ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮತ್ತೆ ಬಾಯ್ದೆರೆದಿದೆ ನಮ್ಮೂರ ನೆಲ – ಬಿರು ಬಿಸಿಲಿಗೆ ಸರ್ಕಾರವೇ ಪರಿಹಾರ

ಧಾರವಾಡ: ನಮ್ಮ ಜಿಲ್ಲೆಯ ೫ ತಾಲೂಕುಗಳಾದ ನವಲಗುಂದ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಬಿಸಿಲಿನ ತಾಪ ಏರುಗತಿಯಲ್ಲಿದ್ದು, (೩೯ ರಿಂದ ೪೦ ಡಿಗ್ರಿ ಸೆಲ್ಶಿಯಸ್) ಕೆರೆ-ಕುಂಟೆಗಳೆಲ್ಲ ಪೂರ್ಣ ಒಣಗಿದ್ದು, ಜಿಲ್ಲೆಯ ವಾಡಿಕೆ ಮಳೆಗೆ ಹೋಲಿಸಿದರೆ ಈ ಬಾರಿ ಶೇ.೬೭ ರಷ್ಟು ಕಡಿಮೆ ಮಳೆ ಬಿದ್ದಿದೆ.  

DHARWAD DRAUGHT AT ITS PEAK - HARSHA SHEELAVANT (1)ಧಾರವಾಡ ಜಿಲ್ಲೆಯ ಸಾಮಾನ್ಯ ವಾಡಿಕೆ ಮಳೆ ೨೮೧/೨ ಮಿಲಿ ಮೀಟರ್‌ಗಳಷ್ಟಿದ್ದು, ೨೦೧೪ (ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್) ೨೮೨.೫ ಮಿ.ಮೀ. ಮಳೆಯಾಗಿತ್ತು. ೨೦೧೫ರಲ್ಲಿ ೧೮೯.೫ ಮಿ.ಮೀ. ಮಳೆಯಾಗಿದೆ. ಶೇ. ೬೭ ರಷ್ಟು ಈ ಬಾರಿ ಮಳೆ ಕಡಿಮೆಯಾಗಿದೆ.

ಬಿರು ಬೇಸಿಗೆಯ (ಮಾರ್ಚ್-ಏಪ್ರಿಲ್) ತೀವ್ರ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಕುಂದಗೋಳ ತಾಲೂಕಿನ ೧೪ ಹಳ್ಳಿಗಳಾದ ಮುಳ್ಳೊಳ್ಳಿ, ಯರಿನಾರಾಯಣಪೂರ, ರೊಟ್ಟಿಗವಾಡ, ಕೊಡ್ಲಿವಾಡ, ಶಿರೂರ, ಹಿರೇನರ್ತಿ, ಗುಡೇನಕಟ್ಟಿ, ಸಂಶಿ, ಯರಗುಪ್ಪಿ, ಚಿಕ್ಕಗುಂಜಳ, ಕೊಂಕಣಕುರಹಟ್ಟಿ, ಬಾಗವಾಡ, ಕಮಡೊಳ್ಳಿ, ಹೊಸಳ್ಳಿ ಹಾಗೂ ಹುಬ್ಬಳ್ಳಿ ತಾಲೂಕಿನ ನಾಗರಳ್ಳಿ ಮತ್ತು ಬಂಡಿವಾಡ ಸೇರಿದಂತೆ ಒಟ್ಟು ೧೬ ಹಳ್ಳಿಗಳಿಗೆ ೨೧ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ೭೪ ಟ್ರಿಪ್‌ಗಳಂತೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಈ ೧೬ ಗ್ರಾಮಗಳ ೫೧,೮೧೬ ಜನರು ಕುಡಿಯುವ ನೀರಿನ  ಸೌಲಭ್ಯ ಪಡೆಯುತ್ತಿದ್ದಾರೆ. ಸಕಾಲಿಕವಾಗಿ ದಾಹ ತೀರಿಸುವ ಸಮರೋಪಾದಿ ಕೆಲಸ ಪ್ರತಿ ವರ್ಷದಂತೆ ಈ ಬಾರಿಯೂ ಮುಂದುವರೆದಿದೆ.

ಜೊತೆಯಲ್ಲಿ ಬರಪರಿಹಾರ ಯೋಜನೆಯಡಿ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಬರ ಪರಿಹಾರ ನಿಧಿಯಿಂದ ಬಿಡುಗಡೆ ಆದ ರೂ.೨೫೦ ಲಕ್ಷ ಗಳನ್ನು ಜಿಲ್ಲೆಯ ೫ ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆ ಕೆಲಸಗಳಿಗೆ ನೀಡಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬಿಡುಗಡೆ ಮಾಡಿದೆ.

