ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ಟರ್ಟಲ್ ವಾಕ್ಸ್’; ನಮ್ಮೂರಲ್ಲೂ ‘ಆಮೆ ಪಡೆ’ ನಡೆಯಲಿ!

ಮೇ ೨೩ ರಿಂದ ಆಮೆಗಳ ಸಂರಕ್ಷಣೆ ಸಪ್ತಾಹ / ಜಲ ಪರಿಸರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ

ಧಾರವಾಡ: ‘ಕಲ್ಲು’ ಆಮೆಗಳನ್ನು ನಾವು ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದೇವೆ. ನಮ್ಮ ಹಿರಿಯರು ಆಮೆಗೆ ದೈವ ಸ್ವರೂಪ ಕರುಣಿಸಿದ್ದರ ಹಿಂದೆ ವಿಶಿಷ್ಟ ಕಾಳಜಿ, ಭಯ-ಭಕ್ತಿ ಇದೆ.

ಆದರೆ, ಈಗ ಎಲ್ಲವನ್ನೂ ಪ್ರಶ್ನಿಸುವ, ಭಂಜಿಸಿ-ಭುಜಿಸುವ ನಮ್ಮ ಮನೋಸ್ಥಿತಿ ಪರಿಣಾಮ ಅವುಗಳನ್ನು ‘ಮನುಷ್ಯ’ನಿಂದ ರಕ್ಷಿಸಬೇಕಾದ ಪ್ರಮೇಯ ಈಗ!

ಜಲ ಪರಿಸರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಆಮೆಗಳ ಬಗ್ಗೆ ಅರಿವು ಮತ್ತು ಅವುಗಳ ಸಂರಕ್ಷಣೆ ಕುರಿತು ಸಾಮುದಾಯಿಕ ಒಲವು ಬೆಳೆಸಲು, ಪ್ರತಿ ವರ್ಷ ವಿಶ್ವಾದ್ಯಂತ ಮೇ ೨೩ನ್ನು ಆಮೆಗಳ ವಿಶ್ವ ದಿನಾಚರಣೆ ಆಯೋಜಿಸಲಾಗುತ್ತದೆ. ಮುಂದೆ ಸಪ್ತಾಹ ಪೂರ್ತಿ ಈ ಬಗ್ಗೆ ಮಾಹಿತಿ ವಿನಿಮಯ, ವಿಚಾರ ಗೋಷ್ಠಿ, ಚಿಂತನ-ಮಂಥನ ಸ್ಥಳೀಯವಾಗಿ ನಡೆಯಲಿ ಎಂಬುದು ಚಾಲನೆಯ ಉದ್ದೇಶ.indian-star-tortoise-walk

ನಮ್ಮ ದೇಶ ಸೇರಿದಂತೆ, ವಿಶ್ವಾದ್ಯಂತ ಎರಡು ಪ್ರಮುಖ ‘ಟರ್ಟಲ್’ ಮತ್ತು ‘ಟಾರ್ಟಿಜ್’ ಪ್ರಬೇಧಗಳಲ್ಲಿ ಆಮೆಗಳನ್ನು ಪ್ರಾಣಿ ಶಾಸ್ತ್ರಜ್ಞರು ವಿಂಗಡಿಸಿದ್ದಾರೆ. ನಮ್ಮ ದೇಶದಲ್ಲಿ ‘ಕಲ್ಲಾಮೆ’ ಮತ್ತು ‘ನೀರಾಮೆ’ ಪ್ರಜಾತಿಗೆ ಸೇರಿದ ಆಮೆಗಳಿಗೆ ಈಗ ಹೇಳತೀರದಷ್ಟು ಅಪಾಯಗಳಿವೆ. ಅವುಗಳನ್ನು ಮನುಷ್ಯರ ಉಪಟಳದಿಂದ ತಪ್ಪಿಸಲು ಕೈಗೊಂಡ ಕ್ರಮಗಳು ಹಾಗೂ ಸಂರಕ್ಷಣೆಯ ಉಪಕ್ರಮಗಳ ಕುರಿತು, ಯುವಜನರಿಗೆ ಅರಿವು ಮೂಡಿಸುವುದೇ ಈ ಸಪ್ತಾಹದ ವಿಶೇಷ.

