ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಾಲಕ್ಕಿ ಒಕ್ಕಲಗಿತ್ತಿಯರ ಹೊಂಡದ ನೀರಿನ ಪಾಠ

ಮಳೆಗಾಲದ ನಂತರ ಗೋಕರ್ಣದ ಸುತ್ತಲಿನ ಹಳ್ಳಿಗಳಿಗೆ ಹೋದರೆ, ಹಾಲಕ್ಕಿ ಮಹಿಳೆಯರು ಬಿಂದಿಗೆಯಲ್ಲಿ ತರಕಾರಿ ಗಿಡಗಳಿಗೆ ನೀರು ಹಾಕುವ ದೃಶ್ಯ ಸಾಮಾನ್ಯ.  ಫಸಲಿನ ಭಾರಕ್ಕೆ ಜಗ್ಗಿದ ಗಿಡಬಳ್ಳಿಗಳು ಹಾಲಕ್ಕಿ ಒಕ್ಕಲಗಿತ್ತಿಯರ ತರಕಾರಿ ಕೃಷಿ ಜಾಣ್ಮೆಯನ್ನು ಹೇಳುತ್ತವೆ. 

gokarna107ಗೋಕರ್ಣದ ಸುತ್ತಲಿನ ಹಳ್ಳಿಬೀದಿಗಳಲ್ಲಿ ಸುತ್ತಾಡಿದರೆ, ಹಾಲಕ್ಕಿ ಒಕ್ಕಲಗಿತ್ತಿಯರು ಗಿಡಗಳಿಗೆ ಬಿಂದಿಗೆಯಿಂದ ನೀರು ಹಾಕುತ್ತಿರುವ, ತರಕಾರಿ ಕೊಯ್ಲು ಮಾಡುತ್ತಿರುವ ದೃಶ್ಯಗಳೇ ಕಾಣುತ್ತವೆ.  ರುದ್ರಪಾದ, ಬ್ಯಾಲಹಿತ್ಲು, ಬಾವಿಕೊಡ್ಲು, ಬೈಲಕೇರಿ, ಬಿಜ್ಜೂರು, ಬಂಕಿಕೊಡ್ಲು, ಕೊಳ್ಳ, ತಾರಾಮಕ್ಕಿ, ಬಂಡಿಕೇರಿ, ತಲಗೇರಿ, ಕಡಮೆ, ಬಿದರಕೇರಿ, ನಾಡಮಸ್ಕೇರಿ, ಹಾರುಮಸ್ಕೇರಿ, ಹನೇಹಳ್ಳಿ, ಹೊಸ್ಕೇರಿ ಮುಂತಾದ ಹಳ್ಳಿಗಳಲ್ಲಿ ಸಾವಿರಾರು ಎಕರೆಯಲ್ಲಿ ತರಕಾರಿ ಕೃಷಿಯದ್ದೇ ಕಾರುಬಾರು.

ಇಲ್ಲಿನ ಹಳ್ಳಿಗಳ ಸಾವಿರಾರು ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಭತ್ತದ ಗದ್ದೆಗಳು ಮಳೆಗಾಲ ಕಳೆಯುತ್ತಿದ್ದಂತೆ ತರಕಾರಿ ತೋಟಗಳಾಗಿ ಬದಲಾಗುತ್ತವೆ.  ಡಿಸೆಂಬರ್ ಕೊನೆಯಿಂದ ಬೇಸಿಗೆ ತರಕಾರಿ ಕೃಷಿ ಆರಂಭ.  ತರಕಾರಿ ಬೆಳೆಯಲು ಇವರು ಮಾಡಿಕೊಳ್ಳುವ ನೀರಾವರಿ ವ್ಯವಸ್ಥೆ ವಿಶಿಷ್ಟವಾದದ್ದು.  ಸಣ್ಣ ಹೊಂಡದ ನೀರಿನಾಸರೆಯಲ್ಲಿ ವೈವಿಧ್ಯಮಯ ತರಕಾರಿ ಬೆಳೆಯುತ್ತಾರೆ.  ಹೊಂಡದಿಂದ ಬಿಂದಿಗೆಯಲ್ಲಿ ನೀರು ತಂದು ಹಾಕುವುದರ ಜೊತೆಗೆ, ಏತ ನೀರಾವರಿ ವ್ಯವಸ್ಥೆ ಮಾಡಿಕೊಂಡವರೂ ಇದ್ದಾರೆ.

