ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಡೋಭಾಯ್ ಎಂಬ ಜಲಯೋಧನ ಸಾಹಸಗಾಥೆ

ದೇಶದ ೧೦ಕ್ಕೂ ಹೆಚ್ಚು ರಾಜ್ಯಗಳು ಈ ಬಾರಿ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಹಲವೆಡೆ ಆಧುನಿಕ ಭಗೀರಥರು ತಮ್ಮ ಸ್ವಪ್ರಯತ್ನದಿಂದ ಬರ ಪರಿಸ್ಥಿತಿ ನೀಗಲು ಹಲವು ಬಗೆಯ ಸಾಹಸ ಕ್ರಮಗಳನ್ನು ಕೈಗೊಂಡ ನೈಜ ಘಟನೆಗಳನ್ನು ನಾವು ಕೇಳಿದ್ದೇವೆ. ಇಂತಹದೇ ಸಾಹಸಗಾಥೆಗಳು ಸಾಕಷ್ಟಿವೆ. ೧೮ ವರ್ಷಗಳ ಹಿಂದೆ ಗುಜರಾತಿನ ಸೌರಾಷ್ಟ್ರ ಪ್ರದೇಶ ತೀವ್ರ ಬರಪೀಡಿತವಾಗಿದ್ದಾಗ ಅಲ್ಲಿನ ಒಬ್ಬ ಪಿಯುಸಿ ಪಾಸಾದ ಸಾಮಾನ್ಯ ವ್ಯಕ್ತಿ ಆ ಪ್ರದೇಶದ ಬರ ಪರಿಸ್ಥಿತಿ ಪರಿಹಾರಕ್ಕೆ ತನ್ನದೇ ಆದ ವಿಧಾನವನ್ನು ಆವಿಷ್ಕರಿಸಿದ್ದ. ಆತನೇ ಮನ್‌ಸುಖ್ ಭಾಯ್ ಸುವಗಿಯಾ. ಆದರೆ ಆತ ‘ಚೆಕ್‌ಡ್ಯಾಂ ವಡೋಭಾಯ್’ ಎಂದೇ ಎಲ್ಲರಿಗೂ ಚಿರಪರಿಚಿತ.

೧೮ ವರ್ಷದ ಹಿಂದೆ, ಅಂದರೆ ೧೯೯೮ರಲ್ಲಿ ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ೭೦೦ ಅಡಿಗೂ ಕೆಳಗೆ ಇಳಿದಿತ್ತು. ಜನ ನೀರಿಗಾಗಿ ಹಾಹಾಕಾರ ಮಾಡುತ್ತಿದ್ದಾಗ ಮನ್‌ಸುಖ್ ಭಾಯ್ ಸುವಗಿಯಾ ಬರಪೀಡಿತ ಪ್ರದೇಶಗಳಲ್ಲಿ ಕಡಿಮೆ ಖರ್ಚಿನ ಚೆಕ್‌ಡ್ಯಾಂ ಹಾಗೂ ಕೆರೆಗಳನ್ನು ನಿರ್ಮಿಸಿ ಇತಿಹಾಸ ಬರೆದ. ಹೀಗೆ ಆತ ೩೦೦ ಗ್ರಾಮಗಳಲ್ಲಿ ನಿರ್ಮಿಸಿದ ಚೆಕ್‌ಡ್ಯಾಂ ಹಾಗೂ ಕೆರೆಗಳ ಸಂಖ್ಯೆ ಇದುವರೆಗೆ ಬರೋಬ್ಬರಿ ೩೦೦೦.

