ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆನೀರಿನ ಕೃಷಿ ಹೊಂಡ

ಭರ್ಜರಿ ಮಳೆ ಆಗುತ್ತಿರಬೇಕು, ಇಲ್ಲವೇ ತನ್ನ ಹೊಲದಲ್ಲೊಂದು ಕೊಳವೆ ಬಾವಿ, ಅಕ್ಕಪಕ್ಕ ಕೆರೆ, ಡ್ಯಾಂನ ಕಾಲುವೆ ನೀರು ಹರಿಯುತ್ತಿದ್ದರೆ ಮಾತ್ರ ಕೃಷಿ ಸಾಧ್ಯ ಎನ್ನುವ ಮನಸ್ಥಿತಿ ಅನೇಕ ರೈತರದ್ದು. ಆದರೆ ಹೊಲದಲ್ಲಿದ್ದ ಕೊಳವೆ ಬಾವಿ ಬತ್ತಿದರೂ ಸಹ ಜಾಣ್ಮೆ ಇದ್ದರೆ ವರ್ಷದ ಉದ್ದಕ್ಕೂ ಕೃಷಿ ಮಾಡಬಹುದು! ಅದ್ಹೇಗೆ ಎನ್ನುವ ಪ್ರಶ್ನೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೆಂಚಮಲ್ಲನಹಳ್ಳಿಯ ಮನೋಹರನ ಕೃಷಿ ಯಶೋಗಾಥೆಯೇ ಸಾಕ್ಷಿ.

manohara article 1ಮೊದಮೊದಲು ನಾಲ್ಕು ರೈತರಂತೆ ಮನೋಹರನಿಗೂ ಸಹ ಕೊಳವೆ ಬಾವಿ ಆಧರಿಸಿಯೇ ಕೃಷಿ ಮಾಡುವ ಕನಸು ಮತ್ತು ಛಲ. ಹೀಗಾಗಿ ಸಾಲ ಸೂಲ ಮಾಡಿ,  ಕೊರೆಯಿಸಿದ ಬೋರ್‌ವೆಲ್ ಹುಸಿ ಆಗಲಿಲ್ಲ. ಬಿದ್ದಿದ್ದು ಭರ್ತಿ ಮೂರು ಇಂಚು ನೀರು!. ಇದ್ದ ಮೂರು ಎಕರೆ ಜೊತೆಗೆ ಅಲ್ಲಿಂದ ಅರ್ಧ ಕಿ.ಮೀ ದೂರದ ಮತ್ತೊಂದು ಹೊಲಕ್ಕೆ ಪೈಪ್‌ಲೈನ್ ಮಾಡಿ, ಅಲ್ಲೂ ನೀರಾವರಿ ಕೃಷಿ ಮಾಡುವಲ್ಲಿ  ಯಶಸ್ವಿಯಾದ!. ಬೆವರು ಹರಿಸಿ ದುಡಿದಿದ್ದರಿಂದ ಸತತ ನಾಲ್ಕು ವರ್ಷಗಳ ಕಾಲ ವರ್ಷಪೂರ್ತಿ ಬೆಳೆ. ಕೈತುಂಬಾ ಹಣ!. ಇನ್ನೇನು ಕೃಷಿಯಿಂದ ಕಷ್ಟದ ಸಂಕೋಲೆ ಕಳಚಿತು ಎನ್ನುವಾಗಲೇ ಅನಾವೃಷ್ಟಿ ಎದುರಾಯಿತು. ದೊಡ್ಡ ಮಳೆಗಳು ಕನಸಾಗಿದ್ದರಿಂದ ಬೋರ್‌ವೆಲ್ ನೀರಿನ ಪ್ರಮಾಣ ಕುಸಿದು, ಕೊನೆಗೆ ನೀರಾವರಿ ಕೃಷಿ ಅಸಾಧ್ಯವೆನಿಸಿತು. ಮತ್ತೆ ಇತಿಹಾಸ ಮರುಕಳಿಸಿ, ಮಳೆ ಬಂದರೆ ಬೆಳೆ, ಬರ ಬಂದರೆ ಬರೆ ಎನ್ನುವಂತಾಗಿತು. ಈ ಬಾರಿಯ ಮುಂಗಾರಿಗೆ ಭೂಮಿ ಹದ ಮಾಡಿ ಮುಗಿಲು ನೋಡುತ್ತಿದ್ದವನಿಗೆ ಸಕಾಲದಲ್ಲಿ ವರುಣ ಕೃಪೆ ತೋರಲಿಲ್ಲ. ಕೈ ಕಟ್ಟಿ ಕುಳಿತ ಮನೋಹರನಿಗೆ ಗೆಳೆಯ ಆರ್‌ಎಸ್‌ಕೆ ಯಲ್ಲಿನ ಅನುವುಗಾರ ರಾಜಪ್ಪ “ಅದ್ಯಾಕೋ ಚಿಂತಿ ಮಾಡ್ತಿ. ನಿನ್ನ ಹೊಲದ ಒಂದೆಡೆ ಆಳೆತ್ತರ ಗುಂಡಿ ಮಾಡು, ಅದರಲ್ಲಿ ಮಳೆ ನೀರು ತುಂಬಿಸು, ಆ ನೀರನ್ನೇ ಬಳಸಿ ಬೆಳೆ ಬೆಳ್ಕೋ..,” ಅಂತಾ ಸಲಹೆ ಕೊಟ್ಟ. ಅದ್ಹೇಗೆ ಸಾಧ್ಯ ಎನ್ನುವ ಮನೋಹರನ ಪ್ರಶ್ನೆಗಳ ಸರಮಾಲೆಗೆ ರಾಜಪ್ಪ ಸರಕಾರದ ಕೃಷಿ ಭಾಗ್ಯ ಯೋಜನೆಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟ.

ಮಳೆ ನೀರು ಕೃಷಿ ಹೊಂಡದಲ್ಲಿ  ಶೇಖರಣೆಯಿಂದ ಮೊದಲನೆಯದಾಗಿ ನೀರೆತ್ತಿ ಬೆಳೆಗಳಿಗೆ ಉಣಿಸಬಹುದು; ಎರಡನೆಯದಾಗಿ ಅಂತರ್ಜಲ ವೃದ್ಧಿಸಿ ಮತ್ತೆ ಕೊಳವೆ ಬಾವಿಯಲ್ಲಿ ನೀರು ಕಾಣಬಹುದು. ಅಂತೆಯೇ, ಮನೋಹರ ಹೊಸಹಳ್ಳಿಯ ರೈತ ಸಂಪರ್ಕ ಕೇಂದ್ರದ ಬಾಗಿಲು ತಟ್ಟಿದ. ತನ್ನೊಂದಿಗೆ ಸ್ನೇಹಿತರನ್ನೂ ಕರೆದೊಯ್ದ. ಕೃಷಿ ಅಧಿಕಾರಿಗಳಾದ ಎಂ. ಚಂದ್ರಶೇಖರ ಮತ್ತು ಎಂ.