ಭಾರತದಿಂದ ಈಶಾನ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಅನೇಕ ಪ್ರಜಾತಿಯ, ವಿಶಿಷ್ಟ ಮತ್ತು ಅಪರೂಪದ ಆಮೆಗಳು ಕಳ್ಳ ಸಾಗಣೆ ಮೂಲಕ ಸಾಗಿಸಲ್ಪಟ್ಟು, ವಿಶಿಷ್ಟ ಖಾದ್ಯಗಳಾಗಿ ವಿದೇಶಿಗರ ತಾಟಿಗೆ ಆನುತ್ತಿವೆ. ಆ ಪೈಕಿ ಕೆಲವನ್ನು ಸಾಕಿಕೊಳ್ಳಲು ಸಹ ಬೆಲೆ ಬಾಳುವ ವೈಢೂರ್ಯಗಳಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಎಕ್ಸಾಟಿಕ್ ಸ್ಪಿಸೀಸ್’ಗಳಾಗಿ ಆಮೆಗಳನ್ನು ಕಳ್ಳ ಮಾರ್ಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವುಗಳ ‘ಕೆರಾಟಿನ್ ಕರಟ’ವನ್ನು ಬೆಲ್ಟ್ ಹುಕ್, ಉಂಗುರ, ಕಿವಿಯೋಲೆ, ಪೆನ್ ಇತ್ಯಾದಿಯಾಗಿ ರೂಪಿಸಿ ಮಾರುವ ಜಾಲವೂ ಇದೆ!

ದೇಶದ ಪಶ್ಚಿಮ ಕರಾವಳಿಗುಂಟ ಅತೀ ಹೆಚ್ಚಿನ ಪ್ರಮಾಣದಲ್ಲಿ ಸ್ಟಾರ್ ಟಾರ್ಟಿಸ್ (ನಕ್ಷತ್ರ ಆಮೆ) ಮತ್ತು ಆಲಿವ್ ರಿಡ್ಲೆ ಟರ್ಟಲ್ (ಹಸಿರು ಕಲ್ಲಾಮೆ), ಲೆದರ್ ಬ್ಯಾಕ್, ಸಾಫ್ಟ್ ಶೆಲ್ ಮತ್ತು ಫ್ಲ್ಯಾಟ್ ಬ್ಯಾಕ್ (ಚರ್ಮ ಬೆನ್ನು, ಮೆದು ಕವಚ ಮತ್ತು ಸಪಾಟ ಬೆನ್ನು ಆಮೆ) ಸಮುದ್ರ ಮಾರ್ಗದ ಮೂಲಕ ವಿದೇಶಕ್ಕೆ ಕಳ್ಳ ಸಾಗಣೆಗೊಳ್ಳುತ್ತಿವೆ. ೨೦೧೬-೧೭ನೇ ಸಾಲಿನಲ್ಲಿ ಭಾರತ ಸರ್ಕಾರ ಕಳ್ಳ ಸಾಗಣೆದಾರರಿಂದ ವಿವಿಧ ಪ್ರಜಾತಿಗೆ ಸೇರಿದ ೩೦ ಸಾವಿರ ಆಮೆಗಳನ್ನು ರಕ್ಷಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಂಡಿದೆ. ವಿಚಿತ್ರವೆಂದರೆ, ವಿದೇಶದ ಆಮೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ಅಥವಾ ನಿರ್ಬಂಧಿಸಿ ಅಥವಾ ಮಾರಾಟ ಮತ್ತು ಸಾಕಾಣಿಕೆಗೆ ಈ ವರೆಗೆ ಯಾವುದೇ ಸಮರ್ಪಕ ಕಾನೂನು ಈ ನೆಲದಲ್ಲಿ ಜಾರಿಯಲ್ಲಿಲ್ಲ!

ಕಳ್ಳ ಸಾಗಣೆಯೊಂದೇ ಅಲ್ಲ!?

