ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವನ್ಯಜೀವಿಗಳ ಜಾಡು ಹಿಡಿದು…..!

ಜೂನ್ ೫, ಭಾನುವಾರ; ವಿಶ್ವ ಪರಿಸರ ದಿನಾಚರಣೆ -೨೦೧೬

ವನ್ಯಜೀವಿಗಳ ಅಕ್ರಮ, ಕಾನೂನು ಬಾಹಿರ ಮಾರಾಟದ ವಿರುದ್ಧ ಹೋರಾಟ – ಆಚರಣೆಯ ಧ್ಯೇಯ

ಅಮೆರಿಕೆಯ ಪ್ರಾಣಿ ಸಂಖ್ಯಾಶಾಸ್ತ್ರಜ್ಞ ಪಾಲ್ ಎರ‍್ಲಿಚ್, ವನ್ಯಜೀವಿ ನಾಶದ ಬಗ್ಗೆ ಮಾರ್ಮಿಕವಾಗಿ ಹೇಳುತ್ತಾರೆ.. ಪರಿರವೊಂದು ವಿಮಾನವಿದ್ದಂತೆ. ನಾವೆಲ್ಲ ಆ ವಿಮಾನದ ಸಹಯಾತ್ರಿಗಳು. ವಿಮಾನದ ರೆಕ್ಕೆಯ ‘ಸ್ಕ್ರೂ’ ತಿರುಪುಗಳನ್ನು ಒಂದೊಂದಾಗಿ ಬಿಚ್ಚುತ್ತ ಹೋಗುತ್ತೀರಿ.. ಎಂದಿಟ್ಟುಕೊಳ್ಳಿ. ಯಾವ ತಿರುಪು ಅತ್ಯಂತ ಮಹತ್ವದ್ದು ಎಂದು ಗೊತ್ತಿಲ್ಲದಿದ್ದರೂ, ಯಾವುದೋ ಒಂದು ನಿರ್ದಿಷ್ಟ ತಿರುಪು ತೆಗೆದಾಗ ಅಪಘಾತವಾಗಿ, ನಾವು ಸಾವನ್ನಪ್ಪುತ್ತೇವೆ. ಪ್ರತಿಯೊಂದು ನಾಶಗೊಂಡ ಪ್ರಭೇದವೂ ವಿಮಾನದಿಂದ ತೆಗೆಯಲಾದ ಒಂದೊಂದು ತಿರುಪಿದ್ದಂತೆ !”

KUMAR BHAGAVAT AND LINGARAJ H INSPECTING A HIDE IN MANDHYALA MADE FOR HUNTING SPOTTED DEER OR ANTILOPEಧಾರವಾಡ: ಅಳ್ನಾವರ ರಸ್ತೆ ಮುಗದ ಹತ್ರ ಮಂಡ್ಯಾಳದಾಗ ಮೊನ್ನೆ ಚುಕ್ಕಿ ಜಿಂಕಿ ಮರಿ ಕೊಂದು, ಸಂಶಯ ಬರಬಾರದು ಅಂತ ತಲಿ ಬಿಟ್ಟು.. ಕೈಗೆ ಸಿಕ್ಕಷ್ಟು ಮಾಂಸ ಕೊಯ್ಕೊಂಡು ಹೋಗ್ಯಾರ.. ಎರಡ ದಿನದ ಕೆಳಗ ತಾಯಿ-ಮರಿ ಎಷ್ಟು ಚೆಂದ ಮೇಯಾಕತ್ತಿದ್ದು ನೋಡಿದ್ದೆ..” – ತುಂಬ ಕಳವಳದಿಂದ ಮುಗದದ ಆಪ್ತರೊಬ್ಬರು ವರದಿ ಒಪ್ಪಿಸಿದ್ರು.

“ನೀರಡಿಸಿ ತ್ವಾಟದಾಗಿನ ಕೃಷಿ ಹೊಂಡಕ್ಕ ನೀರ ಕುಡಿಯಾಕ ಜೀವ ಒತ್ತೆ ಇಟ್ಟು ಬಂದ ಕಾಡುಕುರಿಯನ್ನ ಸಾಕಿದ ನಾಯಿಗೋಳು ಬೆನ್ನಟ್ಟಿ, ಕಡದು, ಅಟ್ಟಾಡಿಸಿಕೊಂಡು ಕೊಂದ್ವು..” ಮಂಡ್ಯಾಳದ ಮತ್ತೊಂದು ಸುದ್ದಿ..

