ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೯: ಉಪನದಿಯಾದರೂ ಕುಮುದ್ವತಿಯಲ್ಲಿ ಕಾಣುತ್ತಿದೆ ಜೀವಸೆಲೆ!

ಮೂಲಕ್ಕೇ ಹಾದಿ ಇಲ್ಲವಾದಾಗ, ಉಪಮೂಲದ್ದೇ ಆಸರೆ. ಇಂತಹ ಪರಿಸ್ಥಿತಿ ಅರ್ಕಾವತಿ ನದಿಯ ಉಪನದಿ ಕುಮುದ್ವತಿ ನದಿಯದ್ದು. ಅರ್ಕಾವತಿ ನದಿಯ ಹರಿವು ಹುಡುಕಿಕೊಂಡು ಹೋಗಿದ್ದಾಗ ಅದರ ಉಪನದಿ ಕುಮುದ್ವತಿಯನ್ನೂ ಎಂಟು ವರ್ಷಗಳ ಹಿಂದೆ ನೋಡಿದ್ದೆ. ಆಗಿನ ಪರಿಸ್ಥಿತಿ ನೆನೆದರೆ ಅರ್ಕಾವತಿಗಿಂತBelagumba ಕುಮುದ್ವತಿಯೇ ಮೇಲು. ಆದರೆ, ಕಾಲ ಕಳೆದಂತೆ ಅದರ ಅರಿವಿಗೂ ಭೂದಾಹಿಗಳ ಭೂತ ಆವರಿಸಿಕೊಂಡಿತು. ಕುಮುದ್ವತಿ ಬಹುತೇಕ ಹರಿವನ್ನೇ ನಿಲ್ಲಿಸಿದ್ದಳು. ಆದರೆ ಖಾಸಗಿ ಹೊಣೆಗಾರಿಕೆಯ ಜವಾಬ್ದಾರಿ ಕಳೆದ ವರ್ಷದಿಂದ ಈ ನದಿಯ ಹರಿವಿನ ಕೆರೆಗಳಲ್ಲಿ ನೀರಿನ ಸೆಲೆ ಬೇಸಿಗೆಯಲ್ಲೂ ಕಾಣುವಂತೆ ಮಾಡಿದೆ.

ಅರ್ಕಾವತಿಯ ಉಪನದಿ ಕುಮುದ್ವತಿಗೆ ಶಿವಗಂಗೆಯಲ್ಲಿನ ಒಳಕಲ್ಲು ತೀರ್ಥದ ಹಿಂಭಾಗದಲ್ಲಿರುವ ಕುಂಭಾತೀರ್ಥ ಉಗಮ ಸ್ಥಾನ. ಶಿವಗಂಗೆಯಲ್ಲಿ ಹಲವು ನೀರಿನ ಮೂಲಗಳಿದ್ದು, ಎಲ್ಲವೂ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಕುಂಭಾತೀರ್ಥ – ಕುಮುದ್ವತಿ ಶಿವಗಂಗೆಯಿಂದ ಕಂಬಾಳು – ಬಸವಾಪಟ್ಟಣದ ಮೂಲಕ ಹರಿಯುತ್ತಾಳೆ. ಕುಮುದ್ವತಿಯ ಮೂಲ ಶಿವಗಂಗೆಯಾದರೂ, ಮೂರು ಸರಣಿಗಳಲ್ಲಿ ಈಕೆ ಹರಿದು ಕೂಡ್ಲುವಿನಲ್ಲಿ ಅರ್ಕಾವತಿಯನ್ನು ಸೇರಿಕೊಳ್ಳುತ್ತಾಳೆ. ಈ ಮಧ್ಯೆ ನೆಲಮಂಗಲ ವ್ಯಾಪ್ತಿಯಲ್ಲಿ ಅರ್ಕಾವತಿಯೊಂದಿಗೆ ಹರಿವು ಸೇರಿಕೊಳ್ಳುವುದುಂಟು. ಕುಮುದ್ವತಿ ನೈಜವಾಗಿ ಹರಿಯುತ್ತಿರುವುದು ಮೂರನೇ ಸರಣಿಯಲ್ಲಿ. ಮಾಗಡಿ ತಾಲೂಕಿನ ಬಾಣವಾಡಿ, ಮುಪ್ಪೇನಹಳ್ಳಿ, ಚನ್ನೋಹಳ್ಳಿ, ರಂಗೇನಹಳ್ಳಿ, ಪಾಲನಹಳ್ಳಿ, ಶಾಂತಪುರ, ಹೊನ್ನಾರನಹಳ್ಳಿ, ಶಿರಗನಹಳ್ಳಿ, ಸೋಲೂರು, ಗುಡೆಮಾರನಹಳ್ಳಿ, ಬ್ಯಾಲಕೆರೆ, ಮುತ್ತುರಾಯನಗುಡಿ ಪಾಳ್ಯ, ಬೆಳಗುಂಬಾ ಕೆರೆಗಳು ಎಂದೂ ತಮ್ಮ ಜೀವಸತ್ವ ಕಳೆದುಕೊಂಡಿಲ್ಲ. ಈ ಕೆರೆಗಳು ಸಂಪೂರ್ಣ ಬತ್ತಿಹೋದ ಉದಾಹರಣೆ ಇಲ್ಲ. ಆದ್ದರಿಂದಲೇ ಕುಮುದ್ವತಿ ಇಲ್ಲಿ ಸದಾಕಾಲ ಹರಿವು ಹೊಂದಿದ್ದಾಳೆ. ಕಳೆದ ವಾರವಷ್ಟೇ ಆರಂಭವಾದ ಮುಂಗಾರಿನ ಎರಡು ದಿನದ ಮಳೆಗೇ ಕುಮುದ್ವತಿಯ ಈ ಹರಿವಿನಿಂದ ತಿಪ್ಪಗೊಂಡನಹಳ್ಳಿಗೆ ಎರಡು ಅಡಿ ನೀರು ಬಂದಿದೆ. ಅಂದರೆ, ಈ ಹರಿವಿನಲ್ಲಿರುವ ಕೆರೆಯ ಉತ್ತಮ ಸ್ಥಿತಿ ಅರಿವಾಗುತ್ತದೆ. ಇಂತಹ ಸ್ಥಿತಿಯೇ ಎಲ್ಲೆಡೆಯೂ ನಿರ್ಮಾಣವಾದರೆ, ತಿಪ್ಪಗೊಂಡನಹಳ್ಳಿ ತುಂಬದಿರುವುದಕ್ಕೆ ಕಾರಣವೇ ಇರುವುದಿಲ್ಲ. ಆದರೆ ಪರಿಸ್ಥಿತಿ ಈಗ ಆ ರೀತಿ ಇಲ್ಲ. ಅದನ್ನು ಪುನಶ್ಚೇತನ ಮಾಡಬೇಕೆಂಬ ಸರ್ಕಾರದ ಯೋಜನೆ ಇನ್ನೂ ಕಡತದಲ್ಲೇ ಇದ್ದರೂ, ಖಾಸಗಿಯವರು ಅಂತಹ ಕೆಲಸಕ್ಕೆ ಕೈಹಾಕಿದ್ದಾರೆ. ಅದೇ ಶ್ಲಾಘನಾರ್ಹ.