ಬಸವನಗೌಡರವರನ್ನು ಸಂಪರ್ಕಿಸಿದ ಮೇಲೆ ಇದರ ಸದುಪಯೋಗಗಳ ಹರುವಿನ ಅರಿವು ಮೂಡಿ, ಕೃಷಿ ಹೊಂಡ ನಿರ್ಮಾಣಕ್ಕೆ ಸಂಕಲ್ಪ ತೊಟ್ಟ. ಸರಕಾರದ ನಿಯಮಗಳಿಗೆ ಅನುಗುಣವಾಗಿ, ತನ್ನ ಹೊಲದಲ್ಲಿ ಮಳೆನೀರು ಹರಿದು ಬರುವ ಇಳಿಜಾರಿನಲ್ಲಿ ಬೋರ್‌ವೆಲ್‌ಗೆ ಹೊಂದಿಕೊಂಡು ೧೫X೧೫X೩ ಮೀಟರ್ ಅಳತೆಯಲ್ಲಿ ನಾಲ್ಕು ಲಕ್ಷ ಲೀಟರ್ ನೀರು ಶೇಖರಣಾ ಸಾಮಾರ್ಥ್ಯದ ಕೃಷಿ ಹೊಂಡ ನಿರ್ಮಿಸಿಕೊಂಡ. ಇಷ್ಟೆಲ್ಲಾ ಮಾಡಿದರೂ, ಮಳೆ ಬರುವ ಮುನ್ಸೂಚನೆ ಇಲ್ಲ. ಆಗ ಮನೋಹರ ಸಬ್ಸಿಡಿ ಹಣದಲ್ಲಿ ಮಾಡಿದ ಕೃಷಿ ಹೊಂಡಕ್ಕೆ ಸಾಲ ಮಾಡಿ ಹಾಕಿದ ಬಂಡವಾಳವೂ ಹೋಯಿತಲ್ಲ ಎಂದು ಒಳಗೊಳಗೆ ವ್ಯಥೆಪಟ್ಟ. ಅದೊಂದು ರಾತ್ರಿ ಅನಿರೀಕ್ಷಿತವಾಗಿ ಬಿದ್ದ ದೊಡ್ಡ ಮಳೆಯಿಂದ ಹೊಲ ಬಿತ್ತನೆಗೆ ರೆಡಿಯಾದರೆ, ಇತ್ತ ಕೃಷಿ ಹೊಂಡದ ತುಂಬಾ ನೀರಿತ್ತು!. ಆಗ ಬಿತ್ತನಗೆಂದು ತಂದಿಟ್ಟಿದ್ದ ಮುಸುಕಿನ ಜೋಳದ ಬೀಜ ಹಿಂದುರಿಗಿಸಿ, ಈರುಳ್ಳಿ ಬೀಜ ತಂದ!. ‘ಅನಿಶ್ಚಿತ ಮಳೆಯಲ್ಲಿ ಖುಷ್ಕಿ ಜಮೀನಿಗೆ ಈರುಳ್ಳಿ ಬೆಳೆ ಒಳ್ಳೆಯದಲ್ಲ’ ಎನ್ನುವರ ಮಾತಿಗೆ ಮನೋಹರ ಸೊಪ್ಪು ಹಾಕಲಿಲ್ಲ. ಈ ಧೈರ್ಯಕ್ಕೆ ಕಾರಣ ಕೃಷಿ ಹೊಂಡ!. ಕಪ್ಪು, ಕರಲು ಮಿಶ್ರಿತ ಮಣ್ಣಿನಲ್ಲಿ ನೀರು ಇಂಗುವಿಕೆ ನಿಧಾನಗತಿಯಲ್ಲಿರುತ್ತೆ. ಅಲ್ಪ ಸ್ವಲ್ಪ ಇಂಗಿದ ನೀರಿನಿಂದಲೂ ಅಂತರ್ಜಲ ಮಟ್ಟ ಸುಧಾರಿಸಿ, ಬೋರ್‌ವೆಲ್ ಪುನರುಜ್ಜೀವನಗೊಳ್ಳುತ್ತೆ ಎನ್ನುವ ಲೆಕ್ಕಾಚಾರ ಈತನದ್ದಾಗಿತ್ತು. ಅದಕ್ಕಾಗಿಯೇ ಮನೋಹರ ಕೃಷಿ ಭಾಗ್ಯ ಯೋಜನೆಯಲ್ಲಿ ಸಿಗುವ ಪಾಲಿಥಿನ್ ಹಾಸನ್ನು ಹೊಂಡಕ್ಕೆ ಉದ್ದೇಶಪೂರ್ವಕವಾಗಿ ಹಾಕಲಿಲ್ಲ!

