ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂತ್ಯವಿರದ ಜಲ ಮಾಲಿನ್ಯ: ಹೂಳೆಂಬ ಗೋಳು

ನೀರಿನ ರಚನೆಯನ್ನು ಅದರ ಸ್ಥಿತಿಯನ್ನು ಭೌತಿಕ, ರಾಸಾಯನಿಕ ಮತ್ತು ಜೈವಿಕ ಪದಾರ್ಥಗಳು ಬದಲಾಯಿಸುತ್ತವೆ. ಅಂತಹಾ ಬದಲಾವಣೆಯು ಪ್ರತಿಕೂಲಕರವಾಗಿದ್ದರೆ, ಅದನ್ನೇ ಮಾಲಿನ್ಯ ಎನ್ನುತ್ತೇವೆ. ಉದಾಹರಣೆಗೆ ಕುಡಿಯುವ ನೀರಲ್ಲಿ ಈ-ಕೋಲಿ ಎನ್ನುವ ಬ್ಯಾಕ್ಟೀರಿಯಾ ಇದ್ದರೆ, ಅದು ನಮ್ಮ ಕರುಳಿಗೆ ಹಾನಿಕಾರಕ. ಆಗ ಅದನ್ನು ಕುಡಿಯಲು ಯೋಗ್ಯವಿಲ್ಲ, ಮಲಿನವಾಗಿದೆ SILT 1ಎನ್ನುತ್ತಾರೆ. ಬಟ್ಟೆ ತೊಳೆದ ನೀರಲ್ಲಿ ಸಲ್ಫೇಟ್ ಅಥವಾ ಪಾಸ್ಫೇಟ್ ಅಂಶಗಳು ಇರುತ್ತವೆ. ಅವು ನೀರಿನಲ್ಲಿ ಕರಗುವುದಿಲ್ಲ. ಅಂತಹಾ ನೀರನ್ನು ತರಕಾರಿ ಗಿಡಗಳಿಗೆ ನೀಡಿದರೆ, ಗಿಡಗಳು ಸತ್ತು ಹೋಗುತ್ತವೆ. ಅದನ್ನು ಕೃಷಿಗೂ ಯೋಗ್ಯವಿಲ್ಲದ ಮಲಿನ ನೀರು ಎಂದು ಹೇಳುತ್ತಾರೆ. ನಗರಗಳಲ್ಲಿ ಕೊಳಚೆ ನೀರನ್ನು ನದಿಗಳಿಗೆ ಹರಿಸುತ್ತಾರೆ. ಕೊಳಚೆ ನೀರಿನಲ್ಲಿ ಪ್ಲಾಸ್ಟಿಕ್, ಕಾರ್ಖಾನೆಗಳ ಭಾರ ಲೋಹಗಳ ಅಂಶಗಳು, ವಿಷ ರಾಸಾಯನಿಕಗಳು ಇರುತ್ತವೆ. ಅವೆಲ್ಲ ನೀರಿನಲ್ಲಿರುವ ಜೀವಿಗಳಿಗೆ ಹಾನಿಕಾರಕ. ಕುಡಿಯಲು, ಕೃಷಿಗೆ ಬಳಸಲು ಸಹ ಯುಕ್ತವಲ್ಲ. ಆಗಲೂ ನೀರನ್ನು ಮಲಿನವಾಗಿದೆ ಎನ್ನಲಾಗುತ್ತದೆ. ಇವೆಲ್ಲಾ ಮೇಲ್ನೋಟಕ್ಕೆ ಕಾಣಿಸುವ ಮಲಿನತೆ.

