ಯಾವುದೇ ಪರಿಸರ ಸಂಬಂಧಿ ಯೋಜನೆಗಳ ಕುರಿತು ಸರ್ಕಾರದಿಂದ ಚರ್ಚೆ ಪ್ರಾರಂಭವಾದೊಡನೆ ಪರಿಸರವಾದಿಗಳು ಅದು ಸಲ್ಲದು ಎಂದು ತಮ್ಮ ಗಲಾಟೆ ಪ್ರಾರಂಭಿಸುತ್ತಾರೆ. ಅಭಿವೃದ್ಧಿವಾದಿಗಳು ಯೋಜನೆಯ ಅವಶ್ಯಕತೆಯನ್ನು ಪ್ರತಿಪಾದಿಸಿ ತಮ್ಮ ವಾದ ಮುಂದಿಡುತ್ತಾರೆ. ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪರ-ವಿರೋಧ ಚರ್ಚೆ ನಡೆಸುತ್ತಾರೆ. ಎಲ್ಲರಿಗೂ ಅವರವರದೇ ಒಂದೊಂದು ಸಿದ್ಧಾಂತ ಮತ್ತು ನಿರೀಕ್ಷೆ. ಯೋಜನೆಯ ವಿರುದ್ಧವಾಗಿ ಪ್ರಕರಣ ನ್ಯಾಯಾಲಯವನ್ನು ಪ್ರವೇಶಿಸಿದರಂತೂ… ಮುಗಿದೇ ಹೋಯ್ತು…. ತೀರ್ಪು ಬರುವುದು ಅದಿನ್ನೆಷ್ಟು ವರ್ಷವೋ….ಹೀಗಾಗಿ ಮತ್ತೆ ಯೋಜನೆ ಕಾರ್ಯರೂಪಕ್ಕೆ ಬರದೇ ನೆನೆಗುದಿಗೆ ಬೀಳುತ್ತದೆ. ಆದರೆ ಅಷ್ಟರಲ್ಲಾಗಲೇ ಲಕ್ಷಾಂತರ ರೂಪಾಯಿಗಳು ಇದಕ್ಕಾಗಿ ವ್ಯಯವಾಗಿ ರಾಜಕಾರಣಿಗಳ, ಅಧಿಕಾರಿಗಳ, ಗುತ್ತಿಗೆದಾರರ ಹೊಟ್ಟೆ ಸೇರಿರುತ್ತದೆ. ಯೋಜನೆ ಅನುಷ್ಠಾನವಾಗಬೇಕಿರುವ ಭೂಮಿ, ಕಾಡು, ಕಣಿವೆ, ಮರ, ಪ್ರಾಣಿ-ಪಕ್ಷಿಗಳು ದಿಕ್ಕಾಪಾಲಾಗಿ ಕಂಗಾಲಾಗಿರುತ್ತವೆ. ಇವುಗಳೊಂದಿಗೆ ಸಹಜೀವನ ನಡೆಸಬೇಕಿರುವ ಮಾನವನ ಬದುಕು ಅತಂತ್ರಗೊಂಡಿರುತ್ತದೆ. ಇವೆಲ್ಲಾ ಆಗೀಗ ಮಾಧ್ಯಮಗಳಲ್ಲಿ ಪ್ರಸ್ತಾಪಗೊಂಡು ಮತ್ತೆ ಮರೆತೂ ಹೋಗುತ್ತದೆ. ಆದರೆ ಮೂಲ ಸಮಸ್ಯೆ? ಅದು ಒಂದಿಂಚೂ ಕದಲದೇ ಹಾಗೇ ಇರುತ್ತದೆ. ಜೊತೆಗೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಇದರ ಮಧ್ಯೆ ಸಿಕ್ಕಿಕೊಳ್ಳುವ ಸಾಮಾನ್ಯ ಜನರು ಪರಿತಪಿಸುತ್ತಲೇ ಇರಬೇಕಾಗುತ್ತದೆ.

ಇದೆಲ್ಲಾ ಮತ್ತೆ ನೆನಪಾದದ್ದು ಎತ್ತಿನಹೊಳೆ ತಿರುವು ಯೋಜನೆಯ ಕುರಿತು ವರದಿ, ಪೂರ್ವ-ಪರ ಚರ್ಚೆಗಳು ಮತ್ತೆ ಪ್ರಾರಂಭವಾದಾಗ. ಈ ಹಿಂದೆ ನೇತ್ರಾವತಿ ತಿರುವು ಯೋಜನೆಯ ಕುರಿತು ಹೀಗೇ ಪೂರ್ವ-ಪರ ಚರ್ಚೆಗಳಾಗಿ ನಿಂತು ಹೋಗಿತ್ತು. ಈಗ ಹೆಸರು ಬದಲಾದ, ಅದೇ ಉದ್ದೇಶ ಹೊಂದಿದ ಮತ್ತೊಂದು ಯೋಜನೆಯ ಚರ್ಚೆ. ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪಶ್ಚಿಮಘಟ್ಟದ ಒಡಲೊಳಗೆ ಮೈಲಿಗಟ್ಟಲೆ ನಡೆಯಬೇಕಿರುವ ಇದರ ಕಾರ್ಯಾಚರಣೆಯಲ್ಲಿ ಒಡ್ಡು ನಿರ್ಮಾಣಕ್ಕೆ, ಪೈಪ್‍ಲೈನ್ ಅಳವಡಿಕೆಗೆ, ಪಂಪಿಂಗ್ ಮೋಟರ್ ಸ್ಥಾಪನೆಗೆ, ಜಲ ಸಂಗ್ರಹಣೆಗೆ, ಕಾಲುವೆ, ಅಣೆಕಟ್ಟೆ ನಿರ್ಮಾಣಕ್ಕೆ, …….. ಹೀಗೆ ಪಶ್ಚಿಮಘಟ್ಟದಲ್ಲಿ ಏನೆಲ್ಲಾ ಅಲ್ಲೋಲಕಲ್ಲೋಲ ಆಗಬಹುದೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಈಗಾಗಲೇ ಆ ಅವಘಡ ಪ್ರಾರಂಭವೂ ಆಗಿದೆ. ನೂರಾರು ದೊಡ್ಡ ದೊಡ್ಡ ಪೈಪುಗಳು ಬೆಳೆ ಬೆಳೆಯುವ ಭೂಮಿಯಲ್ಲಿ ತುಕ್ಕು ಹಿಡಿಯುತ್ತಾ ಬಿದ್ದುಕೊಂಡಿವೆ. ಸಾವಿರಾರು ಮರಗಳನ್ನು ಕಡಿದುರುಳಿಸಿ, ಭೂಮಿಯನ್ನು ಆಳಕ್ಕೆ ಬಗೆದು ಯೋಜನೆ ಜಾರಿಗೆ ಸಿದ್ಧತೆಗಳು ಭರದಿಂದಲೇ ಪ್ರಾರಂಭವಾಗಿವೆ. ಇನ್ನೂ ಜನರಿಗೆ ಯೋಜನೆಯ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ. ಸ್ಥಳೀಯರನ್ನು ಭೇಟಿ ಮಾಡಿ ಯಾವ ಜನಪ್ರತಿನಿಧಿಗಳೂ ವಿವರಣೆ ನೀಡಿಲ್ಲ. ಅಸಲಿಗೆ ಒಂದೇ ಒಂದು ಜನಸಂಪರ್ಕ ಸಭೆಯೂ ಇಲ್ಲಿ ನಡೆದಿಲ್ಲ! ಇನ್ನೂ ಪರಿಸರ ಪರಿಣಾಮ ವರದಿಯೇ ಸಿದ್ಧವಾಗಿಲ್ಲ! ಆದರೆ…. ನಾವೆಲ್ಲಾ ಒಮ್ಮೆ ಯೋಚಿಸಬೇಕಿದೆ. ಈ ಇಡೀ ಕಾರ್ಯಾಚರಣೆ ನಡೆವ ಅರಣ್ಯ, ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಮತ್ತೆ ಎಲ್ಲಾದರೂ ಸ್ಥಳಾಂತರಿಸಲು, ಪುನರ್ ಸೃಷ್ಟಿಸಲು ಸಾಧ್ಯವೇ? ಮನುಷ್ಯನನ್ನು ಸೃಷ್ಟಿಸುವುದು ಸುಲಭ. ಹೀಗೆಂದೇ ಮನುಷ್ಯ ಸಂತತಿ ಮಿತಿಮೀರಿ ಬೆಳೆಯುತ್ತಿದೆ. ಅವನ ಅಗಾಧ ಹಸಿವು ಹಿಂಗಿಸಲು ಪ್ರಕೃತಿಯ ಒಡಲು ಲೂಟಿಯಾಗುತ್ತಿದೆ. ಆದರೆ ವೈವಿಧ್ಯಮಯವಾದ ಪ್ರಕೃತಿಯನ್ನು ಸೃಷ್ಟಿಸುವುದು ಹೇಗೆ? ಒಂದು ಮರವನ್ನು ಸೃಷ್ಟಿಸಲು ಹತ್ತೆಂಟು ವರ್ಷಗಳೇ ಬೇಕು. ಒಂದು ಕಾಡು ಸೃಷ್ಟಿಯಾಗಲು ಅರ್ಧ ಶತಮಾನವೇ ಬೇಕಾಗಬಹುದು. ಅದೂ ಸೃಷ್ಟಿಸುವ ಮನಸ್ಸು ಮತ್ತು ಜಾಗವಿದ್ದರೆ ಮಾತ್ರ!  ಸಪಾಟು ಬಯಲಿನಲಿ ಈ ಯೋಜನೆ ಜಾರಿಗೊಳ್ಳುವಂತಿದ್ದರೆ ಅದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಆದರೆ ಇದು ನೇರ ಪ್ರಕೃತಿಯ ಗರ್ಭದೊಂದಿಗೇ ಚೆಲ್ಲಾಟ! ಭೂಮಿತಾಯಿಯ ಮೇಲಿನ ಅತ್ಯಾಚಾರ!

    ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗು ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ, ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ, ಅಸೂಕ್ಷ್ಮವಾಗಿ ಕೈಗೊಳ್ಳುವ ಯಾವುದೇ ಯೋಜನೆಯಿಂದ ದೀರ್ಘಕಾಲೀನ, ಹಲವು ಬಾರಿ ಶಾಶ್ವತ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮಘಟ್ಟದಲ್ಲಿ ಇದುವರೆಗೆ ನಡೆದ ರಸ್ತೆಮಾರ್ಗ, ರೈಲುಮಾರ್ಗ, ವಿದ್ಯುತ್‍ಮಾರ್ಗ, ಪೆಟ್ರೋಲಿಯಂ ಪೈಪ್‍ಲೈನ್, ಅಣೆಕಟ್ಟೆ, ಜಲವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯದಲ್ಲಿ ತೋರಿದ ಇಂತಹ ದುಡುಕುತನಗಳು ಶಾಶ್ವತ ಪಶ್ಚಾತ್ತಾಪಕ್ಕೆ ಕಾರಣವಾಗಿವೆ. ಅನೇಕ ನದಿ ಹಾಗೂ ಜಲಮೂಲಗಳು ಬತ್ತಿ ಹೋಗುವಂತೆ ಅವೈಜ್ಞಾನಿಕವಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳು, ದಕ್ಷಿಣ ಭಾರತದ ಹೆಚ್ಚಿನ ನದಿಗಳಿಗೆ ಜನ್ಮಸ್ಥಳವಾದ ಪಶ್ಚಿಮಘಟ್ಟವನ್ನು ಬರಡಾಗಿಸುತ್ತಿದೆ. ಮೊದಲಿಗೆ ಇಲ್ಲೀಗ ಆ ಜಲಮೂಲಗಳನ್ನು ಪುನರ್ ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಆದರೆ ಯೋಜನೆ ಕಾಮಗಾರಿಯ ಹೆಸರಿನಲ್ಲಿ ಅದನ್ನು ಇನ್ನಷ್ಟು ನಾಶ ಮಾಡುವ ಕೆಲಸಗಳು ಭರದಿಂದ ನಡೆಯುತ್ತಿವೆ ಎಂಬುದೇ ಖೇದದ ಸಂಗತಿಯಾಗಿದೆ.

ಮುಂದಿನ ಜಾಗತಿಕ ಯುದ್ಧ ನೀರಿನ ಕಾರಣಕ್ಕೇ ಎಂದು ನಮ್ಮ ಪರಿಸರತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಈಗಾಗಲೇ ನೀರಿಗಾಗಿ ರಾಜ್ಯಗಳ ಮಧ್ಯೆ, ಜಿಲ್ಲೆಗಳ ಮಧ್ಯೆ ಕದನಗಳು ಪ್ರಾರಂಭವಾಗಿದೆ. ಇಂದು ಎದ್ದಿರುವ ಈ ನೀರಿನ ಹಾಹಾಕಾರಕ್ಕೆ ಕಾರಣವೇನು? ನಮ್ಮ ದೇಶದಲ್ಲಿ ಹಿಂದೆ 13 ಲಕ್ಷ ಕೆರೆಗಳಿದ್ದವಂತೆ. 1871ರಲ್ಲಿ ನಡೆದ ಸಮೀಕ್ಷೆಯಂತೆ ಮೈಸೂರು ಪ್ರಾಂತ್ಯದಲ್ಲಿದ್ದ ಕೆರೆಗಳ ಸಂಖ್ಯೆ 35972!, ಆಂಧ್ರಪ್ರದೇಶದಲ್ಲಿ 58519, ತಮಿಳುನಾಡಿನಲ್ಲಿ 39202 ಕೆರೆಗಳು ದಾಖಲಾಗಿವೆ. ಇದರ ಜೊತೆಗೆ ನೀರು ಸಂಗ್ರಹಣಕ್ಕೆಂದೇ ತಲಪರಿಕೆ, ಬಾವಲಿ, ಬಾವಿ, ಜೋಹಡ್, ಕಟ್ಟೆ, ಕೊಳ, ಕಲ್ಯಾಣಿ…ಹೀಗೆ ಅನೇಕ ರೀತಿಯ ಸಂಗ್ರಹಣೆ ನಡೆಯುತ್ತಿತ್ತು. ಆದರೆ ಇವನ್ನೆಲ್ಲಾ ಮನುಷ್ಯನ ಇಂಗದ ದಾಹ ನಾಶ ಮಾಡಿ ಮುಗಿಸಿದೆ. ಆದರೆ ಇಂದಿಗೂ ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ದೇಶದಲ್ಲಿ 210ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಮತ್ತು ಹಿಮಾಲಯದಲ್ಲಿ 15 ಸಾವಿರಕ್ಕೂ ಹೆಚ್ಚು ಹಿಮನದಿಗಳಿದ್ದು ಹಿಮವು ಪರ್ವತಗಳನ್ನು ಆವರಿಸಿದ್ದು ಇದರಿಂದ ಜಗತ್ತಿನ ಸುಮಾರು ಶೇ40ರಷ್ಟು ಜನರು ಶುದ್ಧ ನೀರಿಗಾಗಿ ಹಿಮಾಲಯದ ಹಿಮನದಿಗಳನ್ನು ಅವಲಂಬಿಸಿದ್ದಾರೆ. ಅಂದಾಜು ಸರಾಸರಿ 1170ಮಿ.ಮೀ ರಷ್ಟು ಮಳೆ ಭಾರತದಲ್ಲಿ ಬೀಳುತ್ತಿದೆ. ಆದರೆ ಕಳೆದ ಒಂದು ದಶಕದಲ್ಲಿ 2.57 ಲಕ್ಷ ರೈತರು ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರ ಆತ್ಮಹತ್ಯೆಗೆ ಕಾರಣ ನೀರಿನ ಅಸಮರ್ಪಕ ನಿರ್ವಹಣೆ ಎಂದು ಅಧ್ಯಯನ ವರದಿ ಹೇಳುತ್ತದೆ. ಸ್ವಾತಂತ್ರ್ಯಾ ನಂತರ ಕೇವಲ ನೀರಿಗಾಗಿ 2,92,767 ಕೋಟಿಯನ್ನು ನೀರಿಗಾಗಿ ವ್ಯಯಿಸಲಾಗಿದೆ. ನಮ್ಮಲ್ಲಿ 4 ಕೋಟಿ ವಿದ್ಯುತ್ ಚಾಲಿತ ಕೊಳವೆ ಬಾವಿ, ತೆರೆದ ಬಾವಿಗಳಿವೆ. ಇಷ್ಟೆಲ್ಲಾ ಆಗಿದ್ದೂ ಹಾಗಾದರೆ ನಾವು ದಿಕ್ಕುತಪ್ಪಿರುವುದೆಲ್ಲಿ? ಅಸಮರ್ಪಕವಾದ ನೀರಿನ ಹಂಚಿಕೆ, ಅಸಮಾನ ಮಳೆಸುರಿಯವುದು, ಅಂತರ್ಜಲ ನೀರಿನ ಕೊರತೆ, ಲಂಗುಲಗಾಮಿಲ್ಲದೇ ನೀರಿಗಾಗಿ ಕೊಳವೆ ಬಾವಿ ಕೊರೆದ ಕಾರಣದಿಂದ ಅಂತರ್ಜಲವೂ ಬರಿದಾಗಿದ್ದು  ಮತ್ತು ಅಂತರ್ಜಲ ಮರುಪೂರಣದಂತಾ ಕೆಲಸಗಳೂ ಸಮರ್ಪಕವಾಗಿ ಆಗುತ್ತಿಲ್ಲವೆಂಬುದು ಮೂಲ ಕಾರಣಗಳು.

