ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅವನಿಯಲ್ಲಿ ಕೆರೆ, ಕಲ್ಯಾಣಿ ಮತ್ತು ಬಾವಿಗಳನ್ನ ಸ್ವಚ್ಛ ಗೊಳಿಸುವ ಮಾಸ್ಟ್ರು!

ಹಳೆಯ ಬಾವಿಯ ತಳಕ, – ನೀರಿನ್ಯಾಗ;

ಹಸುರ ಚಿಗರತಾವ, – ಬೇರಿನ ಮೊಳಕೆ ಒಡೆಯತಾವ;

ಭೂತ, ಬೇತಾಳ ಜೋತ ಬಾವಲಿ, – ಮ್ಯಾಲೆ ತೂಗತಾವ;

ಮರದಾಗ ಕರಗ ಕುಣಿಯತಾವ..!

-     ಡಾ. ಚಂದ್ರಶೇಖರ ಕಂಬಾರ, (ಮೂಡಲ ಮನೆ ಶೀರ್ಷಿಕೆ ಗೀತೆ)

Avani tank rejuvenation 1ಕೋಲಾರ/ ಮುಳಬಾಗಿಲು (ಅವನಿ ಹೋಬಳಿ): ಅಂತರ್ಜಲದಲ್ಲಿ ಫ್ಲೋರೈಡ್; ೧,೫೦೦ ಅಡಿ ಕೊರೆದರೂ ನೀರು ದಕ್ಕಿಸಿಕೊಳ್ಳದ ಬೋರ್‌ವೆಲ್‌ಗಳು, ಬಾಯ್ದೆರೆದು ನಿಂತ ಕೈ ಪಂಪ್‌ಗಳು, ತೆರೆದ ಬಾವಿಗಳೆಲ್ಲ ಕೊಚ್ಚೆ ಗುಂಡಿಗಳು, ಕೆರೆಗಳೆಲ್ಲ ತ್ಯಾಜ್ಯ ತುಂಬುವ ತಿಪ್ಪೆಗಳು..! ಕುಡಿಯಲು ಹನಿ ನೀರಿಗೂ ತಾತ್ವಾರ!

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕು ಅವನಿ ಹೋಬಳಿಯ ಸ್ಥೂಲ ಚಿತ್ರಣವಿದು.

Avani Tank rejuvenation 2ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊ ಉಮೇಶ ಯು.ಆರ್., ಅವನಿ ಹೋಬಳಿಗೆ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಪರಿಸ್ಥಿತಿ ಅಷ್ಟೇನೂ ಹಿತಕರವಾಗಿರಲಿಲ್ಲ. ಸ್ಥಳೀಯ ಭಾಷೆ ತೆಲುಗು ಬೇರೆ! ಅವನಿಯ ಯಾವ ಅಭಿವೃದ್ಧಿಯ ಬಗ್ಗೆಯೂ ಹೋಬಳಿಯ ಜನತೆಗೆ ಯಾವುದೇ ವಿಶೇಷ ಆಸಕ್ತಿ ಇರಲಿಲ್ಲ. ಗ್ರಾಮ ಪಂಚಾಯ್ತಿ ಸದಸ್ಯರಂತೂ ಅಷ್ಟಕ್ಕಷ್ಟೇ.. ಉಮೇಶ್ ಸ್ಥಿತಿ ‘ಮಂಗಳ ಗ್ರಹ’ಕ್ಕೆ ಬಂದು ತಲುಪಿದ ಅನುಭವ!

ಆವಂತಿಕಾ ಫೌಂಡೇಷನ್‌ನಲ್ಲಿ ಕ್ಷೇತ್ರ ಸಂಯೋಜನಾಧಿಕಾರಿಯಾಗಿ ಉಮೇಶ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಕಾರ್ಯಕ್ರಮಕ್ಕೆ ಸೇರಿ, ಅವನಿ ಹೋಬಳಿಗೆ ಬರಲು ಎರಡು ತಿಂಗಳು ತಡವಾಗಿತ್ತು. (ಮಾರ್ಚ್ ೧, ೨೦೧೫) ಆಗಲೇ ಬಾಕಿ ಫೆಲೊಗಳು ತಮ್ಮ ಕ್ಷೇತ್ರಕಾರ್ಯ ಪೂರೈಸಿಯಾಗಿತ್ತು!Avani Tank rejuvenation 3