ಸಮುದ್ರಗಳ ಮಧ್ಯದಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿರುತ್ತಾರೆ. ಅಲ್ಲಿ ಅಣುವಿಕಿರಣದ ಶಾಖವನ್ನು ಕಡಿಮೆಮಾಡಲು ತಣ್ಣನೆಯ ನೀರನ್ನು ಬಳಸಿಕೊಳ್ಳಲಾಗುತ್ತದೆ. ಸ್ಥಾವರಗಳಿಂದ ಹೊರಬರುವ ನೀರು ಬಿಸಿಯಾಗಿರುತ್ತದೆ. ಅದನ್ನು ಮತ್ತೆ ಸಮುದ್ರಕ್ಕೆ ಸೇರಿಸಲಾಗುತ್ತದೆ. ಅದರ ಉಷ್ಣವು ನೀರಿನ ಸ್ಥಿತಿಯನ್ನು ಮತ್ತು ರಚನೆಯನ್ನು ಬದಲಾಯಿಸುತ್ತದೆ. ಹೀಗಾಗಿ, ಹೊರಗಿನಿಂದ ಸೇರುವ ಬಿಸಿನೀರೂ ಸಹ ಮಲಿನಕಾರಿ. ಭೂಮಿಯ ಕೆಲವು ಪ್ರದೇಶಗಳಲ್ಲಿ ಪಾದರಸ, ಕ್ಯಾಲ್ಸಿಯಮ್, ಫ್ಲೂರೈಡ್ ಹಾಗೂ ಇನ್ನಿತರ ಖನಿಜಗಳ ಅಂಶಗಳು ಹೆಚ್ಚಾಗಿರುತ್ತವೆ. ಅವು ಅಲ್ಲಿರುವ ನೀರಿನಲ್ಲೂ ಬೆರೆತಿರುತ್ತವೆ. ಅಂತಹಾ ನೀರು ಕುಡಿಯಲು ಹಾಗೂ ಕೃಷಿಗೆ ಬಳಸಲು ಯೋಗ್ಯವಾಗಿರುವುದಿಲ್ಲ. ಅಂತಹ ನೀರನ್ನೂ ಸಹಾ ಮಲಿನ ಜಲ ಎನ್ನಲಾಗುತ್ತದೆ.

ಹೀಗೆ ವಿಕಿರಣ ಮತ್ತು ಉಷ್ಣತೆಗಳು ಭೌತಿಕ ಮಲಿನಕಾರಿಗಳು. ಕಾರ್ಬನಿಕ ಮತ್ತು ಅಕಾರ್ಬನಿಕ ರಾಸಾಯನಿಕಗಳು ರಾಸಾಯನಿಕ ಮಲಿನಕಾರಿಗಳು. ವೈರಸ್, ಬ್ಯಾಕ್ಟೀರಿಯಾ ಮತ್ತು ಇನ್ನಿತರ ರೋಗಕಾರಕ ಜೀವಿಗಳು ಜೈವಿಕ ಮಲಿನಕಾರಿಗಳು. ಮಲಿನಕಾರಿಗಳು ನೈಸರ್ಗಿಕವಾಗಿ ನೀರಿಗೆ ಸೇರಬಹುದು. ಅಥವಾ ಮಾನವ ಮತ್ತು ಇನ್ನಿತರ ಜೀವಿಗಳ ಚಟುವಟಿಕೆಗಳಿಂದಲೂ ಸೇರಬಹುದು. ಭೂಚಿಪ್ಪಿನಿಂದಲೇ ಬರುವ ಪಾದರಸ, ನೈಟ್ರೇಟ್‌ಗಳಿರಬಹುದು, ಅಥವಾ ಕಾರ್ಖಾನೆಗಳು, ಕೃಷಿಯಿಂದ ಬರುವ ತ್ಯಾಜ್ಯ ನೀರಿರಬಹುದು ಇವೆಲ್ಲಾ ನೀರನ್ನು ಕಲುಷಿತಗೊಳಿಸುತ್ತವೆ.

SILT 2ಐದು ಗುಂಪು; ಜಲಮಾಲಿನ್ಯಕಾರಿಗಳನ್ನು ಐದು ಗುಂಪುಗಳಲ್ಲಿ ವಿಭಾಗಿಸುತ್ತಾರೆ. ಬಗ್ಗಡ ಅಥವಾ ಹೂಳು, ದ್ರವ ತ್ಯಾಜ್ಯಗಳು, ಅಕಾರ್ಬನಿಕ ಮಲಿನಕಾರಿಗಳು, ಕಾರ್ಬನಿಕ ಮಲಿನಕಾರಿಗಳು ಹಾಗೂ ಅಭಿವೃದ್ಧಿಯಿಂದಾಗುವ ಮಲಿನಕಾರಿಗಳು.

