ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಬಿಕ್ಕಟ್ಟು ಬಗೆಹರಿಸಿಕೊಂಡ ಬೆಂಗಳೆ

೨೦೦೨ರ ಸಮಯ. ಪುಟ್ಟ ಗ್ರಾಮದ ಓಣಕೇರಿಯ ಜನತೆ, ದಶಕಗಳ ಹಿಂದೆ ಆರಂಭಿಸಿದ ಜಲಕಾಯಕವೊಂದು ಇಂದು ಸಹ ಸಮೃದ್ಧವಾಗಿ ಫಲ ನೀಡುತ್ತಿದೆ. ಅದು  ಶಿರಸಿ ತಾಲ್ಲೂಕು, ಬನವಾಸಿ  ಬಳಿಯ ಓಣಿಕೇರಿ ರಾಘವ ಹೆಗಡೆಯವರ ಮನೆ ಪಕ್ಕದ ಹಾಲಿನ ಡೈರಿಯ ಕಟ್ಟೆ.“ಎಪ್ರಿಲ್‌ನಿಂದಲೇ ನೀರಿನ ಅಭಾವ.  ಮಳೆ ಕಡಿಮೆಯಾಗುತ್ತಿದೆ.  ಏನು ಪರಿಹಾರ? ನೀರು ಬತ್ತುವ ಮೊದಲೇ ಎಲ್ಲರೂ ಒಂದಾಗಿ  ಮರುಪೂರಣ ಮಾಡಬೇಕು.”ಎಂಬ ಹಾಲಿನ ಮನೆಯ ಚಿಂತನೆ ಕೃತಿಗಿಳಿದು ದಶಕಗಳು ಸಂದಿವೆ.  ಕ್ರಿಯಾಶೀಲ ಕೃಷಿಕರಾದ ಯದುನಂದನ, ಸಚ್ಚಿದಾನಂದ ಪ್ರಾತ:ಕಾಲ, ರಾಮಕೃಷ್ಣ ಭಟ್ಟ ಮತ್ತಿತರರ ಯೋಜನೆ, ಯೋಚನಾ ಲಹರಿಗಳು ಫಲ ಕೊಟ್ಟಿವೆ. ಇಂದು ಸಹ ಫಲ ನೀಡುತ್ತಿವೆ.

100_0406ಇವರ ಚಿಂತನೆಗೆ ಪ್ರೇರಣೆ ಕೊಟ್ಟದ್ದು ಶ್ರೀ ಪಡ್ರೆಯವರ ‘ನೆಲ-ಜಲ ಉಳಿಸಿ’ ಪುಸ್ತಕ.  ಅವರು ಬಂದಿದ್ದಾಗ ಊರಿಗೆ, ಭೂವಿಜ್ಞಾನಿಗಳ ಸಲಹೆಯನ್ನೂ ಪಡೆದು ಹೊಸ ಯೋಜನೆ ರೂಪಿಸಿದರು.

೨೦೦೨-೦೩ರ ಹೊತ್ತು – ಊರ ಕೆರೆಬಾವಿಗಳು ಬತ್ತುತ್ತಾ ಬಂದವು.   ಎಂಟತ್ತು ನೀರಿನ ಅಡಿ ಆಳದ ಬಾವಿಗಳಲ್ಲಿ ಕೆಸರು ಕಾಣತೊಡಗಿತು.   ಬೆಟ್ಟ ಬರಡಾಗತೊಡಗಿತು.  ಆಗ ಓಣಿಕೆರೆಯ ಜನತೆ ಆಕಾಶದತ್ತ ದೃಷ್ಟಿ ಹಾಯಿಸುವ ಬದಲು, ಬಿದ್ದ ಮಳೆಯನ್ನು ಇಳೆಗಿಳಿಸುವ ಬಗ್ಗೆ ಚಿಂತನೆ ಹರಿಸಿದರು.

