ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೮: ಹಲಗೆವಡೇರಹಳ್ಳಿ ಕೆರೆ: ಕೋಟಿ ಕೋಟಿ ವೆಚ್ಚ, ನಿಂತಿಲ್ಲ ತ್ಯಾಜ್ಯ

ಕೆರೆಗಳ ಅಭಿವೃದ್ಧಿ ಎಂದು ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಆದರೆ ಅದರ ಅಭಿವೃದ್ಧಿ ಕೇವಲ ಏರಿ, ಟ್ರ್ಯಾಕ್, ಫೆನ್ಸಿಂಗ್‌ಗೆ ಮಾತ್ರ ಸೀಮಿತ. ಕೊಳಕು ನೀರಿಗೆ ತಡೆ ಹಾಕುವ ಯಾವ ಕಾರ್ಯವೂ ಅಭಿವೃದ್ಧಿ ಯೋಜನೆಯಲ್ಲಿ ಇಲ್ಲ. ಇಂತಹ ಕೆರೆಗಳ ಸಾಲಿನಲ್ಲಿ ರಾಜರಾಜೇಶ್ವರಿನಗರದ ಹಲಗೇವಡೇರಹಳ್ಳಿ ಕೆರೆಯೂ ನಿಲ್ಲುತ್ತದೆ.

HVhalli lake waste (3)ಕೊಳಕು ಹಾಗೂ ಮಳೆ ನೀರಿನಿಂದ ಸದಾ ಜಿನುಗುತ್ತಿದ್ದ ಕೆರೆ ಇದೀಗ ಖಾಲಿ ಖಾಲಿ. ಏರಿ, ವಾಕಿಂಗ್ ಟ್ರ್ಯಾಕ್, ದ್ವೀಪ, ಫುಟ್‌ಪಾತ್ ಸೇರಿದಂತೆ ಮೂರು ಕೋಟಿ ರೂಪಾಯಿಗಳನ್ನು ಅಭಿವೃದ್ಧಿಗೆ ವ್ಯಯ ಮಾಡಲಾಗಿದೆ. ಆದರೆ, ನೀರು ಮಾತ್ರ ಬರುತ್ತಿಲ್ಲ. ಏಕೆಂದರೆ ಈ ಕೆರೆಗೆ ಸಂಪರ್ಕವಿರುವ ರಾಜಕಾಲುವೆಯಲ್ಲಿ ಹರಿಯುತ್ತಿರುವುದು ಒಳಚರಂಡಿಯ ಮಾಲಿನ್ಯ. ಕೋಟ್ಯಂತರ ವೆಚ್ಚ ಮಾಡಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದ್ದರೂ, ಮಳೆ ನೀರು ಕೆರೆಗೆ ಹರಿಯದ ದು:ಸ್ಥಿತಿ ಇಲ್ಲಿದೆ. ಅಷ್ಟೇ ಅಲ್ಲ, ‘ಸಿಂಗಾರ ಸೌಲಭ್ಯ’ಕ್ಕಾಗಿ ಇನ್ನೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ, ಕೆರೆಯ ದಂಡೆ ಹಾಗೂ ಕೆರೆಯ ಬೇಲಿಯ ಮೇಲೆ ತ್ಯಾಜ್ಯ ಸುರಿಯಲಾಗುತ್ತಿದೆ. ಉತ್ತಮ ಪರಿಸರದ ತಾಣವಾಗಬೇಕಿದ್ದ ಕೆರೆ ಇದೀಗ ‘ಅಭಿವೃದ್ಧಿಯಾಗಿರುವ ಮಲಿನ ಕೆರೆ’ ಎಂಬ ಹೀನಾಯ ಪರಿಸ್ಥಿತಿಗೆ ಬಂತು ನಿಂತಿದೆ. ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆಯ ದು:ಸ್ಥಿತಿ ಇದು.