ಬಗ್ಗಡ ಅಥವಾ ಹೂಳು; ಬಿರುಸಾಗಿರುವ ಮಳೆ ಮತ್ತು ಗಾಳಿಯಿಂದ ಕೃಷಿ ಭೂಮಿ, ಇಟ್ಟಿಗೆ ಭಟ್ಟಿ, ಕಲ್ಲುಗಣಿ, ಗಣಿ, ಗುಡ್ಡಬೆಟ್ಟಗಳು, ಗೋಮಾಳ, ಅರಣ್ಯ ಪ್ರದೇಶಗಳಿಂದ ಅಪಾರ ಪ್ರಮಾಣದ ಮಣ್ಣಿನ ಕಣಗಳು ನೀರನ್ನು ಸೇರುತ್ತಿರುತ್ತವೆ. ಈ ಮಣ್ಣಿನ ಸಣ್ಣಸಣ್ಣ ಕಣಗಳು ನೀರಿಗೆ ಸೇರಿದ ಮೇಲೆ, ನೀರಿನಲ್ಲಿ ಕರಗದೇ ತೇಲುತ್ತವೆ. ಕ್ರಮೇಣ ನೀರಿನ ತಳದಲ್ಲಿ ಸಂಗ್ರಹವಾಗುತ್ತವೆ. ಇದನ್ನೇ ಹೂಳು ಎನ್ನುತ್ತಾರೆ. ಹೂಳು ನೀರು ಬರುವ ಮಾರ್ಗವನ್ನು ಮುಚ್ಚಿ ಬಿಡುತ್ತದೆ. ಜಲಮೂಲಕ್ಕೆ ಆದ ತಡೆಯಿಂದಾಗಿ, ಮೇಲಿನಿಂದ ಬಿದ್ದ ನೀರು ಇಂಗುವುದಿಲ್ಲ. ಅಡಿಯಿಂದ ಮೇಲೆ ಬರುವ ಜಲ ಸ್ಥಗಿತಗೊಳ್ಳ್ಳುತ್ತದೆ. ಹೀಗೆ ಸಂಗ್ರಹಾಗಾರವು ಬೇಗ ಬತ್ತಿಹೋಗುತ್ತದೆ. ಹೂಳು ಸಂಗ್ರಹಾಗಾರದ ಪಾತ್ರವನ್ನು ಕಿರಿದುಗೊಳಿಸುತ್ತದೆ. ಇದರಿಂದಾಗಿ ಸಂಗ್ರಹಾಗಾರಗಳು ಬೇಗ ತುಂಬಿ ಉಕ್ಕಿ ಹರಿಯಲು ಪ್ರಾರಂಭವಾಗುತ್ತವೆ. ಪ್ರವಾಹ ಉಂಟಾಗಬಹುದು.

ಮೀನುಗಳ ಕಿವಿರಿನಲ್ಲಿ, ಇನ್ನಿತರ ಜೀವಿಗಳ ದೇಹಭಾಗದಲ್ಲಿ ಸೇರಿಕೊಳ್ಳುವ ಹೂಳಿನ ಕಣಗಳು ಅವುಗಳ ಉಸಿರಾಟಕ್ಕೆ ಅಡ್ಡಿಯಾಗುತ್ತದೆ. ಕೆಸರಿನಲ್ಲಿ ನೀರು, ಖನಿಜಗಳು ಹಾಗೂ ಪೋಷಕಾಂಶಗಳು ಇರುತ್ತವೆ. ಆದರೆ ತಳ ಸೇರಿದ ಹೂಳಿನಲ್ಲಿರುವ ಜೇಡಿಮಣ್ಣು ಜಲತಳವಾಸಿಗಳ ಬದುಕಿಗೆ ತೊಂದರೆ ಉಂಟುಮಾಡುತ್ತದೆ. ಅವುಗಳು ಕ್ರಮೇಣ ಸಾಯುತ್ತವೆ. ಹೂಳು ನೀರನ್ನು ಬಲುಬೇಗ ರಾಡಿಗೊಳಿಸುತ್ತದೆ. ಆದರೆ ಬೇಗ ತಿಳಿಯಾಗುವುದಿಲ್ಲ. ಆಗ ಸೂರ‍್ಯನ ಕಿರಣಗಳು ನೀರಿನಾಳಕ್ಕೆ ಇಳಿಯುವುದಿಲ್ಲ. ಆಗ ನೀರೊಳಗಿನ ಜಲಸಸ್ಯಗಳ ದ್ಯುತಿಸಂಶ್ಲೇಷಣೆಗೆ ಬೆಳಕು ಸಿಗದೇ ಅವು ಸಹಾ ಸಾಯತೊಡಗುತ್ತವೆ. ಒಟ್ಟಾರೆ ನೀರೊಳಗಿನ ಆಹಾರ ಜಾಲವೇ ನಿರ್ನಾಮವಾಗುತ್ತದೆ.

