ, ಕಾಳಿ ಹಾಗೂ ಮಹದಾಯಿ ಈ ಐದು ಮತ್ತು ಅವುಗಳ ಉಪನಾಲೆಗಳು ಸದ್ಯ ಪಶ್ಚಿಮಕ್ಕೆ ಸಮುದ್ರ ಸೇರುವ ನದಿಗಳು. ರಾಜ್ಯದ ನದಿಗಳಲ್ಲಿ ೩೯೨೦ ಟಿಎಂಸಿಅಡಿ ನೀರು ಹರಿದು ಹೋಗುವುದಾದರೂ, ಅಷ್ಟನ್ನೂ ಉಪಯೋಗಿಸಿಕೊಳ್ಳುವ ಯೋಜಕತೆ ನಮಲ್ಲಿಲ್ಲ! ಅಷ್ಟೇ ಅಲ್ಲ, ಪಶ್ಚಿಮಕ್ಕೆ ಹರಿದು ಹೋಗುವ ಹೇರಳ ಪ್ರಮಾಣದ ನೀರನ್ನೂ ಬಳಸಲು ಯಾವ ಯೋಜನೆಯೂ ಸಿದ್ಧವಾಗಿಲ್ಲ! ಸಿಹಿಯಾದ ಹೇರಳ ಪ್ರಮಾಣದ ನೀರು ಯಾವ ಉಪಯೋಗಕ್ಕೂ ಬಾರದೇ, ಸಮುದ್ರದ ಒಡಲು ಸೇರಿ ಅಳಿವೆಯಲ್ಲಿ ಉಪ್ಪು ನೀರಾಗುತ್ತಿದೆ!DIGGING BOREWELLS RAMPANT

ಈ ನದಿಗಳ ನೀರನ್ನು ಪೂರ್ವಕ್ಕೆ ತಿರುಗಿಸಿದರೆ? ಹೊಸ ಯೋಜನೆಗಳ ಪರಿಸರ ಸ್ನೇಹಿ ಅನುಷ್ಠಾನದ ನೀಲನಕ್ಷೆ ಸಿದ್ಧಗೊಳ್ಳಬೇಕಿದೆ. ಮಲೆನಾಡಿನ ೧೦೦೦ ಮೀಟರ್‌ಗಿಂತಲೂ ಎತ್ತರದ ಬೆಟ್ಟ, ಗುಡ್ಡ ಪ್ರದೇಶಗಳಿಂದ ಜೀವತಳೆದು ಪಶ್ಚಿಮದ ಕಡೆ ಹರಿಯುವ ನೀರನ್ನು ಸುರಂಗಗಳ ಮೂಲಕ ಪೂರ್ವಕ್ಕೆ ತಿರುಗಿಸಿ, ಕಾವೇರಿ, ಹೇಮಾವತಿ, ತುಂಗಭದ್ರಾ, ಮಲಪ್ರಭಾ ನದಿಗಳಲ್ಲಿನ ಜಲ ಸಂಪತ್ತನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನಗಳ ಅವಶ್ಯಕತೆ ಇದೆ.

ನದಿಗಳ ಮೇಲ್ಮೈ ನೀರನ್ನು ತಡೆಹಿಡಿದಿಡಬೇಕಾದರೆ ಭಾರಿ ಪ್ರಮಾಣದ ಅಣೆಕಟ್ಟೆ ಮತ್ತು ಜಲಾಶಯಗಳ ನಿರ್ಮಾಣ ಅನಿವಾರ್ಯ. ಅಪಾರ ವೆಚ್ಚ. ಯೋಜನೆ ಪೂರ್ಣಗೊಂಡು ಹಸಿದಿರುವ ನೆಲಕ್ಕೆ ನೀರನ್ನು ಒದಗಿಸಬೇಕಾದರೆ, ಕನಿಷ್ಠ ೧೦-೧೫ ವರ್ಷಗಳಾದರೂ ಕಾಯಬೇಕು! ಫಲವತ್ತಾದ ಸಾವಿರಾರು ಎಕರೆ ಪ್ರದೇಶ ಮುಳುಗಡೆಯಾಗಬಹುದು! ಅಲ್ಲಿ ವಾಸಿಸುತ್ತಿರುವ ಜನರ ಪುನರ್ವಸತಿ ಅನಿವಾರ್ಯ. ಹಾಗಾಗಿ, ಹಿತ-ಮಿತವಾಗಿ ಬೇಕಷ್ಟೇ ನೀರನ್ನು ಸದ್ಯ ಲಭ್ಯವಿರುವ ಅಣೆಕಟ್ಟೆಗಳ ಧಾರಣಾ ಶಕ್ತಿಗೆ ಅನುಗುಣವಾಗಿ ಹರಿಸಿಕೊಳ್ಳುವುದೊಂದೇ ದಾರಿ.. ಜಲಶಯ, ಬೃಹದಾಕಾರದ ಅಣೆಕಟ್ಟೆ ಕಟ್ಟುವುದಲ್ಲ~