ಪರಿಸರವಾದಿಗಳು ಪಶ್ಚಿಮಘಟ್ಟಗಳ ಕಾಡು, ಅನನ್ಯ ಬೆಲೆಬಾಳುವ ಗಿಡ-ಮರ, ಅಮೂಲ್ಯ ಜೀವವೈವಿಧ್ಯ, ಅಸಂಖ್ಯಾತ ಪ್ರಾಣಿಪಕ್ಷಿ ಪ್ರಭೇದಗಳು, ನೈಸರ್ಗಿಕ ನದಿ-ಝರಿ-ಜಲಪಾತಗಳ ಕುರಿತು ಭಾವುಕರಾಗಿ ಮಾತ್ರ ಮಾತನಾಡುತ್ತಿಲ್ಲ. ಮುಖ್ಯವಾಗಿ ಒಮ್ಮೆ ನಾಶವಾದರೆ ಇಂತಹ ಪ್ರಕೃತಿಯದ್ಭುತಗಳನ್ನು ನಾವು ಮರುಸೃಷ್ಟಿಸಲು ಸಾಧ್ಯವಿಲ್ಲ ಎಂಬ ಎಚ್ಚರ ಸದಾ ಅವರನ್ನು ಕಾಡುತ್ತಿದೆ. ಇದರ ಜೊತೆಗೆ ಪಶ್ಚಿಮಘಟ್ಟದ ಸಮೀಪದಲ್ಲಿ ವಾಸಿಸುತ್ತಿರುವ ನಮ್ಮಂಥ ಜನರಿಗೆ ಬೇರೆಯದೇ ಆದ ಸಮಸ್ಯೆಗಳು ಕಾಡುತ್ತಿರುತ್ತವೆ. ಈಗಾಗಲೇ ಆಗಿರುವ ಅರಣ್ಯ ಒತ್ತುವರಿ, ಕಾಡು ನಾಶ, ಆನೆಗಳ ಪಥನಾಶಗಳಿಂದಾಗಿ ಪ್ರಮುಖವಾಗಿ ಆನೆ ಹಾಗೂ ಚಿರತೆಯಂಥಾ ವನ್ಯಜೀವಿಗಳು ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡುವ ಕೆಲಸಕ್ಕೆ ತೊಡಗಿಕೊಂಡಿವೆ. ಅವುಗಳನ್ನು ಹಿಡಿಯುವ, ಅಥವಾ ಕೊಂದು ಮನುಷ್ಯರ ಪ್ರಾಣ ರಕ್ಷಿಸಲೆಂದೇ ಅರಣ್ಯ ಇಲಾಖೆಯ ಸಿಬ್ಬಂದಿ ತಾವು ಮಾಡುವ ಕೆಲಸ ಬಿಟ್ಟು, ಹಲವು ಬಾರಿ ವನ್ಯಜೀವಿ ರಕ್ಷಣೆಯ ಕಾನೂನನ್ನು ಮೀರಿ ತಿಪ್ಪರಲಾಗ ಹಾಕಬೇಕಾಗಿದೆ. ಇದರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳಷ್ಟು ಸರ್ಕಾರಿ ಹಣ, ಸಮಯ, ಶ್ರಮ ಹಾಗೂ ರೈತರ, ಬೆಳೆದು ನಿಂತ ಫಸಲು ನಷ್ಟವಾಗುವುದರೊಂದಿಗೆ, ಗಣನೀಯ ಪ್ರಮಾಣದಲ್ಲಿ ಜೀವ ಹಾನಿಯೂ, ವನ್ಯ ಜೀವಿ ಹತ್ಯೆಯೂ ಆಗುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಸಣ್ಣ-ಪುಟ್ಟ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳ ದಾಳಿ ನಿರಂತರವಾಗಿ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದು ಕಾಡಿನಲ್ಲೇ ತಮ್ಮ ಪಾಡಿಗೆ ತಾವು ವಾಸಿಸುತ್ತಾ ಬಂದಿರುವ ವನ್ಯಜೀವಿಗಳ, ಕ್ರಿಮಿ-ಕೀಟಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ. ಇದು ಕಣ್ಣಿಗೆ ಕಾಣುವ ವಾಸ್ತವದ ಒಂದು ಮುಖ. ತಕ್ಷಣಕ್ಕೆ ಕಾಣದಂತಾ ಸೃಷ್ಟಿ ವೈಪರೀತ್ಯಗಳು ಲೆಕ್ಕವಿಲ್ಲದಷ್ಟಿರಬಹುದು
ಹಾಗೇ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ ಜನರು ಬಳಲುತ್ತಿರುವುದು, ದಿನಬಳಕೆಯ ಅಗತ್ಯತೆಗಳಿಗೆ, ವ್ಯವಸಾಯಕ್ಕೆ ನೀರಿಲ್ಲದೇ ಕಂಗಾಲಾಗಿರುವುದು, ವಾಸ್ತವದ ಇನ್ನೊಂದು ಮುಖ. ಜೊತೆಗೇ ಹಾಸನದ ಜನರೂ ಪಕ್ಕದಲ್ಲೇ ಹೇಮೆ ಹರಿಯುತ್ತಿದ್ದರೂ ಈಗಾಗಲೇ ಹಲವು ವರ್ಷಗಳಿಂದ ನೀರಿಗಾಗಿ ಪರದಾಡುತ್ತಲೇ ಇದ್ದೇವೆ.
ಹಾಸನದಲ್ಲಿ ಬದುಕು ಕಟ್ಟಿಕೊಂಡವಳಾಗಿ ವನ್ಯಪ್ರಾಣಿಗಳ ದಾಳಿಯ ತೀವ್ರತೆ ಮತ್ತು ಬಯಲುಸೀಮೆಯಲ್ಲಿ ಬೆಳೆದವಳಾಗಿ ನೀರಿನ ಅಭಾವದ ತೀವ್ರತೆ ಎರಡನ್ನೂ ಅನುಭವಿಸಿ ಬಲ್ಲ ನನಗೆ ಇವೆರಡನ್ನೂ ಮೀರಿ ಪಶ್ಚಿಮಘಟ್ಟದ ಮಹತ್ವದ ಅರಿವಿರುವುದರಿಂದ ಹೀಗೆ ನದಿ ತಿರುಗಿಸಿ ನೀರು ಹರಿಸುವ ಪ್ರಸ್ತಾಪ ತೀವ್ರವಾದಾಗಲೆಲ್ಲಾ ವಿಚಿತ್ರ ಸಂಕಟದಿಂದ ನರಳುತ್ತೇನೆ. ನಾನು ನೀರು ಕೊಡಬೇಕೋ ಕೊಡಬಾರದೆಂದೋ ನಿರ್ಧರಿಸುವುದರಿಂದ  ಯಾವ ಯೋಜನೆಗಳ ಹಣೆಬರಹ ನಿರ್ಧಾರವಾಗುವುದಿಲ್ಲ ಎಂಬ ಅರಿವಿದ್ದರೂ ನನ್ನ ಸುತ್ತಲ ಸಮಸ್ಯೆಗಳಾದರೂ ನನ್ನದೇ ಎಂಬ ತೀವ್ರತೆಯಲ್ಲಿ ಸ್ಪಂದಿಸುವ ನನಗೆ ಯಾವುದಾದರೂ ಒಂದರ ಪರವಾಗಿ ನಿಂತು ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಿರುತ್ತದೆ. ಯಾವ ಕಡೆಗೆ ನನ್ನ  ಒಲವು ಎಂದು ಇಂತಹ ಗೊಂದಲದಲ್ಲಿ ಒದ್ದಾಡುತ್ತಿದ್ದ ಒಂದು ರಾತ್ರಿ ವಿಚಿತ್ರ ಕನಸೊಂದು ಬಿತ್ತು. ಪೂರ್ತಿ ಆಕಾಶಕ್ಕೆ ದೊಡ್ಡದೊಂದು ನೀರು ಸಂಗ್ರಹಿಸುವ ಪರದೆಯನ್ನು ಹರಡಿ ಕಟ್ಟಲಾಗಿದೆ! ಮಧ್ಯೆ ಮಧ್ಯೆ ನೀರು ಬಿಟ್ಟುಕೊಳ್ಳಲು ನಲ್ಲಿಗಳು!. ಇದು ನನ್ನ ಮನಸು ಅತೀವೃಷ್ಟಿ, ಅನಾವೃಷ್ಟಿಗಳನ್ನು ಸಮತೂಗಿಸಲು ಕಂಡುಕೊಂಡ ಮಾರ್ಗ! ಯಾರಿಗೆ ಗೊತ್ತು ಮುಂದೆ ಎಂದಾದರೊಂದು ದಿನ ವಿಜ್ಞಾನಿಗಳು ಇದೇ ರೀತಿಯ ಅಥವಾ ಇದಕ್ಕೆ ಹತ್ತಿರದ ಯಾವುದಾದರೂ ಸಂಶೋಧನೆ ಮಾಡಿ ಮಳೆ ನೀರಿನ ಸಮತೋಲನ ತಂದಾರು! ನಾಗೇಶ್ ಹೆಗಡೆಯವರನ್ನೂ ಒಳಗೊಂಡಂತೆ ನನ್ನ ಕೆಲ ಹತ್ತಿರದ ಗೆಳೆಯರಿಗೆ ಈ ಕನಸನ್ನು ಹೇಳಿಕೊಂಡು ನೀರಿನ ಸಮಸ್ಯೆಗೆ ಈ ರೀತಿಯ ಪರಿಹಾರ ಮುಂದೆ ಎಂದಾದರೂ ಸಿಗಬಹುದೇ ಎಂದು ಕಾತರದಿಂದ ಚರ್ಚಿಸಿದೆ. ಸಮುದ್ರ ಸೇರುವ ನದಿಯ ನೀರು ವ್ಯರ್ಥವೇ? ಅದಕ್ಕೆ ಸಿಹಿ ನೀರಿನ ಅವಶ್ಯಕತೆ ಇಲ್ಲವೇ? ನದಿಯನ್ನು ನಿಜಕ್ಕೂ ತಿರುಗಿಸಲು ಸಾಧ್ಯವೇ? ಇದು ಅವೈಜ್ಞಾನಿಕವಲ್ಲವೇ? ವಿಶ್ವದ ಬೇರೆಡೆಗಳಲ್ಲಿ ಇಂತಹ ಪ್ರಯೋಗಗಳಾಗಿದ್ದರೆ ಅವುಗಳು ಯಶಸ್ವಿಯಾಗಿವೆಯೇ? ಇಂತಹವೇ ಪ್ರಶ್ನೆಗಳನ್ನಿಟ್ಟುಕೊಂಡು ಅಂತರ್ಜಾಲದಲ್ಲಿ, ಪ್ರಾಜ್ಞರಲ್ಲಿ ವಿಚಾರಿಸುತ್ತಾ ಹೋದ ಹಾಗೆ ನನ್ನ ನಿರ್ಧಾರದಲ್ಲಿ ಸ್ಪಷ್ಟತೆ ಬರತೊಡಗಿತು. ಕೊನೆಗೂ ನೀರಿಗಾಗಿ ನದಿಯನ್ನೇ ತಿರುಗಿಸುವ ಪ್ರಯತ್ನಕ್ಕಿಂತಾ,  ಮಳೆಯನ್ನೂ ನೀರನ್ನು ನದಿಯನ್ನೂ ಸೃಷ್ಟಿಸುವ ಕಾಡು ಮತ್ತು ಪಶ್ಚಿಮಘಟ್ಟಗಳ ಉಳಿವೇ  ಮುಖ್ಯವೆಂದು  ನಿರ್ಧರಿಸಿದಾಗಲೂ ನೀರಿಲ್ಲದ ಭೀಕರ ಬಯಲುಸೀಮೆಯನ್ನು ನೆನೆದು ಸಂಕಟ ಮುಂದುವರಿದೇ ಇತ್ತು. ಆದರೆ…..

ಆದರೆ ಆ ವಾಸ್ತವ ಹಾಗೂ ಈ ವಾಸ್ತವ ಒಂದಕ್ಕೊಂದು ಮುಖಾಮುಖಿಯಾಗಿ ನಿಂತು ಯುದ್ಧವಾಡುವುದಾದರೆ ಪರಿಹಾರ ಹೇಗೆ ಸಾಧ್ಯ? ಈ ವೈರುಧ್ಯದ ನಡುವೆಯೇ ನಾವೊಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎನ್ನಿಸಲಾರಂಭಿಸಿ, ಪರ್ಯಾಯ ಸಾಧ್ಯತೆಗಳ ಕಡೆಗೆ ಕಣ್ಣು ಹಾಯಿಸಲಾರಂಭಿಸಿದೆ. ನಮಗಿಂದು ಸುಲಭದ, ತಕ್ಷಣದ, ದುಬಾರಿಯಾದ ಪರಿಹಾರಗಳ ಕಡೆಗೆ, ಯೋಜನೆಗಳ ಕಡೆಗೆ ಗಮನವೇ ಹೊರತು, ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳ ಕಡೆಗೆ ಹೆಚ್ಚಿನ ಗಮನವಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ಆಗುತ್ತಿವೆಯಾದರೂ ಅದರೆಡೆಗೆ ನಮಗೆ ಗಮನ ಹೋಗಿದ್ದು ಕಡಿಮೆ. ಅಂಥಹ ಕೆಲವು ಮಾದರಿಗಳ ಕಡೆಗೆ ಗಮನ ಹರಿಸ ತೊಡಗಿದಾಗ ನಿಜಕ್ಕೂ ಆಶಾಕಿರಣ ಮೂಡತೊಡಗಿತು.

