ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆ ಬಂದ ಕಾರಣ…

ಧೋ… ಎಂದು ಸುರಿಯುವ ಮಳೆ

ಜಿಟಿ…ಜಿಟಿ… ಎಂದು ದಿನವಿಡೀ ರಗಳುವ ಮಳೆ

ಭರ್ರೋ ಎನ್ನುವ ಗಾಳಿಯೊಡನೆ ಹುಯ್ಯುತ್ತಲೇ ಇರುವ ಮಳೆ

ಆಕಾಶಕ್ಕೆ ತೂತು ಬಿದ್ದಂತೆ ಧಪ ಧಪ ಎಂದು

ಬೀಳುತ್ತಲೇ ಇರುವ ಮಳೆ

ಮಲೆನಾಡಿನ ಮಳೆಯ ಬಗ್ಗೆ, ಕಪ್ಪು ಮೋಡದ ಬಗ್ಗೆ

ಹಿತವಾದ ಚಳಿಯ ಬಗ್ಗೆ ಹೇಗೆ ಹೇಳಲಿ ಎಷ್ಟು ಹೇಳಲಿ…

ಮಿರುಗನ ಮಳೆ ನಾಲ್ಕು ದಿನ ಎಡೆಬಿಡದೆ ಹೊಯ್ದಿದ್ದೇ ಮಳೆಗಾಲ ಶುರುವಾಯಿತು.  ಅನಂತರದ ಆದ್ರೆ ಮಳೆ, ಅಣ್ಣನ ಮಳೆ, ತಮ್ಮನ ಮಳೆಗಳು ಊರಿನ ಬತ್ತಿದ ಕೆರೆಗಳನ್ನು ತುಂಬಿಸಿಯೇಬಿಟ್ಟಿತ್ತು.  ಸಂಜೆಯಾಗುತ್ತಿದ್ದರೆ ಕೆರೆ ನೋಡಲು ಹೋಗುವುದೆ ಒಂದು ಸಂಭ್ರಮ.

ಕೆರೆಯ ತುಂಬಾ ಮಣ್ಣು ನೀರು.  ಅಕ್ಕಪಕ್ಕದ ಗುಡ್ಡಗಳಿಂದ, ಗದ್ದೆಗಳಿಂದ ಹರಿದುಬರುವ ನೀರಿನ ಜುಳು ಜುಳು ನಾದ.  ಹಸಿರಿನ ಕಿರೀಟವಿಟ್ಟಂತೆ ಜೊಂಡು ಹುಲ್ಲು.  ಅದನ್ನೆಲ್ಲಾ ಮೀರಿಸುವ ವಟರ್, ವಟರ್, ವಟರ್ ಎನ್ನುವ ಕಪ್ಪೆಗಳ ಸದ್ದು.

ಆಶು, ಕೆರೆಯಂಚಿನಲ್ಲಿ ಸಾಲಾಗಿ ಕುಳಿತ ದಪ್ಪ ದಪ್ಪ ಕಪ್ಪೆಗಳನ್ನು ತೋರಿಸಿದನು.  ನೂರಕ್ಕೂ ಹೆಚ್ಚು ಕಪ್ಪೆಗಳು ಅಲ್ಲಿದ್ದವು.  ಅವು ವಟರ್, ವಟರ್ ಎನ್ನುವಾಗಲೆಲ್ಲಾ ನೀಲಿ ಬಣ್ಣದ ಬಲೂನ್, for pp article - male banda kaarana - 2ಅರಿಶಿನ ಬಣ್ಣ ಹಾಗೂ ಮಣ್ಣು ಬಣ್ಣದ ಕಪ್ಪೆಗಳು ಒಂದರ ಪಕ್ಕ ಒಂದರಂತೆ ಸಾಲಾಗಿ ಕುಳಿತಿದ್ದವು.  ನಾವೆಲ್ಲ ನೋಡ ನೋಡುತ್ತಿದ್ದಂತೆ ಮಣ್ಣು ಬಣ್ಣದ ಕಪ್ಪೆಗಳ ಬೆನ್ನು ಹತ್ತಿದ ಅರಿಶಿನ ಬಣ್ಣದ ಟೊಣಪಗಳು ಸುಮೋ ಕುಸ್ತಿಗೆ ಬಿದ್ದವು.

