ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತಂತ್ರಜ್ಞಾನ ಸರಳ- ಖರ್ಚಿಲ್ಲ ಹೇರಳ- ಕರಾವಳಿಗೆ ವಿರಳ

ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಅದರಲ್ಲೂ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಕುಡಿಯುವ ಸಿಹಿ ನೀರಿಗೆ ಮಳೆಗಾಲದಲ್ಲೂ ತತ್ವಾರ ಪಡುವಂತಾಗಿದೆ. ಉಪ್ಪುನೀರಿನ್ನು ತಗ್ಗಿಸಲು DSC00391ಸಿಹಿನೀರಿನ ಒರತೆಯನ್ನು ಹೆಚ್ಚಿಸುವುದೊಂದೇ ಇಲ್ಲಿಗೆ ಸಕಾಲಿಕವಾದ ಪರಿಹಾರ. ಭೂಮಿಯಲ್ಲಿ ಮಣ್ಣಿನ ವಲಯ, ಶೀತಲ ವಲಯ ಹಾಗೂ ಟೊಳ್ಳು ವಲಯ ಎಂಬ ಮೂರು ಪದರಗಳಿರುತ್ತವೆ. ಆದರೆ ಕರಾವಳಿ ಭಾಗದಲ್ಲಿ ಟೊಳ್ಳು ವಲಯ ಇಲ್ಲದಿರುವುದರಿಂದ, ಮಳೆಯಾದರೂ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿರುತ್ತದೆ. ಜಲಮರುಪೂರಣದಂತಹ ವ್ಯವಸ್ಥೆ ಕರಾವಳಿಗರ ಸಿಹಿನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲದು.

ಈ ನಿಟ್ಟಿನಲ್ಲಿ ಬೇಸಿಗೆಯಲ್ಲಿ ನೀರಿನ ಒರತೆ ಹೆಚ್ಚಿಸಲೊಂದು ಸುಲಭ ವಿಧಾನ – ಜಲಮರುಪೂರಣ.  ಪೋಲಾಗುವ ನೀರನ್ನು ಕಟ್ಟಿಹಾಕಿ, ವ್ಯವಸ್ಥಿತವಾಗಿ ಭೂಮಿಯಲ್ಲಿ ಇಂಗಿಸಿ, ವರ್ಷಪೂರ್ತಿ ನೀರು ಪಡೆಯುವ ಸುಲಭ ಸರಳ ತಂತ್ರಜ್ಞಾನವಿದು.  ತೆರದ ಬಾವಿಗೆ ಮಳೆಕೊಯ್ಲು, ಕೊಳವೆ ಬಾವಿಗೆ ಜಲಮರುಪೂರಣ ಎಂಬ ವಿಧಾನ ಅತ್ಯಂತ ಹೆಚ್ಚು ಸೂಕ್ತವಾಗಿದೆ.

DSC00398ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪೂರಕ ವ್ಯವಸ್ಥೆಯೇ ಜಲಮರುಪೂರಣ. ದಿನಗಳೆದಂತೆ ತಗ್ಗುತ್ತಿರುವ ಅಂತರ್ಜಲ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಮಾಡಲು, ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ವ್ಯವಸ್ಥಿತವಾಗಿ ಇಂಗುಗುಂಡಿಯ ಮೂಲಕ ಇಂಗಿಸಿ ವರ್ಷಪೂರ್ತಿ ಸಮೃದ್ಧ ನೀರು ಪಡೆಯುವ ತಂತ್ರಜ್ಞಾನವಿದು.

ನೀರಿನ ಸಮಸ್ಯೆ ನೀಗಿಸಲು ಬಾವಿ, ಕೊಳವೆ ಬಾವಿಯನ್ನು ನಿರ್ಮಿಸಿದ್ದಾಯ್ತು. ಆದರೆ ಅದರಲ್ಲೂ ನೀರು ಬತ್ತುತ್ತಿದೆ! ನೀರು ಬೇಕಲ್ಲ ಇನ್ನೇನು ಮಾಡೋದು ಎಂದು ಯೋಚಿಸುತ್ತಾ ಕುಳಿತವರಿಗೊಂದು ಹೊಸ ಒರತೆ ಜಲಮರುಪೂರಣ.

