ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೧: ಕೆರೆ ಅಭಿವೃದ್ಧಿ ಯೋಜನೆ ಒಂದು, ಕಾಮಗಾರಿ ಇನ್ನೊಂದು!

ರಾಜ್ಯದಲ್ಲಿ ಕೆರೆಗಳ ಅಭಿವೃದ್ಧಿಯಲ್ಲಿ ಬಹಳಷ್ಟು ಲೋಪದೋಷಗಳು ಇರುವುದು ಸಾಮಾನ್ಯ ಎಂದೇ ಪರಿಗಣಿಸಲಾಗುತ್ತಿದೆ. ಏಕೆಂದರೆ ಇಲ್ಲಿ ಮಾಡುವ ಯೋಜನೆ ಒಂದು, ಕಾಮಗಾರಿ ನಡೆಸುವುದು ಮತ್ತೊಂದು. ಹೀಗಾಗಿಯೇ ಕೆರೆಗಳ ಜೈವಿಕ ಆರೋಗ್ಯದ ಮೇಲೆ ಸಾಕಷ್ಟು ಹಾನಿ ಉಂಟಾಗಿದೆ. ಪ್ರಮುಖವಲ್ಲದ ಕಾಮಗಾರಿಗಳಿಗೇ ಹೆಚ್ಚಿನ ಹಣ ವ್ಯಯ ಮಾಡಲಾಗಿದೆ, ಮಾಡಲಾಗುತ್ತಿದೆ.

BDALake-1ಕೆರೆಗಳ ಜೈವಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳಿಗೆ ಹಣವನ್ನು ನಿಗದಿತ ಮಾಪನ ಮಟ್ಟದ ಅನ್ವಯ ಒದಗಿಸಬೇಕು. ಹೀಗೆಂದು, ಕೆರೆಗಳ ಕಾಮಗಾರಿಗಳ ದುಸ್ಥಿತಿಯ ವಿಮರ್ಶೆ ಮಾಡಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವμದ ವರದಿಯಲ್ಲಿ ಉಲ್ಲೇಖಿಸಿ ಶಿಫಾರಸು ಮಾಡಲಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಸವಿವರ ಯೋಜನಾ ವರದಿಗಳ ಅನುಮೋದನೆ ಕಾಮಗಾರಿಗಳಿಗಾಗಿ ಸವಿವರ ಯೋಜನಾ ವರದಿಗಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು ಎಂದು ರಾಜ್ಯ ಸರಕಾರ ಏಪ್ರಿಲ್ ೨೦೧೦ರಲ್ಲಿ ನಿರ್ದೇಶಿಸಿತು. ಎನ್‌ಎಲ್‌ಸಿಪಿ ಕಾಮಗಾರಿಗಳ ಸಂಬಂಧವಾಗಿ ಸವಿವರ ಯೋಜನಾ ವರದಿಗಳಿಗೆ ಭಾರತ ಸರ್ಕಾರದ ಅನುಮೋದನೆಯು ಅವಶ್ಯಕತೆಯಿದ್ದಿತು. ಸವಿವರ ಯೋಜನಾ ವರದಿಗಳಿಗೆ ಅನುಮೋದನೆ ಪಡೆಯುವಲ್ಲಿನ ನ್ಯೂನತೆಗಳು, ಕೆರೆ ಜೀರ್ಣೋದ್ಧಾರದ ಕಾಮಗಾರಿಗಳ, ಮಾಲಿನ್ಯದ ಮತ್ತು ಜೈವಿಕ ವೈವಿಧ್ಯತೆಯ ರಚನೆಯ ಮೇಲ್ವಿಚಾರಣೆಯನ್ನು ಮುಂದಿನ ಭಾಗದಲ್ಲಿ ಚರ್ಚಿಸಲಾಗಿದೆ.  ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ೩೪ ಕೆರೆಗಳ ಪೈಕಿ, ಕೆರೆ ಅಭಿವೃದ್ಧಿ ಪ್ರಾಧಿಕಾರವು ೨೧ ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು ಮತ್ತು ಉಳಿದ ೧೩ ಪ್ರಕರಣಗಳಲ್ಲಿ (ಅಲರ್ವಾಡ್, ಅಲ್ಲಾಳಸಂದ್ರ, ಅಟ್ಟೂರು, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕೌದೇನಹಳ್ಳಿ, ಕುಡುಚಿ, ಕುದುಚಿ (ಸಣ್ಣದು), ರಾಚೇನಹಳ್ಳಿ, ವೆಂಕಟೇಶಪುರ, ಮತ್ತು ಯಲಹಂಕ) ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆಯಿಲ್ಲದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅನುಮೋದಿತ ಸವಿವರ ಯೋಜನಾ ವರದಿಗಳಲ್ಲಿ ಮತ್ತು ಸವಿವರ ಯೋಜನಾ ವರದಿಯ ಅನ್ವಯ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಯ ಮೇಲ್ವಿಚಾರಣೆಯಲ್ಲಿ ಲೆಕ್ಕಪರಿಶೋಧನೆಯು ಈ ಕೆಳಗಿನ ನ್ಯೂನತೆಗಳನ್ನು ಗಮನಿಸಿದೆ:

