ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವರ್ಷವಿಡೀ ಸಿಹಿ- ಸವಿ ನೀರು

ಕೊಪ್ಪಳಕ್ಕೆ ತುಂಗಭದ್ರೆ ನೀರು ಪೂರೈಕೆಯಾಗುತ್ತದೆ. ಆದರೆ ಅಲ್ಲಿಗೆ ಕೇವಲ ಎರಡು ಕಿಲೋಮೀಟರ್ ದೂರದ ಭಾಗ್ಯನಗರಕ್ಕೆ ಆ ಭಾಗ್ಯ ಇಲ್ಲ. ಆದರೇನಂತೆ, ಸಂಪೂರ್ಣ ಉಚಿತವಾಗಿ ಸಿಗುವ ಮಳೆನೀರು ಇದೆಯಲ್ಲ?! ಇದನ್ನೇ ಬಳಸಿಕೊಂಡರಾಗದೇ!

ಮಳೆನೀರು ಸಂಗ್ರಹದಿಂದ ಎರಡು ಲಾಭಗಳಿವೆ; ವರ್ಷಪೂರ್ತಿ ಸಿಹಿ ನೀರು ಸಿಗುವುದು ಒಂದಾದರೆ; ಈ ನೀರು ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ‘ಗುಡ್ ಬೈ’ ಹೇಳುವುದು ಇನ್ನೊಂದು ಲಾಭ.

ಈ ಎರಡೂ ಪ್ರಯೋಜನಗಳನ್ನು ಪಡೆಯುತ್ತಿರುವವರು ಕೊಪ್ಪಳದ ಭಾಗ್ಯನಗರ ನಿವಾಸಿ ನಾಗರಾಜ ಆರ್. ಬಳ್ಳಾರಿ. ಅಂದ ಹಾಗೆ, ಕೊಪ್ಪಳದಲ್ಲಿ ಮೊದಲ ಬಾರಿಗೆ ಮಳೆ ನೀರು ಸಂಗ್ರಹಣೆ ಮಾಡಿ ಅದರ ಬಳಕೆಯನ್ನೂ ಮಾಡಿದ ಹೆಗ್ಗಳಿಕೆ ಇವರದು.

RWH- Nagaraj &  Shobhaಪ್ರಗತಿ ಗ್ರಾಮೀಣ ಬ್ಯಾಂಕಿನ ಉದ್ಯೋಗಿಯಾಗಿರುವ ನಾಗರಾಜ, ಮನೆ ಕಟ್ಟಿಸುವ ಸಂದರ್ಭದಲ್ಲಿ ಮುಖ್ಯ ಬಾಗಿಲಿನ ಪಕ್ಕದಲ್ಲೇ ನೀರಿನ ಸಂಗ್ರಹಕ್ಕೆಂದು ೬ ಅಡಿ ಉದ್ದ, ನಾಲ್ಕಡಿ ಅಗಲ ಹಾಗೂ ೧೨ ಅಡಿ ಆಳದ ಟ್ಯಾಂಕ್ ಮಾಡಿಸಿದ್ದರು. ಸಾರ್ವಜನಿಕ ನೀರಿನ ಪೂರೈಕೆ ವ್ಯವಸ್ಥೆ ಲಭಿಸದ ಕಾರಣ, ಕೊಳವೆಬಾವಿ ಕೊರೆಸಿದರು. ಸಾಕಷ್ಟು ಪ್ರಮಾಣದ ನೀರು ಕೂಡ ಸಿಕ್ಕಿತು. ಆದರೆ ಇಷ್ಟಪಟ್ಟು ಕುಡಿಯುವಂತಿರಲಿಲ್ಲ, ಕೊಂಚ ಸಪ್ಪೆ. ಸುತ್ತಮುತ್ತ ಸಿಹಿ ನೀರು ಸಿಕ್ಕದ ಕಾರಣ, ಮೂರು ಕಿಲೋ ಮೀಟರ್ ದೂರದಲ್ಲಿ ಕೊಪ್ಪಳದಲ್ಲಿದ್ದ ಬಂಧುಗಳ ಮನೆಯಿಂದ ಸಿಹಿ ನೀರನ್ನು ಬೈಕ್ ಮೇಲೆ (ಅತ್ತ- ಇತ್ತ ಎರಡರಂತೆ ಒಟ್ಟು ನಾಲ್ಕು ಕೊಡ) ತರುವುದು ಅನಿವಾರ‍್ಯವಾಗಿತ್ತು. ಮನೆಯಲ್ಲಿ ವಿಶೇಷ ಕಾರ‍್ಯಕ್ರಮ, ಸಮಾರಂಭ ನಡೆದಾಗ, ಅತಿಥಿಗಳು ಬಂದಾಗ ಸಿಹಿ ನೀರಿನ ‘ಕೊರತೆ’ ಅನುಭವಿಸಬೇಕಾಯಿತು. ಇದರ ಜತೆಗೆ, ಆಗಾಗ ಕುಡಿಯುತ್ತಿದ್ದ ಕೊಳವೆಬಾವಿ ನೀರಿನಿಂದ ಕೈ- ಕಾಲು, ಮಂಡಿ ನೋವು ಎಲ್ಲರನ್ನೂ ಪೀಡಿಸತೊಡಗಿದವು.