ಮ್ಯಾಗೆಸೆಸ್ಸೆ ಪ್ರಶಸ್ತಿ ಪುರಸ್ಕøತ, ರಾಜಸ್ಥಾನದ ರಾಜೇಂದ್ರಸಿಂಗ್ ಅವರ ಭಗೀರಥ ಪ್ರಯತ್ನ ಪ್ರಕೃತಿಯಿಂದಲೇ ಪ್ರಕೃತಿಯನ್ನು ಸೃಷ್ಟಿಸುವ ಒಂದು ಮಾದರಿ.  ಆಳ್ವಾರ್ ಜಿಲ್ಲೆ ಒಂದೊಂಮ್ಮೆ ಹಸಿರಿನಿಂದ ಕೂಡಿ, ಧಾನ್ಯಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಆದರೆ ರಾಜೇಂದ್ರಸಿಂಗ್ ಇಲ್ಲಿಗೆ ಬಂದ ಕಾಲದಲ್ಲಿ ಅದೊಂದು ಶುಷ್ಕವಾದ ಮರುಭೂಮಿಯಾಗಿತ್ತು. ಅರಣ್ಯನಾಶ ಮತ್ತು ಗಣಿಗಾರಿಕೆ ನೀರಿನ ಮೂಲಗಳನ್ನೇ ನಾಶಮಾಡಿತ್ತು. ಅಂತರ್ಜಲ ಭೂಮಿಯಾಳಕ್ಕೆ ಇಳಿದುಹೋಗಿತ್ತು. ಪಾರಂಪರಿಕ ಚೆಕ್ ಡ್ಯಾಂ [ಜೋಹಡ್] ವ್ಯವಸ್ಥೆಗಳನ್ನು ನಿರ್ಲಕ್ಷಿಸಿದ್ದ ಜನರು ಆಧುನಿಕ ಬೋರ್‍ವೆಲ್‍ಗಳನ್ನು ಅವಲಂಬಿಸಿದ್ದರು. ನೀರಿನ ತೀವ್ರ ಕೊರತೆಯಿಂದ ಇಡೀ ಜಿಲ್ಲೆಯನ್ನು ‘ಡಾರ್ಕ್ ಝೋನ್’ [ಕಪ್ಪು ಪ್ರದೇಶ]ವೆಂದು ಘೋಷಿಸಲಾಗಿತ್ತು. ರಾಜೇಂದ್ರಸಿಂಗ್ ಅವರಿಗೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಯ್ತು. ಇದೇ ಸಂದರ್ಭದಲ್ಲಿ ಹಳ್ಳಿಯೊಂದರ ಮುಖ್ಯಸ್ಥ ಮಂಗೂಲಾಲ್ ಪಟೇಲ್ ‘ರಾಜಾಸ್ಥಾನದಲ್ಲಿ ಶಿಕ್ಷಣಕ್ಕಿಂತಾ ನೀರಿನ ಸಮಸ್ಯೆ ತುಂಬಾ ದೊಡ್ಡದು’ ಎಂದು ಹೇಳಿದ ಮಾತು ಇವರ ಬದುಕಿನ ಮಹತ್ವದ ತಿರುವಿಗೆ ಕಾರಣವಾಯ್ತು.

ವಿದ್ಯಾವಂತನೆಂಬ ಹಮ್ಮಿನಿಂದ ಬದಲಾವಣೆಯ ಉಪದೇಶ ಕೊಡುವುದಕ್ಕಿಂತಾ ಮಣ್ಣು ಮುಟ್ಟಿ ಜನರ ಜೊತೆಗೆ ಬೆರೆತು ಕೆಲಸ ಮಾಡುವುದರಿಂದ ಮಾತ್ರ ಆಮೂಲಾಗ್ರ ಬದಲಾವಣೆ ಸಾಧ್ಯ ಎಂದು ನಿಶ್ಚಯಿಸಿ ಜೋಹಡ್‍ಗಳ ಮರು ನಿರ್ಮಾಣದಲ್ಲಿ ತೊಡಗಿದರು. ಇವರ ನಾಲ್ಕು ಗೆಳೆಯರು ಈ ಕೆಲಸ ತಮ್ಮಿಂದ ಸಾಧ್ಯವಿಲ್ಲವೆಂದು ಇವರನ್ನು ಬಿಟ್ಟು ಹೋದರು. ಇದರಿಂದ ಎದೆಗುಂದದ ರಾಜೇಂದ್ರ ಅವರು ಹಳ್ಳಿ ಹಳ್ಳಿಗಳಲಿ ಯುವಜನರನ್ನು ಸಂಘಟಿಸಿ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿದರು. ಅವರು ತರುಣ ಭಾರತ ಸಂಘವೆಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಮಳೆ ನೀರನ್ನು ಸಂಗ್ರಹಿಸಲು ಹಳ್ಳಿ ಹಳ್ಳಿಗಳಲ್ಲಿ 4500 ಜೋಹಡ್‍ಗಳನ್ನು [ಮಣ್ಣಿನ ತಡೆಗೋಡೆಗಳು] ನಿರ್ಮಿಸಿ, ಬತ್ತಿ ಹೋಗಿದ್ದ 5 ನದಿಗಳನ್ನು ಪುನರುತ್ಥಾನಗೊಳಿಸಿ, ಪೂರ್ವ ರಾಜಸ್ಥಾನದ ಮರುಭೂಮಿಯಿಂದ ಆವೃತವಾದ 850 ಹಳ್ಳಿಗಳಲ್ಲಿ ಯತೇಚ್ಛ ನೀರು ಉಕ್ಕಿಸಿ ಹಸಿರು ಸೃಷ್ಟಿಸಿದ ಹರಿಕಾರರಾಗಿದ್ದಾರೆ. ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದರು. ಮಳೆ ನೀರು ಸಂಗ್ರಹ ಮತ್ತು ಅದರ ವ್ಯವಸ್ಥಿತ ಬಳಕೆಯಿಂದ ಕೇವಲ 3ವರ್ಷಗಳಲ್ಲಿ ಪ್ರತಿಫಲ ಕಾಣತೊಡಗಿ, ಕೆಲವೇ ವರ್ಷಗಳಲ್ಲಿ ಅದು ‘ವೈಟ್ ಝೋನ್’[ಶ್ವೇತ ಪ್ರದೇಶ]ವಾಗಿ ಮಾರ್ಪಟ್ಟಿತು. ಅಂದಿನಿಂದ ಇಲ್ಲಿಯವರೆಗೂ ಆ ಪ್ರದೇಶಗಳಲ್ಲಿ ಎಂದಿಗೂ ನೀರಿನ ಕೊರತೆಯಾಗದಿರಲು ಸಾಧ್ಯವಾಗಿದ್ದು ನೀರಿನ ವ್ಯವಸ್ಥಿತ ನಿರ್ವಹಣೆಯಿಂದ! ಅದಕ್ಕೆ ಬೇಕಿರುವುದು ಒಂದಿಷ್ಟು ಶ್ರಮ, ಯುವಶಕ್ತಿಯ ಸಂಘಟನೆ ಮತ್ತು ಸಾಧಿಸುವ ಛಲ. ‘ಮಣ್ಣು ಮತ್ತು ನೀರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ’ ಎನ್ನುವ ರಾಜೇಂದ್ರಸಿಂಗ್ ಮಾತು ನಮಗೆ ಸರಿಯಾಗಿ ಅರ್ಥವಾದರೆ ಬಹುಶಃ ಪ್ರವಾಹ ಮತ್ತು ಬರ ಎರಡನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯವಿದೆ. ನೀರುಸಂತ, ನೀರುಸಂರಕ್ಷಕನೆಂಬ ಬಿರುದಿಗೆ ಪಾತ್ರರಾಗಿ ಮಳೆ ನೀರಿನ ಕೊಯ್ಲಿಗೆ ಹೊಸ ಭಾಷ್ಯ ಬರೆದ ಆಧುನಿಕ ಕ್ರಾಂತಿ ಭಗೀರಥ ಅವರಾಗಿದ್ದಾರೆ. ಅವರ ತಾಳ್ಮೆ, ಸಂಘಟನಾ ಕೌಶಲ್ಯ, ಪ್ರಕೃತಿ ಸೂಕ್ಷ್ಮತೆಯನ್ನೊಳಗೊಂಡು, ಕಡಿಮೆ ವೆಚ್ಚದಲ್ಲಿ ನಮ್ಮ ದೇಸೀ ಪರಂಪರಾಗತ ಜಾಣ್ಮೆಯನ್ನು ಬಳಸಿ ಮಾಡಿದ ಈ ಸಾಧನೆ, ನಮ್ಮ ಶೈಕ್ಷಣಿಕ ಶಿಸ್ತಿನ ಪಾಂಡಿತ್ಯಕ್ಕಿಂಥಾ ಸಮರ್ಥವಾದುದೆಂದು ಸಾಬೀತಾಗಿದೆ.