ಕಡಿಮೆ ಖರ್ಚಿನಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೂಲಕ, ವರ್ಷಪೂರ್ತಿ ಹೇರಳ ನೀರು ಪಡೆಯಲು ತಂತ್ರಜ್ಞಾನವೊಂದು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆಂಬಂತೆ  ಕುಂದಾಪುರದ ಬಳಿ ಅನುಷ್ಠಾನಗೊಂಡಿದೆ. ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶೋಕ್ ಶೆಟ್ಟಿಗಾರ್ ಎಂಬುವವರು ತಮ್ಮ ಮನೆ ಅವರಣದಲ್ಲಿ 620 ಅಡಿ ಅಳ ಕೊರೆದಿರುವ ಬೋರ್‌ವೆಲ್‌ನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೊಳವೆ ಬಾವಿ ಜಲಮರುಪೂರಣ (Borewell recharging) ತಂತ್ರಜ್ಞಾನದ ಮೊರೆಹೋಗಿದ್ದರು. ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್‌ನ ಅಂತರ್ಜಲ ಮತ್ತು ಮಳೆನೀರು ಕೊಯ್ಲು ತಜ್ಞ ಎನ್. ಜೆ. ದೇವರಾಜ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಜಲಮರುಪೂರಣವನ್ನು ತಂತ್ರಾಂಶವನ್ನು ಕೈಗೆತ್ತಿಕೊಂಡಿದ್ದಾರೆ.

DSC00410ಇಂಗುಗುಂಡಿಯ ಮೂಲಕವೇ ಕೊಳವೆ ಬಾವಿಗೆ ಜಲಮರುಪೂರಣ ಮಾಡಬೇಕಿದೆ. ಇಂಗುಗುಂಡಿಯನ್ನು ರಚಿಸಲು ಕೊಳವೆ ಬಾವಿಯ ಪೈಪ್ ಸುತ್ತ ಆಳ ಮತ್ತು ಅಗಲವಾಗಿ ಹತ್ತು ಅಡಿ ಗುಂಡಿಯನ್ನು ತೋಡಬೇಕು. ಕೊಳವೆ ಬಾವಿಯ ಪೈಪ್‌ಗೆ ನಾಲ್ಕು ಫೀಟ್ ವರೆಗೆ ಚಿಕ್ಕ ಚಿಕ್ಕ ರಂದ್ರ ಕೊರೆದು ಅದರ ಸುತ್ತ ಅಕ್ವಾ ಮೆಷ್, ನೈಲಾನ್ ಮೆಷ್ ಹಾಗೂ ಸ್ಯಾಂಡ್ ಫಿಲ್ಟರ್ ಬಲೆಯನ್ನು ಕಸ ಕಡ್ಡಿ, ಮರಳು ಒಳಸೇರದಂತೆ ಭದ್ರಪಡಿಸಬೇಕು. ಎರಡನೇ ಹಂತದಲ್ಲಿ ತೋಡಿರುವ ಇಂಗುಗುಂಡಿಗೆ ಮೊದಲು ೫೦ ಪ್ರತಿಶತದಷ್ಟು ದಪ್ಪ ಶಿಲೆಗಲ್ಲನ್ನು ಕ್ರಮವಾಗಿ ಜೋಡಿಸಿ ಅದರ ಮೇಲೆ 40ಎಂ.ಎಂ ಜಲಿ, 20 ಎಂಎಂ ಜಲ್ಲಿಕಲ್ಲನ್ನು ಸಮನಾಗಿ ಹಾಕಿ ಬಳಿಕ ಒಂದು ಇಂಚು ಎತ್ತರಕ್ಕೆ ಇದ್ದಿಲು ಹಾಕಬೇಕು. ಇದ್ದಿಲಿನ ಮೇಲೆ ಐಡಿಪಿಇ ಮ್ಯಾಟ್ ಹಾಕಿ ಎರಡು ಫೀಟ್ ವರೆಗೆ ಮರಳು ಹಾಕಿದರೆ ಗುಂಡಿ ನೆಲಕ್ಕೆ ಸಮನಾಗಿ ಮುಚ್ಚಿಕೊಳ್ಳುತ್ತದೆ. ಇಂಗುಗುಂಡಿಯ ಸುತ್ತ ಒಂದು ಫೀಟ್ ಎತ್ತರಕ್ಕೆ ಪ್ಯಾರಾಫೀಟ್ ಗೋಡೆಯಲ್ಲಿ ಕಟ್ಟಿ ನೀರು ಓಳಭಾಗಕ್ಕೆ ಹರಿಯುವಷ್ಟು ಜಾಗ ಬಿಡಬೇಕು. ಇಂಗುಗುಂಡಿಯ ಸಮೀಪ ಅಥವಾ ಸ್ಥಳಾವಕಾಶ ಇರುವಲ್ಲಿ ಶುದ್ದ ನೀರು ಇಂಗುಗುಂಡಿಗೆ ಹರಿಯವಂತೆ ಮಾಡಲು ಸೋಸುಗುಂಡಿ ತೋಡಿ ಅಲ್ಲಿಂದ ನೀರು ಇಂಗುಗುಂಡಿಗೆ ಹರಿಯುವಂತೆ ಮಾಡಿದರೆ ಸೋಸಿದ ನೀರು ಇಂಗುಗುಂಡಿಯಲ್ಲಿ ಶೇಖರಣೆಗೊಳ್ಳುತ್ತದೆ. ಮಿಕ್ಕ ನೀರು ಹೊರಕ್ಕೆ ಹರಿದು ಹೋಗುತ್ತದೆ.