ಉಮೇಶ, ಏನೇ ಆಗಲಿ..ಕೊನೆಗೆ ಅವನಿಯಲ್ಲಿ ನಾನೊಬ್ಬನೇ ಕಾರ್ಯಾರಂಭ ಮಾಡುತ್ತೇನೆ ಎಂದು ತೀರ್ಮಾನಿಸಿ, ಕ್ಷೇತ್ರ ಕಾರ್ಯಕ್ಕೆ ಮುಂದಾಗುತ್ತಾರೆ. ೬೩೦ ಮನೆಗಳು, ಕನಿಷ್ಟ ೩೦೦೦ ಜನಸಂಖ್ಯೆ ಇರುವ ಹೋಬಳಿ ಅವನಿಯಲ್ಲಿ ಅರ್ಧದಷ್ಟು ಜನ ಅಕ್ಷರಸ್ಥರು. ಆ ಪೈಕಿ ೨೭೦ ಮನೆಗಳಲ್ಲಿ ಶೌಚಾಲಯಗಳಿದ್ದವು. ಬಳಕೆ ಮಾತ್ರ ಮಹಿಳೆಯರಿಗೆ ಸೀಮಿತವಾಗಿ, ಬಹುತೇಕ ಪುರುಷರು ತೋಟ, ಗದ್ದೆ, ಹೊಲಗಳಲ್ಲಿಯೇ ದೇಹಬಾಧೆ ತೀರಿಸಿಕೊಂಡು ಮನೆಗೆ ಬರುವ ರೂಢಿ ಪಾಲಿಸುತ್ತಿದ್ದರು!

ಜನರೊಂದಿಗೆ ಬೆರೆಯಲು, ವಿಷಯಗಳನ್ನು ತಿಳಿಸಲು ದಾವಣಗೆರೆ ಮೂಲದ ಶಿಕ್ಷಕ ಯಳಗೊಂಡಳ್ಳಿ ದುಭಾಷಿ ಪಾತ್ರ ವಹಿಸಿ, ಉಮೇಶ ವಿಚಾರ ತೆಲಗು ಭಾಷಿಕ ಗ್ರಾಮಸ್ಥರಿಗೆ ಮತ್ತು ಗ್ರಾಮಸ್ಥರ ಅನಿಸಿಕೆ ಕನ್ನಡ ಭಾಷಿಕ ಉಮೇಶಗೆ ತಿಳಿಸುವ ಕೊಂಡಿಯಾಗಿ ತುಂಬ ಸಹಾಯ ಮಾಡುತ್ತಾರೆ. ಕೆಲಸ ಸಹ್ಯವಾಗಲು ಇಷ್ಟು ಬೇಕಿತ್ತು.

ಈ ಮಧ್ಯೆ ಉಮೇಶ ಅವರಿಗೆ ಹೋಬಳಿಯಲ್ಲಿನ ವಿಚಿತ್ರ ಬೆಳವಣಿಗೆಯೊಂದು ಗಮನ ಸೆಳೆಯುತ್ತದೆ. ಅವನಿಯ ಪಾನ್-ಬೀಡಾ ಅಂಗಡಿ ಮತ್ತು ಹೊಟೇಲ್‌ಗಳಲ್ಲಿ ದಿನವೊಂದಕ್ಕೆ ೧೦೦ ರಿಂದ ೧೫೦ ನೀರಿನ ಕ್ಯಾನ್‌ಗಳು ತಲಾ ೩೦ ರೂಪಾಯಿಗೆ ಒಂದರಂತೆ ಮಾರಾಟವಾಗುತ್ತಿರುವುದು! ಖಾಸಗಿಯವರೇ ಪ್ಯಾಕೇಜ್ಡ್ ಶುದ್ಧ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲ! ಸ್ಥಳೀಯ ರಾಜಕಾರಣದ ಬೆಂಬಲ ಬೇರೆ. ನೀರು ಕುಡಿಸುವುದು ಇಲ್ಲಿ ಪಕ್ಕಾ ವ್ಯವಹಾರದ ಭಾಗವಾಗಿತ್ತು. ಹಿರೀಕರ ಪುಣ್ಯ ಸಂಚಿತ ಪುಷ್ಕರಣಿಗಳು ಬರೀದಾಗಿದ್ದವು!