HadiHosahalliಬೆಂಗಳೂರಿಗೆ ಸಂಸ್ಕರಿತ ನೀರು ಕೊಟ್ಟ ತಿಪ್ಪಗೊಂಡಹಳ್ಳಿ ಜಲಾಶಯಕ್ಕೆ ನೀರಿನ ಮೂಲ ಕುಮುದ್ವತಿ ನದಿ. ಅರ್ಕಾವತಿ ನದಿಯ ಉಪನದಿಯಾಗಿ ತಿಪ್ಪಗೊಂಡನಹಳ್ಳಿ ಸಂಗಮವಾಗುತ್ತದೆ ಕುಮುದ್ವತಿ. ಕಳೆದ ಹತ್ತಾರು ವರ್ಷಗಳಿಂದ ಈ ನದಿಯ ಹರಿವು ಸ್ಥಗಿತಗೊಂಡಿತ್ತು. ಅಷ್ಟಕ್ಕೇ ಸೀಮಿತವಾಗದೆ, ಅಂತರ್ಜಲ ವೃದ್ಧಿಗೆ ಕೊಡುಗೆ ಇಲ್ಲದಂತಾಗಿತ್ತು. ಇಂತಹ ಕುಮುದ್ವತಿ ನದಿಯ ಪುನಶ್ಚೇತನ ಕಾರ್ಯ ಮೂರು ವರ್ಷದ ಹಿಂದೆ ಆರಂಭವಾಗಿದ್ದು, ಇದೀಗ ಪ್ರತಿಫಲ ನೀಡಲಾರಂಭಿಸಿದೆ. ಅದಕ್ಕೇ ಈ ಬಿರುಬೇಸಿಗೆಯಲ್ಲೂ ಕೆರೆಗಳ ತಟದಲ್ಲಿ ನಿರ್ಮಿಸಲಾಗಿರುವ ಕೆರೆ ಹೊಂಡದಲ್ಲಿ ಜಾನುವಾರುಗಳಿಗೆ ನೀರು ಲಭ್ಯವಾಗುತ್ತಿದೆ. ರೈತರ ಬೋರ್‌ವೆಲ್‌ಗಳ ಜಲ ಸಮೃದ್ಧವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲೇ ಬಹುತೇಕ ಹುಟ್ಟಿ-ಹರಿಯುವ ಮೂಲನದಿ ಅರ್ಕಾವತಿಗೆ ಸೇರಿಕೊಳ್ಳುವ ಕುಮುದ್ವತಿ ನದಿಯ ಪುನಶ್ಚೇತನ ಕಾರ್ಯವನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಮೂರು ವರ್ಷಗಳ ಹಿಂದೆ ಕೈಗೊಂಡಿತ್ತು. ‘ಕುಮುದ್ವತಿ ನದಿ ಪುನಶ್ಚೇತನ ಯೋಜನೆ’ ಎಂಬ ಘಟಕವೂ ತಯಾರಾಯಿತು. ಇದಕ್ಕೆ ಕಾರ್ಪೊರೇಟ್ ಸಹಾಯ ಲಭ್ಯವಾಯಿತು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್)ಯಲ್ಲಿ ಸಂಸ್ಥೆಗಳು ಧನಸಹಾಯ ಮಾಡಲು ಮುಂದಾದವು. ನದಿ ಪುನಶ್ಚೇತನ, ಅಂತರ್ಜಲ ವೃದ್ಧಿ, ಗಿಡ ನೆಟ್ಟು ಅರಣ್ಯವೃದ್ಧಿಸುವ ಯೋಜನೆ ಹಾಗೂ ಅದನ್ನು ಅನುಷ್ಠಾನಗೊಳಿಸುವುದೆಲ್ಲವೂ ಈ ಘಟಕದ್ದೇ.Gangamma (3)

