ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗೋಕುಲಧಾಮದಲ್ಲಿ ಸದ್ದಿಲ್ಲದ ಗೋರಕ್ಷಣೆ, ಜಲಸಂರಕ್ಷಣೆ

ಈ ವರ್ಷ ನೀರಿನ ಅಭಾವಕ್ಕೆ ಪಶ್ಚಿಮಘಟ್ಟದ ಪ್ರದೇಶವೂ ಹೊರತಾಗಿಲ್ಲ. ಗೋವಾ ಹಾಗೂ ಕರ್ನಾಟಕ ಗಡಿಯಂಚಿನಲ್ಲಿ ಬರುವ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ ಬಳಿ ಬರುವ ಅಮಗಾಂವ್ ಹೆಚ್ಚು ಮಳೆ ಬೀಳುವ ಪ್ರದೇಶ. ಆದರೆ ಇಲ್ಲಿಯೂ ನೀರಿನ ಅಭಾವ ತಲೆದೋರಿದೆ. ಆದರೆ ಅಮಗಾಂವ್‌ಗೆ ಹೋಗುವ ರಸ್ತೆ ಬದಿಗೆ ನಮಗೆ ವೇದಕಾಲದ ಮಾದರಿಯ ಗುಡಿಸಲುಗಳ ಸುತ್ತ ಹಸಿರು ನಳನಳಿಸುತ್ತಿದೆ. ತರಕಾರಿ ತೋಟ ಕೈ ಬೀಸಿ ಕರೆಯುತ್ತಿದೆ. ಕುತೂಹಲಕ್ಕೆ ಒಳಹೊಕ್ಕರೆ ವಿಸ್ಮಯ ಕಾದಿದೆ. ಹೊರಗೆ ಗಾಳಿಯಂತ್ರ. ಸುತ್ತಲೂ ತರಕಾರಿ ತೋಟ. ಈ ಮಧ್ಯೆ ಹರೇ ಕೃಷ್ಣ ಹರೇ ರಾಮ ಎನ್ನುವ ಮಂತ್ರದ ಘೋಷ, ತೋಟದಲ್ಲಿ ಹಾಗೂ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಯುವಕ ಪಡೆ ಕಂಡು ಬರುತ್ತದೆ. ಯಾರಿವರು ಎನ್ನುವ ಕುತೂಹಲದಿಂದ ಒಳಗೆ ಹೊರಟಲ್ಲಿ ಸಿಗುವ ಉತ್ತರ ನಿಜಕ್ಕೂ ಅದ್ಭುತ ಹಾಗೂ ಅನುಕರಣೀಯ.

DSC05214ಯುವಕರಲ್ಲೊಬ್ಬ ನಾವು ನಮ್ಮ ಪ್ರಭುಗಳಿಗೆ ಊಟ ಒಯ್ಯಲು ಅಡುಗೆ ಸಿದ್ಧಪಡಿಸುತ್ತಿದ್ದೇವೆ. ಅವರು ಪಕ್ಕದ ಕಾಡಿನಲ್ಲಿರುತ್ತಾರೆ. ಅಲ್ಲೇ ಊಟ, ಪಾಠ , ಸಾಂಪ್ರದಾಯಿಕ ಕೃಷಿ ಅಂತ ಹೇಳಿದ್ದೇ ತಡೆ ಕುತೂಹಲ ಇನ್ನೂ ಹೆಚ್ಚಾಯಿತು. ತಡಮಾಡದೇ ನಾನು ಅವರನ್ನು ಬೆನ್ನತ್ತಿದೆ. ಸುಮಾರು ೩ ಕಿ.ಮೀ ಕಾಡಿನ ಪಯಣದ ನಚಿತರ ಸಿಕ್ಕದ್ದು ಮಣ್ಣಿನ ಗೋಡೆಯ ಗುಡಿಸಲು. ಪ್ರಭುಜೀ ಅಂತ ಕೂಗಿದಾಗ ಅವರಲ್ಲಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ತೆಳ್ಳಗಿನ ಮೈಕಟ್ಟಿನ ವ್ಯಕ್ತಿ ಬಂದು ವಿನಮ್ರವಾಗಿ ಕೈ ಮುಗಿದು ನಮಸ್ಕಾರ ಎಂದರು. ಪರಸ್ಪರ ಪರಿಚಯವಾಯ್ತು. ಅವರ ಹೆಸರು ಗೋಕುಲದಾಸ ಅಂತ.  ಮಾತಿಗಿಳಿದ ನಾವು ತಾವೇನಿಲ್ಲಿ ಗುಡ್ಡದಲ್ಲಿ ಕೃಷಿ ಮಾಡ್ತಾ ಇದ್ದೀರಿ? ಬರಡು ಗುಡ್ಡ ಎನಿಸುತ್ತದೆ ಅಂತ ಕೇಳಿದೊಡನೆ ಬರಡು ಯಾರು ಹೇಳಿದ್ದು ಬರಡು ಅಂತ ಅವರಿಂದ ಉತ್ತರ ಕೇಳಿ ಆಶ್ಚರ್ಯವಾಯಿತು. ನಾವು ನಮ್ಮ ನೆಲವನ್ನು ಕಡೆಗಣಿಸಿದ್ದೇವೆ ಅಂತ ಆ ವ್ಯಕ್ತಿ ಮಾತನಾಡಲು ಹೊರಟರು.