ಈ ಸಮಸ್ಯೆಯ ಆಳ ಕೆದಕಲು ಉಮೇಶ ಮುಂದಾಗುತ್ತಾರೆ. ಅವನಿಯಲ್ಲಿ ಶುದ್ಧ ಕುಡಿಯುವ ನೀರಿನ ಆರ್.ಓ. ಘಟಕವಿದ್ದರೂ, ಅದನ್ನು ಉದ್ದೇಶDSC_0023 ಪೂರ್ವಕವಾಗಿಯೇ ಬಂದ್ ಕೆಡವಿರುವುದು ಗಮನಕ್ಕೆ ಬರುತ್ತದೆ. ಕಾರಣ, ತುಂಬ ಸ್ವಾರಸ್ಯಮಯ! ಅನುಷ್ಠಾನದ ಹೊಣೆಹೊತ್ತಿದ್ದ ಖಾಸಗಿ ಏಜೆನ್ಸಿ ಮತ್ತು ಗ್ರಾಮ ಪಂಚಾಯ್ತಿ ಅಂದಿನ ಅಧ್ಯಕ್ಷರ ಮಧ್ಯೆ ಒಳ ಒಪ್ಪಂದ ಆಗದಿರುವ ಕಾರಣ! ಅಧ್ಯಕ್ಷರ ಅಪ್ಪಣೆಯ ಮೇರೆಗೆ ಅದಕ್ಕೆ ಬೀಗ ಜಡಿಯಲಾಗಿತ್ತು! ಕಮಿಷನ್ ವ್ಯವಹಾರ ಕುದುರದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮೌಲ್ಯವರ್ಧಿತ ಶೋಷಣೆ!

ಉಮೇಶ ಅವರಿಗೆ ಗ್ರಾಮ ರಾಜಕಾರಣದ ಸೂಕ್ಷ್ಮತೆ ಅರಿವಾಗುತ್ತದೆ. ಹೊಸ ಚುನಾಯಿತ ಪ್ರತಿನಿಧಿಗಳು ಬರುವವರೆಗೆ ಇದು ಅಸಂಭವ! ಕೂಡಲೇ, ಊರಿನ ಬಾವಿ ಮತ್ತು ಬೋರ್‌ವೆಲ್‌ಗಳ ಶುದ್ಧೀಕರಣಕ್ಕೆ ಅವರು ಪರ್ಯಾಯ ಯೋಜನೆ ರೂಪಿಸುತ್ತಾರೆ. ಅವನಿಯ ೩ ಕೈ ಪಂಪುಗಳು, ೪ ಕೊಳವೆ ಬಾವಿಗಳು ಮತ್ತು ೮ ತೆರೆದ ಬಾವಿಗಳು, ೨ ಕಲ್ಯಾಣಿಗಳ ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಿದ್ಧಗೊಳ್ಳುತ್ತದೆ. ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಗಮನಕ್ಕೆ ಈ ವಿಷಯ ಉಮೇಶ ತರುತ್ತಾರೆ. ಸಾಧಕ-ಬಾಧಕ ಚರ್ಚಿಸಿ, ಕ್ಷೇತ್ರ ಭೇಟಿ ಕೈಗೊಂಡು ಡಾ. ಪ್ರಕಾಶ ಒಪ್ಪಿಗೆ ಸೂಚಿಸುತ್ತಾರೆ. ೧೯ ಸಾವಿರ ರೂಪಾಯಿ ವೆಚ್ಚದ ಕ್ರಿಯಾಯೋಜನೆ, ಗ್ರಾಮ ಪಂಚಾಯ್ತಿಯಿಂದ ಹೆಚ್ಚೂಕಡಿಮೆ ಏನೂ ಧನ ಸಹಾಯವಿಲ್ಲದೇ, ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

ಸ್ವತಃ ಉಮೇಶ ಗ್ರಾಮಸ್ಥರ ಮನವೊಲಿಸಿ, ಗುಡ್ಡದ ಪಕ್ಕದ ‘ದಿಬ್ಬನ ಕೆರೆ’ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಅವನಿ ಗ್ರಾಮ ಪಂಚಾಯ್ತಿಯಿಂದ ಯಾವುದೇ ಧನಾತ್ಮಕ ಬೆಂಬಲ ದೊರಕದಿದ್ದರೂ, ಪಿಡಿಓ ಮುನಿರಾಜು ದೂರಗಾಮಿ ಪರಿಣಾಮ ಅನುಲಕ್ಷಿಸಿ ಉಮೇಶ್‌ಗೆ ಬೆನ್ನೆಲುಬಾಗಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಸಮುದಾಯವೇ ಸುಮಾರು ೧೫ ದಿನಗಳ ಸತತ ಪರಿಶ್ರಮ ಹಾಕಿ, ಸ್ಕೋಪ್ ಕೇವಲ ೧,೫೦೦ ರೂಪಾಯಿ ಮಾತ್ರ ಖರ್ಚಿಸಿ ಕನಿಷ್ಟ ದನ-ಕರುಗಳಿಗಾದರೂ ಕೆರೆ ಆಸರೆಯಾಗಲಿ ಎಂದು ಪೂರ್ಣ ಸ್ವಚ್ಛಗೊಳಿಸುತ್ತಾರೆ. ಉಮೇಶ್ ಮೇಲೆ ಗ್ರಾಮಸ್ಥರಿಗೆ ಪ್ರೀತಿ, ವಿಶ್ವಾಸ ಅಂಕುರಿಸುತ್ತದೆ. ಶ್ರಮದಾನ ಗೆಳೆತನ ಬೆಸೆಯುತ್ತದೆ!