manohara article 2ಒಟ್ಟು ಮೂರು ಎಕರೆಯಲ್ಲಿ ಒಂದು ಎಕರೆಯನ್ನು ಕೃಷಿ ಹೊಂಡದ ಸಹಾಯದಿಂದ ನೀರಾವರಿ ಮಾಡಲು ಮುಂದಾದ. ಎಕರೆಗೆ ೬ ಕೆ.ಜಿ ಈರುಳ್ಳಿ ಬೀಜ ಚೆಲ್ಲಿದ. ಪ್ರಾರಂಭದಲ್ಲಿ ಮಳೆ ಸೊಂಪಾಗಿ ಬಂದಿದ್ದರಿಂದ, ಈರುಳ್ಳಿ ಬೆಳೆ ಹುಲುಸಾಗಿ ಬೆಳೆಯಿತು. ಮನೆಯವರೇ ಆಗಾಗ್ಗೆ ಕಳೆ ತೆಗೆಯುವುದು, ಗೊಬ್ಬರ ಇಟ್ಟಿದ್ದರಿಂದ ಕೂಲಿಗಾರರ ಅನಿವಾರ‍್ಯತೆ ಬೀಳಲಿಲ್ಲ. ಈ ನಡುವೆ ಮತ್ತೆ ಮಳೆ ಮರೀಚಿಕೆ ಆಗಿತ್ತು. ೧೫-೨೦ ದಿನ ಕಳೆದರೂ ಮಳೆ ಸುಳಿಯಲಿಲ್ಲ! ಆಗ ಮನೋಹರ ಬಾಡುತ್ತಿದ್ದ ಈರುಳ್ಳಿ ಬೆಳೆಯನ್ನು ಉಳಿಸಿಕೊಳ್ಳಲು ಕೃಷಿ ಹೊಂಡದತ್ತ ಮುಖ ಮಾಡಿದ.  ಅಷ್ಟರಲ್ಲಿ ಹೊಂಡದ ಅರ್ಧ ನೀರು ಇಂಗಿದ್ದರಿಂದ ಬೋರ್‌ವೆಲ್‌ನಲ್ಲಿ ಚೇತರಿಕೆ ಕಂಡಿರಬಹುದೇ? ಎನ್ನುವ ಕುತೂಹಲದಿಂದ ಪರೀಕ್ಷಿಸಿದ. ನಿರೀಕ್ಷೆಯಂತೆ ಪ್ರಮಾಣದಲ್ಲಿ ಏರಿಕೆ ಕಂಡಿತು! ಬೋರ್‌ವೆಲ್ ನೀರನ್ನು ಪುನಃ ಕೃಷಿ ಹೊಂಡಕ್ಕೆ ಬಿಟ್ಟರು.

