ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನಾಸರೆ ನಿರ್ಮಿಸಿದ ಪುಣ್ಯಾತ್ಮರು

ಧೃತಿಗೆಟ್ಟು ಅನ್ಯರ ಬೇಡದ; ಮತಿಗೆಟ್ಟು ಪರರ ಹೊಗಳದ ಜೀವಿಗಳಿಗಾಗಿ

ಧಾರವಾಡ: “ಬೇಕಂದ್ರ ಚಹಾ ಕೊಡ್ತೀನಿ.. ಕುಡಿಯಾಕ ನೀರ ಕೇಳಬ್ಯಾಡ್ರಿ..!?” ಬಿರು ಬಿಸಿಲು.
ಬರಗಾಲದಿಂದ ತತ್ತರಿಸಿದ ಜೀವನ. ಉತ್ತರ ಕರ್ನಾಟಕದೆಲ್ಲೆಡೆ ಬಾಯ್ದೆರೆದ ಭೂಮಿ. ನೀರಿಲ್ಲದ ಬವಣೆಯಂತೂ ಹೇಳತೀರದು. ಹಾಗಾಗಿ, ನಮ್ಮ ಭಾಗದ ಗೃಹಿಣಿಯರು ಅತಿಥಿ ಸತ್ಕಾರಕ್ಕಾಗಿ ಹೊಸೆದ ಈ ಬಾರಿಯ ಹೊಸ ಗಾದೆ ಮಾತು!

ಪ್ರಾಣಿ-ಪಕ್ಷಿಗಳಿಗೆ ಬರಗಾಲದ ಮುನ್ಸೂಚನೆ, ನೀರಿನ ಆಸರೆಗಳ ಮುಮ್ಮಾಹಿತಿ ಸಿಕ್ಕು, ಅವು ಕೂಡ ವಲಸೆ ಹೋಗುವ ಗುಣ ಈಗ ರೂಢಿಸಿಕೊಂಡಿವೆ. ಈ ನಿಟ್ಟಿನಲ್ಲಿ ಅವುಗಳ ನೇವಿಗೇಷನ್ ಸಾಮರ್ಥ್ಯ ನೆನೆದು ನಾವು ಮೂಗಿನ ಮೇಲೆ ಬೆರಳಿಡಬೇಕು..!

ನಿಸರ್ಗ ಅವುಗಳಿಗೆ ಕಾಲಾನುಕ್ರಮೇಣ ಕಲಿಸಿರುವ ಪಾಠ.. ಕಾಯದ ಕಳವಳಕ್ಕಂಜಿ ‘ಕಾಯಯ್ಯ’ ಎನ್ನೆನು; ಜೀವನೋಪಾಯಕ್ಕಾಗಿ ‘ಈಯಯ್ಯ’ ಎನ್ನೆನು.. ಮನುಷ್ಯರಂತೆ.. ಎಂಬುದು. ಧೃತಿಗೆಟ್ಟು ಅನ್ಯರ ಬೇಡದಂತೆ.. ಬದುಕುವ ಕಲೆ ಅವುಗಳಿಗೆ ಸಿದ್ಧಿಸಿದೆ. ಅವುಗಳ ಪಾಲಿಂದನ್ನೂ ಕಬಳಿಸಿರುವ ನಾವು ಪಾಪ ಪ್ರಾಯಶ್ಚಿತ್ತಕ್ಕಾಗಿ.. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಮನುಷ್ಯರಿಗಾದರೆ ಹಕ್ಕುಗಳಿವೆ

NRC PHOTO 1ಪ್ರತಿಭಟನೆಗೆ ಹತ್ತಾರು ದಾರಿಗಳಿವೆ. ಧ್ವನಿ-ಜಾಣ್ಮೆ ಮೇಳೈಸಿದ ಹಕ್ಕೊತ್ತಾಯಕ್ಕೆ ಮಾಧ್ಯಮಗಳ ಸಹಕಾರವಿದೆ. ಜಿಲ್ಲಾಡಳಿತಗಳನ್ನು, ಬರಗಾಲದ ಕಾಮಧೇನುಗಳಾದ ಜನ ಪ್ರತಿನಿಧಿಗಳನ್ನು ತುದಿಗಾಲ ಮೇಲೆ ನಿಲ್ಲಿಸಬಲ್ಲ ಶಕ್ತಿ ಸಂಚಯವಿದೆ. ಕಿಸೆಯಲ್ಲಿ ಕೊನೆ ಪಕ್ಷ ದುಡ್ಡಿದೆ. ಖರೀದಿಸಿ ಉಣ್ಣುವ-ಕುಡಿಯುವ ಬಲವಿದೆ. ‘ವೋಟ್’ ಎಂಬ ಅಶ್ವಶಕ್ತಿಗಾಗಿ, ‘ಮತಬಾಧೆ’ ತಣಿಸಬೇಕಾದ ಅನಿವಾರ್ಯತೆ ಚುಕ್ಕಾಣಿ ಹಿಡಿದವರಿಗಿದೆ.