ಹೂಳು, ಒಳಚರಂಡಿ ನೀರಿನಿಂದ ಮಲಿನವಾಗಿದ್ದ ಈ ಕೆರೆಯ ತಪಾಸಣೆ ನಡೆಸಿದ್ದ ಬಿಬಿಎಂಪಿಯ ಅಂದಿನ ಆಯುಕ್ತ ಸಿದ್ದಯ್ಯ, ರಾಜರಾಜೇಶ್ವರಿ ದೇವಸ್ಥಾನದ ಸಮೀಪವಿರುವ ಈ ಕೆರೆ ಅಭಿವೃದ್ಧಿಯಾದರೆ ಪ್ರವಾಸಿ ತಾಣವಾಗುತ್ತದೆ ಎಂದು ಮೂರು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗೆ ಒಪ್ಪಿಗೆ ನೀಡಿದ್ದರು. ಆದರೆ, ಆಗ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಅವರು ಕಾರ್ಪೊರೇಟರ್ ರಾಮಚಂದ್ರ ನಡುವಿನ ವೈಮನಸ್ಯದಿಂದ ಕಾಮಗಾರಿ ಆರಂಭಕ್ಕೇ ಅಡೆತಡೆಗಳಾಗಿದ್ದವು. ಎಲ್ಲ ಸರಿಹೋಗಿ ಕಾಮಗಾರಿ ಆರಂಭವಾಗಿ ಕುಂಟುತ್ತಾ ಮುಗಿದಿದ್ದೇ ಸಾಧನೆ. ಆದರೆ, ಅಭಿವೃದ್ಧಿ ಕಾಮಗಾರಿ ಮುಗಿದು ಒಂದೂವರೆ ವರ್ಷವಾಗಿದ್ದರೂ ಈವರೆಗೂ ಈ ಕೆರೆಗೆ ನೀರು ಬಂದಿಲ್ಲ. ಕಾರಣ, ಎಲ್ಲ ಕಾಲುವೆಗಳನ್ನು ಮುಚ್ಚಲಾಗಿದೆ.

HVhalli lake wasteಈ ಕಾಲುವೆಗಳನ್ನು ಮುಚ್ಚುವ ಅಥವಾ ತಡೆಯುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳೇನೂ ಮುಂದಾಗಿರಲಿಲ್ಲ. ಅವರಿಗೇ ತಡೆಯುವುದೇ ಬೇಕಿರಲಿಲ್ಲ. ಆದರೆ, ಸ್ಥಳೀಯರು ಇದಕ್ಕೆ ಅವಕಾಶ ನೀಡಲಿಲ್ಲ. ಏಕೆಂದರೆ ಅವರಿಗೆ ಪರಿಸರ ಕಾಳಜಿ ಇತ್ತು. ಈ ಕೆರೆಯ ಸುತ್ತಮುತ್ತಲಿರುವ ಎಲ್ಲ ಕಾಲುವೆಗಳಲ್ಲೂ ಒಳಚರಂಡಿ ನೀರೇ ಹರಿಯುತ್ತಿತ್ತು ಹಾಗೂ ಇನ್ನೂ ಹರಿಯುತ್ತಿದೆ. ಇದನ್ನು ಕೆರೆಗೆ ಬಿಡಲು ಅಧಿಕಾರಿಗಳು ಮುಂದಾದಾಗ, ಅದನ್ನು ತಡೆದರು. ಜಲಮಂಡಳಿವರು ಈ ನೀರನ್ನು ಕಾಲುವೆ ಕೆಳಭಾಗದಲ್ಲಿ ಪೈಪು ಮೂಲಕ ತೆಗೆದುಕೊಂಡು ಹೋಗಲಿ. ಮಳೆ ನೀರು ಮಾತ್ರ ಕೆರೆಗೆ ಹರಿಯಬೇಕು ಎಂಬುದು ಸ್ಥಳೀಯ ಒತ್ತಾಯವಾಗಿತ್ತು.