ಇದೇ ಸಂದರ್ಭದಲ್ಲಿ ನಾಗರಾಜ ಅವರ ಅಳಿಯ ಆನಂದ, ‘ಅಡಿಕೆ ಪತ್ರಿಕೆ’ಯ ಸಂಚಿಕೆಗಳನ್ನು ಆಗಾಗ ತಂದುಕೊಡುತ್ತಿದ್ದ. ಅದರಲ್ಲಿ ಮಳೆ ನೀರು ಸಂಗ್ರಹದ ಕುರಿತು ಲೇಖನ ಓದುವ ಜತೆಗೆ, ನಾಗರಾಜ ಅವರು ಹೆಚ್ಚಿನ ವಿವರಗಳನ್ನೂ ಆತನಿಂದ ಪಡೆದುಕೊಂಡರು. ಮನೆ ಮುಂದೆ ಕಟ್ಟಿಸಿದ್ದ ಟ್ಯಾಂಕ್‌ನಲ್ಲಿ ಮಳೆನೀರು ಸಂಗ್ರಹಿಸುವ ನಿರ್ಧಾರ ಗಟ್ಟಿಯಾಯಿತು.

RWH೩೦- ೪೦ ಅಡಿ ನಿವೇಶನದಲ್ಲಿ ಕಟ್ಟಲಾದ ಮನೆಯ ವಿಸ್ತೀರ್ಣ ಸಾವಿರ ಚದರಡಿಗಳು. ಮಾಳಿಗೆ (ಚಾವಣಿ)ಯ ಮೇಲೆ ಬೀಳುವ ನೀರನ್ನು ಒಂದು ಇಂಚು ವ್ಯಾಸದ ಪಿವಿಸಿ ಪೈಪ್‌ನ ಮೂಲಕ ಕೆಳಗಿನ ಟ್ಯಾಂಕಿಗೆ ಭರ್ತಿ ಮಾಡುವ ಯೋಚನೆ. ಇದಕ್ಕಾಗಿ ಚಾವಣಿ ಮೇಲ್ಭಾಗವನ್ನು ಸ್ವಚ್ಛಗೊಳಿಸಲಾಯಿತು. ಮೊದಲ ಬಾರಿ ಮಳೆ ಸುರಿದಾಗ ಹರಿನಾಳಿಗೆಯಿಂದ ಪೈಪ್ ಮೂಲಕ ಕೆಳಗಿಳಿದ ನೀರನ್ನು ಹತ್ತು ನಿಮಿಷಗಳ ಕಾಲ ಹೊರಗೆ ಬಿಟ್ಟರು. ನಂತರ ಕೊಳವೆಯನ್ನು ಟ್ಯಾಂಕಿನೊಳಗೆ ತೂರಿಸಿದರು. ಭೋರ್ಗರೆಯುತ್ತಿದ್ದ ಮಳೆರಾಯನ ಕೃಪೆಯಿಂದ ಅರ್ಧ ತಾಸಿನಲ್ಲೇ ಟ್ಯಾಂಕ್ ಭರ್ತಿಯಾಯಿತು. ‘ಅಲ್ಲಿಂದ ಈವರೆಗೆ ನಮಗೆ ನೀರಿನ ಸಮಸ್ಯೆ ಅಷ್ಟಾಗಿ ಕಾಡಿಲ್ಲ’ ಖುಷಿಯಿಂದ ಹೇಳುತ್ತಾರೆ ನಾಗರಾಜ. ‘ಕೊಳವೆಬಾವಿ ನೀರು ಕುಡಿಯುತ್ತಿದ್ದಾಗ ಮಂಡಿ, ಕೈ-ಕಾಲು, ಕೀಲುನೋವು ಪದೇ ಪದೇ ಕಾಡುತ್ತಿದ್ದವು. ಒಂದೊಮ್ಮೆ ಮಳೆ ನೀರು ಕುಡಿಯಲು ಶುರು ಮಾಡಿದಾಗಿನಿಂದ ಅಂಥ ಸಮಸ್ಯೆ ಕಾಣಿಸುತ್ತಿಲ್ಲ’- ಮನೆಯೊಡತಿ ಶೋಭಾ ದನಿಗೂಡಿಸುತ್ತಾರೆ.

