ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ಮಡ್ ಪಡ್ಲಿಂಗ್’ಗೆ ಇಕ್ಕಟ್ಟು; ದುಂಬಿ ಸಂಸಾರಕ್ಕೆ ಬಿಕ್ಕಟ್ಟು – ಜೂನ್ ೪, ಶನಿವಾರ ಚಿಟ್ಟೆಗಳ ಜಾಗತಿಕ ದಿನ ಆಚರಣೆ

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..

ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ;

ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ !

–       ವರಕವಿ ಡಾ. ದ.ರಾ. ಬೇಂದ್ರೆ (೧೯೩೧ ‘ಗರಿ’ ಕವನ ಸಂಕಲನ)

ಧಾರವಾಡ, ಜೂನ್ ೨: ನಮ್ಮ ಪಾರಿಸಾರಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿ, ಕವಿ, ಕಲಾವಿದರ ಸೃಜನಶೀಲತೆಗೆ ಪ್ರೇರಣೆ ನೀಡುವ ಗಂಡು ಪಾತರಗಿತ್ತಿಗೆ ತನ್ನ ಪ್ರಜನನ ಮತ್ತು P1 copyಪೀಳಿಗೆಯ ಸಂಧನೆಗೆ ತರಿ ಭೂಮಿಯೇ ಆಸರೆ! ಜೌಗು ಪ್ರದೇಶವೇ ಅವುಗಳಿಗೆ ಅನ್ನ ಒದಗಿಸುವ ಅಡುಗೆ ಮನೆ!PLATE 1-1

ಹೇಗೆ ಗೊತ್ತೇ?

ತರಿ ಭೂಮಿ ಒತ್ತುವರಿಯಾದರೆ, ಕೊಚ್ಚೆ ಗುಂಡಿಯಾಗಿ, ಬಯಲು ಶೌಚದ ಮಲ ಕೂಪವಾಗಿ ಕೆರೆ, ತೊರೆ, ಹಳ್ಳ ಮತ್ತು ನದಿ ಮುಖಜ ಭೂಮಿ ಪರಿವರ್ತಿತಗೊಂಡರೆ, ಗಂಡು ದುಂಬಿಗೆ ಆಹಾರ 
ದೊರಕುವುದಿಲ್ಲ. ಆಹಾರ ಕ್ಷಾಮ ಉಂಟಾzಲ್ಲಿ ಗಂಡು ಪಾತರಗಿತ್ತಿ ಮಿಲನದ ಸಂದರ್ಭದಲ್ಲಿ ಮಣ್ಣಿನಲ್ಲಿ ಮಿಳಿತವಾದ ಲವಣಾಂಶ ಮತ್ತು ಇತರೆ ಪೋಷಕಾಂಶ (ಮಿನರಲ್ಸ್) ತನ್ನ ಹೆಣ್ಣು ಸಂಗಾತಿಗೆ ಒದಗಿಸುವಲ್ಲಿ ವಿಫಲವಾಗುತ್ತದೆ. ಇದು ಹೆಚ್ಚೂ ಕಡಿಮೆ ಹೆಣ್ಣು ಚಿಟ್ಟೆಯ ಸಂತಾನ ಹೀನತೆ ಮತ್ತು ಕೆಲವೊಮ್ಮೆ ಬಂಜೆತನಕ್ಕೂ ಕಾರಣವಾಗುತ್ತದೆ!

ಶೀತ ರಕ್ತ ಕೀಟ ಪ್ರಜಾತಿಗೆ ಸೇರಿದ ದುಂಬಿಗಳು, ಹಗಲಿನಲ್ಲಿ ಮಾತ್ರ ಚಟುವಟಕೆಯಿಂದ ಕೂಡಿದ್ದು ೨೯ ಡಿಗ್ರಿ ತಾಪಮಾನವಿರುವ ಪ್ರದೇಶದಲ್ಲಿ ಮಾತ್ರ ಬದುಕಿ ಬಾಳಬಲ್ಲವು! ಗಂಡು ದುಂಬಿ ತುಂಬ ಆಕರ್ಷಕವಾಗಿದ್ದು, ಸೂರ್ಯನ ಕಿರಣಗಳಿಗೆ ಅವು ತಮ್ಮ ರೆಕ್ಕೆಯನ್ನು ಒಡ್ಡಿದಾಗ ‘ಅಲ್ಟ್ರಾ ವಯೋಲೆಟ್ ಮಾರ್ಕಿಂಗ್’ ಮತ್ತು ‘ಮೈಕ್ರೋ ಸ್ಕೇಲ್ಸ್’ ಹೊಳೆದು ತನ್ನ ಸಂಗಾತಿಯನ್ನು (ಅದೇ ಕುಟುಂಬ, ತನ್ನದೇ ಪ್ರಜಾತಿ ಮತ್ತು ಕುಲಕ್ಕೆ ಸೇರಿದ ಹೆಣ್ಣು!) ಅವು ಆಕರ್ಷಿಸುವಲ್ಲಿ ಯಸ್ವಿಯಾಗುತ್ತದೆ.