DSC_0228ಈ ವಿಶ್ವಾಸವನ್ನೇ ಬಂಡವಾಳವಾಗಿ ಪರಿವರ್ತಿಸಿ, ಅವನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐತಿಹಾಸಿಕ ರಾಮೇಶ್ವರ ದೇವಸ್ಥಾನದ ಪಕ್ಕವಿರುವ ಛತ್ರದ ಬಾವಿಯ ಪುನರುಜ್ಜೀವನಕ್ಕೆ ಮುಂದಾಗುತ್ತಾರೆ. ೨೫ ವರ್ಷಗಳ ಕೆಳಗೆ ಇಡೀ ಊರಿನ ದಾಹ ತೀರಿಸುತ್ತಿದ್ದ, ದೇವಸ್ಥಾನದ ಪೂಜೆಗೆ ಬಳಕೆಯಾಗುತ್ತಿದ್ದ ಛತ್ರದ ಬಾವಿ ಸಂಪೂರ್ಣವಾಗಿ ಕಸದ ಕೊಂಪೆಯಾಗಿದ್ದು ಮಾತ್ರ ವಿಪರ್ಯಾಸ. ಸ್ಕೋಪ್ ಈ ಕೆಲಸಕ್ಕೆ ಬೆನ್ನೆಲುಬಾಗಿ ನಿಂತು ೭ ಸಾವಿರ ರೂಪಾಯಿ ಒದಗಿಸುತ್ತದೆ. ಸುಮಾರು ೧೫ ದಿನಗಳ ನಿರಂತರ ಸಾಮುದಾಯಿಕ ಸಹಭಾಗಿತ್ವದ ಶ್ರಮದಾನದ ಬಳಿಕ ಸಿಹಿ ನೀರಿನ ಬಾವಿ ಸ್ವರೂಪ ಪಡೆಯುತ್ತದೆ. ಅದಕ್ಕೊಂದು ರಾಟಿ, ತಡೆಗೋಡೆ ಮತ್ತು ಸೂಕ್ತ ಸುರಕ್ಷಾ ಆವರಣ ನಿರ್ಮಾಣವಾಗುತ್ತದೆ. ಗ್ರಾಮ ಪಂಚಾಯ್ತಿಯೂ ಕೈಜೋಡಿಸುತ್ತದೆ.

ಒಳಹರಿವಿನ ಸೆಲೆಯನ್ನೂ ಕೂಡ ಸ್ವಚ್ಛಗೊಳಿಸಿ, ನೀರನ್ನು ಪರೀಕ್ಷಿಸಲಾಗಿ ಯಾವುದೇ ರಾಸಾಯನಿಕಗಳಿಂದ ನೀರು ಅಶುದ್ಧಗೊಂಡಿರದೇ ಕೇವಲ ಜೈವಿಕ ಅಶುದ್ಧಿಯಿಂದ ನೀರು ಮಲಿನಗೊಂಡಿರುವುದು ಉಮೇಶ್‌ಗೆ ಸಮಾಧಾನ ತರುತ್ತದೆ. ಕೂಡಲೇ ನೀರನ್ನೆಲ್ಲ ಹೊತ್ತುಹಾಕಿ, ಇಡೀ ಬಾವಿ ಮತ್ತೆ ಶುದ್ಧವಾದ ಸಿಹಿ ನೀರಿನಿಂದ ಮೈದುಂಬುವಂತೆ ಮರುಪೂರಣ ಮಾಡಲಾಗುತ್ತದೆ.

