ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೨: ೧೮ ಹಳ್ಳಿಗೆ ಆಶ್ರಯವಾಗಿದ್ದ ಕೆರೆ, ಈಗ ಬೆಳ್ಳಗಿನ ವಿಷದ ಬ್ಲೂಬೇಬಿ!

ಒಂದು ಕಾಲದಲ್ಲಿ ೧೮ ಹಳ್ಳಿಗಳಿಗೆ ಕುಡಿಯುವ ನೀರಿಗೆ ಆಸರೆ ಈ ಕೆರೆ. ಇಂದು ಬೆಳ್ಳಗಿನ ವಿಷ ಕಾರುವ ನೊರೆ. ಇಲ್ಲಿ ಸುತ್ತಮುತ್ತ ಉಸಿರಾಡಿದರೂ ರೋಗಾಣುಗಳು ದೇಹ ತುಂಬಿಕೊಳ್ಳುವ ಆತಂಕ. ಅಷ್ಟೇ ಅಲ್ಲ, ಮಕ್ಕಳ ‘ಬ್ಲೂಬೇಬಿ’! ಇಷ್ಟಾದರೂ ದಶಕಗಳ ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಯಾರೂ ಈವರೆಗೆ ಇಚ್ಛಾಶಕ್ತಿಯ ಪ್ರಯತ್ನವನ್ನೇ ಮಾಡಿಲ್ಲ. ಬದಲಿಗೆ ನೂರಾರು ಕೋಟಿ ವೆಚ್ಚದ ಯೋಜನೆಗಳು ಕಾಗದದ ಮೇಲಷ್ಟೇ ಸಿದ್ಧವಾಗಿವೆ. ಅದಕ್ಕೇ ಬೆಳ್ಳಂದೂರು ಕೆರೆ ಬೆಳ್ಳಗಿನ ವಿಷದ ತಾಣವಾಗೇ ಉಳಿದಿದೆ!

ಬೆಳ್ಳಂದೂರು ಕೆರೆಗೆ ೩೬೪ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಸುಮಾರು ೮೮೦ ಎಕರೆ ಪ್ರದೇಶದಲ್ಲಿದ್ದು ಸುಮಾರು ೧೩೦ ವರ್ಷಗಳ ಇತಿಹಾಸ ಹೊಂದಿದೆ. ೧೪೮ ಚದರ ಕಿಮೀ ವ್ಯಾಪ್ತಿಯ ಜಲಾನಯನ ಪ್ರದೇಶವೂ ಈ ಕೆರೆಯ ದಾಖಲೆ. ಪಿನಾಕಿನಿ ನದಿಗೆ ಈ ಕೆರೆ ಹಾಗೂ ಇದರೊಂದಿಗಿನ ಕೆರೆ ಸರಣಿಯ ಕಣಿವೆಯೇ ಜೀವಾಳ. ಆದರೆ, ದಶಕಗಳಿಂದ ಈ ಬೃಹತ್ ಕೆರೆಯಲ್ಲಿ ಕೇವಲ ಕಲ್ಮಶ-ರಾಸಾಯನಿಕದ್ದೇ ಪ್ರಭುತ್ವ. ೧೯೭೦ರಲ್ಲಿ ಸುತ್ತಮುತ್ತಲಿನ ೧೮ ಹಳ್ಳಿಗಳ ನಾಗರಿಕರು ಕುಡಿಯುವ ನೀರಿಗೆ ಬೆಳ್ಳಂದೂರು ಕೆರೆಯನ್ನೇ ಆಶ್ರಯಿಸಿದ್ದರು. ಈಗ ಈ ಕೆರೆಯ ಸುತ್ತಮುತ್ತ ನಾವೇಕೆ ಇದ್ದೇವೆ ಎಂಬ ಪರಿಸ್ಥಿತಿಗೆ ಬಂದಿದ್ದಾರೆ.