ವಿಶೇಷವೆಂದರೆ ಹೆಣ್ಣು ದುಂಬಿ ಸಹ ತನ್ನ ‘ಮೇಟಿಂಗ್ ಬಿಹೇವಿಯರ್’ ಗಂಡು ದುಂಬಿಯ ಪುರುಷತ್ವ ಗ್ರಹಿಸಿ, ಒಪ್ಪುತ್ತದೆ! ಕಾರಣ, ತನ್ನ ಮುಂಬರುವ ಪೀಳಿಗೆ ಸದೃಢವಾಗಿರಲೇಬೇಕಲ್ಲ!

P3 copy
PLATE 2-1
ವಿಶೇಷವೆಂದರೆ, ಹೆಣ್ಣು ದುಂಬಿಗಳು ತರಹೇವಾರಿ ಪ್ರಜಾತಿಗೆ ಸೇರಿದ ಗಿಡ-ಮರಗಳ ಹೂವಿನ ಮಕರಂಧ ಹೀರಿ ಉದರಂಭರಣ ಮಾಡಿದರೆ, ಗಂಡು ಪಾತರಗಿತ್ತಿಗಳು ‘ಮಡ್ ಪಡ್ಲಿಂಗ್’ ಅಂದರೆ, ತರಿ ಭೂಮಿ, ಜೌಗು ಪ್ರದೇಶದಲ್ಲಿ ನೆಲದ ಮೇಲೆ ಕುಕ್ಕರಿಸಿ ಮಣ್ಣಿನಲ್ಲಿ ಹುದುಗಿದ ಲವಣಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಹೀರಿಕೊಂಡು, ಮಿಲನದ ಘಳಿಗೆಯಲ್ಲಿ ವೀರ್ಯದೊಂದಿಗೆ ಹೆಣ್ಣು ದುಂಬಿಗೆ ಅವು ಪೂಷಿಸುತ್ತವೆ!

ಆದರೆ, ನಮ್ಮೂರುಗಳ ಕೆರೆ, ತೊರೆ, ಹಳ್ಳ, ನದಿಗಳ ತರಿ ಭೂಮಿ ನಾನಾ ನಮೂನಿ ಒತ್ತುವರಿಯಾಗಿ ‘ಮಡ್ ಪಡ್ಲಿಂಗ್’ ಗಂಡು ಪಾತರಗಿತ್ತಿಗೆ ಇಕ್ಕಟ್ಟಾಗಿದೆ. ದುಂಬಿಯ ಸುಂದರ ಸಂಸಾರ ಈಗ ಗಂಭೀರ ಬಿಕ್ಕಟ್ಟಿಗೆ ತಳ್ಳಲ್ಪಟ್ಟಿದೆ. ‘ಮಡ್ ಪಡ್ಲ’ ಮಾಡಲು ಅವುಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ, ಅವುಗಳಲ್ಲಿ ಈಗ ವಿಚ್ಛೇದನ ಪರ್ವ ಆರಂಭವಾಗಿದ್ದರೂ ಆಶ್ಚರ್ಯವಿಲ್ಲ! ತಜ್ಞರು ಈಗಷ್ಟೇ ಈ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.