ಕುಮುದ್ವತಿ ನದಿ ಶಿವಗಂಗೆಯಲ್ಲಿ ಹುಟ್ಟಿ ೫೦ ಕಿಮೀ ಹರಿದು ತಿಪ್ಪಗೊಂಡನಳ್ಳಿ ಜಲಾಶಯ ಸೇರುತ್ತದೆ. ನದಿಯ ೪೬೦ ಚದರ ಕಿಮೀ ಜಲಾನಯನ ವ್ಯಾಪ್ತಿಯಲ್ಲಿ ೨೭೮ ಗ್ರಾಮಗಳಿವೆ. ಇವುಗಳಲ್ಲಿ ೨೨೩ ಕೆರೆಗಳಿವೆ. ಈ ಕೆರೆಗಳೆಲ್ಲವೂ ಮಳೆಗಾಲ ಹೊರತಾಗಿ ಬೇರೆಲ್ಲ ಸಮಯದಲ್ಲಿ ಬತ್ತಿಹೋಗುತ್ತಿವೆ. ಆದರೆ, ಈಗ ತ್ಯಾಮಗೊಂಡ್ಲು, ಮೊಂಡಿಗೆರೆ ಕಿರು ಜಲಾನಯನ ಪ್ರದೇಶದಲ್ಲಿನ ೩೫ ಕೆರೆಗಳೂ ಇಂತಹ ಭೀಕರ ಬರ ಸಮಯದಲ್ಲೂ ನೀರಿನ ಸೆಲೆ ಹೊಂದಿದ್ದು, ಅಂತರ್ಜಲ ವೃದ್ಧಿಯಾಗಿದೆ. ಬೋರ್‌ವೆಲ್‌ಗಳು ಪುನಶ್ಚೇತನಗೊಂಡಿವೆ. ಇದಕ್ಕೆ ಕಾರಣ ಸಾಮಾಜಿಕ ಹೊಣೆಗಾರಿಕೆ.

ಆರ್ಟ್ ಆಫ್ ಲಿವಿಂಗ್‌ನ ನದಿ ಪುನಶ್ಚೇತನ ಘಟಕ ಇಂತಹ ‘ಸಮೃದ್ಧಿ’ ಕಾರ್ಯವನ್ನು ಮೂರು ವರ್ಷಗಳಿಂದ ಮಾಡುತ್ತಿದೆ. ಎಚ್‌ಎಎಲ್ ಸಂಸ್ಥೆ ಹಣಕಾಸು ಒದಗಿಸಿದೆ. ಕಳೆದ ಎರಡು ವರ್ಷಗಳಲ್ಲಿ ೪.೭೫ ಕೋಟಿ ಹಣ ನೀಡಿದೆ. ಹೀಗಾಗಿ ಕುಮುದ್ವತಿ ನದಿ ಜಲಾನಯನ ಪ್ರದೇಶದಲ್ಲಿ ಕಲ್ಲುಗುಂಡುಗಳ ತಡೆ, ಇಂಗುಬಾವಿಗಳು, ಇಂಗು ಕೊಳವೆ ಬಾವಿಗಳು, ಕೆರೆ ಹೊಂಡಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರನ್ನು ಇಂಗಿಸಲಾಗುತ್ತಿದೆ. ಆ ನೀರೇ ಬೇಸಿಗೆಯ ಸಂದರ್ಭದಲ್ಲೂ ಈ ಭಾಗದಲ್ಲಿ ಜೀವಜಲವಾಗಿದೆ. ಇಂತಹ ಜವಾಬ್ದಾರಿಗಳು ಪ್ರತಿ ಕೆರೆ, ನದಿಗೂ ಬಂದರೆ, ಅಳವಡಿಸಿಕೊಂಡರೆ ಜೀವಜಲ ಬತ್ತಿ ಹೋಗದು.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*