ನಾಡಿಗೆ ಸ್ವಾತಂತ್ರ್ಯ ಬಂತು..!

TRAP FOR WILD BOARಈಗ ನಾಡಿಗೆ ಸ್ವಾತಂತ್ರ್ಯ ಬಂದಿದೆ.. ಆದರೆ ಕಾಡಿನ ಜೀವಿಗಳಿಗೆ ಸ್ವಚ್ಛಂದದ ಬದುಕಿರಲಿ.. ಬದುಕುವ ಹಕ್ಕೂ ಕಳೆದುಕೊಂಡು, ಸಾವಿನ ದವಡೆಯಲ್ಲಿ ಜೀವಿಸಲು ಹಾತೊರೆಯುತ್ತಿವೆ. ನಾಡಿನ ಜೀವಿಗಳ ಮೋಜಿಗಾಗಿ, ಬಾಡೂಟದ ತೆವಲಿಗೆ ಕೆಲವೊಮ್ಮೆ ಕಾಡಿನ ಪ್ರಾಣಿಗಳು ಜೀವ ತೆತ್ತರೆ, ಅವುಗಳ ಮಾಂಸ, ಚರ್ಮ, ಉಗುರು, ಮುಖ, ಕೊಂಬು, ಎಲುವು ಇತ್ಯಾದಿಗಳಿಗೆ ಕಾಳಸಂತೆಯಲ್ಲಿರುವ ಅಪರಿಮಿತ ಬೇಡಿಕೆ ಸದ್ಯ ಪ್ರಾಣಕ್ಕೆ ಎರವಾಗಿ ಪರಿಣಮಿಸಿದೆ.

ಕೆಲವೊಮ್ಮೆ, ಸಸ್ಯಾಹಾರಿ ಕಾಡು ಪ್ರಾಣಿಗಳು ರೈತರ ಬೆಳೆ ತಿನ್ನಲು ಅಥವಾ ಮಾಂಸಾಹಾರಿ ವನ್ಯಜೀವಿ ಅವರು ಸಾಕಿಕೊಂಡ ಜಾನುವಾರುಗಳನ್ನು ಹೊತ್ತೊಯ್ಯಲು ಬಂದಾಗ, ಮತ್ತೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದಾಗ ಅವುಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ ಸಾವಿನ ತೆಕ್ಕೆಗೆ ಅವು ಜಾರುತ್ತಿವೆ. ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದ್ದು, ಕಾಡು ಪ್ರಾಣಿಗಳು ನಾಡಿಗೆ ಆಹಾರ-ನೀರು ಅರಸಿ ಲಗ್ಗೆ ಇಟ್ಟಾಗ ಅರಣ್ಯ ಇಲಾಖೆಯ ಸಿಬ್ಬಂದಿ ಆದಿಯಾಗಿ ನಾವು ನಡೆದುಕೊಳ್ಳುವ ಅವೈಜ್ಞಾನಿಕ ರೀತಿ.. ಅವುಗಳ ಪ್ರಾಣಕ್ಕೆ ಸಂಚಕಾರ ತಂದಿದ್ದೂ ಇದೆ.

ನಾವು ಇರೋದ.. ಅವನ್ನ ಕೊಂದು ತಿನ್ನಾಕ..

ಆದರೆ, ಈ ಲೇಖನದ ಕಾಳಜಿ, ಅವುಗಳ ಮನೆ ಅಂಗಳಕ್ಕೆ ದಾಂಗುಡಿ ಇಟ್ಟು, ನೀರಿನ ಮೂಲಗಳ ಬಳಿ ಜಪ್ಪಿಸಿ ಕುಳಿತು ಮಸಲತ್ತು ಮಾಡಿ ಕೊಲ್ಲುವ ಬೇಟೆಗಾರರ ಮಾನವತಾಹೀನ ನಡಾವಳಿ ಬಗ್ಗೆ ಮಾತ್ರ. ಒಂದರ್ಥದಲ್ಲಿ, ನೀರಿನ ಮೂಲಗಳ ಬಳಿ ವನ್ಯಜೀವಿಗಳ ಜಾಡು ಹಿಡಿದು ಕೊಲೆ.

ಧಾರವಾಡದಿಂದ ಗೋವಾಕ್ಕೆ ತೆರಳುವ ಮಾರ್ಗ ಮಧ್ಯೆ ಥರಹೇವಾರಿ ತೋಟಗಳು.. ಮತ್ತು ಸಾಫ್ಟವೇರ್ – ಹಾರ್ಡ್‌ವೇರ್ ತಂತ್ರಜ್ಞರು, ವೈದ್ಯರು, ಸರ್ಕಾರದಲ್ಲಿ ಆಯಕಟ್ಟಿನLOCAL INDEGENOUS JAW TRAP ಸ್ಥಾನಗಳಲ್ಲಿರುವ ಅಧಿಕಾರಿಗಳು, ವಕೀಲರು, ಚಾರ್ಟರ್ಡ ಅಕೌಂಟಂಟ್‌ಗಳು ಹೀಗೆ.. ದುಡ್ಡಿದ್ದವರ ವೀಕೆಂಡ್ ಕೃಷಿಯ ಕಾಡಿನ ಮಧ್ಯೆ ನಿವೇಶನದಂತಹ ಹಾಳೆಗಳು ಕಣ್ಣುಕುಕ್ಕುತ್ತವೆ. ಅಷ್ಟು ದೂರ ಬೇಡ. ಗೌಳಿಗರ ದೊಡ್ಡಿ ದಡ್ಡಿ ಕಮಲಾಪುರ, ಮುಗದ ಹಾಗೂ ಮಂಡ್ಯಾಳದ ಸುತ್ತ ಹಬ್ಬಿರುವ ಗಿರಿ-ಕಂದರ ತಿರುಗಿದರೆ ಸಾಕು ಬೇಟೆಗಾರರ ತಂತ್ರಗಳು ಹೃದಯವನ್ನೇ ಬಾಯಿಗೆ ತರಿಸುವಂತಿವೆ!

ಸ್ವಲ್ಪ ಗಾತ್ರದಲ್ಲಿ ದೊಡ್ಡ ಪ್ರಾಣಿಯಾಗಿದ್ದರೆ ಹೆಚ್ಚು ಮಾಂಸ ದಕ್ಕಬಹುದಲ್ಲ.. ಎಂಬ ಮುಂದಾಲೋಚನೆಯ ಬೇಟೆಗಾರರು ಇಲ್ಲಿದ್ದಾರೆ. ಹಾಗಾಗಿ, ಅವರ ಈಡಿನ ಮುಖ್ಯ ಗುರಿಗಳು, ಚುಕ್ಕೆ ಜಿಂಕೆ, ಕಡವೆ, ಕಾಡುಕುರಿ, ಎರಡು ಕೊಂಬಿನ ಆಂಟಿಲೋಪ್, ಮೌಸ್ ಡೀರ್ ಎಂದು ಕರೆಯಲಾಗುವ ಬರ್ಕ, ಕಾಡು ಹಂದಿ, ಕಾಟಿ, ಹನುಮಾನ್ ಲಂಗೂರ್ ಮತ್ತು ಮುಸುವ. ಹಾರುವ ಅಳಿಲು, ಕೆಂಜಳಿಲು, ಉಡ, ಮುಂಗುಸಿ, ಪುನಗು ಬೆಕ್ಕು, ಚಿಪ್ಪು ಹಂದಿ, ಮುಳ್ಳು ಹಂದಿ, ಕಾಡು ಹಂದಿ-ಮಿಕ, ಕಾಡು ಮೊಲ, ನವಿಲು, ಕಾಡು ಪಾರಿವಾಳ, ಕಾಡು ಕೋಳಿ, ಬುರ್ಲಿ, ಕೌಜುಗ ಮುಂತಾದ ಬೊಗಸೆ ಗಾತ್ರದ ಮಾಂಸ ಹೊಂದಿದ ಪ್ರಾಣಿ-ಪಕ್ಷಿಗಳನ್ನೂ ಇವರು ದಾರಿ ಮಧ್ಯೆ ಬಲಿ ಹಾಕುತ್ತಾರೆ!