ಅದೇ ಉತ್ತರ ರಾಜಸ್ಥಾನದ ಲಾಪೋಡಿಯಾದ ಲಕ್ಷ್ಮಣಸಿಂಗ್ ಅವರದು ಬರಕ್ಕೇ ಬೇಲಿ ಹಾಕಿದ ಇನ್ನೊಂದು ನೀರಿನ ಗಾಥೆ. ರಾಜಸ್ಥಾನದ ಈ ಅಲ್ಪ ವಿದ್ಯಾಭ್ಯಾಸ ಪಡೆದ ರೈತ, ಊರವರನ್ನು ಸಂಘಟಿಸಿ ಬರಡು ಮರುಭೂಮಿಯ ಹಳ್ಳಿಯಲ್ಲಿ ಹಸಿರು ಸೃಷ್ಟಿಸಿದ್ದು, ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿ, ಬರ ಹಾಗೂ ನೆರೆಗಳನ್ನು ಏಕಕಾಲಕ್ಕೆ ನಿಯಂತ್ರಿಸಿ, ಸುತ್ತಲ 350 ಹಳ್ಳಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಈಗ ಒಂದು ಇತಿಹಾಸ. ಈ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ ಮಾದರಿಯೊಂದನ್ನು ಲಕ್ಷ್ಮಣ್ ಅಭಿವೃದ್ಧಿಪಡಿಸಿದ್ದಾರೆ. ಅದು ಚೌಕ ವಿಧಾನವೆಂದೇ ಜನಪ್ರಿಯವಾಗಿದೆ. ಹುಲ್ಲುಗಾವಲಿನಲ್ಲಿ ಚೌಕಗಳನ್ನು ನಿರ್ಮಿಸಿ ನೀರನ್ನು ಇಂಗಿಸಿ, ಸಂಗ್ರಹಿಸುವ ವಿಧಾನ ಇದಾಗಿದೆ. ಇಲ್ಲೂ ಗ್ರಾಮೀಣ ವಿಕಾಸ ನವ್ ಯುವಕ್ ಮಂಡಲ್ ಎಂಬ ಸಂಘಟನೆಯಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂಬುದು ಗಮನಾರ್ಹ. ಮಳೆ ನೀರನ್ನು ಶೇಖರಿಸಿ, ಇಂಗಿಸಿ ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ನಿರ್ಮಿಸಿ ಇವರು ದಾಖಲೆ ಬರೆದಿದ್ದಾರೆ. ಇದಾವುದೂ ಪವಾಡಗಳಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು. “ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಅರಿತೆ” ಎನ್ನುವ ಲಕ್ಷ್ಮಣ್ ಅವರ ಮಾತು ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ. ಇದರ ಜೊತೆಗೆ ಅವರು ನೀರಿನ ಸಂರಕ್ಷಣೆಯ ಕುರಿತ ಆಸಕ್ತರಿಗೆ ತಮ್ಮ ಊರಿನಲ್ಲಿ ಉಚಿತವಾಗಿ ಒಂದು ವಾರದ ವ್ಯವಸ್ಥಿತ ತರಬೇತಿಯನ್ನೂ ನೀಡುತ್ತಿರುವುದು ತಿಳಿದು ಬಂತು. ಬರಪ್ರದೇಶದ ಆಸಕ್ತ ಯುವ ನಾಯಕರು ಅಲ್ಲಿಗೆ ಹೋಗಿ ತರಬೇತಿ ಪಡೆದು ಬರುವುದಾದರೆ ಇರಲೆಂದು ಎಲ್ಲಾ ಮಾಹಿತಿಯನ್ನೂ ನಾವು ಸಂಗ್ರಹಿಸಿದೆವು.
ಸೈಮನ್ ಬರಾನ್ ಜಾರ್ಖಂಡ್‍ನ ನೀರಿನ ಮನುಷ್ಯ. ಸಾವಿರಾರು ಜನರ ಬದುಕಿಗೆ ಬೆಳಕು ತಂದವರು. ಅಗಾಧವಾಗಿ ಗಿಡ ನೆಡುವ ಕೆಲಸ ಮತ್ತು ಮಳೆನೀರು ಸಂಗ್ರಹಕ್ಕಾಗಿ ಬಾವಿ ಮತ್ತು ಕೆರೆಗಳ ನಿರ್ಮಾಣದಲ್ಲಿ ತನ್ನ ಜೀವವನ್ನೇ ಮುಡುಪಾಗಿಟ್ಟವರು. ಕಾಸ್ಕಿ ತೋಲಿ ಎಂಬ ಹಳ್ಳಿಯಲ್ಲಿ ಹುಟ್ಟಿ 51 ಹಳ್ಳಿಗಳ ಬರ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೀರನ್ನು ಸಂರಕ್ಷಿಸುವ ಸರಳ ಸಾಮಥ್ರ್ಯ ವೃದ್ಧಿಸಿರುವುದರಿಂದಾಗಿ ಇಂದು ಆ ಹಳ್ಳಿ ರಾಜ್ಯದ 25,000 ಮೆಟ್ರಿಕ್ ಟನ್ ತರಕಾರಿಗಳನ್ನು ಬೆಳೆದು, ಬೇರೆಬೇರೆ ಜಿಲ್ಲೆಗಳಿಗೆ ರಫ್ತು ಮಾಡುವಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಮೊನ್ನೆಯಷ್ಟೇ ಪರಿಸರ ಸಂರಕ್ಷಣೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಚೆಕ್‍ಡ್ಯಾಂಗಳ ನಿರ್ಮಾಣದಲ್ಲಿ ಇವರ ಕೌಶಲ್ಯವನ್ನು ಬಳಸಿಕೊಳ್ಳಲು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೀರಿನ ಸಂರಕ್ಷಣೆಯ ರಾಯಭಾರಿಯಾಗಿ ಸೈಮನ್‍ರನ್ನೇ ನೇಮಿಸಿಕೊಂಡಿದೆ.
ಗುಜರಾತಿನಲ್ಲಿ 5 ಲಕ್ಷ ಹೆಣ್ಣುಮಕ್ಕಳು ಸದಸ್ಯರಾಗಿರುವ ಸೆಲ್ಫ್ ಎಂಪ್ಲಾಯ್‍ಮೆಂಟ್ ವುಮೆನ್ಸ್ ಅಸೋಸಿಯೇಶನ್ ( S.E.W.A) ನೀರಿನ ಸಮರ್ಥ ನಿರ್ವಹಣೆಗಾಗಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುತ್ತಾ ನೀರಿನ ಅವಶ್ಯಕತೆಯನ್ನು ಪೂರೈಸಲು ಕೆರೆಗಳ, ನೀರಿನ ತೊಟ್ಟಿಗಳ ನಿರ್ಮಾಣದಲ್ಲಿ ತೊಡಗಿರುವುದನ್ನು ಕೇಳಿ ನನ್ನ ಆಶಾವಾದ ಹೆಚ್ಚಾಯ್ತು. ಏಕೆಂದರೆ ಮಹಿಳೆಗೂ ನೀರಿಗೂ ಅವಿನಾಭಾವ ಸಂಬಂಧ. ಹೆಣ್ಣುಮಕ್ಕಳ ಯಾವ ಕೆಲಸವೂ ನೀರಿಲ್ಲದೇ ನಡೆಯಲಾರದು. ಮನೆಯಿಂದ ಹಿಡಿದು ಕೃಷಿ ಕೆಲಸದವರೆಗೆ ನೀರಿನ ನಿರ್ವಹಣೆಯ ಹೆಚ್ಚಿನ ಹೊಣೆ ಮಹಿಳೆಯರದೇ. ಹೀಗೆಂದೇ ಅದನ್ನು ಸಂರಕ್ಷಿಸುವ, ಪುನರ್ ಸೃಷ್ಟಿಸುವ, ಅಂತರ್‍ಜಲ ಮರುಪೂರಣ ಮಾಡುವ ನೆಲೆಗಳಲ್ಲಿ ನಮ್ಮ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ತೆಗೆದುಕೊಳ್ಳುತ್ತಿರುವ ಜವಾಬ್ದಾರಿಗಳು ನನಗೆ ಅತ್ಯಂತ ಮುಖ್ಯವಾದುದೆಂದೆನಿಸುತ್ತಿದೆ. ಮಹಿಳೆಯರು ನೀರಿನ ಸಮರ್ಥ ನಿರ್ವಹಣಾಕಾರರಾಗಿ ರೂಪುಗೊಂಡರೆ ನಮ್ಮ ನೀರಿನ ಸಮಸ್ಯೆ ಅರ್ಧದಷ್ಟು ಬದಲಾದಂತೆಯೇ. ನಮ್ಮ ಹಳ್ಳಿಯಲ್ಲಿ ಬಿದ್ದ ನೀರು ನಮ್ಮ ಹಳ್ಳಿಗೇ… ಇದನ್ನು ಮುಂದಕ್ಕೆ ಹರಿದು ಹೋಗಲು ಬಿಡೆವು ಎಂದು ನಮ್ಮ ಹೆಣ್ಣುಮಕ್ಕಳು ಗಟ್ಟಿ ಹಠ ಹಿಡಿದು ಕುಳಿತರೆ ನಮ್ಮ ಹಳ್ಳಿಯ ಕೆರೆಗಳು ತುಂಬಿಕೊಳ್ಳುತ್ತವೆ. ಇಂತಹ ಪ್ರಯತ್ನಗಳು ಈಗಾಗಲೇ ದೇಶಾದ್ಯಂತ ಪ್ರಾರಂಭವಾಗಿದೆ. ನರೇಗಾ ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ಧಾರವಾಡದ ಗೆಳತಿ ಶಾರದಾ ಗೋಪಾಲ ತನ್ನ ಮಹಿಳಾ ಸಂಘಟನೆಯೊಂದಿಗೆ ಕೆರೆಗಳ ಪುನಶ್ಚೇತನದ ಕೆಲಸದಲ್ಲಿ ತಮ್ಮನ್ನು ಸಮರ್ಥವಾಗಿ ತೊಡಗಿಸಿಕೊಂಡಿದ್ದಾರೆ.