DSC03398೨ ಕಲ್ಯಾಣಿಗಳಾದ ನಾಗರಬಾವಿ ಮತ್ತು ಗಿಂಡಿ ಬಾವಿಯನ್ನೂ ಸಹ ಉಮೇಶ ಸ್ಕೋಪ್ ಧನಸಹಾಯದಲ್ಲಿ, ಸುಮಾರು ೬ ಸಾವಿರ ರೂಪಾಯಿ ಖರ್ಚಿಸಿ, ಅವನಿ ಗ್ರಾಮ ಪಂಚಾಯ್ತಿ ಸಹಭಾಗಿತ್ವದಲ್ಲಿಯೇ ೧೫ ದಿನಗಳ ಶ್ರಮದಾನದಿಂದ ಸ್ವಚ್ಛಗೊಳಿಸುತ್ತಾರೆ. ಗ್ರಾಮದ ಯುವಜನತೆ ಸವಾಲೆಂಬಂತೆ ಸ್ವೀಕರಿಸಿ, ನಿಗದಿತ ಕಾಲಮಿತಿಯೊಳಗೆ ಈ ಕೆಲಸ ಪೂರ್ಣಗೊಳಿಸದ್ದು ವಿಶೇಷ. ಈ ಕಲ್ಯಾಣಿಗಳು ಈಗ ಹೋಬಳಿಯ ದನಕರುಗಳಿಗೆ ವರ್ಷದ ೧೨ ತಿಂಗಳೂ ಕುಡಿಯುವ ನೀರು ಒದಗಿಸುತ್ತಿರುವುದು ಗಮನಾರ್ಹ.

ಕೂಡಲೇ ಉಮೇಶ ಗಮನ ಹರಿಸುವುದು ಕೊಳವೆ ಬಾವಿಗಳತ್ತ. ಒಟ್ಟು ೪ ಬಾವಿಗಳ ಪೈಕಿ ೨ ಬತ್ತಿ, ಇನ್ನೆರಡು ಬಳಕೆಯಲ್ಲಿದ್ದವು. ಕೂಡಲೇ ನೀರನ್ನೂ ಪರೀಕ್ಷಿಸಿ, ಇಲ್ಲಿಯೂ ಕೂಡ ಯಾವುದೇ ‘ಕೆಮಿಕಲ್ ಕಂಟ್ಯಾಮಿನೇಷನ್’ ಇಲ್ಲದೇ ಕೇವಲ ‘ಬಯಾಲಾಜಿಕಲ್ ಕಂಟ್ಯಾನಿಮೇಷನ್’ ಇರುವುದನ್ನು ಪತ್ತೆ ಮಾಡುತ್ತಾರೆ. ೨೭೦ ಮನೆಗಳಿಗೆ ಈ ಬೋರ್‌ವೆಲ್‌ಗಳಿಂದಲೇ ಕುಡಿಯುವ ನೀರು ಸರಬರಾಜಾಗುತ್ತಿರುವ ಸಂಗತಿಯೂ ಇತ್ತು. ಅಂತೂ ಬೋರ್‌ವೆಲ್‌ಗಳನ್ನು ಸುಸ್ಥಿರ ಸ್ಥಿತಿಗೆ ಒಯ್ಯುವ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಯಿತು. ಗ್ರಾಮ ಪಂಚಾಯ್ತಿಗೆ ಆ ಜವಾಬ್ದಾರಿ ವಹಿಸಲಾಯಿತು.

ಈ ಮಧ್ಯೆ, ೪ ಖಾಸಗಿ/ ವೈಯಕ್ತಿಕ ಬಳಕೆಯ ಬಾವಿಗಳವರೂ ಕೂಡ ಮುಂದೆ ಬಂದು, ನೀರಿನ ಪರೀಕ್ಷೆಗೆ ಒತ್ತಾಯಿಸುತ್ತಾರೆ. ಕಷ್ಟಕಾಲದಲ್ಲಿ ಇತರೆ ಕುಟುಂಬಗಳಿಗೂ ನೀರು ಒದಗಿಸಬೇಕು ಎಂಬ ಕರಾರಿನೊಂದಿಗೆ ಉಮೇಶ ಖಾಸಗಿ ಬಾವಿಗಳ ನೀರು ಪರೀಕ್ಷಿಸಿ, ಸದ್ಯ ಕೈಗೊಳ್ಳಬೇಕಿರುವ ಉಪಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ಕೊಳವೆ ಬಾವಿಗಳಿಗಿಂತ ತೆರೆದ ಬಾವಿಗಳ ಮತ್ತು ಕೆರೆ, ಕಲ್ಯಾಣಿಗಳ ನೀರು ಕುಡಿಯುವುದು ಹೆಚ್ಚು ಸುರಕ್ಷಿತ ಎಂಬ ಮಾನಸಿಕತೆ ರೂಪಿಸಲುDSC_0023 ಉಮೇಶ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಪುಟ್ಟ ವಿಡಿಯೋ ಕ್ಲಿಪ್‌ಗಳನ್ನು ಬಳಸಿ, ಗ್ರಾಮಸ್ಥರಿಗೆ ಜಲ ಮೂಲಗಳನ್ನು ಕಾಯ್ದುಕೊಳ್ಳುವ ಅನಿವಾರ್ಯತೆಯ ಬಗ್ಗೆ ಮನಮುಟ್ಟುವಂತೆ ತಿಳಿಸುತ್ತಾರೆ. ಮೇಷ್ಟ್ರು ಯಳಗೊಂಡಳ್ಳಿ ಯಾವತ್ತೂ ಇವರ ಸಹಾಯಕ್ಕೆ ನಿಂತು ಈ ಆಂದೋಲನ ಯಶಸ್ವಿಗೊಳಿಸುತ್ತಾರೆ.