ಇಂತಿರ್ಪ, ಕ್ಷಣಿಕ, ತತ್ಕಾಲ್ ಪರಿಹಾರಕ್ಕೆ ಎಲ್ಲಿಲ್ಲದ ಕೊಂಬು, ಒತ್ತುಗಳಿವೆ. ದೂರಗಾಮಿ-ಭವಿಷ್ಯದ ಚಿಂತನೆ ಸಧ್ಯಕ್ಕೆ ರುಚಿಸುತ್ತಿಲ್ಲ. ನಮ್ಮನ್ನು ಹೊರತುಪಡಿಸಿ ಬೇರೆ ಜೀವಿಗಳಿಗೂ ಇಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಮರೆತು ದಶಕಗಳೇ ಉರುಳಿವೆ. ‘ಸ್ವಸ್ಥಾನ ಪರಿಜ್ಞಾನ’ ಬಹುಶಃ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರಂತಹ ವಿದ್ವಾಂಸರಿಗೆ ಗುತ್ತಿಗೆ ಕೊಟ್ಟಂತಿದೆ.

ಮೂಕರಿಗೆ ಧ್ವನಿಯಾಗುವವರಿದ್ದಾರೆಯೇ? ‘ಮಾತೇ ಮಹಾದೇವ’ ಎಂಬ ಕಾಲದಲ್ಲಿ..!

ನೇಚರ್ ರಿಸರ್ಚ್ ಸೆಂಟರ್‌ನ ಕಾರ್ಯಾಧ್ಯಕ್ಷ ಪಿ.ವಿ.ಹಿರೇಮಠ ಹಾಗೂ ತಂಡ, ನೇಚರ್ ಫಸ್ಟ್ ಹಾಗೂ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ, ಧಾರವಾಡದಿಂದ ಕೇವಲ ೧೨ ಕಿ.ಮೀ. ಹಳಿಯಾಳ ರಸ್ತೆಯ ಪಕ್ಕದಲ್ಲಿರುವ ಹಳ್ಳಿಗೇರಿಯಲ್ಲಿ ಕಾಡು ಪ್ರಾಣಿ-ಪಕ್ಷಿಗಳಿಗೆ ಮೀಸಲಿಟ್ಟು ಪುಟ್ಟ ನೀರಿನ ಗುಂಡಿ ನಿರ್ಮಿಸಿದ್ದಾರೆ.

‘ವನ್ಯಜೀವಿಗಳ ನೀರಿನ ದಾಹ ತಣಿಸಲು ನಮ್ಮ ಕೈಯಿಂದಾದ ಪುಟ್ಟ ಕೆಲಸ’ ಎನ್ನುತ್ತಾರೆ ಪಿ.ವಿ.ಹಿರೇಮಠ.

ಇಬ್ಬರು ಪರಿಸರ ಸ್ವಯಂ ಸೇವಕರು

ಒಂದು ದಿನದ ಶ್ರಮದಾನದ ಮೂಲಕ ‘೧೦ ಬೈ ೧೦’ ಅಳತೆಯ ಗುಂಡಿ ತೋಡಿ, ವನ್ಯ ಪ್ರಾಣಿ-ಪಕ್ಷಿಗಳು ಇಳಿಯಲು ಮೆಟ್ಟಿಲು ರೂಪಿಸಿ, ಮಧ್ಯೆ ಟ್ಯಾಂಕರ್ ನೀರು ಇಂಗಿ ಹೋಗದಂತೆ ಟಾರ್ಪಾಲಿನ್ ಹೊದಿಸಿ, ಅಂದಾಜು ಸಾವಿರ ರೂಪಾಯಿ ಖರ್ಚಿಸಿ, ದಾಹ ಇಂಗಿಸುವ ಕೆಲಸ ಮಾಡುತ್ತಿದ್ದಾರೆ. ರೋಟೆರಿಯನ್ ಚೆನ್ನಬಸವಸ್ವಾಮಿ ಹಿರೇಮಠ ಹಾಗೂ ಎನ್‌ಆರ್‌ಸಿ ಸುಪರ್‌ವೈಸರ್ ಆರೀಫ್, ಎನ್‌ಆರ್‌ಸಿಯ ಪ್ರಕಾಶ್ ಗೌಡರ ಕೈಸೇರಿಸಿ, ಸಣ್ಣ ಕೆಲಸವಲ್ಲ! ಎಂದು ಸಾಬೀತು ಪಡಿಸಿದ್ದಾರೆ.