ಅವುಗಳ ಕುಸ್ತಿಯನ್ನು ನೋಡಿ ನಮ್ಮೊಂದಿಗಿದ್ದ ಮಕ್ಕಳೆಲ್ಲಾ ಕುಣಿದು ಕುಪ್ಪಳಿಸತೊಡಗಿದರು.  ಅವು ಕುಸ್ತಿ ಮಾಡುತ್ತಲೇ, ವಟರ್ ವಟರ್ ಎಂದು ಕೂಗುತ್ತಲೇ ಕೆರೆಯ ನೀರಿನ ಮೇಲೆ ತೇಲತೊಡಗಿದವು.

ಇವು ಗೂಳಿಕಪ್ಪೆ, ಗ್ವಟರ್ ಕಪ್ಪೆ ಎಂದೆಲ್ಲಾ ಕರೆಯುವ ರೈತನ ಮಿತ್ರರು. ಇವು ಭತ್ತದ ಗದ್ದೆಯಲ್ಲಿರುವ ಪೀಡೆ ಕೀಟಗಳನ್ನು, ಸೊಳ್ಳೆಗಳನ್ನು ತಿನ್ನುವ ಮಾಂಸಾಹಾರಿಗಳು.  ಮಳೆಗಾಲದ ಶುರುವಿನಲ್ಲಿ ಸಮಾಗಮಕ್ಕಾಗಿಯೇ ಕೆರೆಗೆ ಬರುತ್ತವೆ.  ಎರಡು ಮೂರು ದಿನಗಳ ಹಬ್ಬ ನಡೆಸುತ್ತವೆ.  ಆಮೇಲೆ ಎಂದಿನಂತೆ ನಿಂಬೆ ಹಸಿರಿನ ಬಣ್ಣ ಹೊಂದಿ ಆಹಾರ ಹುಡುಕುತ್ತಾ ಹೊಲ-ಗದ್ದೆಗಳಲ್ಲಿ ಮರೆಯಾಗುತ್ತವೆ.

ಅಷ್ಟರಲ್ಲಿ ಮನು ನಮ್ಮ ಮನೆಯ ಕೊಟ್ಟಿಗೆಯಲ್ಲಿ ಇದೇ ರೀತಿಯ ಒಂದು ದೇವರ ಕಪ್ಪೆಯಿದೆ.  ಯಾವಾಗ ನೋಡಿದರೂ ಬಾಗಿಲ ಮರೆಯಲ್ಲೇ ಇರುತ್ತದೆ.  ಮುಟ್ಟಿದರೆ ಉಚ್ಚೆಹೊಯ್ಯುತ್ತದೆ.  ಪಾಪ ಅದು ಯಾವಾಗ ಹೊಟ್ಟೆ ತುಂಬಿಸಿಕೊಳ್ಳುವುದೋ ಗೊತ್ತಾಗುವುದೇ ಇಲ್ಲ ಎಂದನು.