Mansukh Bhai೧೫ ವರ್ಷಗಳ ಹಿಂದೆ ಈ ಜಲಯೋಧ ಮನ್‌ಸುಖ್‌ಭಾಯ್ ಜುನಾಗಢ ಜಿಲ್ಲೆಯ ಮೆಂದರ್ದ ತಾಲ್ಲೂಕಿನ ಜಮ್‌ಖಾ ಗ್ರಾಮದಿಂದ ತನ್ನ ಸಾಹಸವನ್ನು ಆರಂಭಿಸಿದ. ಆತ ಆ ಗ್ರಾಮದಲ್ಲಿ ಜನರನ್ನು ಸಂಪರ್ಕಿಸಿ ಅವರಿಗೆಲ್ಲ ನೀರಿನ ಸಂಗ್ರಹದ ಬಗ್ಗೆ ತಿಳಿವಳಿಕೆ ನೀಡಿದ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಗ್ರಾಮದಲ್ಲಿ ೫೫ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಪಣತೊಟ್ಟ. ಆದರೆ ಈ ಯೋಜನೆಗೆ ಸರ್ಕಾರದಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳದಿರಲು ಆತ ನಿರ್ಧರಿಸಿದ್ದ. ಜನರಿಂದಲೇ ಹಣ ಸಂಗ್ರಹಿಸಿ ಈ ಯೋಜನೆಗೆ ವಿನಿಯೋಗಿಸುವುದು ಮನ್‌ಸುಖ್‌ಭಾಯ್ ಅವರ ಉದ್ದೇಶವಾಗಿತ್ತು. ಹೀಗೆ ಮನ್‌ಸುಖ್‌ಭಾಯ್ ೧೫ ವರ್ಷಗಳ ಹಿಂದೆ ನಿರ್ಮಿಸಿದ ಆ ೫೫ ಚೆಕ್‌ಡ್ಯಾಂಗಳು ಈಗಲೂ ಕಾರ್ಯನಿರತವಾಗಿವೆ. ಅವುಗಳಿಂದ ಆ ಗ್ರಾಮದ ಜನರಿಗೆ ಕುಡಿಯಲು ನೀರು, ವ್ಯವಸಾಯಕ್ಕೆ ಹಾಗೂ ಇತರೆ ಬಳಕೆಗೆ ಸಾಕಷ್ಟು ಪ್ರಯೋಜನವಾಗಿದೆ.