ಈ ಎಲ್ಲ ಕೊಂಕಣ ಸುತ್ತುವ ವೇಳೆಗೆ ೮ ತಿಂಗಳು ಕಳೆದು, ಗ್ರಾಮ ವಾಸ್ತವ್ಯದ ೯ನೇ ತಿಂಗಳಿಗೆ ಉಮೇಶ ಕಾಲಿಡುತ್ತಾರೆ. ಚುನಾವಣೆಗಳು ನಡೆದು ಹೊಸ ಅಧ್ಯಕ್ಷರು ಅವನಿ ಗ್ರಾಮಕ್ಕೆ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಉಮೇಶ, ಇಡೀ ಗ್ರಾಮಕ್ಕೆ ಅನುಕೂಲವಾಗುವ ತೆರದಿ ಶುದ್ಧ ಕುಡಿಯುವ ನೀರಿನ ಆರ್.ಓ. ಘಟಕಕ್ಕೆ ಕಾಯಕಲ್ಪ ಒದಗಿಸಲು ನೂತನ ಪಿಡಿಓ ನಾರಾಯಣಸ್ವಾಮಿ (ಅದೇ ಗ್ರಾ.ಪಂ. ಕಾರ್ಯದರ್ಶಿಯಾಗಿದ್ದವರು) ಜೊತೆಗೂಡಿ ಮನವೊಲಿಸತ್ತಾರೆ. ಯೋಜನಾನುಷ್ಠಾನದ ಹೊಣೆ ಹೊತ್ತಿದ್ದ ಏಜೆನ್ಸಿ ಆಗಮಿಸಿ, ಅರ್ಧಕ್ಕೇ ನಿಂತಿದ್ದ ಯೋಜನೆಯನ್ನು ಪೂರ್ಣಗೊಳಿಸುತ್ತಾರೆ! ಜನರ ಖುಷಿಗೆ ಪಾರವೇ ಇಲ್ಲ.

ಅವನಿ ಹೋಬಳಿಯ ಖಾಸಗಿ ನೀರು ಮಾರಾಟ ಜಾಲದ ಮಾಫಿಯಾ ಅಲ್ಲಿಗೆ ತನ್ನ ಅಂಗಡಿ ಮುಚ್ಚುತ್ತದೆ. ಕೇವಲ ೨ ರೂಪಾಯಿಗೆ ೧ ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುವ ಘಟಕ ಕಾರ್ಯಾರಂಭ ಮಾಡುತ್ತದೆ. ಕೆರೆಯೂ ಮೈದುಂಬಿ ನಿಂತ ಹಿನ್ನೆಲೆಯಲ್ಲಿ ಫ್ಲೋರೈಡ್ ಪ್ರಮಾಣ ಕೂಡ ಕುಂಠಿತವಾಗಿ ಮೇಲ್ಮೈ ನೀರು ಶುದ್ಧೀಕರಣಗೊಳ್ಳುತ್ತದೆ.