ಮಾನವ ಹಸ್ತಕ್ಷೇಪದ ಅವಘಡಗಳಿಂದ ಆಮೆಗಳ ಸಂತತಿಗೇ ಸಂಚಕಾರ ಬಂದೆರಗಬಹುದಾದ ಪರಿಸ್ಥಿತಿ ಈಗ ನಿರ್ಮಾಣಗೊಂಡಿದೆ. ಆ ಪೈಕಿ, ಅವುಗಳ ವಾಸಸ್ಥಳಗಳ ಅತಿಕ್ರಮಣ ಗಂಭೀರ ಸಮಸ್TURTLEAP5jpgಯೆ. ಉದಾಹರಣೆಗೆ, ಕಾರವಾರದ ರವೀಂದ್ರನಾಥ ಕಡಲ ತೀರ ಮತ್ತು ದೇವ್‌ಬಾಗ್ ಸೇರಿದಂತೆ, ೩೮೦ ಕಿ.ಮೀ. ಉದ್ದದ ಕನ್ನಡ ಕರಾವಳಿ ಕಡಲಾಮೆಗಳ ಹೆರಿಗೆ ಮನೆ. ಕಡಲ್ಕೊರೆತವನ್ನು ತಡೆಗಟ್ಟುವ ಉದ್ದೇಶದಿಂದ ಕಾಂಕ್ರೀಟ್ ಗೋಡೆ, ಬೃಹತ್ ಕಲ್ಲಿನ ಹಾಸುಗಳನ್ನು ಗಳನ್ನು ಸಮುದ್ರ ತಟಕ್ಕೆ ನಿರ್ಮಿಸಿದ ಹಿನ್ನೆಲೆ, ಸದ್ಯ ಸಾವಿರಾರು ಕಿ.ಮೀ. ಕ್ರಮಿಸಿ ಮೊಟ್ಟೆ ಇಡಲು ಆಗಮಿಸುವ ಹೆಣ್ಣು ಕಡಲಾಮೆಗಳ ‘ಮೆಟರ್ನಿಟಿ ಹೋಂ’ ಕಸಿದುಕೊಂಡಂತಾಗಿದೆ!

ಕುಂದಾಪುರ ತ್ರಾಸಿಯ ನಂದಿ ನಾಯ್ಕ್, ಭಟ್ಕಳ ಬಳಿ ಧಾಮಜಾಲಿಯ ಸುಬ್ಬಯ್ಯ ಅಂಥಹವರು ಕಳೆದ ಮೂರು ದಶಕಗಳಲ್ಲಿ ಲಕ್ಷಾಂತರ ಮೊಟ್ಟೆಗಳನ್ನು ಕಾಳಜಿಯಿಂದ ಸಂಗ್ರಹಿಸಿ, ಮರಿ ಮಾಡಿಸಿದವರಿದ್ದಾರೆ. ನಂದಿ ನಾಯ್ಕ್ ಅವರ ನಿವೃತ್ತಿಯ ನಂತರ ತ್ರಾಸಿಯ ಕಡಲಾಮೆ ಸಂರಕ್ಷಣಾ ಕೇಂದ್ರ ಕೆಲಕಾಲ ಬಾಗಿಲು ಮುಚ್ಚಿತು. ಕುಂದಾಪುರದ ಬೆಂಗ್ರೆ ಮತ್ತು ಭಟ್ಕಳದ ಬೆಳಕೆಯೂ ಸಾವಿರಾರು ಇಂತಹ ಆಮೆ ರಕ್ಷಣೆಯ ಕಥೆಗಳನ್ನು ತಮ್ಮ ಒಡಲಲ್ಲಿ ಹುದುಗಿಸಿಟ್ಟುಕೊಂಡಿವೆ.

ನಮ್ಮ ಹಸ್ತಕ್ಷೇಪದ ಪರಿಣಾಮ:

ಹಡಗುಗಳಿಂದ ಹೊರ ಚೆಲ್ಲುವ ಎಣ್ಣೆ, ಸೂಸುವ ಕಲ್ಮಶ ದ್ರವಗಳು ಉಪ್ಪು ನೀರಿನ ಆಮೆಗಳಿಗೆ, ನದಿಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದಿಂದ ಸಿಹಿ ನೀರಿನ ಆಮೆಗಳು ಅಕಾಲಿಕ ಸಾವು ಅಥವಾ ವೈಕಲ್ಯ ಹೊಂದಿದ, ಅಶಕ್ತ ಮರಿಗಳು ಜನ್ಮ ತಳೆಯುತ್ತಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಆಹಾರದ ಅಲಭ್ಯತೆ, ಪ್ಲಾಸ್ಟಿಕ್ ಭಕ್ಷಣೆಯಿಂದ ವಯಸ್ಕ ಆಮೆಗಳು ಸಾವನ್ನಪ್ಪುತ್ತಿರುವ ಕಳವಳಕಾರಿ ಬೆಳವಣಿಗೆ ಸಹ ಕಡಲ ಜೀವಶಾಸ್ತ್ರಜ್ಞರು ಗುರುತಿಸಿದ್ದಾರೆ.

