ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಿರೇಕಟ್ಟಿನ ಕೆರೆಯ ಕಥೆ

ಅಂಕೋಲಾ:  ಸುಮಾರು ನೂರು ವರ್ಷಗಳ ಇತಿಹಾಸವುಳ್ಳ, ಕಾಲಗರ್ಭದಲ್ಲಿ ಹೂತು ಹೋಗಿದ್ದ ಕೆರೆಯೊಂದಕ್ಕೆ ಈಗ ಮತ್ತೆ ಜೀವಸೆಲೆ ತುಂಬುವ ಕಾರ್ಯ ಭರದಿಂದ ನಡೆದಿದೆ.

ಸುತ್ತಮುತ್ತಲ ಜನರಲ್ಲಿ ಸಮೃದ್ಧ ನೀರು ಕಾಣುವ ಖುಷಿಯಾದರೆ, ಜಾನುವಾರುಗಳಿಗೆ ಹೂಳೆತ್ತುವಾಗ ಪುಟಿಯುತ್ತಿರುವ ನೀರಿನಲ್ಲಿ ಮುಳುಗೇಳುವ ಸಂಭ್ರಮ!

ಹೌದು, ಇದು ಬೇಲೇಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಕಟ್ಟಿನ ಕೆರೆಯ ಕಥೆ.

ಹಿಂದಕ್ಕೆ ಹೋಗಬೇಕು

ಈ ಕೆರೆಯ ಬಗ್ಗೆ ತಿಳಿಯಬೇಕಾದರೆ ನೂರು ವರ್ಷಗಳಷ್ಟು ಹಿಂದಕ್ಕೆ ಹೋಗಬೇಕು.  ಬೇಲೇಕೇರಿಯ ಈಶ್ವರ ದೇವಸ್ಥಾನಕ್ಕೆ ಹೊಂದಿಕೊಂಡು ಕಡಿದಾದ ದಾರಿಯೊಂದಿದೆ.  ಈ ದಾರಿಯಲ್ಲಿ ಇಳಿಜಾರಿನಲ್ಲಿ ಹೆಜ್ಜೆ ಹಾಕಹತ್ತಿದರೆ ಅದು ಹೋಗಿ ತಲುಪುವುದು ಹಿರೇಕಟ್ಟಿನ ಕೆರೆಗೆ.

31ank1ಒಂದು ಕಾಲಕ್ಕೆ , ಅಂದರೆ ನೂರು ವರ್ಷಗಳಷ್ಟು ಹಿಂದಕ್ಕೆ ಇದು ಸಮೃದ್ಧ ಕೆರೆ. ವರ್ಷದ ೧೨ ತಿಂಗಳೂ ಈ ಕೆರೆಯಲ್ಲಿ ಜಲರಾಶಿ. ಸುತ್ತಮುತ್ತಲ ಬಾವಿಗಳಲ್ಲಿ ಆಗ ನೀರಿನ ಬರವಿರಲಿಲ್ಲ.  ಜಾನುವಾರುಗಳಿಗಂತೂ  ಈ ಕೆರೆ ವಿಶ್ರಾಂತಿ ತಾಣವಾಗಿತ್ತು. ಕೆರೆಯಲ್ಲಿ ಮುಳುಗೇಳುವುದು, ದಾಹ ಆರಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಈ ಕೆರೆ ಸುತ್ತಲ ಸುಮಾರು ೫೦೦ ಎಕರೆಯಷ್ಟು ಪ್ರದೇಶದಲ್ಲಿ ಭತ್ತ, ಕಲ್ಲಂಗಡಿ, ಶೇಂಗಾ ಬೆಳೆ ತೆಗೆಯಲು ಆಗ ನೀರಿನ ಕೊರತೆಯಿರಲಿಲ್ಲ.  ಈ ಕೆರೆಯ ನೀರಿನ ಜೊತೆಗೆ ಅಂತರ್ಜಲ ಮಟ್ಟವೂ ಇಳಿಯದ ಕಾರಣ ಸುತ್ತಲ ಜಲಮೂಲಗಳು ಸಮೃದ್ಧವಾಗಿದ್ದವು.