ಕೂಡಲೇ ಉಮೇಶ, ಬಯಲು ಶೌಚದ ಗಂಡಸರ ಖಯ್ಯಾಲಿ ದೂರ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ. ಮೊದಲಿಗೆ ಯಾರೂ ಕೇಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ, ಬಯಲು ಶೌಚದಿಂದ, ಮಲ-ಮೂತ್ರ ಕುಡಿಯುವ ನೀರಿಗೆ ಸೇರಿ ತರಬಹುದಾದ ಆರೋಗ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ವಿಡಿಯೋ ಕ್ಲಿಪ್ ಬಳಸಿ, ತೋರಿಸಿದ್ದರಿಂದ ಜನ ಜಾಗ್ರತರಾಗುತ್ತಾರೆ. ತಮ್ಮ ರೂಢಿ ಬದಲಿಸಿಕೊಳ್ಳಲು ಸಿದ್ಧರಾಗುತ್ತಾರೆ. ಕೇವಲ ೧೦ ತಿಂಗಳ ಅವಧಿಯಲ್ಲಿ ಉಮೇಶ ೧೧೦ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಂಡು, ಕುಟುಂಬಗಳು ಬಳಸುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗುತ್ತಾರೆ. (ಉಮೇಶ ಅವರು ಅವನಿಗೆ ಕಾಲಿಟ್ಟಾಗ ೬೩೦ ಮನೆಗಳ ಪೈಕಿ ಕೇವಲ ೨೭೦ ಮನೆಗಳಲ್ಲಿ ಮಾತ್ರ ವಯಕ್ತಿಕ ಶೌಚಾಲಯಗಳಿದ್ದವು.)

ನೂತನವಾಗಿ ಆಯ್ಕೆಯಾಗಿ ಬಂದ ಅವನಿ ಗ್ರಾಮ ಪಂಚಾಯ್ತಿ ಸದಸ್ಯರಿಗೂ ಉಮೇಶ ಕೆಲಸ ಹೆಮ್ಮೆ ತರುತ್ತದೆ. ಪಕ್ಕದ ಹತ್ತಾರು ಹೋಬಳಿಗಳಲ್ಲಿ ಆಗದ ಕೆಲಸ ಇಲ್ಲಿ ಸಲೀಸಾಗಿ ಸಮುದಾಯದ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕವೇ, ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿದು ಹೋಗಿದ್ದು ಮಾದರಿ ಎನಿಸುತ್ತದೆ.

ಶಿಕ್ಷಕ ಯಳಗೊಂಡಳ್ಳಿ ಅವರ ಮಾತುಗಳಲ್ಲಿ ಕೇಳುವುದಾದರೆ.. “ಉಮೇಶ ಅವರ ಕೆಲಸ ನೋಡಿ, ಅವನಿ ಹೋಬಳಿ ಪಕ್ಕದ ಊರುಕುಂಟೆಮೆಟ್ಟೂರು ಮತ್ತು ಕೆಂಪಾಪುರ ಗ್ರಾಮಸ್ಥರು ಇಲ್ಲಿಗೆ ಬಂದು ಕೆರೆ, ಕಲ್ಯಾಣಿ, ಕೈ ಪಂಪು, ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳು ಸ್ವಚ್ಛಗೊಂಡಿದ್ದನ್ನು ಕಂಡು ಪ್ರೇರಿತರಾಗಿ ತಮ್ಮೂರಿಗೂ ಬಂದು ಸ್ವಚ್ಛ ಮಾಡಿಸಿಕೊಡುವ ಗುತ್ತಿಗೆ ಪಡೆಯುವಂತೆ ಉಮೇಶ ಅವರಿಗೆ ದುಂಬಾಲು ಬಿದ್ದಿದ್ದು.. ನೋಡಿ ನಾವು ನಕ್ಕಿದ್ದೇ ನಕ್ಕಿದ್ದು..! ಈಗಲಾದರೂ ರೇಟ್ ಫಿಕ್ಸ್ ಮಾಡಿ ಅಂತ ಕಾಡಿಸಿದ್ದೇ ಹೆಚ್ಚು.”

ಹಾಸ್ಟೆಲ್ ಒಂದರಲ್ಲಿ ಅಡುಗೆ ಮಾಡುವ, ಉಮೇಶ ಅವರ ಮನೆಯ ಮಾಲಿಕರೂ ಆದ ಮುನಿವೆಂಕಟಪ್ಪ, ಮನೆಯಲ್ಲಿದ್ದರೆ ಯಾವತ್ತೂ ಉಮೇಶ್ ಅವರಿಗೆ ಸ್ವತಃ ಅಡುಗೆ ಮಾಡಲು ಬಿಡಲಿಲ್ಲ. ತಮ್ಮ ಸ್ವಂತ ತಮ್ಮನಂತೆ ಪ್ರೀತಿ ತೋರಿಸಿದವರು. ಸ್ವತಃ ಅವರ ತಮ್ಮನ ಮದುವೆಗೆ ಆಮಂತ್ರಣ ನೀಡಿ, ಉಮೇಶ ಕುಟುಂಬ ಪಾಲ್ಗೊಳ್ಳಲೇಬೇಕು ಎಂದು ಆಗ್ರಹಿಸಿದವರು. ಭಾಷೆ ಬಾರದ, ನಮ್ಮವನಲ್ಲದ ವ್ಯಕ್ತಿಗೆ ತಮ್ಮನ ಸ್ಥಾನಮಾನ ನೀಡಿ, ಅಕ್ಕರೆ ತೋರಿ ಗ್ರಾಮ ವಾಸ್ತವ್ಯ ಸಹ್ಯವಾಗಿಸಿದವರು. ಅವನಿಯ ಹುಡುಗ ಉಮೇಶ ಅಂತ ಬಂಧು-ಬಾಂಧವರಿಗೆಲ್ಲ, ಸುತ್ತ ಹತ್ತು ಹಳ್ಳಿಯ ಜನಕ್ಕೆಲ್ಲ ಪರಿಚಯ ಮಾಡಿಕೊಟ್ಟವರು.