ಹೂಳಿನ ಕಣಗಳ ಗಾತ್ರ ೦.೦೦೨ ಮಿಲಿಮೀಟರ್‌ನಿಂದ ೦.೦೨ ಮಿಲಿಮೀಟರ್‌ವರೆಗಿರುತ್ತದೆ. ಇವು ನಯವಾದ ಮರಳಿಗಿಂತ ಸಣ್ಣವು. ಜೇಡಿಕಣಗಳಿಗಿಂತ ದೊಡ್ಡವು. ಇವು ಖನಿಜ,SILT 5 ರಾಸಾಯನಿಕ, ಪ್ಲಾಸ್ಟಿಕ್ ಮುಂತಾದ ಯಾವುದೇ ವಸ್ತುಗಳ ಕಣಗಳೂ ಆಗಿರಬಹುದು.

ಭಾರತದಲ್ಲಿ ಪ್ರತಿವರ್ಷ ಹೂಳು ಸಂಗ್ರಹವಾಗುವ ಪ್ರಮಾಣ ೫೩೩೪ ಮಿಲಿಯನ್ ಟನ್‌ಗಳು. ಅಣೆಕಟ್ಟುಗಳಲ್ಲಿ ಸಂಗ್ರಹಣೆಯಾಗುವ ಪ್ರಮಾಣ ೬೦೦ ಟನ್‌ಗಳು. ಇದರಿಂದ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಪ್ರತಿವರ್ಷ ಶೇಖಡ ಎರಡರಷ್ಟು ಕಡಿಮೆಯಾಗುತ್ತದೆ. ಶೇಖಡ ೬೧ ಪ್ರಮಾಣದಷ್ಟು ಹೂಳು ಕೇವಲ ನದಿಯಲ್ಲಿ ಸೇರಿಕೊಳ್ಳುತ್ತಿದೆ. ಭಾರತದ ನದಿಗಳಲ್ಲಿ ಪ್ರವಾಹ ಬರಲು ಮುಖ್ಯ ಕಾರಣ ಹೂಳು ಸಂಗ್ರಹ. ಬ್ರಹ್ಮಪುತ್ರ ನದಿಯಲ್ಲಿ ಎರಡು ಸೆಂಟಿಮೀಟರ್‌ಗಳಿಂದ ೧೫ ಮೀಟರ್‌ಗಳವರೆಗೆ ಹೂಳು ತುಂಬಿಕೊಂಡಿದೆ. ರಾಷ್ಟ್ರೀಯ ಪ್ರವಾಹ ಸಮಿತಿಯು ದಿಬ್ರೂಘಡ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಯ ತಳವನ್ನು ಅಳೆಯುತ್ತದೆ. ಪ್ರತಿ ೧೦ ವರ್ಷಗಳಿಗೊಮ್ಮೆ ಅದರ ತಳವು ೩೦ ಸೆಂಟೀಮೀಟರ್‌ಗಳಿಂದ ೪೦ ಸೆಂಟೀಮೀಟರ್‌ಗಳವರೆಗೆ ಏರಿರುವುದನ್ನು ದಾಖಲಿಸಿದೆ. ಪ್ರವಾಹದಿಂದಾಗಿ ನದಿಯ ಪಾತ್ರ ದಿನೇದಿನೇ ಅಗಲವಾಗುತ್ತಿದೆ. ಮಣ್ಣು ಕೊಚ್ಚಿಹೋಗುವ ಪ್ರಮಾಣವಂತೂ ಅತ್ಯಧಿಕ. ಹೀಗಾಗಿ, ಇಲ್ಲಿ ೩೨೦೦ ಕಿಲೋಮೀಟರ್‌ಗಳ ಉದ್ದದ ಏರಿಯನ್ನು ನಿರ್ಮಿಸಿದ್ದಾರೆ. ಗಂಗಾನದಿಯ ಉಪನದಿಯಾದ ಕೋಸಿಯು ಭಾರತದ ಈಶಾನ್ಯಕ್ಕೆ ಹರಿಯುತ್ತದೆ. ಇದರಡಿಯಲ್ಲಿರುವ ಹೂಳಿನ ಪ್ರಮಾಣ ೧೦೦ ಮಿಲಿಯನ್ ಘನಮೀಟರ್‌ಗಳು. ಇದರಿಂದಾಗಿ ಕೋಸಿ ನದಿಯ ದಿಕ್ಕೇ ಬದಲಾಗಿದೆ. ಹೂಳಿನಿಂದಾಗಿ ಅಣೆಕಟ್ಟುಗಳ ಆಯುಸ್ಸು ಸಹಾ ಕಡಿಮೆಯಾಗಿದೆ.