DHARWAD DRAUGHT AT ITS PEAK - HARSHA SHEELAVANT (2)ಜಿಲ್ಲೆಯ ಜಲಾಶಯಗಳಲ್ಲಿರುವ ನೀರು ಜನರಿಗೆ ಹಾಗೂ ಜಾನುವಾರುಗಳ ಉಪಯೋಗಕ್ಕಾಗಿ ಮಾತ್ರ ಕಾಯ್ದಿರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಆದೇಶ ಮಾಡಿದ್ದಾರೆ. ಒಟ್ಟಾರೆ ಜಿಲ್ಲೆಯ ಗ್ರಾಮೀಣ ನಗರ ಪಟ್ಟಣಗಳ ಜನರಿಗೆ ಬೇಸಿಗೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ಸೂಚನೆ ನೀಡಿದ್ದಾರೆ.

ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯ ೩೦ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಲಕ್ಷಣ ಇದ್ದು, ಇದರ ಪರಿಹಾರಕ್ಕಾಗಿ ರೂ.೧೦ ಕೋಟಿಗಳ ಕ್ರೀಯಾಯೋಜನೆ ಸಿದ್ಧಪಡಿಸಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಸುವ ಹಲವಾರು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಈ ಕಾರಣಕ್ಕಾಗಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲು ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ. ಇದಕ್ಕೆ ಪ್ರತಿಯಾಗಿ ಆ ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೆ ಹಣ ಸಂದಾಯ ಮಾಡಲಾಗುವುದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೇಸಿಗೆಯ ತಾಪಕ್ಕೆ ಬತ್ತಿ ಹೋಗಿರುವ ಕೆರೆಗಳಿಗೆ ಮಲಪ್ರಭೆಯ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿ ವಿಶೇಷ ಅಧಿಕಾರ ಪಡೆದಿದ್ದು, ಮಲಪ್ರಭೆಯಿಂದ ನಿರಂತರ ೪೫ ದಿನಗಳ ಕಾಲ ನೀರು ಪೂರೈಕೆ ಆಗಲಿದೆ. ಈಗಾಗಲೇ ಜಿಲ್ಲೆಯ ೯ ಕೆರೆಗಳನ್ನು ಮಲಪ್ರಭಾ ನೀರಿನಿಂದ ತುಂಬಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರಪರಿಹಾರ ಕಾಮಗಾರಿ

DHARWAD DRAUGHT AT ITS PEAK - HARSHA SHEELAVANT (4)ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ ಹಾಗೂ ಕುಂದಗೋಳ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ, ಗ್ರಾಮಾಂತರ ಪ್ರದೇಶಗಳ ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ, ಕುಡಿಯುವ ನೀರು ಪೂರೈಕೆ, ದನಕರುಗಳಿಗೆ ಮೇವು ಹಾಗೂ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ಬರ ಪರಿಹಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಟಾಸ್ಕಪೋರ್ಸ್ ಸಮಿತಿಗಳನ್ನು ರಚನೆ ಮಾಡಿ ಬರಪರಿಹಾರ ಕಾಮಗಾರಿಗಳನ್ನು ಜಾರಿಗೊಳಿಸುತ್ತಿದೆ.

ಬೆಳೆಹಾನಿ ಪರಿಹಾರ

ಮಳೆ ಕೊರತೆಯಿಂದಾಗಿ ಜಿಲ್ಲೆಯ ೧,೭೭,೩೭೨ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಗಳು ಹಾನಿಗೊಳಗಾಗಿದ್ದು, ರೂ.೧೧,೪೪೫.೪೦ ಲಕ್ಷಗಳ ಮೊತ್ತದ ಬೆಳೆ ಹಾನಿ ಆಗಿದ್ದು, ಅದರಲ್ಲಿ ೫೦,೧೬೦ ಹೆಕ್ಟೇರ್ ಪ್ರದೇಶದಲ್ಲಿಯ ಸಣ್ಣ ಮತ್ತು ಅತೀ ಸಣ್ಣ ರೈತರ ಬೆಳೆಗಳು ಅಂದಾಜು ರೂ.೩,೪೧೦.೮೮ ಲಕ್ಷ ಹಾಗೂ ೧,೨೭,೨೧೨ ಹೆಕ್ಟೇರ್ ಪ್ರದೇಶದಲ್ಲಿಯ ದೊಡ್ಡ ರೈತರು ಬೆಳೆಗಳು ಹಾನಿಯಾಗಿದ್ದು, ಮೊತ್ತ ರೂ.೮,೦೩೪.೪೭ ಲಕ್ಷಗಳೆಂದು ಅಂದಾಜಿಸಲಾಗಿದೆ.

ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ಹಣವನ್ನು ವಿತರಿಸಲು ಜಿಲ್ಲಾ ಆಡಳಿತ ಕ್ರಮಕೈಗೊಂಡಿದ್ದು, ೧,೫೭,೦೦೯ ರೈತರಿಗೆ ಬೆಳೆಪರಿಹಾರ ನೀಡಲು ರೂ.೮,೨೦೦ ಲಕ್ಷಗಳ ಬಿಡುಗಡೆ ಆಗಿದೆ. ಇದರಲ್ಲಿ ೧,೪೧,೭೨೬ ಖಖಿಉS ಖಾತೆಗಳನ್ನು ತೆರೆಯಲಾಗಿದ್ದು, ಆ ಪೈಕಿ ೧,೩೮,೩೬೫ ರೈತರಿಗೆ ರೂ.೭೮೦೦.೪೫ ಲಕ್ಷ ಮೊತ್ತದ ಬೆಳೆ ಪರಿಹಾರವನ್ನೂ ಪಾವತಿ ಮಾಡಿದೆ. ಇನ್ನು ರೂ.೩೯೯.೫೫ ಲಕ್ಷ ರೂ.ಗಳ ಮೊತ್ತದ ಬೆಳೆ ಪರಿಹಾರವನ್ನು ಉತ್ತರಿಸಬೇಕಾಗಿದೆ.

ಕೃಷಿ ಕಾರ್ಮಿಕರಿಗೆ ಉದ್ಯೋಗ

ಬರ ಪರಿಹಾರ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ೧೨೧೩೭ ಕಾಮಗಾರಿಗಳನ್ನು ರೂ.೩೯೯೪.೭೬ ಲಕ್ಷಗಳ ಮೊತ್ತದಲ್ಲಿ ತೆಗೆದುಕೊಂಡು ೧೧.೭೪ ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಆ ಪೈಕಿ ಇದುವರೆಗೆ ರೂ. ೧೬೬೫ ಲಕ್ಷ ಗಳನ್ನು ಖರ್ಚು ಮಾಡಿ ೬.೦೫ ಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ.

ದನಕರುಗಳಿಗೆ ಮೇವು 

೨೦೧೨ನೇ ಗಣತಿ ಪ್ರಕಾರ ಜಿಲ್ಲೆಯಲ್ಲಿ ೨,೭೩,೨೯೪ ದನಕರುಗಳ ಸಂಖ್ಯೆ ಇದ್ದು, ವಾರ್ಷಿಕವಾಗಿ೪.೯೮ ಲಕ್ಷ ಮೆಟ್ರಿಕ್ ನಟ್ ಮೇವು ಅವಶ್ಯಕತೆ ಇದೆ. ಒಟ್ಟಾರೆ ಜಿಲ್ಲೆಯಲ್ಲಿ ೧.೭೩ ಲಕ್ಷ ಟನ್ ಒಣಮೇವು ೧೮ ವಾರಗಳಿಗೆ ಸಾಕಾಗುವುದು. ಐದು ತಾಲೂಕುಗಳಲ್ಲಿ ಸಧ್ಯಕ್ಷೆ ಮೇವಿನ ಕೊರತೆಯ ಬಗ್ಗೆ ವರದಿ ಆಗಿಲ್ಲ. ಮೇವಿನ ಕೊರತೆ ಕಡಿಮೆ ಮಾಡಲು ೨೦೧೫-೧೬ನೇ ಸಾಲಿನಲ್ಲಿ ೨೨೦೫೭ ಮೇವಿನ ಕಿರುಪೊಟ್ಟಣ ವಿತರಿಸಲಾಗಿದೆ. ಮೇವಿನ ಕೊರತೆ ಮುಂಬರುವ ದಿನಗಳಲ್ಲಿ ತೀವೃವಾದಲ್ಲಿ ಗೋಶಾಲೆ, ಮೇವು ನಿಧಿ ಸ್ಥಾಪಿಸಲು ಕ್ರೀಯಾಯೋಜನೆ ತಯಾರಿಸಲಾಗಿದೆ.