ಅಂದ ಹಾಗೆ ಅವನಿ ಮಾತ್ರವಲ್ಲ, ಸುತ್ತ ಹತ್ತು ಹೋಬಳಿಯ ಜನ ಫೆಲೊ ಉಮೇಶ ಅವರನ್ನು ಕರೆಯುವ ರೀತಿ ಗೊತ್ತೇ.. “ಕೆರೆ, ಕಲ್ಯಾಣಿ ಮತ್ತು ಬಾವಿಗಳನ್ನು ಸ್ವಚ್ಛ ಗೊಳಿಸುವ ಮಾಸ್ಟ್ರು..!”

ಸದ್ಯ ಅರಸಿಕೆರೆ ತಾಲೂಕು ಪಂಚಾಯ್ತಿಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರಾಗಿ ಉಮೇಶ ಕೆಲಸ ಮಾಡುತ್ತಿದ್ದಾರೆ. ವಾರಕ್ಕೊಮ್ಮೆಯಾದರೂ ಅವರಿಗೆ ಅವನಿಯಿಂದ ಬುಲಾವ್ ಬರುತ್ತದೆ.. “ಒಲ್ಲೆ ಎನ್ನಲು ಮನಸ್ಸೇ ಒಪ್ಪುವುದಿಲ್ಲ; ಕಾರ್ಯಬಾಹುಳ್ಯದ ಮಧ್ಯೆಯೂ ಹೋಗಲೇಬೇಕು..” ಎನ್ನುತ್ತಾರೆ ಉಮೇಶ್.

**************************************************************************************Umesh U R - Avani Village

ಫೆಲೊ ಉಮೇಶ ಯು.ಆರ್. ಅವರ ಅನಿಸಿಕೆ –

“ನಾನು ಅನುಭವದಿಂದಲೇ ಹೆಚ್ಚು ಕಲಿತವ. ನೇರವಾಗಿ ಡಿಗ್ರಿ ಮತ್ತು ಮಾಸ್ಟರ್ಸ್ ಡಿಗ್ರಿ ಓದಿದವ. ಬದುಕು ನಿಜಕ್ಕೂ ಸ್ಟ್ರಿಕ್ಟ್ ಮೇಷ್ಟ್ರು. ತುಂಬ ಏಳು-ಬೀಳು, ಏರು-ಪೇರಿನ ಮಧ್ಯೆ ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂಗೆ ಸೇರಿದೆ. ಎಲ್ಲ ಫೆಲೋಗಳಿಗಿಂತ ತಡವಾಗಿ ಸೇರಿ, ಎಲ್ಲರಿಗಿಂತ ಮೊದಲು ಹೊರಬಂದವ. ನನ್ನ ತಾಯಿಯ ಅನಾರೋಗ್ಯದ ಮಧ್ಯೆಯೂ ನೈತಿಕ ಬೆಂಬಲ ನೀಡಿದ್ದು, ಸ್ಕೋಪ್ ಬಳಗ. ಗ್ರಾಮ ವಾಸ್ತವ್ಯದ ಬದುಕನ್ನು ಸಹ್ಯವಾಗಿಸಿದವರು ಅವನಿಯ ಗೆಳೆಯರು. ಈಗ ನಾನು ಅವನಿಯವ; ಅವನಿಗರು ನನ್ನವರು. ಈ ಅನುಭವಕ್ಕೆ ಗುರು ಡಾ. ಪ್ರಕಾಶ ಭಟ್ ಅವರಿಗೆ ನಾನು ಋಣಿ.”

ಸಂಪರ್ಕ: umi3398@gmail.com/+೯೧ ೮೯೭೦೬ ೮೬೩೧೫.

**************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

ಇದು ಸ್ಕೋಪ್-ಅರ್ಘ್ಯಂ ‘ವಾಟ್ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ೧೧ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*