“ಅಷ್ಟೇ ಅಲ್ಲ ತಮ್ಮ ಮರಿಗಳಿಗೆ ರಕ್ಷಣೆ ಮತ್ತು ಪೋಷಣೆ ಒದಗಿಸಬಲ್ಲ ಗಿಡಗಳನ್ನಷ್ಟೇ ಅತ್ಯಂತ ಜಾಣತನಿಂದ ಅಮ್ಮ ದುಂಬಿ P2 copy
ಆಯ್ದುಕೊಂಡು ಎಲೆಗಳ ಬುಡಕ್ಕೆ ಕನಿಷ್ಟ ೧,೦೦೦ ಮೊಟ್ಟೆಯೂಡುತ್ತದೆ! ಗರಿಷ್ಟPLATE 3-1
೨,೦೦೦ ಮೊಟ್ಟೆಗಳೂ ಇರಬಹುದು. ಬದುಕುಳಿಯುವ ಸಂಖ್ಯೆ ಕೇವಲ ಶೇ.೧೦ರಷ್ಟು. ಈ ಹಂತ ಸುಮಾರು ೨ ರಿಂದ ೪ ವಾರಗಳಕಾಲವಿದ್ದು, ಪ್ರೌಢ ಹಂತ ತಲುಪಿದ ದುಂಬಿ ೧ ರಿಂದ ೨ ತಿಂಗಳುಗಳ ಕಾಲ ಬದುಕುಳಿದ ದಾಖಲೆಗಳಿವೆ. ಕೆಲ ಪ್ರಜಾತಿಯ ದುಂಬಿಗಳು ‘ಮೊನಾರ್ಕ್’ ೯ ತಿಂಗಳು ಸಹ ಜೀವಿಸಬಲ್ಲವು” ಎಂದು ಅಭಿಪ್ರಾಯಪಡುತ್ತಾರೆ ಡಾ. ಪುಲಿಕೇಶಿ ಬಿರಾದಾರ.

ಪೋಸ್ಟ್ ಡಾಕ್ಟರಲ್ ಫೆಲೋ ಡಾ. ಧೀರಜ್ ವೀರನಗೌಡರ ಪ್ರಕಾರ, “ಈ ದುಂಬಿಗಳಿಗೂ ಶತ್ರುಗಳ ಕಾಟ ಇಲ್ಲದಿಲ್ಲ! ಹಾಗಾಗಿ, ಮೈಬಣ್ಣಕ್ಕೆ ಸರಿ ಹೊಂದುವ ಪರಿಸರದಲ್ಲಿ ‘ಕಾಮೋಫ್ಲೆಜ್’ ಆಗಿ ಬಾಳುವ, ಪಾತರಗಿತ್ತಿ ಪಕ್ಕದ ಮೇಲಿನ ಬಣ್ಣವನ್ನು ತೀಕ್ಷ್ಣವಾಗಿ ಹೊಳೆಸಿ ಹೆದರಿಸುವ ಮೂಲಕ, ನಂಜುಕಾರಕ ದ್ರವ ಹೊರಸೂಸಿ ವಿಷ ಹರಡುವ ಮೂಲಕ, ಬಚಾವಾಗುವ ತಂತ್ರ ಸಿದ್ಧಿಸಿಕೊಂಡಿವೆ.”

ಪ್ರೊ. ಗಿರೀಶ ಕಾಡದೇವರು ಹೇಳುವಂತೆ -“ದುಂಬಿಗಳ ನಯನ ಮನೋಹರ ಹಾರಾಟ ವೀಕ್ಷಿಸಲು ಪ್ರಶಸ್ತವಾದ ಸಮಯ ಬೆಳಗ್ಗೆ ೮ ರಿಂದ ೧೧  ಗಂಟೆ; ಸಂಜೆ ೪ ರಿಂದ ೬ ಗಂಟೆ. ನಮ್ಮ ದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ದುಂಬಿಗಳ ದಿನಾಚರಣೆ ಹಮ್ಮಿಕೊಳ್ಳುವುದು ಸೂಕ್ತ. ಜಾಗತಿಕ ದಿನಾಚರಣೆ ಸಂದರ್ಭದಲ್ಲಿ (ಜೂನ್ ೪) ಮಳೆಗಾಲದ ಹೊಸ್ತಿಲಲ್ಲಿ ನಾವಿರುವುದರಿಂದ ಅವುಗಳ ಚಿನ್ನಾಟ ಗೋಚರಿಸುವುದು ಕಷ್ಟಸಾಧ್ಯ.”