NRC PHOTO 2ನಿತ್ಯ ರಾತ್ರಿ ಚುಕ್ಕೆ ಜಿಂಕೆ, ಕರಡಿ, ನರಿ, ತೋಳ, ಕಾಡು ಮೊಲ, ಕೊಂಡು ಕುರಿ, ನವಿಲು, ಕೆಂಭೂತ ಸೇರಿದಂತೆ, ಚಿರತೆ ಸಹ ಈ ಗುಂಡಿಗೆ ಬಂದು ದಾಹ ತೀರಿಸಿಕೊಂಡು ತೆರಳುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನೇಚರ್ ರಿಸರ್ಚ್ ಸೆಂಟರ್‌ನ ಇಕೋ ವಿಲೇಜ್‌ನಲ್ಲಿ ನೀರಿನ ಪೈಪ್ ತುಂಡಾಗಿದ್ದು, ನವಿಲು ಮತ್ತು ಕರಡಿ ಕೆಲವೊಮ್ಮೆ ಇಲ್ಲಿಗೂ ಬಂದು ಒಸರುವ ನೀರು ಹೀರಿ, ದಾಹ ತಣಿಸಿಕೊಂಡಿದ್ದನ್ನು ‘ನಮ್ಮ ಗೌಡ್ರು’ ಕಣ್ತುಂಬಿಕೊಂಡಿದ್ದಾರೆ.

ವನ್ಯ ಜೀವಿಗಳಿಗಾಗಿಯೇ ಮೀಸಲಿಟ್ಟು ನಿರ್ಮಿಸಿದ ಈ ಗುಂಡಿ, ಈ ಮೊದಲು ಅವುಗಳ ನೈಸರ್ಗಿಕ ಕುಡಿಯುವ ನೀರಿನ ಕೆರೆಯಾಗಿತ್ತು. ಮೂರ್ನಾಲ್ಕು ವರ್ಷಗಳ ಮಳೆ ಮರೀಚಿಕೆ ಬರಗಾಲ ಕೆರೆಯ ನೀರನ್ನು ಇಂಗಿಸಿಬಿಟ್ಟಿದೆ.

“ಅವುಗಳ ಚಲನವಲನದ ‘ಕಾರಿಡಾರ್’ ಮಧ್ಯೆ, ಈ ಗುಂಡಿ ನಿರ್ಮಿಸಿರುವುದು, ನೀರ್ಗುಂಡಿಯ ‘ಅಡ್ರೆಸ್’ ಹುಡುಕುವ ಪರಿಪಾಟಲು ತಪ್ಪಿಸಿದಂತಾಗಿದೆ” ಎಂಬುದು, ನೇಚರ್ ರಿಸರ್ಚ್ ಸೆಂಟರ್‌ನ ಪ್ರಕಾಶ ಗೌಡರ ಅನಿಸಿಕೆ.

ಸರ್ಕಾರಿ ಸ್ವಾಮಿತ್ವದ ಅರಣ್ಯ ಇಲಾಖೆ

ತನ್ನ ಕರ್ತವ್ಯದ ಭಾಗವಾಗಿ, ಧಾರವಾಡ ಜಿಲ್ಲೆಯಾದ್ಯಂತ ಗಮನಾರ್ಹ ಕೆಲಸ ಮಾಡಿ, ಅರಣ್ಯದಲ್ಲಿ, ಕಾಡು ಮತ್ತು ಕೃಷಿ ಭೂಮಿ ಸಂಧಿಸುವ ಸ್ಥಳದಲ್ಲಿ, ಕೆರೆ ಅಂಗಳಗಳಲ್ಲಿ, ವನ್ಯ ಜೀವಿಗಳ ಚಲನವಲನ ಹೆಚ್ಚಿರುವ ಕಾಡಂಚಿನಲ್ಲಿ ನೀರಿನ ಆಸರೆ ಒದಗಿಸಿದೆ. ಆದರೆ, ಸರ್ಕಾರದೊಂದಿಗೆ ಜನ ಸಮುದಾಯದ, ಖಾಸಗಿಯವರ ಸಹಭಾಗಿತ್ವ ಲಭಿಸಿದಲ್ಲಿ, ಉದ್ದೇಶ ಸಾಧನೆ ಕಷ್ಟವೇನಲ್ಲ!