ಜಗತ್ತಿನಲ್ಲಿ ಸುಭಿಕ್ಷೆ ನೆಲೆಸಲು ಮೂಲ ನೆಲ ಅಂದರೆ ಭೂಮಿ. ಈ ಭೂಮಿಯ ಮಹತ್ವ ಇಂದು ಬಹುಜನರಿಗೆ ತಿಳಿದಿಲ್ಲ. ಪ್ರತಿಯೊಂದಕ್ಕೂ ಭೂಮಿಯಲ್ಲಿ ಪರಿಹಾರವಿದೆ ಎಂದು ನಮ್ಮ ವೇದಗಳು, ಉಪನಿಷತ್ತುಗಳು ಸಾರಿ ಹೇಳಿವೆ. ಯಂತ್ರಗಳ ಬದಲು ಗೋಗಳು ಪಾದವಿಟ್ಟ ಸ್ಥಳದಲ್ಲಿ ಬಿತ್ತಿ ಉತ್ತಿ ಉತ್ತಮ ಕೃಷಿ ಮಾಡಬಹುದು. ಗೋ ನಮ್ಮ ನಿಜವಾದ ಸಂಪತ್ತು. ಅವುಗಳ ಸದ್ಬಳಕೆ ನಮಗೆ ತಿಳಿದಿಲ್ಲ. ಕೃಷಿಗೆ ಅಧ್ಯಾತ್ಮದ ಸ್ಪರ್ಶ ನೀಡುವುದರ ಜತೆಗೆ ಅದರ ಹಿನ್ನೆಲೆ ಅರಿತಲ್ಲಿ, ಕೃಷಿ ಸಹಜವಾಗಿಯೇ ನೀಡುವುದು ಖುಶಿ ಅಂತ ಹೇಳಿದ್ದು ಕೇಳಿ ನಿಜವೆನಿಸಿತು.

ಯಾರು ಈ ಗೋಕುಲದಾಸ್?

DSC_9341ಪ್ರಕೃತಿದತ್ತ ದೊರೆಯುವ ವಸ್ತುಗಳಲ್ಲಿ ಸುಸ್ಥಿರ ಬದುಕು ಕಟ್ಟಿಕೊಳ್ಳುವ ಮಾರ್ಗವಿದೆ ಎಂದು ಹೇಳುತ್ತ ೪೫೩ ಎಕರೆ ಪ್ರದೇಶದಲ್ಲಿ ಗೋಕುಲಧಾಮ ಎಂಬ ಹೆಸರಿನಡಿ ಒಂದು ಆಶ್ರಮ  ಬೆಳಗಾವಿ-ಗೋವಾ ಹೆದ್ದಾರಿ ಮಧ್ಯೆ ನಡೆಯುತ್ತಿದೆ. ಗೋಕುಲದಾಸ ಈ ಆಶ್ರಮದ ರೂವಾರಿ ಮೂಲತ: ಶಿಲ್ಲಾಂಗದವರು.  ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ  ನೆಮ್ಮದಿಯ ಕೃಷಿ ಬದುಕಿಗೆ ದಾರಿ ತೋರಿದ್ದಾನೆ ಎಂದು ಹೇಳುವ ಇವರು, ನಿಸರ್ಗದಲ್ಲಿ ಎಲ್ಲದಕ್ಕೂ ಉತ್ತರವಿದೆ ಅಂತಾರೆ. ತತ್ವಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