  •  ಸವಿವರ ಯೋಜನಾ ವರದಿಗಳ ಅನುಮೋದನೆಯಲ್ಲಿ ಒಂಭತ್ತು ತಿಂಗಳುಗಳವರೆಗಿನ ವಿಳಂಬವನ್ನು ಗಮನಿಸಲಾಯಿತು.
  • ಪ್ರಮುಖವಲ್ಲದ ಕಾಮಗಾರಿಗಳಿಗೆ (ದೋಣಿ ಇಳಿಗಟ್ಟೆ, ಗಾರ್ಡ್ ರೂಮ್‌ಗಳು, ಆಟದ ಕೇಂದ್ರಗಳು, ಮುಂತಾದವುಗಳು) ಒದಗಿಸಿದ್ದ ವೆಚ್ಚವು ಸವಿವರ ಯೋಜನಾ ವರದಿಗಳಲ್ಲಿ ಪ್ರಸ್ತಾಪಿಸಿದ್ದ (ಮುಂದಿನ ಕಂಡಿಕೆಗಳಲ್ಲಿ ವಿವರಿಸಲಾಗಿದೆ) ಒಟ್ಟು ಯೋಜನಾ ವೆಚ್ಚದ ನಿಗದಿತ ಶೇಕಡಾ ೨೫ಕ್ಕಿಂತ ಅಧಿಕವಾಗಿದ್ದ ೧೧ ಪ್ರಕರಣಗಳಲ್ಲಿ (ಅಂಬ್ಲೀಪುರ ಮೇಲಿನಕೆರೆ, ಬಿ.ನಾರಾಯಣಪುರ, ಬೆಳ್ಳಂದೂರು, ಚೊಕ್ಕನಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಕೋಗಿಲು, ಮೇಸ್ತ್ರಿಪಾಳ್ಯ, ತಿರುಮೇನಹಳ್ಳಿ, ವರ್ತೂರು ಮತ್ತು ವಿಭೂತಿಪುರ) ಕೆರೆ ಅಭಿವೃದ್ಧಿ ಪ್ರಾಧಿಕಾರವು ಸವಿವರ ಯೋಜನಾ ವರದಿಗಳನ್ನು ಅನುಮೋದಿಸಿತ್ತು.
  • ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳು ಮಾಲಿನ್ಯದ ಮಟ್ಟಗಳ ತೀವ್ರತೆಗೆ ಸಂಬಂಧಪಟ್ಟಂತೆ ಕೆರೆಗಳ ಜೀರ್ಣೋದ್ಧಾರದ ಆದ್ಯತೀಕರಣವನ್ನು ನಿಗದಿಪಡಿಸಿದ್ದರೂ ಸಹ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಸರಿಸಿದಂತೆ ಮಾಲಿನ್ಯದ ವರ್ಗೀಕರಣ ಮಟ್ಟವನ್ನು ಸವಿವರ ಯೋಜನಾ ವರದಿಗಳು ವಿಸ್ತೃತವಾಗಿ ತಿಳಿಸಲಿಲ್ಲ.
  • ಪರೀಕ್ಷಾ-ತನಿಖೆ ನಡೆಸಿದ ಎಂಟು ಕೆರೆಗಳಲ್ಲಿ (ಬಿ.ನಾರಾಯಣಪುರ, ಚೊಕ್ಕನಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಕೋಗಿಲು, ಮೇಸ್ತ್ರಿಪಾಳ್ಯ, ತಿರುಮೇನಹಳ್ಳಿ ಮತ್ತು ವಿಭೂತಿಪುರ) ಸವಿವರ ಯೋಜನಾ ವರದಿಗಳಲ್ಲಿ ಪ್ರಸ್ತಾಪಿಸಿದ್ದ ಕಾಮಗಾರಿಗಳು ವಾಸ್ತವವಾಗಿ ಕೈಗೆತ್ತಿಕೊಂಡ ಕಾಮಗಾರಿಗಳಿಗಿಂತ ವಿಭಿನ್ನವಾಗಿದ್ದವು.