ಶೇಖಡ ೬೧ ಪ್ರಮಾಣದಷ್ಟು ಹೂಳು ಸಮುದ್ರವನ್ನು ಸೇರುತ್ತಿದೆ. ಸಾಗರ-ಸಮುದ್ರಗಳಲ್ಲಿ ಸೇರಿಕೊಂಡ ಹೂಳನ್ನು ತೆಗೆಯುವುದು ಹೇಗೆ? ಅದಕ್ಕೆ ಸಾಗರ-ಸಮುದ್ರಗಳೇ ಉಪಾಯ ಕಂಡುಕೊಂಡಿವೆ. ಅದೇ ದ್ವೀಪಗಳ ನಿರ್ಮಾಣ. ಹೂಳೆಲ್ಲ ಒಂದೆಡೆ ಸೇರಿಸೇರಿ ದಿಬ್ಬಗಳಾಗುತ್ತವೆ. ಅದು ಇನ್ನಿತರ ಲವಣಗಳೊಂದಿಗೆ ಬೆರೆತು ಗಟ್ಟಿಯಾಗುತ್ತದೆ. ಎಷ್ಟೋ ಸಾವಿರ ವರ್ಷಗಳ ಬಳಿಕ ಅಲ್ಲೊಂದು ದ್ವೀಪ ಹುಟ್ಟಿಕೊಳ್ಳುತ್ತದೆ.

ಸವಕಳಿ ತಡೆಯುವ ಮಾರ್ಗವೇ ಸೂಕ್ತ ಪರಿಹಾರ. ಇದು ಆಗಬೇಕು ನಿರಂತರ. ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮರಗಿಡಗಳಿದ್ದರೆ, ಸವಕಳಿ ಆಗದು. ನೀರು ಬರುವ ಮಾರ್ಗದಲ್ಲಿ ಅಲ್ಲಲ್ಲಿ ಬಾಂದಾರಗಳಿದ್ದರೆ, ನೀರು ತಡೆತಡೆದು ಬರುತ್ತದೆ. ಆಗ ಹೂಳು ಆ ತಡೆ ಜಾಗದಲ್ಲಿಯೇ ಉಳಿಯುತ್ತದೆ. ಇಳಿಜಾರಿನಲ್ಲಿ ಕಂಟೂರ್ ಕೃಷಿ ಮಾಡುವುದರಿಂದಲೂ ಮಣ್ಣು ಸವಕಳಿ ತಪ್ಪುತ್ತದೆ. ನೀರು ಹರಿಯುವ ಮಾರ್ಗದಲ್ಲಿ ನೆಲ ಕಾಣಿಸದಂತೆ ಮುಚ್ಚಿಗೆ ಸಸ್ಯಗಳನ್ನು ಬೆಳೆಸುವುದು. ಅದರಲ್ಲೂ ಹುಲ್ಲು, ಮುಂಡಗ, ಹಬ್ಬುಬಳ್ಳಿಗಳು, ಅತ್ತಿಮರ, ಮಾವಿನಮರ, ಆಲದ ಮರದಂತಹ ಚಾಚುಬೇರುಗಳಿರುವ ಮರಗಳನ್ನು ಬೆಳೆಸುವಿಕೆಯಿಂದ ನೀರಿಗೆ ಹೂಳು ಸೇರುವುದು ತಪ್ಪುತ್ತದೆ.