ಹೊಂಡದಿಂದ ನೀರೆತ್ತಲು ಡೀಸಲ್ ಪಂಪ್‌ಗಾಗಿ ಸರಕಾರ ನಿಗದಿಪಡಿಸಿದ ಹಣವನ್ನು ತುಂಬುವ ಶಕ್ತಿ ಮನೋಹರನಿಗೆ ಇರಲಿಲ್ಲ. ಆಗ ತನ್ನೊಂದಿಗೆ ಕೃಷಿ ಹೊಂಡ ಮಾಡಿಸಿದೆ ಉಳಿದ ಮೂವರು ರೈತನ್ನು ಕೂಡಿಸಿಕೊಂಡು, ಕೃಷಿ ಇಲಾಖೆಯಲ್ಲಿ ಡೀಸಲ್ ಪಂಪ್‌ನ್ನು ಉಚಿತವಾಗಿ ಪಡೆದ! ಹೊಂಡದಿಂದ ನೀರನ್ನು ಈರುಳ್ಳಿ ಮಡಿಗೆ ಉರುಳಿ ಬಿಡದೆ, ತುಂತುರು ನೀರಾವರಿ ಮೂಲಕ ನೀರುಣಿಸಿದ. ಅದು ರಾತ್ರಿ ಸಮಯದಲ್ಲಿ! ಹಗಲಿನಲ್ಲಿ ಸೂರ್ಯನ  ಶಾಖದಿಂದ ನೀರು ಬಹುತೇಕ ಆವಿಯಾಗಿ, ನೀರು ಬೆಳೆಗೆ ಸಂಪೂರ್ಣ ದಕ್ಕುವುದಿಲ್ಲ ಎನ್ನುವ ಯೋಚನೆ ಇದಕ್ಕೆ ಕಾರಣವಾಗಿತ್ತು! ಹೀಗಾಗಿ ಬಾಡುತ್ತಿದ್ದ ಈರುಳ್ಳಿ ಬೆಳೆ ತಿಬ್ಬಳಿಸಿಕೊಂಡಿದ್ದರಿಂದ ಜೀವ ಕಳೆ ಬಂತು. ಈ ವೇಳೆ ಅಕ್ಕಪಕ್ಕದವರ ಹೊಲದ ಬೆಳೆಗಳೆಲ್ಲಾ ಒಣಗಿ, ನೆಲಕತ್ತಿದ್ದರೆ ಮನೋಹರನ ಬೆಳೆ ಮಾತ್ರ ಹುಲಸಾಗಿತ್ತು! ತಿಂಗಳಗಟ್ಟಲೆ ಮಳೆ ಹೋದರೂ ಮನೋಹರ ಧೃತಿಗೆಡದೇ ೩-೪ ದಿನಗಳಿಗೊಮ್ಮೆ ಹೊಂಡದ  ನೀರಿನಿಂದ ಬೆಳೆ ಸಂರಕ್ಷಿಸಿಕೊಂಡ. ಈತನ ಅದೃಷ್ಠಕ್ಕೆ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಜ್ಜಾನ್ ಬೇಡಿಕೆ ಇತ್ತು. ಮಳೆಯಾಶ್ರಿತ ಜಮೀನಲ್ಲೂ ಎಕರೆಗೆ ೭೦ ಪಾಕೇಟ್ ಈರುಳ್ಳಿ ಬೆಳೆದು, ೮೦ ಸಾವಿರ ಲಾಭ ಗಳಿಸಿದ! ಹೀಗೆ ಈರುಳ್ಳಿ ಬೆಳೆದು ಕೃಷಿ ಹೊಂಡದಲ್ಲಿ ಮಿಕ್ಕ ನೀರನ್ನು ಉಳಿದ ಒಂದು ಎಕರೆಯಲ್ಲಿ ಮಳೆ ನಂಬಿ ಈಗ ಹಾಕಿರುವ ಶೇಂಗಾ ಬೆಳೆಗೆ ಒಂದು ವೇಳೆ ಮಳೆ ಕೈ ಕೊಟ್ಟರೆ ಹಾಯಿಸಲು ಸನ್ನದ್ಧನಾಗಿದ್ದಾನೆ!. ಶೇಂಗಾ ಬೆಳೆಯಿಂದ ಒಳ್ಳೆಯ ಲಾಭ ನಿರೀಕ್ಷೆಯಲ್ಲಿರುವ ಮನೋಹರ ಕೃಷಿ ಹೊಂಡದಿಂದ ಒಟ್ಟಾರೆಯಾಗಿ ಲಕ್ಷ ರೂ ಲಾಭ ಗಳಿಸುತ್ತಿದ್ದಾರೆ!. ಇದೆಲ್ಲಾ ಕೃಷಿ ಹೊಂಡದ ಕಮಾಲ್ ಅಲ್ಲದೆ ಮತ್ತೇನು?

ಚಿತ್ರ-ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*