ಕುಟಾರಿಯಿಂದ (ಎಲಗುದ್ದಲಿ) ಮರಳುಮಿಶ್ರಿತ ಭೂಮಿಯನ್ನು ಅಗೆದು ಸಣ್ಣ ಹೊಂಡ ತೆಗೆಯುತ್ತಾರೆ. ಈ ಕೆಲಸಕ್ಕೆ ಹಾಲಕ್ಕಿ ಮಹಿಳೆಗೆ ಒಂದೇ ದಿನ ಸಾಕು!  ಸಮುದ್ರಕ್ಕೆ ಹತ್ತಿರದಲ್ಲಿರುವುದರಿಂದ ಐದಾರು ಅಡಿಗೇ ನೀರು ಸಿಗುತ್ತದೆ. ತರಕಾರಿ ಮುಗಿಯುತ್ತಿದ್ದಂತೆ ಹೊಂಡವನ್ನು ಮುಚ್ಚಿ ಮಳೆಗಾಲದ ಭತ್ತ ಬೆಳೆಯುವ ಸಿದ್ಧತೆಗೆ ತೊಡಗುತ್ತಾರೆ.  “ತರಕಾರಿ ಬೆಳೆಯುವುದಕ್ಕೆ ಪ್ರತಿ ವರ್ಷ ಹೊಂಡ ತೆಗೆಯೋದೆ” ಎನ್ನುತ್ತಾರೆ ದುರ್ಗಿ.

gokarna187ಹೊಂಡವನ್ನು ಕೇಂದ್ರಬಿಂದುವನ್ನಾಗಿಸಿ ಮಾಡುವ ಇವರ ತರಕಾರಿ ತೋಟದ ವಿನ್ಯಾಸವೇ ಅದ್ಭುತ!  ಬೆಳಗಿನಜಾವ ಮೂರಕ್ಕೇ ನೀರುಣಿಸುವ ಕಾಯಕ ಆರಂಭ.  ನಂತರ ತರಕಾರಿ ಬುಟ್ಟಿ ಹೊತ್ತು ಗೋಕರ್ಣದತ್ತ ಹೆಜ್ಜೆ ಹಾಕುತ್ತಾರೆ.  ಹಿಂತಿರುಗಿ ಮತ್ತೆ ನೀರು ಹಾಕುವ ಕೆಲಸ.  ಎರಡು ಬಿಂದಿಗೆಗಳಲ್ಲಿ ನೀರು ತಂದು ಸುರಿಯುತ್ತಾರೆ.  ಮರಳಿನಂಶ ಹೆಚ್ಚಿರುವುದರಿಂದ, ಪ್ರತಿದಿನ ೩೦೦ ಬಿಂದಿಗೆಯಾದರೂ ನೀರು ಹಾಕುವುದು ಅನಿವಾರ್ಯ.