ಜಾನುವಾರುಗಳಿಗೆ ರೋಗ ನಿಯಂತ್ರಣಕ್ಕಾಗಿ ಈ ವರೆಗೆ ೨,೨೫,೧೭೯ ಕಾಲುಬಾಯಿ ಲಸಿಕೆ, ೨,೨೧,೧೭೫ ದನಕರುಗಳಿಗೆ ಗಂಟಲು ಬೇನೆ ಲಸಿಕೆ, ೧,೫೩,೬೪೬ ಕುರಿ ಮೇಕೆಗಳಿಗೆ ಕರಳುಬೇನೆ ಲಸಿಕೆಗಳನ್ನು ಹಾಕಲಾಗಿದೆ. ಜಿಲ್ಲೆಯ ಅಮ್ಮಿನಭಾವಿ, ಹೆಬ್ಬಳ್ಳಿ, ಅಣ್ಣಿಗೇರಿ ನವಲಗುಂದ ಮತ್ತು ಕುಂದಗೋಳದಲ್ಲಿ ಮೇವು ಬ್ಯಾಂಕ್ ತೆರೆದು ೪೩.೭೩ ಟನ್ ಮೇವು ಸಂಗ್ರಹಿಸಲಾಗಿದೆ.

DHARWAD DRAUGHT AT ITS PEAK - HARSHA SHEELAVANT (3)ತುಸು ಹೆಚ್ಚೂ-ಕಡಿಮೆ ಇದೇ ಸ್ಥಿತಿ ಪ್ರತಿ ವರ್ಷ ನಮ್ಮ ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಆದರೂ, ಒಣ ಬರ ನಿರೋಧಕ ಜಾಣ್ಮೆಯನ್ನು ವಿವಿಧ ಇಲಾಖೆಗಳ ಸಹಯೋಗ, ಸಹಕಾರದಲ್ಲಿ ಕಲಿಯಲಾಗುತ್ತಿಲ್ಲ. ಇತ್ತ ರೈತರೂ ಸರ್ಕಾರಿ ವ್ಯವಸ್ಥೆಯ ಭಾಗವಾದಂತೆ ಸಮುದಾಯದ ಸಹಭಾಗಿತ್ವದಲ್ಲಿ, ಪರಸ್ಪರ ಸಹಕಾರಿ ಮನೋಭಾವದಿಂದ ಮಳೆ ಕಡಿಮೆ ಬಿದ್ದರೂ ಬದುಕುತ್ತಿದ್ದ ನಮ್ಮ ಹಿರಿಯರ ಅನುಭವದ ಪುಟಗಳನ್ನು ತೆರೆದು ಓದಲು ಸಿದ್ಧರಿಲ್ಲ!

ಕನಿಷ್ಠಪಕ್ಷ ಊರ ಮುಂದಿನ ಕೆರೆ ನಮ್ಮಿಂದ ಉಳಿಸಿಕೊಳ್ಳಲಾಗುತ್ತಿಲ್ಲ. ಇದ್ದಬಿದ್ದ ಬೋರ್‌ವೆಲ್‌ಗಳಿಂದ ನೀರೆತ್ತಿ ಮಾರಾಟ ಮಾಡಲಾಗುತ್ತಿದೆ. ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ವಿದ್ಯುತ್ ಅಭಾವ ಸೇರಿದಂತೆ ಮತ್ತಷ್ಟು ತಾಂತ್ರಿಕ ಕಾರಣಗಳಿಂದ ಬಾಯ್ದೆರೆದು ನಿಂತಿವೆ. ಜಾನುವಾರು ಸಂತಿಗಳಂತೂ ದನಕರುಗಳಿಂದ, ಜಾನುವಾರುಗಳಿಂದ ತುಂಬಿ ತುಳುಕುತ್ತಿವೆ.

ಮುಂದಿನ ವರ್ಷದ ಬರ ಎದುರಿಸಲು ಮಲೆನಾಡ ಅಂಚಿನ ಹಿರಿ ತಲೆಮಾರಿನ ರೈತರು ಈ ತಲೆಮಾರಿನ ರೈತರಿಗೆ ಕಣ್ಗಾವಲಾಗಿ ನಿಂತು, ಮಾರ್ಗದರ್ಶನ ನೀಡುವರೇ? ಅಥವಾ ಸರ್ಕಾರಿ ಪರಿಹಾರ ಕೃಷಿ ಮಾಡುವರೇ? ಸಂಬಂಧಿತ ಎಲ್ಲ ಇಲಾಖೆಯ ಅಧಿಕಾರಿಗಳು ಮೊದಲೇ ಸಿದ್ಧತೆ ಮಾಡಿಕೊಳ್ಳುವರೇ? ನಮ್ಮ ಕಣ್ಣು ತೆರೆಸಬಲ್ಲ ಸಣ್ಣ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅವು ಅನುಕರಣೀಯ ಯೋಗ್ಯವೆನಿಸಿ ಸಾಂಘಿಕವಾಗಿ ಅನುಷ್ಟಾನಗೊಳ್ಳದಿದ್ದರೆ…

 ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*