ಮುಚ್ಚುತ್ತಾ ಬಂತು

ಆದರೆ ಬರಬರುತ್ತಾ ಈ ಕೆರೆ ಮುಚ್ಚುತ್ತಾ ಬಂದು, ಕಾಲಗರ್ಭದಲ್ಲಿ ಸೇರಿ ಹೋಗಿತ್ತು.  ನೋಡಿದರೆ ಸಮತಟ್ಟಾದ ಪ್ರದೇಶದಂತೆ ಭಾಸವಾಗಿತ್ತು. ಇಲ್ಲೊಂದು ಕೆರೆಯಿತ್ತು ಅನ್ನೋದೇ ಮರೆತು ಹೋಗುವಂತಾಯಿತು. ಎತ್ತರದ ಪ್ರದೇಶದಿಂದ ಬಂದ ಮಣ್ಣು ತುಂಬಿ, ತುಂಬಿ ಕೆರೆ ಮಾಯವಾಯಿತು.

ಈ ಕೆರೆ ಹೂಳೆತ್ತುವಂತೆ ಜನರು ಸತತ ಮನವಿ ಮಾಡುತ್ತಿದ್ದರೂ ಅದಕ್ಕೆ ಬೆಲೆ ಬರಲಿಲ್ಲ.

ಬಂತು ಮುಹೂರ್ತ

ಆದರೆ ಈ ಕೆರೆಯ ಕಾಯಕಲ್ಪಕ್ಕೆ ಈಗ ಮುಹೂರ್ತ ಬಂದಿದೆ. ಸರ್ಕಾರದ ಸಂಜೀವಿನಿ ಯೋಜನೆಯಡಿ ಈ ಕೆರೆ ಹೂಳೆತ್ತಲು ೨ ಲಕ್ಷ ರೂ. ಮಂಜೂರಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆ ಪ್ರದೇಶ ನೋಡಿ, ಖುಷಿ ಪಟ್ಟಿದ್ದಾರೆ. ಕೆರೆಗೆ ಪೂರ್ತಿ ಕಾಯಕಲ್ಪ ನೀಡುವ ಭರವಸೆ ಸಿಕ್ಕಿದೆ.

ಈ ಭಾಗದ ತಾಲ್ಲೂಕು ಪಂಚಾಯತ್ ಸದಸ್ಯ  ಸಂಜೀವ ನಾಯಕ ಈ ಕೆರೆಗೆ ಮರಳಿ ಜೀವ ತುಂಬಲು ತೀವ್ರ ಆಸಕ್ತಿ ತಳೆದಿದ್ದಾರೆ. ಗ್ರಾ.ಪಂ ಸಹಕಾರದ ಭರವಸೆಯೂ ಇದೆ.

ಹೀಗಾಗಿ ಈಗ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಆರಂಭವಾಗಿದೆ.  ಜೆಸಿಬಿ ಯಂತ್ರಗಳು ಸತತ ಕಾರ್ಯ ನಿರ್ವಹಿಸಿ ಮಣ್ಣು ಎತ್ತುತ್ತಿದ್ದು, ಕೆರೆಯಲ್ಲಿ ನೀರು ಗೋಚರವಾಗತೊಡಗಿದೆ. ಸ್ಥಳೀಯ ಜನರಲ್ಲಿ ಇದು ಖುಷಿ ತಂದರೆ, ಜಾನುವಾರುಗಳು ನೀರು ಕಂಡು ಸಂಭ್ರಮಿಸತೊಡಗಿವೆ. ನೀರಲ್ಲಿ ಮುಳುಗೇಳುತ್ತಿವೆ.