P4 copy
PLATE 4-1
ಬರುವ ಜೂನ್ ೪, ಶನಿವಾರ ಚಿಟ್ಟೆಗಳ ಜಾಗತಿಕ ದಿನ ಆಚರಣೆ. ಕವಿವಿ ಆವರಣದ ಆಯ್ದ ೫ ಸ್ಥಳಗಳಲ್ಲಿ ಅಧ್ಯಯನ ಕೈಗೊಂಡು ೩೬ ಪ್ರಬೇಧಗಳಿಗೆ ಸೇರಿದ, ೫ ಕುಟುಂಬಗಳ ಚಿಟ್ಟೆಗಳ ಜೀವನ ಕ್ರಮದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಸಹ ಪ್ರಾಧ್ಯಾಪಕ ಡಾ. ಪುಲಿಕೇಶಿ ಬಿರಾದಾರ ಹಾಗೂ ಅವರ ಮೂವರು ವಿದ್ಯಾರ್ಥಿಗಳು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಹಿರಿಯ ವಿದ್ಯಾರ್ಥಿಗಳಾದ ಉಮಾಪತಿ ವೈ., ಉಷಾ ಡಿ. ನಾಯಕ್ ಹಾಗೂ ವೇದವತಿ ಜಿ. ನಾಯಕ್ ‘ಕವಿವಿಯ ಆವರಣದಲ್ಲಿ ದುಂಬಿಗಳ ವೈವಿಧ್ಯತೆ’ ಕುರಿತ ಶಾಸ್ತ್ರೀಯ ಅಧ್ಯಯನ ವರ್ಷಪೂರ್ತಿ ಕೈಗೊಂಡು, ಪ್ರೌಢ ಪ್ರಬಂಧ ಮಂಡಿಸಿದ್ದು, ಆವರಣದ ಹೂಸಸ್ಯ ಸಂಪತ್ತು ಮತ್ತು ದುಂಬಿಗಳಿಗಿರುವ ಅವಿನಾಭಾವ ಸಂಬಂಧ ಪತ್ತೆ ಹಚ್ಚಿದ್ದಾರೆ. ಕಳೆದ ಫೆಬ್ರವರಿ ೨೦೧೫ ರಿಂದ ಅಕ್ಟೋಬರ್ ೨೦೧೫ರ ವರೆಗೆ ೯ ತಿಂಗಳುಗಳ ಕಾಲ ಈ ಅಧ್ಯಯನ ಹಮ್ಮಿಕೊಳ್ಳಲಾಗಿದೆ.

“೩೬ ಪ್ರಜಾತಿಗೆ ಸೇರಿದ ೫ ಕುಟುಂಬಗಳ ಪಾತರಗಿತ್ತಿಗಳ ಪೈಕಿ ತುಂಬ ವಿರಳವಾದ ಎರಡು ದುಂಬಿಗಳನ್ನೂ ಸಹ ನಮ್ಮ ತಂಡ ದಾಖಲಿಸಿದೆ.  (Gram Blue – Euchrysops Cnnejus) ಗ್ರಾಮ್ ಬ್ಲೂ ಮತ್ತು (Brown King Crow – Eupleploea klugii) ಬ್ರೌನ್ ಕಿಂಗ್ ಕ್ರೋ ನಮ್ಮ ಆವರಣದ ರಾಜರು” ಎನ್ನುತ್ತಾರೆ ಪ್ರೊ. ಪುಲಿಕೇಶಿ ಬಿರಾದಾರ. ಬೊಟಾನಿಕಲ್ ಗಾರ್ಡ್‌ನ್, ಶ್ರೀನಗರ ಸರ್ಕಲ್, ವಿವಿ ಉಪಾಹಾರ ಗೃಹ, ಕೇಂದ್ರ ಗ್ರಂಥಾಲಯ, ನಿಜಲಿಂಗಪ್ಪ ಹಾಸ್ಟೆಲ್ ಮತ್ತು ಗ್ರೀನ್ ಗಾರ್ಡನ್-ಫ್ಲಾವರ್ ಗಾರ್ಡನ್ ಹೀಗೆ ಪ್ರಮುಖ ೫ ಸ್ಥಳಗಳನ್ನು ಕವಿವಿ ಆವರಣದಲ್ಲಿ ಗುರುತಿಸಿ, ಸುತ್ತಲೂ ೫೦೦ ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚೂ ಕಡಿಮೆ ೪೦೦ ಎಕರೆ ವಿಸ್ತಾರದ ಪ್ರದೇಶದಲ್ಲಿ ದುಂಬಿಗಳ ಅಧ್ಯಯನ ನಡೆದಿದೆ.