ಉತ್ಸಾಹಿ ಯುವಪಡೆ

ಸಾಫ್ಟವೇರ್ ಎಂಜನೀಯರ್ ಆಗಿದ್ದ ೬ರಿಂದ ೭ಮಂದಿ ಇಂದು ಆ ವೃತ್ತಿ ತೊರೆದು, ಇವರೊಡನೆ ಬಂದು ನೆಲೆಸಿದ್ದು ಸಾವಯವ ಕೃಷಿ ಜತೆ ನೆಲ ಸಂಸ್ಕೃತಿ ಅಳವಡಿಸಿಕೊಂಡಿದ್ದಾರೆ.  ವೈದಿಕ ಋಷಿ ಸಂಸ್ಕೃತಿ ಪ್ರಚುರಪಡಿಸಬೇಕೆಂಬ ಮಹದಾಸೆ ಇವರದು. ಕಳೆದ ೮ ವರ್ಷದಿಂದ ಆ ನಿಟ್ಟಿನಲ್ಲಿ ಯತ್ನ ನಡೆದಿದೆ. ಸೋಪು, ಪೇಸ್ಟ್ ಬಳಕೆಗೆ ಇಲ್ಲಿ ಅವಕಾಶವಿಲ್ಲ. ಸುತ್ತಮುತ್ತ ಗ್ರಾಮಸ್ಥರಿಗೂ ಉದ್ಯೋಗಾವಕಾಶ ಮಾಡಿಕೊಟ್ಟಿದ್ದಾರೆ; ಆ ಮೂಲಕ ನಗರ ವಲಸೆ ತಡೆದಿದ್ದಾರೆ. ೩೦ಕ್ಕೂ ಹೆಚ್ಚು ಗೋಗಳಿವೆ. ಅವ್ಯಾವನ್ನೂ ಇಲ್ಲಿ  ಕಟ್ಟಿ ಹಾಕಿಲ್ಲ. ಸ್ವಚ್ಛಂದದಿಂದ ಓಡಾಡಿಕೊಂಡಿವೆ. ಕಪ್ಪು ಹೆಂಚಿನ ಚಾವಣಿ ಹಾಗೂ ಸುಣ್ಣ ಮತ್ತು ಸ್ಥಳೀಯ ಮಣ್ಣು ಮಿಶ್ರಣ ಮಾಡಿ ಇಲ್ಲಿನ ಆಶ್ರಮದ ಗೊಡೆಗಳನ್ನು ಕಟ್ಟಲಾಗಿದೆ. ಪಕ್ಕದಲ್ಲೇ ವಿದ್ಯುತ್ ಲೈನ್ ಇದ್ದರೂ ಸಂಪರ್ಕ ತೆಗೆದುಕೊಂಡಿಲ್ಲ.  ನೀರೆತ್ತಲು ಪವನ ವಿದ್ಯುತ್ ಬಳಕೆ ಇದೆ. ಇನ್ನುಳಿದಂತೆ  ಚಿಮಣಿಯೇ ಗತಿ. ಮೊಬೈಲ್ ಬಳಕೆಯಂತೂ ಇಲ್ಲವೇ ಇಲ್ಲ.

DSC_9348ಬದಲಾದ ಸನ್ನಿವೇಶದಲ್ಲಿ ಇಂದು ಕೃಷಿ ಬದುಕು ಅಸ್ಥಿರಗೊಳ್ಳುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಹಾಗಿದ್ದರೆ, ನಮ್ಮ ವೇದಕಾಲಗಳಲ್ಲಿ ಕೃಷಿ ಬದುಕು ಹೇಗಿತ್ತು? ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ, ಕೃಷಿ, ಗೋರಕ್ಷಾ ಒಂದಕ್ಕೊಂದು ಪೂರಕವಾದುವು. ಗೋವಿನ ಮಹತ್ವ ಅರಿಯದ ನಾವು ದುರಾಸೆಗೆ ಬಿದ್ದು ಇನ್ನಿಲ್ಲಿದ ಅವಘಡಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದೇವೆ ಎಂದು ಉದಾಹರಣೆ ಸಮೇತ ತಿಳಿಸುತ್ತಾರೆ ಗೋಕುಲದಾಸ್ ಅವರು.

ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸುವುದು ಬಿಟ್ಟು ಹೊರಗಿನದಕ್ಕೆ ಆಸೆ ಪಟ್ಟು ಎಲ್ಲವನ್ನೂ ಹಾಳು ಮಾಡಿಕೊಂಡಿದ್ದೇವೆ ಅಂತಾರೆ ಗೋಕುಲದಾಸ್. ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿ ಇನ್ನಿಲ್ಲದ ಪೈಪೋಟಿಗಿಳಿಯದೇ, ಮರ್ಯಾದೆಯುತ ಬದುಕು ನಡೆಸಬೇಕು. ಇದಕ್ಕೆ ಅವಕಾಶವಿದೆ. ಕೊಳವೆಬಾವಿ ಕೊರೆಸುವ ಬದಲು ಗುಡ್ಡದ ಮೇಲಿನಿಂದ ಬೀಳುವ ನೀರಿಗೆ ಚೆಕ್ ಡ್ಯಾಮ್ ಕಟ್ಟಿ ನೀರು ಸಂಗ್ರಹಿಸಿದವರು ಗೋಕುಲದಾಸ್.  ಮಳೆ ಪ್ರಮಾಣ ಕ್ಷೀಣಿಸುತ್ತಿರುವುದನ್ನು ಕಂಡು ಎಚ್ಚೆತ್ತ ಗೋಕುಲದಾಸ್, ವರ್ಷವಿಡೀ ನೀರು ಸಿಗುವಂತಾಗಲು ಹೊಂಡಗಳನ್ನು, ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿದ್ದಾರೆ. ಮೇಲಿಂದ ಹರಿದು ಬರುವ ಮಳೆ ನೀರನ್ನು ಅಲ್ಲಲ್ಲಿ ತಡೆಹಿಡಿದು ಇಂಗುವಂತೆ ಮಾಡಿದ್ದಾರೆ. ಇದರಿಂದ ಸುತ್ತಲಿನ ಪ್ರದೇಶದ ಅಂತರ್ಜಲಮಟ್ಟವೂ ಏರಿದೆ. ಸುತ್ತ ಗಿಡಮರಗಳನ್ನು ನೆಟ್ಟಿದ್ದಾರೆ. ಮಳೆ ನೀರು ಸ್ವಲ್ಪವೂ ವ್ಯರ್ಥವಾಗದ ಹಾಗೆ ನೋಡಿಕೊಂಡಿರುವುದು ಇಲ್ಲಿನ ವಿಶೇಷ.

ಆಧುನಿಕತೆ ಸೋಂಕಿಲ್ಲ

DSC_9344ಈ ಧಾಮದಲ್ಲಿ ಆಧುನಿಕತೆ ಎನ್ನುವ ಪದಕ್ಕೆ ಸ್ಥಳವೇ ಇಲ್ಲ. ವಿದ್ಯುತ್ ಸಂಪರ್ಕವಿಲ್ಲ, ಮೊಬೈಲ್, ಸ್ಥಿರ ದೂರವಾಣಿ, ಸ್ಟೀಲ್, ಪ್ಲಾಸ್ಟಿಕ್, ಮಿಕ್ಸರ್, ಟಿವಿ ರೇಡಿಯೋ ಇವ್ಯಾವುಗಳಿಗೆ ಇಲ್ಲಿ ಜಾಗವೇ ಇಲ್ಲ. ಅಲ್ಲೇ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುತ್ತಾರೆ. ಅದನ್ನೇ ಅಡುಗೆಗೆ ಬಳಸುತ್ತಾರೆ. ತಾವೇ ಸಾಕಿದ ಆಕಳುಗಳ ಹಾಲಿನ ಉತ್ಪನ್ನಗಳನ್ನು ಬಳಸುತ್ತಾರೆ. ಎಲೆ ಊಟ. ದೊನ್ನೆಯಲ್ಲಿ ಮಜ್ಜಿಗೆ ಕುಡಿಯುವುದು. ಹಲಸಿನ ದೋಸೆಯಂತೂ ಸಖತ್ತಾಗಿ ಮಾಡ್ತಾರೆ. ಸಾಂಬಾರು ಪದಾರ್ಥಗಳನ್ನೂ ಬೆಳೆದಿದ್ದಾರೆ. ಇವರು ವಾಸಿಸುವ ಗುಡಿಸಲುಗಳನ್ನು ಕಟ್ಟಲು ಸಿಮೆಂಟ್ ಬದಲು ಸುಣ್ಣದ ಗೊರಚನ್ನು ಬಳಸಿದ್ದು ವಿಶೇಷ. ಮೇಳೆ ಹೆಂಚು ಹಾಕಲಾಗಿದೆ. ಅದರ ಮೇಲೆ ಬೀಳುವ ಮಳೆ ನೀರು ಕೂಡ ವ್ಯರ್ಥವಾಗದಂತೆ ಹಿಡಿದಿಡಲಾಗುತ್ತದೆ. ಇಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ.