ಗುಲ್ಬರ್ಗದ ಆಜಾದಪುರದ ಚಂದಮ್ಮ ಗೋಳಾ ಎಂಬ ಮಹಿಳೆ ತಮ್ಮ ಊರಿನ ಕೆರೆಗೆ ಮರುಜೀವ ಕೊಟ್ಟು ಊರಲ್ಲಿ ಹಸಿರು ಉಕ್ಕಿಸಿದ್ದಾರೆ. ಇಂತಹ ಹೆಣ್ಣುಮಕ್ಕಳ ಗಾಥೆಗಳನ್ನು ಕೇಳುವಾಗ ಹೆಮ್ಮೆ ಮೂಡುತ್ತದೆ. ಜೊತೆಗೇ ಕೃಷಿ ಉತ್ಪಾದಿಸುವ ರೀತಿಯಲ್ಲಿ ಬದಲಾವಣೆ, ಮತ್ತು ಕಡಿಮೆ ನೀರಿನ ಅವಶ್ಯಕತೆ ಇರುವ  ಬೆಳೆ ಬೆಳೆಯುವ ನಿರ್ಧಾರಗಳನ್ನು ಮಾಡುವ ಮೂಲಕ ಮತ್ತಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಪ್ರತಿ ಊರಿನ ಕೆರೆಯ ಹಿಂದೆ ಪುರುಷ ರಾಜಕಾರಣದ ಸ್ವಾರ್ಥದ ಕಥೆಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದನ್ನು ಬಯಲು ಮಾಡಿ ಕೆರೆಯ ಹೂಳೆತ್ತುವಿಕೆ, ಒತ್ತುವರಿ ತೆರವು, ಕೆರೆ ಪುನರ್ ನಿರ್ಮಾಣದ ಹೊಸ ಮಾದರಿಗಳಿಂದಲೇ ಮಹಿಳೆಯರು ನವ ಇತಿಹಾಸ ನಿರ್ಮಿಸುವಂತಾದರೆ ಇಲ್ಲಿ ಮಹಿಳೆ ನೀರಿನ ಹರಿಕಾರಳೆಂದೇ ಗುರ್ತಿಸಲ್ಪಡುತ್ತಾಳೆ.

ಜಗತ್ತಿನ ಹಲವು ಭಾಗಗಳಲ್ಲಿ ಈಗಾಗಲೇ ಸಮುದ್ರದ ನೀರನ್ನು ಶುದ್ಧೀಕರಿಸಿ ಜನರ ನಿತ್ಯ ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ. ಅದಕ್ಕಾಗಿ ನಮ್ಮ ರಾಜ್ಯದಲ್ಲೂ ಬೃಹತ್ ಸಮುದ್ರ ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕು. ಇವುಗಳಿಂದ ಬಯಲುಸೀಮೆ ಮತ್ತಿತರ ಬರಪೀಡಿತ ಸ್ಥಳಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿದರೂ ಪ್ರಕೃತಿ ನಾಶವಿಲ್ಲದೇ ನೀರು ಕೊಡಲು ಸಾಧ್ಯವಿದೆಯೆಂದು ಪ್ರಾಜ್ಞರು ಹೇಳುತ್ತಿದ್ದಾರೆ. ಆ ವಿಧಾನಗಳ ಕಡೆಗೂ ತುರ್ತಾಗಿ ಗಮನ ಹರಿಸಬೇಕು.