ಈ ಗೂಳಿಕಪ್ಪೆಗಳು ರಾತ್ರಿ ವೇಳೆ ಆಹಾರ ಹುಡುಕುವ ನಿಶಾಚರಿಗಳು.  ಮಳೆಗಾಲದಲ್ಲಿ ಚುರುಕಾಗಿರುವ ಇವುಗಳು ಬೇಸಿಗೆಯಲ್ಲಿ ತಂಪು ಜಾಗವನ್ನು ಅರಸುತ್ತಾ ಕೆರೆ, ನದಿ, ಇಲಿಗಳ ಬಿಲ ಹೀಗೆ ತೇವವಿರುವ ಸಂದಿಗೊಂದಿಗಳಲ್ಲಿ ಸೇರಿಕೊಳ್ಳುತ್ತವೆ.  ಮೊನ್ನೆ ಒಂದು ದೊಡ್ಡ ಕಪ್ಪೆ ಮಾರುದ್ದದ ಹಾವನ್ನೇ ನುಂಗುತ್ತಿತ್ತು.  ನಾವೆಲ್ಲಾ ಶಾಲೆಗೆ ಹೋಗುತ್ತಿದ್ದಾಗ ನೋಡಿದೆವು ಎಂದು ಹೇಳಿದ್ದು ಅಪ್ಪು.  ಎಲ್ಲರೂ ಹಾವುಗಳು ಕಪ್ಪೆಯನ್ನು ನುಂಗುವುದನ್ನು ನೋಡಿದರೆ, ಇವನು ಕಪ್ಪೆಯೇ ಹಾವನ್ನು ನುಂಗುವುದನ್ನು ನೋಡಿದ್ದ.  ಅದೊಂದು ಅದ್ಭುತವೆ!  ಅವನು ವರ್ಣಿಸಿದ್ದನ್ನು ಎಲ್ಲರು ಬಾಯಿ ಬಿಟ್ಟುಕೊಂಡು ಕೇಳಿದರು.  ಒಮ್ಮೊಮ್ಮೆ ಗೂಳಿಕಪ್ಪೆಗಳು ಹಾವಿಗೆ ಹೆದರದೆ ತಿರುಗಿ ನಿಲ್ಲುತ್ತವೆ.  ಹಾವಿನ ಮೂತಿಯನ್ನು ತಮ್ಮ ಬಾಯಿಯೊಳಗೆ ಗಪ್ಪೆಂದು ಹಿಡಿದುಬಿಡುತ್ತವೆ.  ಗೂಳಿ ಕಪ್ಪೆಯ ಬಿಗಿ ಹಿಡಿತ ತಾಸುಗಟ್ಟಲೆಯಾದರೂ ಸಡಿಲವಾಗುವುದೇ ಇಲ್ಲ.  ಇದರಿಂದ ಉಸಿರುಕಟ್ಟಿದ ಹಾವು ಸತ್ತುಹೋಗುತ್ತದೆ. ಅನಂತರ ಅದನ್ನು ಗೂಳಿಕಪ್ಪೆ ನಿಧಾನವಾಗಿ ನುಂಗುತ್ತದೆ.

ಗೂಳಿಕಪ್ಪೆಗಳು ಅರ್ಧ ಕಿಲೋಗ್ರಾಂನಿಂದ ಒಂದು ಕೆ.ಜಿ. ತೂಕವಿರುತ್ತವೆ.  ದಿನಾಲೂ ತಮ್ಮ ತೂಕದಷ್ಟೆ ಕೀಟಗಳನ್ನು ಸ್ವಾಹಾ ಮಾಡುತ್ತವೆ.  ಅಂದರೆ ಒಂದು ಗೂಳಿಕಪ್ಪೆ ಭತ್ತ ಬೆಳೆಯುವ ಮೂರು ತಿಂಗಳಲ್ಲಿ ಸುಮಾರು ೪೫ ಕಿಲೋಗ್ರಾಮ್‌ನಷ್ಟು (೪೫,೦೦೦ ಕೀಟಗಳನ್ನು) ತಿನ್ನುತ್ತದೆ.  ಒಟ್ಟಿನಲ್ಲಿ ರೈತನ ಒಂದು ಎಕರೆ ಗದ್ದೆಯಲ್ಲಿ ೧೦ ಗೂಳಿ ಕಪ್ಪೆಗಳಿದ್ದರೂ ಸಾಕು, ಸಮಗ್ರ ಪೀಡೆಕೀಟಗಳ ನಿರ್ವಹಣೆಯಾಗುತ್ತದೆ. ಕಪ್ಪೆಗಳು ತುಂಬಾ ಇವೆ ಅಂದರೆ ಆ ಪರಿಸರ ವಿಷ, ವಿಕಿರಣದಂತಹ ಮಾಲಿನ್ಯದಿಂದ ಮುಕ್ತವಾಗಿದೆ ಎನ್ನಬಹುದು.