ಗೋರಕ್ಷಣೆ ಕೈಂಕರ್ಯ

DSC05222ಇಲ್ಲಿ ಸುಮಾರು ೨೫ಕ್ಕೂ ಹೆಚ್ಚು ಗೋವುಳಿವೆ. ಇವುಗಳ ರಕ್ಷಣೆಯ ಕಾರ್ಯ ಇಲ್ಲಿ ಭರದಿಂದ ಸಾಗಿದೆ. ೪೫೦ ಎಕರೆ ವಿಶಾಲ ಪ್ರದೇಶದಲ್ಲಿ ಮೇಯಲು ಬಿಡುತ್ತಾರೆ. ಸಂಜೆ ಮರಳಿದ ನಂತರ ಸೊಳ್ಳೆ ಕಚ್ಚದಿರಲಿ ಅಂತ, ಮೇಲೆ ಛಾವಣಿ ಹಾಕಲಾಗಿದೆ. ಗುಡ್ಡದಲ್ಲಿ ಬೆಳೆದ ಹುಲ್ಲು ಇವುಗಳಿಗೆ ಉತ್ತಮ ಆಹಾರ. ಗೋಗಳು ಭೂಮಿ ಮೇಲೆ ಓಡಾಡುವುದರಿಂದ ಭೂಮಿ ಹಗುರಾಗುತ್ತದೆ. ಜತೆಗೆ ಫಲವತ್ತತೆಯೂ ಹೆಚ್ಚಾಗುತ್ತದೆ. ಅವುಗಳು ಹಾಕುವ ಸೆಗಣಿಯಿಂದ ಗೊಬ್ಬರ ಸಿಗುತ್ತದೆ ಎನ್ನುವ ವಿಶ್ವಾಸ ಇವರದ್ದು. ಇವರ ಈ ಕೆಲಸದಲ್ಲಿ ಸುತ್ತ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಕೆಲಸ ಅರಸಿ ಗೋವಾಕ್ಕೋ, ಬೆಳಗಾವಿಗೋ ಹೊಗುವುದನ್ನು ತಡೆಗಟ್ಟಲು ಇವರು ಶ್ರಮಿಸಿದ್ದಾರೆ. ಅವರಿಗೊಂದಿಷ್ಟು ಕೆಲಸ ನೀಡಿ ಗ್ರ್ರಾಮ ತೊರೆಯದಂತೆ ಮಾಡಿದ್ದಾರೆ.

 ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಹಮ್ಮಿಕೊಳ್ಳುವ ಆಲೋಚನೆ ಇವರದ್ದು. ಗುಡ್ಡದ ಬರಡು ಭೂಮಿಯಲ್ಲಿ ಹಸಿರು ನಳನಳಿಸುವಂತಾಗಬೇಕೆನ್ನುವ ಕನಸು ಹೊತ್ತು ದೇಸೀ ತಂತ್ರಜ್ಞಾನದೊಂದಿಗೆ ದಾಪುಗಾಲಿಡುತ್ತಿರುವ ಗೋಕುಲದಾಸ್‌ರ ಶ್ರಮದ ಹಾದಿ ನಿಜಕ್ಕೂ ಅನುಕರಣೀಯ.

 ಚಿತ್ರ-ಲೇಖನ: ನಿತ್ಯಸಿರಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*