ವಾರದಾಗೆ ಒಂದು ಬಾರಿ ಜನ ಹಾರೆ ಪಿಕ್ಕಾಸು ಹಿಡಿದು ಗುಡ್ಡ ಹತ್ತಲು ಪ್ರಾರಂಭಿಸಿದರು. ಕೆಲವರು ‘ಬೆಟ್ಟ ಅಗೆದು ಬಂಗಾರ ತರ‍್ತೀರಾ’! ಎಂದು ತಮಾಷೆ ಮಾಡಿದ್ದುಂಟು. ಇವರು ಗುಡ್ಡದಲ್ಲಿ ಸೂಕ್ತ ಜಾಗ ಗುರುತಿಸಿ, ಇಂಗುಗುಂಡಿ ತೋಡುತ್ತಾ ಹೋದರು.  ಮೂರು ವರ್ಷಗಳಲ್ಲಿ ದೊಡ್ಡದು, ಸಣ್ಣದು ಸೇರಿ, ಎರಡು ಸಾವಿರಕ್ಕೂ ಹೆಚ್ಚು ನೀರಿಂಗಿಸುವ ರಚನೆಗಳು.

ವರ್ಷಗಳ ನಂತರ ಈಗ, ಹಿಂದೆ ಮೇ-ಜೂನ್‌ನಲ್ಲಿ ಅಡಿ–ಇಂಚುಗಳಿಗೆ ಇಳಿದಿದ್ದ ಬಾವಿಗಳ ನೀರು, 8, 10 ಅಡಿಗಳಿಗೂ ಮೀರಿದೆ.  ಹಿಂದೆ ಯೋಜನೆ ಬಗೆಗೆ ಸಂದೇಹಪಟ್ಟ ಭೂವಿಜ್ಞಾನಿಗಳಿಗೆ, ಕೃಷಿಕರ ಈ ಸಾಧನೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

‘U’’ ಆಕಾರದಲ್ಲಿ ಓಣಕೇರಿಯನ್ನು ಸುತ್ತುವರಿದ ೪೦೦ ಎಕರೆಗೂ ಮಿಕ್ಕಿದ ಪ್ರದೇಶಗಳಲ್ಲಿ ಬತ್ತಿ ಕೆಸರು ಕಾಣುತ್ತಿದ್ದ ಐದು ಕೆರೆಗಳು ಶುಭ್ರವಾಗಿ 5,6 ಅಡಿಗಳಿಗೂ ಹೆಚ್ಚಿನ ಪ್ರಮಾಣದ ನೀರನ್ನು ಕಾಯ್ದಿಟ್ಟುಕೊಂಡು ಬಂದಿದೆ. ೬೦  ಎಕರೆ ಅಡಿಕೆಯಾಧಾರಿತ ಅಂತರ್‌ಬೆಳೆ ತೋಟ, ಭತ್ತ, ಕಬ್ಬು, ತರಕಾರಿ ಬೆಳೆಗಳು, ಇನ್ನಿತರ ಗದ್ದೆಗಳು, ಸಮೃದ್ಧ ಫಸಲು ನೀಡುತ್ತಾ ಇಡೀ ಗ್ರಾಮಕ್ಕೆ ಹಸಿರು ತೋರಣ ಕಟ್ಟಿವೆ.  ಬರಡಾಗುತ್ತಿದ್ದ ಬೆಟ್ಟ ಗುಡ್ಡಗಳು ಹಸಿರಾಗಿ, ದಷ್ಟಪುಷ್ಟವಾಗಿ, ಹಸಿರೆಲೆಗಳು ರೆಂಬೆಕೊಂಬೆಗಳು ಸದೃಢವಾಗಿ, ಪ್ರಕೃತಿ ಸಹಜತೆಯತ್ತ ಮತ್ತೆ ಎದ್ದು ನಿಂತಿವೆ.  ದನಕರುಗಳು ಬೇಕಷ್ಟು ಮೇವು ಕಂಡುಕೊಂಡಿವೆ.

100_0397ಒಂದು ಎಕರೆಯ ತೋಟಕ್ಕೆ, ಒಂಭತ್ತು ಎಕರೆ ಕಾಡು ಜಮೀನು ಎಂದು ಕೊಟ್ಟು ಹೋದ ಬ್ರಿಟಿಷರ ಬಳುವಳಿಗೆ ಮತ್ತೆ ಬೆಲೆ ಬಂದಿದೆ.  ಅಂದು ಕೇವಲ ಗಡಿಗಾಗಿ ಗುರುತಿಸಿದ ಉದ್ದುದ್ದ ಅಗಳುಗಳು ಸಹ ಸಾವಿರಾರು ಲೀಟರ್ ನೀರನ್ನು ಸೆರೆಹಿಡಿಯುವ ತಾಕತ್ತು ಹೊಂದಿವೆ.

‘ಕೇವಲ ನೀರಿನಿಂದ ಮಾತ್ರ ನಮ್ಮನ್ನು ಅಳೆಯಬೇಡಿ. ಇಲ್ಲಿ ನೀರಿನಿಂದ ಸಮಸ್ತವೂ ಬೆಳೆದು ನಿಂತಿದೆ.  ಮಾನವ-ಮಾನವ ಸಂಬಂಧಗಳ ಅನ್ಯೋನ್ಯತೆಗೆ ಕೂಡ ಕಾರಣವಾಗಿದೆ. ಅನಿವಾರ್ಯತೆ ಬಂದಾಗಲಷ್ಟೇ ಎಚ್ಚೆತ್ತುಕೊಳ್ಳುವುದು ಸರಿಯಲ್ಲಿ. ಮೊದಲೇ ಚಿಂತಿಸಿ ಕೆಲಸ ಮಾಡಬೇಕು. ಸುರಿದ ಮಳೆ ಎಷ್ಟೇ ಇರಲಿ, ಅದನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡೋಣ’ ಎಂಬ ಮಾತುಗಳು ಇಲ್ಲಿ ಅರ್ಥಪೂರ್ಣವಾಗಿದೆ.  ಇದು ಇಲ್ಲಿನ ರೈತರ ಸೂಕ್ಷ್ಮ ದೃಷ್ಟಿಯೂ ಸಹ ಹೌದು.

ಮಳೆನೀರಿಂಗಿಸಿ, ಬೆಂಗಳೆ ಕೆರೆಯಲ್ಲಿ ನೀರು ಹೆಚ್ಚಿದ ಮೇಲೆ, ಮನೆಮನೆಗೂ ನಲ್ಲಿ ನೀರು ಯೋಜನೆ ಆರಂಭವಾಯಿತು. ಸುಮಾರು ೧ ಕಿ.ಮೀಟರ್ ದೂರದ ಓಣಿಕೆರೆಯ ನಡುವಿನ ನೀರಿನ ಬುಗ್ಗೆಯಲ್ಲಿ ೬ ಅಡಿ  ಸಿಮೆಂಟ್ ರಿಂಗ್ ಮುಳುಗಿಸಿದರು.  ಅದರ ತಳದಿಂದಲೇ ಆರಂಬಿಸಿ ಕಾಡು, ಗುಡ್ಡದ ನಡುವೆ ೨೨ ಅಡಿ ಆಳದಲ್ಲಿ ೨ ಅಡಿ ಅಂತರದ ತೋಡು ನಿರ್ಮಿಸಿ, ೨.೫೦ ಇಂಚು ಪಿವಿಸಿ  ಪೈಪ್ ಮುಖಾಂತರ ನೀರನ್ನು ಹರಿಸಿ ಬಿಟ್ಟರು.  ಇನ್ನೊಂದು ತುದಿಯಲ್ಲಿ, ನೀರನ್ನು ಎರಡೂ ಟ್ಯಾಂಕ್ ನಿರ್ಮಿಸಿ  ಒಂದರಲ್ಲಿ ಸಂಗ್ರಹಿಸಿ ಇನ್ನೊಂದರಲ್ಲಿ ಶೋಧಿಸಿ ಮನೆಮನೆಗಳ ತೊಟ್ಟಿಗೆ ಹರಿಯಲು ಬಿಟ್ಟರು.  ಕ್ರಮೇಣ ಬತ್ತುತ್ತಿದ್ದ ಬಾವಿ-ಕೆರೆಗಳನ್ನು ನಂಬಿದ ಜನ, ನಿರಂತರ ನೀರು ಕಣ್ಣೆದುರಿಗೆ ಸತತವಾಗಿ ಹರಿದಾಗ, ಬಿಕ್ಕಟ್ಟೊಂದನ್ನು ಪೂರ್ವಭಾವಿಯಾಗಿ ಬಗೆಹರಿಸಿಕೊಂಡ ಪ್ರಜ್ಞಾವಂತರೆಂಬ ಸಂತಸದಲ್ಲಿ ಸಂಭ್ರಮಿಸಿದರು. ಈಗ ೧೨೫ ಸೆಂ.ಮೀ. ಮಳೆ ಬೀಳುವ ಈ ಪ್ರದೇಶದಲ್ಲಿ ೭೦  ಮಿ.ಮೀ. ಮಳೆಯಾದರೂ ಸಾಕು ಎನ್ನುತ್ತಾರೆ.