(Nymphalidaes) ನಿಂಫಾಲಿಡಿಯೇಸ್ ೧೬ ಪ್ರಬೇಧಗಳಿಗೆ ಸೇರಿದ ೧೧ ಕುಲಗಳ ದುಂಬಿಗಳು ಶೇ.೪೪ ರಷ್ಟು,  (Pieridae) P5 copy ಪೈಯೆರೇಡಿಯೇ ಕುಟುಂಬದ ೮ ಪ್ರಬೇಧಗಳಿಗೆ ಸೇರಿದ ಶೇ.೨೨ ರಷ್ಟು ಪಾತರಗಿತ್ತಿಗಳು, (Papillionidae) ಪಾಪಿಲ್ಲಿಯೋನಿಡೇಯಿ ೬ ಪ್ರಬೇಧಗಳಿಗೆ ಸೇರಿದ ಶೇ. ೧೬ ರಷ್ಟು ದುಂಬಿಗಳು,  (Lycaenidae) ಲೈಕೆ ನಿಡೆಯೀ ಕುಟುಂಬದ ೪ ಪ್ರಬೇಧಗಳಿಗೆ ಸೇರಿದ ಶೇ.PLATE 5-1 ೧೧ ರಷ್ಟು ಪಾತರಗಿತ್ತಿಗಳು, (Hesperidae)  ಹೆಸ್ಪೆರಿಡೆಯೀ ಕುಟುಂಬದ ೨ ಪ್ರಬೇಧಗಳಿಗೆ ಸೇರಿದ ಶೇ. ೫.೫ ರಷ್ಟಿರುವ ದುಂಬಿಗಳನ್ನು ಕವಿವಿಯ ಆವರಣದಲ್ಲಿ ತಜ್ಞರ ತಂಡ ಪ್ರಥಮ ಬಾರಿಗೆ ದಾಖಲಿಸಿದೆ.

“ಕವಿವಿ ಆವರಣದ ಸೌಂದರ್ಯವನ್ನು ಇಮ್ಮಡಿಸುವಲ್ಲಿ, ಗಣನೀಯ ಪ್ರಮಾಣದಲ್ಲಿ ಹೂವುಗಿಡಗಳ ಬೀಜಪ್ರಸಾರ ಮತ್ತು ಪರಾಗಸ್ಪರ್ಷದಲ್ಲಿ ದಣಿವರಿಯದ ದುಡಿಮೆ ದುಂಬಿಗಳದ್ದು. ಹಾಗಾಗಿ, ಕವಿವಿಯ ೭೮೯ ಎಕರೆ ಪ್ರದೇಶದಲ್ಲಿ ಹಬ್ಬಿರುವ ೧೫೦ ಕುಟುಂಬಗಳಿಗೆ ಸೇರಿದ ಹೂ-ಹಣ್ಣಿನ ಗಿಡಗಳ ಪರಿಣಾಮವಾಗಿ ಇಷ್ಟೊಂದು ಹೇರಳವಾಗಿ ದುಂಬಿಗಳು ಇಲ್ಲಿ ಕಾಣಸಿಗುವ ವಿಶೇಷ ಕಾರಣವನ್ನು ನಮ್ಮ ತಂಡ ಪತ್ತೆ ಹಚ್ಚಿದೆ” ಎನ್ನುತ್ತಾರೆ ವಿದ್ಯಾರ್ಥಿ ಉಮಾಪತಿ ವೈ.

