ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವರ್ಷ ಬರಗಾಲ ಪರಿಸ್ಥಿತಿ ಇದ್ದ ಕಾರಣ ನೀರಿಗಾಗಿ ಪರದಾಟ ಶುರುವಾಗಿದ್ದು, ಸಮರ್ಪಕವಾಗಿ ನೀರು ಪೂರೈಸುವುದು ಅತ್ಯಂತ ಕಷ್ಟಕರವಾಗಿದೆ ಮತ್ತು  ಕುಡಿಯುವ ನೀರಿಗಾಗಿ ಏಪ್ರಿಲ್-ಮೇ ತಿಂಗಳಲ್ಲಿ ತುಂಬಾ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಅಂತರ್ಜಲ ಮಟ್ಟದ ಕುಸಿತದಿಂದ ಎಷ್ಟೋ ಕೊಳವೆಬಾವಿಗಳಲ್ಲಿ ನೀರಿನ ಕಡಿಮೆ ಲಭ್ಯತೆ, ವಿದ್ಯುತ್ ಕೊರತೆಯಿಂದ ಪಂಪಸೆಟ್ ಕೊಳವೆಬಾವಿ ಸುಟ್ಟು ಹೋಗುವುದು. ಹೀಗೆ ದಿನೇ ದಿನೇ ನೀರಿನ ಸಮಸ್ಯೆ ಹಳ್ಳಿಗಳಲ್ಲಿ ಉಲ್ಬಣಗೊಳ್ಳುತ್ತಿವೆ. ಇದಲ್ಲದೇ ಟ್ರ್ಯಾಕ್ಟರ್‌ಗಳ ಮೂಲಕ ನೀರು ಪೂರೈಕೆ, ನೀರಿಗಾಗಿ ಜಗಳ, ಕೃಷಿ ಕೆಲಸ ಕಾರ್ಯ ಬಿಟ್ಟು ನೀರಿನ ಪೂರೈಕೆಗಾಗಿ ಸಮಯ ವ್ಯರ್ಥ ಮಾಡುತ್ತಾರೆ. ರೈತರು ಸಾಕು ಪ್ರಾಣಿಗಳಿಗೆ ನೀರು ಮತ್ತು ಮೇವು ಒದಗಿಸಲು ಕಷ್ಟಪಡುತ್ತಿರುವುದು ದಿನ ನಿತ್ಯ ನೋಡಬಹುದು. ನೀರು ಮಾನವನ ಜೀವನಾವಶ್ಯಕ ವಸ್ತುವಾಗಿದ್ದು, ಅದರಲ್ಲೂ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯಿಂದಾಗಿ ಜನರ ಕಾರ್ಯಕ್ಷಮತೆ ಹಾಗೂ ಆರೋಗ್ಯ ಸುಧಾರಿಸುವುದಲ್ಲದೇ ಉತ್ಪಾದಕತೆಯೂ ಸಹ ಹೆಚ್ಚುತ್ತದೆ ಎಂದು ಅನೇಕ ಸಂಶೋಧನಾ ಅಧ್ಯಯನಗಳಿಂದ ದೃಢಪಟ್ಟಿದೆ. ವಿಶ್ವ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಲೀ. ಜಾಂಗ ಹುಕ್ಕೆರವರ ಪ್ರಕಾರ “ನೀರು ಜನರ ಆರೋಗ್ಯದ ಪ್ರಾಥಮಿಕ ಸಂಚಾಲಕವಾಗಿದ್ದು, ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಜನರಿಗೆ ಒದಗಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು,” ಎಂದು ತಿಳಿಸಿದ್ದಾರೆ. ಮಾನವನು ಆಹಾರವಿಲ್ಲದೇ ಕೆಲವು ದಿನಗಳ ಕಾಲ ಬದುಕಬಹುದು. ಆದರೆ ಕುಡಿಯುವ ನೀರಿಲ್ಲದೇ ಆತನು ಒಂದು ದಿನವೂ ಬದುಕಲು ಅಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಔದ್ಯೋಗೀಕರಣ, ನಗರೀಕರಣ ಮತ್ತು ಬರಗಾಲಗಳಿಂದ ಸುರಕ್ಷಿತ ನೀರನ್ನು ಪಡೆಯುವುದು ಒಂದು ದೊಡ್ಡ ಸವಾಲಾಗಿದೆ. ಇದಲ್ಲದೇ ನೀರಿನ ಮೇಲಿನ ಹೆಚ್ಚಿನ ಅವಲಂಬನೆಯಿಂದಾಗಿ ಫ್ಲೋರೈಡ್ ಮತ್ತು ಕಬ್ಬಿಣಯುಕ್ತ ನೀರು ಬಳಕೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಇದರಿಂದಾಗಿ ಜನರು ಪ್ರತಿವರ್ಷ ಕಾಲರಾ, ಅತಿಸಾರ ಮತ್ತು ಜಂತುಹುಳುಗಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಉಪ್ಪು ಮಿಶ್ರಿತ ನೀರು, ಬೆಂಗಳೂರು ಮತ್ತು ಮೈಸೂರು ವಲಯಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಹಾಗೂ ಉತ್ತರ ಕರ್ನಾಟಕ, ಹೈದರಾಬಾದ್-ಕರ್ನಾಟಕ ಮತ್ತು ಬೆಳಗಾವಿ ಪ್ರಾಂತ್ಯಗಳಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್‌ಯುಕ್ತ ನೀರನ್ನು ನಾವು ನೋಡಬಹುದು. ಕುಡಿಯುವ ನೀರಿನಲ್ಲೂ ಅತಿಯಾದ ಫ್ಲೋರೈಡ್ ಮತ್ತು ಆರ್ಸೆನಿಕ್‌ಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ, ವಿಜಾಪುರಗಳಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಜನರು ಮೂಳೆ ಸವೆತ, ಕಾಲುಗಂಟು ನೋವು, ಹಲ್ಲು ಸವೆಯುವುದು, ಕಲೆ, ಕೂದಲು ಉದುರುವುದು ಮತ್ತು ಬೇಗ ಬಿಳಿಯಾಗುವುದು, ಅಲ್ಲದೇ ನೀರಿನ ಸಂಬಂಧಪಟ್ಟ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಸುಮಾರು ೧೦೦೦ ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮ ಪಂಚಾಯತಗಳಲ್ಲಿ ೨೦೧೩-೧೪ನೇ ಸಾಲಿನಲ್ಲಿ ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ (೨ ರೂ.ಗೆ ೨೦ ಲೀ) ಕುಡಿಯುವ ನೀರನ್ನು ೨೦ ಲೀಟರ್ ಬಾಟಲ್‌ಗಳಲ್ಲಿ ಸಂಗ್ರಹಣೆ ಮಾಡಲು ಅವಕಾಶ ನೀಡಿತು. ಕಳೆದ ವಾರ ಪುನಃ ೧೦೦೦ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಚಾಲನೆ ನೀಡಿತು. ಇದಲ್ಲದೆ, ಈ ವರ್ಷ ಏಪ್ರಿಲ್ ಒಳಗೆ ಸುಮಾರು ೭೦೦೦ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕದ ಅನುಕೂಲಗಳು ಮತ್ತು ಅನಾನುಕೂಲಗಳು