ಈ ನೀರಾವರಿ ವ್ಯವಸ್ಥೆಯಿಂದಾಗಿ, 125 ಮಕ್ಕಳ ಒಂದು ಶಾಲೆಯೂ ಸೇರಿದಂತೆ ತುಂಬು ಕುಟುಂಬದ 15 ಮನೆಗಳು ಜಲ ಸಾಕ್ಷರತೆಗೆ ಒಳಗಾಗಿದೆ.  ಓಣಿಕೆರೆಯ ಜಲ ನಿರ್ಮಾಣ ಸಂಸ್ಥೆಯ ಮುಖಾಂತರ, ಸರ್ಕಾರ ಹಾಗೂ ವಿಶ್ವಬ್ಯಾಂಕ್ ನೆರವಿನಿಂದ 4.50 ಲಕ್ಷ ರೂಪಾಯಿ ಮತ್ತು ಪ್ರತೀ ಮನೆಯ ಆರ್ಥಿಕ ಸಹಾಯವನ್ನು ಕ್ರೋಢೀಕರಿಸಿಕೊಂಡು, ಯೋಜನೆಯನ್ನು ಅನುಷ್ಟಾನಗೊಳಿಸಿಕೊಂಡಿದ್ದಾರೆ.

ಕನಿಷ್ಠ ಶೇಕಡಾ 40ರಂತೆ, ಪ್ರತಿ ಮನೆಯಲ್ಲೂ ನೀರಿನ ಉಳಿತಾಯ ಯೋಜನೆಯನ್ನು ಅಳವಡಿಸಿಕೊಂಡಿದೆ.  ಜೊತೆಗೆ, ವಾರ್ಷಿಕ ಬೀಳುವ 100ರಿಂದ 125 ಸೆಂ.ಮೀ ಮಳೆಯ ಶೇಖಡ 30 ರಿಂದ 40ರಷ್ಟು ನೀರನ್ನು ಭೂಮಿಯಲ್ಲಿ ಇಂಗಿಸಿಕೊಳ್ಳುವ ಪ್ರಕೃತಿ ಸಹಜ ರೀತಿಯ ವ್ಯವಸ್ಥೆಯನ್ನು ಮಾಡಿಟ್ಟುಕೊಂಡು ಬಂದಿದ್ದಾರೆ. 7, 8 ವರ್ಷದ ನಂತರ ಇಂಗುಗುಂಡಿಗಳ ಹೂಳೆತ್ತುವ ಕಾರ್ಯಕ್ಕೆ ಇದೀಗ ಚಾಲನೆ ನೀಡಲು ಸಜ್ಜಾಗುತ್ತಿದ್ದಾರೆ.100_0400