ಸಮುದ್ರ ತಟಗಳು, ಬೀಚ್‌ಗಳು ಇತ್ತೀಚೆಗೆ ಅತ್ಯಂತ ಜನನಿಬಿಡವಾಗುತ್ತಿವೆ. ಮಧ್ಯರಾತ್ರಿ ಮೀರಿದರೂ ಕರಗದ ಜನ ಸಂದಣಿ, ಕಣ್ಣು ಕೋರೈಸುವ ಝಗಮಗ ದೀಪಗಳ ಸಾಲು ಹಾಗೂ ತಂದು ಬಿಸಾಡಿದ ತ್ಯಾಜ್ಯ ಆಮೆಗಳಿಗೆ ಮೃತ್ಯುಕೂಪವಾಗುತ್ತಿದೆ. ಕೆಲವೊಮ್ಮೆ ಆಮೆ ಮರಿಗಳು, ಪ್ಲಾಸ್ಟಿಕ್, ದಾರ, ವೈರ್, ಮೀನು ಹಿಡಿಯಲು ಬಳಸಲಾಗುವ ಬಲಿಗಳಲ್ಲಿ ಸಿಕ್ಕು ಇತರೆ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುತ್ತಿವೆ. ಮೀನಿನ ಬಲೆಯಲ್ಲಿ ಸಿಕ್ಕಿ ಬೀಳುವ ಅಥವಾ ಗಾಳ ಕಚ್ಚುವ ಆಮೆಗಳ ದೇಹಭಾಗ ಕತ್ತರಿಸಿ, ಮೀನುಗಾರರು ಹಾಗೆಯೇ ಸಾಯಲು ಬಿಟ್ಟ ಪ್ರಕರಣಗಳೂ ವರದಿಯಾಗಿವೆ.

ಎಲ್ಲ ಬೇಡವಾದ ಬೆಳವಣಿಗೆಗಳ ಮಧ್ಯೆ ಕೆಲ ಆಶಾದಾಯಕ ಪ್ರಯತ್ನಗಳು ಆಮೆಗಳ ಭವಿಷ್ಯವನ್ನು ಸುಭದ್ರಗೊಳಿಸುವ ಚಿಕ್ಕ ಹಣತೆಗಳಾಗಿ ಬೆಳಗುತ್ತಿವೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಸಮುದ್ರ ತಟದಗುಂಟ, ಕಡಲಾಮೆ ‘ಆಲಿವ್ ರಿಡ್ಲೆ ಟರ್ಟಲ್’ಗಳ ಮೊಟ್ಟೆ-ಮರಿಗಳನ್ನು ಸಂರಕ್ಷಿಸುವ ಪ್ರಯತ್ನ ಆಶಾದಾಯಕವಾಗಿದೆ.

ಟರ್ಟಲ್ ವಾಕ್ಸ್

ಕಾರ್ಯಾಚರಣೆಯಲ್ಲಿ ಆಸಕ್ತ ಪರಿಸರ ಪ್ರೇಮಿಗಳು ಪಾಲ್ಗೊಂಡು, ಕಡಲಾಮೆಗಳ ರಕ್ಷಣೆ, ಮೊಟ್ಟೆ ಮತ್ತು ಮರಿಗಳ ಸಂಗ್ರಹಣೆ ಹಾಗೂ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸುವ ಸೇವೆ, ಬೀದಿ ನಾಯಿ ಹಾಗೂ ಉಪದ್ರವಕಾರಿ ಜನಗಳ ಕೈಗೆ ಸಿಗದಂತೆ ಕಣ್ಗಾವಲು ವ್ಯವಸ್ಥೆ ರೂಪಿಸಿ, ಅವುಗಳ ಹೆರಿಗೆ ಮನೆಯನ್ನು ಸುರಕ್ಷಿತವಾಗಿ ದಿನದ ೨೪ ಗಂಟೆ ವಾರದ ೭ ದಿನವೂ ಕಾಯುವ ಮನಸ್ಸು ಮಾಡಿದ್ದಾರೆ.