P6 copy
PLATE 6-1
ದುಂಬಿಗಳನ್ನು ಪರಿಸರ ಆರೋಗ್ಯದ ಸೂಚಕವಾಗಿಯೂ ತಜ್ಞರು ಗುರುತಿಸುತ್ತಾರೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶದಲ್ಲಿ ಈಗಾಗಲೇ ತಜ್ಞರು ೩೩೪ ಪ್ರಬೇಧಗಳಿಗೆ ಸೇರಿದ ಪಾತರಗಿತ್ತಿಗಳನ್ನು ದಾಖಲಿಸಿದ್ದಾರೆ. ಆ ಪೈಕಿ ೩೭ ಪ್ರಜಾತಿಯ ದುಂಬಿಗಳು ಈಗ ವಿನಾಶದ ಅಂಚಿನಲ್ಲಿವೆ. ಐಯುಸಿಎನ್ ‘ರೆಡ್ ಲಿಸ್ಟ್’ ದಾಖಲೆ ಪ್ರಕಾರ, ಈಗಾಗಲೇ ೩೯ ಪ್ರಜಾತಿಯ ದುಂಬಿಗಳು ಸಸ್ಯ ವೈವಿಧ್ಯ ನಾವು ಕಳೆದುಕೊಂಡ ಹಿನ್ನೆಲೆಯಲ್ಲಿ ವಿಲುಪ್ತಿಯಾಗಿವೆ ಎಂದೂ ಹೇಳಿದೆ.

ನಮ್ಮ ದೇಶದಲ್ಲಿ ೧,೫೦೦ ಪ್ರಜಾತಿಗೆ ಸೇರಿದ ದುಂಬಿಗಳನ್ನು ದಾಖಲಿಸಲಾಗಿದ್ದು, ಜಗತ್ತಿನಾದ್ಯಂತ ೧೮,೦೦೦ ಪ್ರಬೇಧಗಳ ದುಂಬಿಗಳ ದಾಖಲೆ ಲಭ್ಯವಿದೆ. ಹಿಮಾಲಯದ ತಪ್ಪಲು ಅತ್ಯಂತ ವಿಶೇಷವಾದ ದುಂಬಿಗಳ ಪ್ರಜಾತಿಗೆ ಹೆರಿಗೆ ಮನೆ ಎಂದು ಗುರುತಿಸಲಾಗಿದ್ದು, ಪ್ರವಾಸಿಗರ ದಟ್ಟಣೆಯಿಂದ ಅವುಗಳ ಪಾರಿಸಾರಿಕ ವ್ಯವಸ್ಥೆಗೆ ಧಕ್ಕೆ ಬಂದೊದಗಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ಚಿತ್ರ ಶೀರ್ಷಿಕೆ: ಕವಿವಿಯ ಬೊಟಾನಿಕಲ್ ಗಾರ್ಡ್‌ನ್, ಶ್ರೀನಗರ ಸರ್ಕಲ್, ವಿವಿ ಉಪಾಹಾರ ಗೃಹ, ಕೇಂದ್ರ ಗ್ರಂಥಾಲಯ, ನಿಜಲಿಂಗಪ್ಪ ಹಾಸ್ಟೆಲ್ ಮತ್ತು ಗ್ರೀನ್ ಗಾರ್ಡನ್-ಫ್ಲಾವರ್ ಗಾರ್ಡನ್ ಹೀಗೆ ಪ್ರಮುಖ ೫ ಸ್ಥಳಗಳನ್ನು ಕವಿವಿ ಆವರಣದಲ್ಲಿ ಗುರುತಿಸಿ, ಸುತ್ತಲೂ ೫೦೦ ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚೂ ಕಡಿಮೆ ೪೦೦ ಎಕರೆ ವಿಸ್ತಾರದ ಪ್ರದೇಶದಲ್ಲಿ ಕೈಗೊಳ್ಳಲಾದ ದುಂಬಿಗಳ ಅಧ್ಯಯನದ ಚಿತ್ರಗಳು.

 ಹೆಚ್ಚಿನ ಮಾಹಿತಿಗೆ: ಡಾ. ಪುಲಿಕೇಶಿ ಬಿರಾದಾರ: ೯೪೪೮೦೩೮೯೫೮/ ಡಾ. ಧೀರಜ್ ವೀರನಗೌಡರ: ೯೮೬೦೫೨೭೪೮

ಬರಹ: ಹರ್ಷವರ್ಧನ ವಿ. ಶೀಲವಂತ,

ಚಿತ್ರಗಳು :  ಡಾ. ಪುಲಿಕೇಶಿ ಬಿರಾದಾರ, ಉಮಾಪತಿ ವೈ., ಉಷಾ ಡಿ. ನಾಯಕ್ ಹಾಗೂ ವೇದವತಿ ಜಿ. ನಾಯಕ್.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*