ಹಕ್ಕಿ-ಪಿಕ್ಕಿ, ಶಿಳ್ಳೆ ಖ್ಯಾತರು, ಗೋಸಾವಿಗಳು ಗಂಡು ಕೌಜುಗ (ಕ್ವಿಲ್) ಬಂಧಿಸಿ, ಕೆರೆಯ ಅಕ್ಕ ಪಕ್ಕಗಳಲ್ಲಿಟ್ಟು ಸುತ್ತಲೂ ಬೇಟೆಯ ಬಲಿಗಳನ್ನು ಹರಡುತ್ತಾರೆ. ಗಮಡಿನ ಕೂಗಿಗೆ ಆಕರ್ಷಿತವಾಗಿ ಹತ್ತಿರ ಬರುವ ಕೌಜುಗ ಬಲೆಗೆ ಬೀಳುತ್ತದೆ. ಇಲ್ಲವೇ, ಕೊನೆ ಪಕ್ಷ ಮುಧೋಳ ತಳಿಯ ಬೇಟೆ ನಾಯಿಗಳ ಬಾಯಿಗೆ ಸಿಲುಕಿಕೊಳ್ಳುತ್ತವೆ.

TRAP MADE WITH STRONG TREE CREEPERವಿಶೇಷವೆಂದರೆ, ಇವರು ನಮ್ಮ ಅರಣ್ಯ ಇಲಾಖೆಯವರ ಕಣ್ಣಿಗೆ ಬೀಳುವುದಿಲ್ಲ! ಕಾರಣ, ನಾವು-ನೀವು ಅಂದುಕೊಂಡಂತೆ ಬಾಲಿವುಡ್ ಶೈಲಿಯ ಬೇಟೆಗಾರರು ಇವರಲ್ಲ! ಬಂದೂಕು ಹೆಗಲೇರಿಸಿ, ತೆರೆದ ಜೀಪಿನಲ್ಲಿ ಹಸಿರು ಉಡಿಗೆ ತೊಟ್ಟು ತಿರುಗುವವರಲ್ಲ.. ಕಾಡಿನೊಳಗೆ ಮತ್ತು ಕಾಡಿನಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಈ ಗ್ರಾಮಸ್ಥರ ಸೋಗಿನ ಬೇಟೆಗಾರರು, ತಮ್ಮ ಸಾಂಪ್ರದಾಯಿಕ ಕೌಶಲ, ಕಾಡಿನ ಒಳದಾರಿಗಳ ಬಗ್ಗೆ  ತಮಗಿರುವ ಮಾಹಿತಿ, ಪ್ರಾಣಿಗಳ ಜಾಡು ಹಿಡಿಯಬಲ್ಲ ಅರಿವು ಬಳಸಿ ಬೇಟೆಯಾಡುತ್ತಿದ್ದಾರೆ. ಹೊರಗಿನ ಬೇಟೆಗಾರರು, ಹವ್ಯಾಸಿ ಬೇಟೆಗಾರರು, ಗೋಸಾವಿಗಳು, ಹಕ್ಕಿ-ಪಿಕ್ಕಿಗಳು, ಶಿಳ್ಳೆಖ್ಯಾತರು (ಕಿಳ್ಳಿಕ್ಯಾತರು) ಈಡಿನಲ್ಲಿ ಪಾಲು ಅಥವಾ ಹಣದ ಆಮಿಷ ಒಡ್ಡಿ ಸ್ಥಳೀಯರೊಂದಿಗೆ ಈಡಾಡಿಗಳಾಗುತ್ತಿದ್ದಾರೆ. ಹಾಗಾಗಿ, ನ್ಯ ಪ್ರಾಣಿ-ಪಕ್ಷಿಗಳಿಗೆ ಇದು ನಿತ್ಯದ ಸಾವು!

ಸನ್ಸಾರ್‌ಚಂದ್‌ನ ಸಂತಾನ!

