ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬೇಸಿಗೆ-ಬರ ಜೇನು ನೊಣಗಳು ಮತ್ತು ಗೂಡು (ಹುಟ್ಟು) ಸಂಕಷ್ಟದಲ್ಲಿ

ಧಾರವಾಡ: ಬಿರು ಬೇಸಿಗೆ ಮತ್ತು ಬರಗಾಲ ಈ ಬಾರಿ ಇಡೀ ರಾಜ್ಯವನ್ನೇ ಬಾಧಿಸಿದೆ. ಅದರಲ್ಲೂ ಉತ್ತರ ಮತ್ತು ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳು ಹನಿ ನೀರಿಗೂ ತತ್ವಾರ ಎದುರಿಸುತ್ತಿವೆ. ಬಾಯಿದ್ದ ಜನ ಏನಾದರೂ ಮಾಡಿಯಾರು.. ಮೂಕ ಪ್ರಾಣಿ-ಹಕ್ಕಿ, ಜೇನು ನೊಣಗಳ ಪರಿಸ್ಥಿತಿ ಚಿಂತಾಜನಕ.. ಕಾರಣ ಹಕ್ಕು ಕೇಳಲು ಮತ್ತು ಪಡೆದು ಸುಖಿಸಲು ಅವುಗಳಿಗೆ ಅರಿವಿಲ್ಲ.

ನಮಗೆಲ್ಲ ಗೊತ್ತು.. ಜೇನು ನೊಣಗಳು ಜೇನು ಸಂಗ್ರಹಿಸುವುದು ಬರಗಾಲ ನೀಗಿಸಿಕೊಳ್ಳಲು. ನಮಗಾಗಿ ಅವು ಜೇನು ಪಾತ್ರೆ ಸಿದ್ಧ ಪಡಿಸುವುದಲ್ಲ! ಅವು ತಮ್ಮ ಸಂಕಷ್ಟ ಕಾಲಕ್ಕೆಂದು ಜೇನು ಸಂಚಿತ ನಿಧಿಯಾಗಿ ಕಾಪಿಟ್ಟದ್ದನ್ನು ನಾವು ಶಕ್ತ್ಯಾನುಸಾರ ಬಿಡಿಸಿ ಬಳಸಿದರೆ ಅವುಗಳಿಗೆ ಸಾವೇ ಗತಿ. ಮೇಲಾಗಿ ಬಿರು ಬೇಸಿಗೆಯಲ್ಲಿ ಕೆಲ ಹೂವು ಮತ್ತು ಹಣ್ಣಿನ ಗಿಡ ಹೊರತುಪಡಿಸಿದರೆ, ಜೇನು ಸಂಗ್ರಹಕ್ಕೂ ಅವುಗಳಿಗೆ ‘ಒಣ ಬರ’ದ ಬಾಧೆ. ಇಷ್ಟು ಸಾಲದು ಎಂಬಂತೆ, ಅತ್ಯಂತ ಗಾಢವಾಗಿ ಸಂಗ್ರಹಿಸಿ-ಸಂಸ್ಕರಿಸಲಾದ ಜೇನು-ಪರಾಗರೇಣುಗಳ ಮಿಶ್ರಣ ಮತ್ತು ರಾಣಿ ಜೇನು-ಸಂತತಿಗೆ ಬೇಕಾಗುವ ‘ರಾಯಲ್ ಜೆಲ್ಲಿ’ ಕಾರ್ಮಿಕ ಜೇನು ನೊಣಗಳು ತಯಾರಿಸಲು ಶುದ್ಧ ನೀರೇ ಆಧಾರ. ಒಂದೇ ಒಂದು ಹನಿ ನೀರನ್ನು ನೂರಾರು ಬಾರಿ ಎಡತಾಕಿ ತಂದು ಹನಿ ಜೇನಿಗೆ ಬೆರೆಸಿ-ಕಲಸಿ ಹೈರಾಣಾಗಿಸುವ ಬೇಸಿಗೆಯಲ್ಲಿ ತಮ್ಮ ‘ಕಾಲೋನಿ’ ಸಂತೈಸಿಕೊಳ್ಳುತ್ತವೆ.