ಇದನ್ನೇ ನೆಪ ಮಾಡಿಕೊಂಡ ಬಿಬಿಎಂಪಿ ಅಧಿಕಾರಿಗಳು ಅಭಿವೃದ್ಧಿ ಮುಗಿಸಿ ಕೈತೊಳೆದುಕೊಂಡರು. ಇಂದು ನಾಳೆ ಒಳಚರಂಡಿ ನೀರು ಪೈಪಿನೊಳಗೆ ಹೋಗುವಂತೆ ಮಾಡುತ್ತೇವೆ ಎಂದು ಜಲಮಂಡಳಿಯವರು ಇಂದಿಗೂ ಹೇಳುತ್ತಿದ್ದಾರೆ. ಟೆಂಡರ್ ಆಗಿದೆ, ಕಾಮಗಾರಿ ಆಗಿದೆ ಎಂದೂ ಹೇಳುತ್ತಲೇ ಇದ್ದಾರೆ. ಆದರೆ, ಕೆಲಸ ಮಾತ್ರ ಆಗಿಲ್ಲ. ಈ ಕೆರೆಗೆ ಮಳೆನೀರುವ ತರುವ ರಾಜಕಾಲುವೆಯಲ್ಲಿ ಒಳಚರಂಡಿ  ನೀರೇ ಹರಿಯುತ್ತಿದೆ.  ಕೆರೆ ಅಭಿವೃದ್ಧಿಗೆ ಕೋಟ್ಯಂತರ ವೆಚ್ಚ ಮಾಡಿ ಅದಕ್ಕೆ ಮಳೆ ನೀರು ಹರಿಸುವ ಸಂದರ್ಭದಲ್ಲಿ ಬಿಬಿಂಎಪಿ-ಜಲಮಂಡಳಿಗಳ ಅಧಿಕಾರಿಗಳು ಪರಸ್ಪರ ಆರೋಪ ಮಾಡಿ, ಕೆರೆಯ ಅಭಿವೃದ್ಧಿಯನ್ನೇ ಮಲಿನಗೊಳಿಸಿರುವುದಕ್ಕೆ ಹಲಗೆವಡೇರಹಳ್ಳಿ ಕೆರೆಯೇ ಸಾಕ್ಷಿ.  ಸ್ಥಳೀಯ ಶಾಸಕ ಮುನಿರತ್ನ ರಾಜರಾಜೇಶ್ವರಿನಗರ ವಾರ್ಡ್ ಅಭಿವೃದ್ಧಿಯತ್ತ ಅಲಕ್ಷವಹಿಸಿರುವುದೂ ಇದಕ್ಕೆ ಪ್ರಮುಖ ಕಾರಣ. ಅಂತರ್ಜಲ ಮಟ್ಟ ಕುಸಿದು, ಕೆರೆಗಳ ಅಭಿವೃದ್ಧಿಯನ್ನೇ ಕೈಗೊಳ್ಳಲು ಹಿಂದೆಮುಂದೆ ನೋಡುವ ಈ ಸಂದರ್ಭದಲ್ಲಿ ಅಭಿವೃದ್ಧಿಯಾದ ಕೆರೆಯ ಬಗ್ಗೆಯೂ ಜನಪ್ರತಿನಿಧಿಗಳು, ಅಧಿಕಾರಿಗಳುHVhalli lake waste (2) ಕಾಳಜಿ ವಹಿಸದಿರುವುದು ಶೋಚನೀಯ.

ಕೆರೆ ಅಭಿವೃದ್ಧಿಯಾದರೂ ಅದಕ್ಕೆ ನೀರು ಹರಿಸಲು ಪ್ರಯತ್ನಪಡದ ಅಧಿಕಾರಿಗಳು, ಈ ಕೆರೆಯನ್ನು ಮತ್ತಷ್ಟು ಸಿಂಗರಿಸಲು ಇನ್ನಷ್ಟು ಲಕ್ಷದ ಯೋಜನೆಗಳನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಕಾಮಗಾರಿಯೂ ನಡೆಯುತ್ತಿದೆ. ಆದರೆ, ಈಗಾಗಲೇ ಮೂರು ಕೋಟಿ ವ್ಯಯವಾಗಿರುವ ಈ ಕೆರೆಯ ಅಭಿವೃದ್ಧಿ ಕಾಮಗಾರಿಗಳೇ ನೆಲಕಚ್ಚಿವೆ. ಕೆರೆ ಏರಿಯ ಮೇಲೆ ಪಾರ್ಥೇನಿಯಂ ರಾಶಿರಾಶಿಯಾಗಿ ಬೆಳೆದಿದೆ. ಕೆರೆಯ ಅಂಗಳದಲ್ಲೇ ಗ್ಯಾರೇಜ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ, ಕೆರೆಗೆ ಹಾಕಲಾಗಿರುವ ಫೆನ್ಸಿಂಗ್ ಹಾಗೂ ರಸ್ತೆಯಲ್ಲಿ ಸುಂದರವಾಗಿ ನಿರ್ಮಿಸಲಾಗಿದ್ದ ಫುಟ್‌ಪಾತ್ ತ್ಯಾಜ್ಯ ಸುರಿದುಕೊಳ್ಳುವ ತಾಣವಾಗಿವೆ. ಈ ಫುಟ್‌ಪಾತ್‌ನಲ್ಲಿ ಕಾಲಿಡಲೂ ಅಸಹ್ಯವೆನಿಸುವಂತಹ ಸ್ಥಿತಿ ಇದೆ. ಅಭಿವೃದ್ಧಿಯಾದ ಮೇಲೆ ಐದು ವರ್ಷ ಅದರ ನಿರ್ವಹಣೆಯ ಜವಾಬ್ದಾರಿ ಇದ್ದರೂ ಅದನ್ನು ನಿರ್ವಹಿಸಲು ಗುತ್ತಿಗೆದಾರರಿಗೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿಲ್ಲ. ಬದಲಿಗೆ ಅದನ್ನು ಬಿಟ್ಟು ಬೇರೆ ಕಾಮಗಾರಿಗೆ ಮುನ್ನುಡಿ ಬರೆದು ಅದನ್ನು ನಿರ್ವಹಿಸುತ್ತಿರುವುದು ವಿಪರ್ಯಾಸ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*