ಕೇವಲ ಮಾಂಸಕ್ಕಾಗಿ ಅಲ್ಲ, ಪ್ರಾಣಿಗಳ ಇತರೆ ಭಾಗಗಳ ಸಂಗ್ರಹ ಹಾಗೂ ಮಾರಾಟಕ್ಕೂ ಇದು ಹೆದ್ದಾರಿ. ಒಂದರ್ಥದಲ್ಲಿ, ವ್ಯವಸ್ಥಿತವಾದ ವೃತ್ತಿಪರ ಜಾಲಗಳ ಅಹರ್ನಿಶಿ ಕೆಲಸ. ಒಟ್ಟಾರೆ, ನ್ಯಜೀವಿಗಳ ಅವಯಗಳ ಕುಖ್ಯಾತ ವ್ಯಾಪಾರಿ ಸನ್ಸಾರ್‌ಚಂದ್‌ನ ಸಂತಾನ ಇವರು.

ಪ್ರತಿ ಪ್ರಾಣಿಯ ಬೇಟೆಗೂ ಇಲ್ಲಿ ವಿಶಿಷ್ಟ ತಂತ್ರಗಳು ಬಳಕೆಯಲ್ಲಿವೆ. ರಾತ್ರಿ ವೇಳೆ ಕಾಲು ನಡಿಗೆಯಲ್ಲಿ, ನಾಡ ಕೋವಿಗಳೊಂದಿಗೆ ಬೇಟೆಯಾಡುವುದು ಇಲ್ಲಿ ಸಾಮಾನ್ಯ. ನಾಡ ಕೋವಿಗಳು ಯಾರ ಗಮನವನ್ನೂ ಸೆಳೆಯುವುದಿಲ್ಲ. ಮೇಲಾಗಿ, ಪೌಲ್ಟ್ರಿ ಫಾರ್ಮ್, ಗ್ರ್ಯಾನೈಟ್ ಉದ್ಯಮ, ಕಲ್ವತ್ತು ಯಂತ್ರಗಳ ರಕ್ಷಣೆ, ಪೀಕಿನ ಜೋಪಾನಕ್ಕೆ ರೈತರು ಇಟ್ಟುಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ನಾವು ನಿಷ್ಕರ್ಷೆಗೆ ಬರಬಹುದು. ಅಥವಾ ಜಲಮೂಲಗಳ ಸಮೀಪ, ಆಹಾರ ದಟ್ಟವಾಗಿರುವಲ್ಲಿ ಮರ-ಗಿಡಗಳ ಪೊದೆಯ ಕೆಳಗೆ ಹುಲ್ಲಿನ ‘ಹೈಡ್’ ನಿರ್ಮಿಸಿ, ನಾಡ ಬಂದೂಕು ಬಳಸಿ ಬಲಿ ಹಾಕುವುದೂ ಇದೆ. ಇಲ್ಲಿ ಬೇಟೆಗಾರರಿಗೆ ಅಪಾಯವಿಲ್ಲ!

ಬೇಟೆಗಾಗಿ ಹೊಂಚು ಹಾಕಲು ಪ್ರಶಸ್ತ ಜಾಗೆಗಳೆಂದರೆ, ನೀರಿನ ಹೊಂಡಗಳು, ಕಾಡಂಚಿನ ಮರಗಳು, ಹಣ್ಣಿನ ಮರಗಳು. ಪ್ರಾಣಿಗಳು ನಿಯಮಿತವಾಗಿ ಓಡಾಡುವ ಕಾಲು ಹಾದಿಯಲ್ಲಿVARIUOS ANGLESOF THE HIDE IN MANDHYALA VILLAGE BUILT FOR HUNTING SPOTTED DEER OR ANTILOPE (3) ಟೆಲಿಫೋನ್ ವೈರ್ ಅಥವಾ ಮೋಟಾರ್ ಬೈಕ್‌ಗಳ ಕ್ಲಚ್ ತಂತಿಗಳನ್ನು ಬಳಸಿ ತಯಾರಿಸಿದ ಉರುಳು ಬಳಸಿ ಬೇಟೆ ಇಲ್ಲಿ ಅವ್ಯಾಹತ. ಈ ತರಹದ ಸದ್ದೇ ಇಲ್ಲದ ಬೇಟೆ ಇಲ್ಲಿ ಬಹಳ ಪ್ರಚಲಿತ ಹಾಗೂ ಪರಿಣಾಮಕಾರಿ. ಸಣ್ಣ ಪ್ರಾಣಿಗಳಿಗಾಗಿ ಹಾಕಿಟ್ಟ ಉರುಳಿನಲ್ಲಿ ದೊಡ್ಡ ಪ್ರಾಣಿಗಳೂ ಬಲಿ ಬೀಳಬಹುದು!