pure drinking water for villages - for article sent by Priyaಈಗಾಗಲೇ (೨೦೧೩-೧೪ನೇ ಸಾಲಿನಲ್ಲಿ) ಸ್ಥಾಪಿತವಾದ ಸುಮಾರು ೧೦೦೦ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕೆಲವು ಗ್ರಾಮೀಣ ಜನರು ಪ್ರಯೋಜನ ಪಡೆದಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಕ್ಕಳ ಮತ್ತು ಮನೆಯವರ  ಆರೋಗ್ಯ ಹದಗೆಟ್ಟಾಗ, ಈ ಶುದ್ಧ ನೀರಿನ ಘಟಕಗಳು ನೀರನ್ನು ಕಡಿಮೆ ದರದಲ್ಲಿ ೨ ರೂ.ಗಳಿಗೆ ೨೦ ಲೀಟರ್ ಬಾಟಲಿಯಂತೆ ತಂದು ಕುಡಿಯುತ್ತಾರೆ. ಗ್ರಾಮೀಣ ಪ್ರದೇಶದಲ್ಲಿರುವ ಅನುಕೂಲಸ್ಥ ಕುಟುಂಬಗಳು ಈ ನೀರನ್ನೇ ಕುಡಿಯುವ ರೂಢಿ ಮಾಡಿಕೊಂಡಿವೆ. ಇದಲ್ಲದೆ, ಹಳ್ಳಿಯ ಶಾಲೆಗಳಲ್ಲಿಯೂ ಸಹ ಈ ನೀರನ್ನೇ ಬಳಸುತ್ತಿದ್ದಾರೆ. ಇದಕ್ಕೆ ಪಂಚಾಯತ್ ವತಿಯಿಂದ ಸಿಬ್ಬಂದಿ ನೇಮಕಗೊಳಿಸಬೇಕೆಂದಿಲ್ಲ. ಜನರು ಅವರ ಅನುಕೂಲಕ್ಕೆ ತಕ್ಕಂತೆ ಬಂದು ೨ರೂ. ಚಿಲ್ಲರೆಯನ್ನು ಹಾಕಿ ನೀರನ್ನು ತೆಗೆದುಕೊಂಡು ಹೋಗಬಹುದು. ಗ್ರಾಮ ಪಂಚಾಯತ್ ಹತ್ತಿರವಿರುವ ಕುಟುಂಬಗಳು ಹೆಚ್ಚು ಅನುಕೂಲತೆ ಪಡೆದಿವೆ.

ಈ ಕುಡಿಯುವ ನೀರಿನ ಘಟಕ ಸ್ಥಾಪಿಸಲು ೨೦x೩೦ರ (೬೦೦ ಚ. ಮೀ.) ವಿಸ್ತೀರ್ಣದ ಜಾಗದ ಅವಶ್ಯಕತೆ ಇದೆ. ಆದರೆ ಕೆಲವೊಂದು ಗ್ರಾಮ ಪಂಚಾಯತಗಳು ತಮ್ಮ ಸ್ವಂತ ಕಟ್ಟಡ ಕಟ್ಟಿಸಿಕೊಳ್ಳಲು ಜಾಗದ ಸಮಸ್ಯೆಯಿರುವುದರಿಂದ, ಈ ಶುದ್ಧ ನೀರಿನ ಘಟಕಕ್ಕೆ  ಜಾಗ ನೀಡಲು ಕಷ್ಟಪಡುತ್ತಿವೆ. ರಾಜ್ಯದಲ್ಲಿ ಹೆಚ್ಚಿನ ಗ್ರಾಮ ಪಂಚಾಯತಗಳು ೨ರಿಂದ ೪ ಹಳ್ಳಿಗಳನ್ನು ಒಳಗೊಂಡಿದ್ದರೆ, ಕೆಲವು ಪಂಚಾಯತಗಳು ೪ರಿಂದ ೫ ಹಳ್ಳಿಗಳನ್ನು ಒಳಗೊಂಡಿವೆ. ಈ ಶುದ್ಧ ಕುಡಿಯುವ ನೀರಿನ ಘಟಕಗಳು ಕೇವಲ ಗ್ರಾಮ ಪಂಚಾಯತ್ ಹತ್ತಿರ ಕಟ್ಟಿಸಿಕೊಂಡಿರುವುದರಿಂದ, ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಇತರೇ ಹಳ್ಳಿಗಳಿಗೆ ಈ ಸೌಲಭ್ಯ ಪಡೆಯಲು ಕಷ್ಟ ಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಬಡವರು ಹೆಚ್ಚಾಗಿ ಇರುವುದರಿಂದ, ಕುಡಿಯುವ ನೀರಿಗೆ ವೆಚ್ಚ ಮಾಡುವುದು ಅಸಾಧ್ಯವಾಗಿದೆ. ಹೆಚ್ಚಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇರೆ ಜಿಲ್ಲೆಯ ಗುತ್ತಿಗೆದಾರರು/ ಖಾಸಗಿ ಏಜೆನ್ಸಿಗಳು ವಹಿಸಿಕೊಂಡಿದ್ದು, ಕೇವಲ ಮೇಲ್ವಿಚಾರಣೆ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ಮಾಡುತ್ತದೆ.