??????????ಆದರೆ, ವಿಶಿಷ್ಟ ಪ್ರಜಾತಿಯ ಜೇನು ‘ಎಪಿಸ್ ಡೊರಸಾಟಾ ಎಫ್’ (ರಾಕ್ ಬೀ) ಕುಟುಂಬ ಮತ್ತು ಕಾಲೋನಿಗಳು ಕಳೆದ ಒಂದು ದಶಕದ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ಒಟ್ಟೂ ಆವರಣದಲ್ಲಿ ಈ ಬಾರಿ ಸಂಕಷ್ಟಕ್ಕೆ ಈಡಾಗಿವೆ. ಜೇನು ನೊಣದ ಪ್ರಜನನ, ಪರಾಗಸ್ಪರ್ಷ, ಮೇಣದ ಹುಟ್ಟು ನಿರ್ಮಾಣ ಮತ್ತು ಜೇನು ಸಂಗ್ರಹಣೆ ಬಹುತೇಕ ನಿಂತೇಹೋಗಿದೆ. ‘ಗ್ರೇಟರ್ ವ್ಯಾಕ್ಸ್ ಮಾಥ್’ ದಾಳಿಗೆ ನಲುಗಿ, ತಮ್ಮ ಗೂಡು (ಹುಟ್ಟು) ಇಬ್ಭಾಗಗೊಂಡು ಕಳಚಿದ್ದರಿಂದ ಜೇನುಗಳು ಅತಂತ್ರ ಸ್ಥಿತಿಗೆ ನೂಕಲ್ಪಟ್ಟಿವೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿಜಯಕುಮಾರ, ಸುಮೀತ, ಹರ್ಷವರ್ಧನ ಹಾಗೂ ಪೋಸ್ಟ್ ಡಾಕ್ಟರಲ್ ಫೆಲೊ ಡಾ. ಧೀರಜ್ ವೀರನಗೌಡರ ಜನವರಿ, ಫೆಬ್ರವರಿ ಮತ್ತು ಮೇ ತಿಂಗಳಲ್ಲಿ ವಿವಿಯ ಆವರಣದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡು, ಸಂಶೋಧನೆ ನಡೆಸಿ, ಮಾದರಿಗಳನ್ನು ಸಹ ಸಂಗ್ರಹಿಸಿ ಮಹತ್ವದ ಮಾಹಿತಿ ಆಕರ ನೇಚರ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಈ ಭಾಗದ ಜೇನು ಕೃಷಿಕರಿಗೆ ಚಿತ್ರ ಸಮೇತ ಒದಗಿಸಿದ್ದಾರೆ.