ಪಶ್ಚಾತ್ತಾಪ ಇವರಲ್ಲಿದೆ

‘ಬ್ರಿಟಿಷರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ನಾವು ಸದ್ಬಳಕೆ ಮಾಡಿಕೊಂಡಿಲ್ಲ.  ಒಂದು ಎಕ್ರೆ ಕೃಷಿ ಜಮೀನಿಗೆ 9 ಎಕ್ರೆ ಕಾಡು ಇದ್ದರೂ, ಅದರ ಅರ್ಥ ಗೊತ್ತಿಲ್ಲದೆ, ಶತಮಾನಗಳಿಂದಲೂ ಅದರ ದುರ್ಬಳಕೆ ಮಾಡಿಕೊಂಡೆವು.  ದಟ್ಟವಾದ ಕಾಡನ್ನು ಸತತವಾಗಿ ಕೊಳ್ಳೆ ಹೊಡೆಯುತ್ತಾ, ಹಸಿರೆಲೆ, ಕಟ್ಟಿಗೆ, ಮರ ಮಟ್ಟುಗಳನ್ನು ಬುದ್ಧಿಹೀನರಂತೆ ಬಳಸಿ ಕೊಂಡಿದ್ದರಿಂದ ಬೆಟ್ಟ ಬರಡಾಗಿತ್ತು.  ಬಾವಿ ಕೆರೆಯ ನೀರು ಒಣಗಿತ್ತು.  ಭೂಮಿಗೆ ನಾವು ಬಗೆದ ದ್ರೋಹಕ್ಕೆ ಅವಳೇ ನಮಗೆ ಬರದ ಮುನ್ಸೂಚನೆ ನೀಡಿದ್ದಳು.  ನಾವು ತಪ್ಪು ಮಾಡಿದ್ದೇವೆ, ತಪ್ಪೊಪ್ಪಿಕೊಳ್ಳುತ್ತೇವೆ.  ಪ್ರಾಯಶ್ಚಿತ್ತ ಯಾಗ ಮಾಡುತ್ತಿದ್ದೇವೆ.  ನಮ್ನನ್ನು ಮನ್ನಿಸು’ ಎನ್ನುತ್ತಿದ್ದಾರೆ.

ಮಳೆ ಮಾಪನವಿಶಿಷ್ಟ ನಿದರ್ಶನ

ಈ ಸಾಧನೆಯ ಹಿಂದೆ, ಅವನತಿಯ ಬಗ್ಗೆ ಎಚ್ಚರಿದ ಎಲೆಮರೆಯ ರೂವಾರಿಯಾಗಿದ್ದಾರೆ,  ಓಣಿಕೇರಿಯ ಅಂದಿನ ಹಿರಿಯಾಳು  ಗಣಪತಿ ಜಿ. ಹೆಗಡೆ.  ವಾರ್ಷಿಕ ಮಳೆಯ ಪ್ರಮಾಣವನ್ನು ಅಳೆಯುತ್ತಾ, ಮುಂದೆ ಸಂಭವಿಸಬಹುದಾದ ದುರಂತಕ್ಕೆ ಎಚ್ಚರಿಕೆಯ ಘಂಟೆ ಕೊಡುತ್ತಾ ಬಂದಿದ್ದರು.  ಇಂಗ್ಲಿಷ್ ಮಳೆ, ಪಾರಂಪರಿಕ ನಕ್ಷತ್ರ ಮಳೆ ಇಲ್ಲಿ ಸ್ಪಷ್ಟವಾಗಿ ದಾಖಲಿಸಿ ಕೊಂಡಿರುವುದು ಒಂದು ವಿಶಿಷ್ಟ ನಿದರ್ಶನವೂ ಹೌದು.  ಒಮ್ಮೆ ಸರ್ಕಾರಿ ಶಾಲೆಯೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಳೆಮಾಪನವನ್ನು ಕಂಡ ಹೆಗಡೆಯವರು ಆಸಕ್ತಿ ಹೊಂದಿ, ಹೊಸ ಮಾಪನವನ್ನು ಮನೆಯ ಹಿತ್ತಲಿನಲ್ಲಿ ಅಳವಡಿಸಿಕೊಂಡು ಮಳೆ ಪ್ರಮಾಣ ದಾಖಲೀಕರಿಸಿಕೊಳ್ಳುತ್ತಾ ಬಂದಿದ್ದಾರೆ.

 ಚಿತ್ರ-ಲೇಖನ: ಕೆ. ಶಶಿಧರ ಹೆಮ್ಮಣ್ಣ, ಉಡುಪಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*