ಹಣ ಸಾಲದು

ಈ ಕೆರೆ ಹೂಳೆತ್ತುವ ಕಾರ್ಯದಲ್ಲಿ ಉತ್ಸಾಹದಿಂದ ಕೈ ಜೋಡಿಸಿರುವ ಸ್ಥಳೀಯ ಕೃಷಿಕ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಗಾಂವಕರ್ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಕೆರೆ ಪೂರ್ಣ ಪ್ರಮಾಣದಲ್ಲಿ ಹೂಳೆತ್ತಿ ಗತವೈಭವಕ್ಕೆ ಮರಳಿದರೆ, ಆರೇಳು ಸಾವಿರ ಜನಕ್ಕೆ ಲಾಭವಾಗಲಿದೆ. ಅಂತರ್ಜಲ ಮಟ್ಟ ಏರಿ ಬರುವ ವರ್ಷ ಈ ಭಾಗದಲ್ಲಿ ನೀರಿನ ಬರ ತಗ್ಗಲಿದೆ. ಜೊತೆಗೆ ರೈತರು ಸಮೃದ್ಧ ಬೆಳೆ ತೆಗೆಯಬಹುದು ಎನ್ನುತ್ತಾರೆ. ಇದಕ್ಕೆ ೨ ಲಕ್ಷ  ರೂ. ಎಲ್ಲೂ ಸಾಲದು. ಜಿಲ್ಲಾಡಳಿತ ಇನ್ನಷ್ಟು ಅನುದಾನ ಒದಗಿಸಬೇಕು ಎನ್ನುವುದು ಸ್ಥಳೀಯ ರೈತರ ಬೇಡಿಕೆ.

 ||||||||||||||||||||||||||

ಇನ್ನಷ್ಟು ಅನುದಾನ ನೀಡಲಿ

ಈ ಕೆರೆ ಪೂರ್ಣ ಸಿದ್ಧವಾಗಬೇಕಾದರೆ ೨ ಲಕ್ಷ ರೂ. ಏನೂ ಸಾಲದು. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಗಟ್ಟಿ ಮನಸ್ಸು ಮಾಡಿ ಇನ್ನಷ್ಟು ಅನುದಾನ ನೀಡಲಿ.  ಇತಿಹಾಸದ ಕೆರೆ ಮತ್ತೆ ನಳನಳಿಸಲಿ

-     ನಿತ್ಯಾನಂದ ಗಾಂವಕರ್, ಕೃಷಿಕ

 ||||||||||||||||||||||||||||||

ಜನರ ಭಾಗ್ಯ ಅನ್ನಬೇಕು

ಮೊದಲ ಬಾರಿ ಅಂಕೋಲಾ ತಾಲೂಕು ವಿಪರೀತ ನೀರಿನ ಬವಣೆಯನ್ನು ಎದುರಿಸಿದೆ. ಬೇಲೇಕೇರಿಯಂತಹ ಊರಿನಲ್ಲಿ ಕೊಡ ನೀರಿಗೆ ಮೈಲುಗಟ್ಟಲೆ ಅಲೆಯುವ ದೃಶ್ಯ ಕಾಣ ಸಿಗುತ್ತಿತ್ತು. ಅಂತರ್ಜಲಮಟ್ಟ ತೀವ್ರ ಕುಸಿದ ಕಾರಣ ಬಾವಿಗಳಲ್ಲಿ ನೀರೇ ಇರಲಿಲ್ಲ. ಹೀಗಾಗಿ ಈ ಕೆರೆ ಮಳೆಗಾಲದಲ್ಲಿ ತನ್ನ ಗರ್ಭ ತುಂಬಿಕೊಂಡರೆ , ಬರುವ ವರ್ಷ ನೀರಿನ ಬವಣೆ ತಗ್ಗುವ ಆಶಯ ಜನರದ್ದು. ಅಂತರ್ಜಲ ಮಟ್ಟ ಏರಲು ಇದು ಸಹಕಾರಿ ಆಗುವುದು ನಿಶ್ಚಿತ.

ಆದರೆ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯ ಹಾಗೆ, ಕೇವಲ ೨ ಲಕ್ಷ ರೂಪಾಯಿಯಿಂದ ಏನೂ ಮಾಡಲು ಸಾಧ್ಯವಾಗದು.  ಕಾರಣ ಕೆರೆ ಹೂಳು ಪೂರ್ತಿ ಹೊರ ಬರುವಷ್ಟು ಹಣ ಬಿಡುಗಡೆ ಆದರೆ ಅದು ಜನರ ಭಾಗ್ಯ ಅನ್ನಬೇಕು !

ಚಿತ್ರ-ಲೇಖನ: ವಿಠ್ಠಲದಾಸ ಕಾಮತ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*