for pp article - male banda kaaranaಹೀಗೆಲ್ಲಾ ಹೇಳುತ್ತಿರುವಾಗಲೇ ಅಡಿಕೆ, ತೆಂಗಿನಮರಗಳಲ್ಲಿ ಜೀ… ಎನ್ನುವ ಜೀರುಂಡೆಯ ಸ್ವರ ಕೇಳತೊಡಗಿತು.  ಹೊಟ್ಟೆ ಹರಿದು ಹೋಗುವಂತೆ ಕೂಗಿಕೊಳ್ಳುವ ಈ ಕೀಟಗಳು ದೊಡ್ಡವರ ಹೆಬ್ಬೆರಳ ಗಾತ್ರದಷ್ಟಿರುತ್ತವೆ.  ಜೀರುಂಡೆಗಳು ಕಿರುಚಿದಷ್ಟೂ ಮಳೆ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಮಲೆನಾಡಿಗರದು.  ಅಂತೆಯೇ ಕಪ್ಪುಮೋಡಗಳು ಹೆಚ್ಚಾಗಿ, ಮಳೆ ಸುರಿಯತೊಡಗಿತು.  ಕತ್ತಲು ತುಂಬತೊಡಗಿತು.  ಹಗಲು ಬಂದ ನೆಂಟ ಸಂಜೆ ಹೋಗ್ತಾನಂತೆ.  ರಾತ್ರಿ ಬಂದ ನೆಂಟ ಅಲ್ಲೇ ಉಳಿತಾನಂತೆ ಎನ್ನುವ ಮಲೆನಾಡಿಗರ ನಂಬಿಕೆಯಂತೆ ರಾತ್ರಿಯೆಲ್ಲಾ ಮಳೆ ಹೆಚ್ಚಾಯಿತು.  ಕೆರೆಕೋಡಿ ಹರಿಯಿತು.  ಕಟ್ಟಿದ ಒಡ್ಡುಗಳೆಲ್ಲಾ ಕೊಚ್ಚಿಹೋದವು.  ಎರಡು ಮೈಲಿ ದೂರದ ಹೊಳೆ ತುಂಬಿ, ದಾಟಲು ಹಾಕಿದ್ದ ಮರದ ತುಂಡುಗಳು ತೇಲಿಹೋದ ಸುದ್ದಿ ಬಂತು.  ಮಲೆನಾಡಿನ ಎಷ್ಟೋ ಊರುಗಳು ಮಳೆಗಾಲದಲ್ಲಿ ದ್ವೀಪಗಳಾಗಿ ಬಿಡುತ್ತವೆ.  ಬೆಳ್ಳಂಬೆಳಗ್ಗೆಯೇ ನಾವೆಲ್ಲ ಹೊಳೆ ನೋಡಲು ಹೊರಟೆವು.  ಕರಿಯ ಜಡ್ಡು ಕಂಬಳಿಯ ಒಂದು ತುದಿಯನ್ನು ತ್ರಿಕೋನದಲ್ಲಿ ಮಡಚಿ ಅದಕ್ಕೆ ಕೊಟ್ಟೆ ಕಡ್ಡಿ ಚುಚ್ಚಿ ಕಂಬಳಿಕೊಪ್ಪೆ ತಯಾರಿ ಆಯಿತು.  ಧೋ… ಎಂದು ಸುರಿಯುವ ಮಳೆಗೆ ಕೊಡೆಗಳು ತಡೆಯುವುದಿಲ್ಲ.  ಮಂಡೆಯಿಂದ ಕಾಲಿನ ತುದಿಯವರೆಗೆ ಇಳಿಬಿಡುವ ಕಂಬಳಿ ಕೊಪ್ಪೆ ಇದ್ದರೆ ಎಂತಹ ಮಳೆಯನ್ನು ಬೇಕಾದರೂ ಎದುರಿಸುವ ಧೈರ್ಯ ಬಂದುಬಿಡುತ್ತದೆ.

ನಾವೆಲ್ಲ ಹೊಳೆ ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅರುಣನಿಗೆ ಆಳೆತ್ತರದ ವರ‍್ಲೆ (ಗೆದ್ದಲು) ಹುತ್ತ ಕಾಣಿಸಿತು.  ಅದರಿಂದ ಸಾವಿರಾರು ಮಳೆಹುಳುಗಳು ಸೈನಿಕರಂತೆ ಒಂದರ ಹಿಂದೆ ಒಂದರಂತೆ ಹೊರಡುತ್ತಿದ್ದವು.  ಅವೆಲ್ಲಾ ರಕ್ಕೆ ಬಂದ ವರ‍್ಲೆ ಹುಳುಗಳು.  ಹುತ್ತದ ಬುಡದ ಚಿಕ್ಕ ಕಂಡಿಯಿಂದ ಹೊರಬಂದು ಬಾನಿಗೆ ದಾಳಿಯಿಡುತ್ತಿದ್ದವು.  ಸುರಿವ ಮಳೆಯೊಂದಿಗೆ ಅವೂ ಪೈಪೋಟಿ ನಡೆಸುತ್ತಿದ್ದವು. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲೆಲ್ಲಾ ಮಳೆಹುಳಗಳೇ ತುಂಬಿಹೋದವು. ಅದೆಲ್ಲಿದ್ದವೋ ಬಗೆಬಗೆಯ ಹಕ್ಕಿಗಳೂ ಸಹ ಸುತ್ತಲಿನ ಮರಗಳ ಮೇಲೆ ಜಮಾಯಿಸತೊಡಗಿದವು.