೧೯೮೫ರಿಂದ ೧೯೯೮ರವರೆಗೆ ಗುಜರಾತ್‌ನಲ್ಲಿ ತೀವ್ರ ಬರ ಪರಿಸ್ಥಿತಿ ಕಾಡಿದ್ದು ಈಗ ಇತಿಹಾಸ. ಈ ಬರ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದು ಅಲ್ಲಿನ ರಾಜ್ಯಸರ್ಕಾರಕ್ಕೂ ಹೊಳೆದಿರಲಿಲ್ಲ. ಆಗ ಇಡೀ ರಾಜ್ಯದ ಬರ ಪರಿಸ್ಥಿತಿಗೊಂದು ಪರಿಹಾರ ಒದಗಿಸಲು ಯೋಜನೆಯೊಂದನ್ನು ತೇಲಿಬಿಟ್ಟವನೇ ಈ ಮನ್‌ಸುಖ್‌ಭಾಯ್. ಪ್ರತಿಯೊಂದು ಗ್ರಾಮದಲ್ಲೂ ೫ ರಿಂದ ೫೦ ಚೆಕ್‌ಡ್ಯಾಂಗಳಿರಬೇಕು. ಜೊತೆಗೆ ಗ್ರಾಮದ ಹೊರ ವಲಯದಲ್ಲಿ ಕೆರೆಗಳನ್ನು ನಿರ್ಮಿಸಬೇಕು. ಹೀಗೆ ಮಾಡಿದರೆ ಬರ ಪರಿಸ್ಥಿತಿ ನೀಗುವುದು ಕಷ್ಟವೇನಲ್ಲ ಎಂಬುದು ಮನ್‌ಸುಖ್‌ಭಾಯ್ ಅವರ ಹೊಸ ಚಿಂತನೆ. ಆದರೆ ಆತನ ಈ ಚಿಂತನೆಗೆ ಸರ್ಕಾರ ಕಿಂಚಿತ್ತೂ ಸಾಥ್ ನೀಡಲಿಲ್ಲ. ಆದರೇನಂತೆ, ಆತ ಸರ್ಕಾರದ ನೆರವಿಗಾಗಿ ಕಾಯುತ್ತಾ ಕುಳಿತುಕೊಳ್ಳಲಿಲ್ಲ. ಜನರಲ್ಲಿ ಮಳೆಕೊಯ್ಲು ಹಾಗು ಜಲಾಶಯಗಳ ಮೂಲಗಳನ್ನು ಉಳಿಸುವ ಬಗೆ ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಮನ್‌ಸುಖ್‌ಭಾಯ್ ಹಳ್ಳಿಯಿಂದ ಹಳ್ಳಿಗೆ ಅಲೆದಾಡಿದ. ಅದಾದ ಬಳಿಕ, ೫೦೦ ಗ್ರಾಮಗಳಲ್ಲಿ ೨೦೦೦ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ನಿರ್ಧರಿಸಿದ. ಆ ದಿನಗಳಲ್ಲಿ ಸರ್ಕಾರದ ಚೆಕ್‌ಡ್ಯಾಂ ಯೋಜನೆಗಳಿಗೆ ಆಗುತ್ತಿದ್ದ ವೆಚ್ಚ ೨ ರಿಂದ ೧೦ ಲಕ್ಷ ರೂ. ಅಲ್ಲದೆ ಒಂದು ಗ್ರಾಮದಲ್ಲಿ ೫ ರಿಂದ ೫೦ ಚೆಕ್‌ಡ್ಯಾಂಗಳನ್ನು ನಿರ್ಮಿಸುವುದು ಸರ್ಕಾರದ ಯೋಜನೆಯಲ್ಲಿರಲಿಲ್ಲ. ಮನ್‌ಸುಖ್‌ಭಾಯ್ ಸರ್ಕಾರದ ಈ ಮಾರ್ಗವನ್ನು ಅನುಸರಿಸದೆ ವಿಭಿನ್ನ ಹಾದಿ ಹಿಡಿದ. ಆತ ಆರ್‌ಸಿಸಿ ನಿರ್ಮಿತ ಕಡಿಮೆ ವೆಚ್ಚದ ಚೆಕ್‌ಡ್ಯಾಂಗಳನ್ನು ವಿನ್ಯಾಸಗೊಳಿಸಿದ. ಅದಕ್ಕಾಗಿ ಗ್ರಾಮೀಣ ಜನರನ್ನು ಒಂದೆಡೆ ಸೇರಿಸಿ ಅವರಿಗೆ ಈ ಚೆಕ್‌ಡ್ಯಾಂಗಳ ಮಹತ್ವ ಹಾಗೂ ಅದರಿಂದ ಬರ ಪರಿಸ್ಥಿತಿ ಹೇಗೆ ಶಾಶ್ವತವಾಗಿ ಪರಿಹಾರವಾಗಬಲ್ಲದು ಎಂಬುದನ್ನು ಮನವರಿಕೆ ಮಾಡಿಸಿದ. ಅವರಿಂದಲೇ ಈ ಚೆಕ್‌ಡ್ಯಾಂ ನಿರ್ಮಾಣಕ್ಕಾಗಿ ಸಾಕಷ್ಟು ಮೊತ್ತದ ಹಣ ಸಂಗ್ರಹಿಸಿದ. ರೈತರು, ಜಾನುವಾರು ಸಾಕಣೆದಾರರು, ಅಧ್ಯಾಪಕರು ಹಾಗೂ ಕಾರ್ಮಿಕರು ಮನ್‌ಸುಖ್‌ಭಾಯ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದರು. ಸ್ವತಃ ಮನ್‌ಸುಖ್‌ಭಾಯ್ ೩೦ ಗ್ರಾಮಗಳಿಗೆ ತೆರಳಿ ೯೦ ದಿನಗಳವರೆಗೆ ಡ್ಯಾಂ ನಿವೇಶನದಲ್ಲಿ ಅಗೆಯುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡ. ರಾತ್ರಿ ಕೂಡ ಕೆಲಸ ಮಾಡಿದ. ಹೀಗಾಗಿ ೫ ವರ್ಷಗಳ ಅವಧಿಯಲ್ಲಿ ಚೆಕ್‌ಡ್ಯಾಂ ಹಾಗೂ ಕೆರೆಗಳ ಮೂಲಕ ಮಳೆ ಕೊಯ್ಲು ವ್ಯವಸ್ಥೆಗಾಗಿ ೧೦ ಲಕ್ಷ ಮಾನವ ದಿನಗಳನ್ನು ವ್ಯಯಿಸಲಾಯಿತು.