SILT 6ತುಂಗಭದ್ರಾನದಿಗೆ ಮುನೀರಾಬಾದ್‌ನಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದರಲ್ಲಿ ಈಗಿರುವ ಹೂಳನ್ನು ತೆಗೆದರೆ, ಇಡೀ ಬೆಂಗಳೂರನ್ನು ವಿಧಾನಸೌಧದಷ್ಟೆತ್ತರ ಮುಚ್ಚಬಹುದು. ಅದರಲ್ಲಿ ಈಗ ನೀರು ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿದೆ. ಹೇಗಾದರೂ ಮಾಡಿ ಹೂಳನ್ನು ತೆಗೆಯುತ್ತಾ ಬಂದರೆ ಮಾತ್ರ ಅಣೆಕಟ್ಟನ್ನು ಉಳಿಸಿಕೊಳ್ಳಬಹುದು. ಕೆರೆ, ಸರೋವರ ಮತ್ತು ನದಿಹಳ್ಳಗಳಲ್ಲಿ ಸಂಗ್ರಹವಾಗುವ ಹೂಳನ್ನು ಮೇಲೆತ್ತುವ ಯೋಜನೆಯಿದೆ. ಸರ್ಕಾರವೇ ಇದನ್ನು ಮಾಡಿಸಲು ಮುಂದಾದಾಗ, ಅಧಿಕ ಖರ್ಚು ಬಂತು. ಜನರಿಗೆ ಲಾಭವಾದರೂ ಅವರು ಸೂಕ್ತವಾಗಿ ಕೈಜೋಡಿಸಲಿಲ್ಲ. ಹೊಸ ಕೆರೆ ತೆಗೆಸುವುದೇ ಕಡಿಮೆ ಖರ್ಚಿನದಾಗಿತ್ತು. ಅನೇಕ ಹಳ್ಳಿಗಳಲ್ಲಿ ಈಗಲೂ ಶ್ರಮದಾನದಿಂದ ಕೆರೆಯ ಹೂಳನ್ನು ಮೇಲೆತ್ತಿ ತಮ್ಮ ಹೊಲಗಳಿಗೆ ಹಾಕಿಸುತ್ತಾರೆ. ಅಂತಹ ಹಳ್ಳಿಗಳಲ್ಲಿ ಬೇಸಿಗೆಯಲ್ಲೂ ನೀರಿನ ವ್ಯವಸ್ಥೆ ಸುಸ್ಥಿರವಾಗಿರುತ್ತದೆ.

ನಗರದ ಕೊಳಚೆಯ ಸಂಸ್ಕರಣೆ ಮಾಡಿ, ಅದರ ಮರುಬಳಕೆ. ಸಂಗ್ರಹಾಗಾರಗಳಲ್ಲಿ ಬಟ್ಟೆ ತೊಳೆಯುವುದರ ನಿಯಂತ್ರಣ, ಹೈಸಿಂತಾದಂತಹ ಸಸ್ಯಗಳ ಬೆಳವಣಿಗೆ ಅತಿಯಾಗದಂತೆ ನೋಡಿಕೊಳ್ಳುವುದೂ ಸಹಾ ಅಗತ್ಯ. ಅನೇಕ ಜಲಸಸ್ಯಗಳು ನೀರಿನಲ್ಲಿರುವ ಮಲಿನಕಾರಕಗಳನ್ನು ಜೀರ್ಣಿಸಿಕೊಂಡು ಅಮ್ಲಜನಕವನ್ನು ನೀರಿಗೆ ಬಿಡುಗಡೆಮಾಡುತ್ತಿರುತ್ತವೆ. ಅವುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಳಿಸಿಕೊಳ್ಳಬೇಕಾದ್ದು ಅವಶ್ಯಕ. ಮಣ್ಣನ್ನು ತಿನ್ನುವ, ಅಂದರೆ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು  ಕಬಳಿಸುವ ಅನೇಕ ಜಲಚರಗಳಿವೆ. ಅವುಗಳಿಂದಾಗಿ ಹೂಳಿನಲ್ಲಿರುವ ಕರಗದ ಸಶೇಷಗಳು ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳ್ಳುತ್ತವೆ. ಅಂತಹ ಜೀವಿಗಳು ಹೆಚ್ಚುವಂತೆ ನೋಡಿಕೊಳ್ಳಬೇಕು.

 ಚಿತ್ರ-ಲೇಖನ: ಪೂರ್ಣಪ್ರಜ್ಞ, ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*