ಅಂತರ್ಜಲದ ಹಿತ-ಮಿತ ಬಳಕೆಯಲ್ಲಿ ನೀರಾವರಿಯ ಹೆಚ್ಚುಗಾರಿಕೆ ಇರುವುದು. ಈ ಕ್ರಮದಿಂದ ಭಾರೀ ಜಲಾಶಯಗಳು ಎದುರಿಸುತ್ತಿರುವ ಹೂಳು, ನಿರ್ವಹಣೆ, ಕಾಲುವೆ ದುರಸ್ಥಿ ಮುಂತಾದ ತೊಂದರೆ ಇರುವುದಿಲ್ಲ. ರೈತ ತನ್ನ ಜಮೀನಿಗೆ ಬೇಕಾದ ನೀರನ್ನು ಸ್ವಂತ ಪರಿಶ್ರಮದಿಂದ ಬಾವಿ ತೋಡಿ ಪಡೆಯಬಹುದು. ಅಣೆಕಟ್ಟೆಯ ನಾಲೆಗಳಲ್ಲಿ ನೀರು ಬರುವುದನ್ನೇ ಚಾತಕ ಪಕ್ಷಿಯಂತೆ ಕಾಯಬೇಕಿಲ್ಲ!

ಹೊತ್ತು ಹೊತ್ತಿಗೆ ನೀರು ಒದಗಿಸಬೇಕೆಂಬ ತಹತಹಕ್ಕೂ ಇಲ್ಲಿ ಉತ್ತರವಿದೆ. ಕಾರಣ, ಎಲ್ಲವೂ ರೈತನ ನಿಯಂತ್ರಣದಲ್ಲೇ ಇದೆ. ಯಾವ ಹೊತ್ತಿಗೆ ನೀರು ಒದಗಿಸಬೇಕೋ ಆ ಸಮಯಕ್ಕೆ ಸರಿಯಾಗಿ ಬಾವಿಯಿಂದ ಪಂಪ್ ಬಳಸಿ ನೀರೆತ್ತಿ ಮಡಿ ತೋಯಿಸಿಕೊಳ್ಳಬಹುದು. ವಿದ್ಯುತ್ ಲಭ್ಯತೆ ಆಧರಿಸಿ ರೈತ ತನ್ನ ಕೃಷಿ ಗಡಿಯಾರ ಹೊಂದಿಸಿಕೊಳ್ಳಬಹುದು. ಜೊತೆಗೆ ನೀರೆಚ್ಚರದ ಕಾಳಜಿ ಅಲ್ಲಿ ಮನೆ ಮಾಡಿರುತ್ತದೆ. ಹನಿ ನೀರಿಗೆ ಹೊರೆ ತೆನೆ.. ಮನದಟ್ಟಾಗುತ್ತದೆ!

ಈ ಸ್ವಾತಂತ್ರ್ಯ ಮೇಲ್ಮೈ ನೀರಿನ ಬಳಕೆಯಲ್ಲಿ ಇಲ್ಲ. ಮೇಲಾಗಿ, ನೀರು ಪೋಲಾಗಿ ಹರಿಯುವುದೇ ಹೆಚ್ಚು.

ಹಾಗಾಗಿ, ರೈತರ ಗಮನ ಈಗ ಅಂತರ್ಜಲದ ಕಡೆ ಹೆಚ್ಚು ಹರಿದಿದೆ. ಹೆಚ್ಚು ಉತ್ಪಾದಿಸಲು ಅಂತರ್ಜಲ-ನೀರಾವರಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾಂತ್ರಿಕತೆ ಸಹಕಾರದಿಂದ ಹನಿ ನೀರಾವರಿ, ತುಂತುರು ನೀರಾವರಿ ಕ್ರಮಗಳನ್ನು ಅಳವಡಿಸಿ ಅಲ್ಪ ಪ್ರಮಾಣದ ನೀರಿನಿಂದ ಉತ್ತಮ ಫಸಲೂ ನಿರೀಕ್ಷಿಸಬಹುದು.