DSC00388ಮನೆಯವರೇ ಶ್ರಮದಾನ ಮಾಡಿ, ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಮಾಡಬಹುದಾಗಿದ್ದರಿಂದ ಖರ್ಚು ಕಡಿಮೆ. ಲಾಭ ಹೆಚ್ಚು. ಕರಾವಳಿಗರು ಕೊಳವೆ ಬಾವಿಗೆ ಪ್ರಾಮುಖ್ಯತೆ ನೀಡುವುದಕ್ಕಿಂತ, ಬಾವಿಯನ್ನು ಉಳಿಸಿಕೊಳ್ಳುವುದು ಮೇಲು. ಮಳೆ ನೀರು ಕೊಯ್ಲು ಪದ್ಧತಿಯನ್ನು ಸುಲಭವಾಗಿ ಅಳವಡಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನತ್ತಾರೆ ತಜ್ಞರು.

“ಇಂಗುಗುಂಡಿಗಳನ್ನು ತೋಡಿ ಜಲಮರುಪೂರಣ ಮಾಡುವ ವ್ಯವಸ್ಥೆ ಹೊಸತಲ್ಲದಿದ್ದರೂ ಕರಾವಳಿ ಜಿಲ್ಲೆಯಲ್ಲಿ ಇದರ ಅನುಷ್ಠಾನವಾದದ್ದು ತೀರಾ ಕಡಿಮೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಸಮರೋಪಾದಿಯಲ್ಲಿ ಜಲಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಿದೆ”

“ಈವರೆಗೆ ರಾಜ್ಯದ 20,೦೦೦ಕ್ಕೂ ಅಧಿಕ ಬೋರ್ವೆಲ್ ಗಳಿಗೆ ಮರುಪೂರಣ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ‘ಚಿತ್ರದುರ್ಗದ ಮಾದರಿ’ ಎಂದೇ ಪ್ರಸಿದ್ಧವಾಗಿರುವ ಸುಲಭ ತಂತ್ರಜ್ಞಾನದಿಂದ ಉತ್ತಮ ಫಲಿತಾಂಶ ದೊರೆತಿದ್ದು, ವರ್ಷಪೂರ್ತಿ ಕುಡಿಯುವ ನೀರು ಪಡೆಯಬಹುದಾಗಿದೆ. ಅಂತರ್ಜಲವನ್ನು ಹೆಚ್ಚಿಸಿಕೊಳ್ಳಲು ಜಲಮರುಪೂರಣ, ಮಳೆಕೊಯ್ಲು ಸರಳ ಮಾರ್ಗವಾಗಿದ್ದು, ಸಮರೋಪಾದಿಯಲ್ಲಿ ಇದರ ಅನುಷ್ಠಾನವಾಗಬೇಕಿದೆ” ಎನ್ನುತ್ತಾರೆ ಮಳೆನೀರು ಕೊಯ್ಲು ತಜ್ಞ, ಎನ್.ಜೆ. ದೇವರಾಜ್ ರೆಡ್ಡಿ.

 ಚಿತ್ರ-ಲೇಖನ: ಕೆ.ಶಶಿಧರ ಹೆಮ್ಮಣ್ಣ, ಉಡುಪಿ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*