APIS DORSATA F ROCK BEE COMB HIEVES UNDER ATTACK BY GREATER WAX MOTH IN KUD CAMPUS‘ಎಪಿಸ್ ಡೊರಸಾಟಾ ಎಫ್’ (ರಾಕ್ ಬೀ) ಜೇನಿನ ವಿಶೇಷತೆ ಎಂದರೆ ಇವುಗಳನ್ನು ಸಾಕಿ, ಜೇನು ಕೃಷಿ ಕೈಗೊಳ್ಳಲು ಸಾಧ್ಯವಿಲ್ಲ. ಕೆಲಸಗಾರ ಜೇನು ನೊಣಗಳು ತುಂಬ ಕ್ರಿಯಾಶೀಲವಾಗಿದ್ದು ಅಂದಾಜು ೧೨ ಸಾವಿರ ಹೂವಿನ ಗಿಡಗಳಿಗೆ ದಿನವೊಂದಕ್ಕೆ ಕಾಲೋನಿಯೊಂದರ ಜೇನು ಕುಟುಂಬ ಪರಾಗಸ್ಪರ್ಷ ಮಾಡಬಹುದು! ಹಾಗಾಗಿ, ವೈವಿಧ್ಯಮಯ ಹಣ್ಣು ಮತ್ತು ಹೂವಿನ ಗಿಡಗಳಿರುವಲ್ಲಿ ಇವುಗಳ ಸಂಖ್ಯೆ ಜಾಸ್ತಿ. ಬೇಸಿಗೆಯಲ್ಲಿ ಈ ಶತ್ರು ಕೀಟದ ಬಾಧೆ ಅವುಗಳಿಗೆ ಇದ್ದದ್ದೇ. ಆದರೆ ಈ ಬಾರಿ ಅಕಾಲಿಕವಾಗಿ ಮಳೆ ನಮ್ಮ ಭಾಗದಲ್ಲಿ ಮುಂದೂಡಲ್ಪಟ್ಟಿದ್ದೇ ಜೇನು ಹುಟ್ಟು ಕೂಡ ಬಾಧಿತವಾಗುವಂತಹ ‘ಹಾವಳಿ’ ಆಗಿಸಿದೆ. ಒಂದು ಗಟ್ಟಿ ಅಡ್ಡ ಮಳೆ ಹೊಡೆದರೆ ಪತಂಗಗಳು ಸಾವನ್ನಪ್ಪಿ, ಸದೃಢ ಜೇನು ಕುಟುಂಬಗಳು ಮತ್ತೊಂದು ಕಾಲೋನಿ ಶೀಘ್ರಾತಿಶೀಘ್ರ ರೂಪಿಸಿಕೊಂಡು ಮಧು ಅರಸಲು ಸಮರೋಪಾದಿಯಲ್ಲಿ ಸನ್ನದ್ಧವಾಗುತ್ತವೆ. ಬೇಸಿಗೆಗಿಂತ ಮುನ್ನವೇ ಹುಟ್ಟುಗಳನ್ನು ಬಿಡಿಸಿಬಿಡುವುದು ಸಂತತಿಯ ವಿನಾಶವನ್ನು ನಿಯಂತ್ರಿಸುವ ‘ಕಂಟ್ರೋಲ್ಡ್ ರೆಗ್ಯಲೇಷನ್’ ಎನ್ನುತ್ತಾರೆ ಅನುಭವಿ ಜೇನು ಕೃಷಿಕ ಕುಮಾರ ಭಾಗವತ್.

GREATER WAX MOTH IN PUPA STAGE IN THE BEE COMB AFTER DISECTIONನಮ್ಮ ದೇಶದಲ್ಲಿ ಕಾಣ ಸಿಗುವ ನಾಲ್ಕು ಪ್ರಜಾತಿಯ ಜೇನು ನೊಣಗಳಾದ – ಎಪಿಸ್ ಸೆರಾನಾ ಇಂಡಿಕಾ ಎಫ್ (ಇಂಡಿಯನ್ ಬೀ), ಎಪಿಸ್ ಫ್ಲೋರಿಯಾ ಎಫ್. (ಲಿಟಲ್ ಬೀ), ಎಪಿಸ್ ಮೆಲ್ಲಿಫೆರಾ ಎಫ್. (ಯುರೋಪಿಯನ್ ಬೀ) ಪೈಕಿ ಸಾರಂಗ ಮತ್ತು ಬೊಂಬಾರಾ ಎಂದೂ ಕೂಡ ಕರೆಯಲ್ಪಡುವ ‘ಎಪಿಸ್ ಡೊರಸಾಟಾ ಎಫ್’ (ರಾಕ್ ಬೀ) ೨೦ ಮಿ.ಮೀ. ಉದ್ದ ಹೊಂದಿದ್ದು, ಎಲ್ಲ ಜೇನು ನೊಣಗಳಿಗಿಂತ ಅತೀ ಹೆಚ್ಚು ಜೇನು ಸಂಗ್ರಹಿಸುವ ಶಕ್ತಿ ಮತ್ತು ಕೌಶಲ್ಯ ಗಳಿಸಿವೆ. ತುಡುವಿ/ತೊಡವಿ ಜೇನು ಎಂದೂ ಕೂಡ ಸ್ಥಳೀಯ ಭಾಷೆಯಲ್ಲಿ ಕರೆಯಲ್ಪಡುವ ಈ ಜೇನಿನ ಹುಟ್ಟು (ಗೂಡು) ಕನಿಷ್ಟ ೬೦ ರಿಂದ ೧೦೦ ಪೌಂಡ್ ವರೆಗೆ ತೂಗುವಷ್ಟು ಸದೃಢ, ತಾಳಿಕೆ ಮತ್ತು ಬಾಳಿಕೆ ಹೊಂದಿವೆ. ಕ್ರೈಸ್ತರು ಕ್ರಿಸ್‌ಮಸ್ ಸಂದರ್ಭದಲ್ಲಿ ಈ ಗೂಡಿನ ಮೇಣದಿಂದ ತಯಾರಿಸಲಾದ ಮೊಂಬತ್ತಿಗಳನ್ನೇ ಪೂಜೆಗೆ ಬಳಸುವುದು ಪವಿತ್ರ ಎಂಬ ನಂಬಿಕೆ. ಸಾಧಾರಣ ಒಂದು ಮೇಣದ ಬತ್ತಿಗೆ ನೂರು ರೂಪಾಯಿಗಳ ವರೆಗೆ ಆಗ ಬೆಲೆ ಇದೆ!