ಬಹಳಷ್ಟು ಬೇಟೆಗಾರರ ಬಳಿ ಬಂದೂಕಿಲ್ಲ. ಆದರೆ, ಈಡು ಹೊಡೆಯಲು ಬಂದೂಕು ಕಡ ಕೊಟ್ಟವನಿಗೂ ಒಂದು ಪಾಲಿದೆ! ಕೆಲವೊಮ್ಮೆ, ಬೇಟೆ ನಾಯಿಗಳ ಬಳಕೆಯಾದರೆ ನಾಯಿ ಪಾಲೊಂದು.. ನಾಯಿ ಮಾಲಿಕನದ್ದೊಂದು ಬೇರೆ ಪಾಲು!

ಹಣ್ಣಿನ ಮರಗಳ ರೆಂಬೆ-ಕೊಂಬೆಗೆ ಅಂಟು ಬಳಿದು ಪಕ್ಷಿಗಳ ಬೇಟೆಯಾಡುವವರೂ ಇದ್ದಾರೆ! ಆಹಾರದಲ್ಲಿ ಸ್ಫೋಟಕ ಬೆರೆಸಿಟ್ಟು ಕಾಡು ಹಂದಿಯನ್ನು ಬೇಟೆಯಾಡುವ ಪರಿ, ಕಾಡು ಹಂದಿ, ಕಾಡು ಕುರಿ, ಚುಕ್ಕೆ ಜಿಂಕೆಗಳನ್ನು ಬೆನ್ನಟ್ಟಿ ಬೇಟೆಯಾಡಲು ಬೇಟೆ ನಾಯಿಗಳ ಬಳಕೆಯೂ ಇಲ್ಲಿದೆ. ಒಡೆದ ಮಣ್ಣಿನ ಮಡಕೆಯಲ್ಲಿ ವಿಷಯುಕ್ತ ನೀರನ್ನಿಟ್ಟು ಕೊಲ್ಲುವ ಮತ್ತೊಂದು ಪದ್ಧತಿಯೂ ಇದೆ. ಸತ್ತ ದನ-ಕರುಗಳ ದೇಹಕ್ಕೆ ವಿಷ ಸವರಿಟ್ಟು, ಅದನ್ನು ತಿನ್ನಲು ಬರುವ ಪ್ರಾಣಿಗಳನ್ನು ಕೊಲ್ಲುವ ವಿಧಾನವೂ ಇದೆ. ಹೊಲ-ತೋಟದ ಬೇಲಿಗೆ ವಿದ್ಯುತ್ ಹರಿಸಿಟ್ಟು, ಬೆಳೆ ರಕ್ಷಣೆಯ ಸಬೂಬಿನಲ್ಲಿ ಕಾಡು ಪ್ರಾಣಿಯ ಹನನ ಇಲ್ಲಿ ಸಾಮಾನ್ಯ ವಿಚಾರ. ಜಾ-ಟ್ರ್ಯಾಪ್ ಮಾದರಿಯ ಸ್ಥಳೀಯ ಜಾಣ್ಮೆ ಆಧರಿಸಿದ ಸ್ಪ್ರಿಂಗ್ ಟ್ರ್ಯಾಪ್‌ಗಳೂ ಬಳಕೆಯಲ್ಲಿವೆ!