Check Damಜಮ್‌ಖಾ ಗ್ರಾಮದಲ್ಲಿ ಅಲ್ಲಿನ ಜನರು ಸ್ವಸಹಾಯ ಪದ್ಧತಿ ಮೂಲಕ ೨೦ ಸಾವಿರ ಮಾನವ ದಿನಗಳನ್ನು ವ್ಯಯಿಸಿ ೫೧ ಚೆಕ್‌ಡ್ಯಾಂಗಳು ಹಾಗೂ ೨ ದೊಡ್ಡ ಕೆರೆಗಳನ್ನು ನಿರ್ಮಿಸಿದರು. ಸರ್ಕಾರದ ಸಹಾಯವಿಲ್ಲದೆ, ಅತೀ ಕಡಿಮೆ ವೆಚ್ಚದಲ್ಲಿ ಜಮ್‌ಖಾ ಗ್ರಾಮ ನೀರಿನ ಅಭಾವವನ್ನು ನೀಗಿಸಿಕೊಂಡಿದ್ದು ಹೀಗೆ. ಮನ್‌ಸುಖ್‌ಭಾಯ್ ಅವರ ಈ ಮಾದರಿ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ಅಳವಡಿಸಲಾಯಿತು. ಜನ ಜಾಗೃತಿ ಮಾಡುವುದಕ್ಕಾಗಿ ೧೯೯೯ರಲ್ಲಿ ಜಮ್‌ಖಾ ಗ್ರಾಮದಲ್ಲಿ ‘ಜಲಕ್ರಾಂತಿ ದಿನ’ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ೫೦ ಸಹಸ್ರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇಡೀ ದೇಶದಲ್ಲಿ ನೀರಿಗಾಗಿ ಹೀಗೆ ಜನರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಭೆ ಸೇರಿದ್ದು ಬಹುಶಃ ಇದೇ ಮೊದಲು. ಈ ಕಾರ್ಯಕ್ರಮದಲ್ಲಿ ಆ ರಾಜ್ಯದ ಆಗಿನ ಮುಖ್ಯಮುಂತ್ರಿ ಹಾಗೂ ಇತರ ಸಚಿವರೂ ಕೂಡ ಪಾಲ್ಗೊಂಡಿದ್ದರು.

ವಢೋಭಾಯ್ ಅವರ ಈ ವಿನೂತನ ಚೆಕ್‌ಡ್ಯಾಂ ನಿರ್ಮಾಣ ಪ್ರಯೋಗದಿಂದಾಗಿ ಬರಪೀಡಿತ ಸೌರಾಷ್ಟ್ರ ಪ್ರದೇಶವಿಡೀ ನೀರಿನಿಂದ ನಳನಳಿಸಿತು. ಅಮ್ರೇಲಿ ಜಿಲ್ಲೆಯ ಕಿಚಡಿಯಾ ಗ್ರಾಮದಲ್ಲಿ ಬತ್ತಿಹೋಗಿದ್ದ ೩೫ ಬಾವಿಗಳ ಹೂಳನ್ನು ತೆಗೆದು ಅಲ್ಲಿ ಮತ್ತೆ ನೀರು ಉಕ್ಕುವಂತೆ ಮಾಡಿದರು. ಆ ೩೫ ಬಾವಿಗಳಲ್ಲಿ ಮತ್ತೆ ನೀರು ತುಂಬಿತು. ಮನ್‌ಸುಖ್‌ಭಾಯ್ ರಾಜ್‌ಕೋಟ್ ಜಿಲ್ಲೆಯ ಪ್ರನ್‌ಸ್ಲಾವಡೆಖಾನ್ ಗ್ರಾಮದಲ್ಲಿ ೫ ವಿನೂತನ ಬಗೆಯ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಯೋಜನೆ ಮಾಡಿದ್ದು ಒಂದು ಹೊಸ ಬೆಳವಣಿಗೆ. ಆ ಡ್ಯಾಂಗಳು ಕಡಿಮೆ ವೆಚ್ಚದ, ಸರಳ ತಂತ್ರಜ್ಞಾನದ ಹಾಗೂ ಪರಿಸರ-ಸ್ನೇಹಿ ವಿನ್ಯಾಸದಿಂದ ಕೂಡಿದ್ದು, ತೃತೀಯ ಜಗತ್ತಿನ ನೀರಿನ ಸಮಸ್ಯೆಗೆ ಒಂದು ಸದೃಢ ಪರಿಹಾರ ಕ್ರಮವಾಗಿತ್ತು.