ಕಡಲಾಮೆ ಮೊಟ್ಟೆ ಇಟ್ಟ ಗೂಡುಗಳನ್ನು ಗುರುತಿಸಿ, ಮೊಟ್ಟೆಗಳಿಗೆ ವಿಶಿಷ್ಟ ಗುರುತು ನೀಡಿ, ಸಂಗ್ರಹಿಸಿಕೊಂಡು ಸಮೀಪದ ‘ಹ್ಯಾಚರೀಸ್’ನಲ್ಲಿ ಪಾಲನೆ-ಪೋಷಣೆ ಮಾಡಿ, ಸ್ವತಂತ್ರವಾಗಿ ಬದುಕಬಲ್ಲವು ಎಂಬುದು ಖಾತ್ರಿಯಾಗುತ್ತಿದ್ದಂತೆ, ಸಮುದ್ರಕ್ಕೆ ಬಿಡುಗಡೆಗೊಳಿಸುವ ‘ಟರ್ಟಲ್ ವಾಕ್ಸ್’ ಸ್ವಯಂ ಸೇವಕರ ಪಡೆ ಈಗ ಅಲ್ಲಿ ಮನೆ ಮಾತು. ಹೀಗಾಗಿ, ಕಡಲಾಮೆ ಮೊಟ್ಟೆ ಕಬಳಿಸುವ, ತಿಂದು ಬಿಡುವ ಅಥವಾ ಕದ್ದೊಯ್ಯುವುದು ಈಗ ಕಳ್ಳ ಸಾಗಣೆದಾರರಿಗೆ ಸಿಂಹ-ಸ್ವಪ್ನ.

ಕಳ್ಳ ಸಾಗಣೆದಾರರಿಂದ ರಕ್ಷಿಸಲ್ಪಡುವ ಆಮೆಗಳಿಗೆ ಶುಶ್ರೂಷೆ, ಪೋಷಣೆಯ ಅವಶ್ಯಕತೆ ಇದೆ. ಕೆಲವು TURTLEREUTERS1jpgಸಂದರ್ಭಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸಬೇಕಾದ ಅನಿವಾರ್ಯತೆಯೂ ಈ ಸ್ವಯಂ ಸೇವಕರಿಗೆ ಒದಗಿ ಬರುತ್ತದೆ. ಸಕಾಲಿಕ ಔಷಧೀಯ ಚಿಕಿತ್ಸೆ ಮತ್ತು ವೆಚ್ಚ ಭರಿಸಲು ಅನೇಕ ಯುವಜನರು ಮುಂದೆ ಬರುತ್ತಿರುವುದೂ ಕೂಡ ಅಶಾದಾಯಕ ಬೆಳವಣಿಗೆ. ಅವುಗಳ ಬಗ್ಗೆ ನಿರಂತರ ಅಧ್ಯಯನ, ದಾಖಲಾತಿ, ಗಣತಿ, ಪ್ರಜನನ ಸಂಖ್ಯೆಯ ವಿವರ ಮತ್ತು ಸಂಶೋಧನೆಗೂ ಹಣಕಾಸಿನ ಅಗತ್ಯವಿದೆ.

ಈ ಎಲ್ಲ ಪ್ರಯತ್ನಗಳ ಮೂಲಕ ಭಾರತದ ಅಪರೂಪದ ಆಮೆಗಳನ್ನು ಸಂರಕ್ಷಿಸುವ ಸುಮನಸ್ಸುಗಳು ಅಲ್ಲಲ್ಲಿ ಸದ್ದಿಲ್ಲದೇ ತಮ್ಮ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

ನಮ್ಮ ಸ್ಥಳೀಯ ಕೆರೆ, ತೊರೆ, ಗುಡ್ಡ-ತಟಾಕುಗಳಲ್ಲಿ, ಪುಟ್ಟ ಸಂಕಗಳಲ್ಲಿ ಮೆದು ಬೆನ್ನಿನ ನೀರಾಮೆಗಳಿವೆ. ಅಲೀವೆ, ಹಿನ್ನೀರು ಮತ್ತು ತರಿ ಭೂಮಿಯಲ್ಲಿ ಅವುಗಳನ್ನು ಬಂಧಿಸಿ, ಮಾರಾಟ ಮಾಡುವವರಿದ್ದಾರೆ. ತಿನ್ನುವವರೂ ಇದ್ದಾರೆ! ಸ್ಥಳೀಯವಾಗಿ ಆಮೆಗಳನ್ನು ರಕ್ಷಿಸುವ ಪುಟ್ಟ ಪ್ರಯತ್ನ ನಡೆಯಲಿ ಎಂಬ ಸದಾಶಯ.. ಈ ಬಾರಿಯ ಆಮೆ ಸಪ್ತಾಹದ ಆಶಯ.

ಚಿತ್ರ-ಲೇಖನ: ಹರ್ಷವರ್ಧನ ವಿ.ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*