ಕಾನೂನು ಪ್ರಕಾರ ನಿಷಿದ್ಧ

ಭಾರತೀಯ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿ, ಬೇಟೆ ಸಂಪೂರ್ಣ ನಿಷಿದ್ಧ. ವಿಚಾರಣೆಗೆ ಯೋಗ್ಯವಾದ ಕ್ರಿಮಿನಲ್ ಅಪರಾಧ. ವನ್ಯಜೀವಿಗಳ gಕ್ಷಣೆಗೂ ಕಾನೂನಿದೆ. ಈ ಕಾಯ್ದೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಜೀವನಾಧಾರಕ್ಕೆ ನಡೆಯುವ ಬೇಟೆ ನಿಷೇಧಿಸಬಾರದು ಎಂಬ ವಾದವೂ ಈಗ ಬಲಗೊಳ್ಳುತ್ತಿದೆ; ಆದರೆ, ಪ್ರಾಣಿಗಳಿದ್ದರೆ ತಾನೇ ಬೇಟೆ? ಈ ತರಹದ ಕುರುಚಲು ಕಾಡುಗಳಲ್ಲಿ ನಡೆಯುವ ಬೇಟೆಯ ಚಟುವಟಿಕೆ ತಡೆಯಲು ಕಾಲ್ದಳಗಳನ್ನು ರೂಪಿಸಬೇಕು. ಖಾಸಗಿ ವನ್ಯಜೀವಿ ಪರಿಪಾಲಕರನ್ನು ನಿಯುಕ್ತಿಗೊಳಿಲು ಅರಣ್ಯ ಇಲಾಖೆ ಮುಂದಾಗಬೇಕು. ಬೇಹುಗಾರಿಕೆಯಿಂದ ಮಾಹಿತಿ ಸಂಗ್ರಹಿಸಲು ಇಲಾಖೆ ಚುರುಕಾಗಿ ಕೆಲಸ ಮಾಡಲು ಸ್ಥಳೀಯರ ಸಹಕಾರದಲ್ಲಿ ಮುಂದಾಗಬೇಕು. ಅರಣ್ಯ ಕಾವಲುಗಾರರನ್ನು ಹೊಂದಿದ ತನಿಖಾ ಠಾಣೆಗಳು ಹೆಚ್ಚಾಗಬೇಕು. ರಾತ್ರಿ ವೇಳೆಯ ಗಸ್ತು ಬಿಗಿಯಾಗಿ, ಸಾರ್ವಜನಿಕರಿಗೆ ಕಾಡಲೆಯಲು ಪರವಾನಿಗೆ ನೀಡುವಾಗ ಕಟ್ಟುನಿಟ್ಟಾಗಿ ಕಾನೂನು ಪಾಲಿಸಬೇಕು. ಉಲ್ಲಂಘಿಸಿದವರಿಗೆ ಮುಲಾಜಿಲ್ಲದೇ ಯೋಗ್ಯ ಶಿಕ್ಷೆ ವಿಧಿಸಿ, ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಬೇಕು.

0001 - for Harsha wildlife article

ಕಾರಣ, ವನ್ಯಜೀವಿಗಳು ನಶಿಸಿದ ಮೇಲೆ ಅಲ್ಲಿ ಕಾಡು ಉಳಿದೀತೆ? ಅದನ್ನು ಜೀವಂತ ಕಾಡು ಎಂದು ಕರೆಯಬಹುದೇ? ‘ಮಹಾತ್ಮ ಗಾಂಧಿ ರಸ್ತೆ’, ‘ಡಾ. ಅಂಬೇಡ್ಕರ್ ವೃತ್ತ’ ಎಂದು ನಾಮಫಲಕ ಅಲ್ಲಿ ಅನಾವರಣ ಮಾಡಲು ಅಡ್ಡಿ ಇಲ್ಲ!

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ ಅಡಿ, ಅಂಗೋಲಾ ರಾಷ್ಟ್ರ ಈ ಬಾರಿಯ ಪರಿಸರ ವಿಶ್ವ ದಿನಾಚರಣೆಯ ಹೊಣೆ ಹೊತ್ತಿದೆ. ‘ವನ್ಯಜೀವಿಗಳ ಅಕ್ರಮ, ಕಾನೂನು ಬಾಹಿರ ಮಾರಾಟದ ವಿರುದ್ಧ ಹೋರಾಟ’ – ಈ ವರ್ಷದ ಪರಿಸರ ದಿನಾಚರಣೆಯ  ಧ್ಯೇಯ.