ಇದಲ್ಲದೇ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ನೀರಿನಜೋಗಿ ಎಂದೇ ಹೆಸರು ಮಾಡಿರುವ ಕೃಷಿ ಪಂಡಿತ ಶಿವಕುಮಾರ ಸ್ವಾಮೀಜಿ, ಬರದ ನಾಡಿನಲ್ಲೂ ಮಳೆ ನೀರು ಸಂಗ್ರಹ ಮಾಡಿ, ಹಸಿರು ಸೃಷ್ಟಿಸಿ ಸುತ್ತಲಿನ ಹಳ್ಳಿಗಳಿಗೆ ಜೀವ ಚೈತನ್ಯ ತುಂಬಿದ್ದಾರೆ. ಇತ್ತೀಚೆಗೆ ಕಪ್ಪತಗುಡ್ಡವನ್ನು ಪರಿಸರ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.

ನಮ್ಮ ಕಟ್ಟಡಗಳ ಮೇಲೆ ಬೀಳುವ ಮಳೆ ನೀರಿನ ಕುಯ್ಲು ಹಾಗೂ ಸಂಗ್ರಹಣಾ ವಿಧಾನವನ್ನು ಸಮರ್ಥವಾಗಿ ಅಳವಡಿಸಿಕೊಂಡರೆ ನಮ್ಮ ಬಹಳಷ್ಟು ನೀರಿನ ಸಮಸ್ಯೆ ನೀಗಿಹೋಗುತ್ತದೆ ಎನ್ನುತ್ತಾರೆ ನಮ್ಮ ನೀರಿನ ತಜ್ಞರು. ಸರ್ಕಾರದ ಸುವರ್ಣ ಜಲ ಯೋಜನೆ ಈಗಾಗಲೇ 23683 ಸರ್ಕಾರಿ ಶಾಲೆಗಳಲ್ಲಿ ಅಳವಡಿಕೆಯಾಗಿ ಸಮರ್ಥ ಮಳೆಕೊಯ್ಲು ವಿಧಾನದಿಂದ ನೀರಿನ ಕೊರತೆ ನೀಗಿಕೊಂಡಿದೆ ಎಂದು ವರದಿಗಳು ಹೇಳುತ್ತವೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಳೆನೀರಿನ ಒಟ್ಟು ಸಂಗ್ರಹಣಾ ಸಾಮಥ್ರ್ಯ 8000 ದಿಂದ 15000 ಲೀಟರ್‍ಗಳಷ್ಟಿವೆ. ಮನೆ, ಶಾಲೆ, ಯಾವುದೇ ಬೃಹತ್ ಕಟ್ಟಡದ ಮೇಲ್ಚಾವಣಿಗಳಿಂದ ಮಳೆ ನೀರು ಸಂಗ್ರಹಿಸಿ, ಅದರ ಪುನರ್ ಬಳಕೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಕುರಿತು ಒಂದು ಆಂದೋಲನದ ರೀತಿಯಲ್ಲಿ, ಸಾರ್ವತ್ರಿಕವಾಗಿ ಜನರಲ್ಲಿ ಜಲ ಜಾಗೃತಿಯನ್ನೂ, ಅದನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಸುವ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡಾಗ ನಮ್ಮ ಜನರಲ್ಲೂ ಅದರ ಅರಿವು ಮೂಡುತ್ತದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಮಳೆನೀರು ಕೊಯ್ಲು ಮಾದರಿ ಉದ್ಯಾನವನವನ್ನು ರೂಪಿಸಿ ಪ್ರಚಾರ ಕಾರ್ಯ ಆರಂಭಿಸಿರುವುದೂ ಒಂದು ಗಮನಾರ್ಹ ಪ್ರಯತ್ನ. ಇದಲ್ಲದೇ ಹಳ್ಳಿಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಮಳೆ ನೀರಿನ ಸಮರ್ಥ ಬಳಕೆ ಕುರಿತು ಕೃಷಿ ಹಾಗೂ ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ. ಮೊದಲಿಗೆ ವಿಧಾನಸೌಧವನ್ನೂ ಒಳಗೊಂಡಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿಯೂ ಕಡ್ಡಾಯವಾಗಿ ಮಳೆನೀರು ಕೊಯ್ಲು ವಿಧಾನವನ್ನು ಜಾರಿಗೊಳಿಸಿ ಮೊದಲಿಗೆ ಸರ್ಕಾರವೇ ಮಾದರಿಯನ್ನು ನಿರ್ಮಿಸಿ ತೋರಿಸಬೇಕು. ನಿಧಾನಕ್ಕೆ ಅದನ್ನು ಖಾಸಗಿ, ಅರೆ ಖಾಸಗಿ ಒಡೆತನದ ಕಟ್ಟಡಗಳಿಗೂ ವಿಸ್ತರಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದಾಗ ಮಾತ್ರ ನೀರಿನ ಕೊರತೆ ಸ್ವಲ್ಪವಾದರೂ ನೀಗೀತು. ಇದು ರಾಜ್ಯಾದ್ಯಂತ ನಡೆದಾಗ ಮಾತ್ರ ಮಳೆ ನೀರಿನ ಸಮರ್ಥ ಬಳಕೆ ಸಾಧ್ಯವಾಗಬಹುದು.

ಇಂತಹ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ, ಪ್ರಕೃತಿ ಕೇಂದ್ರಿತ ನೈಸರ್ಗಿಕ ಪ್ರಯತ್ನಗಳು ಭೂಮಿಯ ಮೇಲೆ ಮನುಷ್ಯ ಇನ್ನಷ್ಟು ವರ್ಷ ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುತ್ತವೆ. ಅದಿಲ್ಲದೇ ಪ್ರಕೃತಿಯ ವಿರುದ್ಧವಾಗಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ನಾಶಕ್ಕೆ ಕಂದಕವನ್ನು ನಾವೇ ತೋಡಿಕೊಳ್ಳುವಂತಾ ಮೂರ್ಖತನವಾದೀತು. ಸಹನಾಮಯಿ ಧರಿತ್ರಿ ತನ್ನ ಮೇಲಿನ ಅತ್ಯಾಚಾರಗಳಿಗೆ, ವರ್ತಮಾನವಷ್ಟೇ ಮುಖ್ಯ, ಎಂಬ ನಮ್ಮ ಹುಂಬತನಕ್ಕೆ, ಈಗಾಗಲೇ ನಾವು ಚೇತರಿಸಿಕೊಳ್ಳಲಾಗದಂತಾ ಪೆಟ್ಟುಗಳನ್ನು ಕೊಡುತ್ತಿದ್ದಾಳೆ. ಅವಳೊಂದಿಗಿನ ಪ್ರೀತಿಯ ಅನುಸಂಧಾನದಿಂದ ಮಾತ್ರ ನಾವು ನೆಮ್ಮದಿಯ ನಾಳೆಗಳನ್ನು ಕಾಣಲು ಸಾಧ್ಯ. ಅದಕ್ಕೆ ಇಂದಿನ ನಮ್ಮ ರಚನಾತ್ಮಕ ಹೆಜ್ಜೆಗಳೇ ಮಾದರಿಯಾಗಬೇಕಿದೆ.

ಲೇಖಕರು: ರೂಪಾ ಹಾಸನ

ಮಾಹಿತಿ ಸೌಜನ್ಯ: http://bhoomigeetha.com