ನಾಲ್ಕು ಬಗೆಯ ನೀರಿನ ಗುಂಡಿ

ಧಾರವಾಡ ವಲಯ ಅರಣ್ಯಾಧಿಕಾರಿ ಪಿ.ಕೆ. ವಿಜಯ್‌ಕುಮಾರ ಹೇಳುವಂತೆ, “ಒಟ್ಟು ನಾಲ್ಕು ಬಗೆಯ ನೀರಿನ ಗುಂಡಿಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಹಲವೆಡೆ ಸ್ಥಳೀಯರ ಸಹಭಾಗಿತ್ವ ಕೂಡ ಪಡೆಯಲಾಗಿದೆ. ಯಾವ ಬಗೆಯಲ್ಲೂ ನೀರಿನ ಮೂಲಗಳಿಲ್ಲದ ಹಾಗೂ ಕಾಡು ಪ್ರಾಣಿಗಳು ಹೆಚ್ಚಿರುವ ಪ್ರದೇಶಕ್ಕೆ ಪ್ರಥಮ ಆದ್ಯತೆ. ಈಗಾಗಲೇ ಅಲ್ಲಲ್ಲಿ ಕೆರೆಗಳಿದ್ದು, ಒಣಗಿರುವ ಕಾರಣ ಅಲ್ಲಿ ಇಂಥ ಗುಂಡಿ ಆದ್ಯತೆಯ ಮೇರೆಗೆ ನಿರ್ಮಿಸಲಾಗಿದೆ. ಅರಣ್ಯ ಹಾಗೂ ಕೃಷಿ ಭೂಮಿ ಸಂಧಿಸುವ ಅಂಚುಗಳಲ್ಲಿ ನೀರಿನ ಆಸರೆ ಮೂರನೇ ಹಂತದಲ್ಲಿ ಆಯ್ದುಕೊಳ್ಳಲಾಗಿದೆ. ರೈತರ ಪಂಪ್‌ಸೆಟ್‌ಗಳಿಂದ ನೀರು ಪಡೆದು ಗುಂಡಿ ತುಂಬಿಸುತ್ತಿರುವುದು ವಿಶೇಷ. ನಾಲ್ಕನೇ ಮಾದರಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ತೊಟ್ಟಿಗಳು ತುಂಬಿ ಹರಿದು ಪೋಲಾಗುವ ನೀರನ್ನು ಸಂಗ್ರಹಿಸಿ, ಇಂತಹ ಗುಂಡಿಗಳಿಗೆ ಪೂರೈಸಲಾಗುತ್ತಿದೆ.

ಗಳಗಿ ಹುಲಕೊಪ್ಪ, ಬಣದೂರುಗಳಲ್ಲಿ ನಾಲ್ಕನೇ ಪ್ರಯೋಗ ಯಶಸ್ವಿಯಾಗಿದೆ. ಹಗಲಿನಲ್ಲಿ ಗೌಳಿಗರ ದನಗಳು ಮೇಯಲು ಬಂದು ನೀರಿನ ಆಸರೆಗಳಲ್ಲಿ ನೀರು ಕುಡಿದರೆ, ರಾತ್ರಿಯ ವೇಳೆ ಕರಡಿ, ಚಿರತೆಗಳು ನೀರು ಕುಡಿದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರಕಿದೆ.

ಅರಣ್ಯ ಇಲಾಖೆಯ ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ಮೋಟಾರ್ ಬಳಸಿ ಗುಂಡಿಗಳಿಗೆ ನೀರು ತುಂಬಿಸಲಾಗುತ್ತಿದೆ. ಈಗಾಗಲೇ ನಿರ್ಮಿಸಿರುವ ೩೦ಕ್ಕೂ ಹೆಚ್ಚು ಗುಂಡಿಗಳಲ್ಲಿ ೧೩ ನೀರಿನಾಸರೆಗಳ ನಿರ್ಮಾಣದ ವೆಚ್ಚವನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಮರೋಪಾದಿಯಲ್ಲಿ ಇಲಾಖೆಯ ಸಿಬ್ಬಂದಿ ಮಾನವೀಯತೆಯ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಅರಣ್ಯ ಇಲಾಖೆಗೂ ಬದ್ಧತೆ ಇದೆ, ಕಾಳಜಿ ಇದೆ.. ಎಲ್ಲಕ್ಕೂ ಮಿಗಿಲಾಗಿ ಮಾನವೀಯತೆ ಇದೆ. ನೇಚರ್ ರಿಸರ್ಚ್ ಸೆಂಟರ್‌ನಂತಹ ಸಂಸ್ಥೆಗಳ ಎಲ್ಲೆ ಮೀರಿದ ಸಹಕಾರವಿದೆ. ಕದಡಿದ ನೀರಿನಲ್ಲೂ ತಿಳಿ ನೀರು ಚಿಮ್ಮಿಸುವ ಆಶಾಭಾವ ಸಮಾಧಾನತಂದಿದೆ.

ಚಿತ್ರ-ಲೇಖನ: ಹರ್ಷವರ್ಧನ ವಿ.ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*