ಕೆರೆ ಅಭಿವೃದ್ಧಿ ಪ್ರಾಧಿಕಾರವು ಲೆಕ್ಕಪರಿಶೋಧನಾ ಆಕ್ಷೇಪಣೆಗಳನ್ನು ಒಪ್ಪಿಕೊಂಡಿದೆ ಹಾಗೂ ಬಿಡಿಎ ಮತ್ತು ಬಿಬಿಎಂಪಿಗಳು ಸವಿವರ ಯೋಜನೆಗಳನ್ನು ಅಸಮರ್ಪಕವಾಗಿ ತಯಾರಿಸಿರುವುದನ್ನು ವಿಳಂಬಕ್ಕೆ ಅಧ್ಯಾರೋಪಿಸಿದೆ. ಪ್ರಮುಖವಲ್ಲದ ಕಾಮಗಾರಿಗಳಿಗೆ ಯೋಜನಾ ವೆಚ್ಚದ ಶೇಕಡಾ ೨೫ಕ್ಕಿಂತ ಕಡಿಮೆ ಹಣವನ್ನು ಒದಗಿಸಲು ಗಮನ ಕೊಡುವುದಾಗಿ ಮತ್ತು ಮಾಲಿನ್ಯ ಮಟ್ಟದ ವರ್ಗೀಕರಣದ ಬಗ್ಗೆ ಮಾಹಿತಿಯನ್ನು ಸಲ್ಲಿಸಿದ ನಂತರವೇ ಸವಿವರ ಯೋಜನಾ ವರದಿಯನ್ನು ಅನುಮೋದಿಸುವುದಾಗಿ ತಿಳಿಸಿತು. ಮುಂದುವರೆದು, ಕಾಮಗಾರಿಗಳಲ್ಲಿನ ವ್ಯತ್ಯಾಸವು ಮುಖ್ಯವಾಗಿ ಸ್ಥಳೀಯ ನಿವೇಶನಾ ಸ್ಥಿತಿಯ ಕಾರಣದಿಂದ ಆಗಿತ್ತೆಂದು ತಿಳಿಸಿತು.

BDALake-2ಎನ್‌ಎಲ್‌ಸಿಪಿ ಮಾರ್ಗದರ್ಶನಗಳ ಅನ್ವಯ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳೆಂದು ವರ್ಗೀಕರಿಸಲಾಗಿತ್ತು.  ಪರಿಸರ ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಪ್ರಮುಖ ಕಾಮಗಾರಿಗಳೆಂದರೆ ಏರಿಗಳನ್ನು ಬಲವರ್ಧನೆ ಮಾಡುವುದು, ಹೂಳೆತ್ತುವುದು, ತೀರಗಳಲ್ಲಿ ಸಸ್ಯಗಳನ್ನು ನೆಡುವುದು, ಒಳಹರಿವು ಮತ್ತು ಕೋಡಿಯ ಜೀರ್ಣೋದ್ಧಾರ ಕಾಮಗಾರಿಗಳು, ಮುಂತಾದವು. ಕೆರೆಗಳಲ್ಲಿ ಆರೋಗ್ಯಕರ ಪರಿಸರವನ್ನು ನಿರ್ವಹಿಸಲು ಈ ಕಾಮಗಾರಿಗಳು ಬಹಳ ಮುಖ್ಯವಾದವುಗಳು. ಪ್ರಮುಖವಲ್ಲದ ಚಟುವಟಿಕೆಗಳು ಕಾಲುದಾರಿಗಳು, ದೋಣಿ ಇಳಿಗಟ್ಟೆಗಳು, ವಿಗ್ರಹ ಮುಳುಗಿಸುವ ಕೆರೆಗಳು, ಮಕ್ಕಳ ಆಟದ ಪ್ರದೇಶ, ಮೊಗಸಾಲೆ, ಶೌಚಾಲಯಗಳು, ಹೋಟೆಲ್‌ಗಳು. ಈ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ಕೆರೆಗಳ ಜೈವಿಕ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದು. ಇದಲ್ಲದೇ, ಎನ್‌ಎಲ್‌ಸಿಪಿ ಮಾರ್ಗದರ್ಶನವು ಪ್ರಮುಖವಲ್ಲದ ಕಾಮಗಾರಿಗಳ ಮೇಲಿನ ವೆಚ್ಚವನ್ನು ಯೋಜನಾ ವೆಚ್ಚದ ಶೇಕಡಾ ೨೫ರಷ್ಟರವರೆಗೆ ಮಾತ್ರ ಭರಿಸಲು ಅನುಮತಿ ನೀಡಿತ್ತು. ಆದರೆ,  ಪರೀಕ್ಷಾ-ತನಿಖೆ ನಡೆಸಿದ ೫೬ ಕೆರೆಗಳಲ್ಲಿ, ೧೭ ಕೆರೆಗಳಲ್ಲಿ ಪ್ರಮುಖವಲ್ಲದ ಕಾಮಗಾರಿಗಳಿಗೆ ಒದಗಿಸಲಾದ ಮೊತ್ತವು ನಿಗದಿಪಡಿಸಿದ ಯೋಜನಾ ವೆಚ್ಚದ ಶೇಕಡಾ ೨೫ರಷ್ಟಕ್ಕಿಂತ ಹೆಚ್ಚಾಗಿದ್ದು ಸವಿವರ ಯೋಜನಾ ವರದಿಗಳ/ಅಂದಾಜುಗಳ ಅನ್ವಯ ೧೮೫.೧೮ ಕೋಟಿಗಳಾಗಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಈ ೧೭ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ೧೧ ಕೆರೆಗಳಲ್ಲಿ ಪ್ರಮುಖವಲ್ಲದ ಕಾಮಗಾರಿಗಳಿಗೆ ಒದಗಿಸಿದ ಮೊತ್ತವು ಪ್ರಮುಖ ಕಾಮಗಾರಿಗಳಿಗೆ ಒದಗಿಸಿದ ಮೊತ್ತಕ್ಕಿಂತ ಹೆಚ್ಚಾಗಿದ್ದಿತು.