ನಮಗೂ ಅವೆಲ್ಲಾ ಆಗ ಹೊರಗೆ ಬಂದು ಏನು ಮಾಡುತ್ತವೆ, ಏನಾಗುತ್ತವೆ ಎಂದೆಲ್ಲಾ ಕುತೂಹಲ!  ಸುಮಾರು ಅರ್ಧ ತಾಸಿನವರೆಗೆ ಚಿಕ್ಕ ಕಿಂಡಿಯಿಂದ ರೆಕ್ಕೆ ಬಂದ ಮಳೆಹುಳಗಳು ಹೊರಬರುತ್ತಲೇ ಇದ್ದವು.

ಹೀಗಿರುವಾಗ ಹುತ್ತದ ಕಿಂಡಿಯಿಂದ ವಿಭಿನ್ನವಾದ ರೆಕ್ಕೆಯ ಮಳೆಹುಳ ಹೊರಬಂತು.  ಮಣ್ಣುಕೆಂಪು ಬಣ್ಣ, ಬಣ್ಣದ ಪಾರದರ್ಶಕ ರೆಕ್ಕೆ.  ದಪ್ಪ ಕೆಂಪು ಕುಂಡೆಯ ಮಳೆಹುಳ ಅದು. ಬೆಳಕನ್ನು ಕಾಣುತ್ತಿದ್ದಂತೆಯೇ ಝೊಯ್ಯನೆ… ಆಕಾಶಕ್ಕೆ ಏರತೊಡಗಿತು.  ಆಕಾಶದಲ್ಲಿ ತುಂಬಿದ್ದ  ಕಪ್ಪುಮೋಡಗಳನ್ನು ಚದುರಿಸಿಬಿಡುವ ವೇಗದಿಂದ ಕಣ್ಣಿಗೆ ಕಾಣದಷ್ಟು ಮೇಲೆ ಹೋಯಿತು.  ಆಗಲೇ ವಿಚಿತ್ರ ಎನ್ನುವಂತೆ, ಅಲ್ಲಿ ಇಲ್ಲಿ ಸುತ್ತಾಡುತ್ತಾ ಪೆದ್ದುಗಳಂತೆ ಗಿರಕಿ ಹೊಡೆಯುತ್ತಿದ್ದ ಉಳಿದ ಹುಳುಗಳೂ ಆ ದಪ್ಪನೆಯ ಕೆಂಪು ಕುಂಡೆಯ ಹುಳವನ್ನೇ ಅಟ್ಟಿಸಿಕೊಂಡು ಮೇಲೇರತೊಡಗಿದವು. ಹಾಗೆ ಅದನ್ನು ಅಟ್ಟಿಸಿಕೊಂಡು ಓಡಿದ್ದರಿಂದ ಆ ದೃಶ್ಯ ಧೂಮಕೇತುವಿನ ಬಾಲದಂತೆ ಕಂಡಿತು.  ಸ್ವಲ್ಪ ಹೊತ್ತಿಗೆ ಒಂದಿಷ್ಟು ಹುಳಗಳು ಪುತಪುತನೆ ಬೀಳತೊಡಗಿದವು.  ಕೆಲವು ರೆಕ್ಕೆ ಮುರಿದುಬಿದ್ದರೆ, ಕೆಲವು ಸುಸ್ತಾಗಿ ಬಿದ್ದಿದ್ದವು.  ಹುತ್ತದ ಸುತ್ತಲೂ ಬೃಹತ್ ಸ್ಮಶಾನವೇ ನಿರ್ಮಾಣವಾಗುತ್ತಿತ್ತು.