ಹೊಂಡದ ಪಕ್ಕದಲ್ಲಿ ಮನೆ ಬಳಕೆಗೊಂದಿಷ್ಟು ಗಂಜಿ ರಾಗಿ.  ಹೊಂಡದ ಸುತ್ತಲಿನ ಚಪ್ಪರದಲ್ಲಿ ಪಡುವಲ, ಸೋರೆ.  ನೀರು ಆವಿಯಾಗುವುದನ್ನು ತಡೆಯುವುದರ ಜೊತೆಗೆ ಕನಿಷ್ಠ ಜಾಗದಲ್ಲಿ ಹೆಚ್ಚು ತರಕಾರಿ ಬೆಳೆಯುವ ತಂತ್ರ ಇಲ್ಲಿದೆ.  ಸ್ವಲ್ಪ ಹೆಚ್ಚು ನೀರು ಕೇಳುವ ಬದನೆ, ಈರುಳ್ಳಿ, ಕೆಂಪು ಮತ್ತು ಬಿಳಿ ಹರಿವೆಗೆ ಹೊಂಡಕ್ಕೆ ಹತ್ತಿರದ ಜಾಗ.  ಕಡಿಮೆ ನೀರಿನಲ್ಲಿ ಬೆಳೆಯುವ ತೊಂಡೆ ಚಪ್ಪರ ಹೊಂಡಕ್ಕಿಂತ ಸ್ವಲ್ಪ ದೂರದಲ್ಲಿ. ಬೇಲಿ ಮತ್ತು ಬೇಲಿಯ ಹತ್ತಿರದ ಚಪ್ಪರಗಳಲ್ಲಿ ತೂಗಾಡುವ ಹೀರೆ, ಹಾಗಲ, ಮೀಟರ್ ಅಲಸಂದೆ ಇತ್ಯಾದಿ.  ತರಗೆಲೆ, ಕೊಟ್ಟಿಗೆ ಗೊಬ್ಬರ ಬಳಸಿ ಇಪ್ಪತ್ತು ಗುಂಟೆ ಜಾಗದಲ್ಲಿ ಇಪ್ಪತ್ತಕ್ಕಿಂತ ಅಧಿಕ ತರಕಾರಿ ಬೆಳೆಯುತ್ತಾರೆ.  ಎಲ್ಲವೂ ಉತ್ಕೃಷ್ಟ ದೇಸೀ ತಳಿಗಳೇ!

ಸರಸರನೆ ಹೊಂಡಕ್ಕಿಳಿದು, ಎರಡೂ ಬಿಂದಿಗೆಗಳಲ್ಲಿ ನೀರು ತಂದು ಹಾಕುವುದೇ ಹಾಲಕ್ಕಿ ಮಹಿಳೆಯರಿಗೆ ಒಂದು ಸಂಭ್ರಮ.  ಬೆರಳುಗಳನ್ನು ಅಡ್ಡ ಹಿಡಿದು ನಾಜೂಕಾಗಿ ನೀರು ಸುರಿಯುತ್ತಾ ಮಣ್ಣು ಕೊಚ್ಚಿ ಹೋಗದಂತೆ ಎಚ್ಚರವಹಿಸುತ್ತಾರೆ.  ಬೆಳಗಿನ ಜಾವ ಮೂರಕ್ಕೇ ನೀರುಣಿಸುವ ಕಾಯಕ ಆರಂಭ.  ಮರಳಿನ ಅಂಶ ಹೆಚ್ಚಿರುವುದರಿಂದ ಒಬ್ಬರು ಪ್ರತಿದಿನ ಮುನ್ನೂರು ಬಿಂದಿಗೆಯಾದರೂ ನೀರು ಹಾಕುವುದು ಅನಿವಾರ್ಯ.  ಮಣ್ಣಿನ ಬಿಂದಿಗೆಯ ಬಳಕೆ ಹೆಚ್ಚು.  ಪ್ಲಾಸ್ಟಿಕ್ ಕೊಡ ಬಿಸಿಲಿಗೆ ಸೀಳುತ್ತದೆ ಎನ್ನುವುದರ ಜೊತೆಗೆ ಮಣ್ಣಿನ ಬಿಂದಿಗೆಯಲ್ಲಿ ನೀರುಣಿಸಿದರೆ, ತರಕಾರಿ ಬೆಳೆ ಚೆನ್ನಾಗಿ ಬರುತ್ತದೆಂಬ ನಂಬಿಕೆಯೂ ಕಾರಣವಾಗಿದೆ.