Bellanduru-P1೧೯೮೦ರಿಂದೀಚೆಗೆ ಬೆಳ್ಳಂದೂರು ಕೆರೆಗೆ ನೀರು ಕಲ್ಪಿಸುವ ಕಾಲುವೆಗಳು ಸ್ಥಗಿತಗೊಂಡವು. ಮಳೆ ನೀರು ಬಂದು ಕೆರೆ ಶುಚಿಗೊಳ್ಳುವ ಕಾಲ ಮುಕ್ತಾಯವಾಯಿತು. ಹಕ್ಕಿಗಳಿಗೆ ಪ್ರಮುಖ ತಾಣವಾಗಿದ್ದ ಬೆಳ್ಳಂದೂರು ಕೆರೆಯ ಮಾಲಿನ್ಯದಿಂದ ಹಕ್ಕಿಗಳೂ ಈ ಕೆರೆಯನ್ನು ತೊರೆದವು. ಇತ್ತೀಚೆಗೆ ಕೋಡಿಯಲ್ಲಿ ಬೆಂಕಿ ಕಾಣಿಕೊಂಡಿದ್ದ ಯಮಲೂರು ಕೆರೆಯಲ್ಲಿ ೧೯೯೭ರವರೆಗೆ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಇಂದು ಅಲ್ಲಿರುವುದು ನೀರು ಎಂದು ಹೇಳಲು ಯಾರೂ ಸಿದ್ಧರಿಲ್ಲ. ೧೯೮೦ರಲ್ಲಿ ಬೆಳ್ಳಂದೂರು ಕೆರೆಯಲ್ಲಿ ಆರಂಭವಾದ ಬಿಳಿ ನೊರೆ ಇಂದಿಗೂ ಸಾರ್ವಭೌಮತ್ವ ಪಡೆದಿದೆ. ೧೯೮೦ರಲ್ಲಿ ಕಣ್ಣನ್ ಎಂಬುವವರು ಅಂದಿನ ನೊರೆಯಲ್ಲಿರುವ ಬೆಳ್ಳಂದೂರು ಕೆರೆಯ ಚಿತ್ರ ತೆಗೆದಿದ್ದನ್ನು ಹೊಸ ದಿಲ್ಲಿಯ ಸೆಂಟರ್ ಫ಼ಾರ್ ಸೈನ್ಸ್ ಆಂಡ್ ಎನ್ವಿರಾನ್‌ಮೆಂಟ್ ಸಂಸ್ಥೆ (ಸಿಎಸ್‌ಸಿ) ತನ್ನ ಅಧ್ಯಯನ ವರದಿಯಲ್ಲೂ ಪ್ರಕಟಿಸಿದೆ.

ಕೋರಮಂಗಲ-ಚಲ್ಲಘಟ್ಟ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಅಧ್ಯಯನದಲ್ಲಿ ಶೇ.೩೫ರಷ್ಟು ಕೊಳವೆ ಬಾವಿಗಳ ನೀರಿನ ಕಲುಷಿತ ಪ್ರಮಾಣ ಪ್ರತಿ ಲೀಟರ್‌ಗೆ ೫೦ ಎಂಎಲ್‌ನಿಂದ ೭೫೦ ಎಂಎಲ್‌ವರೆಗೆ ಇದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುವ ನೈಟ್ರೇಟ್ ಮಾಲಿನ್ಯ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಅಂತರ್ಜಲ ಸೇರಿಕೊಂಡಿದೆ. ಇದಕ್ಕೆ ಒಳಚರಂಡಿ ನೀರು, ಸೆಪ್ಟಿಕ್ ಟ್ಯಾಂಕ್, ಕೃಷಿ ತ್ಯಾಜ್ಯ ಹಾಗೂ ಕೈಗಾರಿಕೆ ಮಾಲಿನ್ಯ ಕಾರಣ ಎಂದು ಇಲಾಖೆ ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲ, ಆರೋಗ್ಯದ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾ ಪ್ರಮಾಣ ಪ್ರತಿ ೧೦ ಮಿಲಿಲೀಟರ್‌ಗೆ ೨೩ ಎಂಪಿಎನ್‌ನಷ್ಟಿದೆ. ಇದು ಗರಿಷ್ಠವಾಗಿದ್ದು, ಇದು ೦ ಎಂಪಿಎನ್‌ನಷ್ಟಿರಬೇಕು. ಅಂತರ್ಜಲವನ್ನು ಇಷ್ಟು ಮಲಿನಗೊಳಿಸಿರುವ ಈ ಕಣಿವೆಯ ಮೇಲ್ಮೈ ನೀರು ಇನ್ನೆಷ್ಟು ಹಾನಿಕಾರ ಎಂಬದನ್ನು ಯಾರು ಬೇಕಾದರೂ ಅರಿಯಬಹುದು. ಆದರೆ ಅಧಿಕಾರದಲ್ಲಿರುವವರಿಗೆ ಮಾತ್ರ ಏನೂ ಕಾಣಿಸದು, ತಿಳಿಯದು!

ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ೨೦೦೩ರ ಏಪ್ರಿಲ್‌ನಲ್ಲಿ ಅಂತರ್ಜಲದ ಗುಣಮಟ್ಟ ಪರೀಕ್ಷಿಸಲು ನಗರದ ೭೩೫ ಪ್ರದೇಶಗಳಲ್ಲಿ ೯೧೮ ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಇದಲ್ಲಿ ೩೭೦ಕ್ಕೂ ಹೆಚ್ಚು ಪ್ರದೇಶಗಳಲ್ಲಿರುವ ಅಂತರ್ಜಲ ಗೃಹ ಬಳಕೆಗೇ ಯೋಗ್ಯವಲ್ಲ ಎಂಬುದು ಸಾಬೀತಾಗಿದೆ. ಇಲ್ಲಿನ ಕಲುಷಿತ ಪ್ರಮಾಣ ಇಂಡಿಯನ್ ಬ್ಯೂರೊ ಅಂಡ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿರುವ ಮಟ್ಟಕ್ಕಿಂತ ಅತಿ ಹೆಚ್ಚಾಗಿದೆ. ೨೬೨ ಸ್ಯಾಂಪಲ್‌ಗಳಲ್ಲಿ ಒಳಚರಂಡಿ ನೀರಿನ ಕಲುಷಿತ ಹೆಚ್ಚಾಗಿದ್ದು, ನೈಟ್ರೇಟ್ ಮಟ್ಟ ‘ಪರ್ಮಿಸಬಲ್ ಲಿಮಿಟ್’ಗಿಂತ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ ೬೬೬ ಆಗಿದೆ. ಇದು ನೈಟ್ರೇಟ್ ಮಾಲಿನ್ಯವನ್ನು ಸ್ಪಷ್ಟಪಡಿಸಿದ್ದು, ಇದೇ ಮಕ್ಕಳಲ್ಲಿ ‘ಬ್ಲೂಬೇಬಿ’ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ‘ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಅಂತರ್ಜಲದ ಮಾಲಿನ್ಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಿಸ್ತರಿಸುತ್ತದೆ. ನಗರದ ಶೇ.೪೦ರಷ್ಟು ಮಂದಿ ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿರುವುದರಿಂದ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ’ ಎಂದು ಅಧ್ಯಯನ ತನ್ನ ವರದಿಯ ಅಂತ್ಯದಲ್ಲಿ ಹೇಳಿದೆ. ಈ ವರದಿ ೨೦೦೩ರದ್ದು. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಅಂದರೆ, ಮಾಲಿನ್ಯದ ಪ್ರಮಾಣ ೧೦ ವರ್ಷದಲ್ಲಿ ಕನಿಷ್ಠ ೧೦ ಪಟ್ಟಾದರೂ ಹೆಚ್ಚಾಗಿರುತ್ತದೆ ಎಂಬುದು ತಜ್ಞರ ಅಭಿಮತ. ಇದೇಕೆ ಅಭಿವೃದ್ಧಿ ಯೋಚಿಸುವ, ಯೋಜಿಸುವ ಅಧಿಕಾರಸ್ಥರ ಗಮನಕ್ಕೆ ಬರುವುದಿಲ್ಲ?

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*