ಆಗಲೇ ಯಾರೋ ಅಪ್ಪಣೆ ಕೊಟ್ಟಂತೆ ಹಕ್ಕಿಗಳು, ಕಪ್ಪೆಗಳು, ಹಲ್ಲಿ, ಓತಿಕ್ಯಾತ, ಹಾವುರಾಣಿ, ನಾಯಿಗಳು ಮುಂತಾದವುಗಳೆಲ್ಲಾ ಅವನ್ನು ಕಬಳಿಸತೊಡಗಿದವು.  ಅಷ್ಟೋ ಇಷ್ಟೋ ಶಕ್ತಿಗೂಡಿಸಿಕೊಂಡು ಹಾರಲು ಹೊರಟ ಹುಳಗಳು ಸಹ ಹಕ್ಕಿಗಳ ಡೈವ್ ಕ್ಯಾಚ್ಗೆ ಔಟ್ ಆದವು.  ಆಕಾಶದಿಂದ ಮಳೆಯಾಗಿ ಹುಳಗಳೇ ಬೀಳುತ್ತಿವೆಯೇನೋ ಅನ್ನುವಂತೆ ಸಾವಿರ ಸಾವಿರ ಹುಳಗಳು ಬೀಳುತ್ತಿದ್ದವು.  ಅವನ್ನೆಲ್ಲಾ ಆ ಎಲ್ಲಾ ಹೊಟ್ಟೆಬಾಕಗಳಿಂದಲೂ ಖಾಲಿ ಮಾಡಲು ಆಗುತ್ತಿರಲಿಲ್ಲ.  ಅವಕ್ಕಂತೂ ಹಬ್ಬವೋ ಹಬ್ಬ.  ತಿನ್ನುವಷ್ಟು ಹುಳಗಳು.

ನೋಡು ನೋಡು ಕೆಂಪು ಕುಂಡೆಯ ಹುಳ ಝೊಯ್ಯನೆ ಹಿಂದಿರುಗಿ ಬರುತ್ತದೆ ಎನ್ನುತ್ತಾ ಸತೀಶ ತಲೆ ಮೇಲೆತ್ತಿ ಕೂಗತೊಡಗಿದ.  ಅದರ ಕುಂಡೆಗೆ ಒಂದು ಸಣ್ಣ ಹುಳ ಅಂಟಿಕೊಂಡಿದೆ.  ಆ ಸಣ್ಣಹುಳವೇ ಅದನ್ನು ಗೂಡಿಗೆ ವಾಪಾಸು ಎಳಕೊಂಡು ಬಂತು ಎಂದು ವೀಕ್ಷಕ ವಿವರಣೆ ನೀಡಿದ.

ನಾವೆಲ್ಲಾ ಸೂಜಿಯಂತೆ ಚುಚ್ಚುವ ಮಳೆಯಲ್ಲಿಯೇ ತಲೆ ಎತ್ತಿ ಎಲ್ಲಿ…ಎಲ್ಲಿ… ಎಂದು ನೋಡತೊಡಗಿದೆವು.  ಅದು ರಾಣಿಹುಳ ಅನಸ್ತೈತಿ, ಇನ್ನಮ್ಯಾಲೆ ಅದು ಗೂಡೊಳಗೆ ಹೊಕ್ಕೊಂಡು ಒಂದೇ ಸಮನೆ ಹೆಣ್ಣು ಮೊಟ್ಟೆ ಇಡ್ತೈತಿ.  ಈ ಸತ್ತೋದವೆಲ್ಲಾ ಗಂಡುಹುಳಗಳು ಎಂದು ಮಂಜ ಏನೆಲ್ಲಾ ಹೇಳತೊಡಗಿದ.

ಶರವೇಗದಲ್ಲಿ ಹಿಂದೆ ಬಂದ ಕೆಂಪು ಕುಂಡೆಯ ಹುಳ ತನಗಂಟಿದ್ದ ಆ ಸಣ್ಣಹುಳವನ್ನು ಗೂಡಿನ ಬಳಿಯೇ ಬೀಳಿಸಿ ತಾನು ಗಪ್ಪನೆ ಒಳಸೇರಿತು.  ನಾವೆಲ್ಲಾ ನಾಟಕ ಮುಗಿದ ಮೇಲೆ ಕೊಂಕು ಹುಡುಕುವ ಕುಟುಕಿಗಳಂತೆ ವಾದ ಮಾಡುತ್ತಾ ಹೊಳೆಯ ದಿಕ್ಕಿನಲ್ಲಿ ನಡೆಯತೊಡಗಿದೆವು.

 ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*