ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೬೧: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ೬

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…..

೩೧. ಕರಿತಿಮ್ಮನಹಳ್ಳಿ ಕೆರೆ

ಕೆಂಪಾಂಬುಧಿ ಕೆರೆಯ ಪಶ್ಚಿಮ ಭಾಗದಲ್ಲಿರುವ ಕರಿತಿಮ್ಮನಹಳ್ಳಿ ಕೆರೆ ೬೯೯ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೩.೮೭ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯ ಏರಿ ಸುಭದ್ರವಾಗಿದ್ದು, ಇದನ್ನು ಸುಂದರವಾಗಿ ಅಭಿವೃದ್ಧಿಪಡಿಸಬಹುದು.  ಸಿಡಿಪಿಯಲ್ಲಿ ಇದನ್ನು ಉದ್ಯಾನ ಮತ್ತು ತೆರೆದ ಪ್ರದೇಶ ಎಂದು ಗುರುತಿಸಲಾಗಿದೆ. ಈ ಕೆರೆಯನ್ನು ಸುಂದರ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಬಹುದು. ಇದನ್ನು ಕೆಂಪಾಂಬುಧಿ ಕೆರೆಯ ಜೊತೆಗೆ ಸೇರಿಸಿಕೊಂಡು ಕರಿತಿಮ್ಮನಹಳ್ಳಿ ಕೆರೆಯನ್ನು ಒಂದಾಗಿ ಅಭಿವೃದ್ಧಿ ಮಾಡಬೇಕು ಎಂದು ಸಮಿತಿ ಸಲಹೆ ನೀಡಿದೆ. ಇದು ಬಿ.ಡಿ.ಎ. ಮತ್ತು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವೆ ಇರುವ ಕೆರೆಗಳು

೩೨. ಅಂಚೆ ರಾಮನಕೆರೆ

ಮೈಸೂರು ರಸ್ತೆಯ ಉತ್ತರ ಭಾಗದಲ್ಲಿ ಕೈಗಾರಿಕೆ ಪ್ರದೇಶವಿರುವ ಕಡೆ ಅಂಚೆ ರಾಮನಕೆರೆ ಇದೆ. ಇದು ೩.೦೨ ಹೆಕ್ಟೇರ್ ಪ್ರದೇಶದಲ್ಲಿದ್ದು, ೬೮೨ ಸಂಖ್ಯೆಯಾಗಿ ನೋಂದಣಿಯಾಗಿದೆ. ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು. ಇದರಲ್ಲಿ ಹೂವಿನ ಗಿಡಗಳು ಹೆಚ್ಚಿರಬೇಕು ಎಂದು ಸಮಿತಿ ಸಲಹೆ ಮಾಡಿದೆ. ಇದು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.

೩೩. ಬಿನ್ನಿಮಿಲ್ ಕೆರೆ

ಬಿನ್ನಿಮಿಲ್ ಬಳಿ ಇರುವ ಈ ಕೆರೆ ೬೯೬ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೩೦.೩೭ ಹೆಕ್ಟೇರ್ ಪ್ರದೇಶದ್ದು. ಈ ಕೆರೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯಗಳಿಂದ ತುಂಬುತ್ತಿದ್ದು, ಈ ಪ್ರದೇಶದಲ್ಲಿ ಹಣ್ಣಿನ ಮತ್ತು ತರಕಾರಿ ಮಾರುಕಟ್ಟೆ ಅಥವಾ ಲಾರಿಗಳ ಪಾರ್ಕಿಂಗ್ ಪ್ರದೇವಶವನ್ನಾಗಿಸುವ ಪ್ರಸ್ತಾವನೆ ಇದೆ. ಸಿಡಿಪಿಯಲ್ಲಿ ಇದನ್ನು ವಾಣಿಜ್ಯ ಎಂದು ನಮೂದಿಸಲಾಗಿದೆ. ಸಮಿತಿ ಯಾವುದೇ ಸಲಹೆ ನೀಡಿಲ್ಲ. ಇದು ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿದೆ.

೩೪. ಗಂಗೊಂಡನಹಳ್ಳಿ ಕೆರೆ

ಗಂಗೊಂಡನಹಳ್ಳಿ ಕೆರೆ ೬೮೧ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೦.೬೪ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯ ಸುತ್ತಲೂ ಅಭಿವೃದ್ಧಿ, ಕಟ್ಟಡಗಳಿವೆ. ಇದು ಸಣ್ಣ ಕೆರೆ. ಸಿಡಿಪಿಯಲ್ಲಿ ಉದ್ಯಾನ ಮತ್ತು ತೆರೆದ ಪ್ರದೇಶ ಹಾಗೂ ರಸ್ತೆ ಎಂದು ಪ್ರಸ್ತಾಪಿಸಿದೆ. ಬಿಡಿಎ ಇದನ್ನು ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಸಲಹೆ ಮಾಡಿದೆ. ಇದು ಬಿಡಿಎ, ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೩೫. ಮಾಳಗಾಲಿ ಕೆರೆ