ಆದರೆ, ಖಾಸಗಿ ಏಜೆನ್ಸಿಗಳು ಗ್ರಾಮ ಪಂಚಾಯತಗಳಿಗೆ ಶುದ್ಧ ನೀರಿನ ಘಟಕಗಳ ಯಂತ್ರೋಪಕರಣಗಳನ್ನು ತಂದು ಅಳವಡಿಸಿ ಹೋಗುತ್ತಾರೆ ಮತ್ತು ರಿಪೇರಿಗಳಿಗೆ, ನಿರ್ವಹಣೆಗಳಿಗೆ ಮತ್ತೆ ಬರುವುದೇ ಇಲ್ಲ. ಕೆಲವು ಪಂಚಾಯತಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ, ಸುಮಾರು ೧೦ ಲಕ್ಷ ಮೌಲ್ಯದ ಶುದ್ಧ ನೀರಿನ ಘಟಕಗಳು ಕೆಲಸ ಮಾಡದೇ ಸ್ಥಗಿತಗೊಂಡಿವೆ ಹಾಗೂ ಹೆಚ್ಚಿನ ಘಟಕಗಳಲ್ಲಿ ಬಾಗಿಲು ಮುರಿದು, ಕಿಟಕಿ ಮುರಿದು ಒಡೆದು ಹೋಗಿದೆ.. ಹೆಚ್ಚಿನ ಗ್ರಾಮ ಪಂಚಾಯತ್ ಅಧಿಕಾರಿಗಳ ಪ್ರಕಾರ, ಈ ಘಟಕವನ್ನು ಬೇರೆ ಜಿಲ್ಲೆಯ ಮತ್ತು ಬೇರೆ ರಾಜ್ಯಗಳ  ಗುತ್ತಿಗೆದಾರರು ವಹಿಸಿಕೊಂಡಿದ್ದು, ರಿಪೇರಿ ಬಂದಾಗ ಎಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಬರುವುದಿಲ್ಲ. ಅಲ್ಲದೆ, ಕೇವಲ ಒಂದು ಘಟಕದ ರಿಪೇರಿಯ ವೆಚ್ಚ ಜಾಸ್ತಿಯಾಗುವುದರಿಂದ, ನಿರ್ವಹಣೆ ತುಂಬಾ ಕಷ್ಟವಾಗುತ್ತದೆ. ಎಷ್ಟೋ ಪಂಚಾಯತಗಳಲ್ಲಿ ತೆರಿಗೆ ಸಂಗ್ರಹ ೧೦ರಿಂದ ೨೦ ಪ್ರತಿಶತದಷ್ಟು ಇದ್ದಾಗ ನೀರು ಬಿಡುವವನ ಸಂಬಳ ನೀಡುವುದೇ ಕಷ್ಟದ ಪರಿಸ್ಥಿತಿ! ಇಂತಹ ಸಂದರ್ಭದಲ್ಲಿ, ಇನ್ನು ರಿಪೇರಿಯ ವೆಚ್ಚ ಬಂದಾಗ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮತ್ತಷ್ಟು ಭಾರವಾಗಿದೆ. ಹೀಗೆ ಹೆಚ್ಚಿನ ಘಟಕಗಳು ಕಳಪೆ ನಿರ್ವಹಣೆ, ತಂತ್ರಜ್ಞಾನದ ಕೊರತೆ, ಸಮರ್ಪಕವಾದ ವಿದ್ಯುತ್ ಹಾಗೂ ನೀರಿನ ಪೂರೈಕೆ ಕೊರತೆಯಿಂದ, ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿವೆ.

ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಚಾಲನೆ ನೀಡಿದ್ದು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎನ್ನುವ ಗಾದೆಯ ಹಾಗೆ ನೀರಿನ ಅವಶ್ಯಕವಿರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಒತ್ತು ನೀಡುವುದನ್ನು ಬಿಟ್ಟು, ಶುದ್ಧ ನೀರಿನ ಘಟಕಗಳ ನಿರ್ಮಾಣಕ್ಕೆ ಕೈ ಹಾಕಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರ ಶುದ್ಧ ನೀರಿನ ಘಟಕಗಳಿಗೆ ಹಣ ವೆಚ್ಚ ಮಾಡುವುದು ಬಿಟ್ಟು, ಬರಗಾಲ ಎದುರಿಸುತ್ತಿರುವ ರಾಜ್ಯದ ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯತಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳಿಗೆ ಮಳೆನೀರು ಕೊಯ್ಲು ಅಳವಡಿಸುವಲ್ಲಿ ಸಲಹೆ, ಕೆರೆಗಳನ್ನು ಹೂಳೆತ್ತುವುದು, ಸಾಂಪ್ರದಾಯಿಕ ನೀರಿನ ಮೂಲಗಳಾದ ತೆರೆದ ಬಾವಿ, ನೀರಿನ ಹೊಂಡ, ಕೃಷಿಹೊಂಡ, ಕೆರೆ ರಕ್ಷಣೆ/ಜೀರ್ಣೋದ್ಧಾರ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ತಾಂತ್ರಿಕತೆ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಬೇಕು. ಪ್ರತಿ ಗ್ರಾಮ ಪಂಚಾಯತಗಳು ನೀರಿನ ಬಳಕೆದಾರರ ಶುಲ್ಕವನ್ನು ಶೇ. ೧೦೦ಕ್ಕೆ ವಸೂಲಾತಿ ಮಾಡಿ ಪ್ರತಿ ಮನೆಮನೆಗಳಿಗೂ ಗುಣಮಟ್ಟದ ನೀರಿನ ಸೌಲಭ್ಯವನ್ನು ಒದಗಿಸುವುದರಿಂದ ಹಾಗೂ ಇದನ್ನು ಒದಗಿಸಲು ಪಂಚಾಯತಗಳು, ಸ್ಥಳೀಯ ಸಂಘ ಸಂಸ್ಥೆ, ಎನ್.ಜಿ.ಓ. ಮತ್ತು ಸಮುದಾಯದವರ ಜೊತೆ ಸೇರಿ ನೀರನ್ನು ಕುರಿತಾದ ಸಮಗ್ರ ಯೋಜನೆಯನ್ನು ರೂಪಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಹೀಗೆ ನೀರಿನ  ಉತ್ತಮ ಯೋಜನೆಗಳನ್ನು ರೂಪಿಸಿ, ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಜೊತೆಗೆ, ದಿನನಿತ್ಯ ಬಳಸಲು, ಅದರಲ್ಲೂ ಸ್ನಾನ ಮತ್ತು ಅಡುಗೆ ಮಾಡಲು ಸಹ ಶುದ್ಧವಾದ ನೀರು ಒದಗಿಸುವುದರಿಂದ, ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಪಡೆಯಲು ಮತ್ತು ಜೀವನಮಟ್ಟದ ಸುಧಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಗಳು ಶುದ್ಧ ನೀರಿನ ಘಟಕಗಳನ್ನು ಎಲ್ಲಾ ಕುಟುಂಬಗಳಿಗೂ ಅನುಕೂಲವಾಗುವಂತೆ ನಿರ್ಮಿಸಿ, ಇದರಿಂದ ಎಲ್ಲಾ ಗ್ರಾಮ ಹಾಗೂ ಎಲ್ಲಾ ಸಮುದಾಯದವರಿಗೂ ಪಂಚಾಯತ್ ನೀರನ್ನು ವಾಹನಗಳ ಮೂಲಕ ದಿನಕ್ಕೊಂದು ಬಾರಿ ಸೇವೆ ಒದಗಿಸಬೇಕು. ಹೀಗೆ ಪ್ರತಿ ಕುಟುಂಬವೂ ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವುದರ ಜೊತೆಗೆ, ನೀರಿನ ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಭಾಗಿಯಾಗಿ, ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು!

ಚಿತ್ರ-ಲೇಖನ: ಡಾ. ನಾರಾಯಣ ಬಿಲ್ಲವ, ಸಂಶೋಧಕರು, ಅಬ್ದುಲ್ ನಜೀರಸಾಬ್ ಪಂಚಾಯತ್ ರಾಜ್ ಪೀಠ,

ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪಮೆಂಟ್ ರಿಸರ್ಚ್ (ಸಿ.ಎಮ್.ಡಿ.ಆರ್. ಸಂಸ್ಥೆ,) ಧಾರವಾಡ.

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*