ಬಹುತೇಕರು ಹೊಂಡದ ನೀರನ್ನು ಕೈಯಿಂದ ತಂದು ಹಾಕಿಯೇ ತರಕಾರಿ ಕೃಷಿ ಮಾಡುತ್ತಾರೆ. ಕೆಲವರು ಮಾತ್ರ ಏತ ಬಳಸುತ್ತಾರೆ, ಏತದಿಂದ ನೀರು ಹಾಯಿಸುವಾಗ ಕಾಲುವೆಯ ಮರಳುಮಿಶ್ರಿತ ಮಣ್ಣು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತದೆ.  ಇದನ್ನು ತಡೆಯಲು ಕಾಲುವೆಯ ಎರಡೂ ಬದಿಗಳಲ್ಲಿ ಭತ್ತ ನಾಟಿಮಾಡುತ್ತಾರೆ.  ಭತ್ತದ ಬೇರುಗಳು ಮಣ್ಣು ಕೊಚ್ಚಿ ಹೋಗುವುದನ್ನು ತಡೆಯುತ್ತವೆ.  ಜೊತೆಗೆ ಅಲ್ಪಸ್ವಲ್ಪ ಭತ್ತವೂ ಸಿಗುತ್ತದೆ.

ಬೆಲ್ಲಗೆಂಡೆಯನ್ನು (ಗೆಣಸು) ಕೆಲವರು ಏಕ ಬೆಳೆಯಾಗಿ ಬೆಳೆಯುತ್ತಾರೆ, ಇದಕ್ಕೆ ನೀರು ಕೊಡುವುದಿಲ್ಲ.  ನಾಟಿಯಿಂದ ಹಿಡಿದು ಕಟಾವಿನತನಕ ಮಣ್ಣಿನಲ್ಲಿರುವ ತೇವಾಂಶದಲ್ಲೇ ಬೆಳೆಯುತ್ತದೆ.  ಕೆಲವೇ ಮಂದಿ ಇದಕ್ಕೆ ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. “ನೀರು ಇದ್ದವರು ದಿನಾ ಕೊಡ್ತಾರೆ, ಆ ಬೆಲ್ಲಗೆಂಡೆ ದಪ್ಪ ಬರ‍್ತದೆ.  ನೀರು ಇಲ್ಲದೇ ಬೆಳೆಯೋ ಬೆಲ್ಲಗೆಂಡೆ ಸ್ವಲ್ಪ ಬಾರೀಕ್ (ಸಣ್ಣ) ಇರ‍್ತದೆ” ಎನ್ನುತ್ತಾರೆ ಗೆಣಸನ್ನು ಏಕಬೆಳೆಯಾಗಿ ಬೆಳೆಯುವ ಗಂಗೆ. ಆದರೆ ನೀರಿಲ್ಲದೆ ಬೆಳೆಯಲು ನಯಾಪೈಸೆಯೂ ಖರ್ಚಾಗುವುದಿಲ್ಲವಾದ್ದರಿಂದ ಬಂದಿದ್ದೆಲ್ಲಾ ಲಾಭವೇ!

ಹಾಲಕ್ಕಿ ಒಕ್ಕಲಗಿತ್ತಿಯರು ಗುಂಡಿಯ ನೀರನ್ನೇ ಬಳಸಿ, ಅದೂ ಕೈಯಲ್ಲಿ ನೀರು ಹಾಕಿ ತರಕಾರಿ ಬೆಳೆಯುವ ಜಾಣ್ಮೆ ನಮ್ಮೆಲ್ಲರಿಗೆ ದೊಡ್ಡ ಪಾಠ. ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ಇವರ ಸಂತತಿ ಬೆಳೆಯಲಿ.

 ಚಿತ್ರ-ಲೇಖನ: ಕೆ.ರೇಖಾ ಸಂಪತ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*