 

THE FINAL THREE STAGES OF GREATER WAX MOTHಸದ್ಯ ವಿವಿಯ ಆವರಣದಲ್ಲಿ ಎರಗಿ ಬಂದಿರುವ ಸಂಕಷ್ಟವೆಂದರೆ – ಗ್ರೇಟರ್ ವ್ಯಾಕ್ಸ್ ಮಾಥ್ (Galleria mellonella and Achroia grisella) ತೀವ್ರ ದಾಳಿ ಮಾಡಿದ್ದು, ದಶಕಗಳ ಬಳಿಕ ಜೇನು ಹಣಿಗೆ (ಹುಟ್ಟು) ಮತ್ತು ಜೇನು ಕುಟುಂಬ ಅನಿವಾರ್ಯವಾಗಿ ವಲಸೆ ಹೋಗಬೇಕಾದ ಸಂಕಷ್ಟ ಎದುರಾಗಿದೆ. ಈ ದುಂಬಿ ಜೇನು ಹುಳುಗಳ ದಾಳಿಗೆ ಸಿಲುಕದ ಹಾಗೆ ಲಾರ್ವಾ ಹಂತದಲ್ಲೇ ಹುಟ್ಟಿನ ಎರಿಗಳ ಮಧ್ಯೆ ತೂರಿಕೊಂಡು ಮೇಣವನ್ನು ತಿನ್ನುತ್ತ ಇಡೀ ಗೂಡನ್ನೇ ಇಬ್ಭಾಗವಾಗಿಸಿಬಿಡುತ್ತದೆ! ಎಷ್ಟೇ ಕಷ್ಟಪಟ್ಟರೂ ಜೇನಿಗೆ ಗೂಡಿನಲ್ಲಿ ಜೇನು, ಆಹಾರ, ಲಾರ್ವಾ, ಮರಿ ಮತ್ತು ಬೀಜ ಸಂಗ್ರಹ ಮತ್ತು ರಾಣಿ ಜೇನಿನ ಕುಟುಂಬಕ್ಕೆ ‘ರಾಯಲ್ ಜೆಲ್ಲಿ’ ರೂಪಿಸುವುದು ಕಷ್ಟವಾಗಿ, ಆಯಾ ಭಾಗದಲ್ಲಿ ನಶಿಸಿಯೇ ಹೋದ ಕುರುಹುಗಳು ಸಾಕ್ಷಿಗಳಾಗಿವೆ.