೧೮ ವರ್ಷಗಳ ಹಿಂದೆ ಸೌರಾಷ್ಟ್ರ ಪ್ರದೇಶದ ಅಂತರ್ಜಲದ ಮಟ್ಟ ೭೦೦ ಅಡಿ ಕೆಳಗೆ ಇಳಿದಿತ್ತು. ಈಗ ಅಲ್ಲೆಲ್ಲಾ ಕೇವಲ ೪೦ ಅಡಿ ಆಳದಲ್ಲಿ ನೀರು ಸಮೃದ್ಧವಾಗಿ ದೊರಕುತ್ತಿದೆ. ಇದಕ್ಕೆ ಮನ್‌ಸುಖ್‌ಭಾಯ್ ಎಂಬ ಜಲಯೋಧ ಹಮ್ಮಿಕೊಂಡ ಚೆಕ್‌ಡ್ಯಾಂ ಯೋಜನೆಯೇ ಮುಖ್ಯ ಕಾರಣ. ‘ಬರದ ವಿರುದ್ಧ ಹೋರಾಡಲು ಪ್ರತಿಯೊಂದು ಹಳ್ಳಿಯಲ್ಲೂ ಅತ್ಯಂತ ಕಡಿಮೆ ವೆಚ್ಚದ ಹಾಗೂ ಅತೀ ಶೀಘ್ರವಾಗಿ ನಿರ್ಮಿಸಬಹುದಾದ ಚೆಕ್‌ಡ್ಯಾಂಗಳನ್ನು ರಚಿಸಬೇಕು. ದೊಡ್ಡ ಡ್ಯಾಂಗಳನ್ನು ಎಲ್ಲೆಡೆ ನಿರ್ಮಿಸಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ತಗುಲುವ ವೆಚ್ಚ ಅಪಾರ. ಆದ್ದರಿಂದ ಕಡಿಮೆ ವೆಚ್ಚದ ಚೆಕ್‌ಡ್ಯಾಂಗಳು ಶಾಶ್ವತ ನೀರಿನ ಕೊರತೆ ಪರಿಹರಿಸುವಲ್ಲಿ ಅತ್ಯಂತ ಸುರಕ್ಷಿತ ಹಾಗೂ ಯಶಸ್ವೀ ವಿಧಾನವಾಗಿದೆ. ಎಲ್ಲ ರಾಜ್ಯ ಸರ್ಕಾರಗಳು ಜನರನ್ನು ಇಂತಹ ಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿz ಎನ್ನುತ್ತಾರೆ ಜಲಯೋಧ ಮನ್‌ಸುಖ್‌ಭಾಯ್.

ಜಲಯೋಧ ಮನ್‌ಸುಖ್‌ಭಾಯ್ ಅವರ ಇಂತಹ ಮಾನವೀಯ ಕಳಕಳಿ ಹಾಗೂ ನೀರಿನ ಕೊರತೆ ನೀಗಿಸಲು ಕಂಡುಕೊಂಡ ಹೊಸ ಬಗೆಯ ಚಿಂತನೆಗೆ ನಾವೆಲ್ಲರೂ ಒಂದು ಸೆಲ್ಯೂಟ್ ಹೊಡೆಯೋಣ. ನಮ್ಮ ನಮ್ಮ ಊರಿನಲ್ಲಿ ನೀರಿನ ಕೊರತೆ ನೀಗಿಸಲು ಮನ್‌ಸುಖ್‌ಭಾಯ್ ಅವರ ಈ ವಿಧಾನ ಕಾರ್ಯಸಾಧ್ಯವೇ ಎಂದು ಚಿಂತಿಸೋಣ. ಸಾಧ್ಯವಾದಲ್ಲಿ ಅದನ್ನು ತಕ್ಷಣ ಅಳವಡಿಸಿಕೊಳ್ಳೋಣ. ಮುಂಗಾರು ಮಳೆ ಬಂತೆಂದರೆ ನಾವು ನೀರಿನ ಸಮಸ್ಯೆಯನ್ನು ಮರೆತೇಬಿಡುತ್ತೇವೆ. ಮತ್ತೆ ನಮಗೆ ನೀರಿನ ಸಮಸ್ಯೆ ನೆನಪಾಗುವುದು ಬೇಸಿಗೆ ಬಂದಾಗಲೇ. ಈ ಬಾರಿ ಮಳೆಗಾಲದಲ್ಲಿ ಮಾತ್ರ ಹಾಗಾಗಕೂಡದು. ವ್ಯರ್ಥವಾಗಿ ಪೋಲಾಗುವ ನೀರನ್ನು ನಮ್ಮದೇ ಆದ ಬಗೆ ಬಗೆಯ ವಿಧಾನಗಳಲ್ಲಿ ಸಂಗ್ರಹಿಸಿ ನೀರಿನ ಕೊರತೆಯನ್ನು ನಾವಾಗಿಯೇ ನೀಗಿಸಿಕೊಳ್ಳೊಣ. ಹಾಗೆ ಮಾಡಿದಲ್ಲಿ ಬೇಸಿಗೆಯಲ್ಲೂ ನಮಗೆ ನೀರಿನ ಕೊರತೆ ಬಾಧಿಸುವುದಿಲ್ಲ.

 ಚಿತ್ರ-ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*