ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೯: ಹನಿ ಹನಿ ನೀರು ಉಳಿಸಲು ‘ಯುವ’ ಪ್ರತಿಜ್ಞೆ!

ಬೆಂಗಳೂರಿನಲ್ಲಿ ಜಲಮೂಲವೆಂದರೆ ಕೆರೆಗಳು. ಅವುಗಳ ಅವಸಾನದ ಬಗ್ಗೆ, ಅವುಗಳ ಪರಿಸ್ಥಿತಿ ಬಗ್ಗೆ ಅನೇಕರಿಗೆ ಈಗಾಗಲೇ ಅರಿವಿದೆ. ಸರಕಾರ ಈ ಜಲಮೂಲಗಳನ್ನು ಸಂರಕ್ಷಿಸುತ್ತದೆ ಎಂಬ ನಂಬಿಕೆಗಳು ಕ್ಷೀಣಿಸುತ್ತಲೇ ಇದೆ. ನಾಗರಿಕರ ಪಾತ್ರ ಇಲ್ಲದೆ ಸಾಧ್ಯವೇ ಇಲ್ಲದಂತಹ ಪರಿಸರ ಕಾರ್ಯ ಇದು.  ಆದರೆ, ಯುವ ಜನಾಂಗ ಎಚ್ಚೆತ್ತುಕೊಳ್ಳದೆ ಏನೂ ಸಾಧ್ಯವಿಲ್ಲ. ಇಂತಹ ಪ್ರಯತ್ನಗಳಿಗೆ ಇದೀಗ ಯುವಕರು, ಅದರಲ್ಲೂ ವಿದ್ಯಾರ್ಥಿಗಳು ಮುಂದಾಗುತ್ತಿರುವುದು ಜಲಮೂಲಗಳಿಗೆ ಮೂಡಿರುವ ಆಶಾಕಿರಣ. ಈ ಕಿರಣಗಳು ಪ್ರಖರವಾಗಿ ಪ್ರಕಾಶಿಸಿ, ರಾಜ್ಯಾದ್ಯಂತ ಪ್ರತಿಮೂಲೆಯಲ್ಲೂ ಹರಡಿಕೊಳ್ಳಬೇಕಿದೆ. ಇದಕ್ಕೆ ಪ್ರೋತ್ಸಾಹವೂ ಅಗತ್ಯ.

ಪರಿಸರ ಕಾರ್ಯದಲ್ಲಿ ಸಾಕಷ್ಟು ಹೋರಾಟಗಳು ಹಾಗೂ ಚಟುವಟಿಕೆಗಳು ಸಂರಕ್ಷಣೆ ನಿಟ್ಟಿನಲ್ಲಿ ನಡೆಯುತ್ತಲೇ ಇವೆ. ಇವುಗಳಲ್ಲಿ ಪ್ರಚಾರಕ್ಕೆ ಮಾಡುವ ಕಾರ್ಯಗಳೂ ಸಾಕಷ್ಟಿವೆ. ಕಂಡೂ ಕಾಣದಂತೆ ಈ ಚಟುವಟಿಕೆಗಳಲ್ಲಿ ಭಾಗವಹಿಸಿದ “ಶಕ್ತಿಶಾಲಿ” ವರ್ಗವೂ ಇದೆ. ಆದರೆ, ತಮ್ಮ ಕೈಯಲ್ಲಾಗುವ ಅಳಿಲು ಸೇವೆಯನ್ನು ಯಾವ ಬಡಾಯಿಯನ್ನೂ ಕೊಚ್ಚಿಕೊಳ್ಳದೆ ಮಾಡುವ ಸಂಘ-ಸಂಸ್ಥೆಗಳು ಅನೇಕ. ಇದರಲ್ಲಿ ಇದೀಗ ಶಾಲಾ-ಕಾಲೇಜುಗಳು ಸೇರಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನಾರ್ಹ ಹಾಗೂ ಉತ್ತೇಜನಕಾರಿ. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯಂತಹ ಅದರಲ್ಲೂ ಜಲಮೂಲಗಳನ್ನು ರಕ್ಷಿಸಿ ನೀರು ರಕ್ಷಿಸುವ ಜವಾಬ್ದಾರಿ ಮೂಡಿರುವುದು ಪ್ರಶಂಸನೀಯ. ಇದು ಎಲ್ಲೆಡೆ ಸರಿಸಬೇಕೆಂಬುದೇ ಆಶಯ. ಈ ನಿಟ್ಟಿನಲ್ಲಿ ಇಲ್ಲಿದೆ ಒಂದು ಉದಾಹರಣೆ.