ಅನುಷ್ಠಾನ ಸಂಸ್ಥೆಗಳು ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳ ಆಧಾರದ ಮೇಲೆ ವೆಚ್ಚವನ್ನು ಪ್ರತ್ಯೇಕಿಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆಗೆ ಸಂಬಂಧಿಸಿದ ಚಟುವಟಿಕೆಗಳ ವೆಚ್ಚದ ಮೇಲಿನ ಕಟ್ಟುನಿಟ್ಟಾದ ಮೇಲ್ವಿಚಾರಣೆಯ ಅನುಪಸ್ಥಿತಿಯಲ್ಲಿ, ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳ ವೆಚ್ಚದ ಅನುಪಾತವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತದೆ.  ಇದು ಕೆರೆಗಳ ಪರಿಸರೀಯ ಆರೋಗ್ಯಕ್ಕಾಗಿ ಅಗತ್ಯವಾದ ಪ್ರಮುಖ ಕಾಮಗಾರಿಗಳ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ನಗರದ ಕೆರೆಗಳಲ್ಲಿ ಪ್ರಮುಖವಲ್ಲದ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಅಗತ್ಯತೆಯು ಬಹಳ  ಅವಶ್ಯಕವಾಗಿದೆ ಹಾಗೂ ಸೂಕ್ತ ಅಗತ್ಯತೆಗಳ ಆಧಾರದ ಮೇಲೆ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಯಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿದೆ.  ಈ ಕೆರೆಗಳ ಸವಿವರ ಯೋಜನಾ ವರದಿಗಳನ್ನು ತಾಂತ್ರಿಕವಾಗಿಯೂ ಅನುಮೋದಿಸಲಾಗಿತ್ತು. ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ನಿಗದಿತ ಮಾಪನ ಮಟ್ಟಕ್ಕಿಂತ ಅಧಿಕವಾಗಿ ಪ್ರಮುಖವಲ್ಲದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದು ಕೆರೆಗಳ ಜೈವಿಕ ಆರೋಗ್ಯಕ್ಕೆ ಹಾನಿಕರವಾಗುತ್ತದೆ.

ಪರಿಸರ ಸಂರಕ್ಷಿಸುವಂತಹ ಕೆರೆ ಅಭಿವೃದ್ಧಿಯಂತಹ ಕಾಮಗಾರಿಗಳಲ್ಲಿ ಕೇವಲ ರಸ್ತೆ, ಬಿಲ್ಡಿಂಗ್ ಕಟ್ಟುವ ಎಂಜಿನಿಯರ್‌ಗಳು ಸೇರಿ ಯೋಜನೆ ಮಾಡಿ, ಅದನ್ನು ಅನುಷ್ಠಾನಗೊಳಿಸುವಾಗ ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನೇ ಮಾಡಿದರೆ ಜೈವಿಕ ಆರೋಗ್ಯ ನಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿರುವ ಕೆರೆಗಳ ಸ್ಥಿತಿ ಇದೇ ಆಗಿದೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*