COMMON SIGHT OF EVERY VILLAGE IN NK REGIONಅಂದಹಾಗೆ, ರಾಜ್ಯದಲ್ಲಿ ಬಿತ್ತನೆಗೆ ಸಿದ್ಧವಿರುವ ಜಮೀನು ೧೦೬ ಲಕ್ಷ ಹೆಕ್ಟೇರ್.. ಕೃಷಿ ಇಲಾಖೆ ಅಂಕಿ-ಸಂಖ್ಯೆಗಳ ಪ್ರಕಾರ. ಆ ಪೈಕಿ, ಸುಮಾರು ೫೫ ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿ ಜಮೀನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದು ನೀರಾವರಿ ಇಲಾಖೆ ಸಿದ್ಧಪಡಿಸಿದ ಕೈಪಿಡಿ ಹೇಳುತ್ತದೆ. ಇದರಲ್ಲಿ, ೩೫ ಲಕ್ಷ ಹೆಕ್ಟೇರ್ ಅನ್ನ ಬೆಳೆಯುವ ಭೂಮಿಯನ್ನು ನದಿ ನೀರಿನಿಂದಲೂ, ಹತ್ತು ಲಕ್ಷ ಹೆಕ್ಟೇರ್‌ಗಳನ್ನು ಕೆರೆ-ಕುಂಟೆಯ ನೀರಿನಿಂದ, ಉಳಿದ ಹತ್ತು ಲಕ್ಷ ಹೆಕ್ಟೇರ್ ಭೂಮಿಯನ್ನು ಅಂತರ್ಜಲದಿಂದ ನೀರಾವರಿ ವ್ಯವಸಾಯಕ್ಕೆ ಯೋಗ್ಯವಾಗಿಸುವ ಅವಕಾಶವಿದೆ.

ಸದ್ಯ ಲಭ್ಯವಿರುವ ೨೦೦೮-೯ನೇ ಸಾಲಿನ ಅಂಕಿ-ಸಂಖ್ಯೆಗಳ ಪ್ರಕಾರ, ಒಟ್ಟು ಸಾಗುವಳಿಗೆ ಸಿದ್ಧವಾದ ಜಮೀನಿನ ಶೇ. ೨೭ರಷ್ಟು ಭಾಗಕ್ಕೆ ಮಾತ್ರ ನೀರು ಒದಗಿಸಲು ನಮ್ಮ ರಾಜ್ಯದಲ್ಲಿ ಸಾಧ್ಯವಾಗಿದೆ. ಅಂದಾಜು, ೨೯ ಲಕ್ಷ ಹೆಕ್ಟೇರ್ ಕೃಷಿ ಭೂಮಿ ನೀರುಣ್ಣುತ್ತಿದೆ. ಇದರಲ್ಲಿ ೭ ಲಕ್ಷ ಹೆಕ್ಟೇರ್ ಪ್ರದೇಶ ಅಂತರ್ಜಲವನ್ನು ಅವಲಂಬಿಸಿದೆ.

ಮೇಲ್ಮೈನೀರಿನ ಅಭಿವೃದ್ಧಿಗೆ ಸದ್ಯ ಸರ್ಕಾರಗಳು ತೋರುತ್ತಿರುವ ಕಾಳಜಿ ತುಸು ಹೆಚ್ಚೇ ಇದೆ ಎನ್ನುತ್ತಾರೆ ನೀರಾವರಿ ತಜ್ಞರು. ಸಾವಿರಾರು ನುರಿತ ಎಂಜಿನಿಯರ್‌ಗಳು ಈ ನೀರಾವರಿ ಉಸ್ತುವಾರಿಗೆ ನೇಮಕಗೊಂಡಿದ್ದಾರೆ. ಅಂತರ್ಜಲದ ಅಭಿವೃದ್ಧಿಗಾಗಿ ಮಾತ್ರ ಸರ್ಕಾರಗಳು ಹೆಚ್ಚಿನ ಗಮನ ನೀಡುತ್ತಿಲ್ಲ. ಮೇಲಾಗಿ, ಗಾಯದ ಮೇಲೆ ಉಪ್ಪು ಸವರಿದಂತೆ, ನಮ್ಮ ರಾಜ್ಯದಲ್ಲಿ ‘ಪಾತಾಳಗಂಗೆ ಯೋಜನೆ’ ರೂಪುಗೊಳ್ಳುತ್ತಿದೆ!

ಸದ್ಯ ಏನಿದ್ದರೂ, ರೈತರೇ ಸ್ವಂತವಾಗಿ, ತಮ್ಮ ಬೆವರಿನ ಹಣ ವಿನಿಯೋಗಿಸಿ, ಜಮೀನನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿ ಸರ್ಕಾರಗಳು ತಮ್ಮ ಧೋರಣೆಯನ್ನು ಬದಲಾಯಿಸಿ, ಅಂತರ್ಜಲ ನೀರಾವರಿ ಕ್ರಮಕ್ಕೆ ಹಣ, ತಂತ್ರಜ್ಞಾನ ಒದಗಿಸಿ, ಕೃಷಿಯಲ್ಲಿ ಸ್ವಾವಲಂಬನೆ ರಾಜ್ಯದ ರೈತರು ಸಾಧಿಸುವಂತೆ ಬೇರು ಮಟ್ಟದಲ್ಲಿ ಕೆಲಸವಾಗಬೇಕಿದೆ..