 

ವಿಶ್ವವಿದ್ಯಾಲಯದ ಆವರಣದಲ್ಲಿರುವ ‘ಎಪಿಸ್ ಡೊರಸಾಟಾ ಎಫ್’ (ರಾಕ್ ಬೀ) ಜೇನಿನ ಒಟ್ಟು ೧೫೪ ಗೂಡುಗಳ ಪೈಕಿ ೧೩೭ ಗೂಡುಗಳಲ್ಲಿ ಈಗ ಜೇನುಗಳಿಲ್ಲ! ಕೇವಲ ೧೮ ರಲ್ಲಿ ಮಾತ್ರ ಕೆಲ ಕುಟುಂಬಗಳು ಸದ್ಯವೇ ಪಲಾಯನ ಮಾಡುವ ಸ್ಥಿತಿಯಲ್ಲಿ ಅಳಿದು-ಉಳಿದುಕೊಂಡಿವೆ. ಜೇನಿನ ಶರೀರ ಮತ್ತು ಅಂಗರಚನಾ ಶಾಸ್ತ್ರದ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಸಿಸಲು ಪ್ರಾಣಿಶಾಸ್ತ್ರದ ವಿದ್ಯಾರ್ಥಿಗಳಿಗೆ ಜೇನು ಹುಳು ಮಾದರಿ ಸಂಗ್ರಹ ಕೂಡ ದುಸ್ಥರವಾಗಿದೆ.

 *********************************************

ಡಾ. ಧೀರಜ್ ವೀರನಗೌಡರ ಅನಿಸಿಕೆ

೧೯೫೮ ಕ್ಕಿಂತ ಮುಂಚೆ ಜೇನು ನೊಣಗಳಿಗೆ ರೋಗ ಮತ್ತು ಶತ್ರು ಕೀಟಗಳೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ, ಪಂಜಾಬ್ ಮತ್ತು ಕಾಶ್ಮೀರ್‌ನಲ್ಲಿ ‘ನೊಸೆಮಾ’ ಬೆಳಕಿಗೆ ಬಂದ ಮೇಲೆ, ೧೯೫೬ರಲ್ಲಿಯೇ ಪಂಜಾಬ್‌ನ ಕುಲು ಕಣಿವೆಯಲ್ಲಿ ಕೀಟ (Acarapis woodi Rennie) ‘ಅಕಾರಿನ್’ ರೋಗ ಹರಡುತ್ತಿದೆ ಎಂಬುದನ್ನು ಗ್ರಹಿಸಲಾಯಿತು. ಹಿಮಾಚಲ ಪ್ರದೇಶಕ್ಕೂ ಇದು ವ್ಯಾಪಿಸಿತು. ಕೇಂದ್ರ ಖಾದಿ ಮತ್ತು ಗ್ರಾಮೀಣ ಗೃಹ ಕೈಗಾರಿಕೆ ಆಯೋಗ ಜೇನು ಕೃಷಿಯನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ದಕ್ಷಿಣ ಭಾರತದ ರಾಜ್ಯಗಳಿಗೂ ವಿಸ್ತರಿಸಿದ್ದರಿಂದ ಲೆಸ್ಸರ್ ಮತ್ತು ಗ್ರೇಟರ್ ವ್ಯಾಕ್ಸ್ ಮಾಥ್‌ದಂತಹ ಕೀಟ ಬಾಧೆಯ ರೋಗಗಳೂ ಕೂಡ ನಮ್ಮಲ್ಲಿಗೆ ಪಸರಿಸಿದವು. ಬೆಳೆಯೊಂದಿಗೆ ಕಳೆ! 

 *********************************************

ಸುದ್ದಿಚಿತ್ರ: ಹರ್ಷವರ್ಧನ ವಿ. ಶೀಲವಂತ

ಜೇನು ಗೂಡು ಮತ್ತು ಕೀಟ ಬಾಧೆಯ ಚಿತ್ರಗಳು/ ಪೂರಕ ಮಾಹಿತಿ: ಡಾ. ಧೀರಜ್ ವೀರನಗೌಡರ, ಖಜಾಂಚಿ, ನೇಚರ್ ರಿಸರ್ಚ್ ಸೆಂಟರ್, ಧಾರವಾಡ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*