ಮಾಳಗಾಲಿ ಕೆರೆ ೩.೮೭ ಹೆಕ್ಟೇರ್ ಪ್ರದೇಶದಲ್ಲಿದ್ದು, ೬೮೦ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಸಣ್ಣದಾಗಿ ಉಳಿದುಕೊಂಡಿದ್ದು, ಬಹುತೇಕ ಒತ್ತುವರಿಯಾಗಿದೆ. ಸಿಡಿಪಿಯಲ್ಲಿ ಭಾಗಶಃ ರಸ್ತೆ ಮತ್ತು ಭಾಗಶಃ ವಸತಿ ಪ್ರದೇಶ ಎಂದು ತೋರಲಾಗಿದೆ. ಈ ಕೆರೆಯ ಏರಿಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೩೬. ಕಾಮಾಕ್ಷಿಪಾಳ್ಯ ಕೆರೆ

ಕಾಮಾಕ್ಷಿಪಾಳ್ಯ ಕೆರೆ ೬೭೯ ಸಂಖ್ಯೆಯಲ್ಲಿ ನೋಂದಣಿಯಾಗಿರುವ ತೀರಾ ಸಣ್ಣ ಕೆರೆಯಲ್ಲಿ ನೀರು ನಿಂತಿದೆ. ಕೆರೆ ಉತ್ತಮ ಸ್ಥಿತಿಯಲ್ಲಿದ್ದು, ಎಲ್ಲ ಭಾಗಗಳಲ್ಲೂ ಒತ್ತುವರಿಯಾಗಿದೆ. ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ತೋರಿಸಲಾಗಿದೆ. ಈ ಕೆರೆಯ ಎಲ್ಲ ಒತ್ತುವರಿಯನ್ನು ತೆರವುಗೊಳಿಸಿ ಇದನ್ನು ಉತ್ತಮ ಕೆರೆಯನ್ನಾಗಿ ನಿರ್ವಹಿಸಬೇಕು ಎಂದು ಸಮಿತಿ ಸಲಹೆ ಮಾಡಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿ ಈ ಕೆರೆ ಇದೆ.

೩೭. ಕುರುಬರಹಳ್ಳಿ ಕೆರೆ

ಕುರುಬರಹಳ್ಳಿ ಕೆರೆಯನ್ನು ಈಗಾಗಲೇ ಪೊಲೀಸ್ ಇಲಾಖೆಗೆ ಮಂಜೂರು ಮಾಡಲಾಗಿದೆ. ಇಲಾಖೆ ವತಿಯಿಂದ ಸಿಬ್ಬಂದಿಗೆ ಕ್ವಾರ್ಟಸ್ ನಿರ್ಮಿಸಲಾಗುತ್ತಿದೆ. ಸಿಡಿಪಿಯಲ್ಲಿ ಪೊಲೀಸ್ ಕ್ವಾರ್ಟಸ್ ಎಂದು ತೋರಿಸಲಾಗಿದೆ. ಇದನ್ನು ಆಗಲೇ ಮಂಜೂರು ಮಾಡಿರುವುದರಿಂದ ಸಮಿತಿ ಯಾವುದೇ ಸಲಹೆ ನೀಡಿಲ್ಲ.

೩೮. ಶಿವನಹಳ್ಳಿ ಕೆರೆ (ಅಗ್ರಹಾರ ದಾಸರಹಳ್ಳಿ ಕೆರೆ)

ಬಿಡಿಎ ಬಡಾವಣೆ ಸುತ್ತುವರಿದಿರುವ ಶಿವನಹಳ್ಳಿ ಕೆರೆಯನ್ನು ಅಗ್ರಹಾರ ದಾಸರಹಳ್ಳಿ ಕೆರೆ ಎಂದೂ ಕರೆಯಲಾಗುತ್ತದೆ. ಇದು ೬೮೮ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯಲ್ಲಿ ನಿಂತ ನೀರಿದೆ. ಗ್ರಾಮದ ತ್ಯಾಜ್ಯ ನೀರು ಈ ಕೆರೆಗೆ ಬರುತ್ತದೆ. ಕೆರೆಯ ಏರಿ ಉತ್ತಮ ಸ್ಥಿತಿಯಲ್ಲಿದೆ. ಈ ಕೆರೆಯ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯನ್ನು ಜಲಮೂಲವನ್ನಾಗಿ ಉಳಿಸಿಕೊಂಡು, ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಎಂದು ಸಮಿತಿ ಸಲಹೆ ನೀಡಿದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೩೯. ಸಾಣೆಗುರುವನಹಳ್ಳಿ ಕೆರೆ

ಸಾಣೆಗುರುವನಹಳ್ಳಿ ಕೆರೆ ೬೮೭ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯನ್ನು ಬಹುತೇಕ ಒತ್ತುವರಿ ಮಾಡಿದ್ದು, ರಸ್ತೆ ಹಾಗೂ ಬಿಡಿಎ ಬಡಾವಣೆಯನ್ನು ಎಲ್ಲ ಕಡೆ ನಿರ್ಮಿಸಲಾಗಿದೆ. ಕೆರೆಯ ಏರಿ ಮಾತ್ರ ಖಾಲಿ ಉಳಿದಿದೆ. ಇಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ಹೇಳಲಾಗಿದೆ. ಈ ಕೆರೆಯ ಏರಿ ಪ್ರದೇಶದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

………..ಮುಂದುವರಿಯಲಿದೆ

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*