Horizon“ಒಂದು ಸಾವಿರ ಅಡಿ ಆಳದಲ್ಲಿ ಹನಿ ನೀರಿಲ್ಲ. ಅಂvರ್ಧಾನವಾಗಿದೆ ಬೆಂಗಳೂರಿನ ಅಂತರ್ಜಲ” ಇಂತಹ ವಸ್ತುಸ್ಥಿತಿಯನ್ನು ಎಲ್ಲರಿಗೂ ತಿಳಿಸುವ ಅದರಲ್ಲೂ ಯುವಕರಿಗೆ ತಿಳಿಸಿ, ಹನಿ ಹನಿ ನೀರನ್ನೂ ಉಳಿಸುತ್ತೇವೆ ಎಂದು ಪ್ರತಿಜ್ಞೆ ಮಾಡುವಂತಹ ಕಾರ್ಯಕ್ರಮವನ್ನು ನ್ಯೂ ಹೊರೈಜ಼ನ್ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದರು. ಜಗತ್ತಿನ ಇತರೆಲ್ಲ  ನಗರಗಳಂತೆಯೇ ಬೆಂಗಳೂರು ಸಹ ಗಂಭೀರ ನೀರಿನ ಸಮಸ್ಯೆಯ ಸುಳಿಗೆ ಸಿಲುಕಿದೆ. ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಲಭ್ಯ ನೀರಿನ ಮೂಲಗಳು ಸಾಕಾಗದೇ ಪರ್ಯಾಯ ಜಲ ಮೂಲಗಳತ್ತ ದೃಷ್ಟಿ ಹರಿಸಿರುವ ರಾಜ್ಯ ಸರ್ಕಾರವು ಸುಮಾರು ೩೫೦ ಕಿ.ಮೀ. ದೂರದ ಶರಾವತಿಯಿಂದ ನೀರು ತರುವ ಬಗ್ಗೆ ಆಲೋಚನೆ ಆರಂಭಿಸಿದೆ. ಇನ್ನು ಬೆಂಗಳೂರಿನ ಅಂತರ್ಜಲವಂತೂ ಅಂತರ್ಧಾನವಾಗಿದೆ, ೧೦೦೦ ಅಡಿ ಆಳಕ್ಕಿಳಿದರು ಜಲ ದರ್ಶನ ದುರ್ಲಭವೆನಿಸಿದೆ. ಇದೇ ವೇಳೆ ಬೆಂಗಳೂರು ನಾಗಾಲೋಟದಿಂದ ಬೆಳೆಯತೊಡಗಿದ್ದು, ನೀರಿನ ಬೇಡಿಕೆ  ತೀವ್ರವಾಗಿ ಏರುತ್ತಿದೆ. ಹೀಗಾಗಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯೆಂದರೆ, ಬೆಂಗಳೂರಿನ ನೀರಿನ ಸಮಸ್ಯೆ ಯಾವ ದಿಸೆಯಲ್ಲಿ ಸಾಗುತ್ತಿದೆ ಮತ್ತು ಯಾವ ಹಂತವನ್ನು ಮುಟ್ಟಲಿದೆ. ಈ ಮೂಲಕ ವಿದ್ಯಾರ್ಥಿಗಳ ಕಾಳಜಿ ಹಾಗೂ ಆತಂಕವನ್ನು ವ್ಯಕ್ತಪಡಿಸಿದ್ದಾರೆ.  ಅಷ್ಟೇ ಅಲ್ಲ, ಈ ದ ನ್ಯೂ ಹೊರೈಜ಼ನ್ ಕಾಲೇಜ್ ಆಫ್ ಎಂಜಿನಿಯರಿಂಗ್ (ಎನ್‌ಎಚ್‌ಸಿಇ)ನ ಸಾವಿರಾರು ವಿದ್ಯಾರ್ಥಿಗಳು ಒಗ್ಗೂಡಿ ಹನಿ ಹನಿ ನೀರನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ಕೈಗೊಂಡರು.

ಒಂದು ಹನಿ ಅಲೆ ಸಷ್ಟಿಸುವ ಸಾಮರ್ಥ್ಯ ಹೊಂದಿದೆ. ಹೀಗೆ ವಿದ್ಯಾರ್ಥಿಗಳು ಆರಂಭಿಸಿದ ಈ ಜಲ ಸಂರಕ್ಷಣೆ ಆಂದೋಲನ ಇಡೀ ನಗರದಲ್ಲಿ ಹೊಸ ಜಾಗೃತಿ ಮೂಡಿಸಲಿದೆ. ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹ, ಹಾಗೂ ಜಲ ಸಂರಕ್ಷಿತ ಬಡಾವಣೆಗಳ ಅಭಿವೃದ್ಧಿ ದಿಸೆಯಲ್ಲಿ ಎನ್‌ಎಚ್‌ಸಿಇಯು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ತನ್ಮೂಲಕ ಬೆಂಗಳೂರು ನಾಗರೀಕರಲ್ಲಿ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ತನ್ನ ಪಾಲು ಸಲ್ಲಿಸಿದೆ ಎಂದು ಎಚ್‌ಎಚ್‌ಸಿಇ ಪ್ರಾಂಶುಪಾಲ ಡಾ. ಮಂಜುನಾಥ ಹೇಳುವ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ವಿಶ್ವ ಜಲ ಸಂರಕ್ಷಣೆ ದಿನಾಚರಣೆ ಅಂಗವಾಗಿ ನೀರು ಹಾಗೂ ಕೆಲಸಕ್ಕೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರ ಪ್ರದರ್ಶನವನ್ನು ಎನ್‌ಎಚ್‌ಸಿಇ ಆಯೋಜಿಸಿತ್ತು. ಇದಲ್ಲದೆ, ಜಲ ಸಂರಕ್ಷಣೆ ಮಹತ್ವ ಸಾರುವ ಪೋಸ್ಟರ್ ಪ್ರದರ್ಶನ, ಫೇಸ್ ಪೆಂಟಿಂಗ್, ಮೈಮ್ ಪ್ರದರ್ಶನ, ಬೀದಿ ನಾಟಕಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಇದಷ್ಟೇ ಅಲ್ಲ, ಈ ಜಾಗೃತಿ ವೇಳೆಯಲ್ಲಿ ನಾವು ಎದುರಿಸುತ್ತಿರುವ ಸಂಕಷ್ಟದ ಕೆಲವು ಉದಾಹರಣೆಗಳನ್ನೂ ಅಂಕಿ-ಅಂಶಗಳೊಂದಿಗೆ ‘ನಿಮಗಿದು ಗೊತ್ತೇ? ಎಂದು ಕೇಳುವ ಮೂಲಕ ನೀಡಿದ್ದಾರೆ. ಅವುಗಳೆಂದರೆ, ೧೦ರಲ್ಲಿ ಒಬ್ಬರು ಶುದ್ದ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ವಿಶ್ವಾದ್ಯಂತ ಸುಮಾರು ೧೨೫ ದಶಲಕ್ಷ ಗಂಟೆಗಳನ್ನು ನೀರು ಸಂಗ್ರಹಕ್ಕಾಗಿ ಮಹಿಳೆಯರು ಹಾಗೂ ಮಕ್ಕಳು ವ್ಯಯ ಮಾಡುತ್ತಾರೆ. ಜಲ ಸಂಬಂಧಿ ಕಾಯಿಲೆಗಳಿಂದ ಪ್ರತಿ ೯೦ ಸೆಕೆಂಡ್‌ಗೆ ಒಂದು ಮಗು ಸಾವನ್ನಪ್ಪುತ್ತದೆ. ೨೦೨೫ ವೇಳೆಗೆ ವಿಶ್ವದ ೧.೮ ಶತಕೋಟಿ ಜನರು ನೀರಿನ ಕೊರತೆ ಸಮಸ್ಯೆಯಿಂದ ಬಳಲಿದ್ದಾರೆ. ಕೈಗಾರಿಕೆ ದುರ್ಬಳಕೆ ದೆಸೆಯಿಂದಾಗಿ ಚೀನಾ ದೇಶದ  ಶೇ. ೫೫ರಷ್ಟು ನದಿಗಳು ಕೇವಲ ಕಳೆದ ೨೦ ವರ್ಷಗಳಲ್ಲಿ ಕಣ್ಮರೆಯಾಗಿವೆ. ೨೦೨೦-೨೦೫೦ರ ಅವಧಿಯಲ್ಲಿ ಉತ್ಪಾದನಾ ವಲಯವೊಂದರಲ್ಲೇ ನೀರಿನ ಬೇಡಿಕೆ ಶೇ. ೪೦೦ ಪಟ್ಟು ಹೆಚ್ಚಾಗಲಿದೆ. ಹೌದು, ಇಂತಹ ವಿಷಯಗಳನ್ನು ಜನರಿಗೆ ಅವರ ಮನಕ್ಕೆ ತಲುಪಿಸಬೇಕಾದ ಅಗತ್ಯ ಇಂದಿನ ತುರ್ತು ಅನಿವಾರ್ಯ. ಇದರಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಒಬ್ಬ ವಿದ್ಯಾರ್ಥಿಗೆ ಇಂತಹ ವಿಷಯ ಮನದಟ್ಟಾಗಿ ಹನಿ ನೀರು ಉಳಿಸುತ್ತೇನೆ ಎಂಬುದನ್ನು ಕಾರ್ಯಗತ ಮಾಡಿಕೊಂಡರೆ, ಅವನ ಇಡೀ ಕುಟುಂಬ ಈ ಕೆಲಸದಲ್ಲಿ ತೊಡಗುತ್ತದೆ. ಇದನ್ನು ಎಲ್ಲ ವಿದ್ಯಾರ್ಥಿಗಳಲ್ಲೂ ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದಾಗಿ, ಜಲಮೂಲಗಳನ್ನು ರಕ್ಷಿಸುವಲ್ಲಿ ಹೆಚ್ಚಿನ ಪ್ರೋತ್ಸಾಹವನ್ನೂ ನೀಡಬೇಕಾಗಿದೆ. ಆಗ ಜಲಮೂಲಗಳಿಗೆ ‘ಯುವಶಕ್ತಿ’ ದೊರೆಯುತ್ತದೆ. ರಕ್ಷಣೆ ಹಾಗೂ ಪುನಶ್ಚೇತನ ಕಾರ್ಯಕ್ಕೆ ಚೈತನ್ಯ ಸಿಕ್ಕಿದಂತಾಗುತ್ತದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*