ಜೋರಾಗಿ ಮಳೆ ಸುರಿದರೆ ಮುಕ್ಕಾಲು ಅಥವಾ ಒಂದು ತಾಸಿನಲ್ಲಿ ಟ್ಯಾಂಕಿನ ತುಂಬ ನೀರು. ಒಟ್ಟು ೭,೫೦೦ ಲೀಟರ್ ಸಂಗ್ರಹ. ಜನವರಿ ಹೊತ್ತಿಗೆ ಮಳೆ ಕಡಿಮೆಯಾದರೂ, ಟ್ಯಾಂಕಿನಲ್ಲಿರುವ ನೀರು ಮಾರ್ಚ್- ಏಪ್ರಿಲ್‌ವರೆಗೆ ಲಭ್ಯ. ಮಧ್ಯೆ ಮಳೆಯಾದರೆ ಮತ್ತೆ ಟ್ಯಾಂಕ್ ತುಂಬುತ್ತದೆ. ಮಳೆ ಕಡಿಮೆಯಾಗಲೀ, ಹೆಚ್ಚಾಗಲಿ- ಆಕಾಶದಿಂದ ಸುರಿವ ನೀರು ಸಂಗ್ರಹಿಸಿದರೆ ಸವಿ ಸವಿ ನೀರು ಸದಾ ಲಭ್ಯ. ಇದರ ಜತೆಗೆ, ಅಕ್ಕಪಕ್ಕದ ಮನೆಯವರೂ ಇವರ ಟ್ಯಾಂಕಿನಿಂದ ನೀರು ಪಡೆಯುತ್ತಾರೆ.

ಅತ್ಯಲ್ಪ ವೆಚ್ಚದಲ್ಲಿ ವರ್ಷವಿಡೀ ಸಿಹಿ ನೀರು ಪಡೆಯುವ ನಾಗರಾಜ ಅವರ ಈ ತಂತ್ರ ಸಹೋದ್ಯೋಗಿಗಳನ್ನೂ ಆಕರ್ಷಿಸಿದೆ. ಇದೇ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುವ ಗುರುರಾಜ ಬಾಗಲಿ, ತಮ್ಮ ಮನೆಯಲ್ಲೂ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಿಮೆಂಟ್ ಪೈಪ್‌ಗಳನ್ನು ನೆಲದೊಳಗೆ ಅಳವಡಿಸಿ, ಅಲ್ಲೇ ನೀರು ಸಂಗ್ರಹಿಸುತ್ತಾರೆ. ‘ಬೇಕಂದಾಗ್ಲೆಲ್ಲ ಸೀ ನೀರು ಸಿಗ್ತಾದ. ವರ್ಷಗಟ್ಟಲೇ ನನ್ನ ಕಾಡಿಸಿದ ಯಾವ್ಯಾವ್ದೋ ಕಾಯ್ಲೆ ಈಗ ನನ್ ಹತ್ರಾನೂ ಬರೋಲ್ಲ’ ಎನ್ನುವ ಗುರುರಾಜ, ಈಗ ಮಳೆನೀರು ಸೇವನೆಯಿಂದ ಸಿಗುವ ಆರೋಗ್ಯದ ಬಗ್ಗೆ ಅನುಭವಯುತವಾಗಿ ಮಾತಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ!

ಎರಡು ಕಿಲೋಮೀಟರ್ ದೂರದ ಕೊಪ್ಪಳಕ್ಕೆ ತುಂಗಭದ್ರಾ ನದಿ ನೀರು ಪೂರೈಕೆಯಾಗುತ್ತದೆ. ಆದರೆ ಪಕ್ಕದ ಭಾಗ್ಯನಗರಕ್ಕೆ ಈ ಭಾಗ್ಯ ಇಲ್ಲ. ಅದರೆ ಅದನ್ನೊಂದು ಕೊರತೆ ಎಂದು ಭಾವಿಸದೇ ಸಂಪೂರ್ಣ ಉಚಿತವಾಗಿ ಸಿಗುವ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಯತ್ನ ನಾಗರಾಜ ಅವರದು. ‘ಹನಿ-ಹನಿಗೂಡಿದರೆ ಹಳ್ಳ’ ಎಂಬ ಮಾತು ಉಳಿತಾಯ- ಸಂಗ್ರಹಕ್ಕೆ ಅನ್ವಯಿಸುತ್ತದೆ. ಬ್ಯಾಂಕಿನಲ್ಲಿ ಕೆಲಸ ಮಾಡುವ ನಾಗರಾಜ ಅವರಿಗೆ ನೀರಿನ ಉಳಿತಾಯದ ಯೋಚನೆ ಬಂದಿದ್ದರಲ್ಲಿ ಅಚ್ಚರಿಯೇನಿಲ್ಲ.

ಕೊಪ್ಪಳ ಹೇಳಿ-ಕೇಳಿ ಬರಗಾಲಕ್ಕೆ ತುತ್ತಾಗುವ ಜಿಲ್ಲೆ. ನೀರಿದ್ದರೂ ಅದರ ಗುಣಮಟ್ಟ ಕಳಪೆ. ಸುಲಭವಾಗಿ ಸಿಗುವ ಮಳೆನೀರು ಎರಡೂ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.

 

ಚಿತ್ರ-ಬರಹ: ಪಿ.ಎ. ಛಾಯಾ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*