ಬಿದ್ದ ಮಳೆಯ ನೀರು ಶೇಖರವಾಗುವುದು, ಮೇಲಿಂದ ಮೇಲೆ ಬಳಕೆಗೆ ಒದಗುವುದು ನೆಲ ಮಟ್ಟದಿಂದ ಹಿಡಿದು, ಮೂವತ್ತರಿಂದ ಐವತ್ತು ಮೀಟರ್ (ಅಂದಾಜು ೧೫೦ ಅಡಿ) ಆಳದ ವರೆಗಿರುವ ಸರಂಧ್ರ ಶಿಥಿಲವಲಯದಲ್ಲಿ ಮಾತ್ರ, ಕೊರೆಯುವ ಕೊಳವೆ ಬಾವಿಗಳು ಈ ಮಿತಿಯನ್ನು ಮೀರಬಾರದು. ಈ ಹೊರವಲಯ ವರ್ಷ ವರ್ಷವೂ ನೀರಿನಿಂದ ತುಂಬಿ ಕೊಳ್ಳುತ್ತದೆ. ಈ ನೀರು ಸಾವಿರಾರು ವರ್ಷಗಳಿಂದ ಸೇರಿದ ನೀರು. ಈ ನೀರನ್ನು ಪಡೆಯಲು ದುರಾಸೆಯಿಂದ ಹೇರಳ ಹಣ ವೆಚ್ಚಮಾಡಿ ಕೊಳವೆ ಬಾವಿ ಕೊರೆಸುವ ಪ್ರಯತ್ನಗಳು ಈಚಿನ ದಶಕಗಳಲ್ಲಿ ಹೆಚ್ಚುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಹಣ ಒದಗಿಸಲು ಸರ್ಕಾರಗಳು, ಬ್ಯಾಂಕುಗಳು ತುದಿಗಾಲ ಮೇಲೆ ನಿಂತಿವೆ. ರೈತ ದಿನೇ ದಿನೇ ಹೆಚ್ಚು ಹೆಚ್ಚು ಸಾಲಗಾರನಾಗುತ್ತಿದ್ದಾನೆ. ಮಳೆಯ ನೀರು ವರ್ಷ ವರ್ಷವೂ ಪೂರೈಕೆ ಆಗದೇ ಹೋಗುವುದರಿಂದ ಬಾವಿಗಳಲ್ಲಿ ದೊರೆಯುವ ನೀರು ಕ್ರಮವಾಗಿ ಕ್ಷೀಣಿಸುತ್ತ, ಕೆಲವೇ ವರ್ಷಗಳಲ್ಲಿ ಬತ್ತಿ ಹೋಗುತ್ತದೆ. ಸಾಲದ ಹೊರೆ ಮಾತ್ರ ಉಳಿಯುತ್ತದೆ! ಹೆಂಡತಿ ಮಕ್ಕಳ ಬವಣೆ ನೇಣು ಕುಣಿಕೆಗೆ ಕೊರಳೊಡ್ಡುವಂತೆ ರೈತನನ್ನು ಅನುಚಿತವಾಗಿ ಪ್ರೇರೇಪಿಸುತ್ತದೆ.

ಸರಳ ಸತ್ಯ..

ಆಳವಾದ ಕೊಳವೆ ಬಾವಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಳೆಯ ನೀರನ್ನು ಬಿಟ್ಟು ನಮಗೆ ಬೇರೆ ವಿಧಿ ಇಲ್ಲ. ಬಿದ್ದಂತಹ ಮಳೆ ನೀರನ್ನು ಒಂದು ತೊಟ್ಟೂ ಹರಿದು ಹೋಗಲು ಬಿಡದೇ ಸಂಗ್ರಹಿಸಬೇಕು. ಹಾಗೆಯೇ, ನಮ್ಮ ಹಿರೀಕರಿಂದ ಸಾವಿರಾರು ವರ್ಷಗಳಿಂದ ಜತನವಾಗಿ ಬಂದ ಕೃಷಿ ಪದ್ಧತಿಯನ್ನೂ ಕೈಬಿಡದೇ ಬೀಳುವ ಅಲ್ಪಸ್ವಲ್ಪ ಮಳೆಯಿಂದ ಪೂರ್ಣ ಪ್ರಯೋಜನ ಪಡೆಯಬೇಕು.. ಮನಸ್ಸಿದ್ದರೆ ಮಹಾದೇವ..

ಚಿತ್ರ-ಲೇಖನ:   ಹರ್ಷವರ್ಧನ ವಿ. ಶೀಲವಂತ 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*