 ******

ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ರಕ್ಷಣಾ ಸಿಬ್ಬಂದಿಯ ಶೇ. ೬೦ ಹುದ್ದೆಗಳು ಸದ್ಯ ಖಾಲಿ ಇವೆ. ಕೂಡಲೇ ಆ ಹುದ್ದೆಗಳನ್ನು ಭರ್ತಿ ಮಾಡಲಿ ಸರ್ಕಾರ ಮುಂದಾಗಬೇಕು. ಅತ್ಯುತ್ತಮ ಗುಣಮಟ್ಟದ ವೈಜ್ಞಾನಿಕ ಸಲಕರಣೆಗಳನ್ನು ಒದಗಿಸಲು ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು. ದಳಗಳ ಕಾರ್ಯದಕ್ಷತೆ ಹೆಚ್ಚಿಸಲು ಗಸ್ತು ವಾಹನಗಳ ಫ್ರಿಕ್ವೆನ್ಸಿ ಹೆಚ್ಚಬೇಕು. ಉತ್ತಮ ಸಾಮರ್ಥ್ಯದ ವಾಯರ್‌ಲೆಸ್ ವ್ಯವಸ್ಥೆಯಿಂದ ಸಕಾಲಿಕವಾಗಿ ಮಾಹಿತಿ ರವಾನಿಸಲು ಸಿಬ್ಬಂದಿಗೆ ಸಾಧ್ಯ. ಮೇಲಾಗಿ, ಸದ್ಯ ಅವರಿಗೆ ನೀಡಲಾಗುತ್ತಿರುವ ಸಂಬಳ ತುಂಬ ಕಡಿಮೆ. ಕಾಡಿನಲ್ಲಿ ವಾಸಿಸಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನಾದರೂ ಒದಗಿಸಬೇಕು.   - ಪ್ರೊ. ಗಂಗಾಧರ ಕಲ್ಲೂರ, ವನ್ಯಜೀವಿಗಳ ಗೌರವ ಪರಿಪಾಲಕರು, ಧಾರವಾಡ ಜಿಲ್ಲೆ.

******

ವನ್ಯಜೀವಿ ಸಂರಕ್ಷಣೆಯ ವೈಜ್ಞಾನಿಕ ಪದ್ಧತಿಗಳನ್ನು ಅರಣ್ಯ ಇಲಾಖೆ ಅಳವಡಿಸಿಕೊಳ್ಳಲಿ. ಕಾವಲುಗಾರನಿಂದ ಹಿಡಿದು ಅತ್ಯಂತ ಮೇಲ್‌ಸ್ತರದ ಅಧಿಕಾರಿಯ ವರೆಗೆ ಸ್ಥಳೀಯ ಬೇಟೆಗಾರರ ತಂತ್ರ, ಬೇಟೆಯ ಪರಿ, ಈಡಿಗೆ ಬಲಿಯಾಗುವ ಪ್ರಾಣಿಗಳ ಜೀವನ ಶೈಲಿ ಮುಂತಾದ ಬಗ್ಗೆ ಯೋಗ್ಯ ತರಬೇತಿ ನೀಡಿದಲ್ಲಿ, ವನ್ಯಜೀವಿ ಸಂರಕ್ಷಣೆಗೆ ಹೊಸ ಆಯಾಮ ಸಿಗಬಹುದು. ನುರಿತ ವೈದ್ಯರು, ಅರವಳಿಕೆ ತಜ್ಞರು, ಜೀವಿ ಶಾಸ್ತ್ರಜ್ಞರು, ಜೀವಿ ವೈವಿಧ್ಯ ಸಂಶೋಧಕರು ತಮ್ಮ ಅನುಭವ ಹಂಚಿಕೊಂಡು, ಯೋಜಿತವಾಗಿ ಮುನ್ನಡೆದರೆ.. ಮೂಕ ಪ್ರಾಣಿಗಳ ಹಾರೈಕೆಯಿಂದ ಅವರ ಕುಟುಂಬಕ್ಕೆ ಆಯುರಾರೋಗ್ಯ ಖಂಡಿತ ಸಿಗಲಿದೆ.   - ಕುಮಾರ ಭಾಗವತ್, ಪ್ರಗತಿಪರ ಕೃಷಿಕರು, ಮಂಡ್ಯಾಳ

ಲೇಖನ: ಹರ್ಷವರ್ಧನ ವಿ. ಶೀಲವಂತ, 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*